ಮಿನಾರು ನಿನ್ನ ಅಂತರಂಗ ಬಲ್ಲವರಾರು!?
1981 ರ ಡಿಸೆಂಬರ್ 4 ಕುತುಬ್ ಮಿನಾರ್ ಇತಿಹಾಸದಲ್ಲಿ 'ಕರಾಳದಿನ'ವಾಗಿ ದಾಖಲಾಯಿತು. ಆ ದಿನ ಎಂದಿನಂತೆ, ಕುತುಬ್ ಮಿನಾರ್ ಒಳಗೆ ಸುಮಾರು 300 ರಿಂದ 400 ಪ್ರವಾಸಿಗರು ಇದ್ದರು. ಅವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳು. ಸಂಜೆಯಾಗಿತ್ತು ಮತ್ತು ಜನರು ನಿಧಾನವಾಗಿ ಮಿನಾರ್‌ನ ಕಿರಿದಾದ ಕಾರಿಡಾರ್‌ಗಳು ಮತ್ತು ಮೆಟ್ಟಿಲುಗಳಲ್ಲಿ ಮೇಲಕ್ಕೆ ಮತ್ತು ಕೆಳಗೆ ಚಲಿಸುತ್ತಿದ್ದರು. ಇದ್ದಕ್ಕಿದ್ದಂತೆ
- ಮೇಘ
ದೆಹಲಿಯ ಐತಿಹಾಸಿಕ ಕುತುಬ್ ಮಿನಾರ್ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಸಾಕಷ್ಟು ರಹಸ್ಯಗಳನ್ನು ಹೊಂದಿದ್ದು, ದೇಶದ ನಾನಾ ಮೂಲೆಗಳಿಂದ ಹಾಗೂ ವಿದೇಶಗಳಿಂದ ಇತಿಹಾಸಕಾರರು, ಸಂದರ್ಶಕರು ಭೇಟಿ ನೀಡುತ್ತಿರುತ್ತಾರೆ. ಈ ಸ್ಮಾರಕವು 73 ಮೀಟರ್ ಎತ್ತರದ ಗೋಪುರವಾಗಿದ್ದು, 379 ಮೆಟ್ಟಿಲುಗಳು ಮತ್ತು ಐದು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ಇಟ್ಟಿಗೆಗಳಿಂದ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಮಿನಾರು ಎಂದೇ ಇದು ಜನಪ್ರಿಯವಾಗಿದೆ. ಸುರುಳಿಯಾಕಾರದ ಮೆಟ್ಟಿಲುಗಳಿಂದ ಸುಂದರವಾಗಿ ಅಲಂಕೃತಗೊಂಡಿರುವ ಈ ಭವ್ಯ ಸ್ಮಾರಕದ ಒಳಭಾಗವನ್ನು ಏಕೆ ಮುಚ್ಚಲಾಗಿದೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ಪ್ರವಾಸಿ ತಾಣವಾಗಿ ಸಾಕಷ್ಟು ಜನಪ್ರಿಯವಾಗಿದ್ದರೂ ಇದರೊಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದು ಯಾಕೆ? ಇದರ ಹಿಂದಿನ ಕಾರಣವೇನು?
ಆರಂಭದಲ್ಲಿ ಕುತುಬ್ ಮಿನಾರ್ ಬಾಗಿಲನ್ನು ತೆರೆಯಲಾಗುತ್ತಿತ್ತು, ಜನರಿಗೆ ಕುತುಬ್ ಮಿನಾರ್ ಒಳಗೆ ಪ್ರವೇಶಿಸುವ ಅವಕಾಶವಿತ್ತು. 1974ರಲ್ಲಿ ಕೂಡ ಕುತುಬ್ ಮಿನಾರ್‌ಗೆ ಸಾಮಾನ್ಯ ಜನರ ಪ್ರವೇಶವಿತ್ತು. ಆದರೆ 1981 ರ ಡಿಸೆಂಬರ್ 4ರಂದು ಈ ಐತಿಹಾಸಿಕ ಸ್ಮಾರಕದಲ್ಲಿ ಭೀಕರ ಅಪಘಾತ ಸಂಭವಿಸಿತು, ಆ ನಂತರ ಈ ಸ್ಮಾರಕದ ಒಳಭಾಗ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.
