ಓಬಿರಾಯನ ಕಾಲದ ಹೊಟೇಲ್!
ಇಷ್ಟು ಪುರಾತನವಾದ ಹೊಟೇಲ್ ಜಗತ್ತಿನಲ್ಲಿ ಇನ್ನೊಂದಿಲ್ಲ. ಒಂದೇ ಕುಟುಂಬದ ಐವತ್ತೆರಡು ತಲೆಮಾರು ಒಂದೇ ಹೊಟೇಲನ್ನು ನಡೆಸಿಕೊಂಡು ಬಂದಿರುವುದೂ ನಿಶಿಯಾಮಾ ಒನ್ಸೆನ್ ಕ್ಯೂಂಕನ್ ಮಾತ್ರವೇ! ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಈ ಹೊಟೇಲ್ ಅನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಲಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ದಾವಣಗೆರೆ ಬೆಣ್ಣೆ ದೋಸೆ ಎಂಬ ಬೋರ್ಡಿನ ಹೊಟೇಲ್‌ಗಳದ್ದು ಜೋರು ದರ್ಬಾರು. ಇಲ್ಲಿ ರಸ್ತೆಗೊಂದು ಆ ಹೆಸರಿನ ದೋಸೆ ಹೊಟೇಲ್ ಗಳು ಕಾಣಸಿಗುತ್ತವೆ. ಅದರೆ ಒರಿಜಿನಲ್ ಯಾವುದು? ಅಥೆಂಟಿಕ್ ಯಾವುದು ಎಂಬ ಪ್ರಶ್ನೆಗೆ ಸಲೀಸಾಗಿ ಉತ್ತರ ಸಿಗುವುದಿಲ್ಲ. ಪ್ರತಿಯೊಬ್ಬರೂ ತಾವೇ ಒರಿಜಿನಲ್ ಅಂದುಕೊಳ್ಳುತ್ತಾರೆ. ಮೊದಲೆಲ್ಲ ಹೊಟೇಲಿಗೆ ನ್ಯೂ ಎಂಬ ಪ್ರಿಫಿಕ್ಸ್ ಸೇರಿಸಿದರೆ ಬೆಲೆ ಬರುತ್ತಿತ್ತು. ಆದರೆ ಈಗ ಹಳೆಯದಕ್ಕೆ ಹೆಚ್ಚು ಮೌಲ್ಯ. ಆ ದಿಸೆಯಲ್ಲಿ ಇಲ್ಲಿನ ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್ ಗಳು ತಾವು ಹಳಬರು ಎಂದು ತೋರಿಸಿಕೊಳ್ಳುವ ಹಪಾಹಪಿಗೆ ಬಿದ್ದರು. ಒಂದರ ಬೆನ್ನಿಗೆ ಒಂದು ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್ ಗಳು ತಲೆ ಎತ್ತಿದಾಗ, ಒಬ್ಬ ಓಲ್ಡ್ ದಾವಣಗೆರೆ ಬೆಣ್ಣೆ ದೋಸೆ ಎಂಬ ಹೆಸರಿಟ್ಟ. ಇದನ್ನು ನೋಡಿ ಕಣ್ಣುಕೆಂಪು ಮಾಡಿಕೊಂಡ ಮತ್ತೊಬ್ಬ, ತನ್ನ ಬೋರ್ಡಿನಲ್ಲಿ ಎಡಿಟ್ ಮಾಡಿದ. ಓಲ್ಡೆಸ್ಟ್ ದಾ.ಬೆ,ದೋ ಅಂತ!
