ಇಲ್ಲಿ ಒಂದು ಮಾವಿನಹಣ್ಣಿಗೆ 3 ಲಕ್ಷ ರುಪಾಯಿ!!
ಚಿಕ್ಕದಿರುವಾಗ ನೇರಳೆ ಬಣ್ಣದಲ್ಲಿರುವ ಈ ಮಾವಿನ ಕಾಯಿ ಬೆಳೆದು ದೊಡ್ಡದಾದಂತೆ ಕೆಂಪು ಮಿಶ್ರಿತ ತಿಳಿ ನೇರಳೆ ಬಣ್ಣಕ್ಕೆ ತಿರುಗುತ್ತದೆ ಕೇವಲ ಎರಡು ತಿಂಗಳಷ್ಟೇ ಮಾರುಕಟ್ಟೆಯಲ್ಲಿರುವ ಈ ಹಣ್ಣನ್ನು ಬೆಳೆಸುವುದೇ ಅತಿ ವಿಶಿಷ್ಟ ಹಾಗೂ ಕ್ಲಿಷ್ಟಕರ.
- ಸುರೇಶ ಭಟ್ಟ, ಕೆಕ್ಕಾರು
ಜಪಾನ್ ದೇಶ ಸಾವಿರಾರು ದ್ವೀಪಗಳ ಸಮೂಹ. ನಮಗೆ ಜಪಾನ್ ಎಂದ ತಕ್ಷಣ ನೆನಪಿಗೆ ಬರುವುದು, ಟೋಕಿಯೋ, ಹಿರೋಶಿಮಾ ನಾಗಸಾಕಿ ಇತ್ಯಾದಿ. ಆದರೆ ಇಲ್ಲಿಇನ್ನೂ ಹಲವಾರು ವಿಶೇಷತೆಯನ್ನು ಹೊಂದಿದ ದ್ವೀಪಗಳಿವೆ. ಅವುಗಳಲ್ಲಿ ಒಂದು ಓಕಿನಾವಾ ದ್ವೀಪ. ಬಹುಶಃ ಹಲವರು ಈ ಹೆಸರನ್ನು ಕೇಳಿರಬಹುದು. ಏಕೆಂದರೆ ಪ್ರಪಂಚದಲ್ಲಿ ಅತಿ ಹೆಚ್ಚು ಶತಾಯುಷಿಗಳಿರುವ ದ್ವೀಪ ಓಕಿನಾವಾ. ನಿಜ ಹೇಳಬೇಕೆಂದರೆ ಈ ದ್ವೀಪ ಪ್ರಮುಖ ನಗರವಾದ ಟೋಕಿಯೋದಿಂದ ಎರಡೂವರೆ ತಾಸಿನ ವಿಮಾನಯಾನದಷ್ಟು ದೂರವಿದೆ. ಅಂದರೆ ಬೆಂಗಳೂರಿನಿಂದ ಸುಮಾರು ದೆಹಲಿಗೆ ಇರುವಷ್ಟು ದೂರ. ಈ ದ್ವೀಪಕ್ಕೆ ಪ್ರಮುಖ ನಗರಗಳಾದ ಟೋಕಿಯೋ ಅಥವಾ ಒಸಾಕಾದಿಂದ ಕೇವಲ ಜಲ ಅಥವಾ ವಾಯು ಮಾರ್ಗದಿಂದಷ್ಟೇ ಪ್ರಯಾಣಿಸಬಹುದು. ಜಪಾನಿನ ಹಲವು ಮುಖ್ಯ ದ್ವೀಪಗಳಿಗಿಂತ ವ್ಯತಿರಿಕ್ತ ವಾತಾವರಣ ಹೊಂದಿರುವ ಈ ದ್ವೀಪ, ದಕ್ಷಿಣದ ಕಡೆ ಇರುವ ದ್ವೀಪ ಸಮೂಹಗಳಲ್ಲಿ ದೊಡ್ಡದು.
ಟೈಪುನ್ ಬಿರುಗಾಳಿ!
