ಕರ್ನಾಟಕದ ಮೊದಲ ಮಹಿಳಾ ಮೊಟೋ ವ್ಲಾಗರ್
ನನಗೆ ಸದಾ ಸುತ್ತಾಟದ ಖಯಾಲಿ. ಭೀಮನ (ಬೈಕ್) ಮೇಲೇರಿ ದೇಶದ ತುಂಬೆಲ್ಲಾ ಸವಾರಿ ಮಾಡಿದ್ದೇನೆ. ವಿಶ್ವದೆಲ್ಲೆಡೆ ಸುತ್ತುವೆ ಎನ್ನುವ ನಂಬಿಕೆ ಇದೆ. ಹೆಲ್ಮೆಟ್ ನನಗೆ ಕ್ರೌನ್ ಇದ್ದಹಾಗೆ. ಬೈಕ್ ರೈಡರ್‌ಗಳ ತಲೆಕಾಯೋದೂ ಇದೇ ತಾನೆ. ಪುಟ್ಟ ಗೋಪ್ರೋನಲ್ಲಿ ದೊಡ್ಡ ಜಗತ್ತನ್ನು ತೋರಿಸಬೇಕು ಅನ್ನುವ ಆಸೆ ನನ್ನದು.
ಸ್ವಾತಿ. ಆರ್ ಕರ್ನಾಟಕದ ಮೊದಲ ಮಹಿಳಾ ಮೊಟೋ ವ್ಲಾಗರ್. ಖಯಾಲಿಯಾಗಿ ಇಡೀ ಭಾರತವನ್ನು ಸುತ್ತಾಡಿದ್ದಾರೆ. ಹೋದಲ್ಲೆಲ್ಲಾ ಸಾಮಾಜಿಕ ಕಾಳಜಿಯಿಂದ ಜನರನ್ನು ಕೂಡಿಸಿ ಜಾಗೃತಿ ಮೂಡಿಸಿದ್ದಾರೆ. ಕ್ಲಾಸಿಕ್ 350ಯಿಂದ ಆರಂಭವಾದ ಅವರ ಪಯಣ 360 ಭಾರತವನ್ನು ಸುತ್ತಿದೆ. ತಮ್ಮ ಈ ಮೊಟೋ ವ್ಲಾಗರ್ ಬದುಕಿನ ಕುರಿತು ಸ್ವಾತಿ ಅವರು ಹಂಚಿಕೊಂಡಿರುವ ಮಾತುಗಳು ಈ ಕೆಳಗಿನಂತಿವೆ.
ನಿಮ್ಮ ಮೊದಲ ರೈಡ್‌ನ ಕ್ಷಣಗಳನ್ನು ಹಂಚಿಕೊಳ್ಳಿ
ಅಮ್ಮ ಕೊಡಿಸಿದ್ದ ಕ್ಲಾಸಿಕ್ 350ಯಲ್ಲಿ ನಾನು ಮೊಟ್ಟ ಮೊದಲಿಗೆ ಧರ್ಮಸ್ಥಳಕ್ಕೆ ರೈಡ್ ಹೋಗಿದ್ದೆ. ಆಗ ಯಾವುದೇ ಸೇಫ್ಟಿ ಮೆಶರ್ಸ್ ಇರಲಿಲ್ಲ. ಘಾಟ್ ಸೆಕ್ಷನ್ ಬೇರೆ, ಲಾರಿಗಳ ಓಡಾಟ ಹೆಚ್ಚಾಗಿತ್ತು ಅದು ನನ್ನ ಫಸ್ಟ್ ರೈಡ್ ಆಗಿದ್ದರಿಂದ ತುಂಬಾ ಹೆದರಿಕೆಯಾಗಿತ್ತು. ಆದರೆ, ಅದೇ ನನಗೆ ಧೈರ್ಯ ತುಂಬಿದ್ದು. ಅಂದು ಆರಂಭಿಸಿದ ಮೊಟೋ ವ್ಲಾಗರ್ ಬದುಕು ಇನ್ನೂ ಸಾಗುತ್ತಲಿದೆ.
ಇದನ್ನೂ ಓದಿ: ದೇಹದಲ್ಲಿ ಶಕ್ತಿಯಿರುವಾಗಲೇ ಬ್ಯಾಗ್ ಪ್ಯಾಕ್ ಮಾಡಿ
ನಿಮ್ಮ ಮೊಟೋ ವ್ಲಾಗರ್ ಲೈಫ್ ಅನ್ನು ಹೇಗೆ ಫೀಲ್ ಮಾಡ್ತಿದೀರ?
