2018ರಲ್ಲಿ ಗುಳ್ಟೂ ಸಿನಿಮಾ ಬಿಡುಗಡೆಯಾದಾಗ ಬೆಸ್ಟ್‌ ಡೆಬ್ಯೂಟೆಂಟ್‌ ಆಕ್ಟರ್‌ ಗೆ ಸೈಮಾ ಅವಾರ್ಡ್‌ನಲ್ಲಿ ನಾಮಿನೇಟ್‌ ಆಗುವುದಿತ್ತು. ತರಾತುರಿಯಲ್ಲಿ ಸಾಕಷ್ಟು ಕಷ್ಟಪಟ್ಟು ಪಾಸ್‌ಪೋರ್ಟ್‌ ಮಾಡಿಸಿಕೊಂಡೆ. ಆದರೆ ಕೊನೆಗೆ ನಾನು ನಾಮಿನೇಟ್‌ ಆಗಿಲ್ಲವೆಂಬುದು ತಿಳಿಯಿತು. ಆದರೆ ಅದಾದಮೇಲೂ ನನಗೆ ವಿದೇಶ ಪ್ರಯಾಣದ ಅವಕಾಶ ಸಿಕ್ಕಿರಲಿಲ್ಲ. ಕೊನೆಗೆ 2023ರಲ್ಲಿ ಮತ್ತೆ ಸೈಮಾಗೆ ನಾಮಿನೇಟ್‌ ಆಗಿದ್ದೆ. ಸೈಮಾಗಾಗಿ ಮಾಡಿಸಿದ್ದ ಪಾಸ್‌ಪೋರ್ಟ್‌ ಮತ್ತೆ ಸೈಮಾದಲ್ಲಿ ಭಾಗವಹಿಸುವ ಮೂಲಕವೇ ಸಂಪನ್ನವಾಯ್ತು ಎನ್ನುತ್ತಾರೆ ನಟ, ರಂಗಭೂಮಿ ಕಲಾವಿದ ನವೀನ್‌ ಶಂಕರ್.‌ ಅವರ ಪ್ರವಾಸಿ ಜೀವನದ ಬಗ್ಗೆ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.

ಎಲ್ಲರಂತಲ್ಲ ನನ್ನ ಪ್ರವಾಸಿ ಜೀವನ

ನನ್ನ ಪ್ರವಾಸಿ ಜೀವನ ಎಲ್ಲರಂತಲ್ಲ. ಚಿತ್ರೀಕರಣಗಳ ಕಾರಣದಿಂದ ಪೂರ್ವನಿಯೋಜಿತವಾಗಿ ಏನನ್ನೂ ಮಾಡುವುದಕ್ಕಾಗುವುದಿಲ್ಲ. ಕೆಲಸದ ನಡುವೆ ಒತ್ತಡಗಳಿಂದ ಬ್ರೇಕ್‌ ಬೇಕೆನಿಸಿದಾಗ ಸುತ್ತಾಡಲು ಹೋಗುತ್ತೇನೆ. ಒಮ್ಮೊಮ್ಮೆ ಶೂಟ್‌ ಗೂ ಪೂರ್ವ ತಯಾರಿಯಾಗಿ ಒಬ್ಬನೇ ಎಲ್ಲಾದರೂ ಹೋಗಿ ಸಮಯ ಕಳೆದು ಬರುತ್ತೇನೆ. ಮತ್ತೆ ಕೆಲವೊಮ್ಮೆ ಚಿತ್ರೀಕರಣ ಪೂರ್ತಿಯಾದ ಖುಷಿಯಲ್ಲೂ ಟ್ರಿಪ್‌ ಹೋಗಿಬರುವುದಿದೆ.

