- ಸುಚಿತ್ರಾ ಹೆಗಡೆ

ನಮ್ಮ ಗೈಡ್ ಸ್ವೆಟ್ಲಾನಾ ‘ಮಾಸ್ಕೊ ರಷ್ಯಾಕ್ಕೊಂದು ಕನ್ನಡಿ’ ಅಂದಿದ್ದಳು. ಆದರೆ ಮಾಸ್ಕೋದಲ್ಲಿ ನಮ್ಮ ಪ್ರವಾಸ ಮುಗಿಯುತ್ತ ಬಂದಂತೆ ‘ಇವತ್ತು ಮಾಸ್ಕೋದೊಳಗೊಂದು ರಷ್ಯಾ ನೋಡೋಣ’ ಅಂದಾಗ ನನಗೆ ಅರ್ಥವಾಗಿರಲಿಲ್ಲ. ಆದರೆ ಅಂದು ಕಾಲ್ನಡಿಗೆಯಲ್ಲಿ ಹತ್ತಿರದ ಮೆಟ್ರೋ ಸ್ಟೇಷನ್‌ಗೆ ಕರೆದೊಯ್ದಾಗ ಅಲ್ಲೊಂದು ಪ್ಯಾರಲಲ್ ಜಗತ್ತೇ ನಿರ್ಮಾಣವಾಗಿತ್ತು. ಜಗತ್ತಿನ ಬಹುತೇಕ ಪ್ರಮುಖ ಮೆಟ್ರೋ ಸೇವೆಗಳನ್ನು ನೋಡಿದ್ದ ನಾನು ಮಾಸ್ಕೋ ಮೆಟ್ರೋಕ್ಕೆ ಕ್ಷಣಾರ್ಧದಲ್ಲಿ ಮರುಳಾಗಿದ್ದೆ. ಮಾಸ್ಕೋದ ವಿಶಾಲವಾದ ರಸ್ತೆಗಳು, ವೃತ್ತಗಳು, ಪ್ರತಿ ವೃತ್ತವನ್ನು ಸುಲಭವಾಗಿ ದಾಟಲು ನಿರ್ಮಿಸಿದ ಕಲಾತ್ಮಕ ಕೆಳಸೇತುವೆಗಳು, ಸೋವಿಯತ್ ಬೆಡಗಿನ ಕಟ್ಟಡಗಳನ್ನು ಆನಂದಿಸಿದ ನಾವು ನಿಬ್ಬೆರಗಾಗುವಂತೆ ನೆಲದಾಳದಲ್ಲಿ ಜೀವಂತವಾದ ಮ್ಯೂಸಿಯಂ ಒಂದು ಯಾಂತ್ರಿಕವಾದ ದಿನಚರಿಯೊಂದಿಗೆ ಚಲಿಸುತ್ತಿತ್ತು.

ಕೆಳಗಿಳಿಯುವ ಎಸ್ಕಲೇಟರುಗಳೇ ಮೊಟ್ಟ ಮೊದಲನೆಯ ಅಚ್ಚರಿ. ಕೊನೆಯಿಲ್ಲದಂತೆ ಕಾಣುವ ಮೆಟ್ಟಿಲುಗಳು ನಮ್ಮನ್ನು ಭೂಗರ್ಭಕ್ಕೆ ಕೊಂಡೊಯ್ಯುವ ಹುನ್ನಾರದಂತೆ ಕಂಡವು. ನಾವು ಕೌತುಕ ಮಿಶ್ರಿತ ಗಾಬರಿಯಿಂದ ಆಚೀಚೆ ನೋಡುತ್ತಿದ್ದರೆ ನಮ್ಮ ಆಸುಪಾಸಿನಲ್ಲಿದ್ದ ರಷ್ಯನ್ನರು ಮಾತ್ರ ಗಂಭೀರವಾಗಿ, ಶಿಸ್ತಿನಿಂದ ನಿಂತಿದ್ದರು. ಕೆಲವರು ಓದುತ್ತಿದ್ದರೆ ಇನ್ನು ಕೆಲವರು ಫೋನಿನಲ್ಲಿ ಮುಳುಗಿದ್ದರು. ಅಂತೂ ಫ್ಲಾಟ್ ಫಾರ್ಮಿಗೆ ಬಂದು ತಲುಪಿದಾಗ ಅರಮನೆಯೊಳಗೆ ಹೊಕ್ಕಂತೆ ನಮ್ಮ ಕಣ್ಣನ್ನು ನಾವೇ ನಂಬಲಾಗದ ಸ್ಥಿತಿ. ಸುತ್ತಲೂ ಅಮೃತಶಿಲೆಯ ಸ್ತಂಭಗಳು, ಮೇಲೆ ಬೆಳಗುವ ದೊಡ್ಡ ದೊಡ್ಡ ಶಾಂಡ್ಲಿಯರುಗಳು, ಮೊಸೇಯಿಕ್ ಕಲೆಯನ್ನು ಸಾರುವ ವರ್ಣಮಯ ಕಲ್ಲುಗಳು ಇದು ಬರೀ ಮೆಟ್ರೋ ಸ್ಟೇಷನ್ ಅಲ್ಲ, ಇತಿಹಾಸದಲ್ಲೊಂದು ಪಯಣ, ಶ್ರೇಷ್ಠ ಕಲಾಕೃತಿಯ ದರ್ಶನವೆಂದು ಸಾರುತ್ತಿದ್ದವು.

ಇದನ್ನೂ ಓದಿ: ಏರ್‌ಬಿಎನ್‌ಬಿ ಎಂಬ ಮಾಯಾಲೋಕ!

ಈ ಸ್ಟೇಷನ್ನುಗಳು ಎಷ್ಟು ಚೆಂದವೋ ಅವುಗಳ ಹೆಸರುಗಳನ್ನು ಹೇಳುವುದು ಅಷ್ಟೇ ಕಷ್ಟ. ಎಲ್ಲವೂ ರಷ್ಯನ್ ಭಾಷೆಯಲ್ಲಿರುವುದರಿಂದ ನಾವೇ ಹೋಗುವುದು ಕಷ್ಟವೆಂದು ಸುಮ್ಮನೆ ಗೈಡನ್ನು ಹಿಂಬಾಲಿಸಿ ರಿಂಗ್ ಲೈನಿನ ಪ್ರತಿ ಸ್ಟೇಷನ್ನುಗಳನ್ನು ಹತ್ತಿಳಿದೆವು. ಸ್ವೆಟ್ಲಾನಾ ಬೇರೆ ಯಾವುದೇ ಕಾರಣಕ್ಕೂ ಅವಳನ್ನು ಬಿಟ್ಟು ಹೋಗಬಾರದೆಂದು, ಹೋದರೆ ವಾಪಸ್ಸು ಬರುವುದು ಕಷ್ಟವೆಂದು ತಾಕೀತು ಮಾಡಿದ್ದಳು. ರಷ್ಯಾದ ಮೆಟ್ರೋ ಅಲ್ಲಿಯ ಕುಖ್ಯಾತ ಸರ್ವಾಧಿಕಾರಿಯಾದ ಸ್ಟಾಲಿನ್ ಕಾಲದಲ್ಲಿ ಅಂದರೆ 1935 ರಲ್ಲಿ ಶುರುವಾದದ್ದಂತೆ. ಅಂದಹಾಗೆ ಈ ಸ್ಟಾಲಿನ್ ಕಟ್ಟಿಸಿದ ಸೆವೆನ್ ಸಿಸ್ಟರ್ಸ್ ಕಟ್ಟಡಗಳು ಇಡೀ ಮಾಸ್ಕೋಗೆ ಒಂದು ಸೋವಿಯತ್ ಗತ್ತನ್ವು ತಂದುಕೊಟ್ಟಿರುವುದು ನಿಜ.

Untitled design (49)

ನಮ್ಮ ಮೊದಲನೆಯ ಸ್ಟೇಷನ್ನಾದ ಕೊಮ್ಸೋಮೋಲ್ಸ್ಕಾಯ ಜಗತ್ತಿನಲ್ಲೇ ಅತ್ಯಂತ ಸುಂದರ ಮೆಟ್ರೋ ಸ್ಟೇಷನ್ ಎಂದು ಹೆಸರಾದದ್ದು. ಬರೋಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು ರಷ್ಯಾದ ಇತಿಹಾಸವನ್ನು ಚಿನ್ನದ ಬಣ್ಣದ ಮೊಸಾಯಿಕ್ ಗಳಲ್ಲಿ ಚಿತ್ರಿಸಲಾಗಿದೆ. ಅಲ್ಲಿನ ಸುಂದರ ಕಮಾನುಗಳಂತೂ ಭವ್ಯತೆಯೇ ಮೂರ್ತಿವೆತ್ತಂತೆ ಕಾಣುತ್ತವೆ. 1952 ರಲ್ಲಿ ಶುರುವಾದ ಈ ಸ್ಟೇಷನ್ನು ರಷ್ಯಾದ ಹೆಮ್ಮೆಯ ಪ್ರತಿನಿಧಿಯಂತೆ ತೋರುತ್ತದೆ.

ಮುಂದೆ ಮಾಯಕೋವಸ್ಕಾಯ ಸ್ಟೇಷನ್‌ಗೆ ಬಂದಾಗ ಅಲ್ಲಿ ಕಂಡದ್ದು ಸುಂದರ ಮೇಲ್ಛಾವಣಿಗಳು, ಕಲಾತ್ಮಕವಾದ ದೀಪಾಲಂಕಾರ ಮತ್ತು ಆಧುನಿಕ ಶೈಲಿಯ ವಾಸ್ತುಶಿಲ್ಪ. ವಿಮಾನಗಳು, ಕ್ರೀಡಾಪಟುಗಳು, ತೆರೆದ ಆಗಸದಂಥ ಚಿತ್ರಗಳಿರುವ ಅದ್ಭುತವಾದ ಛಾವಣಿಗಳು ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ.

ಅಲ್ಲಿಂದ ಮುಂದೆ ನೊವೊಸ್ಲೊಬೊಡ್ಸ್ಕಾಯ ಸ್ಟೇಷನ್‌ಗೆ ಬಂದಾಗ ಎಲ್ಲೆಲ್ಲೂ ವರ್ಣಮಯ ಗಾಜಿನ ಫಲಕಗಳು. ಹೊಳೆಯುವ ಹಿತ್ತಾಳೆ ಫ್ರೇಮಿನಲ್ಲಿ ಬಂಧಿತವಾದ ಸ್ಟೇನ್ಡ್ ಗ್ಲಾಸ್ ಕಲಾಕೃತಿಗಳು ಎಲ್ಲೆಲ್ಲೂ ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸುತ್ತವೆ.

ಪ್ಲೊಶಾಡ್ ರೆವಲ್ಯೂಸ್ಕಿ ಸ್ಟೇಷನ್‌ನೊಳಗೆ ಬಂದಾಗ ಕಂಚಿನ ಪ್ರತಿಮೆಗಳದೇ ಸಾಮ್ರಾಜ್ಯ. ರಷ್ಯಾದ ಜನ ಸಾಮಾನ್ಯರು, ವಿದ್ಯಾರ್ಥಿಗಳು, ಆಟಗಾರರು, ರೈತರು ಸುಂದರ ಪ್ರತಿಮೆಗಳಾಗಿ ಸಾಲಾಗಿ ನಿಂತಿದ್ದರು. ಅಲ್ಲಿಯ ನಾಯಿಯ ಪ್ರತಿಮೆಯೊಂದರ ಮೂಗು ಮುಟ್ಟಿದರೆ ಒಳಿತಾಗುತ್ತದೆಯೆಂಬ ಪ್ರತೀತಿ ಇದೆಯೆಂದು ಸ್ವೆಟ್ಲಾನಾ ಹೇಳಿದಾಗ ನಾವೆಲ್ಲರೂ ನಾಯಿಯ ಮೂಗು ಸವರಿದೆವು.

