- ವಿದ್ಯಾ ವಿ. ಹಾಲಭಾವಿ

‘ಓಮೈಕಾನ್’ ಹೆಸರಿನ ಪುಟ್ಟ ಗ್ರಾಮವೊಂದು ರಷ್ಯಾ ದೇಶದಲ್ಲಿದೆ. ಆರ್ಕ್ಟಿಕ್ ವೃತ್ತಕ್ಕೆ ಅತ್ಯಂತ ಹತ್ತಿರವಿರುವ ಈ ಹಳ್ಳಿಯ ಹತ್ತಿರ ಯಾವ ನಗರವೂ ಇಲ್ಲ. ಸುಮಾರು 500ರಷ್ಟು ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಇಡೀ ಪ್ರಪಂಚಕ್ಕೆ ಹೋಲಿಸಿದರೆ ಈ ಭಾಗದಲ್ಲಿರುವ ಜನರು ಬದುಕುಳಿಯಲು ಪ್ರತಿ ದಿನವೂ ಬವಣೆ ಪಡುತ್ತಾರೆ. ಯಾಕೆಂದರೆ ಇಲ್ಲಿ ಅತ್ಯಂತ ತಣ್ಣನೆಯ ತಾಪಮಾನವಿದೆ. ಓಮೈಕಾನ್‌ನನ್ನು ಭೂಮಿಯ ಮೇಲಿರುವ ಅತ್ಯಂತ ಶೀತಲ ಜನವಸತಿ ಸ್ಥಳವೆಂದೇ ಪರಿಗಣಿಸಲಾಗಿದೆ.

ಇದನೂ ಓದಿ: ಜಗತ್ತು ಸುತ್ತುವ ಸಂಗೀತ ಅವಳಲ್ಲೇ ಜಗತ್ತು ಕಂಡ ಪ್ರಸನ್ನ

ಮೈನಸ್ ತಾಪಮಾನದಲ್ಲಿ ಕುದಿನೀರು!

ಸೈಬೀರಿಯಾದ ಹೃದಯ ಭಾಗದಲ್ಲಿದ್ದು ‘ಸ್ಟಾಲಿನ್ಸ್ ಡೆತ್ ರಿಂಗ್’ ಎಂದು ಕರೆಯಲ್ಪಡುವ ಓಮೈಕಾನ್‌ನ ವರ್ಷದ ಬಹುಪಾಲು ತಾಪಮಾನ ಶೂನ್ಯಕ್ಕಿಂತಲೂ ಕಡಿಮೆಯಾಗಿರುತ್ತದೆ. ಇಲ್ಲಿನ ಚಳಿಗಾಲದ ಸರಾಸರಿ ತಾಪಮಾನವೆಷ್ಟು ಗೊತ್ತೇ? -45 ಸೆಲ್ಶಿಯಸ್! ಒಂದು ಬಾರಿಯಂತೂ ಇಲ್ಲಿನ ತಾಪಮಾನ -71.2 ಸೆಲ್ಶಿಯಸ್ ನಷ್ಟು ಕಡಿಮೆಯಾಗಿ ವಿಶ್ವ ದಾಖಲೆಯನ್ನೇ ನಿರ್ಮಿಸಿಬಿಟ್ಟಿದೆ! ವಿಪರ್ಯಾಸವೆಂದರೆ ರಷ್ಯನ್ ಭಾಷೆಯಲ್ಲಿ ಓಮೈಕಾನ್ ಎಂದರೆ “ಹೆಪ್ಪುಗಟ್ಟದ ನೀರು” ಎಂಬರ್ಥವಿದೆ. ಈ ಗ್ರಾಮದ ಹತ್ತಿರದಲ್ಲಿ ಬಿಸಿ ನೀರಿನ ಬುಗ್ಗೆಯಿದೆ.

ಮೊಬೈಲ್ ಫೋನ್ ವೇಸ್ಟ್

New Project (2)

