ಎಚ್ಚರ... ಹೆಸರಲ್ಲೇ ಇದೆ ಲಾಸ್!
ಯಾವ್ಯಾವುದೋ ಸಂಗೀತ ಕಚೇರಿಗಳಲ್ಲಿ ತಲ್ಲೀನರಾಗಿದ್ದ ಮುಗ್ಧ ಜನರು ಯಾವುದೋ ತಲೆಕೆಟ್ಟವನ ಗುಂಡಿಗೆ ಬಲಿಯಾಗಿದ್ದರು. ಇದೊಂದು ಲಾಸ್ ವೇಗಾಸ್ ನ ಕಪ್ಪು ಇತಿಹಾಸ. ಈ ಘಟನೆಯ ನಂತರ ಲಾಸ್ ವೇಗಾಸ್ ಕೆಲವೊಂದು ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ಬದಲಾಗಿದೆ.
- ಬಾಲಚಂದ್ರ ಹೆಗಡೆ
ನಾನು ನೋಡಿದ ಎಂದೂ ನಿದ್ರಿಸದ ನಗರವೆಂದರೆ ಅದು ಅಮೆರಿಕ ದೇಶದ ನಾವಡಾ ರಾಜ್ಯದ ’ಲಾಸ್ ವೇಗಾಸ್’ ಎಂಬ ಮಾಯಾ ನಗರಿ. ಅಲ್ಲಿ ಹಗಲೂ ಒಂದೇ, ರಾತ್ರಿಯೂ ಒಂದೇ. ಹಗಲು ರಾತ್ರಿ ಸದಾ ಗಿಜಿಗುಡುವ ಸುಂದರ ನಗರ ಲಾಸ್ ವೇಗಾಸ್.
ಇದೊಂದು ಮರುಭೂಮಿಯಲ್ಲಿ ಹತ್ತೊಂಬತ್ತನೇ ಶತಮಾನದಲ್ಲಿ ನಿರ್ಮಾಣವಾದ ನಗರ. ಸ್ಪೇನಿನ ಅನ್ವೇಷಕರ ತಂಡ "ಅಂಟೋನಿಯೊ ಅರ್ಮಿಜೋ" ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿ ಕೆಲದಿನ ತಂಗುತ್ತಾರೆ. ತಂಡದ ಸದಸ್ಯನೊಬ್ಬ ಈ ಪ್ರದೇಶಕ್ಕೆ ದಿ ಮೇಡೋಸ್ ಎಂದು ನಾಮಕರಣ ಮಾಡುತ್ತಾನೆ. ಅದೇ ಇಂಗ್ಲಿಷಿಕರಣಗೊಂಡು ಈಗ "ಲಾಸ್ ವೇಗಾಸ್" ಆಗಿದೆ.

ಆಗಿನ ಅಮೆರಿಕ ಅಧ್ಯಕ್ಷರು ಹತ್ತಿರದ ಕೊಲೆರಾಡೋ ನದಿಗೆ ಯಾವಾಗ ಅಣೆಕಟ್ಟು ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡರೋ ಆಗ ಲಾಸ್ ವೇಗಾಸ್ ಅದೃಷ್ಟ ಖುಲಾಯಿಸಿತು. ಅಣೆಕಟ್ಟಿನ ನಿರ್ಮಾಣಕ್ಕೆ ಕಾರ್ಮಿಕರು,ಎಂಜಿನಿಯರ್ ಗಳ ತಂಡ ತಂಡವೇ ಲಾಸ್ ವೇಗಾಸ್ ಪ್ರದೇಶಕ್ಕೆ ಬರತೊಡಗಿತು. ಸುಮಾರು ಐದು ಸಾವಿರ ಇದ್ದ ಜನಸಂಖ್ಯೆ ಇಪ್ಪತ್ತೈದು ಸಾವಿರ ಆಗಲು ಹೆಚ್ಚು ದಿನ ಹಿಡಿಯಲಿಲ್ಲ. ಅಣೆಕಟ್ಟು ಕಟ್ಟಲು ಬಂದ ಬಹಳಷ್ಟು ಕಾರ್ಮಿಕರು, ಎಂಜಿನಿಯರುಗಳು ತಮ್ಮ ಕುಟುಂಬವನ್ನು ಕರೆತರದೆ ಇದ್ದಿದ್ದರಿಂದ ಮನ ರಂಜನೆಗೆ ಜಾಗ ಹುಡುಕುತ್ತಿದ್ದರು.
ಈ ಸಮಯದಲ್ಲಿ ಲಾಸ್ ವೇಗಾಸ್ ನಲ್ಲಿ ಹೊಸ ಹೊಸ ಮನರಂಜನೆಯ ತಾಣಗಳು ತಲೆ ಎತ್ತಿದವು. ಯಾವಾಗ ಕ್ಯಾಸಿನೋ ಎಂಬ ಜೂಜಾಟದ ಅಡ್ಡೆ ತಲೆ ಎತ್ತಲು ಪ್ರಾರಂಭವಾಯಿತೋ ವೇಗಾಸ್ ಕೇವಲ ಒಂದು ಚಿಕ್ಕ ನಗರವಾಗಿ ಉಳಿಯಲೇ ಇಲ್ಲ. ಜಗತ್ಪ್ರಸಿದ್ಧ ಹೊಟೇಲ್ ಗಳು, ಕ್ಯಾಸಿನೋಗಳು, ಗಲ್ಲಿ ಗಲ್ಲಿಗಳಲ್ಲಿ ತಲೆ ಎತ್ತಿದವು. ಅಲ್ಲಿಯ ಸರಕಾರ ಕ್ಯಾಸಿನೋವನ್ನು ಕಾನೂನುಬದ್ಧ ಮಾಡಿದನಂತರ ಎಲ್ಲ ಹೊಟೇಲ್ ಗಳಲ್ಲಿ ಕ್ಯಾಸಿನೋ ಪ್ರಾರಂಭವಾಗಿ, ಈಗ ಲಾಸ್ ವೇಗಾಸ್ ಜಗತ್ಪ್ರಸಿದ್ಧ ಜೂಜಿನ ಅಡ್ಡಿಯಾಗಿದೆ. ಬಾರ್ ಆಂಡ್ ರೆಸ್ಟೋರೆಂಟ್ ಮತ್ತು ವೇಶ್ಯಾ ಗ್ರಹಗಳು ಲೆಕ್ಕವಿಲ್ಲದಷ್ಟು ತಲೆ ಎತ್ತಿವೆ. ಹುಲ್ಲುಗಾವಲಿನ ಪ್ರದೇಶವೊಂದು ನಂಬಲಸಾಧ್ಯ ರೀತಿಯಲ್ಲಿ ಯಾವುದೇ ಅಂಕೆಯಿಲ್ಲದ ಮನರಂಜನೆಯ ತಾಣವಾಗಿ ಅದರ ಜೊತೆ ಭೂಗತ ಪಾತಕಿಗಳ ಅಡ್ಡೆಯೂ ಆಗಿ ಪರಿವರ್ತನೆ ಆಗಿದೆ.
ಸ್ಟೀಫನ್ ಪೆಡಾಕ ಎನ್ನುವ ಒಬ್ಬ ವ್ಯಕ್ತಿ 2017ರ ಒಂದುದಿನ ತಲೆಕೆಟ್ಟು ಯಾವುದೋ ಉನ್ಮಾದದಲ್ಲಿ ಶೂಟ್ ಔಟ್ ಮಾಡಿ ಸುಮಾರು 59 ಜನರ ಜೀವ ತೆಗೆದಿದ್ದಲ್ಲದೆ, 868 ಜನರು ಗಾಯಗೊಂಡರು. ಯಾವ್ಯಾವುದೋ ಸಂಗೀತ ಕಚೇರಿಗಳಲ್ಲಿ ತಲ್ಲೀನರಾಗಿದ್ದ ಮುಗ್ಧ ಜನರು ಯಾವುದೋ ತಲೆಕೆಟ್ಟವನ ಗುಂಡಿಗೆ ಬಲಿಯಾಗಿದ್ದರು. ಇದೊಂದು ಲಾಸ್ ವೇಗಾಸ್ ನ ಕಪ್ಪು ಇತಿಹಾಸ.

ಈ ಘಟನೆಯ ನಂತರ ಲಾಸ್ ವೇಗಾಸ್ ಕೆಲವೊಂದು ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ಬದಲಾಗಿದೆ. ಇಲ್ಲಿಯ ರಾತ್ರಿ ಎಂದರೆ ಜಗಮಗಿಸುವ ಬಣ್ಣಬಣ್ಣದ ಕಣ್ಣು ಕೋರೈಸುವ ದೀಪಗಳ ಬೆಳಕು, ಎತ್ತರೆತ್ತರಕ್ಕೆ ಚಿಮ್ಮುವ ಕಾರಂಜಿ, ಎಲ್ಲಿನೋಡಿದರಲ್ಲಿ ಜನ. ಸೂರ್ಯನೇ ಹೊಟ್ಟೆಕಿಚ್ಚು ಪಡುವ ಹಾಗೆ ಇಲ್ಲಿ ರಾತ್ರಿಯ ಬೆಳಕು ಇರುತ್ತದೆ.
