Thursday, April 16, 2026
Thursday, April 16, 2026

ದುಡ್ಡು ಕೊಟ್ಟು ಜೈಲಿಗೆ ಹೋಗಿ ಬರುವ ಸದಾವಕಾಶ!

ಕರೊಸ್ಟಾ ಕಾರಾಗೃಹ ವಿಶ್ವದ ಅತ್ಯಂತ ಅಸಾಮಾನ್ಯ ಹೊಟೇಲ್‌. ಇತಿಹಾಸ ಹಾಗೂ ಪ್ರವಾಸೋದ್ಯಮ ಬೆರೆತಿರುವ ಒಂದು ವಿಚಿತ್ರ, ಭಯಾನಕ ಹಾಗೂ ಕುತೂಹಲಕಾರಿ ಜಾಗ. ಇಲ್ಲಿ ಭೇಟಿ ನೀಡುವವರಿಗೆ ಹಿಂದಿನ ಕೈದಿಗಳು ಅನುಭವಿಸಿದ ಜೀವನವನ್ನು ಅಲ್ಪಕಾಲದ ಮಟ್ಟಿಗೆ ಅನುಭವಿಸುವ ಅವಕಾಶ ನೀಡಲಾಗುತ್ತದೆ.

ಏನೂ ತಪ್ಪು ಮಾಡದೆಯೇ ಜೈಲಿನ ಅನುಭವ ಪಡೆಯಬೇಕು ಎಂದುಕೊಂಡವರಿಗೆ ಒಂದು ಅದ್ಭುತ ಆಫರ್‌ ಇದೆ. ಒಂದು ಕಾಲದಲ್ಲಿ ಕಾರಾಗೃಹವಾಗಿದ್ದ ಜಾಗ ಈಗ ಜಗತ್ತಿನ ವಿಶೇಷ ಹೊಟೇಲ್‌ಗಳಲ್ಲೊಂದು ಎಂದರೆ ಎಷ್ಟು ವಿಚಿತ್ರ ಅನಿಸಬಹುದಲ್ಲವೆ! ಲಾಟ್ವಿಯಾದ ಲೀಪಾಜಾದಲ್ಲಿರುವ ಹಿಂದಿನ ಸೋವಿಯತ್ ನೌಕಾ ನೆಲೆ ಜಿಲ್ಲೆಯಾದ ಕರೊಸ್ಟಾದಲ್ಲಿ 20ನೇ ಶತಮಾನದ ಆರಂಭದಲ್ಲಿ ಒಂದು ಕಟ್ಟಡವನ್ನು ನಿರ್ಮಿಸಲಾಯಿತು. ಅದನ್ನು ಮಿಲಿಟರಿ ಆಸ್ಪತ್ರೆಗೆ ಬಳಸುವ ಉದ್ದೇಶವಿತ್ತು. ಆದರೆ, ಕಾರಣಾಂತರಗಳಿಂದ ಅದನ್ನು ಕಾರಾಗೃಹ ಮಾಡಲಾಯಿತು. ದಶಕಗಳ ಕಾಲ ಇದು ತ್ಸಾರಿಸ್ಟ್ ರಷ್ಯಾ, ನಾಜಿ ಜರ್ಮನಿ ಮತ್ತು ಸೋವಿಯತ್ ಯೂನಿಯನ್ ಸೇರಿದಂತೆ ವಿವಿಧ ಆಡಳಿತಗಳಡಿಯಲ್ಲಿ ಕಾರ್ಯನಿರ್ವಹಿಸಿತು. ದೇಶದ್ರೋಹಿಗಳು, ರಾಜಕೀಯ ಕೈದಿಗಳು ಮತ್ತು ಮಿಲಿಟರಿ ಅಪರಾಧಿಗಳಿಗೆ ಇದೇ ಜಾಗವಾಗಿತ್ತು. ಅವರಲ್ಲಿ ಅನೇಕರು ಮರಣದಂಡನೆಯನ್ನೂ ಅನುಭವಿಸಿದರಂತೆ. 1997ರವರೆಗೆ ಇದು ಜೈಲಾಗಿ ಕಾರ್ಯನಿರ್ವಹಿಸುತ್ತಿತ್ತು. ವಿಶೇಷ ಎಂದರೆ, ಇಲ್ಲಿಂದ ಒಬ್ಬ ಕೈದಿಯೂ ತಪ್ಪಿಸಿಕೊಂಡು ಹೋಗಿಲ್ಲವಂತೆ. ಆಗಲಿಲ್ಲವೋ ಅಥವಾ ಅದು ಅಷ್ಟು ಚೆನ್ನಾಗಿತ್ತೋ ಗೊತ್ತಿಲ್ಲ.

