Wednesday, July 8, 2026
Wednesday, July 8, 2026

ಸಮುದ್ರ ಯಾನದ ಧ್ಯಾನ ಇದ್ದರೆ ಮೊಂಬಾಸಾ ಪ್ರವಾಸ ಮಾಡಿ

ಯುರೋಪಿಯನ್ ಅನ್ವೇಷಕರ ಭೇಟಿಗೂ ಮೊದಲು ಮೊಂಬಾಸಾ ದ್ವೀಪ ಹಿಂದೂ ಮಹಾಸಾಗರದ ಜಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಕೇಂದ್ರವಾಗಿತ್ತು. ಅರಬ್, ಪರ್ಷಿಯನ್ ಮತ್ತು ಭಾರತೀಯ ವ್ಯಾಪಾರಿಗಳು ವ್ಯಾಪಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಸಂವಹನ 'ಸ್ವಾಹಿಲಿ' ಸಂಸ್ಕೃತಿಗೆ ಜನ್ಮ ನೀಡಿತು. ಅದು ಇಂದಿಗೂ ಈ ಪ್ರದೇಶದಲ್ಲಿದೆ. 15ನೆಯ ಶತಮಾನದ ಪೂರ್ವಾರ್ಧದಲ್ಲಿ ಪೋರ್ಚುಗೀಸ್ ಅನ್ವೇಷಕರು ಪೂರ್ವ ಆಫ್ರಿಕಾದ ಕರಾವಳಿ ತಲುಪಿದ್ದರು. ಅವರಲ್ಲೇ ಒಬ್ಬ ಈ ವಾಸ್ಕೋ ಡ ಗಾಮಾ.

  • ಪ್ರಹ್ಲಾದ ಪರ್ವತಿ

ಹಿಂದೂ ಮಹಾಸಾಗರವನ್ನು ಅಪ್ಪಿಕೊಂಡು ನಿಂತಿರುವ ದ್ವೀಪ ಕೀನ್ಯಾದ ʼಮೊಂಬಾಸಾʼ. ಆಫ್ರಿಕದ ಕರಾವಳಿಯ ಸುಂದರ ತಾಣಗಳಿಂದ ಪ್ರಸಿದ್ಧವಾಗಿರುವ ಈ ದ್ವೀಪ ಸಮುದ್ರಯಾನದ ವಿಶಿಷ್ಟ ಪರಿಚಯ ನೀಡುತ್ತದೆ. ಮೊಂಬಾಸಾದಲ್ಲಿನ ತೈಲ ಸಂಸ್ಕರಣಾ ಘಟಕದ ಉತ್ಪಾದನಾ ಮುಖ್ಯಸ್ಥನಾಗಿರುವ ಅಳಿಯ ಅನಿಲ ಕುಲಕರ್ಣಿಯ ಎರಡು ವರುಷಗಳ ಸತತ ಆಹ್ವಾನ ಈ ವರ್ಷದಲ್ಲಿ ಸಾಕಾರಗೊಂಡಿತ್ತು. ಒಂದು ವಾರಗಳ ಕಾಲ ಆತನೊಂದಿಗೆ ಮೊಂಬಾಸಾ ದ್ವೀಪದಲ್ಲಿ ಸಂಚರಿಸಿದ್ದು ನನ್ನ ಜೀವಮಾನದ ಅವಿಸ್ಮರಣೀಯ ಅನುಭವ.

Untitled design (31)