ಡಿಸೆಂಬರ್ 4, 1981 ರ ಕರಾಳ ದಿನ
1981ರ ಮೊದಲು, ಪ್ರವಾಸಿಗರಿಗೆ ಕುತುಬ್ ಮಿನಾರರ್ ನ ಒಳ ಹೊಕ್ಕು ಮೆಟ್ಟಿಲೇರಿ ಮೇಲೆ ಹೋಗಲು ಅವಕಾಶವಿತ್ತು. ದೇಶ ವಿದೇಶದಿಂದ ಬಂದ ಪ್ರವಾಸಿಗರು ಮಿನಾರ್‌ನ 379 ಮೆಟ್ಟಿಲುಗಳನ್ನು ಹತ್ತಿ ದೆಹಲಿಯ ಭವ್ಯ ನೋಟವನ್ನು ಮೇಲಿನಿಂದ ಕಣ್ತುಂಬಿಸಿಕೊಳ್ಳುತ್ತಿದ್ದರು. ಆದರೆ 1981ರ ಡಿಸೆಂಬರ್ 4 ಕುತುಬ್ ಮಿನಾರ್ ಇತಿಹಾಸದಲ್ಲಿ 'ಕರಾಳದಿನ'ವಾಗಿ ದಾಖಲಾಯಿತು.
ಆ ದಿನ ಎಂದಿನಂತೆ, ಕುತುಬ್ ಮಿನಾರ್ ಒಳಗೆ ಸುಮಾರು 300 ರಿಂದ 400 ಪ್ರವಾಸಿಗರು ಇದ್ದರು. ಅವರಲ್ಲಿ ಹೆಚ್ಚಿನವರು ಶಾಲಾ ಮಕ್ಕಳು. ಸಂಜೆಯಾಗಿತ್ತು ಮತ್ತು ಜನರು ನಿಧಾನವಾಗಿ ಮಿನಾರ್‌ನ ಕಿರಿದಾದ ಕಾರಿಡಾರ್‌ಗಳು ಮತ್ತು ಮೆಟ್ಟಿಲುಗಳಲ್ಲಿ ಮೇಲಕ್ಕೆ ಮತ್ತು ಕೆಳಗೆ ಚಲಿಸುತ್ತಿದ್ದರು. ಇದ್ದಕ್ಕಿದ್ದಂತೆ, ವಿದ್ಯುತ್ ಕಡಿತಗೊಂಡು ಇಡೀ ಮಿನಾರ್ ಕತ್ತಲೆಯಲ್ಲಿ ಮುಳುಗಿತು. ಆ ದಿನ, ವಿದ್ಯುತ್ ಕೈಕೊಟ್ಟಿದ್ದರಿಂದ ಕತ್ತಲು ಆವರಿಸುತ್ತಿದ್ದಂತೆ ಒಳಗಿನ ಜನರಲ್ಲಿ ಭೀತಿ ಹರಡಿತು. ಮಕ್ಕಳು ಕಿರುಚಲು ಪ್ರಾರಂಭಿಸಿದರು. ಅವ್ಯವಸ್ಥೆಯ ವಾತಾವರಣ ಸೃಷ್ಟಿಯಾಯಿತು. ಮಿನಾರ್ ಒಳಗಿನ ಮೆಟ್ಟಿಲುಗಳು ತುಂಬಾ ಕಿರಿದಾಗಿ ಮತ್ತು ಸುರುಳಿಯಾಕಾರದಲ್ಲಿ ಇದ್ದುದರಿಂದ, ಕತ್ತಲೆಯಲ್ಲಿ ವೇಗವಾಗಿ ಹೊರಬರಲು ಅಸಾಧ್ಯವಾಯಿತು. ಹೊರಬರಲು ಒಂದೇ ಒಂದು ಕಿರಿದಾದ ದಾರಿ ಇತ್ತಾದ್ದರಿಂದ ನೂಕು ನುಗ್ಗಲು ಮತ್ತು ಕಾಲ್ತುಳಿತ ಉಂಟಾಯಿತು. ಜನರು ಪರಸ್ಪರರ ಮೇಲೆ ಬೀಳಲು ಮತ್ತು ತಳ್ಳಲು ಪ್ರಾರಂಭಿಸಿದರು. ಘಟನೆಯಲ್ಲಿ 45 ಜನರು ಮೃತಪಟ್ಟರು. ಇಕ್ಕಟ್ಟಾದ ಸ್ಥಳ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಸುಮಾರು 30 ಶಾಲಾ ಮಕ್ಕಳು ಸೇರಿದಂತೆ 45 ಜನರು ದುರಂತ ಅಂತ್ಯ ಕಂಡರು.
