ಬದುಕಿನ ನಿಜವಾದ ಉದ್ದೇಶವೇ ಪ್ರವಾಸ -ಅಂಜಲಿ ಅನೀಶ್
ಮುಂಬರುವ 'ಅನಂತ ಪದ್ಮನಾಭ' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿರುವ ನಟಿ ಅಂಜಲಿ ಅವರು ಕೇವಲ ಬಣ್ಣದ ಲೋಕಕ್ಕೆ ಮಾತ್ರ ಸೀಮಿತರಾಗಿಲ್ಲ. ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಪ್ರವಾಸವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಹೆಣ್ಣುಮಕ್ಕಳಿಗಿರುವ ಸಮಾಜದ ಚೌಕಟ್ಟುಗಳನ್ನು ಮೀರಿ, 17ನೆಯ ವಯಸ್ಸಿನಲ್ಲೇ ಸೋಲೋ ಆರಂಭಿಸಿದ ಇವರು, ತಮ್ಮ ಸಿನಿಪಯಣ ಹಾಗೂ ಪ್ರವಾಸ ಕಲಿಸಿದ ಅಪರೂಪದ ಜೀವನಪಾಠಗಳ ಕುರಿತು ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ್ದಾರೆ.
ನಿಮ್ಮ ಮುಂಬರುವ 'ಅನಂತ ಪದ್ಮನಾಭ' ಚಿತ್ರ ಮತ್ತು ಇತರ ಪ್ರಾಜೆಕ್ಟ್‌ಗಳ ಬಗ್ಗೆ ವಿವರಿಸಿ.
-'ಅನಂತ ಪದ್ಮನಾಭ' ಸಂಪೂರ್ಣವಾಗಿ ಮನೋರಂಜನಾತ್ಮಕ ಚಿತ್ರ. ಇದರಲ್ಲಿ ನನ್ನದು ಈ ಕಾಲಕ್ಕೆ ಹೊಂದುವಂಥ ಸ್ಟ್ರಾಂಗ್ ಇಂಡಿಪೆಂಡೆಟ್ ವುಮನ್ ಪಾತ್ರ. ನಟ ರಿಷಿ ಹಾಗೂ ಹಿರಿಯ ನಟ ಪ್ರಕಾಶ್ ಬೆಳವಾಡಿ ಸರ್ ಅವರ ಜತೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು. ಪ್ರಕಾಶ್ ಸರ್ ಅವರು ಒಂದು ರೀತಿಯ ಎನ್‌ಸೈಕ್ಲೋಪೀಡಿಯಾ ಇದ್ದಂತೆ. ಅವರೊಂದಿಗೆ ಯಾವುದೇ ವಿಷಯದ ಬಗ್ಗೆಯಾದರೂ ಗಂಟೆಗಟ್ಟಲೆ ಮಾತನಾಡಬಹುದು. ಇದರ ಜತೆಗೆ, ನನ್ನ ಅಭಿನಯದ ಎರಡು ತಮಿಳು ಸಿನಿಮಾಗಳ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ಹಂತದಲ್ಲಿವೆ. ಆ ಚಿತ್ರಗಳ ಬಗ್ಗೆ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಘೋಷಿಸುವವರೆಗೆ ನಾನು ಹೆಚ್ಚಿನ ಮಾಹಿತಿ ನೀಡುವಂತಿಲ್ಲ.
ಇದನ್ನೂ ಓದಿ: ಟ್ರೆಕ್ಕಿಂಗ್ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್

ನಿಮ್ಮ ಪಾತ್ರಗಳ ಆಯ್ಕೆಯಲ್ಲಿ ಈಗ ಯಾವ ರೀತಿಯ ಬದಲಾವಣೆಗಳಾಗಿವೆ?
