ಪ್ರವಾಸದ ಅನಿರೀಕ್ಷಿತ ಅತಿಥಿಗಳು !
ಅಲ್ಲಿನ ಮನೆಯೊಂದರ ಗೋಡೆಯ ಮೇಲೆ ನಮ್ಮ ದೇಶದ ಮುಖ್ಯ ಸಮಾಜ ಸುಧಾರಕರಲ್ಲಿ ಪ್ರಮುಖರಾದ ʻಡಾ ರಾಜಾರಾಮ್ ಮೋಹನ್ ರಾಯ್ʼ ಅವರು ಒಂದೆರಡು ವರ್ಷಗಳ ಕಾಲ ಇಲ್ಲಿ ಇದ್ದರು ಎನ್ನುವುದಾಗಿ ಬರೆದುಕೊಂಡಿದ್ದರು. ಖುದ್ದು ಬ್ರಿಟಿಷರು ಈ ಸನ್ನಿವೇಶವನ್ನು ನೆಪಿಸಿಕೊಂಡು, ಸಂರಕ್ಷಿಸಿ ಅಲ್ಲೊಂದು ಬೋರ್ಡ್ ಅನ್ನೂ ಹಾಕಿರುವುದು ಭಾರತೀಯರಿಗೆ ಹೆಮ್ಮೆಯ ವಿಚಾರ.
- ದರ್ಶನ್ ಜಯಣ್ಣ
ನಾನು ಕೆಲಸದ ಮೇಲೆ ದೇಶಗಳನ್ನು ಸುತ್ತಿದ್ದು ಮೂರು ಬಾರಿ ಮಾತ್ರ, ಮಿಕ್ಕ ಸುತ್ತಟವೆಲ್ಲಾ ಸ್ವಂತ ಖರ್ಚಿನಲ್ಲೇ. ಅದೂ ಬೆಂಗಳೂರಿನಲ್ಲಿದ್ದಾಗ ತಿಂಗಳಿಗೆ ಐದು ಸಾವಿರದಂತೆ ತೆಗೆದಿಟ್ಟು ವರ್ಷದ ಬೋನಸ್ ಬಂದಮೇಲೆ ಅದನ್ನು ಸೇರಿಸಿ ನಾನೂ ನನ್ನಾಕೆ ಎರಡು ವರ್ಷಕ್ಕೊಮ್ಮೆ ಒಂದು ಟ್ರಿಪ್ ಹೊಡೆಯುತ್ತಿದ್ದೆವು.
ಈಗ ಸೌದಿಯಲ್ಲಿ ಸ್ವಲ್ಪ ಉಳಿಕೆ ಹೆಚ್ಚಾದ ಮೇಲೆ ಬಿಡುವಿಲ್ಲದೆ ಸುತ್ತುವೆವು. ನಮ್ಮ ಪ್ರವಾಸಗಳ ಕಾರಣ ಇಷ್ಟೇ. ಬೇರೆ ಬೇರೆ ಸಂಸ್ಕೃತಿ, ಜಾಗ, ಪದ್ಧತಿ, ಆಹಾರ, ಉಡುಗೆ ತೊಡುಗೆ, ಜನ ಜೀವನದ ಉಲ್ಲಾಸ ಪಡೆಯುವುದು. ಒಂದೆರಡು ಬಾರಿ, ಅದೂ ಒಂದು ದಿನದ ಗ್ರೂಪ್ ಟ್ರಿಪ್ ಬಿಟ್ಟರೆ, ಎಲ್ಲ ನಾವೇ ಪತ್ತೆಹಚ್ಚಿ ಓಡಾಡುವುದು. ಭಾಷೆ ಬಾರದ ಜಾಗಗಳಲ್ಲಿ ಈ ಅನುಭವ ಮತ್ತಷ್ಟು ಕುತೂಹಲ ಬರಿತವಾಗಿರುತ್ತದೆ.
ಇದನ್ನೂ ಓದಿ: ನೆಲದಾಳದಲ್ಲೊಂದು ಕಲೆಯ ಬಲೆ
ಇದಕ್ಕೆಲ್ಲ ನನಗೆ ಸ್ಫೂರ್ತಿ ಕಾಲೇಜು ದಿನಗಳಲ್ಲಿ ಓದಿದ ಶಿವರಾಮ ಕಾರಂತರ “ಅಪೂರ್ವ ಪಶ್ಚಿಮ”, ಅದರ ಮೊದಲ ಪುಟಗಳಲ್ಲೇ ಅವರು ಬರೆಯುವುದು “ ನಾನು ಈ ಸಮುದ್ರ ಪಯಣದ ಕರ್ಚಿನ ಬಾಬ್ತನ್ನು ಬಹುಷ ನನ್ನ ಜೀವಮಾನವೆಲ್ಲ ತೀರಿಸಬೇಕೇನೋ ಅಂತ “ !
ಹೀಗೆ ಮಾಡಿದ ಹಲವು ಪ್ರವಾಸಗಳಲ್ಲಿ ಅಕ್ಷರಶಃ ‘ನಡೆಯುವಾಗ’ ಆದ ಅಪೂರ್ವ ಅನುಭವಗಳ ಬರಹವಿದು.
ಲಂಡನ್: ಇಂಗ್ಲೆಂಡ್
2020ರಲ್ಲಿ ಬ್ರಿಟನ್‌ನ ಯೂನಿವರ್ಸಿಟಿ ಆಫ್ ಸಸೆಕ್ಸ್ ನಲ್ಲಿ ಹೊರ ವಿದ್ಯಾರ್ಥಿಯಾಗಿ ಶಕ್ತಿ ನೀತಿಯ ಮೇಲೆ ಮಾಸ್ಟರ್ಸ್ ಪದವಿಗೆ ಸೇರಿಕೊಂಡಿದ್ದೆ. ಅದಾದ ಎರಡುವರೆ ವರ್ಷಗಳ ನಂತರ 2023ರಲ್ಲಿ ಪದವಿ ಪ್ರಧಾನ ಸಮಾರಂಭ ಇಂಗ್ಲೆಂಡ್‌ನ ಬ್ರೈಟನ್ (Brighton & cove) ನಗರಲ್ಲಿತ್ತು. ಅನಿವಾರ್ಯ ಕಾರಣಗಳಿಂದ ಆ ವರ್ಷ ಹೋಗಲಾಗದೆ ನಂತರ ಅಂದರೆ 2024ರ ಜನವರಿಯಲ್ಲಿ ಹೋಗುವುದೆಂದು ತೀರ್ಮಾನಿಸಿದೆ.
ಗ್ರಾಜುಯೇಷನ್ ಲೆಟರ್ ಇದ್ದದ್ದರಿಂದ ವೀಸಾ ಸುಲಭವಾಗಿ ಸಿಕ್ಕಿತ್ತು. ಶೂರಿಟಿಯಾಗಿ ಲಂಡನ್‌ನ ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ನಲ್ಲಿ ಸಂಶೋಧಕನಾಗಿರುವ ನನ್ನ ಸಹಪಾಠಿ ಸಂತೋಷ್ ಹಲವು ಕಡತಗಳನ್ನ ಒದಗಿಸಿದ್ದ. ನಾನು ಸೌದಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಇಲ್ಲಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಎಂಪ್ಲಾಯ್ಮೆಂಟ್ ಲೆಟರ್ ಕೂಡಾ ಕೊಡಬೇಕಾಯ್ತು. ಒಟ್ಟಿನಲ್ಲಿ ಐದು ದಿನದ ಒಟ್ಟಾರೆ ಪ್ಲಾನ್ ಹಾಕಿಕೊಂಡೆ 2 ದಿನ ಯೂನಿವರ್ಸಿಟಿ ಇದ್ದ ಬ್ರೈಟನ್ ಅಂಡ್ ಕೋವ್ ನಗರದಲ್ಲಿ, ಮೂರು ದಿನ ಲಂಡನ್‌ನಲ್ಲಿ. ಪದವಿ ಪ್ರಧಾನಕ್ಕೆ ನನ್ನ ಗೆಳೆಯನೂ ಬಂದಿದ್ದ. ಅದಾದನಂತರ ಲಂಡನ್ ಸುತ್ತಾಟ. ಹಾಗೊಂದು ದಿನ ಗೆಳೆಯನಿಗೆ ಅವನ ಇನ್ಸ್ಟಿಟ್ಯೂಟ್‌ನಲ್ಲಿ ಕೆಲಸವಿದ್ದ ಕಾರಣ, ಅಂದು ನಾನು ಬ್ರಿಟಿಷ್ ಮ್ಯೂಸಿಯಂಗೆ ಹೋಗುವುದು, ಸಂಜೆಯ ಹೊತ್ತಿಗೆ ಗೆಳೆಯ ಅಲ್ಲೆ ಬಂದು ನನ್ನನ್ನು ಸಂಧಿಸುವುದು ಎಂಬುದಾಗಿ ಮಾತಾಯ್ತು.

ನನ್ನ ಮೊಬೈಲ್‌ಗೆ ಅಲ್ಲಿಯದ್ದೇ ಲೋಕಲ್ ಸಿಮ್ ಮತ್ತು ಇಂಟರ್ನೆಟ್ ಹಾಕಿಸಿಕೊಂಡಿದ್ದೆ, ಚಾರ್ಜ್ ಪೂರ್ತಿ ಇತ್ತು. ನಾನಿದ್ದ ನಾರ್ತ್ ಲಂಡನ್‌ನ ಹೊಟೇಲಿಂದ ಲಂಡನ್ ಮೆಟ್ರೋ ಹಿಡಿದು, ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದ ಬಳಿ ಇಳಿದು, ಅಲ್ಲಿಂದ ನಡೆದುಕೊಂಡು ಹೋಗುವುದು ಎಂದು ತೀರ್ಮಾನಿಸಿದೆ. ಇದಕ್ಕೆ ಗೂಗಲ್ ಮ್ಯಾಪ್‌ನ ವಾಕಿಂಗ್ ಆಪ್ಷನ್ ಯಾವತ್ತೂ ನೆರವಾಗುತ್ತದೆ ಮತ್ತು ನನಗೂ ಊರು, ದಾರಿ, ಜನ, ಮನೆಗಳು, ಅಂಗಡಿ ಮುಗ್ಗಟ್ಟು, ನೈರ್ಮಲ್ಯ, ಹವಾಮಾನ ಎಲ್ಲದರ ಬಗ್ಗೆ ಸ್ವಲ್ಪ ತಿಳಿಯುತ್ತದೆ. ಆಗಿನ ಅಂದರೆ ಜನವರಿಯ ಲಂಡನ್‌ನಲ್ಲಿ ತಾಪಮಾನ 8 - 10 ಡಿಗ್ರಿ ಜತೆಗೆ ಗಾಳಿಯೂ ಇರುತ್ತಿತ್ತು. ಆದ್ದರಿಂದ ಅದಕ್ಕೆ ಬೇಕಾದ ಧಿರಿಸು ಹಾಕಿ ನಾನೂ ಹೊರಡುತ್ತಿದ್ದೆ. ಗೂಗಲ್‌ನಲ್ಲಿ ಡೌಟ್ ಬಂದರೆ ಯಾರಾದರೂ ದಾರಿಹೋಕರನ್ನು ಕೇಳುತ್ತಿದ್ದೆ. ಇಲ್ಲಿ ಇಂಗ್ಲಿಷ್ ಬಂದರೆ ತಲೆ ಬಿಸಿ ಇರದು. ಆ ದಿನ ಗೂಗಲ್ ಬ್ರಿಟಿಷ್ ಮ್ಯೂಜಿಯಂ ಇನ್ನು 500ಮೀಟರ್ ಎಂದು ತೋರಿಸುತ್ತಿತ್ತು. ಅಲ್ಲೇ ರಸ್ತೆ ಬದಿಯಲ್ಲಿ ಸ್ವಲ್ಪ ನಿಂತು ಮುನ್ನಡೆಯೋಣ ಎಂದು ಅಲ್ಲಿನ ಪಾರ್ಕಿನ ಗೋಡೆಗೊರಗಿ ಮುಂದಿನ ಕಟ್ಟಡವೊಂದನ್ನು ಗಮನಿಸುತ್ತಿದ್ದೆ. ಅದರ ಮೇಲಿದ್ದ ಗೋಡೆಯ ಮೇಲೆ ನನಗೊಂದು ಆಶ್ಚರ್ಯ ಕಾದಿತ್ತು!
ಅದೇನೆಂದರೆ, ಅಲ್ಲಿನ ಮನೆಯೊಂದರಲ್ಲಿ ನಮ್ಮ ದೇಶದ ಮುಖ್ಯ ಸಮಾಜ ಸುಧಾರಕರಲ್ಲಿ ಪ್ರಮುಖರಾದ “ಡಾ ರಾಜಾರಾಮ್ ಮೋಹನ್ ರಾಯ್” ಒಂದೆರಡು ವರ್ಷಗಳ ಕಾಲ ಇದ್ದರು ಎನ್ನುವುದು. ಅದನ್ನವರು ಅಂದರೆ ಬ್ರಿಟಿಷರು (Greater London council) ನೆನಪಿಸಿಕೊಂಡು, ಸಂರಕ್ಷಿಸಿ ಅಲ್ಲೊಂದು ಬೋರ್ಡ್ ಅನ್ನೂ ಹಾಕಿರುವುದು ನನಗೆ ಖುಷಿ ಕೊಟ್ಟಿತು. ಅದರ ಪಕ್ಕದಲ್ಲೇ ಯೂನಿವರ್ಸಿಟಿ ಆಫ್ ಲಂಡನ್‌ನ ಬೆಡ್ಫೋರ್ಡ್ ಕಾಲೇಜ್ ಫಾರ್ ವಿಮೆನ್ (1849) ಕೂಡಾ ಮೊದಲು ಇಲ್ಲೇ ಕಾರ್ಯ ಶುರು ಮಾಡಿದ್ದು ಎಂದೂ, ಅದರ ಕಾರಣಕರ್ತರು “ಎಲಿಜಬೆತ್ ಜೆಸರ್” ಎಂದೂ ಬರೆದಿತ್ತು. ಒಂದು ವೇಳೆ ನಾನು ಉಬರ್ ನಲ್ಲೋ, ಬಸ್ಸಿನಲ್ಲೋ ಅಥವಾ ಬೇರೆ ಟ್ಯಾಕ್ಸಿಯಲ್ಲೋ ಬ್ರಿಟಿಷ್ ಮ್ಯೂಸಿಯಂಗೆ ಹೋಗಿದ್ದಿದ್ದರೆ, ಈ ಆಕಸ್ಮಿಕ ಮತ್ತು ಸಿಹಿ ಅನುಭವಗಳು ಆಗುತ್ತಿರಲಿಲ್ಲ.

ಮ್ಯಾಡ್ರಿಡ್: ಸ್ಪೇನ್
ಸ್ಪೇನ್‌ಗೆ ಹೋದದ್ದು ಕೆಲಸ ನಿಮ್ಮಿತ್ತ. ಸೌದಿಯಿಂದ ಇಸ್ತಾಂಬುಲ್ ಮಾರ್ಗದಲ್ಲಿ ಮಾಡ್ರಿಡ್‌ಗೆ ಹೋಗಬೇಕಾಗಿತ್ತು. ಫೆಬ್ರವರಿಯ ತಿಂಗಳಾದ್ದರಿಂದ ಇಸ್ತಾಂಬುಲ್‌ನಲ್ಲಿ ಹಿಮ ಬೀಳುತ್ತಿತ್ತು. ಅದರಿಂದಾಗಿ ಫ್ಲೈಟ್‌ಗಳ ಹಾರಾಟ ಸಮಯದಲ್ಲಿ ವ್ಯತ್ಯಯವಾಗಿ ಒಂದಿಡೀ ದಿನ ಅಲ್ಲೇ ಕಳೆಯಬೇಕಾಯಿತು. ಊಟದ ಕೂಪನ್‌ಗಳನ್ನು ದಂಡಿಯಾಗಿ ಕೊಟ್ಟಿದ್ದರು.
ಬೇಕಾದರೆ ಇಸ್ತಾಂಬುಲ್‌ನ ಹೊಟೇಲ್‌ನಲ್ಲಿ ಈ ರಾತ್ರಿ ತಂಗಬಹುದು. ಆದರೆ ಅದಕ್ಕೆ ವೀಸಾಗೆ ಹಣ ಪಾವತಿಸಿ ಅರ್ಜಿ ಹಾಕಬೇಕು, ಹೊಟೇಲ್ ರೂಮ್‌ನ ವ್ಯವಸ್ಥೆ ನಮ್ಮದೆಂದು, ಟರ್ಕಿಯ ಪೆಗಾಸಸ್ ಏರ್ಲೈನ್ಸ್ ನವರು ಅಂದರು. ನನಗೋ ಆಗಲೇ ಕೆಮ್ಮು ನೆಗಡಿ ಶುರುವಾಗಿತ್ತು ಮತ್ತು ಅದಾಗಲೇ ನಾನು ಇಸ್ತಾಂಬುಲ್ ನೋಡಿದ್ದರಿಂದ ಒಂದು ದಿನಕ್ಕಾಗಿ ಪುನಾ ಕಾಸು ಕೊಟ್ಟು ವೀಸಾ ಹೋಗುವ ಗೊಡವೆಯೇ ಬೇಡೆಂದು ಏರ್‌ಪೋರ್ಟ್‌ನಲ್ಲಿಯೇ ಇರಲು ತೀರ್ಮಾನಿಸಿದೆ. ಇದರಿಂದಾದ ಅನುಕೂಲವೆಂದರೆ ಜೀವನದಲ್ಲೇ ಮೊದಲ ಬಾರಿಗೆ ಮಂಜು ಬೀಳುವುದನ್ನು, ಅಷ್ಟು ಚಳಿಯನ್ನು, ಅದನ್ನು ತೆರವುಗೊಳಿಸಲು ಹರಸಾಹಸ ಪಡುವ ಕೆಲಸದವರ ಪಾಡನ್ನು ನೋಡಿದ್ದು. ಅದ್ಯಾಕೋ ಪಶ್ಚಿಮದ ಕ್ರಿಸ್ಮಸ್ ಸೀಸನ್ ನಂತೆ ಭಾಸವಾಯ್ತು. ಏರ್‌ಪೋರ್ಟ್‌ನ ಹೊರಗಡೆ ಕಾಣುವ ಎಲ್ಲ ಮರಗಳ ಮೇಲೆ, ಪಾರ್ಕಿನ, ಮಸೀದಿಯ, ನಿಂತ ಕಾರುಗಳ ಮೇಲೆಲ್ಲಾ ಬಿಳಿ ಬರ್ಫ್. ಮರುದಿನ ಹೇಗೋ ಮತ್ತೊಂದು ಫ್ಲೈಟ್‌ನಲ್ಲಿ ಮಾಡ್ರಿಡ್‌ಗೆ ಕಳುಹಿಸಿಕೊಟ್ಟರು. ಅಲ್ಲಿಗೆ ಬಂದೊಡನೆ ಹೊಟೇಲ್ ಹೊಕ್ಕು, ಸ್ನಾನ ಮಾಡಿ ರೆಡಿಯಾಗಿ, ಮೊದಲೇ ಮಾಡಿಟ್ಟುಕೊಂಡಿದ್ದ ಪ್ಲಾನ್‌ನಲ್ಲಿದ್ದ ವಿಶ್ವ ವಿಖ್ಯಾತ ಮ್ಯಾಡ್ರಿಡ್ ಅರಮನೆ, ಪ್ಲಾಜಾ ಮೇಯರ್, ಪ್ರಾಡೊ ಮ್ಯೂಜಿಯಂ, ರೀನಾ ಸೋಫಿಯಾ, ಸಿಟಿ ಟೂರ್‌ಗಳಲ್ಲಿ ಯಾವುದಕ್ಕೆ ಯಾವಾಗ ಹೋಗುವುದೆಂದು ಯೋಚಿಸಲಾರಂಭಿಸಿದೆ.
ಮೊದಲು ಪಬ್ಲೋ ಪಿಕಾಸ, ಸಾಲ್ವಡೋರ್ ಡಾಲಿ, ಉವಾನ್ ಮೀರೋ ಮುಂತಾದ ಸ್ಪೇನ್ ದೇಶದ ಲೋಕ ಮಾನ್ಯ ಕಲಾವಿದರ ಕೃತಿಗಳಿರುವ ಪ್ರಾಡೊ ಮ್ಯೂಸಿಯಂಗೆ ಹೋಗಲು ತೀರ್ಮಾನಿಸಿದೆ. ಗೂಗಲ್ ಹೊಟೇಲ್‌ನಿಂದ ಅದು 900 ಮೀಟರ್ ದೂರ ಎಂದು ಹೇಳಿದ್ದೇ ನನ್ನ ಸ್ಲಿಂಗ್ ಬ್ಯಾಗ್ ಹಾಕಿಕೊಂಡು ಹೊರಟೆ. ಫೆಬ್ರವರಿ ಆದ್ದರಿಂದ ಸ್ಪೇನ್‌ನಲ್ಲಿ ಸ್ವಲ್ಪ ಚಳಿ, ಮಳೆ, ಆಗಾಗ ಬಿಸಿಲು ಎಲ್ಲ ಇದ್ದು ತಾಪಮಾನ 12-13 ಇತ್ತು. ಒಟ್ಟಿನಲ್ಲಿ ಹೋದ ವರುಷದ ಲಂಡನ್‌ಗಿಂತ ಇದು ಹೆಚ್ಚು ಹಿತವಾಗಿದ್ದರೂ ಇಡೀ ಊರು ಸ್ಪ್ಯಾನಿಷ್ ಮಯವಾಗಿತ್ತು. ನಗರ ಮಧ್ಯೆ ಎಷ್ಟೊಂದು ಕಿರಿದಾದ ಕಲ್ಲಿನ ಹಾದಿ! ಕಾರು, ಸೈಕಲ್, ಸ್ಕೂಟರ್, ಜನ, ಸಾಕು ನಾಯಿ, ಟ್ಯಾಕ್ಸಿ, ವ್ಯಾಪಾರ, ಬೀದಿ ಬದಿಯ ಬಾರ್ ಅಂಡ್ ರೆಸ್ಟೋರೆಂಟ್ ಗಳು ಎಲ್ಲವೂ ಅಲ್ಲೇ. ಅವುಗಳ ವಿನ್ಯಾಸ, ಹೆಸರು, ವಿಶೇಷಗಳನ್ನು ನೋಡುತ್ತಾ ಸಾಗುವಾಗ ಒಂದು ಮನೆಯ ಗೋಡೆಯ ಮೇಲೆ LEON FELIPE - DE MADRID Al POETA ಅಂತಿತ್ತು.

ಅದರ ಬಗ್ಗೆ ಕುತೂಹಲಗೊಂಡು ಮನೆಯನ್ನೊಮ್ಮೆ ಮೇಲಿಂದ ಕೆಳಗೆ ನೋಡಿದೆ, ಸಂರಕ್ಷಿತ ಸ್ಮಾರಕದಂತಿತ್ತು. ಯಾರು ಈತ ಎಂದು ಪುನಃ ಗೂಗಲ್ ಮಾಡಿ ನೋಡುವಾಗ ತಿಳಿದದ್ದು, ಈತನೊಬ್ಬ ಸ್ಪೇನ್ ದೇಶದ ಆದರೆ ಸ್ಪ್ಯಾನಿಷ್ ಮಾತನಾಡುವ ಎಲ್ಲ ದೇಶಗಳಲ್ಲಿ ಪ್ರಖ್ಯಾತನಾಗಿರುವ ಕ್ರಾಂತಿಕಾರಿ ಕವಿ. ಸ್ಪೇನಿನ ವಸಾಹತು ಪದ್ಧತಿ, ರಾಜಾಳ್ವಿಕೆಯ ವಿರುದ್ಧ ಹೋರಾಡಿ, ಅಲ್ಲಿನ ಸರಕಾರದ ಕೆಂಗಣ್ಣಿಗೆ ಗುರಿಯಾಗಿ ಗಡಿಪಾರಾಗಿ, ಕಡೆಗೆ ಮೆಕ್ಸಿಕೋ ದೇಶದಲ್ಲಿ ಸತ್ತವನು ಎಂದು. ಮುಂದೊಂದು ದಿನ ಇವನ ಹೋರಾಟ, ಕಾವ್ಯ, ವಿಚಾರ, ನಿಲುವುಗಳು ಹಲವು ಕ್ರಾಂತಿಕಾರಿಗಳ ಹೋರಾಟಕ್ಕೆ ನಾಂದಿಯಾಯ್ತು. ಅದರಲ್ಲಿ ಅತ್ಯಂತ ಪ್ರಮುಖನಾದವನು “ ಚೆ ಗುವಾರ “. ‘ಚೇ’ ಬೊಲಿವಿಯಾದಲ್ಲಿ ಸೆಣೆಸಾಡುತ್ತಿದ್ದಾಗ, ಅಲ್ಲಿನ ಮಿಲಿಟರಿಯವರ ಕೈಗೆ ಸಿಕ್ಕು ಜೀವ ಕಳೆದುಕೊಳ್ಳಬೇಕಾಗಿ ಬಂದಾಗ, ಅವನ ಬ್ಯಾಗಿನಲ್ಲಿದ್ದ ಒಂದು ಪುಸ್ತಕದಲ್ಲಿ LEON FELIPE ಯ ಏಳು ಕವನಗಳೂ ಇದ್ದವಂತೆ! ಅಂಥ ಕವಿ ಅವತ್ತು ನನಗೂ ಕೊಂಚ ಸಿಕ್ಕಿದ್ದು “ ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೇ ಸತತಾ “ ಎನ್ನುವ ಹಾಗೆ.
ಸಿ. ವಿ. ರಾಮನ್ ಇಲ್ಲೇ ಇದ್ದಾರೆ!
ಬೆಂಗಳೂರಿನ IISC ಯಲ್ಲಿ ಬಹುಶ 2013ರಲ್ಲಿ, ಒಂದು ಕಾನ್ಫರೆನ್ಸ್‌ಗೆ ಹೋಗಿದ್ದಾಗ, ನಡುವೆ ಊಟದ ವೇಳೆಯಲ್ಲಿ ಒಂದು ದೊಡ್ಡ ಹಾಲೊಂದರ ಮೂಲೆಯಲ್ಲಿ, ಧೂಳು ಹಿಡಿದು ಬಿದ್ದಿರುವ ಟೇಬಲ್ ನೋಡಿದೆ. ಅಲ್ಲಿ ಜನ ಇರಲಿಲ್ಲ. ಊಟ ಹಾಕಿಸಿಕೊಂಡು ಅಲ್ಲೇ ಹೋಗಿ ತಿನ್ನೋಣವೆಂದು ಹೋದಾಗ ಆಶ್ಚರ್ಯ ಕಾದಿತ್ತು. ಆ ಟೇಬಲ್‌ನ ಕಡೆಯಲ್ಲಿ ಅಂಟಿಸಿದ್ದ ಒಂದು ಪ್ಲೇಟ್‌ನ ಮೇಲೆ ಹೀಗೆ ಬರೆದಿತ್ತು “ This desk was used by Sir C V Raman” !