ಇಲ್ಲಿ ಭೂಕಂಪಗಳು ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದು ಹೇಳಬಹುದು ಆದರೆ ಜುಲೈನಿಂದ ನವೆಂಬರ್ ವರೆಗಿನ ಸಮಯದಲ್ಲಿ ಬರುವ ಬಿರುಗಾಳಿ ಮಾತ್ರ ಮಾರಕವಾಗಿರುತ್ತದೆ. ಟೈಪುನ್ ಎಂದು ಕರೆಸಿಕೊಳ್ಳುವ ಈ ಬಿರುಗಾಳಿ ಸುಮಾರು ನೂರು ಕಿಲೋಮೀಟರ್ ವೇಗದಿಂದ ಪ್ರಾರಂಭವಾಗಿ 200 ಕಿಲೋಮೀಟರ್ ಗಿಂತ ಹೆಚ್ಚು ವೇಗದವರೆಗೂ ಬರುವ ಸಾಧ್ಯತೆ ಇರುತ್ತದೆ. ಹಿಂದೆಲ್ಲಾ ಹಲವು ವಿನಾಶಗಳನ್ನು ಕಂಡ ಈ ದ್ವೀಪದಲ್ಲಿ ಈಗ ಆಧುನಿಕ ವ್ಯವಸ್ಥೆಯಿಂದಾಗಿ ವಾರಕ್ಕಿಂತ ಮೊದಲೇ ಈ ಬಿರುಗಾಳಿಯ ತೀವ್ರತೆಯನ್ನು ತಿಳಿಸಿ ಜನರಿಗೆ ಮನೆಯಿಂದ ಹೊರಕ್ಕೆ ಬಾರದಂತೆ ಎಚ್ಚರಿಕೆ ನೀಡುತ್ತಾರೆ.
ಇಷ್ಟಾದರೂ ಬಹಳ ಸಲ ಹೊರಗೆ ನಿಲ್ಲಿಸಿದ ಕಾರಿನಿಂದ ಹಿಡಿದು ಭಾರಿ ವಾಹನಗಳ ಸಹಿತ ಸ್ಥಾನಪಲ್ಲಟಗೊಂಡು ಹಾನಿಗೀಡಾದ ಸಂದರ್ಭಗಳಿವೆ. ಮಳೆಗಾಲದಲ್ಲಿ ಅತಿಯಾದ ಮಳೆ, ಚಳಿಗಾಲದಲ್ಲಿ ಅತಿ ಚಳಿ, ಬೇಸಗೆಯಲ್ಲಿ ಅತಿ ಸೆಖೆ. ಇದು ಇಲ್ಲಿಯ ವೈಶಿಷ್ಟ್ಯ. ಎಂಥ ವೇಗದ ಬಿರುಗಾಳಿಯನ್ನೂ ತಡೆದುಕೊಳ್ಳಬಹುದಾದ ಮನೆಗಳು, ಕಟ್ಟಡಗಳನ್ನು ಕಟ್ಟಿಕೊಳ್ಳುವುದು ಇಲ್ಲಿಯ ವಿಶೇಷ. ಮನೆಗಳ ಒಳಗೋಡೆಗಳನ್ನು ಇಟ್ಟಿಗೆಯಿಂದ ಕಟ್ಟಿದರ ಹೊರಗೋಡೆಗಳನ್ನು ಮಾತ್ರ ಸಿಮೆಂಟ್ ಹಾಗೂ ಕಬ್ಬಿಣ ಉಪಯೋಗಿಸಿ ಕಾಂಕ್ರೀಟಿನಿಂದಲೇ ಕಟ್ಟುತ್ತಾರೆ.

ಕ್ಲೀನ್ ಕ್ಲೀನ್!
ಎಲ್ಲಿಯೇ ಮನೆ ಕಟ್ಟಿದರೂ ಅಕ್ಕಪಕ್ಕದ ಮನೆಗಳಷ್ಟೇ ಅಲ್ಲ ಎದುರಿನ ರಸ್ತೆಯಲ್ಲಿ ಸಹ ಕಸ ಅಥವಾ ಮಣ್ಣು ನೋಡಸಿಗುವುದಿಲ್ಲ. ಮನೆ ಕಟ್ಟುವ ಯಾವುದೇ ಸಾಮಗ್ರಿಗಳನ್ನು ಮನೆಯ ಜಾಗದ ಹೊರಗಡೆ ಶೇಖರಿಸಿರುವಂತಿಲ್ಲ. ಪ್ರತಿದಿನ ಎಷ್ಟು ಬೇಕೋ ಅಷ್ಟೇ ಸಾಮಾನು ತರಿಸಿಕೊಳ್ಳಬೇಕೇ ಹೊರತು ಶೇಖರಣೆ ಮಾಡಿ ಇಡುವಂತಿಲ್ಲ. ಮನೆ ಕಟ್ಟುವಾಗಲೇ ಎಲ್ಲ ರೀತಿಯ ಆಧುನೀಕರಣಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮನೆಯ ಪುನರ್ ನಿರ್ಮಾಣದಲ್ಲಿ ಸಹ ಮನೆಯಿಂದ ತೆಗೆದ ತ್ಯಾಜ್ಯಗಳನ್ನು ದಾರಿಯ ಮೇಲೆ ಹಾಕುವಂತಿಲ್ಲ ಆ ದಿನ ತೆಗೆದ ತ್ಯಾಜ್ಯಗಳನ್ನ ಅದೇ ದಿನ ವಾಹನದಲ್ಲಿ ಸಾಗಿಸಬೇಕು. ಒಟ್ಟಿನಲ್ಲಿ ಸ್ವಚ್ಛತೆಯೇ ಇವರ ಮೂಲ ಉದ್ದೇಶ. ಇಲ್ಲಿಯ ನಾಗರಿಕರು ಸ್ವಚ್ಛತೆಯ ಬಗ್ಗೆ ಎಷ್ಟು ಜಾಗರೂಕರು ಎಂದರೆ ದಾರಿಯಲ್ಲಿ ಅಪ್ಪಿ ತಪ್ಪಿ ಎಲ್ಲಿಯಾದರೂ ಕಸ ಕಂಡರೆ ಕೂಡಲೇ ಅದನ್ನು ಉದ್ದದ ಚಿಮಟಿಗೆಯಲ್ಲಿ ಎತ್ತಿ ತೆಗೆದುಹಾಕುತ್ತಾರೆ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಪೌರಕಾರ್ಮಿಕರು ಬರುವುದಿಲ್ಲ. ಬೆಳಗಿನ ಹೊತ್ತಿನಲ್ಲಿ ಹಲವು ನಾಗರಿಕರು ಪ್ರತಿನಿತ್ಯ ಕೈಯಲ್ಲೊಂದು ಪ್ಲಾಸ್ಟಿಕ್ ಚೀಲ ಹಾಗೂ ಉದ್ದದ ಚಿಮಟಿಗೆಯೊಂದಿಗೆ ಹೋಗಿ ದಾರಿಯಲ್ಲಿ ಬಿದ್ದ ಕಸ ಕಡ್ಡಿಗಳನ್ನು ಒಟ್ಟು ಮಾಡಿ ಅದನ್ನು ಕಸ ಇಡುವ ಜಾಗದಲ್ಲಿ ಇಡುವುದನ್ನು ತಮ್ಮ ಕರ್ತವ್ಯದಂತೆ ಮಾಡುತ್ತಾರೆ.
ಕೇವಲ 2271 ಚದರ ಕಿಲೋಮೀಟರ್ ನಷ್ಟು ಪ್ರದೇಶ ಹೊಂದಿರುವ ಈ ದ್ವೀಪ ಈಗ ಜಪಾನ್ ದೇಶದ ಭಾಗವಾದರೂ ಹಿಂದೊಮ್ಮೆ ಸ್ವತಂತ್ರ ರಾಜ್ಯವಾಗಿತ್ತು ಅನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಇಲ್ಲಿಯ ರಾಜರು ಜಪಾನಿಗಿಂತ ಹೆಚ್ಚಾಗಿ ಚೀನಾ ದೇಶದ ಜೊತೆಗೆ ಹೆಚ್ಚಿನ ಬಾಂಧವ್ಯ ಹೊಂದಿದ್ದರು. ಇಲ್ಲಿಯ ರಾಜಮನೆತನದ ಎಲ್ಲ ಸಮಾರಂಭಗಳಿಗೆ ಚೀನಾ ದೇಶದಿಂದ ರಾಜನ ಪ್ರತಿನಿಧಿಗಳು ಬರುತ್ತಿದ್ದರು. ಈಗಲೂ ಈ ಅತಿಥಿಗಳಿಗಾಗಿಯೇ ಕಟ್ಟಿದ್ದ ಹಲವು ಅತಿಥಿ ಗೃಹಗಳನ್ನು ಇಲ್ಲಿನ ಅರಮನೆಗಳ ಆವರಣದಲ್ಲಿ ನೋಡಬಹುದು. ಹೆಗ್ಗಳಿಕೆಯ ವಿಷಯವೆಂದರೆ ಶಿಥಿಲಗೊಂಡ ಇಂಥ ಹಲವಾರು ಸ್ಥಳಗಳಲ್ಲಿ ಜಪಾನ್ ಸರಕಾರ ಮತ್ತೆ ಅದೇ ರೀತಿಯಲ್ಲಿ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಪುನರ್ ನಿರ್ಮಾಣ ಮಾಡಿ ಅತ್ಯಂತ ವ್ಯವಸ್ಥಿತವಾಗಿ ಕಾಪಾಡಿಕೊಂಡಿದೆ.
ಜಪಾನ್ ಮೇಲೆಯೇ ಮುನಿಸು
ಇಲ್ಲಿಯ ಜನ ಜಪಾನ್ ನ ಇತರರಿಗಿಂತ ಭಿನ್ನವಾದ ಭಾಷೆಯನ್ನು ಬಳಸುತ್ತಿದ್ದರಂತೆ. 16O9ರಲ್ಲಿ ಇಲ್ಲಿಯ ರಾಜನನ್ನು ಸೋಲಿಸಿದ ಜಪಾನೀಯರು ಈ ದ್ವೀಪವನ್ನು ತಮ್ಮದಾಗಿಸಿಕೊಂಡರು. ಅಮೆರಿಕ ಮತ್ತು ಜಪಾನೀಯರ ನಡುವೆ 1945ನೇ ಇಸವಿಯಲ್ಲಿ ನಡೆದ “ಓಕಿನಾವಾದ ಮಹಾಯುದ್ಧ”ದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಇಲ್ಲಿಯ ಜನಕ್ಕೆ ಇಂದಿಗೂ ಅಮೆರಿಕ ಹಾಗೂ ಜಪಾನ್ ಮೇಲೆ ಬೇಸರವಿದೆ. ಕಾರಣ ಜಪಾನಿನ ಸೈನ್ಯ ಯಾವ ತರಬೇತಿ ಕೂಡ ಇಲ್ಲದ ಇಲ್ಲಿಯ ನಾಗರೀಕರನ್ನು ತನ್ನ ಕೆಲಸಕ್ಕೆ ಉಪಯೋಗಿಸಿಕೊಂಡಿದ್ದಲ್ಲದೆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಲಕ್ಷಾಂತರ ಜನರ ಸಾವಿಗೆ ಕಾರಣರಾದರು. ಯುದ್ಧದಲ್ಲಿ ಸೋತ ಜಪಾನ್, ಈ ದ್ವೀಪದಲ್ಲಿ ಅಮೆರಿಕದ ಸೇನಾನೆಲೆಗೆ ಅವಕಾಶ ಮಾಡಿಕೊಟ್ಟು ಇಲ್ಲಿಯ ಮೂಲ ನಿವಾಸಿಗಳನ್ನು ಹೊರಗಿನವರಂತೆ ನಡೆಸಿಕೊಂಡಿತು. ಜಪಾನ್ ದೇಶಕ್ಕೆ ಸೇರಿದ ಈ ದ್ವೀಪದಲ್ಲಿ ಈಗ ಶೇಕಡ 50ಕ್ಕಿಂತ ಹೆಚ್ಚು ಜಾಗವನ್ನು ಅಮೆರಿಕ ಸೈನ್ಯ ಆವರಿಸಿಕೊಂಡಿದೆ. ಇವರು ತಮ್ಮ ಜಾಗಕ್ಕೆ ಬೇಲಿ ಮಾಡಿಕೊಂಡಿದ್ದಲ್ಲದೆ ಇಲ್ಲಿಯ ಸ್ಥಳೀಯರು ಸಹ ಒಳ ಹೋಗಲು ಪರವಾನಗಿ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಇಂದಿಗೂ ಇಲ್ಲಿಯ ಜನ ಅಮೆರಿಕನ್ನರನ್ನು ಹೊರಕಳಿಸುವ ಆಶ್ವಾಸನೆ ನೀಡುವ ಜನರನ್ನೇ ಚುನಾವಣೆಯಲ್ಲಿ ಆರಿಸಿ ಕಳಿಸಿದರೂ ಅವರೇನೂ ಮಾಡದೆ ಸಮಯ ಕಳೆಯುತ್ತಿದ್ದಾರೆ. ಅಮೆರಿಕನ್ನರಿಂದ ತುಂಬಿರುವ ಈ ದ್ವೀಪದಲ್ಲಿ ಈಗ ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಇಲ್ಲಿಯ ಜನರ ಮೇಲೆ ಅವರ ಪ್ರಭಾವ ಹೆಚ್ಚಾಗಿ ಯುವ ಜನಾಂಗ ಪಾಶ್ಚಿಮಾತ್ಯರನ್ನು ಅನುಕರಿಸುತ್ತಿರುವುದು ದುರದೃಷ್ಟಕರ.
ಮೂಲ ಜಪಾನಿಯರಿಗಿಂತ ವಿಭಿನ್ನ ಜೀವನ ಶೈಲಿಯನ್ನು ಹೊಂದಿದ್ದ ಈ ದ್ವೀಪವನ್ನು ಹೆಚ್ಚಿನ ಸಮಯ ಆಳಿದ್ದು ರುಯ್ಕು ಸಾಮ್ರಾಜ್ಯ. ಇಲ್ಲಿನ ಧರ್ಮವನ್ನು ರುಯ್ಕುಯಿಸಂ ಅಂತಲೇ ಕರೆಯಲಾಗುತ್ತಿತ್ತು. ಇದು ಶಿಂಟೋಯಿಸಂ ಹಾಗೂ ಬೌದ್ಧ ಧರ್ಮ ಇವೆರಡೂ ಧರ್ಮಗಳ ಸಂಗಮ ಎಂದು ಹೇಳಲಾಗುತ್ತಿತ್ತು.

ಇವರಲ್ಲಿ ಪಿತೃಗಳ ಪೂಜೆ ಬಹುಮುಖ್ಯ. ತಮ್ಮ ಹಿರಿಯರ ಸಮಾಧಿಯನ್ನು ಅತಿ ಸುಂದರವಾಗಿ ಕಟ್ಟುವುದು ಇವರ ಸಂಪ್ರದಾಯ. ಹಿಂದೊಮ್ಮೆ ಇಲ್ಲಿಯ ಜನ ಕೇವಲ ಸಸ್ಯಹಾರಿಗಳಾಗಿದ್ದರು ಎಂದು ಹೇಳುತ್ತಾರೆ. ಕಾಲಕ್ರಮೇಣ ಜಪಾನ್ ಹಾಗೂ ಅಮೆರಿಕನ್ನರ ಪ್ರಭಾವ ಕ್ಕೊಳಗಾಗಿ ಈಗ ಶೇಕಡಾ 90ಕ್ಕಿಂತ ಹೆಚ್ಚು ಜನ ಮಾಂಸಾಹಾರಿಗಳಾಗಿದ್ದಾರೆ.
ಓಕಿನಾವಾ ಗುಹೆ!
ಹವಳದ ದ್ವೀಪ ಎಂದೇ ಕರೆಸಿಕೊಳ್ಳುವ ಓಕಿನಾವಾದ ಹಲವಾರು ವಿಶೇಷಗಳಲ್ಲಿ ಓಕಿನಾವಾ ಗುಹೆ ವಿಶಿಷ್ಟವಾದದ್ದು. ಮಹಾಯುದ್ಧದ ಸಮಯದಲ್ಲಿ ಈ ಗುಹೆಯೊಳಗೆ ಸಾವಿರಕ್ಕೂ ಹೆಚ್ಚು ಜನ ಆರು ತಿಂಗಳಿಗಿಂತ ಹೆಚ್ಚಿನ ಸಮಯ ಆಶ್ರಯ ಹೊಂದಿದ್ದರು ಎಂದು ಇತಿಹಾಸ ಹೇಳುತ್ತದೆ.
ಇಲ್ಲಿನ ಜನ ಅತ್ಯಂತ ಸಭ್ಯರೂ ಹಾಗೂ ಪ್ರಾಮಾಣಿಕರು. ದಾರಿಯಲ್ಲಿ ಯಾರದ್ದಾದರೂ ವಸ್ತು ಬಿದ್ದರೆ ಎಂದಿಗೂ ಎತ್ತಿಕೊಳ್ಳುವುದಿಲ್ಲ ಬದಲಿಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿಟ್ಟು ಕಳೆದುಕೊಂಡವರು ಅದರ ಗುರುತು ಹೇಳಿ ತೆಗೆದುಕೊಳ್ಳುವಂತೆ ಮಾಡುತ್ತಾರೆ.

ಮ್ಯಾಂಗೋ ಬಾತ್!
ಓಕಿನಾವಾದ ವಿಷಯವನ್ನು ಹೇಳುವಾಗ ಅಲ್ಲಿಯ ಮಾವಿನಹಣ್ಣಿನ ಬಗ್ಗೆ ಹೇಳದಿದ್ದರೆ ಪೂರ್ತಿಯಾಗಿ ಹೇಳಿದಂತೆ ಅಲ್ಲ. ಒಂದು ಕಿಲೋಗೆ 50 ಸಾವಿರದಿಂದ ಪ್ರಾರಂಭವಾಗಿ ಮೂರು ಲಕ್ಷದವರೆಗೂ ಬೆಲೆ ಬಾಳುವ ಇಲ್ಲಿಯ ಮಾವಿನ ಹಣ್ಣು ಪ್ರಪಂಚದಲ್ಲೇ ಅತಿ ದುಬಾರಿ. ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ಈ ಮಾವಿನ ಹಣ್ಣು ಅತ್ಯಂತ ರುಚಿಕರವಾದದ್ದು. ಚಿಕ್ಕದಿರುವಾಗ ನೇರಳೆ ಬಣ್ಣದಲ್ಲಿರುವ ಈ ಮಾವಿನ ಕಾಯಿ ಬೆಳೆದು ದೊಡ್ಡದಾದಂತೆ ಕೆಂಪು ಮಿಶ್ರಿತ ತಿಳಿ ನೇರಳೆ ಬಣ್ಣಕ್ಕೆ ತಿರುಗುತ್ತದೆ ಕೇವಲ ಎರಡು ತಿಂಗಳಷ್ಟೇ ಮಾರುಕಟ್ಟೆಯಲ್ಲಿರುವ ಈ ಹಣ್ಣನ್ನು ಬೆಳೆಸುವುದೇ ಅತಿ ವಿಶಿಷ್ಟ ಹಾಗೂ ಕ್ಲಿಷ್ಟಕರ.
ಮೊಬಿಯಸ್ ಬ್ಯಾಂಡ್ !
ಈ ದ್ವೀಪದಲ್ಲಿ ಯಾವುದೇ ಪ್ರತಿಷ್ಠಿತ ಕಂಪನಿಗಳ ಶಾಖೆಗಳಿಲ್ಲ. ಆದರೆ ಪ್ರಪಂಚದ ಹಲವಾರು ವಿಜ್ಞಾನ ಸಂಸ್ಥೆಗಳಲ್ಲೊಂದಾದ ಓಕಿನಾವಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (OIST) ಅತಿ ಪ್ರಸಿದ್ಧವಾದದ್ದು. ಹೆಚ್ಚಾಗಿ ಸಮುದ್ರ ಜೀವಿಗಳ ಮೇಲೆ ಸಂಶೋಧನೆ ನಡೆಸುತ್ತಿದ್ದರೂ ಇದೀಗ ವಿಜ್ಞಾನ ವಿವಿಧ ಭಾಗಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಈ ಸಂಸ್ಥೆ ಹಲವಾರು ಮೈಲಿಗಲ್ಲನ್ನು ಸಾಧಿಸಿದೆ. ದಟ್ಟಡವಿಯ ಮಧ್ಯೆ ನಿರ್ಮಿಸಿದ ಈ ಸಂಶೋಧನಾ ಕೇಂದ್ರದ ವಿಶೇಷವೆಂದರೆ ಸುತ್ತಲಿದ್ದ ಅಡವಿಯನ್ನು ಇದ್ದಹಾಗೆ ಇಟ್ಟುಕೊಂಡಿದ್ದಾರೆ. ಅತಿ ಕಡಿಮೆ ಮರಗಳನ್ನು ಕಡಿದದ್ದಲ್ಲದೆ ಪ್ರಕೃತಿಯ ಸೌಂದರ್ಯವನ್ನು ನೋಡಲು ಅನುವಾಗುವಂತೆ ಗಾಜಿನ ತಳವಿರುವ ಸೇತುವೆಗಳ ನಿರ್ಮಾಣ ಮಾಡಿದ್ದಾರೆ. ಹಲವು ದೇಶಗಳಿಂದ ಬಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಪದವಿಯೋತ್ತರ (Phd) ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿಯ ವಿಜ್ಞಾನಿಗಳು ಸಂಶೋಧಿಸಿದ ಮೊಬಿಯಸ್ ಬ್ಯಾಂಡ್ (Mobius Band) ವಿಜ್ಞಾನ ಪ್ರಪಂಚದಲ್ಲಿ ಅತ್ಯಂತ ಮುಖ್ಯವಾದದ್ದು.

ತಿಮಿಂಗಿಲಗಳ ಅಕ್ವೇರಿಯಂ!
ಓಕಿನಾವಾ ದ್ವಿಪದ ನಾಗೋ ಎಂಬಲ್ಲಿ ಜಗತ್ಪ್ರಸಿದ್ಧ ಅಕ್ವೇರಿಯಂ ಇದೆ. ಈ ಮೀನು ತೊಟ್ಟಿಯಲ್ಲಿ ಬೃಹದಾಕಾರದ ತಿಮಿಂಗಿಲಗಳನ್ನು ಸಹ ನೋಡಬಹುದು. ಸಾವಿರಾರು ವಿಧದ ಜಲಚರಗಳನ್ನು ಈ ಅಕ್ವೇರಿಯಂ ನಲ್ಲಿ ಇಟ್ಟಿದ್ದಾರೆ. ಇದು ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಅಕ್ವೇರಿಯಂ.
ತಮ್ಮ ಜೀವನದಲ್ಲಿ ಹಲವು ಪ್ರಕೃತಿ ವಿಕೋಪ ಬಂದರೂ ಅದನ್ನು ಎದುರಿಸಿ ಮತ್ತೆ ಎದ್ದು ನಿಲ್ಲುವ ಈ ಜನರ ಮನೋಬಲ ಮೆಚ್ಚುವಂತಾದ್ದು. ಸರಳ ಜೀವನ ನಡೆಸಿ ಶತಾಯುಷಿಗಳಾಗಿ ಬಾಳುವುದು ಇಲ್ಲಿಯ ಜನರ ವೈಶಿಷ್ಟ್ಯ.