ಎಂತ ಗೊತ್ತುಂಟಾ...?
ಮುಂಬಯಿಯಲ್ಲಿದ್ದರೂ ಅಥವಾ ಮನಾಲಿ ಸುತ್ತಾಡಿದ್ದರೂ ನನಗೆ ಉಡುಪಿಗೆ ಬಂದಾಗ ಸಿಗುವಷ್ಟು ಖುಷಿ ಬೇರೆಲ್ಲೂ ಸಿಕ್ಕಿಲ್ಲ. ಉಡುಪಿ ಮತ್ತು ಪಡುಬಿದ್ರಿಯ ಎಲ್ಲ ಜಾಗಗಳೂ ನನಗೆ ಇಷ್ಟವೆನಿಸುತ್ತದೆ. ಉಡುಪಿಯ ನನ್ನ ಮನೆ ಒಂದು ರೀತಿ ಕಾಡಿನ ನಡುವೆಯೇ ಇರುವಂತಿದೆ. ಕಾಡು ಮತ್ತು ಪ್ರಾಣಿಗಳು ಅಂದರೆ ನನಗೆ ಆಪ್ತವೆನಿಸುತ್ತದೆ. ಟ್ರೆಕ್ಕಿಂಗ್ ಮಾಡುವ ಹವ್ಯಾಸ ಕೂಡ ನನಗಿದೆ.
- ಶಶಿಕರ ಪಾತೂರು
ಉಡುಪಿಯಲ್ಲಿ ವ್ಲಾಗ್ ಮಾಡಿಕೊಂಡಿದ್ದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ನಲ್ಲಿ ರನ್ನರ್ ಆದ ಮೇಲೆ ಎಲ್ಲೆಡೆ ಜನಪ್ರಿಯತೆ ಪಡೆದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
ನಿಮ್ಮ ಬಾಲ್ಯದ ಪ್ರವಾಸದ ನೆನಪುಗಳನ್ನು ಹಂಚಿಕೊಳ್ಳುತ್ತೀರಾ?
ಬಾಲ್ಯದಲ್ಲಿ ಪ್ರವಾಸ ಹೋಗುವಷ್ಟು ಅನುಕೂಲ ನಮಗೆ ಇರಲಿಲ್ಲ. ಮನೆಯ ಕಷ್ಟ ನನಗೂ ಗೊತ್ತಿದ್ದ ಕಾರಣ ಶಾಲಾ ಪ್ರವಾಸಕ್ಕೂ ಮನೆಯಲ್ಲಿ ದುಡ್ಡು ಕೇಳಲು ನನಗೇನೇ ಅಂಜಿಕೆಯಾಗುತ್ತಿತ್ತು. ದೊಡ್ಡವಳಾದಾಗ ನಾನೇ ಹೋಗ್ತೇನೆ ಎನ್ನುವ ಕನಸಲ್ಲೇ ಸಮಾಧಾನ ತಂದುಕೊಳ್ಳುತ್ತಿದ್ದೆ.
ಇದನ್ನೂ ಓದಿ: ಅದಿತಿ ಪ್ರಭುದೇವ ಟ್ರಾವೆಲ್ ಲೈಫ್
ನೀವಾಗಿ ಪ್ರವಾಸ ಹೋಗಲು ಸಾಧ್ಯವಾಗಿದ್ದು ಯಾವಾಗ?
ತೀರ ಇತ್ತೀಚೆಗೆ. ಮೂರು ವರ್ಷಗಳ ಹಿಂದೆ ನಾನಾಗಿಯೇ ಪ್ರವಾಸ ಹೋಗಲು ಶುರು ಮಾಡಿದೆ. ಅದರಲ್ಲೂ ಮೊದಲ ಬಾರಿ ಹೋಗಿದ್ದು ಅಂದರೆ ಮುಂಬಯಿಯ ನನ್ನ ಮನೆಯಿಂದ ಬೀಚ್ ಗೆ ಹೋದಂಥ ಪ್ರವಾಸ. ಸೈಕಲ್ ಏರಿ ಒಬ್ಬಳೇ ವಿಡಿಯೋ ಮಾಡಿಕೊಂಡು ಹೋಗಿದ್ದೆ. ಅದೇ ನನ್ನ ಮೊದಲ ಸೋಲೋ ಟ್ರಿಪ್ ಕೂಡ ಹೌದು.