1920 ಮತ್ತು 1930ರ ಕಾಲಘಟ್ಟಕ್ಕಿಂತ ಮೊದಲು ಓಮೈಕಾನ್ ಗ್ರಾಮವು ಹಿಮಸಾರಂಗಗಳನ್ನು ಸಾಕುವವರ ಸಮಯೋಚಿತ ನಿಲುಗಡೆಯಾಗಿತ್ತು. ಆದರೆ ಸೋವಿಯತ್ ಸರ್ಕಾರವು ಅಲೆಮಾರಿ ಜನಸಂಖ್ಯೆಯನ್ನು ನಿಯಂತ್ರಿಸುವುದು ಕಷ್ಟ, ಇದು ತಾಂತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿದಿದೆ ಎಂದು ಹೇಳಿಕೊಂಡು ಅದನ್ನು ಇತ್ಯರ್ಥ ಪಡಿಸುವ ನೆಪದಲ್ಲಿ ಈ ತಾಣವನ್ನು ಶಾಶ್ವತ ವಸಾಹತು ಪ್ರದೇಶವನ್ನಾಗಿ ಮಾಡಿಬಿಟ್ಟಿತು. ಪಶ್ಚಿಮ ಯುರೋಪಿನಲ್ಲಿ ಹಿಮಪಾತವು ಅಲ್ಲಿನ ಶಾಲೆಗಳನ್ನು ಮುಚ್ಚಲು ಕಾರಣವಾಗಿದ್ದರೆ ತಾಪಮಾನವು -52 ಸೆಲ್ಶಿಯಸ್ ಗಿಂತ ಕಡಿಮೆಯಾಗಿದ್ದಾಗ ಮಾತ್ರ ಓಮೈಕಾನ್ ನಲ್ಲಿರುವ ಏಕೈಕ ಶಾಲೆ ಮುಚ್ಚುತ್ತದೆ.

ಓಮೈಕಾನ್‌ನ ಹೆಚ್ಚಿನ ಮನೆಗಳಲ್ಲಿ ಶಾಖಕ್ಕಾಗಿ ಈಗಲೂ ಕೂಡ ಕಲ್ಲಿದ್ದಲು ಮತ್ತು ಮರವನ್ನು ಸುಡುತ್ತಾರೆ ಮತ್ತು ಬೆರಳೆಣಿಕೆಯಷ್ಟು ಜನರು ಮಾತ್ರ ಆಧುನಿಕ ಸೌಲಭ್ಯಗಳನ್ನು ಹೊಂದಿದ್ದಾರೆ. ಈ ಹಳ್ಳಿಯಲ್ಲಿ ಯಾವುದೇ ಮೊಬೈಲ್ ಕವರೇಜ್ ಇಲ್ಲ! ಬಹಳಷ್ಟು ಎಲೆಕ್ಟ್ರಾನಿಕ್ ವಸ್ತುಗಳು ಹೆಪ್ಪುಗಟ್ಟುವ ವಾತಾವರಣದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದರಿಂದ ಮೊಬೈಲ್ ಕವರೇಜ್ ಇದ್ದರೂ ಪ್ರಯೋಜನವಾಗುವುದಿಲ್ಲ.

ಕುದುರೆ ರಕ್ತದ ಐಸ್ ಕ್ಯೂಬ್!

ಪಾಶ್ಚಾತ್ಯ ದೇಶಗಳಲ್ಲಿ ತುಪ್ಪಳ(ಫರ್)ವು ಬರೀ ಶ್ರೀಮಂತರು ಮಾತ್ರ ಬಳಸುವ ಐಷಾರಾಮಿ ವಸ್ತು. ಆದರೆ ಈ ಪ್ರದೇಶದಲ್ಲಿ ಇದು ನಿಮ್ಮನ್ನು ಬೆಚ್ಚಗಿಡಲು ಬೇಕಾಗುವ ಅತ್ಯಗತ್ಯ ವಸ್ತುವಾಗಿದೆ. ಹೆಪ್ಪುಗಟ್ಟಿದ ಈ ತಂಪಿನ ವಾತಾವರಣದಲ್ಲಿ ಕೃಷಿ ಮಾಡುವುದಂತೂ ಸಾಧ್ಯವೇ ಇಲ್ಲ! ಆದ ಕಾರಣ ಇಲ್ಲಿನ ಜನರು ಮಾಂಸಾಹಾರವನ್ನು ಸೇವನೆ ಮಾಡುತ್ತಾರೆ.

