• ಸಂತೋಷ್ ರಾವ್ ಪೆರ್ಮುಡ

ಮನುಷ್ಯರು ಅಥವಾ ಪ್ರಾಣಿಗಳು ಕಲ್ಲಾಗುವುದನ್ನು ನಾವು ಪುರಾಣದ ಕಥೆಗಳಲ್ಲಿ ಕೇಳಿರುತ್ತೇವೆ. ಆದರೆ, ಇದು ಪುರಾಣದ ಕಥೆಯಲ್ಲ, ಇಂಥ ಒಂದು ಘಟನೆ ಇಟಲಿಯ ಹಳೆಯ ಕಾಲದ ನಗರದಲ್ಲಿ ನಡೆದಿದೆ. ಅಲ್ಲಿ ವಾಸಿಸುತ್ತಿದ್ದ ಮನುಷ್ಯರಿಂದ ಹಿಡಿದು ಪ್ರಾಣಿಗಳವರೆಗೆ ಎಲ್ಲವೂ ಕಲ್ಲಾಗಿವೆ. ಅಂದು ಕಲ್ಲಾಗಿರುವ ಮನುಷ್ಯ ಮತ್ತು ಪ್ರಾಣಿಗಳ ದೇಹವನ್ನು ಇಟಲಿಯ ಈ ನಗರದಲ್ಲಿ ಇಂದೂ ನೋಡಬಹುದು. ಅವುಗಳನ್ನು ನೋಡಿದಾಗ ಅವುಗಳು ಕೇವಲ ಕಲ್ಲಿನ ಮೂರ್ತಿಗಳೆಂದು ಅನಿಸುತ್ತದೆ. ಆದರೆ, ಇದರ ಹಿಂದೆ ಒಂದು ಕರಾಳ ಘಟನೆಯೇ ಇದೆ.

ಇಟಲಿ ದೇಶದ ನೇಪಲ್ಸ್ ನಗರಕ್ಕೆ ಸಮೀಪದಲ್ಲಿ ಪೊಂಪೈ ಎಂಬ ಅತ್ಯಂತ ಪ್ರಾಚೀನ ನಗರವಿದೆ. ಅಲ್ಲಿ ವಸುವಿಯಸ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು 13-20 ಅಡಿ ಎತ್ತರದಷ್ಟು ಬೃಹತ್ ಗಾತ್ರದ ಲಾವಾ, ಬಿಸಿಯಾದ ಹೊಗೆ ಮತ್ತು ಬೂದಿ ಈ ಪಟ್ಟಣಕ್ಕೆ ಹರಿದು ಬಂದಿತು. ಪೊಂಪೈ ಮತ್ತು ಹರ್ಕ್ಯುಲೇನಿಯಮ್ ಪಟ್ಟಣಗಳು ನಾಶವಾದವು. ವೆಸುವಿಯಸ್ ಪರ್ವತದ ಜ್ವಾಲಾಮುಖಿ ಸೆಕೆಂಡ್‌ಗೆ 1.5 ಮಿಲಿಯನ್ ಟನ್‌ಗಳಷ್ಟು ಬಿಸಿಯಾದ ಕಲ್ಲುಗಳು, ವಿಷಾನಿಲಗಳ ಮೋಡ, ಕರಗಿದ ಬಂಡೆ, ಕಲ್ಲಿನ ಹುಡಿ ಮತ್ತು ಬಿಸಿ ಬೂದಿಯನ್ನು ಹೊರಹಾಕಿ ಸುಮಾರು ಒಂದು ಲಕ್ಷ ಪಟ್ಟು ಉಷ್ಣಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಬೂದಿ ಮತ್ತು ಲಾವಾ ಬಿಸಿಯಾಗಿದ್ದಾಗ ಕೆಂಪಾಗಿ ದ್ರವದಂತಿದ್ದು ತಣ್ಣಗಾಗಲು ಹಲವಾರು ವರ್ಷಗಳೇ ತೆಗೆದುಕೊಳ್ಳುತ್ತದೆ. ಈ ಬೂದಿಯು ಸಂಪೂರ್ಣ ತಣ್ಣಗಾದಾಗ ಕಪ್ಪಗಿನ ಬಂಡೆಕಲ್ಲಿನ ರೂಪವನ್ನು ಪಡೆದುಕೊಳ್ಳುತ್ತದೆ. ಅದೇ ರೀತಿ ಇಲ್ಲಿದ್ದ ಎಲ್ಲಾ ಪ್ರಾಣಿಗಳು, ಮನುಷ್ಯರು ಮತ್ತು ಸಂಪೂರ್ಣ ಪಟ್ಟಣವೇ ಕಲ್ಲಾಗಿ ಹೋಯಿತು.

ಇದನ್ನೂ ಓದಿ: ಬ್ರೂಷ್ : ಪ್ರೀತಿ ಮತ್ತು ಪರಂಪರೆಯ ಸಂಗಮ

ದುರಂತದ ದಿನಗಳು

ಸುಮಾರು 1940 ವರ್ಷಗಳ ಹಿಂದೆ ಬೇಸಗೆಯ ಮದ್ಯಾಹ್ನ, ದಕ್ಷಿಣ ಇಟಲಿಯ ಇಂದಿನ ಪೊಂಪೈ ನಗರದ ಸಮೀಪದ ವೆಸುವಿಯಸ್ ಜ್ವಾಲಾಮುಖಿ ಸ್ಫೋಟಿಸಿತು. ಇದರ ಸದ್ದಿಗೆ ಪೊಂಪೈನ ಮಾರುಕಟ್ಟೆಯಲ್ಲಿ ಖರೀದಿಸಲು ಕಿಕ್ಕಿರಿದು ಸೇರಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡುತ್ತಾ ಬೃಹತ್ ಜ್ವಾಲಾಮುಖಿ ಎದ್ದಿರುವ ವಸುವಿಯಸ್ ಪರ್ವತದೆಡೆಗೆ ನೋಡುತ್ತಿದ್ದರು. ಮಾರುಕಟ್ಟೆಯ ಸಾಮಾಗ್ರಿಗಳೆಲ್ಲವೂ ನೆಲಕಚ್ಚಿ, ಅಂಗಡಿಗಳೆಲ್ಲವೂ ನೆಲಸಮವಾಗಿದ್ದವು. ಜ್ಚಾಲಾಮುಖಿಯ ಬಿಸಿಯಾದ ದಟ್ಟ ಹೊಗೆ, ಲಾವಾ, ಬೂದಿ ಮತ್ತು ವಿಷಕಾರಿ ಅನಿಲ 20 ಮೈಲಿ ದೂರದವರೆಗೆ ಗಾಳಿಯಲ್ಲಿ ಸೇರಿಕೊಂಡು ಪಟ್ಟಣಕ್ಕೆ ಹರಡಲಾರಂಭಿಸಿತು. ಜ್ವಾಲಾಮುಖಿಯ ಬೂದಿ ಅಲ್ಲಿನ ಎಲ್ಲವನ್ನೂ ಕಪ್ಪು ಬಣ್ಣಕ್ಕೆ ತಿರುಗಿಸಿತ್ತು. ಈ ಸಮಯದಲ್ಲಿ ಜನರಿಗೆ ಸೂರ್ಯನನ್ನು ನೋಡಲೂ ಸಾಧ್ಯವಾಗುತ್ತಿರಲಿಲ್ಲ. ಕೆಲವು ನಿವಾಸಿಗಳು ನಗರ ಬಿಟ್ಟು ಓಡಿಹೋದರು. ಉಳಿದ ಒಂದಷ್ಟು ಮಂದಿ ತಮ್ಮ ಮನೆಗಳಲ್ಲೇ ಆಶ್ರಯ ಪಡೆದರು. ಮಧ್ಯರಾತ್ರಿಯ ವೇಳೆಗೆ ಲಾವಾ, ಬೂದಿ, ಕಲ್ಲು ಮತ್ತು ವಿಷಕಾರಿ ಅನಿಲಗಳು ಜ್ವಾಲಾಮುಖಿಯಿಂದ ಪೊಂಪೈ ಪಟ್ಟಣದ ಕಡೆಗೆ ನುಗ್ಗಿತು. ಈ ಉಲ್ಬಣವು ಅದರ ಹಾದಿಯಲ್ಲಿದ್ದ ಎಲ್ಲವನ್ನೂ ಸುಟ್ಟುಹಾಕಿತು. ಆರಂಭಿಕ ಸ್ಫೋಟದ ಸುಮಾರು 19 ಗಂಟೆಗಳ ನಂತರ ಬೆಳಗ್ಗೆ 7 ಗಂಟೆ ಸುಮಾರಿಗೆ ಪೊಂಪೈ ನಗರ ಮತ್ತು ಅಲ್ಲಿನ ಸಾಕಷ್ಟು ನಿವಾಸಿಗಳು ಲಾವಾದ ಬೂದಿಯ ಹೊದಿಕೆಯಲ್ಲಿ ಸಮಾಧಿಯಾದರು.

Untitled design (39)

ಉತ್ಖನನ ತೆರೆದಿಟ್ಟ ಸಂಗತಿಗಳು

1748ರಲ್ಲಿ ಈ ಪ್ರದೇಶ ಪತ್ತೆಯಾಗುವವರೆಗೂ ಪೊಂಪೈ ಕಳೆದೇ ಹೋಗಿತ್ತು. ಇಲ್ಲಿ ನಿರಂತರವಾಗಿ ನಡೆಯುತ್ತಿರುವ ಉತ್ಖನನಗಳಿಂದ ವಿಜ್ಞಾನಿಗಳಿಗೆ ಆ ಭಯಾನಕ ದಿನಗಳ ಘಟನೆಗಳನ್ನು ನಿಖರವಾಗಿ ಕಂಡುಹಿಡಿಯಲು ಸಾಧ್ಯವಾಯಿತು. 1748ರಲ್ಲಿ 3ನೆಯ ಚಾರ್ಲ್ಸ್‌ ಬೌರ್ಬೋನ್‌ನ ನೇತೃತ್ವದಲ್ಲಿ ಈ ಉತ್ಖನನ ಕಾರ್ಯ ನಡೆದಿತ್ತು. ಪೊಂಪೈ ಪಟ್ಟಣವು ಸುಮಾರು 170 ಎಕರೆ ವಿಸ್ತೀರ್ಣದಲ್ಲಿದೆ. ಇಲ್ಲಿರುವ ಅವಶೇಷಗಳ ಆಧಾರದ ಮೇಲೆ, ಈ ನಗರದಲ್ಲಿ ಸುಮಾರು 15000 ಜನಸಂಖ್ಯೆಯಿತ್ತು. ಪುರಾತತ್ವ ಇಲಾಖೆ ಉತ್ಖನನ ನಡೆಸಿದಾಗ ಕುದುರೆಯ ದೇಹ ಮತ್ತದರ ರಕ್ಷಾಕವಚ ಹಾಗೂ ಮನುಷ್ಯನ ಮೆದುಳನ್ನು ಗುರುತಿಸಿದೆ. ಅವೆಲ್ಲವೂ ಸಂಪೂರ್ಣವಾಗಿ ಕಲ್ಲಾಗಿದೆ.

ಎಲ್ಲವೂ ಕಲ್ಲಾಗಲು ಕಾರಣವೇನು?

ಪೊಂಪೈಗೆ ಹತ್ತಿರದ ವಸಾವಿಯಸ್ ಪರ್ವತದಲ್ಲಿ ಜ್ವಾಲಾಮುಖಿಯಿದ್ದು, ಇದಕ್ಕೆ ‘ಮೌಂಟ್ ವಾಸಾವಿಯಸ್’ ಎಂಬ ಹೆಸರಿದೆ. ಈ ಜ್ವಾಲಾಮುಖಿಯು ಇದ್ದಕ್ಕಿದ್ದಂತೆ ಸ್ಫೋಟಿಸಿತು. ಆ ಸಮಯದಲ್ಲಿ ಪೊಂಪೈನಲ್ಲಿ ವಾಸಿಸುತ್ತಿದ್ದ ಜನರು ನಗರದಿಂದ ಹೊರಗೆ ಓಡಿಹೋಗಲು ಪ್ರಯತ್ನಿಸಿದರೂ ಜ್ವಾಲಾಮುಖಿಯಿಂದ ಹರಿದು ಬಂದ ಲಾವಾ ಇಡೀ ನಗರವನ್ನೇ ಆವರಿಸಿಬಿಟ್ಟಿತ್ತು. ಆ ವೇಳೆಗೆ ಬಿಸಿಯಾದ ಲಾವಾದೊಳಗೆ ಸಿಲುಕಿದ ಜನರು ನರಳಾಡಿ, ನೋವಿನಿಂದ ಸಾವನ್ನಪ್ಪಿದ್ದಾರೆ. ನಂತರದಲ್ಲಿ ಇಲ್ಲಿನ ಲಾವಾರಸವು ನಿಧಾನವಾಗಿ ತಣ್ಣಗಾಗಿ ಘನರೂಪಕ್ಕೆ ಬಂದಾಗ, ಮಾನವ ದೇಹ ಮತ್ತು ಎಲ್ಲಾ ಜೀವಿಗಳ ದೇಹಗಳೂ ಲಾವಾದೊಳಗೆ ಸಿಲುಕಿ ಕಲ್ಲಾಗಿ ಹೋದವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.

Untitled design (36)

ಯುನೆಸ್ಕೋ ಸಂರಕ್ಷಿತ ಪ್ರದೇಶ

ಪೊಂಪೈ ಮಾತ್ರವಲ್ಲದೇ ಹರ್ಕ್ಯುಲೇನಿಯಮ್ ಎಂಬ ಸಣ್ಣ ಪಟ್ಟಣವೂ ಈ ಜ್ವಾಲಾಮುಖಿಯ ಪ್ರತಾಪಕ್ಕೆ ನಾಶವಾಯಿತು. ಸುಮಾರು 300 ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಅಲ್ಲೇ ಇದ್ದ ಬೋಟ್ ಹೌಸ್‌ಗಳಿಗೆ ಓಡಿದರು. ಆದರೆ, ಲಾವಾದ ಭೀಕರ ಶಾಖದಿಂದಾಗಿ ಅವರೂ ಬೋಟ್‌ನೊಳಗೇ ದುರಂತ ಸಾವೀಗೀಡಾದರೆಂದು ಹೇಳಲಾಗಿದೆ. ಅಂದಿನ ಕಾಲದಲ್ಲಿ ಲಾವಾದೊಳಗೆ ಜೀವಂತ ಸಮಾಧಿಯಾಗಿದ್ದವರ ಕಲ್ಲಿನ ಶವವನ್ನು 1980ರಲ್ಲಿ ಇಲ್ಲಿಂದ ತೆಗೆಯಲಾಯಿತು. ಈ ಅವಳಿ ಪಟ್ಟಣಗಳನ್ನು 1990ರಲ್ಲಿ ‘ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳ’ಗಳ ಪಟ್ಟಿಗೆ ಸೇರಿಸಲಾಗಿದೆ. ಪ್ರತಿವರ್ಷ ಇಲ್ಲಿಗೆ ಸುಮಾರು 2.5 ಮಿಲಿಯನ್ ಪ್ರವಾಸಿಗರು ಆಗಮಿಸುತ್ತಾರೆ.

ಶ್ರೀಮಂತ ಪಟ್ಟಣ

ಉತ್ಖನನಗಳ ಪ್ರಕಾರ ಇದು ಶ್ರೀಮಂತ ಪಟ್ಟಣವಾಗಿತ್ತು. ಇಲ್ಲಿ ಕಲ್ಲಾಗಿರುವ ಅನೇಕ ಕಟ್ಟಡಗಳು, ಐಷಾರಾಮಿ ಮನೆಗಳು, ಅದ್ದೂರಿ ಅಲಂಕಾರಗಳು, ಪೀಠೋಪಕರಣಗಳು, ಎತ್ತರದ ಪಾದಚಾರಿ ಮಾರ್ಗಗಳು, ಮೆಟ್ಟಿಲುಗಳು, ವಿಶ್ರಾಂತಿ ಗೃಹಗಳು, ಸಾರ್ವಜನಿಕ ಸ್ನಾನಗೃಹಗಳು, ಗ್ಲಾಡಿಯೇಟರ್‌ಗಳು, ಆಂಫಿಥಿಯೇಟರ್, ರಂಗ ಮಂದಿರ ಮತ್ತು ಕಲಾಕೃತಿಗಳಿಂದ ಇದು ಶ್ರೀಮಂತ ಪಟ್ಟವಾಗಿತ್ತು ಎಂದು ತಿಳಿದು ಬಂದಿದೆ.

1960ರ ನಂತರ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಉತ್ಖನನ ಕಾರ್ಯಗಳನ್ನು ನಿಷೇಧಿಸಲಾಯಿತು. ಉದ್ದೇಶಿತ ಮತ್ತು ಆದ್ಯತೆಯ ಪ್ರದೇಶಗಳಿಗೆ ಮಾತ್ರ ಉತ್ಖನನವನ್ನು ಸೀಮಿತಗೊಳಿಸಲಾಯಿತು. ಲ್ಯಾಟಿನ್ ಭಾಷೆಯಲ್ಲಿ ‘ಪೊಂಪೈ’ ಎಂದರೆ ‘ಅವನತಿ’ ಎಂಬ ಅರ್ಥವಿದೆ.

ಭೌಗೋಳಿಕ ಇತಿಹಾಸ

ಪೊಂಪೈ ಪಟ್ಟಣವಿದ್ದ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು 40 ಮೀಟರ್ ಎತ್ತರದ ಕರಾವಳಿಯ ಲಾವಾ ಪ್ರಸ್ಥಭೂಮಿಯಲ್ಲಿ ನಿರ್ಮಾಣಗೊಂಡಿದೆ. ಈ ಪಟ್ಟಣದಿಂದ 8 ಕಿಮೀ ದೂರದ ಮೌಂಟ್ ವಸಾವಿಯನ್ ಜ್ವಾಲಾಮುಖಿ ಸ್ಫೋಟಗೊಂಡಿತು. ಇದರಿಂದ ಇಲ್ಲಿನ ಸಮುದ್ರದ ದಕ್ಷಿಣ ಮತ್ತು ಪಶ್ಚಿಮಕ್ಕೆ ಹರಿದ ಲಾವಾ ಕರಗಿ ಕಲ್ಲಾಯಿತು. ಈ ಕಲ್ಲಿನ ಮೇಲೆ, ಭೂಕುಸಿತದಿಂದ ವಸಾವಿಯನ್ ಪರ್ವತದ ಮಣ್ಣು ಹರಡಿ ಕಾಲಾ ನಂತರದಲ್ಲಿ ನಾಗರೀಕತೆಯು ಬೆಳೆಯಿತು ಎಂಬ ಉಲ್ಲೇಖವಿದೆ. ಜ್ವಾಲಾಮುಖಿಯಿಂದ ನಿರ್ಮಾಣಗೊಂಡ ಪೊಂಪೈ ಪಟ್ಟಣ ಅದೇ ಜ್ವಾಲಾಮುಖಿಯ ಸ್ಪೋಟದಿಂದ ನಿರ್ನಾಮಗೊಂಡಿದ್ದು ದುರಂತ.

Untitled design (40)

ದಾರಿ ಹೇಗೆ?

ಪೊಂಪೈ, ಇಟಲಿಯ ನೇಪಲ್ಸ್ ನಗರದ ಹತ್ತಿರವಿರುವ ಪಟ್ಟಣ. ಪೊಂಪೈನಲ್ಲೇ ರೈಲು ನಿಲ್ದಾಣವಿದೆ. ಇಲ್ಲಿಗೆ ಕೇವಲ 7 ಕಿಮೀ ದೂರದಲ್ಲಿ ನೇಪಲ್ಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ನೇಪಲ್ಸ್‌ನಿಂದ ನೀಲಿ ಸಿಟಾ ಬಸ್‌ಗಳ ಮೂಲಕವೂ ಪೊಂಪೈಗೆ ತಲುಪಬಹುದು.

ಮಾಹಿತಿ ಪೆಟ್ಟಿಗೆ

ಪೊಂಪೈಯ ಈ ಉತ್ಖನನದ ಪ್ರದೇಶಕ್ಕೆ ವಯಸ್ಕರಿಗೆ 11 ಯೂರೋ 19-25 ವರ್ಷ ವಯಸ್ಸಿನವರಿಗೆ 5.5 ಯೂರೋ ಪ್ರವೇಶ ಶುಲ್ಕವಿದೆ. ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ.