ಬಾಲ್ಯದಲ್ಲಿ ಕಾಳೇನಹಳ್ಳಿ ಅರಸೀಕೆರೆ ಬಿಟ್ಟು ಹೊರಗೇ ಹೋಗಿರಲಿಲ್ಲ!
ರತ್ನನ್ ಪ್ರಪಂಚ ಶೂಟಿಂಗ್ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆವು. ಅದ್ಭುತವಾಗಿತ್ತು. ಜನವರಿಯಲ್ಲಿ ಹೋಗಿದ್ದೆವು. ನಾವು ಹೋದ ದಿನವೇ ಹಿಮ ಬೀಳಲು ಶುರುವಾಗಿತ್ತು. ಬಹಳ ಚೆನ್ನಾಗಿತ್ತು. ಅಂದು ಪೂರ್ತಿ ಪಹಲ್ಗಾಮ್ ಸುತ್ತಾಡಲು ಸಾಧ್ಯವಾಗಿತ್ತು. ಅಂಥ ಒಳ್ಳೆಯ ನೆನಪುಗಳೇ ಇದ್ದವು. ಆದರೆ.....
- ಶಶಿಕರ ಪಾತೂರು
ಧನಂಜಯ ಕನ್ನಡದ ಅಪರೂಪದ ಪ್ರತಿಭೆ. ನಟ ರಮೇಶ್ ಅರವಿಂದ್ ರಂತೆಯೇ ವಿದ್ಯಾರ್ಥಿ ಜೀವನದಲ್ಲೂ ಟಾಪರ್ ಆಗಿ ರಾಂಕ್ ಸ್ಟೂಡೆಂಟ್ ಆಗಿ ಮನಮಾತಾದವರು. ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಸಿನಿಮಾರಂಗದಲ್ಲಿ ಅದೃಷ್ಟ ಹುಡುಕಿದವರು. ಸೋಲು ಅವಮಾನಗಳಿಗೆ ಹೆದರದೇ ದಿಟ್ಟವಾಗಿ ನಿಂತು ಎದುರಿಸಿ ಗೆಲುವು ಪಡೆದವರು. ಟಗರು ಚಿತ್ರದ ಡಾಲಿ ಪಾತ್ರದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಇದೀಗ ಡಾಲಿ ಧನಂಜಯ್ ಎಂಬ ಹೆಸರಿನ ಮೂಲಕ ಬಹುಭಾಷಾ ನಟರಾಗಿ ಬೇಡಿಕೆ ಹೊಂದಿದ್ದಾರೆ. ಧನಂಜಯ ಕೇವಲ ನಟ ಮಾತ್ರ ಅಲ್ಲ, ನಿರ್ಮಾಪಕ, ಗೀತರಚನೆಕಾರ ಕೂಡ. ಈ ರಂಗಭೂಮಿಯ ಪ್ರತಿಭೆಗೆ ಸ್ಟಾರ್ ನಟನಾಗಿ ಬೆಳೆದರೂ ಕನ್ನಡದ ನೆಲದಲ್ಲಿ ಬೇರುಗಳನ್ನು ಭದ್ರವಾಗಿರಿಸಿಕೊಂಡಿದ್ದಾರೆ. ಲಿಡ್ಕರ್ ರಾಯಭಾರಿಯಾಗಿರುವ ಧನಂಜಯ್ ಕರ್ನಾಟಕ ಪ್ರವಾಸೋದ್ಯಮಕ್ಕೆ ಬಲತುಂಬುವ ಸಲುವಾಗಿ ಪತ್ನಿಸಮೇತರಾಗಿ ಕಬಿನಿ ಅಭಯಾರಣ್ಯಕ್ಕೆ ಭೇಟಿ ನೀಡಿ. ಕರ್ನಾಟಕದಲ್ಲೇ ಎಷ್ಟೊಂದು ಪ್ರವಾಸಿ ತಾಣಗಳಿವೆ, ಇವುಗಳು ಮುನ್ನೆಲೆಗೆ ಬರಬೇಕು ಎಂಬ ಅವರ ಕಾಳಜಿ ಸ್ತುತ್ಯಾರ್ಹ. ಕಬಿನಿ ಪ್ರವಾಸದ ಅನುಭವ ಮತ್ತು ಕೆಲವು ಮಾಹಿತಿಗಳನ್ನು ಧನಂಜಯ್ ಅವರು ಪ್ರವಾಸಿ ಪ್ರಪಂಚದೊಂದಿಗೆ ಹಂಚಿಕೊಂಡಿದ್ದು ಹೀಗೆ..
