ನಿಮ್ಮ ಪ್ರವಾಸದ ದೃಷ್ಟಿಕೋನ (Travel Perspective) ಹೇಗಿದೆ? ನೀವು ಹೆಚ್ಚು ಪ್ರವಾಸ ಮಾಡಲು ಇಷ್ಟಪಡುತ್ತೀರಾ?

-ನಿಜ ಹೇಳಬೇಕೆಂದರೆ, ನಾನು ಅತಿಯಾಗಿ ಪ್ರವಾಸ ಮಾಡುವ ವ್ಯಕ್ತಿಯಲ್ಲ. ನನಗೆ ಮನೆಯಲ್ಲೇ ಸಮಯ ಕಳೆಯುವುದು ಹೆಚ್ಚು ಇಷ್ಟ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಜಿಮ್ ಮತ್ತು ವಿಶ್ರಾಂತಿ, ಹೀಗೆ ಮನೆಯ ವಾತಾವರಣವೇ ನನಗೆ ಹೆಚ್ಚು ನೆಮ್ಮದಿ ನೀಡುತ್ತದೆ. ಶಾಲಾ-ಕಾಲೇಜು ದಿನಗಳಲ್ಲೂ ಪಾಠದ ಕಡೆಗೆ ಹೆಚ್ಚು ಗಮನವಿದ್ದ ಕಾರಣ ಹಾಗೂ ತರಗತಿಗಳು ತಪ್ಪಿಹೋಗುತ್ತವೆ ಎಂಬ ಕಾಳಜಿಯಿಂದ, ನಾನು ಹೆಚ್ಚು ಪ್ರವಾಸಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.

ನಿಮ್ಮ ಬಕೆಟ್‌ ಲಿಸ್ಟ್‌ ಅಲ್ಲಿ ಯಾವ ಸ್ಥಳಗಳಿವೆ?

-ನಾನು ಹೆಚ್ಚು ಪ್ರವಾಸ ಮಾಡದಿದ್ದರೂ, ನೋಡಬೇಕೆಂಬ ಆಸೆ ಇರುವ ಸ್ಥಳಗಳ ದೊಡ್ಡ ಪಟ್ಟಿಯೇ ಇದೆ! ಭಾರತದಲ್ಲಿ ಕಾಶ್ಮೀರ ಮತ್ತು ರಾಜಸ್ಥಾನವನ್ನು ನೋಡುವ ಹಂಬಲವಿದೆ. ವಿದೇಶ ಪ್ರವಾಸದಲ್ಲಿ ಪ್ಯಾರಿಸ್‌ನ ಐಫೆಲ್ ಟವರ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡಬೇಕೆಂಬುದು ನನ್ನ ಆಸೆ.

ಇದನ್ನೂ ಓದಿ: ಕಾವ್ಯಾ ಗೌಡ ಸಂದರ್ಶನ

ಶೂಟಿಂಗ್ ನಿಮಿತ್ತ ನೀವು ಭೇಟಿ ನೀಡಿದ ಸ್ಥಳಗಳ ಬಗ್ಗೆ ಹೇಳಿ.

-ಶೂಟಿಂಗ್ ಕಾರಣದಿಂದ ಕೆಲವು ಸುಂದರ ಸ್ಥಳಗಳನ್ನು ನೋಡುವ ಅವಕಾಶ ಸಿಕ್ಕಿದೆ. ಒಮ್ಮೆ ಗೋವಾಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಕಡಲತೀರಗಳು ಹಾಗೂ ಶಾಪಿಂಗ್ ಕೇಂದ್ರಗಳನ್ನು ನೋಡಿದೆ. ಇತ್ತೀಚೆಗೆ ತೆಲುಗು ಚಿತ್ರದ ಶೂಟಿಂಗ್‌ಗಾಗಿ ಮಚಲಿಪಟ್ಟಣಂನ ಬೀಚ್ ಬಳಿ ಹೋಗಿದ್ದೆವು. ನನ್ನ ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ (ಪ್ರಸ್ತುತ ನಾನು ಬೆಂಗಳೂರಿನಲ್ಲಿ ನೆಲೆಸಿದ್ದೇನೆ). ಇತ್ತೀಚೆಗೆ ಚಿಕ್ಕಮಗಳೂರಿನಿಂದ 40 ಕಿಲೋಮೀಟರ್ ದೂರದಲ್ಲಿರುವ ಒಂದು ಜಲಪಾತದ ಬಳಿ ಚಿತ್ರೀಕರಣ ಮಾಡಿದೆವು. ಹಸಿರಿನ ಹಿನ್ನೆಲೆಯಲ್ಲಿರುವ ಆ ಜಾಗವು ನನ್ನ ಮನಸಿಗೆ ಬಹಳ ಮುದನೀಡಿತು. ಅದೇ ಊರಿನವಳಾಗಿದ್ದರೂ ಆ ಜಾಗವನ್ನು ನಾನು ನೋಡಿರಲಿಲ್ಲ. ಬೃಂದಾವಿಹಾರಿ ಚಿತ್ರದ ಹಾಡೊಂದನ್ನು ಅಲ್ಲೇ ಚಿತ್ರೀಕರಣ ಮಾಡಿದ್ದೇವೆ.

