ಸಂದರ್ಶನ
-ದಿನೇಶ್‌ ಆರ್‌ ನಾಯ್ಕ್‌ , ಪ್ರಾಂಶುಪಾಲರು ದೇಶಪಾಂಡೆ ಖಾಸಗಿ ಐಟಿಐ ಕಾಲೇಜು

ದೇಶಪಾಂಡೆ ಐಟಿಐ ಕಾಲೇಜು ಆರಂಭವಾಗಲು ಕಾರಣವೇನು?

ಕಳೆದ ಹತ್ತು ವರ್ಷಗಳಿಂದ ಅಂದರೆ 2016ರಿಂದ ಪ್ರಾಂಶುಪಾಲನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದೇಶಪಾಂಡೆ ಐಟಿಐ ಕಾಲೇಜು ರೂಪುಗೊಂಡಿದ್ದು ನಗರ ಪ್ರದೇಶದ ಜನರಿಗೆ ಸಿಗುತ್ತಿರುವಂತೆ ಗ್ರಾಮೀಣ ಭಾಗದ ಜನರಿಗೂ ತರಬೇತಿ ಸಿಗಬೇಕು, ಉತ್ತಮ ಉದ್ಯೋಗ ಅವಕಾಶಗಳು ಸೃಷ್ಟಿಯಾಗಬೇಕು ಮತ್ತು ಇದರಿಂದ ಅವರ ಕೌಟುಂಬಿಕ ಸ್ಥಿತಿಗತಿ ಸುಧಾರಿಸಬೇಕು ಎನ್ನುವ ಉದ್ದೇಶದಿಂದಾಗಿ.

ಇದನ್ನೂ ಓದಿ: ವಿಆರ್‌ಡಿಎಂ ಟ್ರಸ್ಟ್‌ನ ಆಡಳಿತದಲ್ಲಿ ಪ್ರಕಾಶ ಪ್ರಭು ಛಾಪು

ಈ ಕಾಲೇಜಿನಲ್ಲಿ ಇರುವ ಟ್ರೇಡ್‌ಗಳ ಬಗ್ಗೆ ಹೇಳಬಹುದಾ?

ನಮ್ಮಲ್ಲಿ ಒಟ್ಟು 9 ಟ್ರೇಡ್‌ಗಳಿವೆ. ಅವುಗಳಲ್ಲಿ ಎಲೆಕ್ಟ್ರಿಕಲ್, ಫಿಟ್ಟರ್‌, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್, ಟೆಕ್ನಿಷಿಯನ್‌, ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌ ಇವು ಎರಡು ವರ್ಷದ ಟ್ರೇಡ್‌ಗಳು. ವೆಲ್ಡರ್‌, ಸೋಲಾರ್‌ ಟೆಕ್ನಿಷಿಯನ್‌, ಮೆಕ್ಯಾನಿಕ್‌ ಆಟೋ ಬಾಡಿ ರಿಪೇರ್‌, ಮೆಕ್ಯಾನಿಕ್‌ ಆಟೋ ಬಾಡಿ ಪೇಂಟಿಂಗ್‌, ವಿದ್ಯಾರ್ಥಿನಿಯರಿಗಾಗಿ ಸೀಮಿತವಾಗಿರಿಸಲಾದ ಡ್ರೆಸ್‌ ಮೇಕಿಂಗ್‌ ಕೋರ್ಸ್‌ಗಳು ಒಂದು ವರ್ಷದ ಟ್ರೇಡ್‌ಗಳು. ಒಟ್ಟು 425ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಸಂಸ್ಥೆ ಐಎಸ್‌ಒ 21001 ಗುಣಮಟ್ಟದ ಪ್ರಮಾಣ ಪತ್ರ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಗ್ರೇಡ್‌ ಹೊಂದಿರುವ ಸಂಸ್ಥೆ.

Untitled design (70)

ತರಬೇತಿ ಹೇಗಿರುತ್ತದೆ ಮತ್ತು ಪ್ಲೇಸ್‌ಮೆಂಟ್‌ ವಿಧಾನ ಹೇಗಿರುತ್ತದೆ?

