- ಶಶಿಕರ ಪಾತೂರು

ಮಾರ್ಕ್ ಚಿತ್ರದಲ್ಲಿ ನಾಯಕನ‌ ಪಾತ್ರದ ಜತೆಗೆ ಕಾರ್ಯಾಚರಿಸುವ ಮಹಿಳಾ ಶಕ್ತಿಯಾಗಿ ಕಾಣಿಸಿಕೊಂಡವರು ಅರ್ಚನಾ ಕೊಟ್ಟಿಗೆ. ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರಗಳತ್ತ ಗಮನ ಹರಿಸುತ್ತಿರುವ ಈ ನಟಿ, ತಮ್ಮ ಪ್ರವಾಸದ ಅನುಭವಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ಸಿನಿಮಾ‌ ಮತ್ತು ಪ್ರವಾಸ ಇವೆರಡನ್ನು ಹೇಗೆ ಕಾಣುತ್ತೀರಿ?

ನನ್ನ ಪ್ರಕಾರ ಇವೆರಡೂ ಒಂದಕ್ಕೊಂದು ಹೆಚ್ಚು ಹೊಂದಿಕೊಂಡಂಥವು. ಉದಾಹರಣೆಗೆ ಕಳೆದ ವಾರ ತೆರೆಕಂಡ 'ಮಾರ್ಕ್' ನೂರಾರು ಲೊಕೇಶನ್ ಗಳಲ್ಲಿ ಚಿತ್ರೀಕರಿಸಿರುವಂಥ ಚಿತ್ರ. ಹೀಗಾಗಿ ಪ್ರತಿ ಲೊಕೇಶನ್ ಕಡೆಗಿನ ಪ್ರಯಾಣವೂ ಒಂದು ಪ್ರವಾಸದ ಹಾಗೆ. ಚಿತ್ರೀಕರಣದ ಸಮಯದಲ್ಲೇ ವಿವಿಧ ಜಾಗಗಳನ್ನು ಸಂದರ್ಶಿಸುವ ಮೂಲಕ‌ ನನಗೆ ಪ್ರವಾಸದ ಆಸಕ್ತಿ ಶುರುವಾಯಿತು.

ಮಾರ್ಕ್ ಚಿತ್ರದಲ್ಲಿ ನೀವು ಎಷ್ಟು ಲೊಕೇಶನ್ ‌ಗಳನ್ನು ಎಕ್ಸ್ ಪ್ಲೋರ್ ಮಾಡಿದಿರಿ?

ಚಿತ್ರದಲ್ಲಿ ನಾನು ಪಾಲ್ಗೊಂಡಿದ್ದು ಮೂರೇ ಲೊಕೇಶನ್ ಗಳಲ್ಲಿ. ಬೆಂಗಳೂರು, ಪಾಂಡಿಚೇರಿ ಮತ್ತು ತೂತುಕುಡಿಯಲ್ಲಿ ಶೂಟಿಂಗ್ ಇತ್ತು. ನಾನು ಪಾಂಡಿಚೇರಿಗೆ ಹೋಗಿದ್ದೇ ಮೊದಲ ಸಲ. ಅದೇ ರೀತಿ ತೂತುಕುಡಿ ಎನ್ನುವಲ್ಲಿಗೂ ಹೋಗಿ ಬಂದೆ. ಅಲ್ಲಿ ಮ್ಯಾಕ್ರೂನ್ಸ್ ಎನ್ನುವ ಸ್ವೀಟ್ ಅದ್ಭುತವಾಗಿತ್ತು. ಬಾಯಲ್ಲಿ ಹಾಕಿಕೊಂಡೊಡನೆ ಕರಗಿ ಹೋಗುತ್ತಿತ್ತು. ಪಾಂಡಿಚೇರಿ ಸ್ಟ್ರೀಟ್ ಶಾಪಿಂಗ್ ಗೆ ಜನಪ್ರಿಯ. ಅಲ್ಲಿಂದ ನಾನು ಸಾಕಷ್ಟು ಖರೀದಿ ಮಾಡಿದ್ದೇನೆ. ಮುಖ್ಯವಾಗಿ ಬಟ್ಟೆಗಳೆಲ್ಲ ಕಡಿಮೆ ರೇಟ್ ಗೆ ಸಿಗುತ್ತಿತ್ತು. ನಾಲ್ಕು ಸಾವಿರ ರೂಪಾಯಿಗಳಿಗೆ ಬ್ಯಾಗ್ ತುಂಬ ಬಟ್ಟೆ ಕೊಂಡುಕೊಂಡಿದ್ದೇನೆ.

archana kottige  1

ಬೇರೆ ಯಾವ ಸಿನಿಮಾ‌ ಶೂಟಿಂಗ್ ಸಂದರ್ಭದಲ್ಲಿ ಪ್ರವಾಸದ ಅನುಭವ ದೊರಕಿದೆ?

ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲಿ ಯಾವಾಗಲೂ ಅಪರೂಪದ ಲೊಕೇಶನ್ಸ್ ಅನ್ನೇ ಸೆಲೆಕ್ಟ್ ಮಾಡುತ್ತಾರೆ. 'ಫಾರೆಸ್ಟ್' ಸಿನಿಮಾ ಚಿತ್ರೀಕರಣದ ವೇಳೆ ಊಟಿ, ಮಲೆ ಮಹದೇಶ್ವರ ಬೆಟ್ಟ ತಿರುಗಾಡಿದ್ದೆವು. ಊಟಿ ಟ್ರಿಪ್ ಗೆ ಹೋಗುವುದು ಬೇರೆ. ಆದರೆ ಶೂಟಿಂಗ್ ಗೆಂದು ಹೋದಾಗ ಸ್ಥಳೀಯರು ಕೂಡ ಹೋಗದೇ ಇರಬಹುದಾದಂಥ ಜಾಗಗಳಿಗೆ ಹೋಗುವ ಅವಕಾಶ ಲಭಿಸುತ್ತದೆ.

ದೇವಸ್ಥಾನಗಳಿಗೆ ಪ್ರವಾಸ ಹೋಗುವ ಹವ್ಯಾಸ ಇದೆಯೇ?

ಪ್ರತಿ ವರ್ಷ ವರ್ಷಾರಂಭದಲ್ಲೇ ಮಂತ್ರಾಲಯಕ್ಕೆ ಹೋಗುತ್ತೇವೆ. ವರ್ಷ ಮುಗಿಯುವುದರೊಳಗೆ ತಿರುಪತಿಗೆ ಹೋಗುತ್ತೇವೆ. ನಾನು ಇದುವರೆಗೆ ಎಷ್ಟೋ ದೇವಸ್ಥಾನಗಳಿಗೆ ಹೋಗಿದ್ದೇನೆ. ಆದರೆ ಈ ಎರಡು ದೇವಸ್ಥಾನಗಳಿಗೆ ಹೋದಾಗ ಬೇಡಿದ್ದು ಫಲಿಸಿದ ಉದಾಹರಣೆಗಳೂ ಇವೆ.‌ ಮಾತ್ರವಲ್ಲ, ಈ ದೇವಾಲಯಗಳ ಒಳಗೆ ಹೋದರೆ ಏನೋ ಕನೆಕ್ಷನ್ ಆದಂತೆ ಭಾಸವಾಗುತ್ತದೆ. ಹಿಂದೊಮ್ಮೆ ನಾನು, ಖುಷಿ ರವಿ ಎಲ್ಲ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಎಲ್ಲ ಹೋಗಿ ಬಂದಿದ್ದೆವು. ನಮ್ಮ ಮನೆ ದೇವರು ದೇವರಾಯನ ದುರ್ಗದ ಲಕ್ಷ್ಮೀ ನರಸಿಂಹ. ಅಲ್ಲಿಗೆ ಸ್ಕೂಲ್ ಟ್ರಿಪ್ ಕೂಡ‌ ಹೋಗಿದ್ದೆವು.

ಶಾಲೆಯಿಂದ ಪ್ರವಾಸ ಹೋದ ನೆನಪುಗಳೆಷ್ಟಿವೆ?

ಶಾಲಾ ದಿನಗಳಿಂದಲೇ ನನ್ನ ಪ್ರವಾಸಕ್ಕೆ ತಂದೆಯ ಪ್ರೋತ್ಸಾಹ ಇತ್ತು. ಯಾಕೆಂದರೆ ನಮ್ಮಪ್ಪ ಫಿಸಿಕಲಿ ಹ್ಯಾಂಡಿಕ್ಯಾಪ್ಡ್. "ನನಗಂತೂ ನಿನ್ನನ್ನು ಎಲ್ಲೂ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಹಾಗಾಗಿ ಶಾಲೆ, ಕಾಲೇಜ್ ಪ್ರವಾಸಗಳಿಗೆ ಅವಕಾಶ ಸಿಕ್ಕಾಗೆಲ್ಲ ಹೋಗು" ಅಂದಿದ್ದರು. ಹಾಗೆ ಹಂಪಿ, ಹೊಗೇನಕಲ್ ಫಾಲ್ಸ್, ಮೈಸೂರು, ತಲಕಾಡು, ದಾಂಡೇಲಿ, ಜೋಗ್ ಫಾಲ್ಸ್ ಮೊದಲಾದ ಕಡೆಗಳಿಗೆಲ್ಲ ಹೋಗಿದ್ದೆವು. ಆದರೆ ಅಮ್ಮ ಮಾತ್ರ ಕಾಲೇಜ್ ಬಳಿಕ ಫ್ರೆಂಡ್ಸ್ ಜತೆ ಟೂರ್ ಕಳಿಸುತ್ತಿರಲಿಲ್ಲ. ಮದುವೆ ಆದ ಮೇಲೆ ಗಂಡನ ಜತೆ ಎಲ್ಲಿಗಾದರೂ ಹೋಗು ಅಂತಿದ್ರು.

archana kottige  3

ಹಾಗಾದರೆ ನೀವು ಫ್ರೆಂಡ್ಸ್ ಜತೆ ಟೂರ್ ಹೋಗಿದ್ದೇ ಇಲ್ಲವೇ?

ಖುಷಿ ರವಿ ಜತೆ ಹೋಗಿದ್ದು ಹೇಳಿದ್ನಲ್ಲ? ಅದೇ ರೀತಿ ಆಶಿಕಾ ಜತೆ ಕೊಡಗುಗೆ ಹೋಗಿದ್ದೆ. ಜೈಪುರಕ್ಕೂ ಹೋಗಿದ್ದೆವು. ಜೈಪುರದಲ್ಲಿ ಬೆಳಗ್ಗೆ ಎಲ್ಲ ಬಿಸಿಲು, ರಾತ್ರಿ ಚಳಿ.‌ ಒಂದು ರೀತಿ ನಮ್ಮ ಹುಬ್ಬಳ್ಳಿ ಥರ. ಉತ್ತರ ಭಾರತದಲ್ಲಿ ನನಗೆ ಆಹಾರ ಇಷ್ಟವಾಯಿತು. ಮುಖ್ಯವಾಗಿ ನನ್ನ ಪ್ರವಾಸದ ರೀತಿ ಅಡ್ವೆಂಚರಸ್ ಆಗಿರುವುದಿಲ್ಲ. ಆರಾಮಾಗಿ ಎದ್ದು ಪ್ರಕೃತಿ ವೀಕ್ಷಣೆ ಮಾಡಿ, ಆಯಾ ಸ್ಥಳದ ಆಹಾರ ಸವಿದು, ಆರಾಮಾಗಿ ಮರಳುವುದಕ್ಕೆ ಮಾತ್ರ ಆದ್ಯತೆ. ಇಂಥ ಪ್ಲ್ಯಾನ್ ಗೆ ಹೊಂದಿಕೊಳ್ಳಬಲ್ಲ ಫ್ರೆಂಡ್ಸ್ ಜತೆಗಷ್ಟೇ ನಾನು ಪ್ರವಾಸ ಎಂಜಾಯ್ ಮಾಡಲು ಸಾಧ್ಯ.

ಹನಿಮೂನ್ ಗೆ ವಿದೇಶಕ್ಕೆ ಹೋದ ಅನುಭವ ಹೇಗಿತ್ತು?

ಅದೇ ನನ್ನ ಮೊದಲ ವಿದೇಶಿ ಪ್ರವಾಸ. ಒಂದು ವಾರ‌ ಪೂರ್ತಿ ಥೈಲ್ಯಾಂಡ್ ಸುತ್ತಾಡಿದೆವು. ಅಲ್ಲಿ ಟೈಗರ್ ಪಾರ್ಕ್, ಡಾಲ್ಫಿನ್ ಶೋ ತುಂಬ ಇಷ್ಟವಾಯಿತು. ಹುಲಿಯನ್ನು ಹತ್ತಿರದಿಂದ ನೋಡಿ, ಮುಟ್ಟುವ ಅವಕಾಶ ಇತ್ತು. ಆದರೆ ಅದಕ್ಕಾಗಿ ಹುಲಿಗೆ ನಿದ್ದೆ ಇಂಜೆಕ್ಷನ್ ಕೊಟ್ಟಿರುತ್ತಾರೆ. ಅದಕ್ಕೆ ನೀರು ಚಿಮುಕಿಸಿ ಒಂದು‌ ನಿಮಿಷ ಫೊಟೋ ತೆಗೆದು ಬರಬೇಕಾಗಿತ್ತು. ಅಲ್ಲಿ ಕೋತಿ, ಆನೆಗಳಿಂದ ಡಾನ್ಸ್ ಮಾಡಿಸುತ್ತಾರೆ.‌ ಆ ಕ್ಷಣದಲ್ಲಿ ಎಲ್ಲವನ್ನೂ ಎಂಜಾಯ್ ಮಾಡಿದ್ದೇನೆ.‌ ಆದರೆ ಈಗ ಯೋಚಿಸುವಾಗ ಅವೆಲ್ಲ ಪ್ರಾಣಿ ಹಿಂಸೆಯಾಗಿ ಕಾಡುತ್ತಿದೆ.

archana kottige  2

ಆರಾಮದಾಯಕ ಪ್ರವಾಸ ಬಯಸುವ ನಿಮಗೆ ಆತಂಕ ಎದುರಾಗಿದ್ದೇ ಇಲ್ಲವೇ?

ಅಂಥದೊಂದು‌ ಘಟನೆಗೆ ಥೈಲ್ಯಾಂಡ್ ಕಾರಣವಾಯಿತು. ಅಲ್ಲೊಂದು ದ್ವೀಪದಲ್ಲಿ ಬೋಟಿಂಗ್ ಹೋಗುತ್ತಿದ್ದಾಗ ಬೋಟೊಳಗೆ ನೀರು ನುಗ್ಗಿತ್ತು. ಇನ್ನೇನು ಎಲ್ಲಾ ಮುಗಿಯಿತು ಅಂತಾನೇ ಅಂದುಕೊಳ್ಳುವಂತಾಗಿತ್ತು. ನನ್ನ ಮೃತದೇಹ ಭಾರತ ತಲುಪುತ್ತಾ ಅನ್ನುವ ಮಟ್ಟಕ್ಕೆ ಯೋಚನೆ ಮಾಡಿದ್ದೆ. ಆನಂತರ ಹೇಗೋ‌ ದಡ ಸೇರಿದಾಗಲೇ ಸಮಾಧಾನ ಆಗಿದ್ದು. ಗಂಡನೂ ಜತೆಗಿದ್ದರು ಎನ್ನುವುದೊಂದೇ ಆಗಿದ್ದ ನೆಮ್ಮದಿ!

ಪ್ರವಾಸಗಳಿಂದ‌ ನೀವು ಕಲಿತಿರುವುದೇನು?

ಯಾವ ಆಹಾರವೂ ಸಿಕ್ಕದಿದ್ದಾಗ, ಸಿಕ್ಕ ಆಹಾರವೇ ಆಪ್ತವಾಗುತ್ತದೆ. ಉದಾಹರಣೆಗೆ ನಾನು ಸಸ್ಯಾಹಾರಿ. ಥೈಲ್ಯಾಂಡ್ ನಲ್ಲಿ‌ ಸಸ್ಯಾಹಾರಿಗಳಿಗೆ ಆಪ್ಷನ್ಸ್ ಕಡಿಮೆ. ಆದರೆ ಅಲ್ಲಿನ ಭಾರತೀಯ ರೆಸ್ಟೋರೆಂಟ್ ನಲ್ಲಿ 'ದಾಲ್ ಕಿಚಡಿ'ಯನ್ನೇ ತಿನ್ನುತ್ತಿದ್ದೆ. ವಾರ ಮುಗಿಯುವುದರೊಳಗೆ ಇಲ್ಲಿಗಿಂತ ಅಲ್ಲೇ ದಾಲ್ ಕಿಚಡಿ ಚೆನ್ನಾಗಿರುವಂತೆ ಅನಿಸಿತ್ತು. ಅಲ್ಲಿ ಟ್ರಾಫಿಕ್ ನಲ್ಲಿ ಹಾಂಕಿಂಗ್ ಮಾಡಿದ್ರೆ ಅದು ಅಗೌರವದಂತೆ ಕಾಣುತ್ತಾರೆ. ನನಗಂತೂ ಅಲ್ಲಿದ್ದಷ್ಟು ಕಾಲ ಯಾರೂ ಹಾಂಕಿಂಗ್ ಮಾಡಿದ್ದೇ ಕೇಳಿಸಿಲ್ಲ. ಇದನ್ನು ಇಲ್ಲಿಯೂ ಅನುಸರಿಸಬೇಕು. ಇವೆರಡೂ ನಾನು ಪ್ರವಾಸದಿಂದ ಕಲಿತ ವಿಷಯಗಳು.