ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತಿರುವನಂತಪುರಂನ ಎಂಚಕ್ಕಲ್‌ನಲ್ಲಿ 'ಆಧ್ಯಾತ್ಮಿಕ ಪ್ರವಾಸೋದ್ಯಮ ಹಬ್' ನಿರ್ಮಿಸಲು ಚಿಂತನೆ ನಡೆಸಿದೆ. ಈ ಯೋಜನೆಯ ಭಾಗವಾಗಿ, ಎಂಚಕ್ಕಲ್ ಬಸ್ ಡಿಪೋದಲ್ಲಿ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಕೆಎಸ್ಆರ್‌ಟಿಸಿ ಇತ್ತೀಚೆಗೆ ಖಾಸಗಿ ಕಂಪನಿಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. 'ಆಧ್ಯಾತ್ಮಿಕ ಪ್ರವಾಸೋದ್ಯಮ ಹಬ್' ನಿರ್ಮಾಣಕ್ಕೆ ಆಯ್ಕೆಯಾಗಲಿರುವ ಕಂಪನಿಯು ಈ ಯೋಜನೆಯ ವಿನ್ಯಾಸ, ಹಣಕಾಸು ನೆರವು, ನಿರ್ಮಾಣ ಮತ್ತು ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊರಲಿದೆ. 30 ವರ್ಷಗಳ ಅವಧಿಗೆ ಈ ಹಬ್‌ ಅನ್ನು ನಿರ್ವಹಿಸಿಕೊಂಡು ನಂತರ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಬೇಕು. ಈ ಯೋಜನೆಗೆ ಪ್ರವಾಸಿಗರಿಗೆ ಅನುಕೂಲಕರವಾಗುವಂತೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 2 ಕಿಮೀ ದೂರದಲ್ಲಿನ ಎಂಚಕ್ಕಲ್‌ನಲ್ಲಿ ಸ್ಥಳ ಗುರುತಿಸಲಾಗಿದ್ದು, ನಿರ್ಮಾಣ ಕಾರ್ಯಕ್ಕೆ ಅಧಿಕೃತ ದಿನಾಂಕ ಪ್ರಕಟವಾದ ನಂತರ ಎರಡು ವರ್ಷಗಳೊಳಗೆ ಯೋಜನೆ ಪೂರ್ಣಗೊಳಿಸುವ ಗುರಿ ಇದೆ.

ksrtc

ಯೋಜನೆಯಲ್ಲಿ ಏನೇನಿರಲಿದೆ

ಯಾತ್ರಿ ನಿವಾಸ ಮಾದರಿಯ ಹೊಟೇಲ್‌, ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ಗಳು, ಪಾರ್ಕಿಂಗ್ ಹಬ್, ಶಟಲ್ ಬಸ್ ಟರ್ಮಿನಲ್ ಮತ್ತು ಇವಿ (EV) ಚಾರ್ಜಿಂಗ್ ಕೇಂದ್ರಗಳು, ಆಂಫಿಥಿಯೇಟರ್, ಆಯುರ್ವೇದ ಕ್ಷೇಮ ಕೇಂದ್ರಗಳು, ಕರಕುಶಲ ವಸ್ತುಗಳ ಅಂಗಡಿಗಳು, ಪೂಜಾ ಸಾಮಗ್ರಿ ಮತ್ತು ಪುಸ್ತಕ ಮಳಿಗೆಗಳು ಇನ್ನಿತರ ಸೌಲಭ್ಯಗಳನ್ನು ಹೊಂದಿರಲಿದೆ.

ಈ ಯೋಜನೆಯು ಪದ್ಮನಾಭಸ್ವಾಮಿ ದೇವಸ್ಥಾನ ಮತ್ತು ಶಬರಿಮಲೆ ಯಾತ್ರಿಗಳನ್ನು ಕೇಂದ್ರೀಕರಿಸಿದ್ದು, ಸಹಸ್ರಾರು ಭಕ್ತರು ಪ್ರತಿದಿನ ಇಲ್ಲಿಗೆ ಭೇಟಿ ನೀಡುತ್ತಾರೆ. ವಾಹನ ದಟ್ಟಣೆಯೂ ಇರುತ್ತದೆ. ಇವುಗಳನ್ನು ಸರಿಯಾಗಿ ನಿರ್ವಹಿಸಲು ಯೋಜನೆ ಸಹಕಾರಿಯಾಗಲಿದೆ.