ಕಬಿನಿಗೆ ಪ್ರವಾಸ ಹೋದ ಅನುಭವ ಹೇಗಿತ್ತು?
ಹಾಂ ಚೆನ್ನಾಗಿತ್ತು. ಬಹುಶಃ ನೀವು ಸೋಷಿಯಲ್ ಮೀಡಿಯಾದಲ್ಲಿ ನಾನು ಹಾಕಿರೋ ಫೊಟೋ ನೋಡಿ ತಿಳ್ಕೊಂಡಿರ್ತೀರಿ ಅನ್ಸುತ್ತೆ. ಸಾಮಾನ್ಯವಾಗಿ ಖಾಸಗಿಯಾಗಿರುವ ಯಾವುದನ್ನೂ ನಾನು ಪೋಸ್ಟ್ ಮಾಡೋದಿಲ್ಲ. ತುಂಬ ಕಡಿಮೆ. ಇದನ್ನು ಯಾಕೆ ಪೋಸ್ಟ್ ಮಾಡಿದ್ದರ ಹಿಂದೆ ಸದುದ್ದೇಶವಿತ್ತು. ನಮ್ಮ ರಾಜ್ಯ ಪ್ರವಾಸೋದ್ಯಮವನ್ನು ಪ್ರಚಾರ ಮಾಡಿದಂತಾಗುತ್ತೆ ಅನ್ನೋ ಕಾರಣಕ್ಕೆ ಆ ಫೊಟೋಗಳನ್ನು ಪೋಸ್ಟ್ ಮಾಡಿದ್ದೆ.
ಕಬಿನಿ ಅನುಭವದ ಬಗ್ಗೆ ಹೇಳೋದಾದ್ರೆ, ಮುಂಚಿನಿಂದಲೂ ನಾನು ಕಾಡುಗಳಿಗೆ ಹೋಗಿದ್ದೀನಿ. ಆದರೆ ಸಫಾರಿಗೆಲ್ಲ ಯಾವತ್ತೂ ಹೋಗಿರಲಿಲ್ಲ. ಇದೇ ಫಸ್ಟ್ ಟೈಮ್ ಸಫಾರಿಗೆ ಹೋಗಿರೋದು. ಮೊದಲ ಸಲದಲ್ಲೇ ಎಂಟ್ರಿ ಕೊಡ್ತಾ ಇದ್ದ ಹಾಗೇ ಹುಲಿಯನ್ನು ನೋಡಲು ಸಾಧ್ಯವಾಯಿತು. ಆಮೇಲೆ ಒಂಟಿಸಲಗ ಕೂಡ ಕಾಣಿಸಿಕೊಳ್ತು. ವಿಶೇಷ ಏನೆಂದರೆ ಇವೆಲ್ಲ ಅಷ್ಟು ಸುಲಭದಲ್ಲಿ ದರ್ಶನ ಕೊಡುವಂಥವಲ್ಲ. ಹಾಗಂತ ಈಗಾಗಲೇ ಸಾಕಷ್ಟು ಬಾರಿ ಸಫಾರಿ ಹೋಗಿರುವ ನನ್ನ ಸ್ನೇಹಿತರೇ ಹೇಳಿಕೊಂಡಿದ್ದಾರೆ. ‘‘ಅಂಥದ್ರಲ್ಲಿ ಮೊದಲ ಬಾರಿಗೇ ನೀನು ಇಷ್ಟೆಲ್ಲ ವನ್ಯಜೀವಿಗಳನ್ನು ಮೃಗಾಲಯದಲ್ಲಿ ಹೋಗಿ ನೋಡುವಂತೆ ನೋಡ್ಕೊಂಡು ಬಂದಿದ್ದೀಯ’’ ಎಂದು ಅಚ್ಚರಿ ಪಟ್ಟಿದ್ದಾರೆ.