ಮುಂದಿನದ್ದು ಅತ್ಯಂತ ಆಳವಾದ ಸ್ಟೇಷನ್ ಎಂದೇ ಹೆಸರಾದ ಪಾರ್ಕ್ ಪಾಬೊಡಿ. ಎಂಬತ್ನಾಲ್ಕು ಮೀಟರುಗಳಷ್ಟು ಆಳದಲ್ಲಿರುವ ಈ ಸ್ಟೇಷನ್‌ನಲ್ಲಿ ಯುದ್ಧದ ಸನ್ನಿವೇಶಗಳನ್ನು ಮ್ಯೂರಲ್ ಕಲಾಕೃತಿಗಳ ಮೂಲಕ ಚಿತ್ರಿಸಲಾಗಿದೆ. ಹೀಗೆಯೇ ಕಾಲಾನುಕ್ರಮದಲ್ಲಿ ರಷ್ಯಾದ ಹೆಮ್ಮೆಯ ಕಾದಂಬರಿಕಾರರಾದ ದಾಸ್ತೋವಸ್ಕಿ, ಪುಷ್ಕಿನ್ ಮೊದಲಾದವರಿಗೆ ಮೀಸಲಾಗಿಟ್ಟ ಮೆಟ್ರೊ ಸ್ಟೇಷನ್‌ಗಳನ್ನು ನಿರ್ಮಿಸಿದ್ದಾರೆಂದು ನಮ್ಮ ಗೈಡ್ ಹೇಳಿದಾಗ ಅವನ್ನು ನೋಡಲಾಗದೇ ಇದ್ದುದಕ್ಕೆ ಬೇಸರವಾಯಿತು.

ಹೀಗೆ ಒಂದಕ್ಕಿಂತ ಇನ್ನೊಂದು ವಿಭಿನ್ನವಾದ, ಚೆಂದವಾದ ಸ್ಟೇಷನ್‌ಗಳನ್ನು ನೋಡುತ್ತ, ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಗಮನಕ್ಕೆ ಬಂದ ಮತ್ತೊಂದು ಸ್ವಾರಸ್ಯಕರ ವಿಷಯವೆಂದರೆ ಈ ರೈಲುಗಳ ಸಮಯ ಪಾಲನೆ ಮತ್ತು ಪ್ರಯಾಣಿಕರ ಶಿಸ್ತು. ನ್ಯೂಯಾರ್ಕಿನ ಸಬ್ ವೇ, ಲಂಡನ್‌ನ ಟ್ಯೂಬ್ ಗಳಲ್ಲಿರುವ ಅಸಾಧ್ಯ ಗದ್ದಲ ಗಲಾಟೆ ಇಲ್ಲಿಲ್ಲ. ಸುತ್ತಲಿನ ವೈಭವವನ್ನು ಕಂಡೂ ಕಾಣದಂತೆ ಗಂಭೀರವಾಗಿ, ಮೌನವಾಗಿ, ಶಿಸ್ತಿನಿಂದ ಸಂಚರಿಸುವ ಪ್ರಯಾಣಿಕರು ನಮಗೆ ನಿಗೂಢವಾಗಿಯೇ ಕಾಣುತ್ತಿದ್ದರು. ದೈನಂದಿನದ ಸಾಮಾನ್ಯ ಪ್ರಯಾಣವನ್ನು ಕೂಡ ಹೀಗೆ ವಿಶೇಷವಾಗಿಸಬಹುದೆಂಬ ಯೋಚನೆಯೇ ಖುಷಿ ಕೊಟ್ಟಿತು.

Untitled design (47)

ಕರಾರುವಾಕ್ಕಾಗಿ ಚಲಿಸುವ ರೈಲುಗಳು ಎಲ್ಲಿಯೂ ಒಂದು ನಿಮಿಷಕ್ಕಿಂತ ಹೆಚ್ಚು ಕಾಯಿಸಲಿಲ್ಲ. ನಿಜ ಹೇಳಬೇಕೆಂದರೆ ಮುಂದುವರಿದ ದೇಶಗಳ ರೈಲು ನಿಲ್ದಾಣಗಳಂತೆ ಎಲ್ಲಿಯೂ ನಿರ್ಗತಿಕರ ನಿರಾಶ್ರಿತರ ಡೇರೆಗಳೂ ಇರಲಿಲ್ಲ. ಮಾದಕ ವ್ಯಸನಿಗಳೂ ಕಾಣಲಿಲ್ಲ. ನಮ್ಮ ದೇಶದಲ್ಲಿರುವಂತೆ ಗಲೀಜಾಗಲೀ ಕಸವಾಗಲೀ ಇರಲಿಲ್ಲ.

ಮೆಟ್ರೋ ಸವಾರಿ ಮುಗಿಸಿ ಸುರಂಗದ ಹೊರಗೆ ಬಂದಾಗ ಇಡೀ ಮಾಸ್ಕೊ ಹೊಸದಾಗಿ ಕಂಡಿತ್ತು. ಇನ್ನಷ್ಟು ಆಪ್ತವೆನಿಸಿತು. ಸ್ವೆಟ್ಲಾನಾ ಹೇಳಿದಂತೆ ಮಾಸ್ಕೋದ ಮೆಟ್ರೋ, ನೆಲದಡಿಯಲ್ಲಿ ಇಡೀ ರಷ್ಯಾದ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ, ಜನಜೀವನ, ಯುದ್ಧಗಳು, ರಾಜ ಮನೆತನ ಎಲ್ಲವನ್ನು ಪ್ರತಿಬಿಂಬಿಸುತ್ತಿರುವುದು ನಿಜವೆನ್ನಿಸಿತು. ಸೌಂದರ್ಯ ಅಪರೂಪದ ವಸ್ತುಗಳಲ್ಲಿಲ್ಲ. ಬದಲಾಗಿ ದಿನ ನಿತ್ಯದ ಬದುಕಲ್ಲಿದೆಯೆಂಬ ಅರಿವು ಮೂಡಿಸಿತ್ತು.

ಇನ್ನೊಂದು ಮಹತ್ವದ ಸಂಗತಿಯೆಂದರೆ ಎರಡನೆಯ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮೆಟ್ರೋ ಸ್ಟೇ ಮತ್ತು ಬೋಗಿಗಳು ಯುದ್ಧ ಸಂತ್ರಸ್ತರ, ನಿರಾಶ್ರಿತರ ಮತ್ತು ಜನಸಾಮಾನ್ಯರ ಅಡಗುದಾಣವಾಗಿ ಬದಲಾಗಿತ್ತು.

ಅಲ್ಲಿ ನಡೆಯುತ್ತಿದ್ದ ಗಾಯಾಳುಗಳ ಶುಶ್ರೂಷೆ, ಗರ್ಭಿಣಿಯರ ಆರೈಕೆ, ನವಜಾತ ಶಿಶುಗಳ ಜನನ ಮೊದಲಾದ ಮಾನವೀಯ ಘಟನೆಗಳಿಗೆ ಸಾಕ್ಷಿಯಾದ ಈ ಸ್ಟೇಷನ್‌ಗಳು ರಷ್ಯಾದ ಅಸ್ತಿತ್ವದೊಂದಿಗೆ ಬೆಸೆದುಕೊಂಡಿವೆ. ಎಲ್ಲೆಲ್ಲೂ ಸುಂದರ ಪ್ರತಿಮೆಗಳು, ಕಲಾ ಗ್ಯಾಲರಿಗಳು, ಸಂಗ್ರಹಾಲಯಗಳು, ಥಿಯೇಟರುಗಳು, ಕ್ಯಾಥೆಡ್ರಲ್ಲುಗಳಿಂದ ತುಂಬಿರುವ ಮಾಸ್ಕೋದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ನೋಡಬಹುದಾದ ಅತ್ಯಂತ ಸುಂದರವಾದ ಮ್ಯೂಸಿಯಂ ಎಂದರೆ ಇದೇ. ಮಾಸ್ಕೋಗೆ ಬಂದವರು ಮೆಟ್ರೋ ಸವಾರಿ ಮಾಡಲು ಮತ್ತು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ.