ಸ್ಮಾರ್ಟ್ ಟ್ರಾವೆಲ್ ತಂತ್ರ ಗೊತ್ತಿದ್ದರೆ ಕಡಿಮೆ ಖರ್ಚು, ಉತ್ತಮ ಪ್ರಯಾಣ
ಅನೇಕ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸ್ಥಳಗಳನ್ನು ನೋಡಲು ಹಂಬಲಿಸುತ್ತಾರೆ, ಇದು ಅಂತಿಮವಾಗಿ ಆನಂದದ ಬದಲು ಆಯಾಸಕ್ಕೆ ಕಾರಣವಾಗುತ್ತದೆ. ಗುಣಮಟ್ಟದ ಪ್ರವಾಸಕ್ಕೆ ಆದ್ಯತೆ ನೀಡುವ ವೇಳಾಪಟ್ಟಿಯು ಉತ್ತಮ.
ಇಂದಿನ ಆನ್‌ಲೈನ್ ಬುಕಿಂಗ್ ಮತ್ತು ಬಜೆಟ್ ಏರ್‌ಲೈನ್ಸ್‌ಗಳ ಜಗತ್ತಿನಲ್ಲಿ, ಪ್ರಯಾಣವು ಹಿಂದೆಂದಿಗಿಂತಲೂ ಸುಲಭವಾಗಿದೆ. ಆದರೆ ಅದು ಸರಳವಾಗಿದೆ ಎಂದರ್ಥವಲ್ಲ. ಅಗ್ಗದ ಡೀಲ್‌ಗಳು ಮತ್ತು ಆಕರ್ಷಕ ಆಫರ್‌ಗಳ ಆಚೆಗೆ ಒಂದು ಸಂಕೀರ್ಣ ವ್ಯವಸ್ಥೆಯಿದೆ. ಅಲ್ಲಿ ನಾವು ತೆಗೆದುಕೊಳ್ಳುವ ಸಣ್ಣ ನಿರ್ಧಾರಗಳು ನಮ್ಮ ಒಟ್ಟಾರೆ ಅನುಭವ ಮತ್ತು ಖರ್ಚಿನ ಮೇಲೆ ಭಾರಿ ಪರಿಣಾಮ ಬೀರಬಹುದು. ಸ್ಮಾರ್ಟ್ ಟ್ರಾವೆಲ್ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು ಹಣವನ್ನು ಉಳಿಸಲು, ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಮತ್ತು ನಿಮ್ಮ ಪ್ರಯಾಣದುದ್ದಕ್ಕೂ ಬುದ್ಧಿವಂತ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ವಿದೇಶ ಪ್ರವಾಸದ ಮೋಹ- ಅರಿವಿರಲಿ: ಎಚ್ಚರವೂ ಇರಲಿ!
ಕರೆನ್ಸಿ ವಿನಿಮಯದ ಜಾಣ್ಮೆ
ಅನೇಕ ಪ್ರಯಾಣಿಕರು ಅರಿವಿಲ್ಲದೆಯೇ ಹಣವನ್ನು ಕಳೆದುಕೊಳ್ಳುವ ಪ್ರಮುಖ ಜಾಗವೆಂದರೆ ಕರೆನ್ಸಿ ವಿನಿಮಯ ಜಾಗ. ವಿಮಾನ ನಿಲ್ದಾಣದ ಎಕ್ಸ್‌ಚೇಂಜ್ ಕೌಂಟರ್‌ಗಳು ಮತ್ತು ಹೊಟೇಲ್‌ಗಳು ಅನುಕೂಲಕರವಾಗಿ ಕಂಡರೂ, ಅಲ್ಲಿ ವಿನಿಮಯ ದರಗಳು ಅತ್ಯಂತ ಕಳಪೆಯಾಗಿರುತ್ತವೆ ಮತ್ತು ಕಮಿಷನ್ ಹೆಚ್ಚಿರುತ್ತದೆ. ವಿದೇಶಗಳಲ್ಲಿ ಕಾರ್ಡ್ ಪಾವತಿ ಮಾಡುವಾಗಲೂ ಹಿಡನ್ ಕನ್ವರ್ಷನ್ ರೇಟ್ ಇರಬಹುದು. ಸ್ಥಳೀಯ ಎಟಿಎಂಗಳನ್ನು ಬಳಸುವುದು ಅಥವಾ ಉತ್ತಮ ದರ ನೀಡುವ ಫೊರೆಕ್ಸ್ ಕಾರ್ಡ್ ಬಳಸುವುದು ಸ್ಮಾರ್ಟ್ ನಿರ್ಧಾರ. ವಿನಿಮಯ ದರದಲ್ಲಿನ ಸಣ್ಣ ವ್ಯತ್ಯಾಸವೂ ದೊಡ್ಡ ಮೊತ್ತದ ವಹಿವಾಟಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

ಫ್ಲೈಟ್ ಅಪ್‌ಗ್ರೇಡ್: ಅವಶ್ಯಕತೆಯೋ ಅಥವಾ ಆಕರ್ಷಣೆಯೋ?
ಬಿಸಿನೆಸ್ ಅಥವಾ ಪ್ರೀಮಿಯಂ ಎಕಾನಮಿ ಸೀಟುಗಳು ಆರಾಮದಾಯಕವಾಗಿ ಕಾಣುತ್ತದೆ. ಆದರೆ, ಅದನ್ನು ಆಯ್ಕೆ ಮಾಡುವಾಗ ಕೆಲವೊಮ್ಮೆ ಯೋಚಿಸಬೇಕಾಗುತ್ತದೆ. ಇದು ಕೇವಲ ಆಕರ್ಷಣೆಯೋ ಅಥವಾ ಅವಶ್ಯಕತೆಯೋ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಅವುಗಳನ್ನು ಆರಿಸಿಕೊಳ್ಳುವ ನಿರ್ಧಾರವು ಕೇವಲ ಆಸೆ ಎನ್ನುವ ಕಾರಣಕ್ಕೆ ಆಗಿರಬಾರದು. ಅದರ ಮೌಲ್ಯದ ಮೇಲೆ ಆಧಾರಿತವಾಗಿರಬೇಕು. ಕಡಿಮೆ ಸಮಯದ ಪ್ರಯಾಣಕ್ಕೆ ಅಪ್‌ಗ್ರೇಡ್‌ಗಳು ಅನಗತ್ಯ ಖರ್ಚು ಎನಿಸಬಹುದು. ಆದರೆ ದೀರ್ಘಾವಧಿಯ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಹೆಚ್ಚಿನ ಲೆಗ್‌ರೂಮ್ ಮತ್ತು ಉತ್ತಮ ಸೌಲಭ್ಯಗಳು ಸುಸ್ತನ್ನು ಕಡಿಮೆ ಮಾಡಲು ಸಹಕಾರಿ. ಯಾವಾಗ ಅಗತ್ಯ ಯಾವಾಗ ಅಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡರೆ ಖರ್ಚು ಕಡಿಮೆ ಮಾಡಬಹುದು. ಒಂದು ವಿಶೇಷ ಸಲಹೆ ಎಂದರೆ, ಚೆಕ್-ಇನ್ ಸಮಯದಲ್ಲಿ ಸಿಗುವ ಕೊನೆಯ ಕ್ಷಣದ ಅಪ್‌ಗ್ರೇಡ್ ಆಫರ್‌ಗಳು ಮೊದಲೇ ಬುಕ್ ಮಾಡುವುದಕ್ಕಿಂತ ಅಗ್ಗವಾಗಿರುತ್ತವೆ.
ಪ್ರಯಾಣದ ವೇಳಾಪಟ್ಟಿ
ಅನೇಕ ಪ್ರಯಾಣಿಕರು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸ್ಥಳಗಳನ್ನು ನೋಡಲು ಹಂಬಲಿಸುತ್ತಾರೆ, ಇದು ಅಂತಿಮವಾಗಿ ಆನಂದದ ಬದಲು ಆಯಾಸಕ್ಕೆ ಕಾರಣವಾಗುತ್ತದೆ. ಗುಣಮಟ್ಟದ ಪ್ರವಾಸಕ್ಕೆ ಆದ್ಯತೆ ನೀಡುವ ವೇಳಾಪಟ್ಟಿಯು ಉತ್ತಮ. ಕೆಲವು ಸಲಹೆಗಳೆಂದರೆ:
- ಹತ್ತಿರದ ಪ್ರವಾಸಿ ತಾಣಗಳನ್ನು ಒಟ್ಟಿಗೆ ನೋಡಿ.
- ವಿಶ್ರಾಂತಿಗಾಗಿ ಸ್ವಲ್ಪ ಸಮಯ ಮೀಸಲಿಡಿ.
- ಅನಿರೀಕ್ಷಿತ ಅನ್ವೇಷಣೆಗಳಿಗೆ ಅವಕಾಶ ಇಟ್ಟುಕೊಳ್ಳಿ.
- ಅತಿಯಾದ ಯೋಜನೆ ಕೂಡ ಪ್ರವಾಸವನ್ನು ಒಂದು 'ಚೆಕ್‌ಲಿಸ್ಟ್' ಮುಗಿಸುವ ಕೆಲಸವನ್ನಾಗಿ ಮಾಡಬಹುದು.
ಬಜೆಟ್‌ನಲ್ಲಿ ಆಗುವ ತಪ್ಪುಗಳು
ಪ್ರಯಾಣಿಕರು ಸಾಮಾನ್ಯವಾಗಿ ವಿಮಾನ ಮತ್ತು ಹೊಟೇಲ್‌ಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಆದರೆ ಆಹಾರ, ಸ್ಥಳೀಯ ಸಾರಿಗೆ, ಪ್ರವೇಶ ಟಿಕೆಟ್‌ಗಳು ಮತ್ತು ಶಾಪಿಂಗ್‌ನಂಥ ದೈನಂದಿನ ವೆಚ್ಚಗಳನ್ನು ಮರೆತುಬಿಡುತ್ತಾರೆ. ಈ ಸಣ್ಣ ವೆಚ್ಚಗಳು ಬೇಗನೆ ದೊಡ್ಡ ಮೊತ್ತವಾಗುತ್ತವೆ. ರಿಯಾಲಿಟಿ ಏನೆಂದರೆ ಬಜೆಟ್‌ನಲ್ಲಿ ಯಾವಾಗಲೂ ಅನಿರೀಕ್ಷಿತ ವೆಚ್ಚಗಳಿಗಾಗಿ ಸ್ವಲ್ಪ ಹಣವನ್ನು ಮೀಸಲಿಡುವುದು ಉತ್ತಮ. ಇದರಿಂದ ಪ್ರವಾಸದ ಮಧ್ಯದಲ್ಲಿ ಹಣದ ಕೊರತೆಯಾಗುವುದಿಲ್ಲ.

ನೇರ ಬುಕಿಂಗ್ ಅಥವಾ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು?
ಹೊಟೇಲ್ ಬುಕ್ ಮಾಡುವಾಗ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ಕಡಿಮೆ ಬೆಲೆಗಳನ್ನು ನೀಡಬಹುದು. ಆದರೆ ನೇರವಾಗಿ ಹೊಟೇಲ್‌ನಲ್ಲೇ ಬುಕ್ ಮಾಡುವುದರಿಂದ ಉಚಿತ ಅಪ್‌ಗ್ರೇಡ್‌ಗಳು, ರದ್ದತಿ ಸೌಲಭ್ಯ ಅಥವಾ ಪೂರಕ ಸೇವೆಗಳಂಥ ಪ್ರಯೋಜನಗಳು ಸಿಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಏನಾದರೂ ಸಮಸ್ಯೆ ಎದುರಾದಾಗ ಮಧ್ಯವರ್ತಿಗಳಿಗಿಂತ ಹೊಟೇಲ್‌ನೊಂದಿಗೆ ನೇರವಾಗಿ ವ್ಯವಹರಿಸುವುದು ಹೆಚ್ಚು ಸುಲಭ.
ಸ್ಮಾರ್ಟ್ ಟ್ರಾವೆಲ್ ಎಂದರೆ ಸರಿಯಾದ ಮಾಹಿತಿಯೊಂದಿಗೆ ಬುದ್ಧಿವಂತ ಆಯ್ಕೆಗಳನ್ನು ಮಾಡುವುದು. ಹಣ ವಿನಿಮಯವಿರಲಿ ಅಥವಾ ವೇಳಾಪಟ್ಟಿ ತಯಾರಿಸುವುದಿರಲಿ, ಪ್ರತಿಯೊಂದು ನಿರ್ಧಾರವೂ ನಿಮ್ಮ ಪ್ರಯಾಣದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಸ್ಮಾರ್ಟ್ ಪ್ರಯಾಣಿಕ ಎಂದರೆ ಯಾರು ಕಡಿಮೆ ಖರ್ಚು ಮಾಡುತ್ತಾರೋ ಅವರಲ್ಲ, ಯಾರು ಹಣವನ್ನು ಸರಿಯಾದ ರೀತಿಯಲ್ಲಿ ಬಳಸುತ್ತಾರೋ ಅವರು.