ಹೌದು ಈಗ ನಮ್ಮದು ಶತಮಾನದ ಲೆಗೆಸಿ ಇರುವ ಹೊಟೇಲ್ ಎಂದು ಹೇಳಿಕೊಳ್ಳುವುದು ಟ್ರೆಂಡ್. ಹಳೆಯದಕ್ಕೆ ಜನ ಇನ್ನಿಲ್ಲದಂತೆ ನುಗ್ಗುತ್ತಾರೆ. ವಿದ್ಯಾರ್ಥಿ ಭವನ, ಉಡುಪಿ ಕೃಷ್ಣ ಭವನ, ಎಂಟಿಆರ್, ಸಿಟಿಆರ್, ನ್ಯೂ ಮಾಡರ್ನ್ ಕೆಫೆ(!) ಇಂಥ ಹಳೆಯ ಹೊಟೇಲ್ ಗಳಲ್ಲಿ ಕಾಲಿಡಲೂ ಜಾಗವಿರುವುದಿಲ್ಲ. ಇವುಗಳ ಇತಿಹಾಸ ಗಮನಿಸಿ ಎಷ್ಟು ಹಳೆಯ ಹೊಟೇಲ್ ಗಳಿವು ಎಂದು ನೋಡಿದರೆ ಒಂದು ಶತಮಾನಕ್ಕಿಂತ ಕಡಿಮೆಯದ್ದೇ ಆಗಿರುತ್ತವೆ. ಹಾಗಾದರೆ ಜಗತ್ತಿನಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಹೊಟೇಲ್ ಯಾವುದು? ಅದು ಎಷ್ಟು ಹಳೆಯದಿರಬಹುದು? ನೂರು ವರ್ಷ? ಇನ್ನೂರು ವರ್ಷ? ಮುನ್ನೂರು ವರ್ಷ? ಉಹೂಂ... ನಿಮ್ಮ ಊಹೆಗೂ ಸಿಗುವುದಿಲ್ಲ ಈ ಹೊಟೇಲ್‌ನ ಕಥೆ!

ಆ ಹೊಟೇಲ್ ಹೆಸರು ನಿಶಿಯಾಮಾ ಒನ್ಸೆನ್ ಕ್ಯೂಂಕನ್. ಜಪಾನ್ ನ ಯಮನಾಶಿ ಪರ್ವತ ಶ್ರೇಣಿಗಳ ನಡುವೆ ಇರುವ ಕಣಿವೆಯೊಂದರಲ್ಲಿ ಇರುವ ಈ ಹೊಟೇಲ್ ಬರೋಬ್ಬರು 1300 ವರ್ಷ ಹಳೆಯದು. ಯೆಸ್.. ಸರಿಯಾಗಿಯೇ ಓದಿದ್ದೀರಿ. ಒಂದು ತಲೆಮಾರಿಗೆ ಇಪ್ಪತ್ತೈದು ವರ್ಷ ಅನ್ನುವುದೇ ಆದರೆ ಇದು ಐವತ್ತೆರಡು ತಲೆಮಾರು ಹಳೆಯ ಹೊಟೇಲ್. ಇದರ ಹೆಗ್ಗಳಿಕೆ ಏನೆಂದರೆ ಇದು ಇಂದಿಗೂ ಚಾಲ್ತಿಯಲ್ಲಿದೆ. ವ್ಯಾಪಾರ ನಡೆಯುತ್ತಿದೆ. ಎಂದಿಗೂ ಮುಚ್ಚಲ್ಪಟ್ಟಿಲ್ಲ. ಎಲ್ಲಕ್ಕೂ ಮಿಗಿಲಾಗಿ ಇದನ್ನು 2017ರ ತನಕ ಅದೇ ಕುಟುಂಬದ ಐವತ್ತೆರಡು ತಲೆಮಾರು ನಡೆಸಿಕೊಂಡು ಬಂದಿದೆ.
ಬಿಸಿನೀರ ಬುಗ್ಗೆಯೇ ವಿಶೇಷ!