ಈ ಕಬಿನಿ ಪ್ರವಾಸದ ಬಗ್ಗೆ ನಿಮ್ಮ ಪತ್ನಿ ಧನ್ಯತಾ ಏನು ಹೇಳುತ್ತಾರೆ?
ನಿಜ ಹೇಳಬೇಕೆಂದರೆ, ಕಬಿನಿಗೆ ಹೋಗೋಣ ಅಂತ ಮೊದಲು ಪ್ಲ್ಯಾನ್ ಶುರು ಮಾಡಿದ್ದೇ ಧನ್ಯತಾ. ಎಲ್ಲಾದರೂ ಹೊರಗಡೆ ಹೋಗಬೇಕು ಅಂತ ಯೋಚನೆ ಮಾಡ್ತಾ ಇದ್ದೆವು. ಇದೇ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಸಿಕ್ಕರು. ಕಬಿನಿ ಬಗ್ಗೆ ಹೇಳುತ್ತಾ, ಬನ್ನಿ ಇಲ್ಲಿ ತುಂಬ ಚೆನ್ನಾಗಿದೆ ಅಂತ ಅವರೂ ಆಹ್ವಾನ ನೀಡಿದ್ದರು. ನಿಜಕ್ಕೂ ಬಹಳ ಚೆನ್ನಾಗಿತ್ತು. ಎಂಜಾಯ್ ಮಾಡಿದ್ದೇವೆ. ಅಂದ್ರೆ ಇಲ್ಲೇ ಎಲ್ಲ ವ್ಯವಹಾರದಲ್ಲಿ ಕಳೆದು ಹೋಗಿರುತ್ತೇವಲ್ಲ. ಅದರ ಮಧ್ಯೆ ಬಹಳ ಒಳ್ಳೆಯ ರಿಲೀಫ್ ಸಿಕ್ಕಿತು.. ರೆಸಾರ್ಟ್ ನವರ ಕಡೆಯಿಂದ ಮಟ್ಟಿಮರದ ಗಿಡವನ್ನು ಇಬ್ಬರೂ ಸೇರಿ ನೆಟ್ಟು ಬಂದಿದ್ದೇವೆ.
ಪ್ರಕೃತಿ ಸೌಂದರ್ಯದ ಆಸ್ವಾದನೆಗೆ ಹೆಚ್ಚು ದೂರ ಹೋಗಬೇಕಾಗಿಲ್ಲ. ನಮ್ಮಲ್ಲಿ ಅಂದರೆ ಹೆಗ್ಗಡದೇವನಕೋಟೆಗೆ ಹೋಗುವ ಪ್ರಯಾಣದಲ್ಲಿ ಭೂ ಪ್ರದೇಶಗಳನ್ನು ನೋಡುತ್ತಿದ್ದರೆ ಎಷ್ಟೊಂದು ಚೆನ್ನಾಗಿದೆ ಅಂತ ಅನಿಸದೇ ಇರಲ್ಲ. ಅದರಲ್ಲೂ ಕಪಿಲಾ ನದಿಯ ಸೊಬಗು ಅಮೋಘ. ಆರ್ಥಿಕವಾಗಿ ಬಲಿಷ್ಠರಾದವರಿಗೆ ಯುರೋಪ್ ಪ್ರವಾಸ ನೀಡುವ ಖುಷಿಗಿಂತ ಈ ಖುಷಿ ಕಡಿಮೆ ಏನೂ ಅಲ್ಲ. ಯಾಕೆಂದರೆ ನಾನು ಯುರೋಪ್ ಹಳ್ಳಿಗಳನ್ನು ಕೂಡ ನೋಡಿದ್ದೇನೆ. ಅವನ್ನೆಲ್ಲ ಕಡಿಮೆ ಖರ್ಚಿನಲ್ಲಿ ಇಲ್ಲೇ ನೋಡಬಹುದಾಗಿದೆ.