ಆಮೇಲೆ ನೀವು ಸಾಕಷ್ಟು ಪ್ರವಾಸಗಳನ್ನು ನಿಮ್ಮ ವ್ಲಾಗ್ ಮೂಲಕ ತೋರಿಸಿದ್ದೀರಿ. ಅವುಗಳಲ್ಲಿ ಮರೆಯಲಾಗದ್ದು ಅಂದರೆ ಯಾವುದು?
ಅದು ತಿರುಪತಿಗೆ ಹೋದಾಗ ಆದಂಥ ಅನುಭವ. ನನಗೆ ಒಮ್ಮೆ ತಿರುಪತಿಗೆ ಹೋಗಲೇಬೇಕು ಎನ್ನುವ ಮನಸಾಯಿತು. ಏನೂ ಬುಕಿಂಗ್ ಮಾಡಿರಲಿಲ್ಲ. ತಿರುಪತಿ ತಲುಪಿದೆ. ಒಬ್ಬಳೇ ಆಗಿದ್ದ ಕಾರಣ ಅಲ್ಲಿ ರೂಮ್ ಕೂಡ ಸಿಗಲಿಲ್ಲ.
ಹೇಗೋ ಒಂದು ಲಾಕರ್ ದೊರಕಿತು. ಅಲ್ಲಿ ಲಗೇಜ್ ಇಟ್ಟೆ.
ಬಳಿಕ ಹೊರಗೆ ಕುಳಿತು ಕಣ್ಣೀರಾಗಿದ್ದ ನನಗೆ
ಅಲ್ಲೇ ಸಿಕ್ಕ ಆಂಧ್ರದ ದಂಪತಿ ಸಹಾಯಕ್ಕೆ ಬಂದರು.
ಅವರು ನನ್ನನ್ನು ತಮ್ಮದೇ ಕುಟುಂಬದ ಹುಡುಗಿ ಎಂದು ಪರಿಚಯಿಸಿ ದೇವಸ್ಥಾನದ ರೂಮ್ ಕೊಡಿಸಿ, ಅಲ್ಲಿಯವರೆಗೂ ಬಿಟ್ಟು ಹೋದರು. ನಾನು ಸದಾ ದೇವರ ಧ್ಯಾನ ಮಾಡುವಂಥ ಭಕ್ತೆ ಏನಲ್ಲ. ಆದರೆ ಯಾವಾಗ ನೊಂದು ಬೇಡುತ್ತೇನೆಯೋ ಆಗೆಲ್ಲ ದೇವರು ನನ್ನ ಕಷ್ಟಕ್ಕೆ ನೆರವಾದ ಅನುಭವ ಎದುರಾಗಿದೆ.
ತಿರುಪತಿ ಕ್ಷೇತ್ರ ದರ್ಶನದ ಅನುಭವ ಹೇಗಿತ್ತು?
ನನಗೆ ಮೆಟ್ಟಿಲು ಹತ್ತಿಯೇ ಕ್ಷೇತ್ರ ದರ್ಶನ ಮಾಡುವ ಬಯಕೆ ಇತ್ತು. ಹಾಗೆ ಪಾದಯಾತ್ರೆ ಮಾಡುವವರಿಗೆ ಕ್ಯೂ ನಿಲ್ಲದೆ ನೇರವಾಗಿ ದೇವರ ದರ್ಶನ ಮಾಡುವ ಅವಕಾಶ ಇರುತ್ತದೆ. ಅದಕ್ಕಾಗಿ ಮೊದಲೇ ಕೂಪನ್ ಪಡೆದುಕೊಂಡಿರಬೇಕಿತ್ತು. ಆ ವಿಚಾರ ಗೊತ್ತಿಲ್ಲದ ನಾನು ನಡೆದೇ ಹೋದರೂ ಮತ್ತೆ ಅಲ್ಲಿ ಸಾಮಾನ್ಯರ ಜತೆ ದಿನಗಟ್ಟಲೆ ಸಾಲು ನಿಲ್ಲಬೇಕಾದ ಪರಿಸ್ಥಿತಿ ಎದುರಿಸಬೇಕಾಯಿತು. ಊಟಕ್ಕೆ ಹೋದಾಗಲೂ ಅಷ್ಟೇ. ತುಂಬಾ ರಶ್ ಇದ್ದ ಕಾರಣ ನನಗೆ ತಟ್ಟೆಯೇ ಸಿಕ್ಕಿರಲಿಲ್ಲ. ಹಾಗೆ ಒಂದೂವರೆ ದಿನದಿಂದ ಉಪವಾಸ ಇದ್ದ ನನ್ನ ಮುಂದೆ ವ್ಯಕ್ತಿಯೊಬ್ಬರು ಅನ್ನ ತುಂಬಿದ ತಟ್ಟೆ ಚಾಚಿದರು. ನಾನು ಬೇಡ ಎಂದರೂ ನಾವು ಒಂದು ತಟ್ಟೆ ಅನ್ನ ಹೆಚ್ಚುವರಿ ತೆಗೆದುಕೊಂಡಿದ್ದೇವೆ ದಯವಿಟ್ಟು ತಗೊಳ್ಳಿ ಎಂದು ಅವರೇ ಒತ್ತಾಯಿಸಿದರು. ನಾನು ಇದನ್ನೆಲ್ಲ ದೇವರ ಕೃಪೆ ಎಂದೇ ನಂಬುತ್ತೇನೆ.

