• ಜ್ಯೋತಿ ಪ್ರಸಾದ್

ಯುರೋಪಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಬೆಲ್ಜಿಯಂ ಶ್ರೀಮಂತ ಇತಿಹಾಸ, ಅದ್ಭುತ ವಾಸ್ತುಶಿಲ್ಪ ಹಾಗೂ ವಿಶಿಷ್ಟ ಸಂಸ್ಕೃತಿಯ ವೈವಿಧ್ಯಮಯ ದೇಶ. ಸಣ್ಣ ದೇಶವಾದರೂ ಅನೇಕ ವಿಶ್ವವಿಖ್ಯಾತ ಪ್ರವಾಸಿ ಆಕರ್ಷಣೆಗಳಿದ್ದು, ಕಡಿಮೆ ಸಮಯದಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ ವಿಭಿನ್ನ ಅನುಭವಗಳನ್ನು ಪಡೆಯಬಹುದು.

ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ನಗರವು ಯುರೋಪಿಯನ್ ಯೂನಿಯನ್ ಮತ್ತು NATO ನಂಥ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಕೇಂದ್ರ. ಈ ನಗರದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು ನಗರದ ಹೃದಯ ಭಾಗದಲ್ಲಿನ ʻಗ್ರಾಂಡ್ ಪ್ಲೇಸ್ ಚೌಕʼ. ಇಲ್ಲಿನ ʻಗಿಲ್ಡ್ ಹೌಸ್ʼಗಳು ಮತ್ತು ʻಟೌನ್ ಹಾಲ್ʼ ಕಟ್ಟಡಗಳು ಅದ್ಭುತ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅಲ್ಲದೇ ಈ ಕಟ್ಟಡಗಳ ಮುಂಭಾಗಗಳು ಚಿನ್ನದ ಲೇಪನಗಳಿಂದ ಅಲಂಕೃತವಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಹಾಗಾಗಿ ಈ ಜಾಗವು 1998ರಲ್ಲಿ ಯುನೆಸ್ಕೋ ವಿಶ್ವಪಾರಂಪರಿಕ ತಾಣವೆಂದು ಗುರುತಿಸಲ್ಪಟ್ಟಿದೆ. ʻಗ್ರಾಂಡ್ ಪ್ಲೇಸ್ʼ ಬಹಳ ಹಿಂದಿನಿಂದಲೂ ಬ್ರಸೆಲ್ಸ್‌ನ ರಾಜಕೀಯ ಮತ್ತು ವಾಣಿಜ್ಯ ಕೇಂದ್ರವಾಗಿದ್ದು, ಇಂದು ಒಂದು ರಾಜಕೀಯ ಹಾಗೂ ಐತಿಹಾಸಿಕ ಕೇಂದ್ರವಾಗಿ ನಿಂತಿದೆ.

ಇದನ್ನು ಓದಿ ನವ ಪ್ರವಾಸೋದ್ಯಮ : ಪ್ರವಾಸಿಗರನ್ನು ಮತ್ತೆ ಮತ್ತೆ ಸೆಳೆಯುವ ಕಲೆ

ಬ್ರಸೆಲ್ಸ್ ಟೌನ್ ಹಾಲ್ ಅತ್ಯುತ್ತಮವಾದ ಗೋಥಿಕ್ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಿದ್ದು, ಇದರ 96-ಮೀಟರ್ ಎತ್ತರದ ಗಂಟೆ ಗೋಪುರವು ಪ್ರಮುಖ ಆಕರ್ಷಣೆ. ಈ ಚೌಕದ ಸುತ್ತಲೂ ಇರುವ ಹಲವಾರು ಐತಿಹಾಸಿಕ ಕಟ್ಟಡಗಳು ಒಂದು ಕಾಲದಲ್ಲಿ ವೃತ್ತಿಪರ ಮತ್ತು ವ್ಯಾಪಾರ ಸಂಘಗಳ ಸಭೆಗಳು ಮತ್ತು ಕಚೇರಿಗಳಿಗೆ ಬಳಸಲಾಗುತ್ತಿದ್ದ ʻಗಿಲ್ಡ್ ಹೌಸ್ʼಗಳು. ಇವು ಬರೋಕ್ ಶೈಲಿಯ ವಾಸ್ತುಶಿಲ್ಪ ಹೊಂದಿವೆ. ಪ್ರತಿಯೊಂದು ಗಿಲ್ಡ್ ಹೌಸ್ ವಿಭಿನ್ನ ವಿನ್ಯಾಸ ಮತ್ತು ಚಿನ್ನದ ಅಲಂಕಾರ ಹೊಂದಿದ್ದು, ಒಂದು ಕಾಲದ ಬ್ರಸೆಲ್ಸ್‌ನ ವ್ಯಾಪಾರ ಮತ್ತು ವೃತ್ತಿ ಸಂಘಗಳ ಶಕ್ತಿ ಮತ್ತು ಸಂಪತ್ತನ್ನು ಪ್ರತಿಬಿಂಬಿಸುತ್ತವೆ.