ಕಬಿನಿಯಲ್ಲಿ ನಿಮಗೆ ಅವಿಸ್ಮರಣೀಯ ಅನಿಸಿದ್ದೇನು?
ಮೊದಲು ವಾಟರ್ ಸಫಾರಿಗೆ ಹೋದೆವು. ಸಾಮಾನ್ಯವಾಗಿ ಜನವರಿ ಫೆಬ್ರವರಿ ಟೈಮಲ್ಲಿ ಪ್ರಾಣಿಗಳು ಹೆಚ್ಚು ಕಾಣಿಸುತ್ತವೆ. ಆದರೆ ನಮಗೆ ಈಗ ಜೂನ್ ತಿಂಗಳಲ್ಲಿ ಹೋದಾಗಲೂ ಅದೇ ಸಂಭ್ರಮ ಸಿಕ್ಕಿತು. ಡಾಕ್ಯುಮೆಂಟರಿಗಳಲ್ಲಿ ಕಾಣಿಸುವಂತೆ ಗರಿ ಬಿಚ್ಚಿ ಕುಣಿಯುವ ನವಿಲು ಕೂಡ ಇಲ್ಲಿತ್ತು. ಹೆಣ್ಣು ನವಿಲುಗಳನ್ನು ಸೆಳೆಯಲು ಅದೆಷ್ಟು ಗರಿಬಿಚ್ಚಿ ಕುಣಿದರೂ ಅವುಗಳು ಕ್ಯಾರೇ ಮಾಡುತ್ತಿರಲಿಲ್ಲ. ಆದರೆ ನಮ್ಮ ಕಂಗಳಿಗಂತೂ ಹಬ್ಬವೇ ದೊರಕಿತ್ತು. ಪ್ರತಿ ಬಾರಿ ಹೋದಾಗ ಹುಲಿ ಎಲ್ಲ ಸಿಗಲೇಬೇಕು ಅಂತ ಏನಿಲ್ಲ. ಸಿಗದಿದ್ದರೆ ಇನ್ನೊಮ್ಮೆ ಸಿಗಬಹುದು. ನಾವು ಮತ್ತೆ ಮತ್ತೆ ಹೋಗುತ್ತಿರುವುದು ಮುಖ್ಯ.
ಪ್ರವಾಸದ ಮೇಲಿನ ಆಸಕ್ತಿ ನಿಮಗೆ ಬಾಲ್ಯದಿಂದಲೇ ಇತ್ತೇ?
ಆಸಕ್ತಿ ಬಾಲ್ಯದಿಂದಲೇ ಇತ್ತು. ಆದರೆ ಹೋಗುವ ಅವಕಾಶ ತುಂಬ ಕಡಿಮೆ ಇತ್ತು. ನಮ್ಮ ಕಾಳೇನಹಳ್ಳಿ, ಅರಸಿಕೆರೆಯಲ್ಲೇ ನಮ್ಮ ಪ್ರವಾಸಗಳು ಮುಗಿದು ಬಿಡುತ್ತಿತ್ತು. ನಾನು ಊರು ಬಿಟ್ಟು ಹೊರಗೆ ಬಂದಿದ್ದೇ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದಾಗ. ಮೈಸೂರಲ್ಲಿ ಕಾಲೇಜಲ್ಲಿ ಪ್ರತಿ ಸೆಮಿಸ್ಟರ್ ನಲ್ಲೂ ನಾನೇ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಮೈಸೂರಿನ ಸುತ್ತಮುತ್ತ ಎಲ್ಲ ಜಾಗಗಳಿಗೆ ಪ್ರವಾಸಕ್ಕೆಂದು ನಾನೇ ಕರೆದುಕೊಂಡು ಹೋಗುತ್ತಿದ್ದೆ. ಹಾಗೆ ಮೈಸೂರಿಗೆ ಬಂದ ಮೇಲೆ ಬಹಳ ಪ್ರವಾಸ ಮಾಡಿದ್ದೇನೆ.