New Project (6)

ಜೈಲಿನ ಅನುಭವ ಖಂಡಿತ!

ಆ ಕಾಲದ ಜೈಲು ಹೇಗಿತ್ತು ಎಂಬ ಕುತೂಲಹ ಇರುವವರಿಗೆ ಈಗೊಂದು ಅದ್ಭುತ ಅವಕಾಶವಿದೆ. ಈ ಕರೊಸ್ಟಾ ಕಾರಾಗೃಹವನ್ನು ಈಗ ಸೋವಿಯತ್ ಕಾಲದ ಜೈಲಿನ ಅನುಭವ ನೀಡುವ ಉದ್ದೇಶದಿಂದ ಅಂದಿನಂತೆಯೇ ರೂಪಿಸಲಾಗಿದ್ದು, ಹೊಟೇಲ್‌ ಮಾಡಲಾಗಿದೆ. ಈ ಕಾಲದ ಐಷಾರಾಮಿ ಹೊಟೇಲ್‌ಗಳಿಗಿಂತ ಭಿನ್ನವಿದು. ವಿಶೇಷವಾಗಿ ಜೈಲಿನ ಕಠಿಣ ವಾತಾವರಣವನ್ನು ಯಥಾವತ್ತಾಗಿ ಮರುಸೃಷ್ಟಿಸಲಾಗಿದೆ. ಇಲ್ಲಿಗೆ ಹೋಗುವ ಅತಿಥಿಗಳು ಕಬ್ಬಿಣದ ಮಂಚಗಳು ಅಥವಾ ಮರದ ಹಲಗೆಗಳ ಮೇಲೆ ಮಲಗಬೇಕಾಗುತ್ತದೆ. ಇಲ್ಲಿರುವುದು ಬಹಳ ಕಡಿಮೆ ಪೀಠೋಪಕರಣಗಳು. ಇಲ್ಲಿಗೆ ಹೋದವರಿಗೆ ಮಿನಿಮಲಿಸಂ ಎನ್ನುವುದೇ ಶಿಕ್ಷೆ! ನಿಜವಾದ ಜೈಲು ಕೋಣೆಗಳಲ್ಲಿ ರಾತ್ರಿ ಕಳೆಯಲು ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಜೈಲೂಟ ಗ್ಯಾರಂಟಿ