Untitled design - 2026-10-30T114325.225

ಅವಕಾಶ ಸಿಕ್ಕರೆ, ಯಾವ ಸೆಲೆಬ್ರಿಟಿ ಜತೆ ಎಲ್ಲಿಗೆ ಹೋಗಲು ಇಷ್ಟಪಡುತ್ತೀರಿ?

-ಖಂಡಿತವಾಗಿಯೂ ಗಣೇಶ್ ಸರ್ ಅವರೊಂದಿಗೆ 'ಬೃಂದಾವನ'ಕ್ಕೆ ಹೋಗಲು ಇಷ್ಟಪಡುತ್ತೇನೆ! ಗಣೇಶ್ ಸರ್ ಅವರು ಶ್ರೀಕೃಷ್ಣನ ಪರಮ ಭಕ್ತರು. ಅವರ ಜತೆ ಪ್ರವಾಸ ಹೋದರೆ ಅವರು ನಮ್ಮನ್ನು ಬೇರೆಲ್ಲೂ ಕರೆದುಕೊಂಡು ಹೋಗದೆ, ಕೇವಲ ದೇವಸ್ಥಾನಗಳಿಗೇ ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಅವರೊಂದಿಗೆ ಬೃಂದಾವನಕ್ಕೆ ಹೋಗುವುದು ಸೂಕ್ತ.

ಪ್ರವಾಸದ ಸ್ಥಳಗಳನ್ನು ನಿಮ್ಮ ಮನಸ್ಥಿತಿಗೆ ಅನುಗುಣವಾಗಿ ಹೇಗೆ ಆಯ್ಕೆ ಮಾಡುತ್ತೀರಿ?

-ಪ್ರವಾಸದ ಸ್ಥಳದ ಆಯ್ಕೆಯು ಸಂಪೂರ್ಣವಾಗಿ ನನ್ನ ಆ ಕ್ಷಣದ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ನಾನು ಅತ್ಯಂತ ಶಾಂತವಾಗಿರಲು ಬಯಸಿದರೆ ಕಡಲತೀರಗಳಿಗೆ (Beaches) ಹೋಗಲು ಇಷ್ಟಪಡುತ್ತೇನೆ. ಹೆಚ್ಚು ಉತ್ಸಾಹದಲ್ಲಿದ್ದರೆ ಪರ್ವತಗಳು ಮತ್ತು ಟ್ರೆಕ್ಕಿಂಗ್‌ಗೆ ಹೋಗಲು ಬಯಸುತ್ತೇನೆ. ಜೀವನದಲ್ಲಿ ಏನಾದರೂ ಬೇಸರವೆನಿಸಿದಾಗ ಅಥವಾ ಮನಸ್ಸು ಗೊಂದಲದಲ್ಲಿದ್ದಾಗ, ನೇರವಾಗಿ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ. ಮುಂದಿನ ಚಿತ್ರ ಬಿಡುಗಡೆಯಾಗುವುದರೊಳಗೆ ಅಯೋಧ್ಯೆಗೆ ಭೇಟಿ ನೀಡಬೇಕೆಂಬುದು ನನ್ನ ಪ್ರಮುಖ ಗುರಿ.

Untitled design - 2026-10-30T114115.841

ನಿಮ್ಮ ಮುಂಬರುವ 'ಬೃಂದಾವಿಹಾರಿ' ಚಿತ್ರ ಮತ್ತು ಅದರಲ್ಲಿ ನಿಮ್ಮ ಪಾತ್ರದ ಬಗ್ಗೆ ವಿವರಿಸುವಿರಾ?

-'ಬೃಂದಾವಿಹಾರಿ' ಚಿತ್ರವು ನವೆಂಬರ್ 20ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು 'ರಾಧಾ'. ಪುರಾಣಗಳಲ್ಲಿ ಬೃಂದಾವನದ ರಾಧೆ ಯಾವ ರೀತಿ ಸದಾ ಚಟುವಟಿಕೆಯಿಂದ, ತುಂಟಾಟದಿಂದ ಎಲ್ಲರ ಮನಸನ್ನು ಕದಿಯುತ್ತಾಳೋ, ಅದೇ ಮಾದರಿಯ ಆಕರ್ಷಕ ಪಾತ್ರ ನನ್ನದಾಗಿದೆ.

ಚಿತ್ರರಂಗಕ್ಕೆ ನಿಮ್ಮ ಪ್ರವೇಶ ಹೇಗಾಯಿತು? ಇದು ನಿಮ್ಮ ಮೊದಲೇ ನಿರ್ಧರಿತ ಗುರಿಯಾಗಿತ್ತೇ?

- ಖಂಡಿತ ಇಲ್ಲ, ಚಿತ್ರರಂಗದ ಪ್ರವೇಶ ಅನಿರೀಕ್ಷಿತವಾಗಿತ್ತು. ಕಾಲೇಜು ದಿನಗಳಲ್ಲಿ ನಾನು ಮಾಡೆಲಿಂಗ್, ರ್‍ಯಾಂಪ್ ವಾಕ್ ಮತ್ತು ನೃತ್ಯದಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದೆ. ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕೆ ಸೇರುವ ಮುನ್ನ, ಚಿತ್ರರಂಗದಲ್ಲಿ ಒಮ್ಮೆ ಪ್ರಯತ್ನಿಸುವಂತೆ ನನ್ನ ಸ್ನೇಹಿತರು ಹಾಗೂ ಆಪ್ತರು ಪ್ರೇರೇಪಿಸಿದರು. ಓದು ಮುಗಿದ ಬಳಿಕ ಎರಡು-ಮೂರು ತಿಂಗಳುಗಳ ಕಾಲ ಕೆಲವು ಫೋಟೋಶೂಟ್‌ಗಳನ್ನು ಮಾಡಿಸಿದೆ. ಆ ಫೊಟೋಗಳು ನಿರ್ದೇಶಕರನ್ನು ತಲುಪಿ, ಕೆಲವೇ ವಾರಗಳಲ್ಲಿ ಈ ಪ್ರಾಜೆಕ್ಟ್ ಖಚಿತವಾಯಿತು.

'ಬೃಂದಾವಿಹಾರಿ' ಹೊರತುಪಡಿಸಿ, ಬೇರೆ ಯಾವ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದೀರಿ?

-ಹೌದು, 'ರಿಯಾಲಿಟಿ' ಎಂಬ ತೆಲುಗು ಸಿನಿಮಾದಲ್ಲಿಯೂ ನಟಿಸುತ್ತಿದ್ದೇನೆ. ನಟ ಕಿರಣ್ ಅಬ್ಬಾವರಂ ಅವರ ಜತೆ ತೆರೆಹಂಚಿಕೊಳ್ಳುತ್ತಿದ್ದು, ಈ ಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Untitled design - 2026-10-30T114222.340

ಬೃಂದಾವಿಹಾರಿ ಎಲ್ಲೆಲ್ಲಿ ಚಿತ್ರೀಕರಣ ಮಾಡಲಾಗಿದೆ? ಅನುಭವ ಹೇಗಿತ್ತು?

-ಚಿತ್ರೀಕರಣದ ಅನುಭವ ಅತ್ಯಂತ ಅದ್ಭುತವಾಗಿತ್ತು. ಮೈಸೂರಿನಲ್ಲಿ ಸುಮಾರು 50 ರಿಂದ 60 ದಿನಗಳ ದೀರ್ಘಾವಧಿಯ ಚಿತ್ರೀಕರಣ ನಡೆಯಿತು. ಅಲ್ಲಿ ನಾವೆಲ್ಲರೂ ಕೇವಲ ಸಹೋದ್ಯೋಗಿಗಳಾಗಿರದೆ, ಒಂದು ಕುಟುಂಬದಂತೆ ಬೆರೆತೆವು. ಹಿರಿಯ ನಟ ಗಣೇಶ್ ಸರ್ ಅವರು ನನ್ನನ್ನು ಹೊಸಬಳು ಎಂದು ಭಾವಿಸದೆ, ಅತ್ಯಂತ ಆತ್ಮೀಯತೆಯಿಂದ ಮಾರ್ಗದರ್ಶನ ಮಾಡಿದರು. ಮೈಸೂರಿನ ಜತೆಗೆ ಬೆಂಗಳೂರು ಮತ್ತು ಕೋಲಾರದಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಹಾಡುಗಳಿಗೆ ಪ್ರೇಕ್ಷಕರಿಂದ ಲಭಿಸುತ್ತಿರುವ ಪ್ರತಿಕ್ರಿಯೆ ಹೇಗಿದೆ?

-ಚಿತ್ರದ ಎಲ್ಲಾ 7 ಹಾಡುಗಳು ಬಿಡುಗಡೆಯಾಗಿವೆ ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವೈಯಕ್ತಿಕವಾಗಿ 'ರಾಮ ರಾಮ' ಮತ್ತು 'ರಾಧಾ ರಾಧಾ' ಹಾಡುಗಳು ನನಗೆ ಅತ್ಯಂತ ಪ್ರಿಯವಾದವು. ನಾನು ಶ್ರೀರಾಮನ ಅಪ್ಪಟ ಭಕ್ತೆಯಾಗಿರುವುದರಿಂದ, 'ರಾಮ ರಾಮ' ಎಂಬ ಪರಿಚಯ ಗೀತೆಯು ನನಗೆ ದೇವರ ಆಶೀರ್ವಾದದಂತೆ ಒಲಿದುಬಂದಿದೆ. 'ರಾಧಾ ರಾಧಾ' ಹಾಡಿನಲ್ಲಿ ಗಣೇಶ್ ಸರ್ ಅವರೊಂದಿಗಿನ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ.