Saturday, April 18, 2026
Saturday, April 18, 2026

ಗ್ರೀಸ್‌ ಎಂಬ ಕಥಾನಗರಿಯ ನೆನಪುಗಳು

“I like ruins because what remains is not the total design, but the clarity of thought, the naked structure and the spirit of the thing.” - Tadao Ando ಗ್ರೀಸ್‌ನಲ್ಲಿ ನಾವು ಭೇಟಿ ನೀಡಿದ ಪ್ರಮುಖ ಸ್ಥಳಗಳೆಂದರೆ ಅಥೆನ್ಸ್, ಮ್ಯಾಸಿಡೋನಿಯಾ, ಡೆಲ್ಫಿ, ಮೈಸಿನೆ, ಮ್ಯಾಸಿಡೋನಿಯನ, ಮೆಟಿಯೋರಾ, ಥೆಸಲೋನಿಕಿ, ಎಪಿಡಾರಸ್, ಡಿಯೋನ್ ಮತ್ತು ಕೇಪ್ ಸೌನಿಯನ್. ನಮ್ಮ ಗುಂಪಿನಲ್ಲಿ ಆಸ್ಟ್ರೇಲಿಯಾ, ಕೆನಡಾ, ನಾರ್ತ್‌ ಕರೋಲಿ ಮತ್ತು ಅಮೆರಿಕದ ಹನ್ನೆರಡು ಜನರಿದ್ದರು.

  • ಜಯ ನಾಗೇಂದ್ರ

ಗ್ರೀಸ್ ಯುರೋಪಿನ ತುತ್ತತುದಿಯ ದಕ್ಷಿಣದಲ್ಲಿದೆ. ಅದರ ರಾಜಧಾನಿ ಅಥೆನ್ಸ್‌. ಈ ರೋಮಾಂಚಕ ನಗರ 'ಅಕ್ರೋಪೊಲಿಸ್' ಬೆಟ್ಟದ ಕೆಳಭಾಗದಲ್ಲಿದೆ. ಗ್ರೀಸ್ 4,500 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ದೇಶ. ಕೆಲವರು ಇದು 8,500 ವರ್ಷಗಳಷ್ಟು ಹಳೆಯದು ಎಂದು ಹೇಳುವುದೂ ಇದೆ. ಈ ದೇಶದಲ್ಲಿ ಎಲ್ಲಿ ನೋಡಿದರೂ ಪುರಾತನ ಕಲ್ಲಿನ ಅವಶೇಷಗಳನ್ನು ಕಾಣಬಹುದು. ಗ್ರೀಸ್‌ನಲ್ಲಿ ಒಂದು ನಿಯಮವಿದೆ; ಯಾರಾದರೂ ಮನೆ ಅಥವಾ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲು ಐದು ಅಡಿಗಿಂತ ಹೆಚ್ಚು ಆಳವಾಗಿ ಭೂಮಿಯನ್ನು ಅಗೆಯಬೇಕಾದರೆ, ಅವರು ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಆ ಮಟ್ಟಿಗೆ, ಇಡೀ ದೇಶವೇ ಪ್ರಾಚೀನ ಇತಿಹಾಸದ ಪದರಗಳ ಮೇಲೆ ಕುಳಿತಿದೆ.

ಏಸುಕ್ರಿಸ್ತ ಹುಟ್ಟುವ ಸುಮಾರು 500 ವರ್ಷಗಳ ಮೊದಲು, ಅಥೆನ್ಸ್ ಪಾಶ್ಚಿಮಾತ್ಯ ಪ್ರಪಂಚದ ಕೇಂದ್ರವಾಗಿತ್ತು. ರೋಮ್ ಇನ್ನೂ ಒಂದು ಸಣ್ಣ ಹಳ್ಳಿಯಾಗಿದ್ದಾಗ, ಅಥೆನ್ಸ್ ಪಾಶ್ಚಿಮಾತ್ಯ ನಾಗರಿಕತೆಗೆ ಅಡಿಪಾಯವನ್ನು ಹಾಕುತ್ತಿತ್ತು. ಪ್ರಾಚೀನ ಅಥೆನ್ಸ್‌ನಲ್ಲಿ ಪಾರ್ಥೆನಾನ್, ಅಗೋರಾ ಮತ್ತು ಅದ್ಭುತವಾದ ರಾಷ್ಟ್ರೀಯ ಪುರಾತತ್ವ ವಸ್ತುಸಂಗ್ರಹಾಲಯಗಳು ನೋಡಲೇಬೇಕಾದ ಸ್ಥಳಗಳು.

ಇದನ್ನೂ ಓದಿ: ಬಿಟ್ಟೆನೆಂದರೂ ಬಿಡದೀ ಪ್ರವಾಸದ ಮಾಯೆ

ಅಕ್ರೋಪೊಲಿಸ್

ಮೊದಲ ದಿನ, ಅಥೆನ್ಸ್‌ನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಶಿಖರವಾದ 'ಅಕ್ರೋಪೊಲಿಸ್'ಗೆ ಭೇಟಿ ನೀಡಿದೆವು. ಗ್ರೀಕ್ ಭಾಷೆಯಲ್ಲಿ ಅಕ್ರೋಪೊಲಿಸ್ ಎಂದರೆ "ಎತ್ತರದ ನಗರ". ಕ್ರಿ.ಪೂ. 500ರಲ್ಲಿ ನಿರ್ಮಿಸಲಾದ ಮತ್ತು ಕನ್ಯಾ ದೇವತೆ 'ಅಥೇನಾ'ಳಿಗೆ ಅರ್ಪಿತವಾದ 'ಪಾರ್ಥೆನಾನ್' ದೇವಾಲಯವು ಪ್ರಾಚೀನ ಪ್ರಪಂಚದ ಅತ್ಯುತ್ತಮ ದೇವಾಲಯ ಎನ್ನಲಾಗುತ್ತದೆ. 2,500 ವರ್ಷಗಳ ಹಿಂದೆಯೇ ಭವ್ಯವಾಗಿ ಕಲಾತ್ಮಕ ಕೆತ್ತನೆ ಮತ್ತು ಬಣ್ಣಗಳಿಂದ ಕೂಡಿದ್ದ ಜಾಗ. ಇದರ ಪಕ್ಕದಲ್ಲೇ 'ಎರೆಕ್ಥಿಯನ್' ಎಂಬ ಕಟ್ಟಡ ತನ್ನ 'ಪೋರ್ಚ್ ಆಫ್ ದಿ ಕ್ಯಾರಿಯಾಟಿಡ್ಸ್'ಗೆ ಹೆಸರುವಾಸಿ. ಇಲ್ಲಿ ಕಂಬಗಳಂತಿರುವ ಆರು ಸುಂದರ ಕನ್ಯೆಯರ ವಿಗ್ರಹಗಳು ಮೇಲ್ಛಾವಣಿಯನ್ನು ಹೊತ್ತಿವೆ. ಅಕ್ರೋಪೊಲಿಸ್ ತಲುಪಲು ಎತ್ತರವಾದ ಕಲ್ಲಿನ ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಆದರೆ ಅನಿವಾರ್ಯವಿರುವವರಿಗೆ ಲಿಫ್ಟ್ ಸೌಲಭ್ಯವಿದೆ. ಜನಸಂದಣಿ ಮತ್ತು ಮಧ್ಯಾಹ್ನದ ಬಿಸಿಲನ್ನು ತಪ್ಪಿಸಲು ಬೆಳಗ್ಗೆ ಬೇಗ ಅಥವಾ ಸಂಜೆ ಹೊತ್ತಿಗೆ ಇಲ್ಲಿಗೆ ಭೇಟಿ ನೀಡುವುದು ಉತ್ತಮ.

ಅಕ್ರೋಪೊಲಿಸ್‌ನ ಕೆಳಭಾಗದಲ್ಲಿ ಅಗೋರಾ ಎಂಬ ಪುರಾತನ ಮಾರುಕಟ್ಟೆ ಇದೆ. ಸಾಕ್ರಟಿಸ್ ತನ್ನ ಜೀವನದ ಹೆಚ್ಚಿನ ಭಾಗವನ್ನು ಇಲ್ಲೇ ಕಳೆದನು ಎಂದು ಹೇಳುತ್ತಾರೆ. ಅವನು ಇಲ್ಲಿ ನಾಗರಿಕರ ಜತೆ ಸಂವಾದಗಳನ್ನು ಮಾಡುತ್ತಿದ್ದ ಮತ್ತು ಜನರಿಗೆ "ನಿನ್ನನ್ನು ನೀನು ತಿಳಿಯಬೇಕು" ಎಂದು ಪ್ರೇರೇಪಿಸುತ್ತಿದ್ದನು. ಗ್ರೀಕ್ ವಾಸ್ತುಶಿಲ್ಪದಲ್ಲಿ ಡೋರಿಕ್‌, ಅಯಾನಿಕ್‌ ಹಾಗೂ ಕೊರಿಂಥಿಯನ್‌ ಎಂಬ ಮೂರು ಪ್ರಮುಖ ಶೈಲಿಗಳಿವೆ.

Untitled design - 2026-04-17T212737.555

ರಾಷ್ಟ್ರೀಯ ಪುರಾತತ್ವ ವಸ್ತುಸಂಗ್ರಹಾಲಯ

ಗ್ರೀಸ್‌ಗೆ ಭೇಟಿ ನೀಡುವ ಪ್ರತಿಯೊಬ್ಬರೂ ತಪ್ಪದೇ ನೋಡಲೇಬೇಕಾದ ಸ್ಥಳವೆಂದರೆ 'ರಾಷ್ಟ್ರೀಯ ಪುರಾತತ್ವ ವಸ್ತುಸಂಗ್ರಹಾಲಯ'. ಕ್ರಿ.ಪೂ. 7000 ರಿಂದ ಕ್ರಿ.ಶ. 300 ರವರೆಗಿನ ಗ್ರೀಕ್ ಕಲೆ ಮತ್ತು ಕಲಾಕೃತಿಗಳ ಅಸಾಮಾನ್ಯ ಸಂಗ್ರಹ ಇಲ್ಲಿದೆ.

ಅಥೆನ್ಸ್‌ನ 'ಅಕ್ರೋಪೊಲಿಸ್ ಮ್ಯೂಸಿಯಂ' ಕೂಡ ಗ್ರೀಸ್‌ನ ಕ್ರಿ.ಪೂ. 700 ರಿಂದ ರೋಮನ್ ಯುಗದವರೆಗಿನ ಸುಮಾರು 70,000 ಕ್ಕೂ ಹೆಚ್ಚು ಉತ್ಖನನ ಮಾಡಿದ ಪ್ರತಿಮೆಗಳು ಮತ್ತು ವಸ್ತುಗಳನ್ನು ಸಂರಕ್ಷಿಸಿಟ್ಟಿದೆ. ಅಕ್ರೋಪೊಲಿಸ್‌ನ ಆರಂಭಿಕ ದೇವಾಲಯಗಳ ಶಿಲ್ಪಗಳು, ಅಥೇನಾ ದೇವತೆಯ ಪ್ರತಿಮೆಗಳು, ಪುರುಷರ ವಿಗ್ರಹಗಳು ಮತ್ತು ಕಂಚಿನ ಹಾಗೂ ಮಣ್ಣಿನ ಪಾತ್ರೆಗಳು ಇಲ್ಲಿವೆ. ವಿಶೇಷವೆಂದರೆ, ನೆಲಕ್ಕೆ ಗಾಜಿನ ಹಾಸನ್ನು ಹಾಸಲಾಗಿದ್ದು, ಪ್ರವಾಸಿಗರು ತಮ್ಮ ಪಾದದ ಕೆಳಗಿರುವ ಉತ್ಖನನ ಮಾಡಿದ ಜಾಗವನ್ನು ನೋಡಬಹುದು.

ಈ ಮ್ಯೂಸಿಯಂನಲ್ಲಿ ಪಾರ್ಥೆನಾನ್ ಶಿಲ್ಪಗಳನ್ನು ಅವು ಹೇಗೆ ಕಂಡುಬಂದವೋ ಅದೇ ಕ್ರಮದಲ್ಲಿ ಜೋಡಿಸಲಾಗಿದೆ. ಇಲ್ಲಿ ಫೋಟೋ ತೆಗೆಯುವಂತಿಲ್ಲ. ಈ ವಸ್ತುಸಂಗ್ರಹಾಲಯವು 82,000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಅದರಲ್ಲಿ 46,000 ಚದರಡಿಯನ್ನು ಪ್ರದರ್ಶನಕ್ಕಾಗಿ ಮೀಸಲಿಡಲಾಗಿದೆ. ಮೈಸಿನಿಯನ್ ಸಾಮ್ರಾಜ್ಯದ ರಾಜಮನೆತನದ ಸಮಾಧಿಗಳಲ್ಲಿ ಸಿಕ್ಕಿದ ಸಂಪತ್ತನ್ನು ಕಂಡಾಗ ಇದು ಸಾಕ್ರೆಟಿಸ್‌ ಮತ್ತು ಪ್ಲೇಟೋಗಿಂತ ಸಾವಿರ ವರ್ಷಗಳ ಮೊದಲೇ ಅಭಿವೃದ್ಧಿ ಹೊಂದಿದ ಸಮಾಜ ಎನ್ನುವುದು ಸಾಬೀತಾಗುತ್ತದೆ. ಅತ್ಯುತ್ತಮವಾಗಿ ಅಲಂಕರಿಸಿದ ಶಸ್ತ್ರಾಸ್ತ್ರಗಳು, ಸುಂದರವಾದ ಚಿನ್ನದ ಆಭರಣಗಳು ಮತ್ತು ನಾಜೂಕಾದ 'ವಫಿಯೊ' ಚಿನ್ನದ ಕಪ್‌ಗಳು ಇಲ್ಲಿವೆ.

ಪ್ರತಿಮೆಗಳಿಗೆ ಸರಳವಾಗಿ ʼಕುರೊಸ್‌ (ಹುಡುಗ) ಮತ್ತು ʼಕೊರೆʼ(ಹುಡುಗಿ) ಎಂದು ಹೆಸರಿಸಲಾಗಿತ್ತು. ಕ್ರಿ.ಪೂ. 600ರ ಅವಧಿಯ ಶಿಲ್ಪಗಳು ಒಂದೇ ರೀತಿಯ ಲಕ್ಷಣಗಳನ್ನು ಹೊಂದಿದ್ದವು.