ಜೈಲು ಶಿಕ್ಷೆ ಮಾತ್ರವಲ್ಲ, ಅಲ್ಲಿನ ಅನುಭವವನ್ನು ನಿಜವಾಗಿಯೂ ವಿಶಿಷ್ಟವಾಗಿಸುವುದು ಅಲ್ಲಿನ ಆತಿಥ್ಯ. ಅತಿಥಿಗಳು ಅಲ್ಲಿಗೆ ಬಂದ ತಕ್ಷಣ, ಅವರನ್ನು ನಿಜವಾದ ಕೈದಿಗಳಂತೆ ನಡೆಸಿಕೊಳ್ಳಲಾಗುತ್ತದೆ. ಹೋದವರನ್ನು ವಿಚಾರಣೆ ಮಾಡಲಾಗುತ್ತದೆ. ಕಟ್ಟುನಿಟ್ಟಾದ ನಿಯಮಗಳು ಅಲ್ಲಿದ್ದು, ಅಲ್ಲಿನ ಗಾರ್ಡ್‌ಗಳು ಶಿಕ್ಷೆಯ ಕುರಿತು ಆದೇಶ ನೀಡುತ್ತಾರೆ. ಕೆಲವು ಪ್ಯಾಕೇಜ್‌ಗಳಲ್ಲಿ ಜೈಲು ಸಮವಸ್ತ್ರ ಧರಿಸುವುದು ಕಂಪಲ್ಸರಿ. ಹಾಗೆಯೇ ನಿಜವಾದ ಜೈಲಿನ ದಿನಚರಿಯನ್ನು ಪಾಲಿಸಬೇಕಾಗುತ್ತದೆ. ಕೈದಿಗಳು ಯಾವ ರೀತಿ ಶಿಕ್ಷೆ ಅನುಭವಿಸುತ್ತಿದ್ದರು ಎಂಬ ಅನುಭವ ಹೋದವರಿಗೂ ಸಿಗುವಂತೆ ಮಾಡಲಾಗುತ್ತದೆ.

New Project (4)

ಮ್ಯೂಸಿಯಂ ಕಥೆಗಳು

ರಾತ್ರಿ ಇದೊಂದು ಹೊಟೇಲ್‌ ಆದರೆ, ಹಗಲಿನಲ್ಲಿ ಇದು ಮ್ಯೂಸಿಯಂ ರೀತಿಯೂ ಕೆಲಸ ಮಾಡುತ್ತದೆ. ಮಾರ್ಗದರ್ಶಿಗಳು ಪ್ರವಾಸಿಗರನ್ನು ಹೊಟೇಲ್‌ ಸುತ್ತ ಒಂದು ಸುತ್ತು ಕರೆದುಕೊಂಡು ಹೋಗುತ್ತಾರೆ. ಜೈಲಿನಂತೆ ಇರುವ ಮಂದ ಬೆಳಕಿನ ಕಾರಿಡಾರ್‌, ಕೋಣೆಗಳು, ವಿಚಾರಣಾ ಕೊಠಡಿಗಳು ಎಲ್ಲವನ್ನೂ ತೋರಿಸುತ್ತಾರೆ. ಒಂದು ಕಾಲದಲ್ಲಿ ಅಲ್ಲಿದ್ದ ಕೈದಿಗಳ ಕಥೆಗಳನ್ನು ಹೇಳುತ್ತಾರೆ. ಗೋಡೆಯ ಮೇಲೆ ಇನ್ನೂ ಉಳಿದಿರುವ ಕೈದಿಗಳ ಕಥೆಗಳ ಕಲೆಗಳನ್ನು ನೋಡುವ ಅವಕಾಶವಿದೆ. ವಿಚಾರಣಾ ಕೊಠಡಿಯಲ್ಲಿ ಯಾವ ರೀತಿಯ ವಿಚಾರಣೆ ಮಾಡುತ್ತಿದ್ದರು ಎನ್ನುವುದರ ಝಲಕ್‌ ಕೂಡ ನೀಡಲಾಗುತ್ತದೆ.

ಇವೆಲ್ಲದರ ಹೊರತಾಗಿಯೂ, ವಿಶಿಷ್ಟವಾದ ಈ ಕರೊಸ್ಟಾ ಕಾರಾಗೃಹ ಸಾಹಸಪ್ರಿಯ ಪ್ರವಾಸಿಗರು ಮತ್ತು ಇತಿಹಾಸ ಆಸಕ್ತರಿಗೆ ಇಷ್ಟವಾಗುವ ಜಾಗ ಇದಾಗಬಹುದು. ಇಲ್ಲಿ ಪ್ಯಾರನಾರ್ಮಲ್‌ ಆಕ್ಟಿವಿಟಿ ಕೂಡ ನಡೆಯುತ್ತವೆ. ಕೆಲವರು ಇದನ್ನು ವಿಶ್ವದ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದು ಎಂದೂ ಕರೆಯುತ್ತಾರೆ. ಈ ನಿಗೂಢ ವಾತಾವರಣವು ಅಡ್ವೆಂಚರ್‌ ಪ್ರಿಯರಿಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ.