ಆಫ್ರಿಕದ ಆಭರಣ

ಆಫ್ರಿಕದ ಪೂರ್ವ ಕರಾವಳಿಯಲ್ಲಿನ ಅತ್ಯಂತ ಆಕರ್ಷಕ ದ್ವೀಪವೇ ʼಮೊಂಬಾಸಾʼ. ಪೂರ್ವ ಆಫ್ರಿಕದ ಐತಿಹಾಸಿಕ ಆಭರಣವೆಂದು ಕರೆಯಿಸಿಕೊಂಡಿದೆ. ಇದು ಕೀನ್ಯಾದ ಎರಡನೆಯ ದೊಡ್ದ ನಗರ ಹಾಗೂ ಪ್ರಮುಖ ಬಂದರು ಸ್ಥಳ. ಶತಮಾನಗಳಿಂದ ಈ ದ್ವೀಪ ಕೀನ್ಯಾದ ನಾಗರೀಕತೆ, ಸಂಸ್ಕೃತಿ ಮತ್ತು ವಾಣಿಜ್ಯ ಪರಂಪರೆಯಿಂದ ಪ್ರಸಿದ್ಧವಾಗಿದೆ. ಇದು ಕೀನ್ಯಾದ ಆಗ್ನೇಯ ಕರಾವಳಿಯಲ್ಲಿದೆ. ಕಿರಿದಾದ ಕೊಲ್ಲಿಗಳು ಮತ್ತು ನೈಸರ್ಗಿಕ ಸೌಂದರ್ಯದ ಈ ತಾಣ 5.3 ಚದರ ಕಿಮೀ ವಿಸ್ತರಿಸಿದೆ. ಸಣ್ಣ ದ್ವೀಪವಾದರೂ ಇದರ ಭೌಗೋಳಿಕ ಮಹತ್ವ ದೊಡ್ಡದು. ಉತ್ತರಕ್ಕೆ ಟ್ಯೂಡರ್ ಕ್ರೀಕ್ ಮತ್ತು ದಕ್ಷಿಣಕ್ಕೆ ಕಿಲಿಂಡಿನಿ ಬಂದರು ಎಂಬ ನೈಸರ್ಗಿಕ ತೊರೆಗಳಿಂದ ಬೇರ್ಪಟ್ಟಿದೆ.

ಪ್ರಮುಖ ವ್ಯಾಪಾರಿ ಕೇಂದ್ರವಾಗಿದ್ದ ತಾಣ

ಈ ದ್ವೀಪ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಪಶ್ಚಿಮದಲ್ಲಿ ಮಕುಪಾ ಕಾಸ್ ವೇ, ಉತ್ತರದಲ್ಲಿ ನ್ಯಾಲಿ ಸೇತುವೆ ಹಾಗೂ ದಕ್ಷಿಣದಲ್ಲಿ ಲಿಕೋನಿ ಫೆರ್ರಿ ಸೇವೆಗಳು ದ್ವೀಪವನ್ನು ಭೂಭಾಗದೊಂದಿಗೆ ಸಂಪರ್ಕಿಸುತ್ತವೆ. ಇದರಿಂದಾಗಿ ಜನರು ಹಾಗೂ ಸರಕುಗಳ ಸಂಚಾರ ಸುಲಭವಾಗಿದೆ. ಈ ಬಂದರು ಶತಮಾನಗಳಿಂದ ಆಫ್ರಿಕನ್ ಒಳಾಂಗಣಕ್ಕೆ ಹೆಬ್ಬಾಗಿಲಾಗಿತ್ತು. 12ನೆಯ ಶತಮಾನದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಅರಬ್, ಪರ್ಷಿಯನ್ ಮತ್ತು ಭಾರತೀಯ ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡುತ್ತಿದ್ದರು. ಅರಬ್, ಪರ್ಷಿಯನ್, ಪೋರ್ಚುಗೀಸ್, ಒಮಾನ್ ಸುಲ್ತಾನರು ಇಲ್ಲಿ ಆಳ್ವಿಕೆ ನಡೆಸಿದ್ದಾರೆ. 19ನೆಯ ಶತಮಾನದಲ್ಲಿ ಮೊಂಬಾಸಾ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟು, ಬ್ರಿಟಿಷ್ ಈಸ್ಟ್ ಆಫ್ರಿಕಾ ಪ್ರೊಟೆಕ್ಟರೇಟಿನ ರಾಜಧಾನಿಯಾಗಿತ್ತು.

ನೀಲಿ-ಬಿಳಿ ಕಡಲಿನಿಂದಲೇ ಬಂದ ಹೆಸರು

ಈ ಪ್ರವಾಸಿ ನಗರದ ಕಟ್ಟಡಗಳೆಲ್ಲ ನೀಲಿ-ಬಿಳಿ ವರ್ಣಗಳಿಂದ ಕಂಗೊಳಿಸಲು ಇಲ್ಲಿನ ಕರಾವಳಿಯೇ ಕಾರಣ. 'ನೀಲಿ' ಬಣ್ಣ ಈ ದ್ವೀಪವನ್ನು ಸುತ್ತಿಕೊಂಡಿರುವ ಹಿಂದೂ ಮಹಾಸಾಗರವನ್ನು, ʼಬಿಳಿʼ ಬಣ್ಣ ಕಡಲಿನ ಬಿಳಿ ಮರಳನ್ನು ಸಂಕೇತಿಸುತ್ತದೆ. ಹಾಗಾಗಿ ಈ ನಗರವನ್ನು ನೀಲಿ- ಬಿಳಿ ನಗರವೆಂದೇ ಕರೆಯಲಾಗುತ್ತದೆ.

