Saturday, January 17, 2026
Saturday, January 17, 2026

ಮೊಲೋಸಿಯಾ! ಜಗತ್ತಿನ ಅತಿ ಚಿಕ್ಕ ದೇಶ

ಮೊಲೋಸಿಯಾ ಒಂದು ವಿಲಕ್ಷಣ ಪ್ರವಾಸಿ ತಾಣವಾಗಿದೆ. ಬೇರೆ ದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರವಾಸಿಗರು ರಾಷ್ಟ್ರದ ಮುಖ್ಯಸ್ಥ ಕೆವಿನ್ ಬಾಗ್ ಅವರಿಂದ ಅನುಮತಿ ಪಡೆಯಬೇಕು. ವಿಶೇಷವಾಗಿ ನೀಡಲಾದ ಪಾಸ್‌ಪೋರ್ಟ್ ಹೊಂದಿದ್ದರೆ ಮಾತ್ರ ಅವರನ್ನು ದೇಶಕ್ಕೆ ಅನುಮತಿಸಲಾಗುತ್ತದೆ.

-ದೇಶಾದ್ರಿ ಚಿಕ್ಕಣ್ಣ


ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋಟಿ ಕೋಟಿ ಜನರು ವಾಸಿಸುತ್ತಿದ್ದಾರೆ. ಆದರೆ ಕೇವಲ 33 ಜನರು ವಾಸಿಸುವ ದೇಶವೊಂದು ಇದೆ ಎಂದು ನಿಮಗೆ ಗೊತ್ತೆ? ಈ ದೇಶವಿರುವುದು ರಾಜ್ಯದೊಳಗೆ ಅಂತ ಹೇಳಿದ್ರೆ ವಿಚಿತ್ರ ಅನಿಸುವುದುಇಲ್ಲವೇ? ದೇಶ ಯಾವುದು? ಅದು ಎಲ್ಲಿದೆ? ಇಷ್ಟು ಕಡಿಮೆ ಜನಸಂಖ್ಯೆಯೊಂದಿಗೆ ಅದು ಹೇಗೆ ಅಸ್ತಿತ್ವಕ್ಕೆ ಬಂದಿತು? ಅದರ ಇತಿಹಾಸವೇನು? ಈ ಇಂಟರೆಸ್ಟಿಂಗ್ ಮಾಹಿತಿಯನ್ನು ನೀವೇ ಓದಿಕೊಳ್ಳಿ.

ಅಮೆರಿಕದ ನೆವಾಡಾ ಮರುಭೂಮಿಯಲ್ಲಿರುವ ಒಂದು ಸಣ್ಣ ಸ್ವಯಂಘೋಷಿತ ದೇಶ ಮೊಲೋಸಿಯಾ. ಇದು ಅಮೆರಿಕದ ನೆವಾಡಾ ರಾಜ್ಯದ ಮರುಭೂಮಿಯಲ್ಲಿರುವ ’ರಿಪಬ್ಲಿಕ್ ಆಫ್ ಮೊಲೋಸಿಯಾ’ ಎಂಬ ಸೂಕ್ಷ್ಮ ರಾಷ್ಟ್ರವಾಗಿದೆ. ಇದಕ್ಕೆ, ಯಾವುದೇ ದೇಶ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಇದುವರೆಗೂ ರಾಷ್ಟ್ರ ಎಂಬ ಅಧಿಕೃತ ಮಾನ್ಯತೆ ಸಿಕ್ಕಿಲ್ಲ. ಆದರೆ ಇದು ತನ್ನದೇ ಆದ ಧ್ವಜ, ರಾಷ್ಟ್ರಗೀತೆ, ಕರೆನ್ಸಿ, ಕಾನೂನುಗಳು ಮತ್ತು ಸಂವಿಧಾನವನ್ನು ಹೊಂದಿದೆ. ಹಾಗಾಗಿ, ಈ ವಿಶಿಷ್ಟ ಸ್ಥಳವು ವಿಶ್ವದ ಕುತೂಹಲಕಾರಿ ಸ್ಥಳಗಳಲ್ಲಿ ಒಂದಾಗಿದೆ.

MOLOCIA

ಕುಟುಂಬಕ್ಕೊಂದು ದೇಶ!

ಮೊಲೋಸಿಯಾವನ್ನು 1977ರಲ್ಲಿ ಕೆವಿನ್ ಬಾಗ್ ಮತ್ತು ಅವರ ಸ್ನೇಹಿತ ಸ್ಥಾಪಿಸಿದರು. ಅವರು ತಮ್ಮ ಮನೆಯನ್ನು ಹೊಸ ದೇಶವನ್ನಾಗಿ ಮಾಡಲು ನಿರ್ಧರಿಸಿದರು. ಕೆವಿನ್ ಇನ್ನೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ಸೇರಿ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾರೆ. ಈ ಸಣ್ಣ ದೇಶವು ತನ್ನದೇ ಆದ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಮತ್ತು ಕಾನೂನುಗಳನ್ನು ಸಹ ಹೊಂದಿದೆ. ಇಲ್ಲಿ ವಾಸಿಸುವವರು 33 ನಿವಾಸಿಗಳು. ಮುಖ್ಯವಾಗಿ ಕೆವಿನ್ ಅವರ ಕುಟುಂಬದವರೇ ಆಗಿದ್ದಾರೆ. ಮೂವತ್ಮೂರು ಮಂದಿಯ ಈ ಅನಧಿಕೃತ ದೇಶ ಚಿಕ್ಕದಾದರೂ ಅಚ್ಚುಕಟ್ಟಾಗಿ ನಡೆಯುತ್ತಿದೆ.

ಆಳೂ ಅವನೇ ಅರಸನೂ ಅವನೇ!

ಮೊಲೇಸಿಯಾ

ಮೊಲೋಸಿಯಾ ಇತರ ದೇಶಗಳೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ. ಅಮೆರಿಕ ಸರಕಾರ ಕೂಡ ಇದನ್ನು ಸ್ವತಂತ್ರ ದೇಶವೆಂದು ಗುರುತಿಸುವುದಿಲ್ಲ. ಆದರೆ ಕೆವಿನ್ ಬಾಗ್ ತನ್ನ ದೇಶವನ್ನು ಪ್ರತ್ಯೇಕ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸುತ್ತಾನೆ. ಅವನು ತನ್ನ ದೇಶದ ಎಲ್ಲಾ ವ್ಯವಹಾರಗಳನ್ನು ಸ್ವತಃ ನೋಡಿಕೊಳ್ಳುತ್ತಾನೆ. ತೆರಿಗೆ ಸಂಗ್ರಹಿಸುವುದರಿಂದ ಹಿಡಿದು ದೇಶವನ್ನು ಆಳುವವರೆಗೆ ಎಲ್ಲವನ್ನೂ ಅವನು ಮಾಡುತ್ತಾನೆ.

ಮೊಲೊಸ್ಸಿಯನ್ ಜನರ ಜೀವನಶೈಲಿ ತುಂಬಾ ಸರಳವಾಗಿದೆ. ಅವರು ಕೃಷಿ ಮತ್ತು ಸಣ್ಣಪುಟ್ಟ ವ್ಯವಹಾರಗಳನ್ನು ಮಾಡುವ ಮೂಲಕ ಜೀವನ ಸಾಗಿಸುತ್ತಾರೆ. ಅವರು ಆಧುನಿಕ ಜಗತ್ತಿನ ಜಂಜಾಟದಿಂದ ದೂರವಾಗಿ ಶಾಂತಿಯುತ ಜೀವನವನ್ನು ನಡೆಸುತ್ತಾರೆ. ಇಲ್ಲಿ ಅಪರಾಧ ತುಂಬಾ ಕಡಿಮೆ. ಎಲ್ಲರೂ ಒಂದು ಕುಟುಂಬದವರಂತೆ ಒಟ್ಟಿಗೆ ಇರುತ್ತಾರೆ.

ಪ್ರತ್ಯೇಕ ಪಾಸ್ ಪೋರ್ಟ್!

MOLOCIA (1)

ಮೊಲೋಸಿಯಾದಲ್ಲಿ ಒಂದು ಸಣ್ಣ ಅಂಗಡಿ, ಗ್ರಂಥಾಲಯ, ಸ್ಮಶಾನ ಮತ್ತು ಕೆಲವು ಅಧಿಕೃತವಾಗಿ ಕಾಣುವ ಕಟ್ಟಡಗಳಿವೆ. ಕೆವಿನ್ ಮತ್ತು ಅವರ ಕುಟುಂಬವು ಎಲ್ಲವನ್ನೂ ಸ್ವತಃ ನೋಡಿಕೊಳ್ಳುತ್ತಾರೆ. ಮೊಲೋಸಿಯಾ ಒಂದು ವಿಲಕ್ಷಣ ಪ್ರವಾಸಿ ತಾಣವಾಗಿದೆ. ಬೇರೆ ದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಪ್ರವಾಸಿಗರು ರಾಷ್ಟ್ರದ ಮುಖ್ಯಸ್ಥ ಕೆವಿನ್ ಬಾಗ್ ಅವರಿಂದ ಅನುಮತಿ ಪಡೆಯಬೇಕು. ವಿಶೇಷವಾಗಿ ನೀಡಲಾದ ಪಾಸ್‌ಪೋರ್ಟ್ ಹೊಂದಿದ್ದರೆ ಮಾತ್ರ ಅವರನ್ನು ದೇಶಕ್ಕೆ ಅನುಮತಿಸಲಾಗುತ್ತದೆ. ಸಂದರ್ಶಕರಿಗೆ ದೇಶದ ಪ್ರಮುಖ 'ಸ್ಥಳ'ಗಳನ್ನು ತೋರಿಸಲಾಗುತ್ತದೆ. ಅವುಗಳಲ್ಲಿ ರಾಷ್ಟ್ರಪತಿ ಭವನ, ರಾಷ್ಟ್ರೀಯ ಸ್ಮಾರಕ ಮತ್ತು ವಾಣಿಜ್ಯ ಕೇಂದ್ರ ಸೇರಿವೆ. ಅಧ್ಯಕ್ಷ ಕೆವಿನ್ ಪ್ರವಾಸಿಗರಿಗೆ ವೈಯಕ್ತಿಕವಾಗಿ ಮಾರ್ಗದರ್ಶನ ನೀಡುತ್ತಾರೆ. ಭೇಟಿಯ ಸಮಯದಲ್ಲಿ, ಸಂದರ್ಶಕರ ಪಾಸ್‌ಪೋರ್ಟ್‌ನಲ್ಲಿ ಮೊಲೋಸಿಯಾದ ಅಧಿಕೃತ ಮುದ್ರೆಯನ್ನು ಹಾಕಲಾಗುತ್ತದೆ. ಇದು ಒಂದು ನಿಜವಾದ ದೇಶಕ್ಕೆ ಭೇಟಿ ನೀಡಿದಂಥ ಅನುಭವ ನೀಡುತ್ತದೆ.
ಮೊಲೋಸಿಯಾ ಗಣರಾಜ್ಯವು ತನ್ನದೇ ಆದ "ನೌಕಾಪಡೆ, ನೌಕಾ ಅಕಾಡೆಮಿ, ಬಾಹ್ಯಾಕಾಶ ಕಾರ್ಯಕ್ರಮ, ರೈಲುಮಾರ್ಗ, ಅಂಚೆ ಸೇವೆ, ಬ್ಯಾಂಕ್, ಪ್ರವಾಸಿ ಆಕರ್ಷಣೆಗಳು, ಮಾಪನ ವ್ಯವಸ್ಥೆ, ರಜಾದಿನಗಳ ವ್ಯವಸ್ಥೆ, ಚಲನಚಿತ್ರ ಮಂದಿರ, ಆನ್‌ಲೈನ್ ರೇಡಿಯೋ ಕೇಂದ್ರ ಮತ್ತು ತನ್ನದೇ ಆದ ಟೈಮ್ ಜೋನ್" ಕೂಡ ಹೊಂದಿದೆ. ಮೊಲೋಸಿಯಾದಲ್ಲಿ ಒಂದು ಸಣ್ಣ "ಸ್ಪೇಸ್ ಪ್ರೋಗ್ರಾಂ" ಕೂಡ ಇದೆ, ಇದು ಕಾಗದದ ರಾಕೆಟ್‌ಗಳನ್ನು ಉಡಾಯಿಸುವ ತಮಾಷೆಯ ಯೋಜನೆಯಾಗಿದೆ.ಇದರ ಜೊತೆಗೆ, ಮೊಲೋಸಿಯಾದಲ್ಲಿ ವಾರ್ಷಿಕ "ಫೌಂಡರ್ಸ್ ಡೇ" ಆಚರಣೆಯಂಥ ಕಾರ್ಯಕ್ರಮಗಳು ನಡೆಯುತ್ತವೆ. ಇದರಲ್ಲಿ ಸ್ಥಳೀಯ ಜನರು ಮತ್ತು ಸಂದರ್ಶಕರು ಭಾಗವಹಿಸುತ್ತಾರೆ.

ಇವು ಇಲ್ಲಿ ನಿಷಿದ್ಧ!

ಮೊಲೋಸಿಯಾಗೆ ಸ್ಥಳೀಯರು ಮತ್ತು ಪ್ರವಾಸಿಗರು ಈರುಳ್ಳಿ, ಪಾಲಕ್ ಮತ್ತು ಕ್ಯಾಟ್‌ಫಿಶ್‌ಗಳನ್ನು ತರುವಂತಿಲ್ಲ. ಒಂದು ವೇಳೆ ಈ ನಿಷಿದ್ಧ ವಸ್ತುಗಳನ್ನು ಅಲ್ಲಿಗೆ ತೆಗೆದುಕೊಂಡು ಬಂದಲ್ಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಜಗತ್ತಿನಲ್ಲಿ ಇಷ್ಟು ಚಿಕ್ಕ ದೇಶವಿದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಮೊಲೋಸಿಯಾ ತನ್ನ ವಿಶಿಷ್ಟತೆಯಿಂದ ಪ್ರಪಂಚದಾದ್ಯಂತದ ಉತ್ಸಾಹಿಗಳನ್ನು ಆಕರ್ಷಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದು ʻವಿಶ್ವದ ಅತ್ಯಂತ ಚಿಕ್ಕ ದೇಶʼ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...