ಪ್ರವಾಸದಲ್ಲಿ ಕಳೆದುಹೋಗುವಾಸೆ

ಸಾಮಾನ್ಯವಾಗಿ ಬೇಕಾದಾಗಲೆಲ್ಲಾ ಕೆಲಸ ಹಾಗೂ ಖಾಸಗಿ ಬದುಕಿನ ನಡುವೆ ಸ್ವಿಚ್‌ ಆನ್- ಸ್ವಿಚ್‌ ಆಫ್ ಆಗುವುದು ನನಗೆ ಮುಂಚೆಯಿಂದಲೂ ಕಷ್ಟದ ವಿಚಾರ. ಕೆಲಸವೆನ್ನುವುದು ನನಗೆ ದಿನದ 24 ಗಂಟೆಗಳ ಕಾಲವೂ ತಲೆಯಲ್ಲೇ ಇರುತ್ತದೆ. ಆದರೆ ಟ್ರಿಪ್‌ಗೆ ಹೋದಾಗ ಮಾತ್ರ ನಾನು ಅಲ್ಲೇ ಇರುತ್ತೇನೆ. ಎಲ್ಲವನ್ನೂ ಮರೆತು ಹೊಸ ಸಂಸ್ಕೃತಿ, ಹೊಸ ಜಾಗದಲ್ಲಿ ಕಳೆದುಹೋಗುತ್ತೇನೆ. ಅಂತಾರಾಷ್ಟ್ರೀಯ ಪ್ರವಾಸವೆಂದರಂತೂ ಅಗತ್ಯವಿದ್ದರಷ್ಟೇ ಮೊಬೈಲ್‌ ಬಳಕೆಯಿರುತ್ತದೆ. ಹಾಗಾಗಿ ಒತ್ತಡವೂ ಕಡಿಮೆಯಾಗುತ್ತದೆ.

ಬಾಲಿಯಲ್ಲಿ ಸೈಕಲ್‌ ಸವಾರಿ

2011-12ರಿಂದಲೂ ನನ್ನ ಸ್ನೇಹಿತರಾಗಿರುವ ನಟ ಅಭಿಜಿತ್‌ ಹಾಗೂ ಮೂರನೇ ಕೃಷ್ಣಪ್ಪ ಸಿನಿಮಾ ನಿರ್ದೇಶಕ ನವೀನ್‌ ನಾರಾಯಣಘಟ್ಟ ಜತೆಗೆ ಬಾಲಿ ಪ್ರವಾಸ ಪ್ಲ್ಯಾನ್‌ ಮಾಡಿದ್ದೆವು. ಬಾಲಿಗೆ ಹೋದಾಗ ಸೆಮ್ನಿಯಾಕ್‌ ಅಲ್ಲಿ 2 ದಿನ, ಗಿಲ್ಲಿ ಐಲ್ಯಾಂಡ್ಸ್‌ನಲ್ಲೂ ಒಳ್ಳೆಯ ಸಮಯವನ್ನು ಕಳೆದೆವು. ಗಿಲ್ಲಿ ಐಲ್ಯಾಂಡ್ಸ್‌ನ ಸೈಕಲ್‌ ಸುತ್ತಾಟವನ್ನಂತೂ ಮರೆಯಲಾಗದು. ಅಲ್ಲಿನ ಜನರು ತುಂಬಾ ಒಳ್ಳೆಯವರು. ಪ್ರವಾಸದ ನಡುವೆ ಅಪರಿಚಿತರಾದ ರಷ್ಯನ್ಸ್‌ ಹಾಗೂ ಆಸ್ಟ್ರೇಲಿಯಾದವರನ್ನು ಭೇಟಿಯಾಗಿದ್ದೆ, ಇಂದಿಗೂ ಅವರು ಸಂಪರ್ಕದಲ್ಲಿದ್ದಾರೆ.

ಪ್ರವಾಸಿ ಮನಸು ಮುಖ್ಯ

New Project (4)

ನನಗೆ ಫಾರಿನರ್ಸ್‌ ವರ್ಕ್‌ ಕಲ್ಚರ್‌ ತುಂಬಾ ಮೆಚ್ಚುಗೆಯಾಗುತ್ತದೆ. ವರ್ಷವಿಡೀ ಅತಿಯಾಗಿ ದುಡಿಯುವ ಅವರು, ನಡುವೆ ಒಂದೆರಡು ತಿಂಗಳ ಕಾಲ ತಮಗಾಗಿಯೇ ಸಮಯವನ್ನು ಮೀಸಲಿಡುತ್ತಾರೆ. ಅತಿಯಾಗಿ ಪ್ರಯಾಣ, ಪ್ರವಾಸ ಮಾಡುತ್ತಿರುತ್ತಾರೆ.ಆದರೆ ನಮ್ಮಲ್ಲಿ ಅಂಥ ಅವಕಾಶವೇ ಇಲ್ಲ. ನಮ್ಮಲ್ಲಿ ದುಡಿಮೆಯೇ ಹೆಚ್ಚು, ಪ್ರವಾಸಕ್ಕೆ ಮನಸು ಮಾಡುವವರೇ ಕಡಿಮೆ.

ಟ್ರಾವೆಲ್‌ ವಿತ್ ಅನದರ್‌ ಕ್ಯಾರೆಕ್ಟರ್‌

ನನ್ನದು ಬಹುತೇಕ ಸೋಲೋ ಪ್ರಯಾಣಗಳೇ. ಯಾವುದೇ ಸಿನಿಮಾ ಒಪ್ಪಿಕೊಂಡನಂತರ ಚಿತ್ರೀಕರಣಕ್ಕೂ ಮುನ್ನ ಪಾತ್ರದೊಂದಿಗೆ ಬೆಸೆದುಕೊಳ್ಳುವುದಕ್ಕಾಗಿ ನಾನೊಂದು ವಿರಾಮ ತೆರೆದುಕೊಂಡು ಒಬ್ಬಂಟಿಯಾಗಿ ಇದ್ದು ಬಿಡುತ್ತೇನೆ. ʻನೋಡಿದವರು ಏನಂತಾರೆʼ ಚಿತ್ರೀಕರಣಕ್ಕೂ ಮುಂಚಿತವಾಗಿಯೇ ನಾನು ಬಿಡದಿಯ ಬಳಿ ಒಂದೆರಡು ದಿನ ಬಿಡಾರ ಹೂಡಿದ್ದೆ. ʻಧರಣಿಮಂಡಲʼ ಚಿತ್ರಕ್ಕೂ ಮುನ್ನವೇ ಉಡುಪಿಗೆ ಹೋಗಿ ಬಂದಿದ್ದೆ.

ನನ್ನೂರು ಶಿಲ್ಪಕಲೆಯ ತೊಟ್ಟಿಲು

ನಾನು ಕೆಎಸ್‌ಟಿಡಿಸಿ ರಾಯಭಾರಿಯಾಗಿ ಆಯ್ಕೆಯಾದರೆ ನನ್ನ ಜಿಲ್ಲೆ ಬಾಗಲಕೋಟೆಯ ಪ್ರಮುಖ ಪ್ರವಾಸಿ ತಾಣಗಳತ್ತ ಹೆಚ್ಚಿನ ಗಮನಹರಿಸುತ್ತೇನೆ. ಶಿಲ್ಪಕಲೆಯ ತೊಟ್ಟಿಲು ಎಂದೇ ಕರೆಸಿಕೊಳ್ಳುವ ಜಿಲ್ಲೆ ಐಹೊಳೆ, ಪಟ್ಟದಕಲ್ಲು, ಹಳೆಬೀಡು, ಬಾದಾಮಿ ಭಾಗದ ವಾಸ್ತುಶಿಲ್ಪವನ್ನು ಇನ್ನಷ್ಟು ಪರಿಚಿತವಾಗುವಂತೆ ಮಾಡುತ್ತೇನೆ. ವಚನ ಸಾಹಿತ್ಯಕ್ಕೆ ಹೆಸರಾದ ಕೂಡಲ ಸಂಗಮ, ಬಸವನ ಬಾಗೇವಾಡಿಯಂಥ ತಾಣಗಳನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುತ್ತೇನೆ. ಇಲ್ಲಿರುವ ಪ್ರಮುಖ ಮಠಗಳು ಹೇಗೆ ವಿದ್ಯಾದಾನದಲ್ಲಿ ತೊಡಗಿಸಿಕೊಂಡಿಯೆಂಬುದನ್ನು ತಿಳಿಹೇಳುತ್ತೇನೆ. ಇಳಕಲ್‌ ಸೀರೆ, ಕೆಂಪು ಶಿಲೆಗಳಿಗೂ ಹೆಸರಾಗಿರುವ ಹೆಸರಾಗಿರುವ ಈ ಜಿಲ್ಲೆಯನ್ನು ಮುನ್ನೆಲೆಗೆ ತರುತ್ತೇನೆ.

ಒಂಟಿಯಾಗೇ ಕಾಲ ಕಳೆಯುವೆ

New Project (5)

ಬಿಡುವಾದಾಗ, ಒತ್ತಡಗಳಿಂದ ಹೊರಬರಬೇಕು ಎನಿಸಿದಾಗಲೆಲ್ಲ ನನ್ನ ಮನಸ್ಸು ಹೋಗಬಯಸುವ ಕೆಲವೇ ಜಾಗಗಳಲ್ಲಿ ಕಬಿನಿ ಪ್ರಮುಖವಾದುದು. ಅಲ್ಲದೆ ಪೊನ್ನಂಪೇಟೆ ಬಳಿಯಲ್ಲಿ ಚಿಕ್ಕದಾದ ರೆಸಾರ್ಟ್‌, ಶರಾವತಿ ಜಂಗಲ್‌ ರೆಸಾರ್ಟ್‌ ಹೀಗೆ ಗೊತ್ತುಮಾಡಿದ ಕೆಲವೇ ತಾಣಗಳಿಗೆ ಒಬ್ಬನೇ ಹೋಗಿ ಒಂದಷ್ಟು ದಿನಗಳನ್ನು ಕಳೆದುಬರುತ್ತೇನೆ.

ಶೂಟಿಂಗ್‌ ಪ್ರವಾಸ!

ಚಿತ್ರೀಕರಣದ ವೇಳೆ ಪ್ರಯಾಣ ಮಾಡುವುದು ಯಾವುದೇ ಕಲಾವಿದನಿಗೂ ಅನಿವಾರ್ಯವಾಗಿರುತ್ತದೆ. ನೋಡಿದವರು ಏನಂತಾರೆ ಚಿತ್ರಕ್ಕಾಗಿ ಬೆಂಗಳೂರು, ಮುಗಿಲುಪೇಟೆ, ಮಂದಾಲ್‌ ಪಟ್ಟಿಯಲ್ಲಿ ಚಿತ್ರೀಕರಣ ಮಾಡಿದ್ದೆವು. ಬಾದಾಮಿ, ಗೋಕರ್ಣ, ಮುಂಬೈ ಹೀಗೆ ಅನೇಕ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಒಂದು ಸಿನಿಮಾಕ್ಕಾಗಿ ಅನೇಕ ಪ್ರದೇಶಗಳನ್ನು ಸುತ್ತಿ ಬಂದ ಅನುಭವ ಇಂದಿಗೂ ನೆನಪಿನಲ್ಲುಳಿದಿದೆ.

ನಾನೊಬ್ಬ ಟ್ರಾವೆಲರ್‌

New Project (1)

ನನಗೆ ಟೂರಿಸ್ಟ್‌ ಎನ್ನುವುದಕ್ಕಿಂತ ಟ್ರಾವೆಲರ್‌ ಎನಿಸಿಕೊಳ್ಳುವುದೇ ಬಹಳ ಇಷ್ಟ. ನನಗನಿಸುವಂತೆ ಟ್ರಾವೆಲರ್‌ ಅಂದರೆ ಹೊಸ ಒಂದು ಅನುಭವಕ್ಕೆ ಹೊರಟಿರುವವನು ಎಂದರ್ಥ. ಅನುಭವಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳುವ ಆ ಪ್ರಕ್ರಿಯೆಯಲ್ಲಿ ಯಾವುದೂ ನಿಶ್ಚಿತ ಇಲ್ಲವೇ ಕಾರ್ಯಯೋಜಿತವಾಗಿರುವುದಿಲ್ಲ. ಗಮ್ಯ ಸ್ಥಾನವನ್ನಷ್ಟೇ ನಿಗದಿಪಡಿಸಿಕೊಂಡಿರಬೇಕು.

