ಧರ್ಮಶಾಲಾದಲ್ಲಿ ಕಾಫಿಯ ಘಮ ಬೆನ್ನತ್ತಿದ್ದೆ! -ಬೃಂದಾ ಆಚಾರ್ಯ
ನನಗೆ ಇಟಲಿ ಅಂದರೆ ತುಂಬ ಇಷ್ಟ. ಅಲ್ಲಿನ ಅರಮನೆ, ವಾಸ್ತುಶಿಲ್ಪ ಅಂದರೆ ಅದ್ಭುತ ಆಕರ್ಷಕ. ಮುಂಬೈನಲ್ಲಿ ಬ್ರಿಟಿಷ್ ಆರ್ಕಿಟೆಕ್ಚರ್ ಇಷ್ಟ. ಟ್ರಿಪ್ ಅಂತ ಹೋದಾಗ ರಾಜಸ್ಥಾನ, ಜೈಪುರದ ಅರಮನೆಗಳು ಇಷ್ಟವಾಗುತ್ತವೆ. ಅವುಗಳ ಐತಿಹಾಸಿಕ ವೈಭವ ನನಗೆ ಇಷ್ಟವಾಗುತ್ತದೆ. ಹೀಗಾಗಿ ಇಟಲಿ ವಾಸ್ತು ವೈಭವ ಕಣ್ಣಾರೆ ಕಾಣುವುದು ನನ್ನ ಕನಸು.
- ಶಶಿಕರ ಪಾತೂರು
ಜೀವನದ ಮೊದಲ ಪ್ರವಾಸದ ನೆನಪು?
ಆಗ ನಾನು ಮಾಗೋಡು ಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದೆ. ನನ್ನ ಪ್ರವಾಸದ ಮೊದಲ ನೆನಪು ಆ ಶಾಲೆಯಿಂದ ಹೋಗಿರುವಂಥದ್ದೇ. ಹೆಚ್ಚಾಗಿ ಹೋಗಿದ್ದೆಲ್ಲ ದೇವಸ್ಥಾನಗಳಿಗೇನೇ. ಮುರುಡೇಶ್ವರ, ಇಡಗುಂಜಿ, ಮರವಂತೆ ಕೊನೆಗೆ
ಹೊನ್ನಾವರದ ಅಪ್ಸರಕೊಂಡ ಫಾಲ್ಸ್ ಗೂ ಹೋಗಿ ಬಂದೆವು. ಹೋಗಿ ನೋಡಿದ ಸ್ಥಳಕ್ಕಿಂತ ನಮ್ಮ ಟೀಚರ್ ಜತೆ ನಾವೆಲ್ಲರೂ ಸೇರಿ ಮನೆಯಿಂದ ತಂದ ತಿಂಡಿಯನ್ನು ತಿಂದಿದ್ದೇ ಮರೆಯಲಾಗದ ಅನುಭವ. ನಮ್ಮ ವಿಮಲಾಮೇಡಂ ಕಡ್ಲೆಬೇಳೆ ಸ್ವೀಟ್ ತಂದು ನನಗೆ ಕೊಟ್ಟಿದ್ದರು. ಅದು ಕೂಡ ಮರೆಯಲಾಗದ ನೆನಪು.
ನಿಮ್ಮ ಪ್ರಕಾರ ಪ್ರವಾಸ ಅಂದರೇನು?
ನನಗೆ ಟ್ರಿಪ್ ಅಂದರೆ ರಿಲ್ಯಾಕ್ಸೇಶನ್. ಯಾಕೆಂದರೆ ನಾನು 6ನೇ ತರಗತಿಯಿಂದಲೇ ಶಿಕ್ಷಣಕ್ಕಾಗಿ ಮನೆಯಿಂದ ಹೊರಗಿದ್ದೆ. ಜೆ.ಎನ್.ವಿ ಮುಂಡಗೋಡ್, ಉಜಿರೆಯ ಎಸ್.ಡಿ.ಎಂ ಕಾಲೇಜ್, ಆನಂತರ ಕೆ.ಎಲ್.ಇ ಬೆಳಗಾವಿ, ಬಳಿಕ ಗುಜರಾತ್ ಗೆ ಹೋದೆ. ಕೊನೆಗೆ ಒಂದಷ್ಟು ಕಾಲ ಮುಂಬೈನಲ್ಲೂ ಸೆಟ್ಲಾಗಿ ಈಗ ಬೆಂಗಳೂರಿಗೆ ಶಿಫ್ಟಾಗಿದ್ದೇನೆ. ನನ್ನ ಜೀವನ ಒಂದು ರೀತಿ ಅಲೆಮಾರಿ ಬದುಕು. ಇಂಥ ನನಗೆ ರಜಾ ಅಂದರೆ ಮನೆಯಲ್ಲಿರುವುದೇ ಖುಷಿ. ಆದರೆ ಇತ್ತೀಚೆಗೆ ಪ್ರವಾಸದ ಮೂಲಕವೂ ಖುಷಿ ಕಾಣುತ್ತೇನೆ. ಆದರೆ ನನ್ನ ಪ್ರವಾಸದಲ್ಲಿ ಸಾಹಸಕ್ಕಿಂತ ವಿಶ್ರಾಂತಿಗೆ ಹೆಚ್ಚು ಆದ್ಯತೆ ಇರುತ್ತದೆ.

