ಪೆಹಲ್ಗಾಮ್ ನಲ್ಲಿ ನಾಗಿಣಿಯ ನೋವಿನ ಕಥೆ!
ನಿಜ ಹೇಳಬೇಕೆಂದರೆ ಸಿನಿಮಾ ಶೂಟಿಂಗ್ ವೇಳೆ ನನಗೆ ವೈಯಕ್ತಿಕವಾಗಿ ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ. ತಿಂಗಳಾನುಗಟ್ಟಲೆ ಒಳ್ಳೊಳ್ಳೆಯ ಜಾಗಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇವೆ. ಪರವಾನಗಿ ಸಿಗದ ಜಾಗಗಳಲ್ಲಿ ಒಪ್ಪಿಗೆ ಪಡೆದು ಶೂಟಿಂಗ್ ಮಾಡಿರುತ್ತೇವೆ. ಆದರೆ ಮನಸಾರೆ ಅದನ್ನು ಫೀಲ್ ಮಾಡಲು ಸಾಧ್ಯವಾಗುವುದಿಲ್ಲ.
- ಪಾತೂರು
ಕನ್ನಡ ಕಿರುತೆರೆಯ ನಾಗಿಣಿಯಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ ಬೆಡಗಿ ದೀಪಿಕಾದಾಸ್. ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ ಒಂದೂವರೆ ಮಿಲಿಯನ್ ಫಾಲೋವರ್ ಹೊಂದಿರುವ ದೀಪಿಕಾ ದಾಸ್ ಇತ್ತೀಚೆಗೆ ಮದುವೆ ಫೊಟೋಗಳನ್ನು ಇನ್ ಸ್ಟಾಗ್ರಾಂ ಮೂಲಕ ಹರಿಬಿಟ್ಟು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಈ ಸುಂದರಿ ಪಾರು ಪಾರ್ವತಿ ಎಂಬ ಟ್ರಾವೆಲ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಿಗ್ ಎಂಟ್ರಿ ನೀಡಿ ಭರವಸೆ ಮೂಡಿಸಿದಾಗ ಈಕೆ ನಿಜವಾಗಿಯೂ ಪ್ರವಾಸಿ ಪ್ರಿಯೆ ಇದ್ದಿರಬಹುದಾ ಎಂಬ ಗುಮಾನಿ ಬಂದಿತ್ತು. ಅನುಮಾನ ನಿಜವೇ ಆಗಿದೆ. ಈಕೆ ನಿಜಜೀವನದಲ್ಲೂ ಪ್ರವಾಸ ಪ್ರಿಯೆ. ದೀಪಿಕಾ ದಾಸ್ ಇದೀಗ ಪ್ರವಾಸಿ ಪ್ರಪಂಚದೊಂದಿಗೆ ತಮ್ಮ ಅಪರೂಪದ ಪ್ರವಾಸಾನುಭವವನ್ನು ತೆರೆದಿಟ್ಟಿದ್ದಾರೆ..

ನಿಮ್ಮ ಮೊದಲ ಪ್ರವಾಸದ ವಿಶೇಷ ಅನುಭವಗಳೇನು?
ಮೊದಲ ಬಾರಿ ಪ್ರವಾಸ ಹೋಗಿದ್ದು ಅಣ್ಣನ ಜತೆ ಇಂಡೋನೇಷ್ಯಾಗೆ. ಅದರ ಬಳಿಕ ಥಾಯ್ ಲ್ಯಾಂಡ್ ಗೆ ಮೊದಲ ಸೋಲೋಟ್ರಿಪ್ ಹೋದಾಗ ಭಾರತೀಯ ರುಪಾಯಿಗಳನ್ನು ಅಲ್ಲಿನ ಹಣವಾಗಿ ಬದಲಾಯಿಸದೇ ಇದ್ದಿದ್ದೇ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಆಗ ಅಲ್ಲಿ ಕಾರ್ಡ್ ಬಳಕೆ ಸಾಧ್ಯ ಇರಲಿಲ್ಲ. ಡಿಜಿಟಲ್ ಪೇ ಚಾಲ್ತಿ ಇರಲಿಲ್ಲ. ಊಟ, ತಿಂಡಿಗೂ ಹಣವಿಲ್ಲದ ಪರಿಸ್ಥಿತಿ ಎದುರಾಗಿತ್ತು. ಅಲ್ಲೇ ಪರಿಚಿತರಾದವರ ಜತೆ ಹಂಚಿಕೊಂಡು, ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಈಗ ತಮಾಷೆ ಎನಿಸಿದರೂ ಆಗ ಆತಂಕವಾಗಿತ್ತು.
ನೀವು ಜಾರಿಬಿದ್ದ ವಿಡಿಯೋ ವೈರಲಾಗಿತ್ತಲ್ಲ? ಅದು ಥಾಯ್ ಲ್ಯಾಂಡ್ ದು ತಾನೇ?
ಹೌದು. ಆದರೆ ಏನೇನೂ ಸಾಹಸ ಮಾಡದೆ, ಜಸ್ಟ್ ನಡೆಯುತ್ತಿರುವಾಗ ಬಿದ್ದಿದ್ದೆ. ಅದೇ ವಿಶೇಷ. ರೀಲ್ಸ್ ಗಾಗಿ ವಿಡಿಯೋ ರೆಕಾರ್ಡ್ ಮಾಡ್ತಾ ಇದ್ದೆವು. ಜಸ್ಟ್ ಕಾಲು ಜಾರಿದ್ದಷ್ಟೇ. ಆದರೆ ಕಲ್ಲು ಮೇಲೆ ಬಿದ್ದು ನೋವು ಮಾಡಿಕೊಂಡಿದ್ದೆ. ಕಣ್ಣಿಗೆ ಹಾಕಿದ್ದ ಗ್ಲಾಸ್ ಒಡೆದಿತ್ತು.

ನೀವು ತೀರ ಇತ್ತೀಚಿಗೆ ಪ್ರವಾಸ ಹೋಗಿದ್ದು ಎಲ್ಲಿಗೆ?
ಮಲೇಷ್ಯಾಗೆ. ಸಾಮಾನ್ಯವಾಗಿ ಎಲ್ಲರೂ ಆರಂಭದಲ್ಲೇ ಮಲೇಷ್ಯಾಗೆ ಹೋಗುತ್ತಾರೆ. ನಾನು ಇತ್ತೀಚೆಗಷ್ಟೇ ಮಲೇಷ್ಯಾಗೆ ಹೋದೆ. ಒಂದು ರೀತಿ ತಮಿಳುನಾಡಿಗೆ ಹೋದಂತೆ ಆಯಿತು. ಆದರೆ ಲಂಕಾವಿ ದ್ವೀಪದಲ್ಲಿ ಕೇಬಲ್ ಕಾರ್ ಪ್ರಯಾಣ ಮರೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ನಾನು ಎಲ್ಲ ಕಡೆ ಕೇಬಲ್ ಕಾರ್ ಟ್ರೈ ಮಾಡ್ತೀನಿ. ಎಂಜಾಯ್ ಮಾಡ್ತೀನಿ. ಆದರೆ ಇದುವರೆಗೆ ನಾನು ಹತ್ತಿದ ಎಲ್ಲ ಕೇಬಲ್ ಕಾರ್ ಗಿಂತಲೂ ಇಲ್ಲಿ ತುಂಬ ಎತ್ತರದ ಪ್ರಯಾಣ ನನಗೆ ನಿಜಕ್ಕೂ ಭಯಮೂಡಿಸಿತ್ತು. ಅದೇ ರೀತಿ ಇಲ್ಲಿನ ಬೃಹತ್ ಸೇತುವೆ ಕೂಡ ಭಯ ಮೂಡಿಸುವಂತಿದೆ.
ನಿಮಗೆ ಮರೆಯಲಾಗದ ಖುಷಿ ಕೊಟ್ಟ ಪ್ರವಾಸ ಯಾವುದು?
ಯುಕೆಯಲ್ಲಿ ಸ್ಕಾಟ್ ಲೆಂಡ್ ವಾತಾವರಣ ತುಂಬ ಚೆನ್ನಾಗಿತ್ತು. ಒಂದು ರೀತಿ ದೃಶ್ಯ ವೈಭವವೇ ಸರಿ. ಐತಿಹಾಸಿಕ ಜಾಗಗಳು, ಸ್ಮಾರಕಗಳು, ಚರ್ಚ್ ಗಳು, ಅಂದಿನ ಕಾಲದ ಶಿಲ್ಪಕಲೆಗಳು ಎಲ್ಲವೂ ತುಂಬ ವಿಭಿನ್ನವಾಗಿತ್ತು. ಅದೇ ರೀತಿ ಟರ್ಕಿಯ ಪ್ರಕೃತಿ, ಸಂಪ್ರದಾಯ, ಆಹಾರ ಎಲ್ಲವೂ ಮೆಚ್ಚುಗೆಯಿಂದ ನೆನಪಿಸುವಂತೆ ಇರುತ್ತೆ.

