• ಶಶಿಧರ ಹಾಲಾಡಿ

ಆಕೆಯ ಹೆಸರು ತುಸು ವಿಶಿಷ್ಟ; ಆಕೆ ವಿಚಿತ್ರ ಬಟ್ಟೆ ಧರಿಸುವ ಕಲಾವಿದೆ! ಆದರೆ ಈ ಬೀದಿಯಲ್ಲಿ ತಲೆಎತ್ತಿರುವ ಈ ಕಲಾಕೃತಿಯ ಉದ್ದೇಶ ಮಾತ್ರ ಬಹು ದೊಡ್ಡದು. ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಎಂದು ನ್ಯೂಯಾರ್ಕಿನವರಿಗೆ, ಜಗತ್ತಿಗೆ ಸಾರುವ ಈ ಕಲಾಕೃತಿಯ ಹೆಸರು ‘ಶೇವ್ಡ್ ಪೋರ್ಶನ್ಸ್. (ಕೂದಲು ತೆಗೆದ ಜಾಗಗಳು ಎನ್ನಬಹುದೇ? ಅಥವಾ ಬೋಳಿಸಿದ ಗಡ್ಡ ಎನ್ನಲೂಬಹುದು!). ಆ ದೊಡ್ಡ ನಗರದ ಬಹುಮಹಡಿ ಕಟ್ಟಡಗಳ ನೆರಳಿನಲ್ಲಿ ಸ್ಥಾಪಿತಗೊಂಡಿರುವ ಈ ‘ಬೀದಿ ಕಲಾಕೃತಿ’ಯನ್ನು ನಿರ್ಮಿಸಿದವಳ ಹೆಸರು ʼಚಾಕಿಯಾ ಬೂಕರ್ʼ.

‘ಶೇವ್ಡ್ ಪೋರ್ಶನ್ಸ್’ ಕಲಾಕೃತಿ ಗಮನಿಸಿದಾಗ, ಮೇಲ್ನೋಟಕ್ಕೆ ಅಷ್ಟೇನೂ ಚಂದ ಎನಿಸದು; ಅದೊಂದು ಅಬ್‌ಸ್ಟ್ರ್ಯಾಕ್ಟ್ ಕಲಾಕೃತಿ; ಅಮೂರ್ತ ಭಾವನೆಗಳನ್ನು ಬಿಂಬಿಸುವ ಇದು, ಅಲ್ಲಿನ ಕಾಂಕ್ರೀಟು, ಗಾಜಿನ ಥಳುಕಿನ ಕಟ್ಟಡಗಳಿಂದ ತುಂಬಿರುವ, ಆಧುನಿಕ ಅನಿಸುವ ಬೀದಿಯಲ್ಲಿ, ತನ್ನ ವೈರುಧ್ಯದಿಂದ ಥಟ್ಟನೆ ಗಮನ ಸೆಳೆಯುತ್ತದೆ. ನ್ಯೂಯಾರ್ಕಿನ ಲಕ್ಷಾಂತರ ಕಾರುಗಳು, ವಾಹನಗಳು ಬಳಸಿ, ಸವೆಸಿ ಎಸೆದ ಟೈರುಗಳನ್ನು ಬಳಸಿ, ಕಲಾವಿದೆ ಚಾಕಿಯಾ ಬೂಶರ್ ಇದನ್ನು ರಚಿಸಿದ್ದಾಳೆ.

ಇದನ್ನು ಓದಿ:ಸರಕಾರದ ಸಹಕಾರವಿದೆ. ಕಾಶಿಗೆ ಹೋಗಿಬನ್ನಿ

ಸುಮಾರು 35 ಅಡಿ ಎತ್ತರದ ಈ ಕಲಾಕೃತಿಯ ನಡುವೆ ಕಾಣಿಸುವುದು ಬರೀ ಟೊಳ್ಳುಗಳು! ಆಧುನಿಕ ಬದುಕು ಹೇಗೆ ನಮ್ಮ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು, ಒಳಗೆಲ್ಲಾ ಟೊಳ್ಳುಗಳೇ ತುಂಬಿದ, ಡಂಬಾಚಾರದ, ಆದರೆ ಮೇಲ್ನೋಟಕ್ಕೆ ಸುಖದ ಹಾದಿಯಿರುವ ನಾಗರೀಕತೆಯನ್ನು ಕಟ್ಟಿಕೊಟ್ಟಿದೆ ಎಂದು ಬಿಂಬಿಸುವ ಈ ಕೃತಿ, ಬಳಸಿ ಎಸೆಯುವ ಸಂಸ್ಕೃತಿಯನ್ನು ವಿಡಂಬನೆಗೆ ಒಳಗು ಮಾಡುತ್ತಿದೆ. ಟಯರು, ಕಬ್ಬಿಣ ಮೊದಲಾದವುಗಳನ್ನು ರಿಸೈಕಲ್ ಮಾಡಿ, ಮರುಬಳಕೆ ಮಾಡಿ ಇದನ್ನು ರಚಿಸಲಾಗಿದೆ; ನಮ್ಮ ಸುತ್ತಲಿನ ಪರಿಸರ ರಕ್ಷಿಸಲು, ಭೂಮಿಯ ಪರಿಸರದ ಆರೋಗ್ಯ ಕಾಪಾಡಲು, ಎಲ್ಲರೂ ಕಿರು ಕೊಡುಗೆಯನ್ನು ಎಲ್ಲರೂ ನೀಡಲಿ ಎಂದು ಈ ಕಲಾಕೃತಿ ಸಾರುತ್ತದೆ.

Untitled design (47)

ಇದನ್ನು ರಚಿಸಿದ ಕಲಾವಿದೆ, ನ್ಯೂಯಾರ್ಕಿನ ಬೂಕರ್, ಇಂಥದ್ದೇ ಹಲವು ಕಲಾಕೃತಿಗಳನ್ನು ರಚಿಸಿದ್ದಾಳೆ. ಹಳೆಯ ಟಯರು, ಉಪಯೋಗಿಸಿದ ಕಬ್ಬಿಣವೇ ಅವಳ ಹೆಚ್ಚಿನ ಕಲಾಕೃತಿಗಳ ಕಚ್ಚಾವಸ್ತು; ಅದರಿಂದ ಈಕೆ ತಯಾರಿಸುವ ಕಲಾಕೃತಿಗಳು ಜಗತ್ತಿನ ಕಲಾಲೋಕದಲ್ಲಿ ತಮ್ಮದೇ ಸ್ಥಾನ ಪಡೆದಿವೆ. ಟಯರು, ಕಬ್ಬಿಣದ ಚೂರುಗಳು, ಬಳಸಿ ಎಸೆದ ವಸ್ತುಗಳಿಂದ ನಾನಾ ರೀತಿಯ, ಆದರೆ ತಕ್ಷಣ ಗಮನ ಸೆಳೆಯುವಂಥ ಕಲಾಕೃತಿಗಳನ್ನು ರಚಿಸಿ, ಎದ್ದುಕಾಣುವ ಜಾಗದಲ್ಲಿ ಸ್ಥಾಪಿಸುವುದು ಈಕೆಯ ಕಲೆಯ ಟ್ರೇಡ್‌ಮಾರ್ಕ್‌!

ಇದನ್ನು ಓದಿ:ನಾಲಗೆ ತಿರುಗಿಸುವ ದೇಶಗಳತ್ತ ಒಂದು ಪ್ರವಾಸ!

ಬಳಸಿ ಎಸೆಯುವ ಟಯರ್ ಮತ್ತು ಅಂಥದ್ದೇ ವಸ್ತುಗಳಿಂದ, ತಾನು ಧರಿಸುವ ಬಟ್ಟೆಯನ್ನು ಸಹ ವಿನ್ಯಾಸಗೊಳಿಸಿ, ಅದನ್ನು ಧರಿಸಿ, ಪರಿಸರ ರಕ್ಷಣೆಯ ಸಂದೇಶ ಸಾರುವುದು ಈಕೆಯ ಹವ್ಯಾಸ. ಅಂಥ ರದ್ದಿ ವಸ್ತುಗಳಿಂದ ತಯಾರಿಸಿದ ದಿರಿಸನ್ನು ತಯಾರಿಸಿ, ತಾನೇ ಧರಿಸುವುದರಿಂದಲೇ ಇರಬೇಕು, ಈಕೆಯ ನೋಟವೂ ತುಸು ವಿಚಿತ್ರ!

ನ್ಯೂಯಾರ್ಕಿನ ಪ್ರಸಿದ್ಧ ಬೀದಿಯಲ್ಲಿರುವ ಈಕೆಯ ‘ಶೇವ್ಡ್ ಪೋರ್ಶನ್ಸ್’ ಕಲಾಕೃತಿಯ ಪಕ್ಕದಲ್ಲೇ, ‘ಇಲ್ಲಿ ಭವಿಷ್ಯ ಹೇಳಲಾಗುವುದು: ಸಂಪರ್ಕಿಸಿ” ಎಂಬ ನೀಲಿ ಫಲಕವೂ ರಾರಾಜಿಸುತ್ತಿದೆ ಮತ್ತು ಅದು ನಮ್ಮ ಆಧುನಿಕ ಎನಿಸುವ ಬದುಕಿನಲ್ಲಿನ ಟೊಳ್ಳುಗಳನ್ನು ಬಿಂಬಿಸುತ್ತದೆ ಎಂದೇ ನನಗನಿಸಿತು! ಮತ್ತೆ ನಿಮಗೆ?