ನಿಮ್ಮ ವಿದೇಶ ಪ್ರವಾಸದ ಅನುಭವಗಳ ಬಗ್ಗೆ ಹೇಳ್ತೀರ?
ನಾಟಕ ಮಾಡೋಕೆ ಅಂತಾನೇ ಮುಂಬೈ ಸೇರಿದೆ. ಅಲ್ಲಿಂದ ವಿವಿಧೆಡೆಗಳಿಗೆ ಪ್ರವಾಸ ಮಾಡಿದ್ದೆ. ರಂಗಭೂಮಿಯಿಂದಲೇ ಜರ್ಮನಿ ಪ್ರವಾಸವೂ ಸಾಧ್ಯವಾಗಿತ್ತು. 2007ರಲ್ಲಿ ಮೊದಲ ಬಾರಿಗೆ ಒಬ್ಬರು ವಿದೇಶಕ್ಕೆ ಹೋಗಿದ್ದು. ಒಬ್ಬರು ನಿರ್ದೇಶಕರಿದ್ದಾರೆ. ಅವರು ಜರ್ಮನಿಯಲ್ಲಿ ದೊಡ್ಡ ರಂಗಭೂಮಿ ನಿರ್ದೇಶಕರು. ಒಳ್ಳೆಯ ಸ್ನೇಹಿತರು ಕೂಡ ಹೌದು. ಪ್ರತಿ ವರ್ಷವೂ ಬರುತ್ತಿರುತ್ತಾರೆ. ನನ್ನ ಮದುವೆಗೂ ಬಂದಿದ್ದರು. ಕಲಾವಿದರಿಗೆ ಇರುವ ಅದೃಷ್ಟಗಳಲ್ಲಿ ಬೇರೆ ಬೇರೆ ಕಡೆಗಳಿಂದ ಆಗಾಗ ಸಿಗುವ ಆಹ್ವಾನವೂ ಒಂದು. ಚಿತ್ರರಂಗಕ್ಕೆ ಬಂದ ಮೇಲೆ ತುಂಬ ಕಡೆಗಳಿಗೆ ಹೋಗಿದ್ದೇವೆ. ಅಮೆರಿಕ, ದುಬೈ ಸೇರಿದಂತೆ ಒಂದಷ್ಟು ದೇಶಗಳನ್ನು ಸುತ್ತಿದ್ದೇನೆ. ಜಗತ್ತಿನ ಎಲ್ಲೆಡೆ ನನ್ನ ಫ್ರೆಂಡ್ಸ್ ಇದ್ದಾರೆ. ಟೆಕ್ಕೀಗಳು ಆಸ್ಟ್ರೇಲಿಯಾ, ಸ್ವೀಡನ್ ಯುರೋಪ್ ದೇಶಗಳಿಂದ ಆಹ್ವಾನ ಕೊಡುತ್ತಾ ಇರುತ್ತಾರೆ. ಆದರೆ ನಾನು ಹೋಗಿದ್ದು ಕಡಿಮೆ. ಆಫ್ರಿಕಾಗೆ ಹೋಗಬೇಕು ಅಂತ ಕನಸು ಕಂಡು ಬಹಳ ದಿನಗಳೇ ಆಯಿತು.

ಪ್ರವಾಸಗಳಿಂದ ನೀವು ಕಲಿತುಕೊಂಡಿದ್ದೇನು?
ನನಗೆ ಪ್ರವಾಸ ಅಂದರೆ ಜಾಗ ಅಥವಾ ಸ್ಮಾರಕಗಳನ್ನು ನೋಡಿಕೊಂಡು ಬರುವುದಷ್ಟೇ ಅಲ್ಲ. ಅಲ್ಲಿನ ಸಂಸ್ಕೃತಿ ಎಲ್ಲವೂ ಮುಖ್ಯವಾಗುತ್ತೆ. ನನ್ನ ಪ್ರಕಾರ ತುಂಬ ಪ್ರವಾಸ ಮಾಡಿರುವವರು ತುಂಬ ದ್ವೇಷ ಬೆಳೆಸಿಕೊಂಡಿರಲ್ಲ. ಯಾಕೆಂದರೆ ಅವರಿಗೆ ಎಲ್ಲ ಕಡೆಯಲ್ಲೂ ನಮ್ಮಂಥ ಜನರೇ ಇರುವ ಅರಿವು ಪಡೆದು ಪ್ರೀತಿಸಲು ಸಾಧ್ಯವಾಗಿರುತ್ತದೆ. ಎಲ್ಲ ಕಡೆಯಲ್ಲೂ ಎಲ್ಲಾ ಥರದ ಜನರಿರುತ್ತಾರಲ್ವಾ? ನಮ್ಮಂಥ ಜನರೇ ಅಲ್ಲೂ ಇರುವಾಗ ಅಲ್ಲಿಗೆ ಬಾಂಬ್ ಹಾಕೋದು ಬೇಡ. ಯುದ್ಧ ಬೇಡ.. ಸಾಮಾನ್ಯ ಜನರು ಎಲ್ಲರೂ ಚೆನ್ನಾಗಿರಬೇಕು ಅಂತ ಅನಿಸಬೇಕಲ್ವಾ? ಪ್ರವಾಸದಿಂದ ಇಂಥ ಅದ್ಭುತ ವಿಷಯಗಳು ತೆರೆದಿಟ್ಟ ಹಾಗಾಗುತ್ತದೆ. ಉದಾಹರಣೆಗೆ ಜರ್ಮನಿಯ ಹಳ್ಳಿ ಬಗ್ಗೆ ಹೇಳಿದೆನಲ್ಲ? ನನಗೆ ನನ್ನ ಹಳ್ಳಿಗೂ ಅಲ್ಲಿಗೂ ಅಂಥ ವ್ಯತ್ಯಾಸ ಕಾಣಿಸಲಿಲ್ಲ. ಉದಾಹರಣೆಗೆ ನನ್ನ ಹಳ್ಳಿಯ ಮಂದಿಯಂತೆ ಅವರಿಗೂ ಇಂಗ್ಲಿಷ್ ಗೊತ್ತಿರಲಿಲ್ಲ. ಇಲ್ಲಿನ ಮುಗ್ದತೆ, ರೈತರ ಬದುಕು ಎಲ್ಲವೂ ಅಲ್ಲಿಯೂ ಇತ್ತು. ಅಲ್ಲಿಗೆ ಹೋದ ಮೇಲೆ ಜಗತ್ತಿನ ಎಲ್ಲ ಹಳ್ಳಿಗಳೂ ಒಂದೇ ರೀತಿಯೇ ಇರಬಹುದೆಂದು ಅರ್ಥವಾಗಿದೆ. ನಾನು ಪದೇಪದೆ ಅಲ್ಲಿಗೆ ಹೋಗಿದ್ದೇನೆ. ಹೋದಾಗೆಲ್ಲ ಅದೇ ಹಳ್ಳಿಯಲ್ಲಿರುತ್ತೇನೆ. ಬಹಳ ಚೆನ್ನಾಗಿದೆ.
ದೇಶದೊಳಗೆ ಪ್ರವಾಸ ಹೋಗಿ ನಿಮಗೆ ಮೆಚ್ಚುಗೆಯಾಗಿದ್ದು ಯಾವ ಜಾಗ?