ಪೊಸೈಡನ್ ಆಫ್ ಆರ್ಟೆಮಿಶನ್

ಈ ಮ್ಯೂಸಿಯಂನ ಅತ್ಯಂತ ದೊಡ್ಡ ಸಂಪತ್ತು ಎಂದರೆ 'ಪೊಸೈಡನ್ ಆಫ್ ಆರ್ಟೆಮಿಶನ್'. ಇದು ಕ್ರಿ.ಪೂ. 460 ರ ಸುಮಾರಿಗೆ ಕಂಚಿನಲ್ಲಿ ನಿರ್ಮಿಸಲಾದ ಪ್ರತಿಮೆ. ಸಮುದ್ರ ದೇವರಾದ ಪೊಸೈಡನ್‌ನ ಈ ವಿಗ್ರಹವು ಗ್ರೀಕ್ ಕಲೆಯನ್ನು ಅದ್ಭುತವಾಗಿ ಪ್ರತಿನಿಧಿಸುತ್ತದೆ. 'ಹೌಸ್ ಆಫ್ ಡಿಯೋನೈಸಸ್'ನ ಉತ್ಖನನದಲ್ಲಿ ಅತ್ಯಂತ ಸುಂದರವಾದ ಮೊಸಾಯಿಕ್ ನೆಲಹಾಸುಗಳು ಮತ್ತು ಹೇರಾ ದೇವತೆಯ ಸಿಕ್ಕವು. 2,200 ವರ್ಷ ಹಳೆಯ ಪ್ರತಿಮೆಯನ್ನು ಆರಂಭಿಕ ಕ್ರಿಶ್ಚಿಯನ್ನರು ನಗರದ ರಕ್ಷಣಾ ಗೋಡೆಯನ್ನು ಕಟ್ಟಲು ಫಿಲ್ಲರ್‌ ಮಟಿರಿಯಲ್‌ನಂತೆ ಬಳಸಿದ್ದರಂತೆ.

ಕ್ರಿ.ಪೂ. 480ರಿಂದ 400ರವರೆಗಿನ 80 ವರ್ಷಗಳಲ್ಲಿ ಅಂದರೆ ಸಾಕ್ರೆಟಿಸ್‌ ಮತ್ತು ಪೆರಿಕಲ್ಸ್ ಅವರ ಕಾಲದಲ್ಲಿ ಗ್ರೀಸ್‌ನ 'ಸುವರ್ಣ ಯುಗ'ವಾಗಿತ್ತಂತೆ. ಆಗಿನ ಪ್ರಮುಖ ತತ್ತ್ವವೆಂದರೆ ʼಗೋಲ್ಡನ್ ಮೀನ್ʼ. ಅಂದರೆ ʼಯಾವುದೂ ಅತಿಯಾಗಬಾರದುʼ. ನಮ್ಮ ಗೈಡ್‌ ಪ್ರಕಾರ ಈ ಕಾಲದ ಶಿಲ್ಪಗಳು 'ಕಾಂಟ್ರಾಪ್ಪೋಸ್ಟೊ' ಶೈಲಿಯನ್ನು ಪರಿಚಯಿಸಿದವು. ಇದರಲ್ಲಿ ದೇಹದ ತೂಕವನ್ನು ಒಂದು ಕಾಲಿನ ಮೇಲೆ ಹಾಕಿ ಸೊಂಟವನ್ನು ಸಡಿಲಗೊಳಿಸುವುದು. ಇದರಿಂದ ಪ್ರತಿಮೆಗಳು ಹೆಚ್ಚು ಜೀವಂತವಾಗಿ ಕಾಣತೊಡಗುತ್ತವೆಯಂತೆ.

Untitled design - 2026-04-17T212806.073

ಅನೇಕ ಮಹಾನ್ ನಾಗರಿಕತೆಗಳಂತೆ, ಪ್ರಾಚೀನ ಗ್ರೀಸ್ ಕೂಡ ಉತ್ತುಂಗಕ್ಕೇರಿ ನಂತರ ಪತನವಾಯಿತು. ಆಧುನಿಕ ಅಥೆನ್ಸ್ ನಗರವನ್ನು ಸುಮಾರು 19ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇನ್ನೂರು ವರ್ಷಗಳ ಹಿಂದೆ, ಅಥೆನ್ಸ್ ಕೇವಲ 8,000 ಜನರಿದ್ದ ಒಂದು ಪುಟ್ಟ ಪಟ್ಟಣವಾಗಿತ್ತು. 1800ರ ದಶಕದ ಆರಂಭದಲ್ಲಿ ಗ್ರೀಕರು ಒಟ್ಟೋಮನ್ ತುರ್ಕರಿಂದ ಸ್ವಾತಂತ್ರ್ಯ ಪಡೆದಾಗ, ಅವರು ಐತಿಹಾಸಿಕ ಅಥೆನ್ಸ್ ಅನ್ನು ತಮ್ಮ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡರು. ಸ್ಥಳೀಯ ಇತಿಹಾಸದ ಪ್ರಕಾರ, ದೇಶದ ಪ್ರಮುಖ ಕುಟುಂಬಗಳು ರಾಜನ ಹತ್ತಿರ ಇರಲು ಇಲ್ಲಿ ತಮ್ಮ ಅರಮನೆಗಳನ್ನು ನಿರ್ಮಿಸಿಕೊಂಡರು. 1843 ರಲ್ಲಿ, ಜನರು ಅಲ್ಲಿನ ಸಂವಿಧಾನಕ್ಕಾಗಿ ಪ್ರತಿಭಟನೆ ನಡೆಸಿದರು. ರಾಜನು ತನ್ನ ಬಾಲ್ಕನಿಯಿಂದ ಜನರನ್ನು ಉದ್ದೇಶಿಸಿ ಮಾತನಾಡಿ ಪ್ರಜಾಪ್ರಭುತ್ವವನ್ನು ನೀಡಿದನಂತೆ. ಅಂದಹಾಗೆ, ಗ್ರೀಕರ ಪೂರ್ವಜರೇ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು. ಅಂದಿನಿಂದ, ಈ ಸ್ಥಳವನ್ನು 'ಸಂವಿಧಾನ ಚೌಕ' ಅಥವಾ 'ಸಿಂಟಾಗ್ಮಾ ಸ್ಕ್ವೇರ್' ಎಂದು ಕರೆಯಲಾಗುತ್ತದೆ.

ಪೆಲ್ಲಾ

ಅಲೆಕ್ಸಾಂಡರ್ ದಿ ಗ್ರೇಟ್‌ನ ಜನ್ಮಸ್ಥಳ ಪೆಲ್ಲಾ, ಉತ್ತರ ಗ್ರೀಸ್‌ನ ಅತ್ಯಂತ ಆಕರ್ಷಕ ಪುರಾತತ್ವ ತಾಣಗಳಲ್ಲೊಂದು. ಪೆಲ್ಲಾ ಮ್ಯೂಸಿಯಂನಲ್ಲಿ ಅಲೆಕ್ಸಾಂಡರ್ ಕಾಲದಿಂದ ರೋಮನ್ ವಿಜಯದವರೆಗಿನ ನಾಣ್ಯಗಳು ಸೇರಿದಂತೆ ಹಲವಾರು ಗಮನಾರ್ಹ ಸಂಗ್ರಹಗಳಿವೆ. ಪ್ರಾಚೀನ ಪೆಲ್ಲಾ ನಗರದ ಪಕ್ಕದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಗಣ್ಯರ ಭವನಗಳಿಂದ ಉತ್ಖನನ ಮಾಡಿದ ಅತ್ಯದ್ಭುತವಾದ ಮೊಸಾಯಿಕ್ ನೆಲಹಾಸುಗಳನ್ನು ಪ್ರದರ್ಶಿಸಲಾಗಿದೆ. ಪೆಲ್ಲಾದ ಅರಮನೆ ಸುಮಾರು 1,92,000 ಚದರಡಿಗಳಷ್ಟು ವಿಸ್ತಾರವಾಗಿದೆ. ಇದು ದೊಡ್ಡ ಅಂಗಳಗಳ ಸುತ್ತಲೂ ಐದು ಪ್ರಮುಖ ಕಟ್ಟಡಗಳನ್ನು ಹೊಂದಿವೆ. ಇವುಗಳಲ್ಲಿ ಸ್ವಾಗತ ಸಭಾಂಗಣಗಳು, ಸಭೆ ನಡೆಸುವ ಕೊಠಡಿಗಳು, ಆರಾಧನಾ ಸ್ಥಳಗಳು, ಸ್ನಾನದ ಕೊಠಡಿಗಳು, ಕಾರ್ಯಾಗಾರಗಳು ಮತ್ತು ಸರಕುಗಳ ಕೊಠಡಿಗಳಿದ್ದವು. ನಾವು ಹೋದಾಗ ಈ ಅರಮನೆ ಪ್ರದೇಶದಲ್ಲಿ ಹೊಸ ವಸ್ತುಸಂಗ್ರಹಾಲಯವೊಂದು ನಿರ್ಮಾಣವಾಗುತ್ತಿತ್ತು ಮತ್ತು ಪತ್ತೆಯಾದ ಅನೇಕ ವಸ್ತುಗಳನ್ನು ಅಲ್ಲಿ ಸಂಗ್ರಹಿಸಿಡಲಾಗಿತ್ತು.

ಮತ್ತೊಂದು ವಿಭಾಗದಲ್ಲಿ 'ಅಗೋರಾʼದಲ್ಲಿ ದೊರೆತ ವಸ್ತುಗಳಿವೆ. ಮಣ್ಣಿನ ಮುದ್ರೆಗಳು, ಶಾಸನಗಳು, ಬೃಹತ್ ಶಿಲ್ಪಗಳು ಮತ್ತು ವ್ಯಾಪಾರ ಚಟುವಟಿಕೆಗಳ ಕುರುಹುಗಳು ಇಲ್ಲಿವೆ. ಪೆಲ್ಲಾದ ಪವಿತ್ರ ಸ್ಥಳಗಳಲ್ಲಿ ಆರಾಧಿಸಲ್ಪಡುವ ದೇವರುಗಳ ಬಗ್ಗೆಯೂ ಮ್ಯೂಸಿಯಂ ಮಾಹಿತಿ ನೀಡುತ್ತದೆ.

ಮ್ಯಾಸಿಡೋನಿಯಾದ ಇನ್ನೊಂದು ಪಟ್ಟಣವಾದ ಡಿಯೋನ್. ಇದು ಪುರಾಣ ಪ್ರಸಿದ್ಧ ದೇವತೆಗಳ ವಾಸಸ್ಥಾನವಾದ 'ಮೌಂಟ್ ಒಲಿಂಪಸ್' ಪರ್ವತದ ಅಡಿಯಲ್ಲಿದೆ. ಈ ಪ್ರಾಚೀನ ತಾಣವನ್ನು ಮೊದಲ ಬಾರಿಗೆ 1806ರಲ್ಲಿ ಇಂಗ್ಲಿಷ್ ಪ್ರವಾಸಿ ವಿಲಿಯಂ ಮಾರ್ಟಿನ್ ಲೀಕ್ ಮಲಥ್ರಿಯಾ ಗ್ರಾಮದ ಬಳಿ ಗುರುತಿಸಿದರು. 1928ರ ನಂತರ ಇಲ್ಲಿ ಕ್ರಮಬದ್ಧವಾಗಿ ಪುರಾತತ್ವ ಕಾರ್ಯಗಳು ಪ್ರಾರಂಭವಾದವು. ಇಲ್ಲ ಅಲೆಕ್ಸಾಂಡರ್ ದಿ ಗ್ರೇಟ್‌ನ ತಂದೆಯಾದ ಎರಡನೇ ಫಿಲಿಪ್‌ನ ಸಮಾಧಿ ಕೂಡ ಇದೆ. ಇದಲ್ಲದೆ, ಕ್ರಿಶ್ಚಿಯನ್ ಬೆಸಿಲಿಕಾ, ಜೀಯಸ್ ದೇವರ ದೇವಾಲಯ ಮತ್ತು ಅಲೆಕ್ಸಾಂಡರ್‌ನ ನೆಚ್ಚಿನ ದೇವತೆ 'ಐಸಿಸ್' ಹಾಗೂ ಡೆಮಿಟರ್ ದೇವಾಲಯಗಳಿವೆ.

Untitled design - 2026-04-17T212814.096

ಮ್ಯಾಸಿಡೋನಿಯಾ

ಕ್ರಿ.ಪೂ. 400ರ ವೇಳೆಗೆ, ಪೆಲ್ಲಾ ನಗರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ್ದು, ಮ್ಯಾಸಿಡೋನಿಯನ್ ರಾಜಧಾನಿಯಾಗಿ ಬೆಳೆದಿತ್ತು. ಇಲ್ಲಿರುವ ದೊಡ್ಡ ಮನೆಗಳಲ್ಲಿ ಡೋರಿಕ್ ಅಥವಾ ಅಯಾನಿಕ್ ಕಂಬಗಳಿಂದ ಕೂಡಿದ ಅಂಗಳಗಳು, ಊಟದ ಕೋಣೆಗಳು, ಸುಂದರವಾದ ಮೊಸಾಯಿಕ್‌ಗಳು, ಗೋಡೆ ಚಿತ್ರಗಳು ಮತ್ತು ನೈರ್ಮಲ್ಯಕ್ಕಾಗಿ ಪ್ರತ್ಯೇಕ ಜಾಗಗಳನ್ನು ಕಾಣಬಹುದು. ಆದರೆ ಕಾಲಾನಂತರದಲ್ಲಿ, ಪೆಲ್ಲಾ ನಗರವು ಮಣ್ಣಿನ ಪದರಗಳ ಅಡಿಯಲ್ಲಿ ಹೂತುಹೋಗಿ ಮರೆಯಾಯಿತು. ಅಲೆಮಾರಿ ಗುಂಪುಗಳು ಈ ಅವಶೇಷಗಳ ಮೇಲೆ ನೆಲೆಸಿ ಅದನ್ನು ಒಂದು ಹಳ್ಳಿಯಾಗಿ ಪರಿವರ್ತಿಸಿದವು. ಈ ಹಳ್ಳಿಗಳ ಅಡಿಯಲ್ಲಿ ಹೂತುಹೋಗಿದ್ದ ಪ್ರಾಚೀನ ನಗರವನ್ನು ಪುರಾತತ್ವಶಾಸ್ತ್ರಜ್ಞರು ಪತ್ತೆಹಚ್ಚಿದಾಗ, ಸರಕಾರವು ಗ್ರಾಮಸ್ಥರಿಗೆ ಬೇರೆಡೆಗೆ ಹೋಗಲು ಪರಿಹಾರ ನೀಡಿ, 60,000 ಚದರ ಮೀಟರ್ ಪ್ರದೇಶದಲ್ಲಿ ಉತ್ಖನನ ನಡೆಸಲು ಅವಕಾಶ ಮಾಡಿಕೊಟ್ಟಿತು.

ಜರ್ಮನ್ ಮತ್ತು ಫ್ರೆಂಚ್ ಪುರಾತತ್ವಶಾಸ್ತ್ರಜ್ಞರು 1914ರಿಂದ ಶುರುಮಾಡಿದ ಉತ್ಖನನ 2017ರಲ್ಲೂ ಮುಂದುವರಿಯುತ್ತಿತ್ತು. ಇದುವರೆಗೂ ಸುಮಾರು 80,000 ಕಲಾಕೃತಿಗಳನ್ನು ಪತ್ತೆಹಚ್ಚಲಾಗಿದೆ.