ಈಗ ನಿಮ್ಮ ರಜಾದಿನಗಳ ಪ್ರವಾಸ ಹೇಗಿರುತ್ತದೆ?
ರಜಾದಿನ ಅಂದರೆ ನಾನು ನನ್ನೂರು ಹೊನ್ನಾವರಕ್ಕೆ ಬರುವುದೇ ಹೆಚ್ಚು. ಯಾಕೆಂದರೆ ಊರು ಕೂಡ ನನ್ನ ಮೆಚ್ಚಿನ ಪ್ರವಾಸಿ ತಾಣವೇ. ಕಾಂಡ್ಲ ಫಾರೆಸ್ಟ್, ಇಕೊ ಬೀಚ್, ನಮ್ಮ ಊರಿನಲ್ಲೇ ಇರುವ ಬೋಟಿಂಗ್ ಎಲ್ಲವನ್ನೂ ಎಂಜಾಯ್ ಮಾಡ್ತೀನಿ. ಅಲ್ಲದೆ ಅದು ಪ್ರವಾಸಿತಾಣ ಅಲ್ಲವಾದ ಕಾರಣ ಬೇರೆ ಬೇರೆ ಊರುಗಳಿಂದ ಬಂದ ಜನಜಂಗುಳಿ ಇರುವುದಿಲ್ಲ. ಆ ಪ್ರಶಾಂತ ವಾತಾವರಣ ನನಗೆ ಇಷ್ವ. ಈಗಲೂ ನಾನು ಊರಲ್ಲೇ ಇದ್ದೇನೆ. ವರ್ಷದ ಅಂತ್ಯವನ್ನು ತಂದೆ ತಾಯಿ ಜತೆಯಲ್ಲಿಯೇ ಕಳೆಯೋಣ ಅಂತ ಇದ್ದೀನಿ.
ದೇವರ ದರ್ಶನಕ್ಕಾಗಿ ಪ್ರವಾಸ ಹೋಗಿಲ್ಲವೇ?
ಉಡುಪಿ ಶ್ರೀಕೃಷ್ಣನ ದೇವಸ್ಥಾನ ಅಂದರೆ ನನಗೆ ತುಂಬ ಇಷ್ಟ. ಬಾಲ್ಯದಿಂದ ಹೋಗುತ್ತಿದ್ದ ಕಾರಣಕ್ಕೋ ಗೊತ್ತಿಲ್ಲ. ಒಳಗೆ ಹೋದರೆ ಒಂದು ಆಧ್ಯಾತ್ಮಿಕ ಸುಖ ಸಿಗುತ್ತದೆ. ಮನಸಿಗೆ ತುಂಬ ಶಾಂತಿ ಸಿಗುತ್ತದೆ. ಹೊರಗೆ ಬರಬೇಕಾದರೆ ಜೀವನದಲ್ಲೇನೋ ಮಾಡಲೇಬೇಕು ಎನ್ನುವ ಸ್ಫೂರ್ತಿ ಸಿಗುತ್ತದೆ. ಇನ್ನೊಂದು ಇಡಗುಂಜಿ ದೇವಸ್ಥಾನ. ಅದು ನನ್ನೂರಾದ ಬಳ್ಕುಂಜದಿಂದ ಎರಡೇ ಕಿ.ಮೀ ದೂರದಲ್ಲಿರುವ ದೇವಸ್ಥಾನ. ಅಲ್ಲಿನ ಗಣೇಶನನ್ನು ಬಾಲ್ಯದಿಂದ ಗಣುಮಾಮ ಎಂದೇ ಕರೆದು ಅಭ್ಯಾಸ ನನಗೆ. ಮನೆಗೆ ಬಂದರೆ ಈ ದೇವರ ದರ್ಶನ ಮಾಡಿಯೇ ಹೋಗುವುದು. ಅಲ್ಲಿ ಪ್ರಾರ್ಥನೆ ಮಾಡಿಯೇ ನಮ್ಮನೆಯ ಪ್ರತಿ ಶುಭಕಾರ್ಯಗಳೂ ಆರಂಭವಾಗುತ್ತದೆ.