ಯುದ್ಧಗಳ ಸಾಕ್ಷಿಯಂತಿದೆ ಜೀಸಸ್‌ ಪೋರ್ಟ್‌

ಸಮುದ್ರ ತಟದಲ್ಲಿನ 'ಪೋರ್ಟ್ ಜೀಸಸ್' ಕೋಟೆ ಪೋರ್ಚುಗೀಸ್ ಮಿಲಿಟರಿ ವಾಸ್ತುಶಿಲ್ಪದ ವಿಶ್ವದ ಅತ್ಯಂತ ಉತ್ತಮ ಉದಾಹರಣೆಗಳಲ್ಲಿ ಒಂದು. ಮೇಲಿಂದ ನೋಡಿದರೆ ಮನುಷ್ಯನ ಆಕಾರದಲ್ಲಿ ಕಾಣುತ್ತದೆ. 1593-1595ರ ನಡುವೆ ನಿರ್ಮಿಸಲಾಗಿದೆ. ಪೋರ್ಚುಗೀಸ್ ಮತ್ತು ಒಮಾನ್ ಸುಲ್ತಾನರ ಮಧ್ಯೆ ಜರುಗಿದ ಭೀಕರ ಯುದ್ಧಗಳಿಗೆ ಈ ಕೋಟೆ ಸಾಕ್ಷಿಯಾಗಿದೆ. ಸ್ವಾಹಿಲಿ ಭಾಷೆಯಲ್ಲಿ ʼಕಿಸಿವಾ ಚಾ ಮ್ವಿತಾʼ ಅಂದರೆ ʼಯುದ್ಧದ ದ್ವೀಪʼ ಎಂದೂ ಇದನ್ನು ಹೆಸರಿಸಲಾಗಿದೆ. ಪೂರ್ವ ಆಫ್ರಿಕಾದ ವ್ಯಾಪಾರ ನಿಯಂತ್ರಣಕ್ಕಾಗಿ ನಡೆದ ಅರಸೊತ್ತಿಗೆಗಳ ಹೋರಾಟದ ಐತಿಹಾಸಿಕ ಹೆಗ್ಗುರುತಾಗಿರುವ ಈ ಕೋಟೆ, ಬ್ರಿಟಿಷರ ಜೈಲಾಗಿಯೂ ಕಾರ್ಯನಿರ್ವಹಿಸಿದೆ. ಇದು ಇಂದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ. ಇಲ್ಲಿ ಪ್ರಾಚೀನ ಫಿರಂಗಿಗಳು ಮೂಸಿಯಂ ಮತ್ತು ಕಲಾಕೃತಿಗಳ ಗ್ಯಾಲರಿ ಇದೆ.

ಸ್ನಾರ್ಕೆಲಿಂಗ್ ಸಾಹಸ

ಮೊಂಬಾಸ ದ್ವೀಪದ ಮರೆಯಲಾಗದ ಅನುಭವ ಸ್ನಾರ್ಕೆಲಿಂಗ್. ನಾವು ಗಾಜಿನ ತಳವಿರುವ ದೋಣಿಯಲ್ಲಿ ಪಯಣಿಸುತ್ತ ಈ ಸಾಹಸದ ಪಾಲುದಾರರಾದೆವು. ಈಜಿನಲ್ಲಿ ನಾನು ಪರಿಣಿತನಲ್ಲ. ಆದರೂ ಬೋಟಮನ್ ಕ್ರಿಸ್ಟಿನೋ ನಮಗೆ ಧೈರ್ಯ ತುಂಬಿ ಮುಖಕ್ಕೆ ಮಾಸ್ಕ್, ಸ್ನೋರಕೆಲ್ ಹಾಗೂ ನಡುವಿಗೆ ಟ್ಯೂಬ್ ಹಾಕಿ, ಹಗ್ಗ ಕಟ್ಟಿ ಸಮುದ್ರಕ್ಕೆ ಇಳಿಸಿಬಿಟ್ಟ. ಆತನೂ ನನ್ನೊಂದಿಗಿದ್ದ. ಹಾಗಾಗಿ ಭಯವಾಗಲಿಲ್ಲ. ಸಮುದ್ರೊಳಗಿನ ಅಲೌಕಿಕ ಜಗತ್ತು ಅನಾವರಣಗೊಂಡಿತ್ತು. ಬಣ್ಣ ಬಣ್ಣದ ಮೀನುಗಳು ಮೈಗಂಟಿಕೊಂಡು ಚಲಿಸುತ್ತಿದ್ದಂತೆ ಸಮುದ್ರ ಸಸ್ಯಗಳು, ವಿವಿಧ ಜಲಚರಗಳು ಜೀವಂತ ಚಿತ್ರಗಳಂತೆ ಕಣ್ಮನ ಸೆಳೆದವು. ನೀರಲ್ಲಿ ಹುದುಗಿದ ಹವಳದ ದಿಬ್ಬಗಳನ್ನು ಕಂಡಾಗ ಪ್ರಕೃತಿಯ ಕಲಾತ್ಮಕ ಸೌಂದರ್ಯದ ಪರಿಚಯವಾಗಿತ್ತು. ಅಲೆಗಳ ಜತೆಗಿನ ಅಲ್ಲಿಯ ಅಲೆದಾಟ ಮತ್ತಷ್ಟು ಉತ್ಸಾಹ ತುಂಬಿತ್ತು. ಅನೇಕ ವಿದೇಶಿಗರು ಸ್ನಾರ್ಕೆಲಿಂಗ್, ಸ್ಕೂಬಾ ಡೈವಿಂಗ್, ಜೆಟ್ ಸ್ಕೀ, ಪ್ಯಾರಾಸೈಲಿಂಗ್ ಮುಂತಾದ ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಂಡಿದ್ದನ್ನು ಕಂಡು ಸಮುದ್ರವೇ ಆಟದ ಮೈದಾನದಂತೆ ಭಾಸವಾಗಿತ್ತು.

Untitled design (33)

ಓಲ್ಡ್ ಟೌನ್

ಮೊಂಬಾಸದ ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಪರಂಪರೆ ತಿಳಿಯಲು ಓಲ್ಡ್‌ ಟೌನ್‌ ನೋಡಲೇಬೇಕು. ಕಿರಿದಾದ ಬೀದಿಗಳು, ಸದಾ ಜನ ಜಂಗುಳಿ, ರಸ್ತೆಗೆ ಅಂಟಿಕೊಂಡಿರುವ ಮನೆಗಳು, ಅವುಗಳಿಗೆ ಅಳವಡಿಸಿದ ಕೆತ್ತಿದ ಮರದ ದೊಡ್ಡ ಸ್ವಾಹಿಲಿ ಬಾಗಿಲುಗಳು, ಮರದ ಬಾಲ್ಕನಿಗಳಲ್ಲಿ ಅರಬ್, ಪರ್ಷಿಯನ್ ಹಾಗೂ ಸ್ವಾಹಿಲಿ ವಾಸ್ತುಶಿಲ್ಪದ ಸೌಂದರ್ಯವನ್ನು ನೋಡುತ್ತಾ ಸಾಗಿದಾಗ ಅನೇಕ ನಾಗರೀಕತೆಗಳ ಇತಿಹಾಸ ಬಿಚ್ಚಿಕೊಳ್ಳುತ್ತದೆ. ಮಸೀದಿ- ಮಂದಿರ- ಚರ್ಚುಗಳು ಒಂದರ ಸಮೀಪದಲ್ಲೊಂದು ಇರುವುದು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಬಳುವಳಿಯಂತೆ ಕಂಡಿತು. ಸ್ಥಳೀಯ ಮಸಾಲೆ ಮಾರುಕಟ್ಟೆ, ಕರಕುಶಲ ವಸ್ತುಗಳು, 'ಧೌ' ಎಂದು ಕರೆಯುವ ಸಣ್ಣ ದೋಣಿಗಳು ದ್ವೀಪದ ಇತಿಹಾಸ ಹಾಗೂ ಸಂಸ್ಕೃತಿಯ ಸಂಕೇತದಂತಿವೆ.