-ನಾನು ಕಾಲೇಜಿನಲ್ಲಿದ್ದಾಗಲೇ ಚಿತ್ರರಂಗ ಪ್ರವೇಶಿಸಿದೆ ಮತ್ತು ಅದೇ ವರ್ಷ ಪದವಿಯನ್ನೂ ಪೂರೈಸಿದೆ. ಈವರೆಗೆ ನನ್ನ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಜೀವನದ ಬೇರೆ ಬೇರೆ ಹಂತಗಳಲ್ಲಿ ನಾವು ಬದಲಾಗುತ್ತೇವಲ್ಲ, ಹಾಗೆಯೇ ನನ್ನ ಪಾತ್ರಗಳ ಆಯ್ಕೆಯೂ ಬದಲಾಗಿದೆ. ಕೇವಲ ನಗುತ್ತಾ, ಸುಂದರವಾಗಿ ಕಾಣುವ, ಕಾಲೇಜಿಗೆ ಹೋಗುವ ಸಾಮಾನ್ಯ ಹುಡುಗಿಯ ಪಾತ್ರಗಳನ್ನು ಮಾಡಲು ನನಗೆ ಈಗ ಅಷ್ಟೊಂದು ಉತ್ಸಾಹವಿಲ್ಲ. ಪಾತ್ರಗಳಲ್ಲಿ ಏನಾದರೂ ಸೂಕ್ಷ್ಮತೆಗಳಿರುವ ಸವಾಲಿನ ಪಾತ್ರಗಳಲ್ಲಿ ನಟಿಸಲು ನಾನು ಹೆಚ್ಚು ಬಯಸುತ್ತೇನೆ.
ನಿಮ್ಮ ದೃಷ್ಟಿಕೋನದಲ್ಲಿ ಪ್ರವಾಸ ಎಂದರೆ ಏನು?
-ನನ್ನ ಪ್ರಕಾರ ಜೀವನದ ನಿಜವಾದ ಉದ್ದೇಶವೇ ಪ್ರವಾಸ ಮಾಡುವುದು. ವೃತ್ತಿ ಮತ್ತು ನಟನೆ ನನಗೆ ಅಪಾರ ಖುಷಿ ನೀಡುತ್ತದೆ. ಆದರೆ, ಅದರಾಚೆಗೆ ನನಗೆ ಪ್ರವಾಸವೆಂದರೆ ಪ್ರಾಣ. ಸಮಾಜವು ನಮಗೆ ಶಾಲಾ-ಕಾಲೇಜು, ಕೆಲಸ, ಮದುವೆ, ಮಕ್ಕಳು ಎಂಬ ಒಂದು ನಿಗದಿತ ಚೌಕಟ್ಟನ್ನು ಹಾಕಿದೆ. ಆದರೆ ಪ್ರವಾಸವು ಆ ಮಿತಿಗಳನ್ನು ಮುರಿದು, ನಮಗೆ ನಮ್ಮದೇ ಅಗತ್ಯಗಳು ಮತ್ತು ಆಸೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಬದುಕಿಗೆ ಯಾವುದೇ ಮಿತಿಗಳಿಲ್ಲ ಎಂಬುದು ಅರಿವಾಗುತ್ತದೆ. ಉದಾಹರಣೆಗೆ, ನಾನು ಥೈಲ್ಯಾಂಡ್‌ಗೆ ಹೋಗಿದ್ದಾಗ 70 ವರ್ಷದ ಮಹಿಳೆಯೊಬ್ಬರನ್ನು ಭೇಟಿಯಾಗಿದ್ದೆ. ಅವರು ಯಾವತ್ತೂ ಮದುವೆಯಾಗದೆ ಮಕ್ಕಳನ್ನು ದತ್ತು ಪಡೆದು ಅತ್ಯಂತ ಖುಷಿಯಿಂದ ಬೆಳೆಸುತ್ತಿದ್ದರು. ಹಾಗೆಯೇ, ಒಂದು ವರ್ಷವಿಡೀ ಕೆಲಸ ಮಾಡಿ ಹಣ ಉಳಿಸಿ, ಆ ಹಣದಲ್ಲಿ ಮುಂದಿನ ಇಡೀ ವರ್ಷ ಕೇವಲ ಪ್ರವಾಸ ಮಾಡುವ ಇನ್ನೊಬ್ಬ ವ್ಯಕ್ತಿಯನ್ನೂ ನೋಡಿದ್ದೇನೆ. ಇದು ನನಗೆ ಜೀವನದ ಹೊಸ ಆಯಾಮವನ್ನು ಪರಿಚಯಿಸಿತು.
