Thursday, July 10, 2025
Thursday, July 10, 2025

ವಿಶ್ವದ ಅತೀ ಸುಂದರ ಗ್ರಾಮಗಳಿವು..! ಒಮ್ಮೆಯಾದರೂ ಭೇಟಿ ನೀಡಿ

ಮನಸ್ಸು ದೇಹ ಎರಡು ಜರ್ಜರಿತವಾದಾಗ ಲೈಫ್ ಅಲ್ಲಿ ಹೊಸ ಚೈತನ್ಯ ಮೂಡಿಸುವುದು ಪ್ರವಾಸ.. ಸರಿ ಇಲ್ಲದೇ ಇರುವ ಮೂಡ್ ಅನ್ನು, ಮನಸ್ಸನ್ನು ಬದಲಾಯಿಸುವ ಶಕ್ತಿ ಸುತ್ತಾಟಕ್ಕೆ ಇದೆ.. ಪ್ರವಾಸಿಗರನ್ನು ಸೆಳೆಯುವಂಥ ಸಾಕಷ್ಟು ಅದ್ಭುತ ತಾಣಗಳು ವಿಶ್ವದೆಲ್ಲೆಡೆ ಇದ್ದು, ಅವುಗಳಲ್ಲಿ ಕೆಲವೊಂದು ಸ್ಥಳಗಳು, ಹಳ್ಳಿ ಸೊಗಡು, ಹಚ್ಚ ಹಸಿರು ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯುತ್ತವೆ. ಇಂಥ ಸಾಕಷ್ಟು ಗ್ರಾಮಗಳು ನಮ್ಮಲ್ಲಿವೆ.

  • ಸುಶ್ಮಿತಾ ಜೈನ್‌

ಕಾಲ ಕಳೆದಂತೆ ಜೀವನ ಶೈಲಿ ಬದಲಾಗಿದೆ.. ಹಳ್ಳಿ, ಹಚ್ಚ ಹಸಿರು ಎಲ್ಲಾ ಮರೆಯಾಗಿ ಕಾಂಕ್ರೀಟಿಕರಣಗೊಂಡು ಬದುಕು ಯಂತ್ರದಂತೆ ಸಾಗುತ್ತಿದೆ... ಬೆಳಗಾದರೆ ಆಫೀಸ್, ಕಚೇರಿ, ಮಕ್ಕಳು ಸ್ಕೂಲ್ ಅಂತ ಓಡಿದ್ದರೆ, ಸಂಜೆ ಕೆಲಸದ ಒತ್ತಡದಿಂದ ಬಂದು ದೈಹಿಕ ಹಾಗೂ ಮಾನಸಿಕವಾಗಿ ಸುಸ್ತಾಗಿ ಹೋಗುತ್ತದೆ. ಈ ಎಲ್ಲಾ ಜಂಜಾಟಗಳಿಂದ ಎಲ್ಲಾದರೂ ದೂರ ಹೋಗಿ ಒಂದೆರೆಡು ದಿನ ಆರಾಮಾಗಿ ಇದ್ದು ಬಂದು ಬಿಡೋಣ ಅನ್ನಿಸುತ್ತದೆ.

ಹೌದು, ಮನಸ್ಸು, ದೇಹ ಎರಡು ಜರ್ಜರಿತವಾದಾಗ ಲೈಫ್ ಅಲ್ಲಿ ಹೊಸ ಚೈತನ್ಯ ಮೂಡಿಸುವುದು ಪ್ರವಾಸ.. ಸರಿ ಇಲ್ಲದೇ ಇರುವ ಮೂಡ್ ಅನ್ನು, ಮನಸ್ಸನ್ನು ಬದಲಾಯಿಸುವ ಶಕ್ತಿ ಸುತ್ತಾಟಕ್ಕಿದೆ.. ಪ್ರವಾಸಿಗರನ್ನು ಸೆಳೆಯುವಂಥ ಸಾಕಷ್ಟು ಅದ್ಭುತ ತಾಣಗಳು ವಿಶ್ವದೆಲ್ಲೆಡೆ ಇದ್ದು, ಅವುಗಳಲ್ಲಿ ಕೆಲವೊಂದು ಸ್ಥಳಗಳು ಹಳ್ಳಿ ಸೊಗಡು, ಹಚ್ಚ ಹಸಿರು ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯುತ್ತವೆ. ಇಂಥ ಸಾಕಷ್ಟು ಗ್ರಾಮಗಳ ಪರಿಚಯ ಇಲ್ಲಿದೆ.

ಹಾಲ್‌ಸ್ಟಾಟ್, ಆಸ್ಟ್ರಿಯಾ

ಆಸ್ಟ್ರಿಯಾ ದೇಶದ ಗ್ಮುಂಡೆನ್ ಜಿಲ್ಲೆಯಲ್ಲಿರುವ ಹಾಲ್‌ಸ್ಟಾಟ್ ರಮಣೀಯವಾದ ವಾತಾವರಣವನ್ನು ಹೊಂದಿದ್ದು, ಉಪ್ಪಿನ ಉತ್ಪಾದನೆಗೆ ಹೆಸರಾದ ಗ್ರಾಮವಿದು. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲೂ ಈ ನಗರ ಸ್ಥಾನ ಪಡೆದಿದ್ದು, ಸುಂದರ ಪರ್ವತ ಶ್ರೇಣಿ, ಸ್ವಚ್ಛ ಸರೋವರ ಹೀಗೆ ಸಾಕಷ್ಟು ನೈಸರ್ಗಿಕ ಸೊಬಗು ಅನ್ನು ತನ್ನ ಕೈಯಲ್ಲಿ ಈ ನಗರ ಹಿಡಿದಿಟ್ಟುಕೊಂಡಿದೆ. ಈ ಕಾರಣದಿಂದಲ್ಲೇ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದ್ದು, ಪ್ರವಾಸೋದ್ಯಮ ಇಲ್ಲಿನ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನೂ ಕೊಡುತ್ತಿದೆ. ಯುರೋಪ್ ಪ್ರವಾಸಕ್ಕೆಂದು ಹೋದ ಸಾಕಷ್ಟು ಮಂದಿ ತಪ್ಪದೇ ಇಲ್ಲಿಗೊಮ್ಮೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಜತೆಗೆ ಹಾಲ್‌ಸ್ಟಾಟ್ ಸರೋವರದಲ್ಲಿ ದೋಣಿ ವಿಹಾರ ಕೂಡಾ ಮಾಡಬೇಕು. ನಿಸರ್ಗದ ಚೆಲುವನ್ನು ಆರಾಧಿಸುವವರಿಗೆ ಇದು ಇಷ್ಟವಾಗುತ್ತದೆ.

hallstatt austria

ಕಲ್ಪಾ ಗ್ರಾಮ

ಇದು ಹಿಮಾಚಲ ಪ್ರದೇಶದ ಕಿನ್ನೌರ್‌ ಜಿಲ್ಲೆಯಲ್ಲಿದ್ದು, ಸೊಗಸಾದ ಕಲ್ಪಾ ಸುಮಾರು 2,960 ಮೀಟರ್ (9,711 ಅಡಿ) ಎತ್ತರದಲ್ಲಿರುವ ಒಂದು ಆಕರ್ಷಕ ಪ್ರವಾಸಿ ತಾಣವಾಗಿದೆ. ಈ ಗ್ರಾಮವು ಕೈಲಾಶ್ ಶ್ರೇಣಿ, ಹಸಿರು ಕಣಿವೆಗಳು ಮತ್ತು ಪ್ರಶಾಂತ ವಾತಾವರಣದ ವಿಸ್ಮಯಕಾರಿ ದೃಶ್ಯಗಳನ್ನು ಒದಗಿಸುತ್ತದೆ. ಇದು ಪ್ರಕೃತಿ ಉತ್ಸಾಹಿಗಳಿಗೆ, ಸಾಹಸಿಗರಿಗೆ ಮತ್ತು ಆಧ್ಯಾತ್ಮಿಕ ಅನ್ವೇಷಕರಿಗೆ ನೆಚ್ಚಿನ ತಾಣವಾಗಿದೆ.

ಗೀತೂರ್ನ್‌

ನೆದರ್‌ಲ್ಯಾಂಡ್‌ನಲ್ಲಿರುವ ಸುಂದರ ಗ್ರಾಮಗಳಲ್ಲಿ ಗೀತೂರ್ನ್‌ ಕೂಡಾ ಒಂದಾಗಿದ್ದು, ಈ ತಾಣ ಸೇತುವೆಗಳಿಗೆ ಫೇಮಸ್ ಎಂದರೆ ತಪ್ಪಗಲಾರದು. ಗೀತೂರ್ನ್‌ನಲ್ಲಿ 176 ಸೇತುವೆಗಳು ಇದ್ದು, ಅತೀ ಹೆಚ್ಚು ಬ್ರಿಡ್ಜ್ ಗಳು ಇರುವುದಕ್ಕೋ ಏನೋ ಇದನ್ನು ಸೇತುವೆಗಳಿಂದಲೇ ತುಂಬಿರುವ ಹಳ್ಳಿ ಎಂದರೂ ತಪ್ಪಾಗಲಾರದು. ಕಾಲುವೆಗಳ ತುಂಬಾ ಇಲ್ಲಿ ಸೇತುವೆಗಳು ಕಾಣಸಿಗುತ್ತವೆ. ಈ ಸುಂದರ ಹಳ್ಳಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿವೇ ವರ್ಷಪೂರ್ತಿ ಸಾಕಷ್ಟು ಪ್ರವಾಸಿಗರು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬರುತ್ತಾರೆ. ಗೀತೂರ್ನ್ ಪ್ರವಾಸಿಗರ ನೆಚ್ಚಿನ ತಾಣವಾಗಿ ಗಮನ ಸೆಳೆದಿದ್ದು, ಇದನ್ನು `ಡಚ್ ವೆನಿಸ್' ಅಥವಾ `ವೆನಿಸ್ ಆಫ್ ದಿ ನೆದರ್ಲ್ಯಾಂಡ್ಸ್' ಎಂದೂ ಕರೆಯಲಾಗುತ್ತದೆ.

ಓಯಾ

ಸುಂದರ ಗ್ರಾಮಗಳ ವಿಷಯಕ್ಕೆ ಬಂದಾಗ ಗ್ರೀಸ್‌ನ ಓಯಾ ಕೂಡಾ ಮುನ್ನಲೆಗೆ ಬರುತ್ತದೆ. ಗ್ರೀಸ್‌ನಲ್ಲಿರುವ ಮಂತ್ರಮುಗ್ಧಗೊಳಿಸುವ ತಾಣಗಳಲ್ಲಿ ಇದು ಕೂಡಾ ಒಂದಾಗಿದ್ದು, ಸ್ಯಾಂಟೊರಿನಿ ದ್ವೀಪದ ಉತ್ತರದ ತುದಿಯಲ್ಲಿ ಈ ಸುಂದರ ದ್ವೀಪವಿದೆ. ಶಾಂತಿಯುತ ಪರಿಸರ ಮತ್ತು ಸೂರ್ಯಾಸ್ತದ ಸುಂದರ ಕ್ಷಣದ ವೀಕ್ಷಣೆಗೆ ಈ ತಾಣ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಾಕೃತಿಕ ಸಿರಿವಂತಿಕೆ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ.

oya greece

ರೈನ್

ನಾರ್ವೆಯಲ್ಲಿ ಭೇಟಿ ನೀಡಬಹುದಾದಂತಹ ಪ್ರಶಾಂತ ಸ್ಥಳಗಳಲ್ಲಿ ರೈನ್ ಕೂಡಾ ಒಂದಾಗಿದ್ದು, ಉತ್ತರ ಲೋಫೊಟೆನ್ ದ್ವೀಪಸಮೂಹದ ಮೊಸ್ಕೆನೆಸೋಯಾ ದ್ವೀಪದಲ್ಲಿರುವ ಒಂದು ಹಳ್ಳಿ ಇದಾಗಿದೆ. ಕಯಾಕಿಂಗ್, ಬೈಕಿಂಗ್, ಕ್ಯಾಂಪಿಂಗ್ ಮತ್ತು ಸ್ಕೀಯಿಂಗ್‌ನಂತಹ ಸಾಕಷ್ಟು ಸಾಹಸಿ ಕ್ರೀಡೆಗಳಿಗೆ ಇಲ್ಲಿ ಅವಕಾಶವಿದೆ. ವರ್ಷಪೂರ್ತಿ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ನಾರ್ವೆಗೆ ಪ್ರವಾಸ ಹೋಗುವ ಪ್ಲ್ಯಾನ್‌ನಲ್ಲಿದ್ದರೆ ಇಲ್ಲಿಗೂ ಭೇಟಿ ನೀಡಬಹುದು.

ಕಡಮಕ್ಕುಡಿ

ಕಡಮಕ್ಕುಡಿ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿದ್ದು, ಈ ಗ್ರಾಮ ಹಿನ್ನೀರಿನಿಂದ ಆವೃತವಾಗಿದೆ. ಕೊಚ್ಚಿ ನಗರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಕಡಮಕ್ಕುಡಿ ಗ್ರಾಮದಲ್ಲಿ 14 ದ್ವೀಪಗಳಿದ್ದು, ಸುಮಧುರವಾದ ಪ್ರಕೃತಿ, ತೆಂಗಿನ ಮರ, ಗದ್ದೆ,ಮರ, ಸೇರಿದಂತೆ ಅತ್ಯಂತ ಸುಂದರ ಚಿತ್ರಣ ಇಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಪಕ್ಷಿಗಳಿದ್ದು, ಹಲವರು ಇಲ್ಲಿಗೆ ಪಕ್ಷಿ ವೀಕ್ಷಣೆಗೆ ಬರುತ್ತಾರೆ. ಹಲವು ವಲಸೆ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತದೆ. ಮಂಗಲಾವನಂ ಬರ್ಡ್ ಸ್ಯಾಂಚುರಿ ಕೂಡ ಇಲ್ಲಿದೆ. ಹಳ್ಳಿ ಜೀವನ ಇಲ್ಲಿ ಕಾಣಸಿಗುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!