ಸಿನಿಮಾಗಾಗಿ ಪ್ರವಾಸಿತಾಣಗಳಿಗೆ ಹೋದ ಸಂದರ್ಭಗಳ ಬಗ್ಗೆ ಹೇಳಿ
ನಿಜ ಹೇಳಬೇಕೆಂದರೆ ಸಿನಿಮಾ ಶೂಟಿಂಗ್ ವೇಳೆ ನನಗೆ ವೈಯಕ್ತಿಕವಾಗಿ ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ. ತಿಂಗಳಾನುಗಟ್ಟಲೆ ಒಳ್ಳೊಳ್ಳೆಯ ಜಾಗಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತೇವೆ. ಪರವಾನಗಿ ಸಿಗದ ಜಾಗಗಳಲ್ಲಿ ಒಪ್ಪಿಗೆ ಪಡೆದು ಶೂಟಿಂಗ್ ಮಾಡಿರುತ್ತೇವೆ. ಆದರೆ ಮನಸಾರೆ ಅದನ್ನು ಫೀಲ್ ಮಾಡಲು ಸಾಧ್ಯವಾಗುವುದಿಲ್ಲ. ಇನ್ನೊಂದು ಬಾರಿ ನಾವಾಗಿಯೇ ಹೋದಾಗ, "ಅರೇ ಇಂಥ ಜಾಗದಲ್ಲಿ ಶೂಟಿಂಗ್ ಮಾಡಿದ್ವಾ?" ಎನ್ನುವಂತಾಗುತ್ತೆ. ನಾವೇ ಪ್ರವಾಸ ಕೈಗೊಂಡಾಗ ಸಿಗುವ ಖುಷಿಯೇ ಬೇರೆ.
ನಮ್ಮ ಓದುಗರಿಗೆ ನೀವು ಸಲಹೆ ನೀಡುವ ಪ್ರವಾಸಿ ತಾಣಗಳು ಯಾವುವು?
ರಾಜ್ಯದೊಳಗೆ ಚಿಕ್ಕಮಗಳೂರು, ಮಡಿಕೇರಿಗೆ ಚೆನ್ನಾಗಿದೆ. ಐತಿಹಾಸಿಕ ಜಾಗಕ್ಕೆ ಹೋಗುವುದಾದರೆ ರಾಜಸ್ಥಾನಕ್ಕೆ ಹೋಗಬಹುದು. ವಿದೇಶಕ್ಕೆ ಹೋಗುವುದಾದರೆ ಯುಕೆ ದೇಶಗಳ ಭೇಟಿಯಿಂದ ಹೊಸ ಅನುಭವ ಕಾಣಬಹುದು. ನಮ್ಮ ದೇಶದೊಳಗೆ ಪ್ರಕೃತಿ ಸೌಂದರ್ಯ ನೋಡಬೇಕು ಅಂತಾದರೆ ಕಾಶ್ಮೀರಕ್ಕೆ ಹೋದರೆ ಸಾಕು. ಪೆಹಲ್ಗಾಮ್ ಕೂಡ ಆಕರ್ಷಕ ಅನುಭವ ನೀಡಬಲ್ಲದು.

ನೀವು ಪೆಹಲ್ಗಾಮ್ ಗೆ ಹೋದಾಗ ಉತ್ತಮ ಅನುಭವವೇ ಆಗಿರಬಹುದಲ್ಲವೇ?
ಒಂದು ರೀತಿ ಹೌದು. ಇತ್ತೀಚೆಗೆ ಭಯೋತ್ಪಾದನೆ ನಡೆದ ಪೆಹಲ್ಗಾಮ್ ಗೆ ನಾನು ಮೂರು ವರ್ಷಗಳ ಹಿಂದೆ ಹೋಗಿದ್ದೆ. ಆದರೆ ನನಗೂ ಅಲ್ಲಿ ಒಂದು 'ನೋವಿನ ಕತೆ' ಇದೆ! ಅಲ್ಲಿ ಕುದುರೆ ಸಾಕುವವರು ಅವುಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ನಾನು ಸವಾರಿ ಮಾಡಿದ ಕುದುರೆಯ ಕಾಲು ಜಾರಿತ್ತು. ನಾನು ಕುದುರೆ ಮೇಲಿಂದ ಕೆಳಗೆ ಬಿದ್ದಿದ್ದೆ. ಎಡಗಡೆಗೆ ಬಿದ್ದಿದ್ದರೆ ತುಂಬ ಆಳಕ್ಕೆ ಜಾರುತ್ತಿದ್ದೆ. ಬಲಗಡೆಗೆ ಬಿದ್ದ ಕಾರಣ ಕಾಲಿಗಷ್ಟೇ ಏಟು ಮಾಡಿಕೊಂಡು ಅಲ್ಲೇ ಆಸ್ಪತ್ರೆ ಸೇರುವಂತಾಗಿತ್ತು.