ಲಾಸ್ ವೇಗಾಸ್ ನಲ್ಲಿ ಸುಮಾರು ಒಂಬೈನೂರಕ್ಕೂ ಹೆಚ್ಚು ಹೊಟೇಲ್ಸ್ ಇವೆ. ಎಂ.ಜಿ.ಎಂ ಗ್ರ್ಯಾಂಡ್, ಹೀಲ್ಟನ್, ಬೇಜಿಯೋ ಇನ್ನೂ ಅನೇಕ ಜಗತ್ಪ್ರಸಿದ್ಧ ಹೊಟೇಲ್ ಗಳಿವೆ. ಎಲ್ಲಾ ಹೊಟೇಲ್ ಗಳಲ್ಲಿ ಬೇಸ್ ಮೆಂಟ್ ಗಳಲ್ಲಿ ಕ್ಯಾಸಿನೋ ಹೆಚ್ಚು. ಊಟ ತಿಂಡಿಗೆ ನಮ್ಮ ದಕ್ಷಿಣ ಭಾರತದ ಅನೇಕ ರೆಸ್ಟೋರೆಂಟ್ ಗಳು ಇವೆ. ಲಾಸ್ ವೇಗಾಸ್ ನಗರದ ಸಮೀಪವೇ ಹೂವರ್ ಡ್ಯಾಮ್ ಇದೆ. ಇದು ತುಂಬಾ ದೊಡ್ಡ ಸಿಟಿ ಅಲ್ಲ. ಹತ್ತಿರದಲ್ಲಿಯೇ ಏರ್ ಪೋರ್ಟ್ ಇದೆ. ಪ್ಯಾರಿಸ್ ನ ಐಫೆಲ್ ಟವರ್, ವೆನಿಸ್ ನ ಕ್ಯಾನಲ್ ಪಕ್ಕದ ಮನೆಗಳು, ಕೃತ್ರಿಮ ಆಕಾಶ ಎಲ್ಲದರ ಪ್ರತಿಕೃತಿ ಇಲ್ಲಿ ನಿರ್ಮಿಸಿದ್ದಾರೆ.
ಹಗಲು ರಾತ್ರಿ ತಿರುಗಿದರೂ, ನೋಡಲು ಅನೇಕ ಸ್ಥಳಗಳಿವೆ. ಜಗಮಗಿಸುವ ಬೆಳಕಿನಲ್ಲಿ, ಎತ್ತರೆತ್ತರದ ಅನೇಕ ಸುಂದರ ಕಟ್ಟಡಗಳು, ಅಗಲವಾದ ಸ್ವಚ್ಛವಾದ ರಸ್ತೆ, ಬಣ್ಣ ಬಣ್ಣದ ಕಾರಂಜಿಗಳು, ಎಲ್ಲಿ ನೋಡಿದರಲ್ಲಿ ಹೊಸಹೊಸ ಕಾರುಗಳು, ಕ್ಯಾಸಿನೋ ಗಳಲ್ಲಿ ಆಟದಲ್ಲಿ ನಿರತ ಬೇರೆ ಬೇರೆ ದೇಶಗಳಿಂದ ಬಂದ ಜನರು, ಹೊಸ ಹೊಸ ರೀತಿಯ ಫ್ಯಾಷನೆಬಲ್ ಡ್ರೆಸ್ಸುಗಳಲ್ಲಿ ಕಂಗೊಳಿಸುವ ಅಮೆರಿಕ ಹಾಗೂ ಇತರ ದೇಶಗಳಿಂದ ಬಂದ ಪ್ರವಾಸಿಗರು, ಒಟ್ಟಿನಲ್ಲಿ ಲಾಸ್ ವೇಗಾಸ್ ಎಂದೂ ನಿದ್ರಿಸದ ನಗರ ಎಂಬ ಹಣೆಪಟ್ಟಿ ಹೊಂದಿರುವ ಭೂಲೋಕದ ಸ್ವರ್ಗ.