• ಅನಂತ್‌ ಹರಿತ್ಸ

ಪ್ರಪಂಚದಲ್ಲಿಯೇ ವಿಶಾಲವಾದ ಪರ್ವತ ಶ್ರೇಣಿ- ದಕ್ಷಿಣ ಅಮೆರಿಕದ ಆಂಡೀಸ್‌. ಕ್ರಿ.ಶ 1200 -1572ರ ವರೆಗೆ ಈ ಪರ್ವತಗಳಲ್ಲಿ ಇಂಕನ್ನರು ರಾಜ್ಯಭಾರ ಮಾಡುತ್ತಿದ್ದರು. ಪೆರುವಿನ ಇಂಕಾ ಸಾಮ್ರಾಜ್ಯವು ಉತ್ತರದ ಈಕ್ವೆಡಾರ್‌ನಿಂದ ಪೂರ್ವದ ಕೊಲಂಬಿಯ, ಬೊಲಿವಿಯಾ, ಅರ್ಜೆಂಟೀನಾ, ದಕ್ಷಿಣದ ಚಿಲಿಯವರೆಗೆ ಹಬ್ಬಿತ್ತು. ಎಡಕ್ಕೆ ಪೆಸಿಫಿಕ್‌ ಮಹಾಸಾಗರವಿದ್ದರೆ ಬಲದಲ್ಲಿ ಅಮೆ ಜಾ಼ನ್‌ ಕಾಡು. ಆಗ ಅಲ್ಲಿನ ನಾಗರೀಕತೆ ಉತ್ಕೃಷ್ಟ ಮಟ್ಟದಲ್ಲಿತ್ತು ಎಂದು ಹೇಳಲಾಗುತ್ತದೆ. ಇಂಕಾ ರಾಜ ಅದರಲ್ಲೂ ಒಂಭತ್ತನೆಯ ಸಪಾ ಇಂಕಾ – ಪೆಚಕುಟಿಯ ಆಡಳಿತ, ಬಳಸುತಿದ್ದ ತಾಂತ್ರಿಕತೆಯನ್ನು ಈಗಲೂ ಕಟ್ಟಡಗಳ ಅವಶೇಷಗಳಲ್ಲಿ ಕಾಣಬಹುದು. ರಾಜಧಾನಿ ಕುಸ್ಕೋವಿಗೆ ಸಂಪರ್ಕಿಸುವಂತೆ ಪೆಸಿಫಿಕ್‌ ಮಹಾಸಾಗರಕ್ಕೆ ಅಂಟಿಕೊಂಡು, ಉತ್ತರದ ಈಕ್ವೆಡಾರ್‌ನಿಂದ ಚಿಲಿಯವರೆಗೂ ಹಾಗೂ ಆಂಡೀಸ್‌ ಪರ್ವತ ಶ್ರೇಣಿಯುದ್ದಕ್ಕೂ ನಲವತ್ತು ಸಾವಿರ ಕಿ.ಮೀಗಳಷ್ಟು ರಸ್ತೆ ನಿರ್ಮಾಣ ಮಾಡಿದ್ದರು. ಆಯಾಸ ಪರಿಹರಿಸಿಕೊಳ್ಳಲು ಮಧ್ಯೆ ಮಧ್ಯೆ ತಂಗುದಾಣಗಳನ್ನೂ ನಿರ್ಮಿಸಿದ್ದರು.

ಇದನ್ನೂ ಓದಿ: ಪೊಂಪೈ ಪಟ್ಟಣ ಕಲ್ಲಾದ ಕಥೆ

ನಿಗೂಢ ಪ್ರದೇಶ

ಮಾಚು ಪಿಚುವಿನಲ್ಲಿ ಎರೆಡು ವಲಯಗಳಿದ್ದು, ಹನನ್‌ ಎನ್ನುವುದು ಒಂದು ನಗರ ವಲಯವಾಗಿದ್ದರೆ ಹುರಿನ್‌ ಎನ್ನುವುದು ವ್ಯವಸಾಯದ ಪ್ರದೇಶ. ಬೆಳೆಗಳನ್ನು ಬೆಳೆಯಲು ಮೊನಚಾದ, ಪ್ರಪಾತದಂಥ ಬೆಟ್ಟವನ್ನು ಕಡಿದು ಅಟ್ಟಣಿಗೆಯನ್ನಾಗಿ ಮಾಡಿಕೊಂಡಿದ್ದರು. ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದರೂ ಅದಕ್ಕಾಗಿ ನೀರಿನ ವ್ಯವಸ್ಥೆಯನ್ನು ಇಂಕನ್ನರು ಮಾಡಿದ್ದರು.

Untitled design (44)

ನಗರ ವಲಯದಲ್ಲಿ ಎರಡು ಭಾಗಗಳಿದ್ದು, ಮೇಲಿನದರಲ್ಲಿ ಸ್ಮಾರಕಗಳು, ದೇವಾಲಯಗಳು, ರಾಜರ ವಸತಿ, ರಾಜರ ಸಮಾಧಿ ಇತ್ತು. ಕೆಳಗಿನ ವಲಯ ಕಾರ್ಮಿಕರ ವಸತಿಯಾಗಿತ್ತು. ಇವೆರಡರ ಮಧ್ಯದಲ್ಲಿ ಸಮಾರಂಭಗಳಿಗಾಗಿ, ಸೈನ್ಯದ ಜಮಾವಣೆಗಾಗಿ ತೊಂಭತ್ತು ಮೀಟರ್‌ ಉದ್ದ, ಇಪ್ಪತ್ತೈದು ಮೀಟರ್‌ ಅಗಲದ ಸಮತಟ್ಟಾದ ವೇದಿಕೆಯನ್ನು ನಿರ್ಮಿಸಿಕೊಂಡಿದ್ದರು. ನೂರಿಪ್ಪತ್ತೇಳು ಒಳಚರಂಡಿಯಿದ್ದು ಅದು ಒಂದು ಮುಖ್ಯ ಕಾಲುವೆಗೆ ಸಂಪರ್ಕಗೊಂಡಿದೆ. ರಾಜಗೃಹದೊಳಗೆ ಕೂಡ ಕುಡಿಯುವ ನೀರಿನ ಕಾರಂಜಿಯನ್ನು ಇಂಕನ್ನರು ರೂಪಿಸಿದ್ದು, ಅದನ್ನು ನೋಡಬಹುದು. ಅತ್ಯಂತ ಭೂಕಂಪನದ ಪ್ರದೇಶ ಇದಾಗಿದ್ದರೂ ಮಾಚು ಪಿಚುವಿನ ಸ್ಮಾರಕಗಳು ಹಾಳಾಗದೆ ನಿಂತಿರುವುದು ಇಂಕನ್ನರ ಕಲಾ ನೈಪುಣ್ಯತೆಯನ್ನು ತೋರಿಸುತ್ತದೆ. ಎಲ್ಲಿಯೂ ಕೂಡ ಗಾರೆಯನ್ನು ಬಳಸದೆ ಬೃಹತ್‌ ಕಲ್ಲುಗಳನ್ನು ಬಳಸಿ, ಎಲ್ಲಿಯೂ ಕಿಂಡಿ ತೋರದಂತೆ ನಿರ್ಮಿಸಿದ್ದರು. ಈ ಕಲ್ಲುಗಳನ್ನು ಎಲ್ಲಿಂದ ತಂದರು? ಹೇಗೆ ತಂದರು? ಎನ್ನುವುದು ಇಂದಿಗೂ ಪ್ರಶ್ನೆಯಾಗಿ ಉಳಿದಿದೆ. ಒಂದು ಅಚ್ಚರಿ ಎಂದರೆ ಇಂಕನ್ನರಿಗೆ ಗಾಲಿ ಹಾಗೂ ಕಬ್ಬಿಣದ ಬಳಕೆ ಗೊತ್ತಿರಲಿಲ್ಲ.

ಇಂಟಿವುಟಾನ – ಇದು ಮಾಚು ಪಿಚುವಿನ ಗರಿಷ್ಠ ಎತ್ತರದ ಪ್ರದೇಶ. ಸೂರ್ಯ ರಶ್ಮಿ ಇಲ್ಲಿರುವ ಶಿವಲಿಂಗದಂತಿರುವ ಕಲ್ಲಿನ ಮೇಲೆ ನೇರವಾಗಿ ಬೀಳುವಂತಿದ್ದು ಪಂಚಾಗವನ್ನು ಅರಿಯಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ.

ಟೊರೆಯಾನ್‌ - ಇದು ಅರ್ಧ ಚಂದ್ರಾಕೃತಿಯಲ್ಲಿರುವ ಸೂರ್ಯ ದೇವಸ್ಥಾನ. ಒಂಭತ್ತು ಗೂಡುಗಳು, ಎರೆಡು ಕಿಟಕಿಗಳನ್ನು ನಿರ್ಮಿಸಲಾಗಿದ್ದು, ಇದರ ಅಡಿಯಲ್ಲಿರುವ ಗುಹೆಯಲ್ಲಿ ರಾಜರ ಸಮಾಧಿಯಿದೆಯೆಂದು ನಂಬಲಾಗಿದೆ.

Untitled design (42)

ಮೂರು ಕಿಟಕಿಗಳ ದೇವಾಲಯ, ಪವಿತ್ರ ಕಲ್ಲಿನ ವೇದಿಕೆಯನ್ನು ಮೇಲಿನ ವಲಯ ಹನನ್‌ ನಲ್ಲಿ ಕಾಣಬಹುದು. ರಾಜ ಲಾಂಛನ ರಣಹದ್ದಿನ ರೆಕ್ಕೆಯಂತೆ ಕಾಣುವ ನೈಸರ್ಗಿಕವಾಗಿ ರೂಪಿತವಾಗಿರುವ ಕಾಂಡೋರ್‌ ದೇವಸ್ಥಾನವೂ ಇಲ್ಲಿದೆ. ಸುಮಾರು ಇನ್ನೂರು ಕಟ್ಟಡಗಳ ಅವಶೇಷಗಳನ್ನು ಇಲ್ಲಿ ನೋಡಬಹುದು. ಇಲ್ಲಿನ ಇತಿಹಾಸ ರೋಚಕವಾಗಿದ್ದು ಕೊಲಂಬಸ್‌ ಅಮೆರಿಕಕ್ಕೆ ಕಾಲಿಟ್ಟ ನಂತರದಲ್ಲಾದ ಸ್ಪಾನಿಶ್‌ ದಾಳಿಯಲ್ಲಿ ಇಂಕಾ ಸಾಮ್ರಾಜ್ಯ ಪತನಗೊಳ್ಳುತ್ತದೆ.‌ 1911ರವರೆಗೂ ಮಾಚು ಪಿಚು ಪ್ರಪಂಚದ ಗಮನಕ್ಕೆ ಬಂದಿರಲಿಲ್ಲ. ಉರುಬಾಂಬ ಜಿಲ್ಲೆಯಲ್ಲಿನ ಮಾಚು ಪಿಚು, ಇಂಕನ್ನರ ರಾಜಧಾನಿಯಾಗಿದ್ದ ಕುಸ್ಕೋ ನಗರದಿಂದ ಎಂಭತ್ತು ಕಿ.ಮಿ ದೂರದಲ್ಲಿದೆ.

ಎಚ್ಚರ ಮುಖ್ಯ

ಮಾಚು ಪಿಚುವಿಗೆ ಹೋಗಲು ಪೆರುವಿನ ರಾಜಧಾನಿ ಲಿಮಾದಿಂದ ಕುಸ್ಕೋನಗರಕ್ಕೆ ವಿಮಾನದಲ್ಲಿ ಬರಬಹುದು. ಕುಸ್ಕೋ ನಗರದ ಒಜಾಂತೆಯ್ತೆಂಬೊದಿಂದ ಅಥವಾ ಪೊರೋಯ್‌ ನಿಂದ ಪೆರು / ಇಂಕಾ ರೇಲಿನಲಿ ಅಗಸ್‌ ಕಲಿಯಂತೇಸ್‌ ಪಟ್ಟಣಕ್ಕೆ ಪಯಣಿಸ ಬೇಕಾಗುತ್ತದೆ. ಈ ರೈಲು ಪ್ರಯಾಣವು ರೋಚಕವಾಗಿದ್ದು ಆಂಡೀಸ್ ಪರ್ವತದ ಬುಡದಲ್ಲಿನ ಸುಂದರ ಪರಿಸರವನ್ನು ಪ್ರಯಾಣದಲ್ಲಿ ಆಸ್ವಾದಿಸಬಹುದು. ಅಗಸ್‌ ಕಲಿಯಂತೇಸ್‌ ಪಟ್ಟಣದಲ್ಲಿ ಹೊಟೇಲ್‌ಗಳಿಗೆ ಸಮಸ್ಯೆಯಿಲ್ಲ. ಅಲ್ಲಿಂದ ಮಾಚು ಪಿಚುಗೆ ಒಂಭತ್ತು ಕಿ.ಮೀಯ ಬಸ್‌ ಪ್ರಯಾಣ. ಸಮತಟ್ಟಾದ ಪ್ರದೇಶವಾದ್ದರಿಂದ ನೆಡೆದುಕೊಂಡು ಕೂಡ ಮಾಚು ಪಿಚುವಿನ ಮುಖ್ಯದ್ವಾರದವರೆಗೆ ಹೋಗಬಹುದು.

ಬಹುತೇಕ ಸಾಹಸಿ ಚಾರಣಿಗರು ಕುಸ್ಕೋವಿನಿಂದ ಮೊಲ್ಲೆಪಟಕ್ಕೆ ಹೋಗಿ ಅಲ್ಲಿಂದ ಅರವತ್ತು ಕಿ.ಮಿ ದೂರದ ಅಗಸ್‌ ಕಲಿಯಂತೇಸ್‌ಗೆ ಜೀವವನ್ನು ಪಣಕ್ಕಿಟ್ಟು ಸುಮಾರು ನಾಲ್ಕೂವರೆ ಸಾವಿರ ಮೀಟರ್‌ಗಳಷ್ಟು ಎತ್ತರಕ್ಕೆ ಏರಿ-ಇಳಿಯುತ್ತಾರೆ. ಎರೆಡು ಬೆಟ್ಟಗಳನ್ನು ಹತ್ತಿ ಇಳಿಯಬೇಕಾದ ಈ ನಾಲ್ಕರಿಂದ ಐದು ದಿನಗಳ ಕಾಲದ ಚಾರಣದಲ್ಲಿ ಅದ್ಭುತ ಅನುಭವವನ್ನು ಪಡೆಯ ಬಹುದು. ಇದನ್ನು ಇಂಕ ಟ್ರೈಲ್‌ ಎನ್ನುತ್ತಾರೆ. ಇದಲ್ಲದೆ ಕಡಿಮೆ ಅವಧಿಯ ಇನ್ನೂ ಎರೆಡು ಚಾರಣಗಳನ್ನು ಮಾಚು ಪಿಚುವಿಗೆ ಮಾಡಬಹುದು. ಚಾರಣದಲ್ಲಿ ಹೈಕಿಂಗ್‌ ಶೂಗಳು ಅವಶ್ಯಕ. ಅಲ್ಲದೇ ದೈಹಿಕವಾಗಿ ಗಟ್ಟಿಯಾಗಿರಬೇಕು. ಆರೋಗ್ಯವಾಗಿರಬೇಕು.

Untitled design (43)

ಪರ್ವತಾರೋಹಣದಲ್ಲಿ ಉಸಿರಾಟದ ಸಮಸ್ಯೆಯಾಗುವ ಕಾರಣ ಸಮುದ್ರ ಮಟ್ಟದಲ್ಲಿರುವ ಲಿಮಾದಿಂದ ಮೂರೂವರೆ ಸಾವಿರ ಮೀಟರ್‌ ಎತ್ತರದಲ್ಲಿರುವ ಕುಸ್ಕೋವಿನಲ್ಲಿನ ವಾತಾವರಣಕ್ಕೆ ಮೊದಲು ಒಗ್ಗಿಕೊಂಡ ನಂತರವಷ್ಟೇ ಮಾಚು ಪಿಚುವಿಗೆ ಪ್ರಯಾಣ ಕೈಗೊಳ್ಳುವುದು ಉತ್ತಮ.

ಮಾಚು ಪಿಚುವಿಗೆ ಹೋಗುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್‌ ಮಾಡಿಕೊಳ್ಳಬೇಕು. ಬುಕಿಂಗ್‌ ಸೀಮಿತವಾಗಿರುತ್ತದೆ. ಮಾಚು ಪಿಚುವಿನ ಎಲ್ಲ ಸ್ಮಾರಕಗಳನ್ನೂ ವೀಕ್ಷಿಸಲು ಅಥವಾ ಕೆಲವು ಮುಖ್ಯ ಜಾಗಗಳನ್ನಷ್ಟೇ ವೀಕ್ಷಿಸಲು ಅನುಗುಣವಾಗಿ ಟಿಕೇಟ್‌ ದೊರೆಯುತ್ತದೆ. ಚಾರಣದ ಮೂಲಕ ಬರುವುದಾದರೆ ಮೊದಲೇ ಪರವಾನಗಿಯನ್ನು ಪಡೆದಿರಬೇಕು. ತಾಣಕ್ಕೆ ಭೇಟಿಕೊಡುವಾಗ ಪ್ಲಾಸ್ಟಿಕ್‌, ಬ್ಯಾಕ್‌ ಪ್ಯಾಕ್‌, ಆಹಾರ ಪದಾರ್ಥ, ಟ್ರೈಪಾಡ್‌, ಕೊಡೆ ಮುಂತಾದವುಗಳನ್ನು ಒಯ್ಯುವಂತಿಲ್ಲ. ಮದ್ಯಪಾನ, ಧೂಮಪಾನ ನಿಷಿದ್ದ. ವಿಶ್ವ ಪರಂಪರೆ ತಾಣದ ಎಲ್ಲಾ ನಿಯಮಗಳೂ ಇಲ್ಲಿ ಅನ್ವಯಿಸುತ್ತದೆ. ಪ್ರವಾಸಕ್ಕೆ ಮೇ ಇಂದ ಅಕ್ಟೋಬರ್‌ ಯೋಗ್ಯ ಕಾಲ.

ಮಾಚು ಪಿಚು ಹೊರತಾಗಿ ಕುಸ್ಕೋ ಸಮೀಪದಲ್ಲಿ ಆಂಡೀಸ್‌ ಕಾಮನಬಿಲ್ಲಿನ ಪರ್ವತ, ಕೋರಿಕಾಂಚ ಸೂರ್ಯ ದೇವಾಲಯ, ಸಕ್ಸೇವುಹನ್‌ ಕೋಟೆ, ಮೋರೆ & ಮಾರಸ್‌, ತಂಬೋಮಾಚೆ, ಪವಿತ್ರ ಕಣಿವೆ ಇತ್ಯಾದಿ ಅನೇಕ ಪ್ರವಾಸಿ ತಾಣಗಳಿದ್ದು ವೀಕ್ಷಿಸಬಹುದು. ಪ್ರವಾಸ ಮಾಡುವ ಮೊದಲು ಇಂಕಾದ ಇತಿಹಾಸವನ್ನು ತಿಳಿದುಕೊಂಡು ಹೋದಲ್ಲಿ ಪ್ರವಾಸ ಅರ್ಥಪೂರ್ಣವಾಗಿರುತ್ತದೆ.

ಲೇಖಕರು: ಅಭಿಯಂತರ ಹಾಗು ಬರಹಗಾರ