ಜತೆಗಿರಲಿದೆ ನಮ್ಮೂರಿನ ಖಾರ

ಟ್ರಾವೆಲ್‌ ಬ್ಯಾಗ್‌ನಲ್ಲಿ ನಮ್ಮೂರಿನ ಖಾರ ಡಬ್ಬವನ್ನು ಜತೆಗಿರಿಸಿಕೊಳ್ಳುತ್ತೇನೆ. ಖಾರ ಅಂದರೆ ನಾರ್ತ್‌ ಕರ್ನಾಟಕದ ಚಟ್ನಿಪುಡಿಗಳು. ಪ್ರವಾಸದಲ್ಲಿ ಆಹಾರ ರುಚಿಸಿಲ್ಲವೆಂದರೆ ಬರಿಯ ಅನ್ನವನ್ನಷ್ಟೇ ಕೇಳಿ ಪಡೆದು ಚಟ್ನಿಯ ಜತೆ ತಿನ್ನುನೆ. ಅಲ್ಲದೆ ಒಂದು ಡೈರಿ ಹಾಗೂ ಯಾವುದಾದರೂ ಒಬ್ಬ ಲೇಖಕನ ಒಂದು ಕೃತಿಯನ್ನೂ ಜತೆಗಿರಿಸಿಕೊಳ್ಳುವುದು ರೂಢಿ.

ಕಯಾಕಿಂಗ್‌ ನನಗಿಷ್ಟ

ನನಗೆ ಸಮುದ್ರ, ನೀರಿರುವ ಪ್ರದೇಶಗಳೆಂದರೆ ಬಹಳ ಇಷ್ಟ. ಒಂದಿಡೀ ದಿನವನ್ನು ಅಲ್ಲಿ ಕಳೆಯುವುದಾದರೂ ನನಗೆ ಸಮಸ್ಯೆಯಿಲ್ಲ.ಅದರಲ್ಲೂ ಸ್ಪೀಡ್‌ ಬೋಟ್‌, ಜೆಟ್‌ ಸ್ಕೀ ರೈಡ್‌, ಕಯಾಕಿಂಗ್‌ಗಳನ್ನೂ ಮಾಡುತ್ತೇನೆ. ಉಡುಪಿಯಲ್ಲಿ ಕಯಾಕಿಂಗ್‌ ಬೇಸಿಕ್‌ ಕ್ಯಾಂಪ್‌ನಲ್ಲಿ ಪಾಲ್ಗೊಂಡಿದ್ದೆ. ಒಮ್ಮೆಯಷ್ಟೇ ಸ್ಟಾಂಡಿಂಗ್‌ ಬೋರ್ಡ್‌ ಕಯಾಕಿಂಗ್‌ ಪ್ರಯತ್ನಿಸಿದ್ದೆ.

ನಾರ್ವೆಯ ನಾರ್ದರ್ನ್ ಲೈಟ್ಸ್‌ ನೋಡುವಾಸೆ

ಎಲ್ಲರಂತೆ ಅಮೆರಿಕಗೆ ಹೋಗುವಾಸೆ ನನಗಿಲ್ಲ. ಡ್ರೀಮ್‌ ಡೆಸ್ಟಿನೇಷನ್‌ ಯಾವುದು ಎಂದು ಯಾರೇ ಕೇಳಿದರೂ ನಾರ್ವೆಯ ನಾರ್ದರ್ನ್ ಲೈಟ್ಸ್‌ ನೋಡುವಾಸೆ ಎಂದೇ ಉತ್ತರಿಸುತ್ತೇನೆ. ಈಗಾಗಲೇ ಟ್ರಾವೆಲ್‌ ಕಾಸ್ಟ್‌, ಸ್ಟೇ ಬಗೆಗೂ ವಿಚಾರಿಸಿಕೊಂಡಿದ್ದೇನೆ. ಅಷ್ಟೇನೂ ದುಬಾರಿಯಲ್ಲ ಅನಿಸಿದೆ. ರೌಂಡ್ ಟ್ರಿಪ್‌ 90 ಸಾವಿರದೊಳಗೆ ಸಿಗುತ್ತದೆ. ಈ ವರ್ಷವಲ್ಲದೇ ಹೋದರೆ ಬರುವ ವರ್ಷ ಅಲ್ಲಿಗೆ ಭೇಟಿ ನೀಡುತ್ತೇನೆ. ಅಲ್ಲದೆ ಥೈಲ್ಯಾಂಡ್‌ ಹಾಗೂ ರಷ್ಯಾಕ್ಕೂ ಹೋಗಬೇಕೆಂದಿದೆ. ಅಲ್ಲಿ ಸ್ಕೈ ಡೈವಿಂಗ್‌ ಇನ್ನಿತರ ಅಡ್ವೆಂಚರ್‌ ಗೇಮ್ಸ್‌ ಪ್ರಯತ್ನಿಸಬೇಕೆಂಬುದು ನನ್ನ ಮಹದಾಸೆ.