ಅತಿ ಕಡಿಮೆ ಅವಧಿಯ ಬೇಸಗೆ ಕಾಲ ಇಲ್ಲಿದೆ. ಈ ಸಮಯದಲ್ಲಿ ಏನನ್ನಾದರೂ ಬೆಳೆಯಬಹುದಾದರೂ ಇಲ್ಲಿನ ಬಹಳಷ್ಟು ಜನರು ಹಣ್ಣು ಅಥವಾ ತರಕಾರಿಗಳನ್ನು ತಿನ್ನುವುದೇ ಇಲ್ಲ.ಇಲ್ಲಿರುವ ಏಕೈಕ ಅಂಗಡಿಯು, ಪಟ್ಟಣದಲ್ಲಿ ಸಿಗುವ ಇತರೆ ದವಸಗಳನ್ನು ಪೂರೈಸುತ್ತದೆ. ಹೆಚ್ಚಿನ ಸ್ಥಳೀಯರು ತಮ್ಮ ಜೀವನೋಪಾಯಕ್ಕಾಗಿ ಹಿಮಸಾರಂಗಗಳ ಸಂತಾನೋತ್ಪತ್ತಿ, ಬೇಟೆ ಮತ್ತು ಐಸ್ ಮೀನುಗಾರಿಕೆಯನ್ನು ಆಶ್ರಯಿಸಿದ್ದಾರೆ. ನೀವು ಎಂದಾದರೂ ಈ ಸ್ಥಳಕ್ಕೆ ಭೇಟಿ ನೀಡಲು ಯೋಚಿಸಿದರೆ ಹಿಮಸಾರಂಗದ ಮಾಂಸ ಮತ್ತು ಹೆಪ್ಪುಗಟ್ಟಿದ ಮೀನುಗಳನ್ನು ಸ್ಥಳೀಯ ಭಕ್ಷ್ಯಗಳನ್ನಾಗಿ ಪಡೆಯುತ್ತೀರಿ. ಈ ಪ್ರದೇಶದಲ್ಲಿ ನೀಡಲಾಗುವ ಮತ್ತೊಂದು ಪ್ರಮುಖ ತಿನಿಸು ಎಂದರೆ ಮ್ಯಾಕರೋನಿಯೊಂದಿಗೆ ಕುದುರೆ ರಕ್ತವನ್ನು ಬಳಸಿ ತಯಾರಿಸಿದ ಐಸ್ ಕ್ಯೂಬ್‌ಗಳು.

ಮೆದುಳ ರಕ್ತವೇ ಹೆಪ್ಪುಗಟ್ಟೀತು!

New Project

ಓಮೈಕಾನ್‌ನಲ್ಲಿ ವಾಸವಾಗಿರುವ ಜನರ ಜೀವನವು ಅತ್ಯಂತ ಕಷ್ಟಮಯ. ಚಳಿಗಾಲದಲ್ಲಂತೂ ಇಲ್ಲಿನ ಹವಾಮಾನ ಎಷ್ಟು ಶೀತಲವೆಂದರೆ ಮೆದುಳು ನಿಷ್ಕ್ರಿಯಗೊಳ್ಳುವ ಹಂತವನ್ನು ತಲುಪಿಬಿಡಬಹುದು! ಪೆನ್‌ನಲ್ಲಿರುವ ಇಂಕ್ ಕೂಡಾ ಹೆಪ್ಪುಗಟ್ಟುತ್ತದೆ. ಬ್ಯಾಟರಿಗಳು ಬಹು ಬೇಗ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಲೋಹವು ಚರ್ಮಕ್ಕೆ ಅಂಟಿಕೊಳ್ಳುತ್ತದೆ.ಇಂಧನ ಟ್ಯಾಂಕ್‌ನ ಹತ್ತಿರ ದೀಪವನ್ನು ಬೆಳಗಿಸಿ ಬಿಸಿ ಮಾಡದ ಹೊರತು ಕಾರುಗಳು ಸ್ಟಾರ್ಟ್ ಆಗುವುದೇ ಇಲ್ಲ! ಆಕ್ಸಲ್ ಗ್ರೀಸ್ ಸಹ ಹೆಪ್ಪುಗಟ್ಟುತ್ತದೆ. ಎಂಜಿನ್ ಎಷ್ಟು ಬೇಗನೇ ಫ್ರೀಜ್ ಆಗುತ್ತವೆಯೆಂದರೆ ಅನೇಕ ಕಾರುಗಳನ್ನು ನಿರಂತರ ಚಾಲನೆಯಲ್ಲಿಡಲಾಗುತ್ತದೆ! ನೀವೇನಾದರೂ ಬೀದಿಯಲ್ಲಿ ನಡೆದು ಹೋಗುತ್ತಿದ್ದರೆ ನಿಮ್ಮ ಕಣ್‌ರೆಪ್ಪೆ ಕೂದಲು ಹಾಗೂ ಬಾಯಲ್ಲಿರುವ ಲಾಲಾರಸವೂ ಕೂಡಾ ನಿಮ್ಮ ಮುಖದ ಮೇಲೆ ನೋವನ್ನುಂಟು ಮಾಡುವ ಪುಟ್ಟ ಸೂಜಿಗಳಂತಾಗಿ ಹೆಪ್ಪುಗಟ್ಟುತ್ತವೆ! ಸ್ಥಳೀಯ ವಿದ್ಯುತ್ ಕೇಂದ್ರವು ಕಲ್ಲಿದ್ದಲ್ಲನ್ನು ಉರಿಸಿ ಮನೆಗಳಿಗೆ ಬಿಸಿ ನೀರು ಹರಿಯುವಂತೆ ಮಾಡುತ್ತದೆ. ಅಕಸ್ಮಾತ್ ವಿದ್ಯುತ್ ಸ್ಥಗಿತಗೊಂಡರೆ ಇಡೀ ಹಳ್ಳಿಯೇ ಐದು ಗಂಟೆ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಕೊಳಾಯಿಗಳು ಹೆಪ್ಪುಗಟ್ಟಿ ಬಿರುಕು ಬಿಡುತ್ತವೆ.

ಶವಸಂಸ್ಕಾರವೇ ಸವಾಲು!

ಶೀತಲ ಹವಾಮಾನದಿಂದ ಉಂಟಾಗುವ ಮತ್ತೊಂದು ಸಮಸ್ಯೆ ಏನೆಂದರೆ ಮೃತ ದೇಹಗಳನ್ನು ಹೂಳುವುದು. ಹೆಪ್ಪುಗಟ್ಟಿದ ನೆಲದಲ್ಲಿ ಗುಂಡಿ ತೋಡಲು ಎರಡು ಅಥವಾ ಮೂರು ದಿನಗಳು ಬೇಕಾಗುತ್ತದೆ. ಸಮಾಧಿ ಜಾಗವನ್ನು ಅಗೆಯಲು ಒಂದೆರಡು ಗಂಟೆಗಳ ಕಾಲ ಬೆಂಕಿ ಹಚ್ಚಲಾಗುತ್ತದೆ. ಇದು ಮಂಜುಗಡ್ಡೆಯಂಥ ನೆಲವನ್ನು ಸ್ವಲ್ಪ ಕರಗಿಸಲು ಅನುವು ಮಾಡಿಕೊಡುತ್ತದೆ. ನಂತರ ಬಿಸಿ ಕಲ್ಲಿದ್ದಲನ್ನು ಬದಿಗೆ ತಳ್ಳಲಾಗುತ್ತದೆ. ಒಂದೆರಡು ಇಂಚು ಆಳದ ರಂಧ್ರವನ್ನು ಅಗೆಯಲಾಗುತ್ತದೆ. ಶವಪೆಟ್ಟಿಗೆಯನ್ನು ಹೂಳಲು ಗುಂಡಿಯು ಸಾಕಷ್ಟು ಆಳವಾಗುವವರೆಗೆ ಈ ಪ್ರಕ್ರಿಯೆಯನ್ನು ಹಲವಾರು ದಿನಗಳವರೆಗೆ ಪುನರಾವರ್ತಿಸಲಾಗುತ್ತದೆ.

ಚಳಿ ಪ್ರವಾಸ-ಬಿಸಿನೀರು ಸ್ನಾನ!

ಓಮೈಕಾನ್‌ನಲ್ಲಿ ಅತಿ ತಂಪಿನ ಅನುಭವವನ್ನು ಪಡೆಯಲು ಆಸೆಪಡುವವರಿಗಾಗಿ ಟ್ರಾವೆಲ್ ಕಂಪನಿಗಳು ಚಳಿಗಾಲದ ನಡುವೆಯೇ ಪ್ರವಾಸವನ್ನು ಆಯೋಜಿಸುತ್ತವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸ್ಥಳೀಯ ಹಿಮಸಾರಂಗ ಸಾಕಾಣಿಕೆಯನ್ನು ನೋಡಬಹುದು. ಐಸ್ ಮೀನುಗಾರಿಕೆ (ಫಿಶಿಂಗ್)ಯನ್ನು ಮಾಡಬಹುದು. ಅಷ್ಟೇ ಅಲ್ಲ ಗಾಳಿಯ ಉಷ್ಣತೆಯು -50 ಸೆಲ್ಶಿಯಸ್‌ನಲ್ಲಿರುವಾಗ ಓಮೈಕಾನ್‌ನ ಬಿಸಿ ನೀರ ಬುಗ್ಗೆಯಲ್ಲಿ ಸ್ನಾನದ ಮಜವನ್ನೂ ಅನುಭವಿಸಬಹುದು.

ಅತ್ಯಂತ ಕಡಿಮೆ ತಾಪಮಾನದಲ್ಲಿ, ಪ್ರತಿ ದಿನವೂ ಬದುಕಲು ಹೆಣಗಬೇಕಾದಂಥ ಕಠಿಣ ಪರಿಸ್ಥಿತಿಯಲ್ಲಿ ಜನರು ಓಮೈಕಾನ್‌ನಲ್ಲಿ ಯಾಕೆ ವಾಸವಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹೇಳುವುದಂತೂ ಬಹಳ ಕಷ್ಟ.ಆದರೆ ಓಮೈಕಾನ್ ನಿಜಕ್ಕೂ ನಮ್ಮ ಭೂಮಂಡಲದಲ್ಲಿರುವ ಅತ್ಯದ್ಭುತ ಸ್ಥಳ. ಹಾಗೆಯೇ ಇಲ್ಲಿರುವ ಜನರೂ ಕೂಡಾ.