ಕ್ರಿಸ್ತಶಕ 705, ಈ ’ನಿಶಿಯಾಮಾ ಒನ್ಸೆನ್ ಕ್ಯೂಂಕನ್’ ಹೊಟೇಲ್ ಪ್ರಾರಂಭವಾದ ವರ್ಷ. ಫ್ಯೂಜಿವಾರಾ ಮಹೊತೋ ಎಂಬಾತ ಈ ಹೊಟೇಲ್ ಪ್ರಾರಂಭಿಸಿದನು. ಈ ಹೊಟೇಲ್ ಒಂದು ಕಾಲದಲ್ಲಿ ಜಪಾನ್ ನ ಪ್ರಮುಖ ವ್ಯಕ್ತಿಗಳ ವಿಶ್ರಾಂತಿ ತಾಣವೂ ಆಗಿತ್ತು. ಬೌದ್ಧ ಸನ್ಯಾಸಿಗಳು, ವಿದ್ವಾಂಸರು, ಸಮುರೈ ಸೈನಿಕರು, ರಾಜಮನೆತನದವರು ಎಲ್ಲರೂ ಈ ಹೊಟೇಲ್ ನ ಖಾಯಂ ಗ್ರಾಹಕರಾಗಿದ್ದರು. ಜಪಾನ್ ನ ಖ್ಯಾತ ವ್ಯಕ್ತಿ ಟೊಕುಗವಾ ಇಯಾಸು ತನ್ನ ಆರೋಗ್ಯ ಸುಧಾರಣೆಗಾಗಿ ಈ ಹೊಟೇಲ್ ನ ಆಹಾರ ಆತಿಥ್ಯ ಪಡೆಯುತ್ತಿದ್ದ. ಇಲ್ಲಿ ಆಹಾರ ಮಾತ್ರವಲ್ಲ ವಾತಾವರಣ ಕೂಡ ವಿಶೇಷ ಆಕರ್ಷಣೆ. ಒನ್ಸೆನ್ ಬಿಸಿನೀರಿನ ಬುಗ್ಗೆಗಳು ಇಲ್ಲಿ ನಿಮಿಷಕ್ಕೆ ಸಾವಿರ ಲೀಟರ್ ನಂತೆ ಚಿಮ್ಮಿ ಹರಿಯುತ್ತವೆ. ಆ ಬಿಸಿನೀರಲ್ಲಿ ಔಷಧೀಯ ಗುಣವಿದೆ ಎಂದು ನಂಬಲಾಗಿದೆ. ಈ ನೀರನ್ನು ನೇರವಾಗಿ ಹೊಟೇಲ್ ನ ಸ್ನಾನ ಗೃಹಗಳಿಗೆ ಮತ್ತು ಈಜುಕೊಳಗಳಿಗೆ ಹರಿಸಲಾಗುತ್ತದೆ. ಹೊಟೇಲ್ ನ ಅತಿಥಿಗಳಿಗಾಗಿಯೇ ಇಲ್ಲಿ ಆರು ದೊಡ್ಡ ಇನ್ ಡೋರ್ ಮತ್ತು ಔಟ್ ಡೋರ್ ಈಜುಕೊಳಗಳಿವೆ.

ಗಿನ್ನಿಸ್ ದಾಖಲೆಗೆ ಪಾತ್ರ!
ಶೇಖ್ ಶೇಖ್... ಗಿನ್ನಿಸ್ ದಾಖಲೆಯೇ ಶೇಕ್!
ಇಷ್ಟು ಪುರಾತನವಾದ ಹೊಟೇಲ್ ಜಗತ್ತಿನಲ್ಲಿ ಇನ್ನೊಂದಿಲ್ಲ. ಒಂದೇ ಕುಟುಂಬದ ಐವತ್ತೆರಡು ತಲೆಮಾರು ಒಂದೇ ಹೊಟೇಲನ್ನು ನಡೆಸಿಕೊಂಡು ಬಂದಿರುವುದೂ ನಿಶಿಯಾಮಾ ಒನ್ಸೆನ್ ಕ್ಯೂಂಕನ್ ಮಾತ್ರವೇ! ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಈ ಹೊಟೇಲ್ ಅನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಲಾಗಿದೆ. ಜಪಾನ್ ನಂಥ ಭೂಕಂಪಸ್ನೇಹಿ ದೇಶದಲ್ಲಿ, ಜ್ವಾಲಾಮುಖಿಗಳ, ಅಣುಬಾಂಬ್ ಹೊಡೆತಕ್ಕೆ ಸಿಲುಕಿದ್ದ ನಾಡಲ್ಲಿ 1300 ವರ್ಷದಿಂದ ಒಂದು ಹೊಟೇಲ್ ಜೀವಂತವಾಗಿರುವುದು ವಿಸ್ಮಯವಲ್ಲವೇ? ಈ ಹೊಟೇಲ್ ಕೂಡ ಎರಡು ಬಾರಿ ಅಗ್ನಿ ದುರಂತಕ್ಕೆ, ಭೂಕುಸಿತಕ್ಕೆ ಮತ್ತು ಚಂಡಮಾರುತಕ್ಕೆ ಸಿಲುಕಿ ಬಚಾವಾಗಿದೆ. ಹಾಗಿದ್ದೂ ಮತ್ತೆ ಮೇಲೆದ್ದಿದೆ. ಅಂದಹಾಗೆ ಈ ಹೊಟೇಲ್ ಗಿನ್ನಿಸ್ ದಾಖಲೆ ಪುಸ್ತಕ ಸೇರಿದ್ದು 2011ರಲ್ಲಿ.
ಮೆನು ಏನು?
ಜಪಾನೀಸ್ ಸಾಂಪ್ರದಾಯಿಕ ವಾಸ್ತು ಶಿಲ್ಪದಲ್ಲಿ ನಿರ್ಮಿತವಾಗಿರುವ ಈ ಹೊಟೇಲ್ ಕಾಲಕಾಲಕ್ಕೆ ಸಣ್ಣಮಟ್ಟದಲ್ಲಿ ನವೀಕರಣಗೊಂಡಿದೆ. ಟಾಟಾಮಿ ಮ್ಯಾಟ್ ಫ್ಲೋರ್, ಮರದ ಗೋಡೆಗಳು ಮತ್ತು ಸ್ಲೈಡಿಂಗ್ ಬಾಗಿಲುಗಳು ಪುರಾತನ ಹೊಟೇಲ್ ನ ಫೀಲ್ ನೀಡುತ್ತವೆ. ಕೈಸೆಕಿ ಎಂಬ ಶೈಲಿಯ ಪಾಕಪದ್ಧತಿಯಲ್ಲಿ ಇಲ್ಲಿನ ಆಹಾರಗಳು ಸಿದ್ಧವಾಗುತ್ತವೆ. ಗಿಡಮೂಲಿಕೆಗಳು, ಹಣ್ಣುಗಳು ಮತ್ತು ಮಾಂಸವನ್ನು ಇಲ್ಲಿ ಆಹಾರ ತಯಾರಿಕೆಗೆ ಬಳಸುತ್ತಾರೆ. ಒಳ್ಳೆಯ ಹಿಲ್ ವ್ಯೂ, ರಿವರ್ ವ್ಯೂ ತಾಣಗಳಲ್ಲಿ ಕೂತು ಆಹಾರ ಸವಿಯಬಹುದಾಗಿದೆ.

ವಿಶೇಷತೆಗಳು:
1300 ವರ್ಷ ಪ್ರಾಚೀನ ರೆಸ್ಟೋರೆಂಟ್
52 ತಲೆಮಾರು ನಡೆಸಿದ ಹೊಟೇಲ್
ಗಿನ್ನಿಸ್ ದಾಖಲೆಗೆ ಭಾಜನ
ನೈಸರ್ಗಿಕ ಹಾಟ್ ಸ್ಪ್ರಿಂಗ್ ಪ್ರಮುಖ ಆಕರ್ಷಣೆ
ಪ್ರವೇಶದ್ವಾರದಲ್ಲಿ ಶೂ ಬಿಚ್ಚಿಟ್ಟು ಒಳಗೆ ಹೋಗಬೇಕು
ದಾರಿ ಹೇಗೆ?
ರೈಲು ಮಾರ್ಗದ ಮೂಲಕ ಜಪಾನ್‌ನ ರಾಜಧಾನಿ ಟೋಕಿಯೋದಿಂದ ಮಿನೋಬು ಎಂಬ ಜಾಗವನ್ನು ತಲುಪಬೇಕು. ಅಲ್ಲಿಂದ ಟ್ಯಾಕ್ಸಿ ಮೂಲಕ ಯಮನಾಶಿ ಕಣಿವೆಯತ್ತ ಸಾಗಬಹುದು. ಮಿನೋಬು ಎಂಬ ಸ್ಥಳದಿಂದ ಹೊಟೇಲ್‌ನವರ ಶಟಲ್ ಬಸ್ ಮತ್ತು ಟ್ಯಾಕ್ಸಿಗಳೂ ಲಭ್ಯವಿರುತ್ತವೆ.