ನಿಮ್ಮ ಮೆಚ್ಚಿನ ಶೂಟಿಂಗ್ ಲೊಕೇಶನ್ ಗಳು ಯಾವುವು?
ಶೂಟಿಂಗ್ ವಿಚಾರಕ್ಕೆ ಬಂದರೆ ನನಗೆ ಉತ್ತರದ ಜಾಗಗಳೇ ಇಷ್ಟ. ಹಿಮಾಚಲ ಪ್ರದೇಶದ ಧರ್ಮಶಾಲಾ ಮತ್ತು ಡಾರ್ಜಿಲಿಂಗ್ ಅಂದರೆ ತುಂಬಾ ಪ್ರೀತಿ.
ಅಪರಿಚಿತ ಊರಿನಲ್ಲಿ ಮರೆಯಲಾಗದ ಅನುಭವ ಏನಾದರೂ ಆಗಿದೆಯೆ?
ಒಮ್ಮೆ ನಾನು ಫ್ರೆಂಡ್ ಜತೆ ಧರ್ಮಶಾಲಾಗೆ ಹೋಗಿದ್ದೆ. ಅಲ್ಲಿ ಫ್ರೆಂಡ್ ಜತೆ ಬೆಟ್ಟದ ಮೇಲಿನ ದೇವಸ್ಥಾನವೊಂದರ ಸುತ್ತ ಸುತ್ತು ಹಾಕುತ್ತಿದ್ದೆ. ಆಗ ಅಲ್ಲಿಗೆ ಕಾಫಿಯ ಪರಿಮಳ ಬರುತ್ತಿತ್ತು. ನಾವು ಅಲ್ಲೊಂದು ಮೂರು ಕಿಮೀ ನಷ್ಟು ಹುಡುಕಾಡಿದ್ದೇವೆ. ಬರೀ ಪರಿಮಳದ ಬೆನ್ನು ಬಿದ್ದು ಹುಡುಕಾಡಿ ಕೊನೆಗೂ ಕಾಫಿ ಮತ್ತು ಚೀಸ್ ಕೇಕ್ ತಿಂದ ಖುಷಿ ಮರೆಯಲಾಗದ್ದು.
ಪ್ರವಾಸದ ಸಂದರ್ಭ ಭಯ ಮೂಡಿಸಿದ ಘಟನೆ ನಡೆದಿದೆಯೇ?
ಹೌದು. ಆದರೆ ಅದು ಪ್ರವಾಸದ ವೇಳೆ ಅಲ್ಲ. ಶೂಟಿಂಗ್ ಸಂದರ್ಭದಲ್ಲಿ ನಡೆದ ಘಟನೆ. ಚಿಕ್ಕಮಗಳೂರು ಕಾಡಿನಲ್ಲಿ ನನ್ನ ನಟನೆಯ ಸಿನಿಮಾ
ಶೂಟಿಂಗ್ ನಡೆದಿತ್ತು. ರಾತ್ರಿ ಅಲ್ಲೇ ಹೋಮ್ ಸ್ಟೇಯಲ್ಲಿ ತಂಗುವ ವ್ಯವಸ್ಥೆ ಮಾಡಲಾಗಿತ್ತು. ಕೋಣೆಯೊಳಗೆ ನನಗೆ ಆಗಾಗ ಸಣ್ಣಪುಟ್ಟ ಧ್ವನಿ ಕೇಳಿ ಬರುತ್ತಿತ್ತು. ಆಮೇಲೆ ಗೊತ್ತಾಗಿದ್ದು ಏನೆಂದರೆ ನಾನಿದ್ದ ಕೋಣೆಯ ಹಿಂಭಾಗಕ್ಕೆ ಸರಿಯಾಗಿ ಸ್ಮಶಾನ ಇತ್ತು. ಸತ್ಯ ಗೊತ್ತಾದ ದಿನವೇ ನಾನು ಜಾಗ ಬದಲಾಯಿಸಿದ್ದೆ. ಯಾಕೆಂದರೆ ನನಗೆ ಮೊದಲೇ ದೆವ್ವಗಳೆಂದರೆ ಭಯ. ಒಂದು ವೇಳೆ ಮೊದಲೇ ಗೊತ್ತಿದ್ದು ಆ ಶಬ್ದಗಳೆಲ್ಲ ಕೇಳಿಸಿದ್ದರೆ ಅದೆಷ್ಟು ಭಯ ಆಗುತ್ತಿತ್ತೋ ಗೊತ್ತಿಲ್ಲ!