ನನಗೆ ಸದಾ ಸುತ್ತಾಟದ ಖಯಾಲಿ. ಭೀಮನ (ಬೈಕ್) ಮೇಲೇರಿ ದೇಶದ ತುಂಬೆಲ್ಲಾ ಸವಾರಿ ಮಾಡಿದ್ದೇನೆ. ವಿಶ್ವದೆಲ್ಲೆಡೆ ಸುತ್ತುವೆ ಎನ್ನುವ ನಂಬಿಕೆ ಇದೆ. ಹೆಲ್ಮೆಟ್ ನನಗೆ ಕ್ರೌನ್ ಇದ್ದಹಾಗೆ. ಬೈಕ್ ರೈಡರ್‌ಗಳ ತಲೆಕಾಯೋದೂ ಇದೇ ತಾನೆ. ಪುಟ್ಟ ಗೋಪ್ರೋನಲ್ಲಿ ದೊಡ್ಡ ಜಗತ್ತನ್ನು ತೋರಿಸಬೇಕು ಅನ್ನುವ ಆಸೆ ನನ್ನದು.

ದೊಡ್ಡ ಪ್ರವಾಸವನ್ನು ಹೇಗೆ ಮಾಡಬೇಕು ಎನ್ನುವುದು ನಿಮ್ಮ ಆಸೆ?
ʻದೊಡ್ಡ ಸಾಧನೆಗೆ ಪುಟ್ಟ ಅಂಬೆಗಾಲಿಂದ ಶುರುಮಾಡುʼ ಅನ್ನೋದನ್ನು ನಾನು ಪಾಲಿಸುತ್ತೇನೆ. ಪುಟ್ಟ ಪುಟ್ಟ ರೈಡ್‌ಗಳಿಂದ ಶುರುಮಾಡಿ ನಂತರ ದೊಡ್ಡ ರೈಡ್ ಮಾಡುತ್ತೇನೆ. ನಾನು ವೆಜಿಟೇರಿಯನ್ ಆಗಿರೋದರಿಂದ ವಿದೇಶಕ್ಕೆ ರೈಡ್ ಹೋಗುವಾಗ ರೆಡಿಮಿಕ್ಸ್ ಫುಡ್ ಕ್ಯಾರಿ ಮಾಡುತ್ತೇನೆ. ಹೋದ ಸ್ಥಳದಲ್ಲಿ ವಸತಿ ವ್ಯವಸ್ಥೆ ಇದ್ದರೆ ಅದನ್ನು ಬಳಸಿಕೊಳ್ಳುತ್ತೇನೆ. ಇಲ್ಲದಿದ್ದರೆ ನೈಟ್ ಕ್ಯಾಂಪ್ ಹಾಕಲು ಟೆಂಟ್ ಸದಾ ನನ್ನ ಜತೆಯಲ್ಲಿರುತ್ತದೆ. ಯಾವುದಕ್ಕೂ ಮಹಿಳೆಯರು ಹೆದರಬಾರದು. ಎಲ್ಲವನ್ನು ಎದುರಿಸಿ ನಿಲ್ಲುವುದನ್ನು ಕಲಿಯಬೇಕು.
ರೈಡ್ ಹೋದಾಗ ನಿಮಗಾದ ಸಮಸ್ಯೆಗಳ ಬಗ್ಗೆ ತಿಳಿಸಿ
ಯುಪಿಯ ಮಿರ್ಜಾಪುರದಲ್ಲಿ ಆಗಿದ್ದ ಆಕ್ಸಿಡೆಂಟ್. ಅದನ್ನು ನೆನದಾಗ ಸಿಟ್ಟು ಬರುತ್ತದೆ. ಅಂದು ನನ್ನ ಯಾವ ತಪ್ಪೂ ಇರಲಿಲ್ಲ. ಎದುರಿನಿಂದ ಬಂದ ಬೈಕ್‌ನಲ್ಲಿ ಟ್ರಿಪಲ್ ರೈಡ್ ಬಂದ ವ್ಯಕ್ತಿ ನನ್ನ ಗಾಡಿಗೆ ಗುದ್ದಿ ನನ್ನದೇ ತಪ್ಪು ಎನ್ನುವಂತೆ ಕಿರುಚಾಡಿದ್ದ. ನನ್ನ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಇತ್ತು. ಅದನ್ನು ತೋರಿಸಿ ಕಂಪ್ಲೆಂಟ್ ಮಾಡುವುದಾಗಿ ಹೇಳಿದೆ. ಆಗ ಅವನು ಕ್ಷಮೆ ಕೇಳಿ ಓಡಿದ್ದ. ಆದರೆ, ಅಲ್ಲಿ ಬಿದ್ದಿದ್ದ ನನ್ನನ್ನೂ ನನ್ನ ಗಾಡಿಯನ್ನೂ ಮೇಲೆತ್ತಲು ಯಾರೂ ಬರಲಿಲ್ಲ. ಅಲ್ಲಿದ್ದ ಪೋಲೀಸರನ್ನೂ ನಾನು ಅಂದು ಬೈದಿದ್ದೆ. ನಿಮಗಿಂತ ನಮ್ಮ ರಾಜ್ಯದ ಪೋಲೀಸರೇ ಎಷ್ಟೋ ವಾಸಿ ಎಂದಿದ್ದೆ..
ನಿಮ್ಮನ್ನು ಸದಾ ಸೆಳೆಯುವ ತಾಣ ಯಾವುದು?