ಡೆಲ್ಫಿ ಎಂಬ ಪ್ರಪಂಚದ ಹೊಕ್ಕಳು:

ಪರ್ವತಗಳಿಂದ ಆವೃತವಾಗಿರುವ ಡೆಲ್ಫಿ, ಪ್ರಾಚೀನ ಪ್ರಪಂಚದ ಅತ್ಯಂತ ಪ್ರಮುಖ ಪವಿತ್ರ ಸ್ಥಳಗಳಲ್ಲೊಂದು. 'ಡೆಲ್ಫಿ' ಎಂದರೆ ಗರ್ಭ ಎಂದರ್ಥ. ಅಥೆನ್ಸ್‌ನಿಂದ ವಾಯವ್ಯ ದಿಕ್ಕಿಗೆ ಎರಡು ಗಂಟೆಗಳ ಕಾಲ ಪ್ರಯಾಣಿಸಿದರೆ ಈ ಪೌರಾಣಿಕ ತಾಣವನ್ನು ತಲುಪಬಹುದು.

ಪ್ರಾಚೀನ ಡೆಲ್ಫಿಯು ಸೂರ್ಯ ದೇವನಾದ 'ಅಪೊಲೊ'ನ ಒರಾಕಲ್ ಆಗಿತ್ತು. ಒರಾಕಲ್‌ ಎಂದರೆ ಭವಿಷ್ಯ ಹೇಳುವ ಕೇಂದ್ರ. ಇಲ್ಲಿನ ಬೆಟ್ಟದ ಹಾದಿಯನ್ನು 'ಪವಿತ್ರ ಹಾದಿ' ಎಂದು ಕರೆಯಲಾಗುತ್ತದೆ. ಗ್ರೀಕ್ ಪುರಾಣಗಳ ಪ್ರಕಾರ, ಗ್ರೀಸ್‌ನ ಜೀಯಸ್ ದೇವರು ಪ್ರಪಂಚದ ಕೇಂದ್ರವನ್ನು ಕಂಡುಹಿಡಿಯಲು ಮುಂದಾದ. ಎರಡು ವಿರುದ್ಧ ದಿಕ್ಕುಗಳಿಂದ ಎರಡು ಹದ್ದುಗಳನ್ನು ಹಾರಿಸಿದ. ಅವು ಡೆಲ್ಫಿಯಲ್ಲಿ ಸಂಧಿಸಿದವು. ಜೀಯಸ್ ಈ ಸ್ಥಳವನ್ನು ಪ್ರಪಂಚದ ʼಹೊಕ್ಕಳುʼ ಎಂದು ಘೋಷಿಸಿದನು.

ಅಪೊಲೊ ದೇವಾಲಯದ ಒಳಗೆ 'ಪೈಥಿಯಾ' ಎಂಬ ಅರ್ಚಕಿ ಇರುತ್ತಿದ್ದರು. ಆಕೆಯ ಕೋಣೆಯ ಕೆಳಗೆ ಭೂಮಿಯಿಂದ ಅನಿಲ ಹೊರಬರುತ್ತಿತ್ತು. ಆ ಅನಿಲವನ್ನು ಸೇವಿಸಿದ ನಂತರ, ಆಕೆ ಅರೆಪ್ರಜ್ಞಾವಸ್ಥೆಗೆ ಜಾರಿ ನಿಗೂಢ ಶಬ್ದಗಳನ್ನು ಮಾಡುತ್ತಿದ್ದರು. ಅಲ್ಲಿನ ಅರ್ಚಕರು ಆ ಶಬ್ದಗಳನ್ನು ದೇವರು ನೀಡಿದ ಸಂದೇಶಗಳೆಂದು ವ್ಯಾಖ್ಯಾನಿಸುತ್ತಿದ್ದರಂತೆ. ಡೆಲ್ಫಿಯಲ್ಲಿ 'ಪೈಥಿಯನ್ ಕ್ರೀಡೆಗಳು' ನಡೆಯುತ್ತಿದ್ದವು. ಈ ಸ್ಪರ್ಧೆಗಳಲ್ಲಿ ಸಂಗೀತ ಮತ್ತು ಕಾವ್ಯಗಳಿಗೂ ಪ್ರಾಮುಖ್ಯತೆ ಇತ್ತು. ಹಬ್ಬಗಳ ಸಮಯದಲ್ಲಿ, ರಂಗಮಂದಿರದಲ್ಲಿ ಸುಮಾರು 5,000 ಜನರು ಮತ್ತು ಕ್ರೀಡಾಂಗಣದಲ್ಲಿ 7,000 ಕ್ರೀಡಾಭಿಮಾನಿಗಳು ಸೇರುತ್ತಿದ್ದರು ಎಂದು ಹೇಳಲಾಗುತ್ತದೆ.

ಅರಿಸ್ಟಾಟಲ್ ಶಾಲೆ

ಪುರಾತನ ಅರಿಸ್ಟಾಟಲ್ ಶಾಲೆಯ: ಪರಿಸರದ ಹತ್ತಿರದಲ್ಲಿರುವ ಗುಹೆಯಲ್ಲಿ ಪಾಠಶಾಲೆ ನಡೆಸುತ್ತಿದ್ದರು ಎಂದು ಹೇಳುತ್ತಾರೆ. ಅಲೆಕ್ಸಾಂಡರ್ ದಿ ಗ್ರೇಟ್‌ನ ತಂದೆಯಾದ ಎರಡನೇ ಫಿಲಿಪ್, ಈ ಶಾಲೆಯನ್ನು ಸ್ಥಾಪಿಸಲು ಅರಿಸ್ಟಾಟಲ್‌ಗೆ ಬೆಂಬಲ ನೀಡಿದ್ದನು. ಇಲ್ಲಿ ಅರಿಸ್ಟಾಟಲ್, ಯುವ ಅಲೆಕ್ಸಾಂಡರ್ ಮತ್ತು ಇತರರಿಗೆ ಶಾಸ್ತ್ರೀಯ ಗ್ರೀಕ್ ಚಿಂತನೆಗಳು ಮತ್ತು ಪ್ಲಾಟೋನಿಕ್ ಆದರ್ಶಗಳನ್ನು ಕಲಿಸುತ್ತಿದ್ದನು.

Untitled design - 2026-04-17T212744.484

ಆಧುನಿಕ ಶಾಲೆ: ಇದು ಗ್ರೀಸ್‌ನಲ್ಲೇ ಅತಿ ದೊಡ್ಡ ವಿಶ್ವವಿದ್ಯಾಲಯ. ಇಲ್ಲಿ 1,00,000ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾವಿರಾರು ಶೈಕ್ಷಣಿಕ ವಿಭಾಗಗಳು ಮತ್ತು 4,000 ಪ್ರೊಫೆಸರ್‌ಗಳಿದ್ದಾರೆ. ಗ್ರೀಕ್ ನಾಗರಿಕರಿಗೆ ಇಲ್ಲಿ ಶಿಕ್ಷಣ ಸಂಪೂರ್ಣ ಉಚಿತವಾಗಿದೆ. ಆದರೆ, ವಿದ್ಯಾರ್ಥಿಗಳು ತಮ್ಮ ವಸತಿ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ಈ ನಗರವು ಹಲವಾರು ಬೈಜಾಂಟೈನ್ ಸ್ಮಾರಕಗಳು, ಹಾಗೆಯೇ ರೋಮನ್, ಒಟ್ಟೋಮನ್ ಮತ್ತು ಯಹೂದಿ ವಾಸ್ತುಶಿಲ್ಪಗಳಿಗೆ ನೆಲೆ.

ಮೆಟಿಯೋರಾ, ಬೈಜಾಂಟೈನ್ ಕಲೆ

ಮೆಟಿಯೋರಾದಲ್ಲಿ ಭೂಮಿಯಿಂದ ಆಕಾಶದೆತ್ತರಕ್ಕೆ ಚಿಮ್ಮಿದಂತೆ ಕಾಣುವ ಬೃಹತ್ ಕಲ್ಲಿನ ಶಿಖರಗಳಿವೆ. ಇವುಗಳ ತುತ್ತತುದಿಯಲ್ಲಿ ನೆಲೆಗೊಂಡಿರುವ ಮಠಗಳನ್ನು ತಲುಪಲು ಸಾಹಸ ಮಾಡಬೇಕಾಗುತ್ತದೆ.

14 ನೇ ಶತಮಾನದಲ್ಲಿ ಟರ್ಕಿಶ್ ದಾಳಿಯ ಸಮಯದಲ್ಲಿ, ಕ್ರಿಶ್ಚಿಯನ್ ಪಾದ್ರಿಗಳು ಈ ದುರ್ಗಮ ಎತ್ತರದ ಪ್ರದೇಶಗಳಲ್ಲಿ ಗೌಪ್ಯವಾಗಿ ಆಶ್ರಯ ಪಡೆದರು. ಇತ್ತೀಚೆಗೆ ಮಾತ್ರ ಈ ಬಂಡೆಗಳಲ್ಲಿ ಮೆಟ್ಟಿಲುಗಳನ್ನು ಕೆತ್ತಲಾಗಿದ್ದು, 1970ರಲ್ಲಿ ಈ ಜಾಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.

ಈ ಮಠಗಳ ಒಳಗೆ, ಪಾದ್ರಿಗಳೇ ರಚಿಸಿದ ಸುಂದರವಾದ ಬೈಜಾಂಟೈನ್ ಭಿತ್ತಿಚಿತ್ರಗಳಿವೆ. ಪಾದ್ರಿಗಳ ದಿನವು ಮುಂಜಾನೆ 3:00 ಗಂಟೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪ್ರಾರಂಭವಾಗುತ್ತಿತ್ತು. ನಂತರ ಅವರು ಚಿತ್ರಕಲೆಯಲ್ಲಿ ತೊಡಗುತ್ತಿದ್ದರು. ಭಿತ್ತಿಚಿತ್ರಗಳನ್ನು ಬಿಡಿಸಲು ಸನ್ಯಾಸಿಗಳು ಮಾನಸಿಕ ಮತ್ತು ದೈಹಿಕ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು, ಧ್ಯಾನ ಮಾಡಬೇಕು ಮತ್ತು ಯಾವುದೇ ಅಸೂಯೆ ಇಲ್ಲದೆ ಚಿತ್ರಿಸಬೇಕು. ಬುಧವಾರ ಮತ್ತು ಶುಕ್ರವಾರದಂದು ಅವರು ಮಾಂಸ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸುತ್ತಿರಲಿಲ್ಲ.

ಜಲಾವೃತಗೊಂಡ ನಗರ

ಹೆಲಿಕೆ ಎಂಬ ಸ್ಥಳದಲ್ಲಿ, ಪೋಸಿಡಾನ್ ಮತ್ತು ಹನ್ನೆರಡು ದೇವರುಗಳ ದೇವಾಲಯ ಸೇರಿದಂತೆ ಇಡೀ ಪ್ರಾಚೀನ ನಗರವೇ ನೀರಿನಲ್ಲಿ ಮುಳುಗಿಹೋಗಿತ್ತು. ಪುರಾತತ್ವಶಾಸ್ತ್ರಜ್ಞರು ಅದರ ಸುತ್ತ ಮರಗಳನ್ನು ನೆಟ್ಟಿ, ಜೌಗು ಪ್ರದೇಶದ ನೀರನ್ನು ಹೊರಹಾಕಿ, ಅನೇಕ ವರ್ಷಗಳ ಕಾಲ ಭೂಮಿಯು ಒಣಗುವಂತೆ ಮಾಡಿದರು. ಅಲ್ಲಿ ಸಿಕ್ಕ ಪ್ರಾಚೀನ ವಿಗ್ರಹಗಳನ್ನು ಅದೇ ಸ್ಥಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸ್ಥಳವು ಒಂದು ಶ್ರೀಮಂತ ಪ್ರಾಚೀನ ಗ್ರೀಕ್ ನಗರ. ಕ್ರಿ.ಪೂ. 373ರಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯ ಪರಿಣಾಮವಾಗಿ ಸಮುದ್ರದಲ್ಲಿ ಮುಳುಗಿತ್ತು. ಹೆಲಿಕೆಯ ಈ ದುರಂತವನ್ನು ಪ್ರಾಚೀನ ಬರಹಗಾರರು, ಗ್ರೀಕರು ದೈವಿಕ ಕೋಪದ ಬಗ್ಗೆ ಮುಗ್ದ ನಂಬಿಕೆಗಳನ್ನು ಹೊಂದಿದ್ದರು ಎಂದು ವ್ಯಾಖ್ಯಾನಿಸಿದ್ದಾರೆ.

ಕೇಪ್ ಸೌನಿಯನ್‌ನಲ್ಲಿ ಸಮುದ್ರದ ದೇವನಾದ ಪೊಸೈಡನ್ ದೇವಾಲಯದ ಬಿಳಿ ಅಮೃತಶಿಲೆಯ ಕಂಬಗಳನ್ನು ನೋಡಿದೆವು.

ಎಪಿಡಾರಸ್:

ಎಪಿಡಾರಸ್‌ನ ಆಶ್ರಯಧಾಮವು ಪ್ರಾಚೀನ ಪ್ರಪಂಚದ ಅತ್ಯಂತ ಪ್ರಸಿದ್ಧ ಆರೋಗ್ಯ ಕೇಂದ್ರವಾಗಿತ್ತು. ಕಾಯಿಲೆಗೆ ಚಿಕಿತ್ಸೆ ಪಡೆಯಲು 'ಅಬಟಾನ್' ಎಂಬ ವಿಶ್ರಾಂತಿ ಗೃಹದಲ್ಲಿ ರಾತ್ರಿ ಕಳೆಯುತ್ತಿದ್ದರು. ದೇವರು ಅವರ ಕನಸಿನಲ್ಲಿ ಬಂದು ಸರಿಯಾದ ಚಿಕಿತ್ಸೆಯನ್ನು ತಿಳಿಸುತ್ತಾರೆ ಎಂಬುದು ಅವರ ನಂಬಿಕೆ. ಇಲ್ಲಿ 160 ಕೊಠಡಿಗಳ ಅತಿಥಿ ಗೃಹ, ಸಂಗೀತ ಹಾಗೂ ನಾಟಕ ಪ್ರದರ್ಶನಕ್ಕಾಗಿ ರಂಗಮಂದಿರವಿತ್ತು. ಎಪಿಡಾರಸ್‌ನ ವೈದ್ಯರು ಪ್ರಕೃತಿಯ ನಾಲ್ಕು ಅಂಶಗಳಾದ ನೀರು, ಗಾಳಿ, ಬೆಂಕಿ ಮತ್ತು ಭೂಮಿಯನ್ನು ಬಳಸಿ ಚಿಕಿತ್ಸೆ ನೀಡುತ್ತಿದ್ದರು.

ಎಪಿಡಾರಸ್‌ನ ರಂಗಮಂದಿರವು ತನ್ನ ಅದ್ಭುತವಾದ ಧ್ವನಿ ವಿಜ್ಞಾನಕ್ಕೆ ಹೆಸರುವಾಸಿ. ಇಂದಿಗೂ ಕೂಡ ವೇದಿಕೆಯ ಮೇಲಿನ ಸಣ್ಣ ಪಿಸುಮಾತು ಕೂಡ ಕೊನೆಯ ಸಾಲಿನವರಿಗೂ ಸ್ಪಷ್ಟವಾಗಿ ಕೇಳಿಸುತ್ತದೆ.

ಕೋಲು ಮತ್ತು ಹಾವು

ಗ್ರೀಕ್ ದೇವತೆಗಳ ದೂತನಾದ 'ಹರ್ಮ್ಸ್'ನನ್ನು ರೋಮನ್ ಪುರಾಣದಲ್ಲಿ 'ಮರ್ಕ್ಯುರಿ' ಎನ್ನಲಾಗುತ್ತದೆ. ಒಂದು ಕಥೆಯ ಪ್ರಕಾರ, ಹರ್ಮ್ಸ್ ಎರಡು ಹಾವುಗಳು ಜಗಳವಾಡುತ್ತಿರುವುದನ್ನು ಕಂಡನು. ಅವನು ತನ್ನ ಕೋಲಿನಿಂದ ಒಂದನ್ನು ಹೊಡೆದು ಕೊಂದನು. ತಕ್ಷಣ ಮತ್ತೊಂದು ಹಾವು ಸತ್ತ ಹಾವನ್ನು ಕಚ್ಚಿತು. ಸತ್ತ ಹಾವು ಮತ್ತೆ ಜೀವಂತವಾಯಿತು! ಇದರಿಂದ, ಹಾವಿನ ವಿಷವು ಗುಣಪಡಿಸುವ ಶಕ್ತಿಯನ್ನೂ ಹೊಂದಿದೆ ಎಂದು ಹರ್ಮ್ಸ್ ಕಂಡುಹಿಡಿದನು. ಇಂದಿಗೂ ಆಸ್ಪತ್ರೆಗಳಲ್ಲಿ ಕಾಣುವ 'ಕೋಲು ಮತ್ತು ಹಾವಿನ' ವೈದ್ಯಕೀಯ ಚಿಹ್ನೆಗೆ ಈ ಕಥೆಯೇ ಮೂಲ ಎನ್ನಲಾಗುತ್ತದೆ.

ಇನ್ನೊಂದು ಪುರಾಣದ ಪ್ರಕಾರ, ಹರ್ಮ್ಸ್ ವ್ಯಾಪಾರಿಗಳ, ಪ್ರವಾಸಿಗರ, ಕಳ್ಳರ, ಮೋಸಗಾರರ ಮತ್ತು ದೂತರ ದೇವರು ಎಂದು ಕರೆಯುತ್ತಾರೆ. ಇವನು ಭೂಮಿಯ ಮೇಲಿನ ಸಂದೇಶಗಳನ್ನು ದೇವರಿಗೆ ತ್ವರಿತವಾಗಿ ತಲುಪಿಸುತ್ತಿದ್ದನು. ಹರ್ಮ್ಸ್ ಒಮ್ಮೆ ಜಗಳವಾಡುತ್ತಿದ್ದ ಎರಡು ಹಾವುಗಳ ಮಧ್ಯೆ ತನ್ನ ಕೋಲನ್ನು ಎಸೆದಾಗ, ಅವು ಜಗಳ ನಿಲ್ಲಿಸಿ ಕೋಲಿನ ಸುತ್ತಲೂ ಶಾಂತಿಯಿಂದ ಸುತ್ತಿಕೊಂಡು ಪರಸ್ಪರ ಸ್ನೇಹಿಗಳಾದರು.

Untitled design - 2026-04-17T212823.003

ಈ 'ಕ್ಯಾಡುಸಿಯಸ್' ಚಿಹ್ನೆಯು ಭಾರತದ ಮೌರ್ಯ ಸಾಮ್ರಾಜ್ಯದ ನಾಣ್ಯಗಳ ಮೇಲೂ ಕಂಡುಬರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ, ಈ ಚಿಹ್ನೆಯು ಅಶೋಕ ಚಕ್ರವರ್ತಿಗೆ ಸಂಬಂಧಿಸಿರಬಹುದು. ಅಶೋಕ ಈ ಚಿಹ್ನೆಯನ್ನು ತನ್ನ ಶಾಂತಿ ಸಂದೇಶದ ಸಂಕೇತವಾಗಿ ಬಳಸಿರಬಹುದು. ಪಶ್ಚಿಮ ಘಟ್ಟದ ಕೆಲವು ದೇವಾಲಯಗಳಲ್ಲೂ ಈ ಚಿಹ್ನೆಯನ್ನು ಕಾಣಬಹುದು.

ವೈದ್ಯಕೀಯ ಶಬ್ದಕೋಶ

ನಮ್ಮ ಗೈಡ್‌ ಒಂದು ಮುಖ್ಯ ವಿಷಯವನ್ನು ಗಮನಕ್ಕೆ ತಂದರು. ಪ್ರಪಂಚದ ಬಹುತೇಕ ಎಲ್ಲಾ ರೋಗಗಳ ಹೆಸರುಗಳು ಮತ್ತು ವೈದ್ಯಕೀಯ ಕ್ಷೇತ್ರದ ಅನೇಕ ಪದಗಳು ಗ್ರೀಕ್ ಭಾಷೆಯಿಂದಲೇ ಬಂದಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಮತ್ತೊಬ್ಬ ವ್ಯಕ್ತಿ ಪ್ರೊಮಿಥಿಯಸ್. ಇವನು ಜನರಿಗೆ ಸೂರ್ಯನ ಬೆಳಕು ಬೀಳುವಂಥ ಆರೋಗ್ಯಕರ ಮನೆಗಳನ್ನು ಹೇಗೆ ನಿರ್ಮಿಸಬೇಕು, ಪೌಷ್ಟಿಕ ಆಹಾರವನ್ನು ಹೇಗೆ ತಯಾರಿಸಬೇಕು ಮತ್ತು ಯಾವ ಸಸ್ಯಗಳು ನೋವನ್ನು ನಿವಾರಿಸುತ್ತವೆ ಎಂಬುದನ್ನು ಕಲಿಸಿಕೊಟ್ಟನು.

ಚಿರೋನ್ ಎಂಬ ಬುದ್ಧಿವಂತ 'ಸೆಂಟಾರ್' ಮತ್ತೊಬ್ಬ ಗೌರವಾನ್ವಿತ ವೈದ್ಯ. ಚಿರೋನ್ ಗಾಯಗಳಿಗೆ ಚಿಕಿತ್ಸೆ ನೀಡುತ್ತಾ ಗ್ರೀಸ್‌ನ ಔಷಧೀಯ ಸಸ್ಯಗಳ ಬಳಕೆ ಮತ್ತು ರೋಗಿಗಳ ದೈಹಿಕ ಹಾಗೂ ಮಾನಸಿಕ ಚೇತರಿಕೆಗೆ ಅಗತ್ಯವಾದ ಮಂತ್ರೋಚ್ಚಾರಣೆಗಳನ್ನು ಬೋಧಿಸುತ್ತಿದ್ದನು.

ಹಿಪೊಕ್ರೆಟಿಕ್ ಸಂಪ್ರದಾಯ

ಹಿಪೊಕ್ರೆಟಿಕ್ ಪ್ರಮಾಣವಚನದ ಸಂಪ್ರದಾಯ ಈ ಸ್ಥಳದಿಂದಲೇ ಆರಂಭವಾಯಿತು ಎಂದು ಹೇಳುತ್ತಾರೆ. ಕ್ರಿಇಂದಿಗೂ ಅನೇಕ ವೈದ್ಯರು ತಮ್ಮ ವೃತ್ತಿಜೀವನವನ್ನು ಆರಂಭಿಸುವಾಗ ಇದರ ಆಧುನಿಕ ಆವೃತ್ತಿಯ ಪ್ರಮಾಣವಚನವನ್ನು ಸ್ವೀಕರಿಸುತ್ತಾರೆ.

ಪ್ರಾಚೀನ ಗ್ರೀಸ್‌ನಲ್ಲಿ, ಬಲಿ ಅಥವಾ ಯಜ್ಞಗಳನ್ನು ದೇವಾಲಯದ ಹೊರಗೆ ನಡೆಸಲಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಮಳೆ ನೀಡುವಂತೆ ಆಕಾಶದ ದೇವನನ್ನು ಪ್ರಸನ್ನಗೊಳಿಸಲು ಪ್ರಾಣಿಗಳ ಭಾಗಗಳನ್ನು ಅಗ್ನಿಗೆ ಅರ್ಪಿಸಲಾಗುತ್ತಿತ್ತು. ಪ್ರತಿಯೊಬ್ಬ ಗ್ರೀಕ್ ದೇವರಿಗೂ ಒಂದೊಂದು ನಿರ್ದಿಷ್ಟ ಪಕ್ಷಿ ಮತ್ತು ಹೂವಿನ ಸಂಬಂಧವಿತ್ತು.

ಇದನ್ನೂ ಓದಿ: ಮಾಚು ಪಿಚು ಚಾರಣದ ಮಾಸದ ನೆನಪು

ಗ್ರೀಸ್‌ನಲ್ಲಿ ಸುಮಾರು 96% ರಷ್ಟು ಜನಸಂಖ್ಯೆಯು ಕ್ರೈಸ್ತ ಧರ್ಮವನ್ನು ಅನುಸರಿಸುತ್ತದೆ. ನಾವು ಭೇಟಿ ನೀಡಿದ ಸಮಯದಲ್ಲಿ ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು. ನಮ್ಮ ಮಾರ್ಗದರ್ಶಿಯ ಪ್ರಕಾರ, ಅವರ ಪತಿ ಒಬ್ಬ ಕಣ್ಣಿನ ವೈದ್ಯರಾಗಿದ್ದರೂ ತಿಂಗಳಿಗೆ ಕೇವಲ 1,500 ಯೂರೋ ಸಂಪಾದಿಸುತ್ತಿದ್ದರು. ಇದರ ಜತೆಗೆ 47% ರಷ್ಟು ಆದಾಯ ತೆರಿಗೆಯನ್ನು ಪಾವತಿಸಬೇಕಿತ್ತು. ಪಾಶ್ಚಿಮಾತ್ಯ ಮಾನದಂಡಗಳಿಗೆ ಹೋಲಿಸಿದರೆ ಇದು ಶೋಚನೀಯ ಎನಿಸುವಷ್ಟು ಕಡಿಮೆ ಮೊತ್ತವಾಗಿತ್ತು. ಆಗ ನಿರುದ್ಯೋಗ ಸುಮಾರು 25% ರಷ್ಟಿತ್ತು.

ಆದರೆ, ಇಷ್ಟೆಲ್ಲಾ ಆರ್ಥಿಕ ಸಂಕಷ್ಟಗಳ ನಡುವೆಯೂ ಗ್ರೀಸ್ ದೇಶವು ಅತ್ಯಂತ ಸ್ವಚ್ಛವಾಗಿ, ಕ್ರಮಬದ್ಧವಾಗಿ ಮತ್ತು ಸುಸಂಸ್ಕೃತವಾಗಿ ಕಾಣುತ್ತಿತ್ತು. ಮೇಲ್ನೋಟಕ್ಕೆ ಅದು ಸಂಕಷ್ಟದಲ್ಲಿರುವ ದೇಶದಂತೆ ಲವಲೇಶವೂ ಕಾಣಿಸುತ್ತಿರಲಿಲ್ಲ. ಆದರೆ, ಜನರ ಆಕ್ರೋಶವು ಅಥೆನ್ಸ್‌ನ ಗೋಡೆಗಳು ಮತ್ತು ಸುಂದರ ಕಟ್ಟಡಗಳ ಮೇಲೆ 'ಗ್ರಾಫಿಟಿ' ರೂಪದಲ್ಲಿ ಎಲ್ಲೆಡೆ ಕಂಡುಬರುತ್ತಿತ್ತು.

ಅಯೋನಿಯನ್ ಕರಾವಳಿಯ ಉದ್ದಕ್ಕೂ ಪ್ರಯಾಣಿಸುವಾಗ ಸುಂದರವಾದ ಸಮುದ್ರತೀರದ ಮನೆಗಳನ್ನು ಕಂಡು ಬೆರಗಾದೆವು. ಸಮುದ್ರದ ದಂಡೆಯಲ್ಲಿರುವ ಎರಡು ಬೆಡ್‌ರೂಮ್‌ಗಳ ಮನೆಯ ಬೆಲೆ ಎಷ್ಟು ಎಂದು ಕೇಳಿದಾಗ, ಮಾರ್ಗದರ್ಶಿಯು "ಓಹ್, ಅದು ತುಂಬಾ ದುಬಾರಿ... ಸುಮಾರು 1,00,000 ಯೂರೋ ಇರಬಹುದು" ಎಂದರು. ನಾವೆಲ್ಲರೂ ಒಮ್ಮೆಲೇ "ಇದು ದುಬಾರಿಯಲ್ಲವೇ ಅಲ್ಲ!" ಎಂದು ಉದ್ಗರಿಸಿದೆವು.

ಹೆಚ್ಚಿನ ತೆರಿಗೆ ದರವಿದ್ದರೂ, ಅಲ್ಲಿನ ಜೀವನ ವೆಚ್ಚವು ಮಿತವಾಗಿದೆ. ಶಿಕ್ಷಣ, ಆರೋಗ್ಯ ಸೇವೆ ಬಹುತೇಕ ಉಚಿತ, ಎರಡು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ಗಳ ಬಾಡಿಗೆ 250–400 ಯೂರೋಗಳಷ್ಟಿದೆ.

ನಮ್ಮ ಮಾರ್ಗದರ್ಶಿಯು ಗ್ರೀಕ್ ಪುರಾಣ ಮತ್ತು ಸಂಸ್ಕೃತಿಯ ಬಗ್ಗೆಯೂ ವಿವರಿಸಿದರು. ಪ್ರಾಚೀನ ಕಾಲದಿಂದಲೂ ಗ್ರೀಕರು ಅತಿಥಿಗಳನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಅವರಿಗೆ ಆಶ್ರಯ ನೀಡುವುದು, ಪಾದಗಳನ್ನು ತೊಳೆದು ಉಪಚರಿಸುವುದು, ಬಟ್ಟೆ ಮತ್ತು ಆಹಾರವನ್ನು ನೀಡುವುದು ಅವರ ಸಂಪ್ರದಾಯ. ಕೇಳಲು ಇದು ನಮ್ಮ ಭಾರತೀಯ ಸಂಪ್ರದಾಯದಂತೆಯೇ ಕಾಣುತ್ತದೆ.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...