ನೀವು ಹೋಗಬೇಕು ಅಂದುಕೊಂಡ ಕನಸಿನ ಜಾಗ ಯಾವುದು?
ನನಗೆ ಇಟಲಿ ಅಂದರೆ ತುಂಬ ಇಷ್ಟ. ಅಲ್ಲಿನ ಅರಮನೆ, ವಾಸ್ತುಶಿಲ್ಪ ಅಂದರೆ ಅದ್ಭುತ ಆಕರ್ಷಕ. ಮುಂಬೈನಲ್ಲಿ ಬ್ರಿಟಿಷ್ ಆರ್ಕಿಟೆಕ್ಚರ್ ಇಷ್ಟ. ಟ್ರಿಪ್ ಅಂತ ಹೋದಾಗ ರಾಜಸ್ಥಾನ, ಜೈಪುರದ ಅರಮನೆಗಳು ಇಷ್ಟವಾಗುತ್ತವೆ. ಅವುಗಳ ಐತಿಹಾಸಿಕ ವೈಭವ ನನಗೆ ಇಷ್ಟವಾಗುತ್ತದೆ. ಹೀಗಾಗಿ ಇಟಲಿ ವಾಸ್ತು ವೈಭವ ಕಣ್ಣಾರೆ ಕಾಣುವುದು ನನ್ನ ಕನಸು.

ನಮ್ಮ ಓದುಗರಿಗೆ ನೀವು ಸೂಚಿಸುವ ಪ್ರವಾಸಿ ತಾಣ ಯಾವುದು?
ಕೇರಳದ ಮುನ್ನಾರ್ ನನ್ನ ಇಷ್ಟದ ಜಾಗ. ಆದರೆ ಇಂಥ ಚಳಿಗಾಲದಲ್ಲಿ ಅಲ್ಲಿಗೆ ಹೋಗಬಾರದು. ಮುಂಗಾರು ಮಳೆ ಶುರುವಾದ ಸಮಯದಲ್ಲಿ ಹೋದರೆ ತುಸು ಮಂಜು ತುಂಬಿದ ವಾತಾವರಣ ಅದ್ಭುತವಾಗಿರುತ್ತದೆ. ಬಹುಶಃ ನಾನು ಬೆಳೆದಿದ್ದೆಲ್ಲ ಸಮುದ್ರ ತೀರದಲ್ಲೇ ಆದ ಕಾರಣ ಹಿಲ್ ಸ್ಟೇಷನ್ ಅಂದರೆ ನನಗೆ ಆಕರ್ಷಣೆ ಇರಬಹುದು. ಆದರೆ ಮುನ್ನಾರ್, ಊಟಿಗೆ ಹೋಗಿ ಮೆಚ್ಚಿದ್ದೇನೆ. ಓದುಗರು ಕೂಡ ಅಲ್ಲಿಗೆ ಹೋಗಲು ಸೂಚಿಸುತ್ತೇನೆ.
ನಿಮ್ಮ ಪ್ರಕಾರ ಪ್ರವಾಸದಿಂದ ಪಡೆಯುವುದು ಏನು?
ಕಲಿಕೆ! ನಮ್ಮ ಅಪ್ಪ ಶಿಕ್ಷಕರು. ಹೀಗಾಗಿ ನಾನು ಪ್ರತಿಕ್ಷಣವೂ ಕಲಿಕೆಗೆ ಸಿದ್ಧವಾಗಿಯೇ ಇರುತ್ತೇನೆ. ಅದರಲ್ಲೂ ಪ್ರವಾಸದ ವೇಳೆ ಭೇಟಿಯಾಗುವ
ಪ್ರತಿಯೊಬ್ಬರಿಂದಲೂ ಏನಾದರೊಂದು ಕಲಿಯುವ ಅವಕಾಶ ಇರುತ್ತದೆ.