Wednesday, February 4, 2026
Wednesday, February 4, 2026

ವಿಆರ್‌ಡಿಎಂ ಟ್ರಸ್ಟ್‌ನ ಆಡಳಿತದಲ್ಲಿ ಪ್ರಕಾಶ ಪ್ರಭು ಛಾಪು

ವಿ ಆರ್‌ ದೇಶಪಾಂಡೆ ಸ್ಮಾರಕ ಟ್ರಸ್ಟ್‌ನ ಆಡಾಳಿತಾಧಿಕಾರಿಯಾಗಿ ಪ್ರಕಾಶ್‌ ಪ್ರಭು ಅವರು ಸುದೀರ್ಘ ವರ್ಷಗಳಿಂದ ಸಾರ್ಥಕ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಯನ್ನು ಮುನ್ನಡೆಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ತಮ್ಮ ನಾಯಕತ್ವದ ಗುಣದಿಂದ ಟ್ರಸ್ಟ್‌ನ ಅಧ್ಯಕ್ಷರಾದ ಆರ್‌ ವಿ ದೇಶಪಾಂಡೆ ಅವರ ಕನಸುಗಳನ್ನು ಸಾಕಾರಗೊಳಿಸುವಲ್ಲಿಯೂ ಇವರ ಪರಿಶ್ರಮ ದೊಡ್ಡದು. ಇನ್ನು ದೇಶಪಾಂಡೆ ಖಾಸಗಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ದಿನೇಶ್‌ ಆರ್‌ ನಾಯ್ಕ್‌ ಅವರು ಕಳೆದ ಒಂದು ದಶಕದಿಂದ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗಾಗಿ ಕಾಯ, ವಾಚಾ ಮತ್ತು ಮನಸಾ ಶ್ರಮಿಸುತ್ತಿದ್ದಾರೆ. ಟಸ್ಟ್‌ನ ಆಧಾರ ಸ್ತಂಭಗಳಂತಿರುವ ಈ ಇಬ್ಬರ ಸಂದರ್ಶನ.

ಸಂದರ್ಶನ-ಪ್ರಕಾಶ್‌ ಪ್ರಭು, ವಿಆರ್‌ ದೇಶಪಾಂಡೆ ಟ್ರಸ್ಟ್‌ನ ಆಡಳಿತಾಧಿಕಾರಿಗಳು

ಟ್ರಸ್ಟ್‌ನ ಆಡಳಿತಾಧಿಕಾರಿಯಾಗಿ ನಿಮ್ಮ ಅನುಭವ?

ಇದು ನಮ್ಮ ಸಂಸ್ಥೆಯ ಅಧ್ಯಕ್ಷರಾದ ಆರ್‌.ವಿ ದೇಶಪಾಂಡೆ ಅವರು ಕನಸಿನ ಕೂಸು. ಆರಂಭದಲ್ಲಿ ಐಟಿಐ, ರುಡ್‌ಸೆಟ್‌ ಮಾತ್ರ ಇದ್ದವು. ಐಟಿಐ ಕೌಶಲ್ಯಕ್ಕೆ ಒತ್ತು ನೀಡುತ್ತದೆ. ಹಾಗಾಗಿ ಗ್ರಾಮೀಣ ಜನರು ಕೌಶಲ್ಯ ತರಬೇತಿ ಪಡೆದು ಜೀವನಮಟ್ಟ ಸುಧಾರಿಸಿಕೊಳ್ಳುವಂತೆ ಮಾಡಲು ಇದೊಂದು ಪ್ರಯತ್ನವಾಗಿತ್ತು. ಇಲ್ಲಿ 9 ಟ್ರೇಡ್‌ಗಳಿವೆ. ಅತ್ಯಾಧುನಿಕ ಮತ್ತು ಉತ್ತಮ ಉಪಕರಣಗಳು ಇವೆ. ನಮ್ಮದು ಐಎಸ್‌ಒ ಸರ್ಟಿಫೈಡ್‌ ಸಂಸ್ಥೆ. ಕೈಗಾರಿಕೆಗಳು ಪ್ಲೇಸ್‌ಮೆಂಟ್‌ಗಾಗಿ ಪ್ರತಿ ವರ್ಷ ಬರುತ್ತವೆ. ನಮ್ಮಲ್ಲಿ ತರಬೇತಿ ಪಡೆದ ನೂರು ಪ್ರತಿಶತ ಜನರಿಗೆ ಉದ್ಯೋಗಗಳು ದೊರೆತಿವೆ. ದೇಶ-ವಿದೇಶಗಳಲ್ಲಿ ನಮ್ಮ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ. ವಿದೇಶಗಳಿಂದ ಮರಳಿ ಬಂದು ಸ್ವಯಂ ಉದ್ಯೋಗವನ್ನು ಮಾಡುತ್ತಿರುವವರಿದ್ದಾರೆ. 1998ರಲ್ಲಿ ಟ್ರಸ್ಟ್‌ ಸ್ಥಾಪನೆಯಾಗಿದ್ದರೂ ಈ ಥರದ ಕ್ಯಾಂಪಸ್‌ ಆರಂಭವಾಗಿದ್ದು 2004ರಲ್ಲಿ.

ಇದನ್ನೂ ಓದಿ: ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆ

ಇಲ್ಲಿ ತರಬೇತಿ ಪಡೆದವರಿಗೆ ಉದ್ಯೋಗ ಗ್ಯಾರಂಟಿ ಉಂಟಾ?

ಕೆನರಾ ಬ್ಯಾಂಕ್‌ನ ಸಹಯೋಗದೊಂದಿಗೆ ಪ್ರಾರಂಭವಾದ ದೇಶಪಾಂಡೆ ಆರ್‌ಸೆಟಿ ಸ್ವ ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ ಎನ್ನುವ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಇದೊಂದು ಶಾರ್ಟ್‌ಟೈಮ್‌ ಕೋರ್ಸ್‌. 30ರಿಂದ 45 ದಿನಗಳ ತರಬೇತಿ ಇರುತ್ತದೆ. ಈ ಕೋರ್ಸ್‌ಗಳಿಗೆ ಸೇರುವವರಿಗೆ ಉಚಿತ ಊಟ/ವಸತಿ ವ್ಯವಸ್ಥೆ ಇದೆ. ಈವರೆಗೆ ಸುಮಾರು 28000 ಜನರಿಗೆ ತರಬೇತಿ ನೀಡಲಾಗಿದೆ. ವಿಶೇಷವೆಂದರೆ ಇದರಲ್ಲಿ ತರಬೇತಿ ಪಡೆದ 75 ಪ್ರತಿಶತ ಜನರು ಸ್ವ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಹೀಗೆ ತರಬೇತಿ ಪಡೆದವರಿಗೆ ಎರಡು ವರ್ಷಗಳವರೆಗೆ ಅವರ ಸ್ವ ಉದ್ಯೋಗಕ್ಕೆ ಸಹಾಕಾರಿಯಾಗಿ ನಾವಿರುತ್ತೇವೆ. ಬ್ಯಾಂಕ್‌ ಸಾಲವನ್ನು ಕೊಡಿಸಲೂ ನೆರವಾಗುತ್ತೇವೆ.

ವಿಮಲ್‌ ವಿ ದೇಶಪಾಂಡೆ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಬಗ್ಗೆ ನಿಮ್ಮ ಮಾತು?

ಆರ್‌ ವಿ ದೇಶಪಾಂಡೆ ಅವರ ಕಾಲದಲ್ಲಿ ಹಳಿಯಾಳದಲ್ಲಿ ಮತ್ತು ಸುತ್ತಮುತ್ತ ಹತ್ತಿರದಲ್ಲಿ ಯಾವ ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ದೂರದ ನಗರಗಳಿಗೇ ಹೋಗಬೇಕಾಗಿತ್ತು. ಹಾಗಾಗಿ ಕಡಿಮೆ ಖರ್ಚಿನಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುವ ಸಲುವಾಗಿ ಈ ಶಾಲೆಯನ್ನು 2005ರಲ್ಲಿ ಪ್ರಾರಂಭಿಸಲಾಯಿತು. ಸಿಬಿಎಸ್‌ಸಿ ಅಫ್ಲಿಯೇಷನ್‌ ಪಡೆದಿದ್ದೇವೆ. ಹತ್ತನೆಯ ತರಗತಿಯವರೆಗೆ ವಿದ್ಯಾರ್ಥಿಗಳು ಇಲ್ಲಿದ್ದಾರೆ. ವಿಶೇಷವೆಂದರೆ ಇಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಐಐಟಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ಇದರೆಲ್ಲದರ ಹಿಂದಿನ ಶಕ್ತಿಯೇ ಆರ್‌ ವಿ ದೇಶಪಾಂಡೆ, ಟ್ರಸ್ಟಿಗಳಾದ ಪ್ರಸಾದ್‌ ದೇಶಪಾಂಡೆ ಮತ್ತು ಪ್ರಶಾಂತ್‌ ದೇಶಪಾಂಡೆ ಅವರು.

Untitled design (66)

ಹಳಿಯಾಳದಲ್ಲಿ ಶೈಕ್ಷಣಿಕ ಪ್ರಗತಿ ಹೇಗಿದೆ?

ಈ ಹಿಂದಿನವರೆಗೆ ಹಳಿಯಾಳ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ದೂರದ ಊರುಗಳಿಂದ ವಿದ್ಯಾಭ್ಯಾಸಕ್ಕಾಗಿ ಮಕ್ಕಳು ಬರುತ್ತಿದ್ದಾರೆ. ಇದು ಆರ್‌ ವಿ ದೇಶಪಾಂಡೆ ಅವರ ಪರಿಶ್ರಮದ ಫಲ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಪ್ರಚಾರವಿಲ್ಲದೆ ಏನೂ ಸಾಧ್ಯವಿಲ್ಲ. ಆದರೆ ನಮ್ಮಲ್ಲಿ ಅಲುಮ್ನಿ ಅಂದರೆ ಹಳೆಯ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಪ್ರಚಾರಕೊಂಡಿ. ಅವರು ನಮ್ಮಲ್ಲಿ ತರಬೇತಿ ಪಡೆದು ಇಲ್ಲಿನ ವಾತಾವರಣ ಮತ್ತು ತರಬೇತಿ ಎಲ್ಲವನ್ನು ತಮ್ಮವರಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಮಾಹಿತಿ ಹಂಚಿಕೆಯಾಗುತ್ತಿದೆ. ಇಲ್ಲಿನ ಯಾವ ಹೊಸ ವಿದ್ಯಾರ್ಥಿಗಳನ್ನು ಮಾತನಾಡಿಸಿದರೂ ಇದೇ ಮಾತನ್ನು ಅವರು ಹೇಳುತ್ತಾರೆ. ನಮ್ಮಲ್ಲಿ ಈಗ ಮುಂದಿನ ವರ್ಷವಾದರೂ ನಮಗೆ ಅಡ್ಮಿಷನ್‌ ಕೊಡಿ ಎಂದು ಕೇಳುವ ವಿದ್ಯಾರ್ಥಿಗಳು ಬಂದು ಹೋಗಿದ್ದಾರೆ. ಹೀಗಾಗಲು ನಮ್ಮಲ್ಲಿನ ಅನುಭವಿ ಸ್ಟಾಫ್‌ಗಳು ಮತ್ತು ಉದ್ಯೋಗದಾತ ಕಂಪನಿಗಳ ನೂತನ ಸುಸಜ್ಜಿತ ಉಪಕರಣಗಳ ತರಬೇತಿ ಮತ್ತು ಪ್ಲೇಸ್‌ಮೆಂಟ್‌ಗಳು ಆಗುತ್ತಿರುವುದೇ ಕಾರಣ. ಇನ್ನು ಅಲುಮ್ನಿಗಳೊಂದಿಗೆ ಸಭೆಗಳನ್ನು ಆಗಾಗ್ಗೆ ಏರ್ಪಡಿಸಲಾಗುತ್ತದೆ. ಅದು ನೇರ ಸಭೆಯಾಗಿರಬಹುದು ಅಥವಾ ಆನ್‌ಲೈನ್‌ ಮೂಲಕವೇ ಆಗಿರಬಹುದು. ಇದರಿಂದ ಉನ್ನತ ಹುದ್ದೆಯಲ್ಲಿರುವ ಸೀನಿಯರ್‌ಗಳನ್ನು ಕಂಡು ಜೂನಿಯರ್‌ ವಿದ್ಯಾರ್ಥಿಗಳು ಸ್ಫೂರ್ತಿ ತುಂಬಿಕೊಳ್ಳುತ್ತಾರೆ.

ರುಡ್‌ಸೆಟ್‌ ಪ್ರೋಗ್ರಾಮ್‌ ಪ್ರಕ್ರಿಯೆ ಹೇಗೆ?

ರುಡ್‌ಸೆಟ್‌ ಪ್ರೋಗ್ರಾಮ್‌ಗೆ ವರ್ಷಪೂರ್ತಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಎಲ್ಲ ಅರ್ಜಿಗಳನ್ನು ಒಟ್ಟು ಮಾಡಿಕೊಂಡು ಸರಾಸರಿ 30 ವಿದ್ಯಾರ್ಥಿಗಳ ಒಂದು ಬ್ಯಾಚ್‌ನಂತೆ ಮಾಡಲಾಗುತ್ತದೆ. ಉತ್ತಮ ತರಬೇತುದಾರರನ್ನು ಆಯ್ಕೆ ಮಾಡಿಕೊಂಡು ತರಬೇತಿ ಆರಂಭಿಸುತ್ತೇವೆ. ವಿದ್ಯಾರ್ಥಿ ಯಾವ ಕೋರ್ಸ್‌ಗಳನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆಯಾ ಕೋರ್ಸ್‌ ಕುರಿತು ಸ್ವಲ್ಪ ಅರಿವಿರಬೇಕು. ಅಂಥವರನ್ನು ಕೋರ್ಸ್‌ ತರಬೇತಿ ನೀಡಲು ಆಯ್ಕೆ ಮಾಡಲಾಗುತ್ತದೆ. ಪ್ರತಿವರ್ಷವೂ ಈ ಪ್ರೋಗ್ರಾಮ್‌ಗೆ ಗ್ರೇಡಿಂಗ್‌ ನೀಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿನ ರುಡ್‌ಸೆಟ್‌ ಪ್ರೋಗ್ರಾಮ್‌ ಆರಂಭವಾದಾಗಿನಿಂದಲೂ A+ಗ್ರೇಡ್‌ನಲ್ಲಿಯೇ ಇದೆ. ಇದನ್ನು ನಾವು ಎಂದಿಗೂ ಕಾಪಾಡಿಕೊಂಡುಬರುತ್ತೇವೆ. ಹಾಗಾಗಿ ಕಲಿಯಲು ಆಸಕ್ತಿ ಇರುವ ಮಕ್ಕಳನ್ನೇ ನಾವು ತರಬೇತಿ ನೀಡಲು ಆಯ್ಕೆ ಮಾಡುತ್ತೇವೆ. ನಮ್ಮಲ್ಲಿ ಕೆನರಾ ಬ್ಯಾಂಕ್‌ನ ಸಹಯೋಗವೂ ಇರುವುದರಿಂದ ಮುಂದೆ ಅವರು ಸ್ವ ಉದ್ಯೋಗ ಕಂಡುಕೊಳ್ಳಲು ಸಾಲ ಸೌಲಭ್ಯಕ್ಕೂ ಸಹಾಯಕವಾಗುತ್ತದೆ.

Untitled design (67)

ಕಂಪನಿಗಳ ಜತೆಗಿನ ಸಂಸ್ಥೆಯ ಒಡನಾಟ ಹೇಗಿದೆ?