ನೀವು ಪ್ರವಾಸ ಹೋಗಿ ತುಂಬಾನೇ ಖುಷಿ ಪಟ್ಟಂಥ ಜಾಗ ಯಾವುದು?
ಮುಂಬಯಿಯಲ್ಲಿದ್ದರೂ ಅಥವಾ ಮನಾಲಿ ಸುತ್ತಾಡಿದ್ದರೂ ನನಗೆ ಉಡುಪಿಗೆ ಬಂದಾಗ ಸಿಗುವಷ್ಟು ಖುಷಿ ಬೇರೆಲ್ಲೂ ಸಿಕ್ಕಿಲ್ಲ. ಉಡುಪಿ ಮತ್ತು ಪಡುಬಿದ್ರಿಯ ಎಲ್ಲ ಜಾಗಗಳೂ ನನಗೆ ಇಷ್ಟವೆನಿಸುತ್ತದೆ. ಉಡುಪಿಯ ನನ್ನ ಮನೆ ಒಂದು ರೀತಿ ಕಾಡಿನ ನಡುವೆಯೇ ಇರುವಂತಿದೆ. ಕಾಡು ಮತ್ತು ಪ್ರಾಣಿಗಳು ಅಂದರೆ ನನಗೆ ಆಪ್ತವೆನಿಸುತ್ತದೆ. ಟ್ರೆಕ್ಕಿಂಗ್ ಮಾಡುವ ಹವ್ಯಾಸ ಕೂಡ ನನಗಿದೆ.
ನಿಮ್ಮ ಪ್ರವಾಸಗಳು ನಿಮಗೇನು ಕಲಿಸಿದೆ?
ನಾನು ಸಾಮಾನ್ಯವಾಗಿ ಒಬ್ಬಳೇ ಪ್ರವಾಸ ಮಾಡುತ್ತಿರುತ್ತೇನೆ. ಹಾಗೆ ಹೊರಡುವಾಗ ನನ್ನೊಂದಿಗೆ ನಾನೇ ಕಳೆಯುವ ಸಮಯದಿಂದಲೇ ಹೊಸ ಅನುಭವಗಳು ಶುರುವಾಗುತ್ತದೆ. ನನಗೆ ಹೋಗುವ ಜಾಗ, ಸೇರುವ ಗುರಿ ಯಾವುದು ಎನ್ನುವುದು ಯಾವತ್ತೂ ಮುಖ್ಯ ಅನಿಸಿಲ್ಲ. ಆದರೆ ಹೋಗುವ ದಾರಿಯಲ್ಲಿ ಸಿಗುವ ಪ್ರತಿಯೊಬ್ಬ ಜನರ ಭೇಟಿ, ಅವರ ಅನುಭವದ ಮಾತುಗಳು ನನಗೆ ತುಂಬಾನೇ ಕಲಿಸಿವೆ. ಸಾಮಾನ್ಯವಾಗಿ ರೈಲಿನ ಜನರಲ್ ಬೋಗಿಯಲ್ಲೇ ಪ್ರಯಾಣಿಸುತ್ತೇನೆ. ಅಲ್ಲಿಯೇ ಸಾಕಷ್ಟು ಮಂದಿಯ ಅನುಭವಗಳಿಗೆ ಕಿವಿಯಾಗುತ್ತೇನೆ.
ನಿಮ್ಮ ಪ್ರಕಾರ ಒಂದು ಪ್ರವಾಸಕ್ಕೆ ಬೇಕಾದ ತಯಾರಿ ಏನು?
ನಾನು ಯಾವತ್ತೂ ಪ್ರವಾಸಕ್ಕೆ ಅಂತ ದೊಡ್ಡ ಮಟ್ಟಿನ ಸಿದ್ಧತೆ ಮಾಡುವುದಿಲ್ಲ. ಒಂದಷ್ಟು ಬಟ್ಟೆಗಳನ್ನು ಬ್ಯಾಗ್‌ಗೆ ತುಂಬಿಕೊಂಡರೆ ಅಲ್ಲಿಗೆ ತಯಾರಿ ಮುಗಿದಂತೆ! ನನ್ನ ಪ್ರಕಾರ ಸಕಲ ತಯಾರಿ ಮಾಡಿಕೊಂಡರೆ ಅದು ಪ್ರವಾಸವೇ ಅಲ್ಲ. ನಾವು ಜಗತ್ತನ್ನು ಇದ್ದ ಹಾಗೆ ಸ್ವೀಕರಿಸಲು ನೋಡಬೇಕು. ನನ್ನ ಪ್ರಕಾರ ಇದು ಶಾಲೆಯಿಂದಲೇ ಆರಂಭವಾಗಬೇಕು. ಉದಾಹರಣೆಗೆ ನಾನೇ ಶಾಲಾ ಶಿಕ್ಷಕಿಯಾಗಿದ್ದರೆ ಯಾವತ್ತೂ ತರಗತಿ ಒಳಗೆ ಪಾಠ ಮಾಡುತ್ತಿರಲಿಲ್ಲ. ಅತಿ ಹೆಚ್ಚು ಬಾರಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದೆ. ಅರಮನೆ ಬಗ್ಗೆ ಪಾಠ ಇದ್ದರೆ ಅಲ್ಲಿಗೇನೇ ಕರೆದೊಯ್ದು ವಿವರಿಸುತ್ತಿದ್ದೆ. ಯಾವತ್ತಿದ್ದರೂ ಜೀವನಾನುಭವವೇ ಬದುಕಿಗೆ ಮುಖ್ಯವಾಗುತ್ತದೆ.

ಪ್ರವಾಸ ಪ್ರಿಯರಿಗೆ ನೀವು ಸೂಚಿಸುವ ಜಾಗ ಯಾವುದು?
ಅವರವರ ಆಯ್ಕೆಯ ಜಾಗಕ್ಕೆ ಹೋಗಲಿ. ನಾನು ಯಾವುದೇ ಸಲಹೆ ನೀಡುವುದಿಲ್ಲ. ವೈಯಕ್ತಿಕವಾಗಿ ನನಗೆ ಬೀಚ್ ಅಂದರೆ ಇಷ್ಟ. ದಡದಲ್ಲಿ ಕುಳಿತು ಸಮುದ್ರ ನೋಡುವುದು, ಬೆಟ್ಟಗಳಿಗೆ ಹೋಗಿ ಬೃಹತ್ ಮರಗಳನ್ನು ಮುಟ್ಟುವುದು ಎಲ್ಲವೂ ನನಗೆ ನೀಡುವ ಖುಷಿ, ಅನುಭವ ಹಂಚಿಕೊಳ್ಳಲಾಗದು. ಅದು ಮತ್ತೊಬ್ಬರಿಗೆ ಸಿಗಬೇಕು ಅಂತ ಕೂಡ ಇಲ್ಲ. ನೀವು ಇದೇ ಜಾಗಕ್ಕೆ ಹೋಗಿ ಅಂತ ಹೇಳುವುದಕ್ಕಿಂತಲೂ ಅವಕಾಶ ಸಿಕ್ಕಾಗೆಲ್ಲ ಸುತ್ತಾಡಿ ಎಂದು ಹೇಳಲು ಬಯಸುತ್ತೇನೆ. ಯಾಕೆಂದರೆ ಮನೆಯಿಂದ ಹೊರಗೆ ಬಂದು ಜಗತ್ತಿನೊಡನೆ ತೆರೆಯುವುದೇ ಪ್ರವಾಸ. ನೂರು ಜನರೊಡನೆ ಬೆರೆಯುವುದೇ ಪ್ರವಾಸ.