ಈ ಭೀಕರ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಈ ಘಟನೆಯ ನಂತರ, ಕುತುಬ್ ಮಿನಾರ್‌ನ ಒಳಭಾಗವನ್ನು ಶಾಶ್ವತವಾಗಿ ಮುಚ್ಚಲಾಯಿತು. ಭವಿಷ್ಯದಲ್ಲಿ ಅಂಥ ಯಾವುದೇ ಅಪಘಾತಗಳನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಮಿನಾರ್‌ನ ಕಿರಿದಾದ ಮೆಟ್ಟಿಲು ಮತ್ತು ತುರ್ತು ಸಂದರ್ಭದಲ್ಲಿ ನಿರ್ಗಮಿಸಲು ಸಾಕಷ್ಟು ಸ್ಥಳಾವಕಾಶದ ಕೊರತೆಯನ್ನು ಪರಿಗಣಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿತು.

ಒಳಭಾಗ ನೋಡೋದು ಹೇಗೆ?
ಭಾರತೀಯ ನಾಗರಿಕರು ರು. 30 ಮತ್ತು ವಿದೇಶಿ ಪ್ರಜೆಗಳು 500 ರು ಪಾವತಿಸುವ ಮೂಲಕ ಕುತುಬ್ ಮಿನಾರ್‌ನ ಸೌಂದರ್ಯವನ್ನು ಸವಿಯಬಹುದಾಗಿದೆ.
ಕುತುಬ್ ಮಿನಾರ್‌ನ ಒಳಾಂಗಣ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದರೂ ಕೂಡ ಸಾಕಷ್ಟು ಜನರಿಗೆ ಅದರೊಳಗೆ ವಿನ್ಯಾಸ ಹೇಗಿರಬಹುದು ಎಂಬ ನೋಡುವ ಕುತೂಹಲ ಖಂಡಿತ ಇದ್ದೇ ಇರುತ್ತದೆ. ಯಾಕೆಂದರೆ ಇದು ಇಟ್ಟಿಗೆಯಿಂದ ಕಟ್ಟಿದ ವಿಶ್ವದ ಅತಿ ಎತ್ತರದ ಗೋಪುರಗಳಲ್ಲೊಂದು ಎಂಬ ಖ್ಯಾತಿಯನ್ನು ಗಳಿಸಿದೆ. ನೀವು ನೇರವಾಗಿ ಕುತುಬ್ ಮಿನಾರ್‌ನ ಒಳಭಾಗವನ್ನು ನೋಡಲು ಸಾಧ್ಯವಿಲ್ಲದಿದ್ದರೂ ಇಲ್ಲಿನ ಅಧಿಕೃತ ವೆಬ್‌ಸೈಟ್ ಅಥವಾ ಪ್ರವಾಸೋದ್ಯಮ ವೆಬ್‌ಸೈಟ್‌ಗಳಲ್ಲಿ ಡಿಜಿಟಲ್ ವೀಕ್ಷಣೆಯನ್ನು ಕಾಣಬಹುದು. ಕೆಲವು ವೆಬ್‌ಸೈಟ್‌ಗಳು ಕುತುಬ್ ಮಿನಾರ್‌ನ 360-ಡಿಗ್ರಿ ವೀಕ್ಷಣೆಯನ್ನು ಒದಗಿಸುತ್ತವೆ. ಅಂದರೆ ಕುತುಬ್ ಮಿನಾರ್‌ನ ವರ್ಚುವಲ್ ಪ್ರವಾಸವನ್ನು ಆಯೋಜಿಸುತ್ತವೆ. ಅಲ್ಲಿ ನೀವು ವಾಸ್ತವವಾಗಿ ಸ್ಮಾರಕದೊಳಗೆ ಇರುವಂತೆ ಅನುಭವವನ್ನು ಪಡೆಯಬಹುದು.