ಆರ್‌ ವಿ ದೇಶಪಾಂಡೆ ಅವರು ಕೈಗಾರಿಕಾ ಸಚಿವರಾಗಿದ್ದಾಗ ಟೊಯೋಟಾ ಸೇರಿ ಇಂಥ ಹಲವು ಕಂಪನಿಗಳು ಕರ್ನಾಟಕಕ್ಕೆ ಬಂದವು. ಬಿಡದಿಯಲ್ಲಿ ಟೊಯೋಟಾ ಪ್ಲಾಂಟ್‌ ಇದೆ. ಅಲ್ಲಿನ ಗೇಟ್‌ ಎಂಟ್ರೆನ್ಸ್‌ನಲ್ಲಿಯೇ ಆರ್‌ ವಿ ದೇಶಪಾಂಡೆ ಅವರ ಹೆಸರಿನಲ್ಲಿ ಒಂದು ಗಿಡವನ್ನು ನೆಡಲಾಗಿತ್ತು. ಈಗ ಅದು ದೊಡ್ಡ ಮರವಾಗಿ ಬೆಳೆದಿದೆ. ಆಗ ಟೊಯೋಟಾದವರು 2006ರಲ್ಲಿ ಟಿ-ಟೆಪ್‌ ಅನ್ನು ಪ್ರಾರಂಭಿಸಲು ಆಲೋಚಿಸಿದ್ದರು. ಅದಕ್ಕಾಗಿ ಭಾರತದ ನೂರು ಐಟಿಐ ಕಾಲೇಜುಗಳಿಗೆ ಭೇಟಿ ನೀಡಿದ್ದರು. ಆಗ ನಮ್ಮ ಕಾಲೇಜಿಗೂ ಭೇಟಿ ನೀಡಿದ್ದರು. ಈ ವೇಳೆ ಭಾರತದಾದ್ಯಂತ ಆಯ್ಕೆಯಾದ ನಾಲ್ಕು ಕಾಲೇಜುಗಳಲ್ಲಿ ನಮ್ಮ ಕಾಲೇಜು ಒಂದಾಗಿತ್ತು. ಆಗ ನಾನು ಕಾಲೇಜಿನ ಪ್ರಾಂಶುಪಾಲನಾಗಿದ್ದೆ. ಅವರದ್ದೇ ಸಲಹೆಯ ಮೇರೆಗೆ ಮೆಕ್ಯಾನಿಕ್‌ ಆಟೋ ಬಾಡಿ ಪೇಂಟಿಂಗ್‌ ಮತ್ತು ಮೆಕ್ಯಾನಿಕ್‌ ಆಟೋ ಬಾಡಿ ರಿಪೇರ್‌ ಕೋರ್ಸ್‌ಗಳನ್ನು ಪರಿಚಯಿಸಲಾಯಿತು. ಈ ಕೆಲಸಕ್ಕೆ ಒಳ್ಳೆಯ ಬೇಡಿಕೆಯೂ ಇದೆ. ಈವರೆಗೆ ಟೊಯೋಟಾ ಜತೆಗೆ ನಮ್ಮ ಬಾಂಧವ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದೇವೆ.

ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಹೇಗಿದ್ದಾರೆ?

ನಮ್ಮಲ್ಲಿ ತರಬೇತಿಗೆ ಬರುವ ಮಕ್ಕಳಲ್ಲಿ ಸಾಕಷ್ಟು ಜನರು ಫಸ್ಟ್‌ ಟೈಮ್‌ ಲರ್ನರ್ಸ್‌. ಅವರ ಪೋಷಕರೂ ಓದಿರುವುದು ಅಲ್ಪ. ಆದರೆ, ತರಬೇತಿಯ ನಂತರ ಆ ಮಕ್ಕಳು ಕತಾರ್‌, ದುಬೈ ಹೀಗೆ ವಿದೇಶಗಳಲ್ಲೂ ಇಂದು ಕೆಲಸ ಮಾಡುತ್ತಿದ್ದಾರೆ. ಹಳ್ಳಿಯಿಂದ ಬಂದವರೂ ದೇಶ-ವಿದೇಶಗಳಲ್ಲಿ ಕೆಲಸ ಮಾಡಬಲ್ಲರು. ಆದರೆ, ಅದಕ್ಕೆ ತಕ್ಕ ಅಡಿಪಾಯ ಅಂದರೆ ತರಬೇತಿ ನೀಡುವ ಸಂಸ್ಥೆ ಬೇಕು. ಅವುಗಳಲ್ಲಿ ನಮ್ಮ ಸಂಸ್ಥೆ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ನಾವು ನಮ್ಮಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಗೆ ʻಇಂಡಿಯಾ ಸ್ಕಿಲ್ಸ್‌ʼ ಮತ್ತು ʻವರ್ಲ್ಡ್‌ ಸ್ಕಿಲ್ಸ್‌ʼನಂಥ ಸ್ಪರ್ಧೆಗಳಿಗೂ ಭಾಗವಹಿಸಲು ಪ್ರೋತ್ಸಾಹ ಮತ್ತು ಅದಕ್ಕೆ ತಕ್ಕ ತರಬೇತಿಯನ್ನು ನೀಡುತ್ತೇವೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್