ನಮ್ಮ ಸಂಸ್ಥೆ ವಿವಿಧ ಕೈಗಾರಿಕಾ ಕಂಪನಿಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಪ್ರತಿವರ್ಷ ಸುಮಾರು 15ಕ್ಕೂ ಹೆಚ್ಚು ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಗಳು ಪ್ಲೇಸ್‌ಮೆಂಟ್‌ ಡ್ರೈವ್‌ಗಾಗಿ ನಮ್ಮ ಸಂಸ್ಥೆಗೆ ಭೇಟಿ ನೀಡುತ್ತವೆ. ಈವರೆಗಿನ ದಾಖಲೆಗಳನ್ನು ತೆಗೆದು ನೋಡಿದರೂ ನಮ್ಮಲ್ಲಿ ನೂರು ಪ್ರತಿಶತ ಪ್ಲೇಸ್‌ಮೆಂಟ್‌ ಆಗಿದೆ. ನಮ್ಮಲ್ಲಿನ ತರಬೇತುದಾರರನ್ನು ಟ್ರೈನ್‌ ದ ಟ್ರೈನರ್‌ ಎನ್ನುವ ಕಾರ್ಯಕ್ರಮದ ಮೂಲಕ ಕಂಪನಿಗಳು ಕೈಗಾರಿಕೆಗಳಲ್ಲಿ ಆಗಿರುವ ನೂತನ ಬದಲಾವಣೆ, ಬೆಳವಣಿಗೆಗಳ ಕುರಿತು ಅಪ್‌ಡೇಟ್‌ ಮಾಡುತ್ತಲೇ ಇರುತ್ತವೆ.

ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಸಿಗುತ್ತಿರುವ ಅನುಕೂಲಗಳೇನು?

ನಮ್ಮ ವಿದ್ಯಾರ್ಥಿಗಳಿಗೆ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಸಿಎಸ್‌ಆರ್‌ ಮೂಲಕ ಸಿಗುತ್ತಿರುವ ಶೀಷ್ಯ ವೇತನವನ್ನೂ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲಾಗುತ್ತಿದೆ. ಈವರೆಗೆ 4000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಟಾಫ್‌ಗಳ ಕುರಿತು ಹೇಳುವುದಾದರೆ?

ಇಲ್ಲಿ ಒಟ್ಟು 26 ಜನ ತರಬೇತುದಾರರು ಇದ್ದಾರೆ. ಅವರೆಲ್ಲರೂ ದಶಕಗಳ ಕಾಲ ಇಂಡಸ್ಟ್ರಿಯಲ್ಲಿ ಕಾರ್ಯ ನಿರ್ವಹಿಸಿದವರು. ಹೊಸತನ್ನು ಕಲಿಯುವ ಆಸಕ್ತಿ ಅವರಲ್ಲಿ ಸದಾ ಇರತ್ತದೆ. ಹಾಗಾಗಿ ಕೈಗಾರಿಕೆಗಳಲ್ಲಿ ನೂತನ ಬೆಳವಣಿಗೆಗಳನ್ನು ಅರಿತು ಅವುಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಾರೆ. ಜತೆಗೆ ಖುದ್ದು ಕಂಪನಿಗಳೇ ಟ್ರೈನ್‌ ದ ಟ್ರೈನರ್‌ ಕಾರ್ಯಕ್ರಮದ ಮೂಲಕ ಅಪ್‌ಡೇಟ್‌ ಮಾಡುತ್ತಲೇ ಇರುವುದರಿಂದ ಹೊಸತನ್ನು ಕಲಿಯಲು ಇದು ಒಂದು ಉತ್ತಮ ಅವಕಾಶ.

ಸಂಸ್ಥೆಯ ಆರಂಭದ ದಿನಗಳು ಹೇಗಿದ್ದವು? ಈಗಿನ ಬೆಳವಣಿಗೆ?

ಆರಂಭದಲ್ಲಿ ನಮ್ಮಲ್ಲಿ ಆರು ಟ್ರೇಡ್‌ಗಳು ಮಾತ್ರ ಇದ್ದವು. ಆಗ ವಿದ್ಯಾ‌ರ್ಥಿಗಳ ಸಂಖ್ಯೆಯೂ ಕಮ್ಮಿ ಇತ್ತು. ನಂತರ ಹೊಸ ಕೋರ್ಸ್‌ಗಳನ್ನು ಮತ್ತು ಅಪ್‌ಡೇಟೆಡ್‌ ಕೋರ್ಸ್‌ಗಳನ್ನು ಪರಿಚಯಿಸಿದ ನಂತರ ಕಾಲೇಜಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

ಕಾಲೇಜಿನ ಪ್ರಚಾರದ ಕುರಿತು ಎಂದಾದರೂ ಯೋಚಿಸಿದ್ದೀರಾ?

ನಮ್ಮಲ್ಲಿ ಅಡ್ಮಿಷನ್‌ ಆಗುತ್ತಿರುವ ಎಲ್ಲರನ್ನು ನಾವು ಮಾತನಾಡಿಸಿದ್ದೇವೆ. ಅವರೆಲ್ಲರೂ ಹೇಳುವುದು ಒಂದೇ ಮಾತು. ಅವರ ಸುತ್ತಲಿನ ಯಾರೋ ಒಬ್ಬರು ಈ ಸಂಸ್ಥೆಯಲ್ಲಿ ತರಬೇತಿ ಪಡೆದವರು. ಅವರನ್ನು ಕೇಳಿ ಇಲ್ಲಿ ಸಿಗುತ್ತಿರುವ ಉತ್ಕೃಷ್ಟ ತರಬೇತಿ ಕುರಿತು ಮಾಹಿತಿ ಪಡೆದು ಕಾಲೇಜಿಗೆ ಅಡ್ಮಿಷನ್‌ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಮ್ಮ ಅಲುಮ್ನಿ ವಿದ್ಯಾರ್ಥಿಗಳೇ ನಮ್ಮ ಅಂಬಾಸಿಡರ್‌ಗಳು.

Untitled design (69)

ವಿದ್ಯಾರ್ಥಿಗಳಿಗೆ ಭಾಷಾ ತೊಂದರೆಗಳು ಇದ್ದರೆ ಏನು ಮಾಡುತ್ತೀರಿ?

ನಮ್ಮಲ್ಲಿನ ಪಠ್ಯಗಳು ಇಂಗ್ಲಿಷ್‌ ಆಗಿರಬಹುದು. ಆದರೆ, ತರಬೇತಿ ನೀಡುವಾಗ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳನ್ನು ಬಳಕೆ ಮಾಡುತ್ತೇವೆ. ಎಂಪ್ಲಾಯಬಿಲಿಟಿ ಸ್ಕಿಲ್ಸ್‌ ಎಂಬ ವಿಷಯದಡಿ ಸಂವಹನದ ಕುರಿತಾಗಿಯೇ ತರಬೇತಿ ನೀಡಲು ಶಿಕ್ಷಕರನ್ನು ನೇಮಿಸಲಾಗಿದೆ. ಹಾಗಾಗಿ ಆರಂಭದ ದಿನಗಳಲ್ಲಿ ಭಾಷಾ ವಿಷಯದಲ್ಲಿ ಯಾವ ವಿದ್ಯಾರ್ಥಿಗಳಿಗೆ ತೊಡಕುಗಳಿದ್ದರೂ ದಿನಕಳೆದಂತೆ ಅವರು ಉತ್ತಮ ಸಂವಹನ ಜತೆಗೆ ಕೌಶಲ್ಯವನ್ನು ಕಲಿಯುತ್ತಾರೆ.

ಸಂಸ್ಥೆಯ ಆಡಳಿತದ ಕುರಿತು ಹೇಳುವುದಾದರೆ?

ಟೀಂ ವರ್ಕ್‌ ನಮ್ಮಲ್ಲಿನ ವಿಶೇಷ. ಸಂಸ್ಥೆಯ ಆಡಳಿತ ವರ್ಗವೂ ನಮಗೆ ಅಗತ್ಯ ಸ್ವಾತಂತ್ರ್ಯವನ್ನು ನೀಡಿದೆ. ಯಾವುದೇ ಸಮಯದಲ್ಲೂ ಒತ್ತಡಗಳು ನಮ್ಮಲ್ಲಿರುವುದಿಲ್ಲ. ಅಗತ್ಯವೆನಿಸಿದಾಗ ಒಂದಷ್ಟು ಸಲಹೆಗಳನ್ನು ಮಾತ್ರ ನಮಗೆ ಸಂಸ್ಥೆ ನೀಡುತ್ತದೆ. ಉಳಿದಂತೆ ಸದಾ ಸಹಾಕಾರದಿಂದಲೇ ಇರುವುದರಿಂದ ತರಬೇತಿಯಲ್ಲಿ ಹೊಸತನ್ನು ಹುಡುಕಲು, ಮತ್ತಷ್ಟು ಉತ್ತಮವಾಗಿ ತರಬೇತಿ ನೀಡುವತ್ತ ಒತ್ತು ನೀಡಲು ಸಹಾಯಕವಾಗುತ್ತಿದೆ.