Untitled design (30)

ಆನೆ ದಂತಗಳ ಕಮಾನು

ಮೊಂಬಾಸಾದ ಮುಖ್ಯ ರಸ್ತೆಯಲ್ಲಿನ ಬೃಹತ್‌ ಆನೆಯ ದಂತದ ಸ್ಮಾರಕ ಪ್ರಮುಖ ಪ್ರವಾಸಿ ತಾಣವಾಗಿದೆ. ದೈತ್ಯ ಆನೆಯ ದಂತಗಳು ಕಮಾನು ರೂಪದಲ್ಲಿ ದ್ವಿ ಪಥದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಸ್ಮಾರಕವನ್ನು ಕ್ವೀನ್ ಎಲಿಝಾಬೇತ್-II ಅವರು ಮೊಂಬಾಸಾ ನಗರಕ್ಕೆ ಭೇಟಿ ನೀಡಿದ ಸಂಸ್ಮರಣೆಗಾಗಿ 1952ರಲ್ಲಿ ನಿರ್ಮಿಸಲಾಗಿದೆ. ಆರಂಭದಲ್ಲಿ ಈ ದಂತಗಳನ್ನು ಕ್ಯಾನ್ವಾಸ್ ಬಳಸಿ ತಾತ್ಕಾಲಿಕವಾಗಿ ರಚಿಸಲಾಗಿತ್ತಂತೆ. ನಂತರ ಅಲ್ಯೂಮಿನಿಯಂ ಬಳಸಿ ಶಾಶ್ವತವಾಗಿ ನಿರ್ಮಿಸಲಾಗಿದೆ. ನಾಲ್ಕು ದಂತಗಳನ್ನು ಮುಖ್ಯ ರಸ್ತೆಯ ಮೇಲೆ ಪರಸ್ಪರ ಎದುರು ಬದರು ನಿರ್ಮಿಸಿರುವದರಿಂದ ಅವು ಮೇಲಿನಿಂದ ಇಂಗ್ಲಿಷ್ನ 'ಎಮ್' ಅಕಾರದಲ್ಲಿ 'ಮೊಂಬಾಸಾ' ನಗರದ ಹೆಸರನ್ನು ಸೂಚಿಸುತ್ತವೆ. ಇಲ್ಲಿಯ ಆನೆಗಳು ಆಫ್ರಿಕಾದ ಪ್ರಕೃತಿ ಸಂಪತ್ತಿನ ಪ್ರತೀಕ. ಇತಿಹಾಸದಲ್ಲಿ ಪೂರ್ವ ಆಫ್ರಿಕಾದ ಕರಾವಳಿ ಮೂಲಕ ನಡೆದ ದಂತ ವ್ಯಾಪಾರವನ್ನೂ ಈ ಸ್ಮಾರಕ ಸಂಕೇತಿಸುತ್ತದೆ. ಇದು ಫೊಟೋಶೂಟ್‌ಗೆ ಜನಪ್ರಿಯ ತಾಣ.

ಸಮುದ್ರ ಜಾಲಕ್ಕೆ ದ್ವಾರ

ಯುರೋಪಿಯನ್ ಅನ್ವೇಷಕರ ಬೇಟಿಗೂ ಮೊದಲು ಮೊಂಬಾಸಾ ದ್ವೀಪ ಹಿಂದೂ ಮಹಾಸಾಗರದ ಜಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಕೇಂದ್ರವಾಗಿತ್ತು. ಅರಬ್, ಪರ್ಷಿಯನ್ ಮತ್ತು ಭಾರತೀಯ ವ್ಯಾಪಾರಿಗಳು ವ್ಯಾಪಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಈ ಸಂವಹನ 'ಸ್ವಾಹಿಲಿ' ಸಂಸ್ಕೃತಿಗೆ ಜನ್ಮ ನೀಡಿತು. ಅದು ಇಂದಿಗೂ ಈ ಪ್ರದೇಶದಲ್ಲಿದೆ. 15ನೆಯ ಶತಮಾನದ ಪೂರ್ವಾರ್ಧದಲ್ಲಿ ಪೋರ್ಚುಗೀಸ್ ಅನ್ವೇಷಕರು ಪೂರ್ವ ಆಫ್ರಿಕಾದ ಕರಾವಳಿ ತಲುಪಿದ್ದರು. ಅವರಲ್ಲೇ ಒಬ್ಬ ಈ ವಾಸ್ಕೋ ಡ ಗಾಮಾ.

ಇದನ್ನೂ ಓದಿ: ನಾನು ಕಂಡ ಕಳೆದು ಹೋದ ಕರ್ನಾಟಕದ ಸುಂದರ ಕೋಟೆ – ಬೇಕಲ

ಮೊಂಬಾಸಾ ಬಂದರು

ಮೊಂಬಾಸಾ ಬಂದರು ಆಫ್ರಿಕಾದ ಅತ್ಯಂತ ಚಟುವಟಿಕೆಯ ಬಂದರುಗಳಲ್ಲೊಂದು. ಕೀನ್ಯಾ, ಉಗಾಂಡಾ, ರುವಾಂಡಾ, ದಕ್ಷಿಣ ಸುಡಾನ್, ಟಾಂಜೇನಿಯಾ ಮುಂತಾದ ದೇಶಗಳಿಗೂ ಇದು ವ್ಯಾಪಾರದ ದ್ವಾರವಾಗಿದೆ. ಕೃಷಿ ಉತ್ಪನ್ನಗಳು, ಹತ್ತಿ, ಸಿಸಲ್, ತೆಂಗು ಹಾಗೂ ಹಣ್ಣುಗಳು ರಫ್ತಿಗಾಗಿ ಹಡಗುಕಟ್ಟೆಯನ್ನು ಆವರಿಸಿದ್ದು ಕಂಡಾಗ ಬಂದರಿನ ರಫ್ತು ಅಗಾಧತೆ ಅರಿವಾಗುತ್ತದೆ. ಆಫ್ರಿಕಾ ಖಂಡವನ್ನು ಜಗತ್ತಿನ ಸಮುದ್ರ ಜಾಲದೊಂದಿಗೆ ಸಂಪರ್ಕಿಸುವ ಈ ಬಂದರಿನಿಂದಾಗಿ ಮೊಂಬಾಸದಲ್ಲಿ ಹಡಗು ದುರಸ್ತಿ, ತೈಲ ಶುದ್ಧೀಕರಣ, ರಸಗೊಬ್ಬರ ತಯಾರಿ, ಸಿಮೆಂಟ್ ಉತ್ಪಾದನೆಯಂಥ ಕೈಗಾರಿಕೆಗಳು ಅಭಿವೃಧ್ಧಿಗೊಂಡಿವೆ.

ಬಿಳಿಯಾದ ಮರಳು- ತಿಳಿನೀಲಿ ಕಡಲು

ಮೊಂಬಾಸಾದ ಉತ್ತರ ಕರಾವಳಿಯ ನ್ಯಾಲಿ ಬೀಚ್, ಬಾಂಬೂರಿ ಬೀಚ್, ಶ್ಯಾಂಝು ಬೀಚುಗಳಲ್ಲದೆ ಮೊಂಬಾಸಾದಿಂದ ಲಿಕೋನಿ ಫೇರ್ರಿ ಮೂಲಕ ತಲುಪಿದ ದಕ್ಷಿಣ ತೀರದ ಡಿಯಾನಿ ಬೀಚ್ ಸುತ್ತಾಟ ಹಾಗೂ ಅಲ್ಲಿಯ ವಾಸ್ತವ್ಯದ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ. ಬಿಳಿ ಮರಳು, ನೀಲಿ ಸಮುದ್ರ, ತಾಳೆ ಮರಗಳ ಸಾಲು ಪ್ರಕೃತಿಯ ಸೌಂದರ್ಯಕ್ಕೆ ಜೀವ ತುಂಬುತ್ತವೆ. ಸುರ್ಯೋದಯದ ಹೊತ್ತಿಗೆ ಅಲೆಗಳ ನಿನಾದದ ಜತೆಗೆ ಗೆಜ್ಜೆ ಕಟ್ಟಿದ ಒಂಟೆಗಳ ಸಂಚಾರ, ಸೂರ್ಯಾಸ್ತದ ಸಮಯಕ್ಕೆ ಸ್ವರ್ಣವರ್ಣವಾಗುವ ಕಡಲಿನ ನೋಟ ರೋಚಕವಾಗಿರುತ್ತವೆ.

ಶಿವ ದೇವಾಲಯ

ಮೊಂಬಾಸಾ ನಗರದ ಹೊರವಲಯದಲ್ಲಿ ಒಂದು ಶಿವ ದೇವಾಲಯವಿದೆ. ಇದು ವಿಶಾಲ ಸಮುದ್ರ ತೀರದ ಗುಹೆಯಲ್ಲಿರುವುದು ವಿಶೇಷ. ಇದಕ್ಕೆ ಗೊಂಬೇಶ್ವರ ಮಂದಿರವೆಂಬ ಹೆಸರೂ ಇದೆ. ಅತ್ಯಂತ ಪ್ರಶಾಂತ ಹಾಗೂ ರಮಣೀಯವಾದ ಪರಿಸರದಲ್ಲಿನ ಈ ನೈಸರ್ಗಿಕ ದೇಗುಲದಲ್ಲಿ ಪ್ರತಿದಿನ ಪೂಜೆ ಹಾಗೂ ಭಾರತೀಯ ಹಬ್ಬಗಳಂದು ವಿಶೇಷ ಪೂಜೆ ಜರುಗುತ್ತವೆ. ಇಲ್ಲಿನ ಭಾರತೀಯ ಕುಟುಂಬಗಳು ಪ್ರಾರ್ಥನೆಗೆ ನೆರೆಯುತ್ತಾರೆ. ಇದಲ್ಲದೇ ನಗರದ ಹೃದಯಭಾಗದಲ್ಲಿ ಹಿಂದೂ ಒಕ್ಕೂಟದ ಶಿವ ದೇವಾಲಯಕ್ಕೂ ನಾವು ಭೇಟಿ ನೀಡಿದೆವು. ಶತಮಾನಕ್ಕೂ ಹಳೆಯದಾದ ಈ ಭವ್ಯ ಶಿವ ದೇವಾಲಯ ಅನೇಕ ಹಿಂದೂ ದೇವರ ವಿಗ್ರಹಗಳಿಂದ ಕೂಡಿದೆ.

ಈ ದ್ವೀಪ ಕೇವಲ ಪ್ರವಾಸಿ ನಗರವಲ್ಲ; ಕಾಲದ ಕಥೆಗಳ ಸಂಗ್ರಹಾಲಯ. ಪ್ರಾಚೀನ ಕೋಟೆ, ವನ್ಯ ಸಂಪತ್ತು, ಶಾಂತತೆ, ಕರಾವಳಿ, ಬಂದರು ಹಾಗೂ ಮಾರುಕಟ್ಟೆಯಿಂದ ಪೂರ್ವ ಆಫ್ರಿಕದ ಅಪೂರ್ವ ಪ್ರವಾಸಿ ಕೇಂದ್ರವಾಗಿದೆ.

ಮಾಹಿತಿ ಪೆಟ್ಟಿಗೆ:

ಮೊಂಬಾಸಾ ನಗರದಲ್ಲಿ ಹದಿನೆಂಟಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿವೆ. ಭಗವಾನಜಿ, ನಮಸ್ಕಾರ ಹಾಗೂ ನ್ಯೂಚೇತನಾ ರೆಸ್ಟೋರೆಂಟ್‌ಗಳಲ್ಲಿ ಗುಜರಾತಿ ಥಾಲಿ ಊಟ ಹಾಗೂ ಕಚೋರಿ, ಸಮೋಸಾ, ಭಜಿ ಮುಂತಾದ ಭಕ್ಷ್ಯಗಳೂ ಸಿಗುತ್ತವೆ. ಈ ದ್ವೀಪದ ಸುತ್ತಾಟಕ್ಕೆ ಟ್ಯಾಕ್ಸಿಗಳ ಜತೆಗೆ 'ಟುಕ್-ಟುಕ್‌ಗಳೂ ಸಿಗುತ್ತವೆ. ಇವು ಮಿತವ್ಯಯಕಾರಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಉತ್ತರ ಕರ್ನಾಟಕದ ರಂಗನತಿಟ್ಟು...

Read Previous

ಉತ್ತರ ಕರ್ನಾಟಕದ ರಂಗನತಿಟ್ಟು...

ಇದು 1753ರ ಮನೆ, ಗೊತ್ತಿರಲಿ!

Read Next

ಇದು 1753ರ ಮನೆ, ಗೊತ್ತಿರಲಿ!