ಪ್ರವಾಸದಿಂದ ನೀವು ಕಲಿತ ಅತಿ ದೊಡ್ಡ ಜೀವನಪಾಠ ಯಾವುದು?
-ದಯೆ ಮತ್ತು ಸಹಾನುಭೂತಿ. ನಮ್ಮ ಬೆಂಗಳೂರಿನಲ್ಲಿ ಬಡವರನ್ನು, ರಸ್ತೆಯಲ್ಲಿ ಕಷ್ಟಪಡುವವರನ್ನು ದಿನನಿತ್ಯ ನೋಡಿ ನಮ್ಮ ಮನಸು ಅದಕ್ಕೆ ಒಗ್ಗಿಕೊಂಡಿರುತ್ತದೆ. ಆದರೆ, ಬೇರೆ ದೇಶಗಳಿಗೆ ಹೋದಾಗ, ಅಲ್ಲಿನ ಜನರೂ ಎಷ್ಟೇ ಕಷ್ಟಗಳಿದ್ದರೂ ಇತರರೊಂದಿಗೆ ತೋರುವ ಸೌಜನ್ಯವನ್ನು ನೋಡಿದಾಗ, ನಾವೇಕೆ ಇನ್ನಷ್ಟು ದಯೆಯಿಂದಿರಬಾರದು ಎಂಬ ಪಾಠ ಕಲಿಯುತ್ತೇವೆ. ನಾನು ಭೇಟಿ ನೀಡಿದ ಹಲವು ದೇಶಗಳಲ್ಲಿ ಅಪರಿಚಿತರು ತೋರಿದ ಪ್ರೀತಿ ನನಗೆ ಬಹಳಷ್ಟು ಕಲಿಸಿದೆ.

ಸೋಲೋ ಟ್ರಾವೆಲ್ ಬಗ್ಗೆ ನಿಮ್ಮ ಅನುಭವಗಳೇನು? ಇದು ಹೆಣ್ಣುಮಕ್ಕಳಿಗೆ ಎಷ್ಟು ಮುಖ್ಯ?
-ನಾನು ಅಮೆರಿಕ, ಥೈಲ್ಯಾಂಡ್, ಮಾರಿಷಸ್ ಹಾಗೂ ಭಾರತದಲ್ಲಿ ಗೋವಾ ಮತ್ತು ರಾಜಸ್ಥಾನದಲ್ಲಿ ಒಂಟಿಯಾಗಿ ಪ್ರವಾಸ ಮಾಡಿದ್ದೇನೆ. ನನ್ನ 17-18ನೆಯ ವಯಸ್ಸಿನಲ್ಲೇ ಮೊದಲ ಬಾರಿಗೆ ಗೋವಾಕ್ಕೆ ಒಂಟಿಯಾಗಿ ಹೋಗಿದ್ದೆ. ನನ್ನ ಪೋಷಕರು ನನ್ನ ಮೇಲೆ ನಂಬಿಕೆಯಿಟ್ಟು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಬೇಗ ಜಡ್ಜ್ ಮಾಡುತ್ತಾರೆ ಅಥವಾ ಲೇಬಲ್ ಮಾಡುತ್ತಾರೆ. ಸ್ವಲ್ಪ ಹೆಚ್ಚು ಮಾತನಾಡಿದರೆ 'ಅತಿಯಾಗಿ ಮಾತನಾಡುತ್ತಾಳೆ' ಎನ್ನುತ್ತಾರೆ, ಸುಮ್ಮನಿದ್ದರೆ 'ಅಹಂಕಾರ ಅಥವಾ ಮಾತೇ ಆಡಲ್ಲ' ಎನ್ನುತ್ತಾರೆ. ಹಲವು ಸಂದರ್ಭಗಳಲ್ಲಿ ಅನೇಕರು 'ನೀನು ಸ್ಮಾರ್ಟ್ ಆಗಿರಬೇಡ, ಸ್ವಲ್ಪ ದಡ್ಡಿಯ ಹಾಗೆ ವರ್ತಿಸು' ಎಂದು ಸಲಹೆ ನೀಡುವವರಿದ್ದಾರೆ. ನಾನು ಸ್ಮಾರ್ಟ್ ಆಗಿದ್ದರೆ ಅದನ್ನು ಏಕೆ ಮುಚ್ಚಿಡಬೇಕು? ಒಂಟಿ ಪ್ರಯಾಣವು ನಮಗೆ ಈ ಎಲ್ಲ ಲೇಬಲ್‌ಗಳಿಂದ ಮುಕ್ತಿ ನೀಡುತ್ತದೆ. ಪ್ರವಾಸದಲ್ಲಿ ನಾವೇನು ಎಂದು ಯಾರಿಗೂ ಸಾಬೀತುಪಡಿಸುವ ಅಗತ್ಯವಿರುವುದಿಲ್ಲ. ನಮ್ಮ ನೈಜ ವ್ಯಕ್ತಿತ್ವದಲ್ಲಿ ನಾವಿರಬಹುದು. ದುಬೈನಂಥ ಸುರಕ್ಷಿತ ಸ್ಥಳಗಳಲ್ಲಿ ನಡುರಾತ್ರಿ 3 ಗಂಟೆಗೆ ಇಯರ್‌ಫೋನ್ ಹಾಕಿಕೊಂಡು ಒಂಟಿಯಾಗಿ ಬೀದಿಗಳಲ್ಲಿ ನಡೆಯುವುದು ನನಗೆ ಇಷ್ಟ. ನಮ್ಮ ಊರಿನಲ್ಲಿ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.
ನಿಮ್ಮ ನೆಚ್ಚಿನ ಪ್ರವಾಸದ ಸಂಗಾತಿಗಳು ಯಾರು?
-ನನಗೆ ನನ್ನ ತಾಯಿಯೊಂದಿಗೆ ಪ್ರವಾಸ ಮಾಡುವುದೆಂದರೆ ಅತ್ಯಂತ ಇಷ್ಟ. ಒಮ್ಮೆ ನಾವಿಬ್ಬರೇ ಬಾಲಿಗೆ ಹೋಗಿದ್ದೆವು. ಅವರು ಯಾವುದೇ ನಿರ್ಬಂಧಗಳಿಲ್ಲದೆ, 'ನೀನು ಎಲ್ಲಿಗಾದರೂ ಹೋಗು, ಎಂಜಾಯ್ ಮಾಡು, ನಾನು ರೂಮ್‌ನಲ್ಲೇ ಇರುತ್ತೇನೆ' ಎಂದು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಾರೆ. ಹಾಗೆಯೇ, ಮಾರಿಷಸ್‌ನಲ್ಲಿ ಷೂಟಿಂಗ್‌ನಲ್ಲಿದ್ದಾಗ ನನ್ನ ತಾಯಿ ಮತ್ತು ಅಣ್ಣ ನನ್ನನ್ನು ಭೇಟಿ ಮಾಡಿದ್ದರು. ಅಣ್ಣನ ಜತೆ ಪ್ರವಾಸ ಮಾಡುವುದೂ ಖುಷಿ ಕೊಡುತ್ತದೆ. ಆತ ಚೂರು ಬೇಸರ ಮಾಡಿಕೊಳ್ಳದೆ ನನ್ನ ಜತೆಗೆ ಎಷ್ಟು ಹೊತ್ತು ಬೇಕಾದರೂ ಬಂದರು ಶಾಪಿಂಗ್ ಮಾಡುತ್ತಾನೆ. ಆದರೆ, ʼಇಷ್ಟು ಹಣ ಖರ್ಚು ಮಾಡುವ ಅನಿವರ್ಯಾತೆ ಇದಯೇ?ʼ ಎಂದು ಒಂದು ಮಾತು ಕೇಲಳುತ್ತಾನೆ ಅಷ್ಟೆ.

ಪ್ರವಾಸದ ವೇಳೆ ಊಟ ಮತ್ತು ಶಾಪಿಂಗ್ ಬಗ್ಗೆ ನಿಮ್ಮ ಒಲವು ಹೇಗಿರುತ್ತದೆ?
-ಬೆಂಗಳೂರಿನಲ್ಲಿರುವಾಗ ನಾನು ಡಯಟ್ ಮಾಡುತ್ತೇನೆ. ಆದರೆ ಪ್ರವಾಸದಲ್ಲಿರುವಾಗ ಬಜೆಟ್‌ನ ಅರ್ಧದಷ್ಟು ಹಣವನ್ನು ಊಟಕ್ಕಾಗಿಯೇ ಮೀಸಲಿಡುತ್ತೇನೆ. ಶಾಪಿಂಗ್ ಕೂಡ ನನಗೆ ಇಷ್ಟ. ಆದರೆ ನಾನು ಬಟ್ಟೆಗಳಿಗಿಂತ ಹೆಚ್ಚಾಗಿ ಆ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಪುರಾತನ ವಸ್ತುಗಳು ಹಾಗೂ ಪೇಂಟಿಂಗ್‌ಗಳನ್ನು ಖರೀದಿಸುತ್ತೇನೆ. ನಾನು ಭೇಟಿ ನೀಡಿದ ಬಹುತೇಕ ದೇಶಗಳಿಂದ ಕಲಾಕೃತಿಗಳನ್ನು ತಂದಿದ್ದೇನೆ. ನನ್ನ ಮನೆಯೆಲ್ಲ ಪೇಂಟಿಂಗ್‌ಗಳಿಂದ ತುಂಬಿದೆ. ಇದರ ಜತೆಗೆ ಆಯಾ ಊರಿನ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿ ಏನೇನು ಸಿಗುತ್ತದೆ ಎಂದು ನೋಡುವುದು ನನಗೆ ಬಹಳ ಇಷ್ಟ.
ಒಂದು ಪರಿಪೂರ್ಣ ಪ್ರವಾಸದಲ್ಲಿ ಏನಿರಬೇಕು ಎಂದು ನೀವು ಭಾವಿಸುತ್ತೀರಿ?
-ಪ್ರವಾಸದಲ್ಲಿ ಸುರಕ್ಷತೆಯ ಜತೆಗೆ ಆಂತರಿಕ ನೆಮ್ಮದಿ ಇರುವುದು ಅತ್ಯಂತ ಮುಖ್ಯ. ಹೆಣ್ಣುಮಗಳಾಗಿ ಒಂಟಿಯಾಗಿ ಹೋಗುವಾಗ ಸೇಫ್ಟಿ ಇದ್ದೇ ಇರಬೇಕು. ಆದರೆ ನೆಮ್ಮದಿ ಎಂಬುದು ನಾವು ಭೇಟಿ ನೀಡುವ ಸ್ಥಳ ಅಥವಾ ಐಷಾರಾಮಿ ಹೊಟೇಲ್‌ಗಳನ್ನು ಅವಲಂಬಿಸಿರುವುದಿಲ್ಲ. ಅದು ನಮ್ಮ ಒಳಗಿನ ಭಾವನೆಗೆ ಸಂಬಂಧಿಸಿದೆ. ನಾವೆಷ್ಟೇ ದುಬಾರಿ ಫೈವ್-ಸ್ಟಾರ್ ಹೊಟೇಲ್‌ನಲ್ಲಿದ್ದರೂ, ನಮ್ಮ ಒಳಗೆ ಶಾಂತಿ ಇಲ್ಲದಿದ್ದರೆ ಆ ಪ್ರವಾಸದಿಂದ ಯಾವುದೇ ಪ್ರಯೋಜನವಿಲ್ಲ. ಸ್ಕೂಬಾ ಡೈವಿಂಗ್, ಪ್ಯಾರಾಗ್ಲೈಡಿಂಗ್ ಇವೆಲ್ಲ ಕೇವಲ ಹೆಚ್ಚುವರಿ ಆಕರ್ಷಣೆಗಳಷ್ಟೇ. ಮನಸಿಗೆ ನೆಮ್ಮದಿ ಸಿಕ್ಕಾಗ ಮಾತ್ರ ಪ್ರವಾಸ ಪರಿಪೂರ್ಣವಾಗುತ್ತದೆ.