New Project (3)

ಆಧುನಿಕ ಸೌಲಭ್ಯಗಳಿವೆ

ಕುತೂಹಲಕಾರಿ ವಿಷಯವೆಂದರೆ, ಇಂಥ ವಾತಾವರಣದ ನಡುವೆಯೂ ಉಚಿತ ವೈ-ಫೈ, ಉದ್ಯಾನವನ ಮತ್ತು ಹತ್ತಿರದ ಕಡಲತೀರಕ್ಕೆ ಪ್ರವೇಶ ಸೇರಿದಂತೆ ಕೆಲವು ಆಧುನಿಕ ಸೌಲಭ್ಯಗಳು ಇಲ್ಲಿವೆ. ಇಲ್ಲಿಗೆ ಬಂದವರು ಹತ್ತಿರದ ಸೇಂಟ್ ನಿಕೋಲಸ್ ನೌಕಾ ಕ್ಯಾಥೆಡ್ರಲ್‌ನಂಥ ಆಕರ್ಷಣೆಗಳನ್ನು ಹೋಗಿ ನೋಡಿಬರಬಹುದು. ಹಾಗೆಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈಕಿಂಗ್ ಕೂಡ ಮಾಡಬಹುದು. ಮಕ್ಕಳಿಗೆ ಆಟವಾಡುವ ಜಾಗ, ಫ್ರೀ ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲಿದೆ. ಹಾಗೆಯೇ ಹೊರಾಂಗಣದಲ್ಲಿ ಪ್ರೈವೇಟ್‌ ಬೀಚ್‌ ಏರಿಯಾ, ಬಾರ್ಬೆಕ್ಯೂ ವ್ಯವಸ್ಥೆ, ಉದ್ಯಾನವನ, ಪಿಕ್‌ನಿಕ್‌ ಜಾಗ ಕೂಡ ಇದೆ. ಇನ್ನು ಊಟದಲ್ಲಿ ಕಿಡ್ಸ್‌ ಫ್ರೆಂಡ್ಲಿ ಬಫೆ, ವಿಶೇಷ ಮೆನು ಹಾಗೂ ಹೆಚ್ಚಿಗೆ ಹಣ ನೀಡಿದರೆ ವೈನ್‌ /ಶಾಂಪೇನ್‌ ಕೂಡ ಪಡೆಯಬಹದು. ಧೂಮಪಾನಕ್ಕೆಂದು ಪ್ರತ್ಯೇಕ ಕೋಣೆ ಮೀಸಲಿಡಲಾಗಿದೆ.

ಈ ವಿಶೇಷ ಹೊಟೇಲ್‌ ಅತಿಥಿಗಳನ್ನು ಯುರೋಪಿಯನ್ ಇತಿಹಾಸದ ಕರಾಳ ಅಧ್ಯಾಯಕ್ಕೆ ಕರೆದೊಯ್ಯುವ ಒಂದು ಅನುಭವ. ಮಿಲಿಟರಿ ಶಿಸ್ತು, ರಾಜಕೀಯ ದಬ್ಬಾಳಿಕೆ ಹಾಗೂ ಕೈದಿಗಳ ಜೀವನವನ್ನು ನೆನಪಿಸುವ ವಿಶೇಷ ಜಾಗವಿದು. ಸುಪ್ಪತ್ತಿಗೆಯ ಸುಖವನ್ನು ಮರೆತು ಹೊಸತೇನನ್ನೋ ಬಯಸುವವರಿಗೆ ಇಲ್ಲಿ ಕಳೆಯುವ ರಾತ್ರಿ ಜೀವನ ಪರ್ಯಂತ ನೆನಪಿನಲ್ಲಿರುವ ಅನುಭವವಾಗಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...