• ಅಶ್ವಿನಿ ಸುನಿಲ್

'ಆಂಧ್ರ ಪ್ರದೇಶದ ಊಟಿ' ಎಂದೇ ಕರೆಸಿಕೊಳ್ಳುವ ಅರಕು ಕಣಿವೆಯು ಪ್ರಕೃತಿ ಪ್ರೇಮಿಗಳಿಗೆ, ಸಾಹಸಪ್ರಿಯರಿಗೆ ನೆಚ್ಚಿನ ತಾಣವೆಂದೇ ಹೇಳಬಹುದು. ಹಚ್ಚ ಹಸಿರಿನ ಕಾಡು, ಸುಂದರ ಜಲಪಾತಗಳು, ಕಾಫಿ ತೋಟಗಳಿಂದ ಕೂಡಿದ ಅರಕು ವ್ಯಾಲಿಯು ಪೂರ್ವ ಘಟ್ಟದ ಸುಂದರ ಗಿರಿಧಾಮಗಳಲ್ಲೊಂದು. ಅಷ್ಟೇ ಅಲ್ಲ ಬುಡಕಟ್ಟು ಜನರ ವಿಶಿಷ್ಟ ಸಂಪ್ರದಾಯಗಳು, ಆಚರಣೆಗಳ ಜತೆಗೆ ವಿಶಿಷ್ಟ ಸುವಾಸನೆಯ ಕಾಫಿ ಬೀಜದ ಉತ್ಪಾದನೆಗೂ ಅರಕು ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಕೇರಳ ಪ್ರವಾಸವೆಂದರೆ ಭಕ್ತಿ ಮತ್ತು ಪ್ರಕೃತಿ ಸೌಂದರ್ಯಗಳ ಸಂಗಮ

ಅರಕು ವ್ಯಾಲಿಯು ಆಂಧ್ರಪ್ರದೇಶದ ಕರಾವಳಿ ನಗರ ವಿಶಾಖಪಟ್ಟಣದಿಂದ 130 ಕಿಲೋಮೀಟರ್ ದೂರದಲ್ಲಿದೆ. ರೈಲು ಹಾಗೂ ರಸ್ತೆ ಮೂಲಕ ಅಲ್ಲಿ ತಲುಪಬಹುದು. ವಿಶಾಖಪಟ್ಟಣದಿಂದ ಹೊರಡುವ ವಿಸ್ಟಾಡೋಮ್‌ ರೈಲಿನಲ್ಲಿ ಪ್ರಯಾಣಿಸಿದರೆ ನಿಸರ್ಗ ಸೌಂದರ್ಯವನ್ನು ಆಸ್ವಾದಿಸಬಹುದು. 58 ಸುರಂಗಗಳು, 84 ಸೇತುವೆಗಳ ಮೂಲಕ ಸಾಗುವ ಈ ಪ್ರಯಾಣವು ಸುಮಾರು 5 ಗಂಟೆಗಳ ಕಾಲ ತೆಗೆದು ಕೊಳ್ಳುವುದರ ಜತೆಗೆ ವಿಭಿನ್ನ ಅನುಭವವನ್ನು ನೀಡುತ್ತದೆ.

Untitled design - 2026-05-07T103838.186

ವಿಶಾಖಪಟ್ಟಣದಿಂದ ಅರಕು ವ್ಯಾಲಿಗೆ ಹೊಗುವ ದಾರಿಯಲ್ಲಿ ಸಿಗುವ ಬೊರ್ರಾ ಗುಹೆಗಳು ಇಲ್ಲಿನ ಇನ್ನೊಂದು ಪ್ರಮುಖ ಆಕರ್ಷಣೆ. 'ಬೊರ್ರಾ ಗುಹಾಲು' ನಿಲ್ದಾಣದಲ್ಲಿ ರೈಲಿನಿಂದ ಇಳಿದರೆ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರದಲ್ಲಿ ಗುಹೆ ಇದೆ. ನಡೆಯಲು ಕಷ್ಟವಾಗುವವರಿಗೆ ಆಟೋರಿಕ್ಷಾಗಳೂ ಸಿಗುತ್ತವೆ. ವಾರಾಂತ್ಯಗಳಲ್ಲಿ ಹೋದರಂತೂ ವಿಪರೀತ ಜನಜಂಗುಳಿ ಇರುತ್ತದೆ.

ಭವ್ಯ ಇತಿಹಾಸ

ನೂರೈವತ್ತು ಮಿಲಿಯನ್ ವರ್ಷಗಳ ಇತಿಹಾಸವಿರುವ ಗುಹೆಗಳು ಇವು. ಗೋಸ್ಥಾನಿ ನದಿಯ ನೀರು ಸುಣ್ಣದ ಕಲ್ಲಿನ ನಿಕ್ಷೇಪಗಳ ಮೇಲೆ ಹರಿದು, ಈ ಅದ್ಭುತ ನೈಸರ್ಗಿಕ ಗುಹೆಗಳನ್ನು ನಿರ್ಮಿಸಿದೆ. ಶಿವ-ಪಾರ್ವತಿ, ತಾಯಿ-ಮಗು, ಮೊಸಳೆ, ಮನುಷ್ಯನ ಮೆದುಳು ಹೀಗೆ ವಿವಿಧ ಆಕಾರಗಳ ನೈಸರ್ಗಿಕ ರಚನೆಗಳು ಇಲ್ಲಿ ಕಂಡು ಬರುತ್ತವೆ. ಗುಹೆಗಳ ಛಾವಣಿಯಿಂದ ಸೋರುತ್ತಿರುವ ನೀರು ಈ ಸುಣ್ಣದ ಕಲ್ಲುಗಳ ಮೇಲಿಂದ ತೊಟ್ಟಿಕ್ಕುತ್ತಾ ಈಗಲೂ ಗಟ್ಟಿಯಾಗುತ್ತಿದೆ.

Untitled design - 2026-05-07T103831.630

ಸಮುದ್ರಮಟ್ಟಕ್ಕಿಂತ ಸಾವಿರದ ಮುನ್ನೂರು ಮೀಟರ್ ಎತ್ತರದಲ್ಲಿರುವ ಈ ಗುಹೆಯ ಒಳಗೆ ಬೇಸಗೆಯಲ್ಲೂ ತಂಪಾಗಿರುತ್ತದೆ. ಸುಮಾರು100 ಮೀಟರ್ ಅಗಲ ಮತ್ತು 80 ಮೀಟರ್ ಆಳವಿರುವ ಬೊರ್ರಾ ಗುಹೆ ಭಾರತದಲ್ಲಿಯೇ ಅತ್ಯಂತ ಆಳವಾದ ಮತ್ತು ವಿಶಾಲವಾದ ಗುಹೆಯಾಗಿದೆ. ಗುಹೆಯೊಳಗೆ ನಡೆಯಲು ಅನುಕೂಲವಾಗಲೆಂದು ಅಳವಡಿಸಿರುವ ಬಣ್ಣ ಬಣ್ಣದ ದೀಪಗಳು ಗುಹೆಯನ್ನು ಇನ್ನಷ್ಟು ಸುಂದರವಾಗಿಸಿವೆ.

ಈ ಗುಹೆಯ ಆವಿಷ್ಕಾರದ ಬಗ್ಗೆಯೂ ಹಲವಾರು ದಂತಕಥೆಗಳಿವೆ. ಸುತ್ತಲಿನ ಹಳ್ಳಿಯ ಬುಡಕಟ್ಟು ಜನರು ತಮ್ಮ ಕಳೆದು ಹೋದ ಹಸುವನ್ನು ಹುಡುಕುತ್ತಾ ಹೋದಾಗ ಈ ಗುಹೆಯನ್ನು ಕಂಡರು ಎಂದು ನಂಬಲಾಗುತ್ತದೆ. ಹೀಗೆ ಗುಹೆಯೊಳಗೆ ಹೋದಾಗ ಶಿವಲಿಂಗದ ಆಕಾರದ ಕಲ್ಲನ್ನು ಕಂಡು ಗುಹೆಯ ಹೊರಗೆ ಸಣ್ಣದೊಂದು ದೇವಾಲಯವನ್ನು ನಿರ್ಮಿಸಿದ್ದಾರೆ.

ಬ್ಯಾಂಬೂ ಬಿರಿಯಾನಿ

ಮಾಂಸಹಾರ ಪ್ರಿಯರಿಗೆ ಇಲ್ಲಿಯ ಬ್ಯಾಂಬು ಬಿರಿಯಾನಿ 'ಮಸ್ಟ್ ಟ್ರೈ ಫುಡ್' ಎನ್ನಬಹುದು. ಇಲ್ಲಿನ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಪಾಕ ಪದ್ಧತಿಯಿದು. ಬಿದಿರಿನ ಕಾಂಡದ ಒಳಗೆ ಆಹಾರವನ್ನು ಕೆಂಡದಲ್ಲಿ ಬೇಯಿಸಲಾಗುತ್ತದೆ. ಇದು ಈಗ ವಾಣಿಜ್ಯೀಕರಣಗೊಂಡು ರಸ್ತೆಯುದ್ದಕ್ಕೂ ಅಲ್ಲಲ್ಲಿ ಬ್ಯಾಂಬೂ ಬಿರಿಯಾನಿ ತಯಾರಿಸುವವರನ್ನು ಕಾಣಬಹುದು. ಬೊರ್ರಾ ಗುಹೆಗಳಿಗೆ ಹೋಗುವಾಗ ಬ್ಯಾಂಬೂ ಬಿರಿಯಾನಿಗೆ ಆರ್ಡರ್ ಕೊಟ್ಟು ಹೋದರೆ ಬರುವಷ್ಟರಲ್ಲಿ ಬ್ಯಾಂಬೂ ಬಿರಿಯಾನಿ ಸಿದ್ಧವಾಗಿರುತ್ತದೆ. ಬಿದಿರಿನ ಟೊಳ್ಳಾದ ಕಾಂಡದ ಒಳಗೆ ಅಕ್ಕಿ, ಮಸಾಲೆ, ಚಿಕನ್ ಅನ್ನು ತುಂಬಿಸಿ ಬಿದಿರಿನ ಹೊರಪದರವು ಕಪ್ಪಾಗುವವರೆಗೆ ಕೆಂಡದಲ್ಲಿ ಬೇಯಿಸಲಾಗುವ ಈ ಬ್ಯಾಂಬೂ ಬಿರಿಯಾನಿ ಸ್ವಲ್ಪ ದುಬಾರಿಯೇ. ಪ್ರತಿ ಸಲವೂ ಹೊಸದಾದ ಬಿದಿರಿನ ಕೊಳವೆಯನ್ನೇ ಬಳಸುವುದರಿಂದ ಅರಣ್ಯ ನಾಶಕ್ಕೂ ಇದು ಕಾರಣವಾಗುತ್ತಿದೆ.

ಬೊರ್ರಾ ಗುಹೆ ಸಮೀಪದಲ್ಲೇ ಇರುವ ಕಾಟಿಕಿ ಜಲಪಾತ, ಚಪಾರಾಯ್ ಜಲಪಾತಗಳು ಇಲ್ಲಿಯ ಪ್ರಮುಖ ಆಕರ್ಷಣೆಗಳು. ಅರಕು ಪಟ್ಟಣದಲ್ಲಿರುವ ಟ್ರೈಬಲ್ ಮ್ಯೂಸಿಯಂ ಕಾಫಿ, ಮ್ಯೂಸಿಯಂಗೆ ಭೇಟಿ ನೀಡದಿದ್ದರೆ ನಿಮ್ಮ ಅರಕು ಪ್ರಯಾಣ ಸಂಪೂರ್ಣವಾಗುವುದಿಲ್ಲ. ಕಾಫಿ, ಕರಿ ಮೆಣಸು ಇಲ್ಲಿನ ಪ್ರಮುಖ ಬೆಳೆಯಾದರೆ, ಬುಡಕಟ್ಟು ಜನಾಂಗದವರು ಬೆಳೆಯುವ ನೆಲ್ಲಿ, ನಿಂಬೆ, ಸೀತಾಫಲ ರಾಮ ಫಲಗಳು ಸ್ಥಳೀಯ ಮಾರುಕಟ್ಟೆಗಳಲ್ಲಿ, ರಸ್ತೆ ಬದಿಯಲ್ಲಿ ದೊರಕುತ್ತದೆ.

Untitled design - 2026-05-07T103823.598

ರಸ್ತೆಯುದ್ದಕ್ಕೂ ಎರಡು ಬದಿಗಳಲ್ಲಿ ಗದ್ದೆಗಳ ಮಧ್ಯೆ ಸಾಲು ಸಾಲಾಗಿ ಟೆಂಟ್ ಹೌಸ್‌ಗಳು ತಲೆಯೆತ್ತಿಕೊಂಡಿವೆ. ಕ್ರಿಸ್ಮಸ್ ರಜೆ, ಸಂಕ್ರಾಂತಿ ರಜೆಗಳಲ್ಲಿ ಹೋಗುವುದಾದರೆ ಮೊದಲೇ ಬುಕ್ ಮಾಡಿಕೊಂಡು ಹೋಗುವುದು ಅನಿವಾರ್ಯ. ವಾರಾಂತ್ಯಗಳಲ್ಲಿ ರಿಕ್ಷಾ, ಟ್ಯಾಕ್ಸಿ ದರವು ದುಪ್ಪಟ್ಟು ಇರುವ ಕಾರಣ ಮೊದಲೇ ಬುಕ್ ಮಾಡಿಕೊಂಡು ಹೋಗುವುದು ಒಳಿತು. ಏರ್ ಕ್ರಾಫ್ಟ್ ಮ್ಯೂಸಿಯಂ, ಸಬ್ ಮೆರಿನ್ ಮ್ಯೂಸಿಯಂ, ಸಿಂಹಾಚಲಂ ದೇವಸ್ಥಾನ, ಕೈಲಾಸ ಗಿರಿ ಪಾರ್ಕ್, ಡಾಲ್ಫಿನ್ ನೋಸ್ ಪಾಯಿಂಟ್ ಗಳ ಹೀಗೆ ಭೇಟಿ ನೀಡಲೇ ಬೇಕಾದ ಬಹಳಷ್ಟು ಸ್ಥಳಗಳು ವಿಶಾಖಪಟ್ಟಣದಲ್ಲಿವೆ. ಇನ್ನು ವಿಶಾಖಪಟ್ಟಣದ ಸುಂದರ ಬೀಚ್ ಗಳನ್ನು ನೋಡಿದರೆ ಅಲ್ಲಿಂದ ಹೊರಡಲು ಮನಸ್ಸೇ ಬಾರದು.

ದಾರಿ ಹೇಗೆ?

ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಹೋಗಿ ಅಲ್ಲಿಂದ ಅರಕುಗೆ ಹೋಗಬಹುದು. ವಿಶಾಖಪಟ್ಟಣದಿಂದ 130 ಕಿಲೋಮೀಟರ್ ದೂರದಲ್ಲಿದೆ. ರೈಲು ಹಾಗೂ ರಸ್ತೆ ಮೂಲಕ ಅಲ್ಲಿ ತಲುಪಬಹುದು.