ಹಿಮಾಲಯ ನನ್ನನ್ನು ಸದಾ ಸೆಳೆಯುವ ತಾಣ. ಅಲ್ಲಿ ಸೈನಿಕರನ್ನು ಎಲ್ಲರೂ ಒಮ್ಮೆ ನೋಡಬೇಕು. ದೇಶಭಕ್ತಿ ರಸಪ್ರವಾಹ ನಮ್ಮಲ್ಲಾಗುತ್ತದೆ. ಅಲ್ಲಿನ ಸ್ಪಿಟಿ ನನ್ನ ಹಾರ್ಟ್ ಫೇವರಿಟ್ ಪ್ಲೇಸ್. ಬೈಕ್ ರೈಡ್‌ನಲ್ಲಿ ಅಲ್ಲಿನ ಹಿಮರಾಶಿ ನೋಡುವುದು ನನಗೆ ಇಷ್ಟ.
ರೈಡ್ ಹೋಗಲು ನಿಮ್ಮ ಯೋಜನೆ ಹೇಗಿರುತ್ತದೆ?
ಆರಂಭದಲ್ಲಿ ನಾನು ರೈಡ್ ಹೋಗುವ ವಾರಕ್ಕೂ ಮೊದಲು ಯೋಜನೆ ಸಿದ್ಧ ಮಾಡಿಕೊಳ್ಳುತ್ತಿದ್ದೆ. ಆದರೆ, ಈಗ ನನ್ನ ಸ್ನೇಹಿತರು ಕಾಲ್‌ಮಾಡಿ ನಾಳೆ ರೈಡ್ ಹೋಗೋಣ ಅಂದರೆ ಸಾಕು ರೈಡ್ ಹೋಗಲು ಪೂರ್ವ ತಯಾರಿಯಿಲ್ಲದೆಯೇ ನಾನು ಸಿದ್ಧವಾಗಿರುತ್ತೇನೆ.

ನೀವು ಮಾಡಿದ ಸಾಮಾಜಿಕ ಕಾರ್ಯಗಳ ಬಗ್ಗೆ ಹೇಳಿ?
ಮೊದಲಿಗೆ ನಾಲ್ಕು ಜನ ಮಹಿಳೆಯರು ಸೇರಿ ʻಮಹಿಳೆಯರಿಗೆ ಭಯಮುಕ್ತ ಕರ್ನಾಟಕʼ ಥೀಮ್‌ನಲ್ಲಿ ಕರ್ನಾಟಕ ರೈಡ್ ಮಾಡಿದ್ದೆವು. ನಮ್ಮ ನಾಡಿನಲ್ಲಿ ಮಹಿಳೆಯರಿಗೆ ಇರುವ ಭಯಮುಕ್ತ ವಾತಾವರಣವನ್ನು ಪರಿಚಯಿಸಿದ್ದೆವು. ನಂತರ ನಮ್ಮ ನೆಲದ ಕಡಲ ತೀರಗಳನ್ನು ಶುಚಿಗೊಳಿಸಿದ್ದೆವು. ನಾನು ಹೋದಲ್ಲೆಲ್ಲ ಜನರನ್ನು ಒಗ್ಗೂಡಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದೇನೆ. ಇದರಿಂದಲೇ 3 ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಒಂದು ಏಷ್ಯಾ ಬುಕ್ ಆಫ್ ರೆಕಾರ್ಡ್ ನನ್ನ ಹೆಸರಿನಲ್ಲಿವೆ. ಇವುಗಳಿಗಿಂತ ನಾನು ಅಜ್ಞಾತ ಸ್ಥಳಗಳಲ್ಲಿ ಉಳಿದಾಗಲೆಲ್ಲ ಅಲ್ಲಿನ ಜನರು ನನ್ನನ್ನು ಗುರುತಿಸುವುದೇ ನನಗೆ ಖುಷಿ ನೀಡುತ್ತದೆ.
ಕರ್ನಾಟಕದ ಮೊದಲ ಮಹಿಳಾ ಮೊಟೋ ವ್ಲಾಗರ್ ಆಗಿ ಮಹಿಳೆಯರಿಗೆ ನಿಮ್ಮ ಸಂದೇಶ ಏನು?
ಮಹಿಳೆಯರು ಯಾರಿಗೂ ಕಮ್ಮಿ ಇಲ್ಲ. ಯಾವುದಕ್ಕೂ ಅವರು ಹೆದರಬಾರದು. ಅವರು ಯಾವಾಗಲೂ ಎನರ್ಜಿಟಿಕ್ ಆಗಿರಬೇಕು. ಸಮಸ್ಯೆಗಳನ್ನು ಎದುರಿಸಲು ಸದಾ ಸಿದ್ಧವಾಗಿರಬೇಕು. ನಿಮ್ಮ ಕೆಲಸ, ತಂದೆ-ತಾಯಿ, ತಾಯಿನಾಡು ಮತ್ತು ಕನ್ನಡಕ್ಕೆ ಮಹತ್ವ ನೀಡಿ.