ರತ್ನನ್ ಪ್ರಪಂಚ ಶೂಟಿಂಗ್ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆವು. ಅದ್ಭುತವಾಗಿತ್ತು. ಜನವರಿಯಲ್ಲಿ ಹೋಗಿದ್ದೆವು. ನಾವು ಹೋದ ದಿನವೇ ಹಿಮ ಬೀಳಲು ಶುರುವಾಗಿತ್ತು. ಬಹಳ ಚೆನ್ನಾಗಿತ್ತು. ಅಂದು ಪೂರ್ತಿ ಪಹಲ್ಗಾಮ್ ಸುತ್ತಾಡಲು ಸಾಧ್ಯವಾಗಿತ್ತು. ಅಂಥ ಒಳ್ಳೆಯ ನೆನಪುಗಳೇ ಇದ್ದವು. ಆದರೆ ಆನಂತರದ ಭಯೋತ್ಪಾದಕ ಘಟನೆಗಳು ಮಾತ್ರ ಬೇಸರ ಮೂಡಿಸಿವೆ.
ಪ್ರವಾಸಿಗರಿಗೆ ನೀವು ನೀಡಬಯಸುವ ಸಲಹೆ ಏನು ?
ಆದಷ್ಟು ಕಣ್ತುಂಬಿಕೊಳ್ಳಿ. ಯಾಕೆಂದರೆ ಈಗ ತುಂಬ ಜನ ಮೊಬೈಲಲ್ಲೇ ಇರ್ತಾರೆ. ಖಂಡಿತವಾಗಿ ನೆನಪುಗಳನ್ನು ಸೆರೆ ಹಿಡಿಯಬೇಕು. ಆದರೆ ನಮ್ಮ ಕಣ್ಣು ಮತ್ತು ಮನಸು ಸೆರೆ ಹಿಡಿಯುವಂತೆ ಯಾವ ಡಿವೈಸ್ ಕೂಡ ಕ್ಯಾಪ್ಚರ್ ಮಾಡಲಾರದು. ಹೀಗಾಗಿಯೇ ಆದಷ್ಟು ಕಣ್ತುಂಬುವ ಮನಸು ತುಂಬುವ ಪ್ರಯತ್ನ ಮಾಡಿ. ಪ್ರವಾಸ ಹೋಗುವುದೆಂದರೆ ಶಾಲಾ ಪ್ರವಾಸದಲ್ಲಿ ಹೋಗಿ ಬರೇ ಗೈಡ್ ತೋರಿಸಿದ್ದನ್ನು ಮಾತ್ರ ನೋಡಿಕೊಂಡು ಬರುವಂಥದ್ದಲ್ಲ. ಅಲ್ಲಿನ ಜಾಗ ಮಾತ್ರವಲ್ಲ, ಅಲ್ಲಿನ ಸಂಸ್ಕೃತಿಯನ್ನು ಕೂಡ ಅರಿಯಲು ಸಾಧ್ಯವಾಗಬೇಕು.
ಹನಿಮೂನ್ ಗೆ ಎಲ್ಲಿಗೆ ಹೋಗಬೇಕು ಅಂತ ಯೋಜನೆ ಹಾಕಿಕೊಂಡಿದ್ದೀರಿ?
ಗೊತ್ತಿಲ್ಲ. ಹನಿಮೂನ್ ಹೋಗುವುದಕ್ಕೆಂದೇ ರಜೆ ಹಾಕುವುದಿಲ್ಲ. ಕೆಲಸದ ಮಧ್ಯೆ ಸರಿಯಾದ ಬಿಡುವು ಕೂಡಿ ಬಂದಾಗ, ಆ ಸಮಯಕ್ಕೆ ತಕ್ಕಂತೆ ಯಾವುದಾದರೂ ಒಂದು ದೇಶಕ್ಕೆ ಹೋಗಬೇಕು ಅನಿಸಿದರೆ ಆಗ ಪ್ಲ್ಯಾನ್ ಮಾಡಿಕೊಳ್ಳುತ್ತೇವೆ.