17ನೇ ಶತಮಾನದಲ್ಲಿ ಬಾಂಬ್ ದಾಳಿಯಿಂದ ನಾಶವಾಗಿದ್ದ ʻಗ್ರಾಂಡ್ ಪ್ಲೇಸ್ʼನ ಈ ಕಟ್ಟಡಗಳನ್ನು ಅತಿ ವೇಗವಾಗಿ ಹಾಗೂ ಮೊದಲಿಗಿಂತ ಹೆಚ್ಚು ವೈಭವವಾಗಿ ಮತ್ತು ಅಲಂಕಾರಿಕವಾಗಿ ಮರುನಿರ್ಮಾಣ ಮಾಡಲಾಗಿದೆ. ಇಂದು ಇದು ನಗರದ ಸಾಂಸ್ಕೃತಿಕ ಕೇಂದ್ರವಾಗಿದ್ದು, ಜಗತ್ತಿನ ಅತ್ಯಂತ ಸುಂದರ ಚೌಕಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ವರ್ಷವಿಡೀ ಇಲ್ಲಿ ಅನೇಕ ಉತ್ಸವಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವಾಗಿ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಮಯದಲ್ಲಿ ಇಲ್ಲಿ ಸಂಭ್ರಮದ ಆಚರಣೆಗಳು ಮತ್ತು ಲೈಟ್ ಶೋಗಳು ನಡೆಯುತ್ತವೆ. ಪ್ರತಿ ಎರಡು ವರ್ಷಗಳಿಗೊಮ್ಮೆ (ಸಮ ಸಂಖ್ಯೆಯ ವರ್ಷಗಳಲ್ಲಿ) ಆಗಸ್ಟ್‌ನಲ್ಲಿ ಗ್ರಾಂಡ್ ಪ್ಲೇಸ್‌ನ ಮಧ್ಯೆ ಲಕ್ಷಾಂತರ ಬೆಗೋನಿಯಾ ಹೂವುಗಳನ್ನು ಬಳಸಿ ಬೃಹತ್ ಹೂವಿನ ಕಾರ್ಪೆಟ್ ರಚಿಸಲಾಗುತ್ತದೆ. ಇದು ಜಗತ್ಪ್ರಸಿದ್ಧವಾಗಿದ್ದು, ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬ್ರಸಲ್ಸ್ ಎಂದೊಡನೆ ಪ್ರವಾಸಿಗರಿಗೆ ನೆನಪಾಗುವುದು ʻಮೆನಿಕನ್ ಪಿಸ್ʼ ಸ್ಮಾರಕ. ಮೆನಿಕನ್ ಪಿಸ್ ಎಂದರೆ ಮೂತ್ರ ವಿಸರ್ಜಿಸುತ್ತಿರುವ ಬಾಲಕ ಎಂದರ್ಥ.ಇದು ಬ್ರಸೆಲ್ಸ್‌ನ ಮಧ್ಯೆ ಇರುವ ಒಂದು ಸಣ್ಣ, ವಿಶ್ವ ವಿಖ್ಯಾತ ಕಂಚಿನ ಪ್ರತಿಮೆ. 61 ಸೆಂಟಿಮೀಟರ್ ಎತ್ತರವಿದೆ. ಕಾರಂಜಿಯಲ್ಲಿ ನಿಂತು ಮೂತ್ರ ವಿಸರ್ಜಿಸುವ ಭಂಗಿಯಲ್ಲಿದೆ. ಈ ಪ್ರತಿಮೆ ಕುರಿತು ಹಲವು ದಂತಕಥೆಗಳಿವೆ. ಒಂದು ಪ್ರಸಿದ್ಧ ಕಥೆಯ ಪ್ರಕಾರ, ಯುದ್ಧದ ಸಮಯದಲ್ಲಿ ಬೆಲ್ಜಿಯಂನ ಸೈನ್ಯವು ಕಷ್ಟದಲ್ಲಿದ್ದಾಗ, ಈ ಹುಡುಗ ಮೂತ್ರ ವಿಸರ್ಜಿಸುವ ಮೂಲಕ ವಿರೋಧಿಗಳ ಮದ್ದುಗುಂಡುಗಳ ಬೆಂಕಿಯನ್ನು ಆರಿಸಿದನು ಎಂದು ಹೇಳಲಾಗುತ್ತದೆ. ಹಾಗಾಗಿ ಈ ಪ್ರತಿಮೆಯನ್ನು ಬೆಲ್ಜಿಯನ್ನರು ದೇಶಭಕ್ತಿಯ ಪ್ರತೀಕ ಎಂದು ಭಾವಿಸುತ್ತಾರೆ.

belgium 1

ಈ ಪ್ರತಿಮೆಗೆ ವಿವಿಧ ಸಂದರ್ಭಗಳು ಮತ್ತು ಹಬ್ಬಗಳಿಗೆ ಅನುಗುಣವಾಗಿ ವಿಭಿನ್ನ ಬಟ್ಟೆಗಳನ್ನು ತೊಡಿಸಲಾಗುತ್ತದೆ. ಇವುಗಳನ್ನು ಸಂಗ್ರಹಿಸಿಡಲು ಅದರದೇ ವಸ್ತುಸಂಗ್ರಹಾಲಯವಿದ್ದು, ಸಾವಿರಾರು ವೇಷಭೂಷಣಗಳ ಸಂಗ್ರಹವು ಇಲ್ಲಿದೆ.

ಬೆಲ್ಜಿಯಂನ ಮತ್ತೊಂದು ಆಕರ್ಷಣೆ ʻಬ್ರೂಜ್ʼ ಪಟ್ಟಣ. ಇಲ್ಲಿನ ಮಧ್ಯಕಾಲೀನ ಕಾಲುವೆಗಳು, ಕಲ್ಲುಹಾಸಿನ ಬೀದಿಗಳು ಮತ್ತು ಪ್ರಾಚೀನ ಕಟ್ಟಡಗಳಿಂದ ಸುಂದರ ಲೋಕದಂತೆ ತೋರುತ್ತದೆ. ಇದನ್ನು ಎರಡನೇ ವೆನಿಸ್ ಎನ್ನುತ್ತಾರೆ. ಇಲ್ಲಿನ ʻಬೆಲ್‌ಫ್ರಿʼ ಗೋಪುರದಿಂದ ಇಡೀ ನಗರದ ವಿಹಂಗಮ ನೋಟವನ್ನು ನೋಡಬಹುದು. ಬ್ರೂಜ್ ನಗರದಲ್ಲಿ ದೋಣಿ ವಿಹಾರ ಮಾಡುತ್ತಾ ನೀರಿನಿಂದ ನಗರದ ಸೌಂದರ್ಯವನ್ನು ಆಸ್ವಾದಿಸಬಹುದು. ಇದು ಸಂಪೂರ್ಣವಾಗಿ ಕಾರು ರಹಿತ ನಗರ. ಹಾಗಾಗಿ ನಗರವಿಡೀ ನಡೆದುಕೊಂಡೇ ಅನ್ವೇಷಿಸಬೇಕು.

ಇತಿಹಾಸ ಪ್ರಿಯರಿಗೆ ಬ್ರಸೆಲ್ಸ್‌ನ ದಕ್ಷಿಣಕ್ಕೆ ಸಣ್ಣ ಪಟ್ಟಣ ವಾಟರ್ ಲೂ ಇದೆ. ಇದು ಪ್ರಪಂಚದ ಇತಿಹಾಸದಲ್ಲಿ ಗುರುತಿಸಿಕೊಂಡ ವಾಟರ್‌ಲೂ ಕದನ ನಡೆದ ಸ್ಥಳ. ಈ ಕದನದಲ್ಲಿ ನೆಪೋಲಿಯನ್ ತನ್ನ ಕೊನೆಯ ಮತ್ತು ನಿರ್ಣಾಯಕ ಸೋಲನ್ನು ಅನುಭವಿಸಿದ ನಂತರ ಅವನ ಅಧಿಕಾರ ಅಂತ್ಯವಾಗಿ ಯುರೋಪಿನ ರಾಜಕೀಯ ಮತ್ತು ಭೌಗೋಳಿಕ ಪರಿಸ್ಥಿತಿಗಳು ಬದಲಾದದ್ದು ಚರಿತ್ರೆ. ಯುದ್ಧದ ದೃಶ್ಯಗಳನ್ನು ಚಿತ್ರಿಸುವ ಒಂದು ದೊಡ್ಡ ಗೋಳಾಕಾರದ ವರ್ಣಚಿತ್ರ, ಯುದ್ಧದ ಕುರಿತಾದ ವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಇತಿಹಾಸವನ್ನು ವಿವರಿಸುವ ವಸ್ತು ಸಂಗ್ರಹಾಲಯಗಳನ್ನು ಇಲ್ಲಿ ನೋಡಬಹುದು. ಯುದ್ಧಭೂಮಿಯ ಮಧ್ಯೆ 40 ಮೀಟರ್ ಎತ್ತರದ ಕೃತಕ ಮಣ್ಣಿನ ಗುಡ್ಡವಿದೆ. ಇದರ ಮೇಲೆ ಕಂಚಿನ ಸಿಂಹದ ಪ್ರತಿಮೆ ಇದೆ. ಇದು ನೆಪೋಲಿಯನ್ ವಿರುದ್ಧ, ಮಿತ್ರಪಡೆಗಳ ವಿಜಯದ ಸಂಕೇತ. ಈ ಗುಡ್ಡದ ಮೇಲಿಂದ ಯುದ್ಧಭೂಮಿಯ ವಿಹಂಗಮ ನೋಟವನ್ನು ಕಾಣಬಹುದು.

ಇಷ್ಟು ಈ ದೇಶದ ಕಲೆ-ಸಂಸ್ಕೃತಿ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ತಾಣಗಳಾದರೆ ಬ್ರಸಲ್ಸ್‌ನಲ್ಲಿನ ವಿಜ್ಞಾನಕ್ಕೆ ಸಂಬಂಧಿಸಿದ ಆಟೋಮಿಯಂ ಕಟ್ಟಡ. ಈ ಕಟ್ಟಡವನ್ನು, ಸುಮಾರು 18 ಮೀಟರ್ ವ್ಯಾಸದ ಒಂಬತ್ತು ಉಕ್ಕಿನ ಗೋಳಗಳು ಮತ್ತು ಅವುಗಳನ್ನು ಸಂಪರ್ಕಿಸುವ ಉಕ್ಕಿನ ಕೊಳವೆಗಳ ಮೂಲಕ ಪರಮಾಣುವಿನ ಆಕಾರದಲ್ಲಿ ರಚಿಸಲಾಗಿದೆ. ಗೋಳಗಳ ಒಳಗೆ ವಿಶಾಲವಾದ ಹಲವಾರು ಕೊಠಡಿಗಳಿವೆ. ಇವುಗಳಲ್ಲಿ ಕೆಲವು ಗೋಳಗಳು ಮಾತ್ರ ಪ್ತವಾಸಿಗರಿಗೆ ಮುಕ್ತವಾಗಿದ್ದು, ಪ್ರದರ್ಶನ ಸ್ಥಳಗಳು, ವಸ್ತುಸಂಗ್ರಹಾಲಯಗಳು ಮತ್ತು ಶೈಕ್ಷಣಿಕ ವಿಭಾಗಗಳನ್ನು ಒಳಗೊಂಡಿವೆ. ಅತಿ ಎತ್ತರದ ಗೋಳದಲ್ಲಿ ಒಂದು ರೆಸ್ಟೋರೆಂಟ್ ಇದೆ. ಇಲ್ಲಿಂದ ಇಡೀ ಬ್ರಸೆಲ್ಸ್‌ನ ರಮಣೀಯ ನೋಟವನ್ನು ಕಾಣಬಹುದು. ಕೊಳವೆಗಳ ಒಳಗೆ ಎಸ್ಕಲೇಟರ್‌, ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಒಂದು ಗೋಳದಿಂದ ಇನ್ನೊಂದು ಗೋಳಕ್ಕೆ ಹೋಗಬಹುದು. ಒಟ್ಟಾರೆ ಈ ಕಟ್ಟಡ ವಿಜ್ಞಾನ ಮತ್ತು ವಾಸ್ತುಶಿಲ್ಪದ ಅದ್ಭುತ ಸಂಯೋಜನೆಯೇ ಸರಿ.

ಬೆಲ್ಜಿಯಂ ರಾಷ್ಟ್ರವು ಯುರೋಪಿನ ಇತರ ಭಾಗಗಳಿಂದ ಅತ್ಯುತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಡಚ್, ಫ್ರೆಂಚ್ ಮತ್ತು ಜರ್ಮನ್ ಇಲ್ಲಿನ ಅಧಿಕೃತ ಭಾಷೆಗಳು. ಆದರೆ ಇತ್ತೀಚೆಗೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇಂಗ್ಲಿಷ್ ಮಾತನಾಡುವವರನ್ನೂ ಕಾಣಬಹುದು.

ಬೆಲ್ಜಿಯಂನ ವಜ್ರ, ಬಿಯರ್, ವಾಫಲ್ಸ್ ಮತ್ತು ಚಾಕೋಲೆಟ್‌ಗಳು ಜಗತ್ಪ್ರಸಿದ್ಧವಾಗಿವೆ. ಇಲ್ಲಿನ ವಿಶೇಷ ಮತ್ತು ಸಾಂಸ್ಕೃತಿಕ ಖಾದ್ಯ ಫ್ರಿಟ್ಸ್.

ಇತಿಹಾಸ, ವಿಜ್ಞಾನ ಮತ್ತು ಸಂಸ್ಕೃತಿ - ಈ ಮೂರನ್ನೂ ಮೇಳವಿಸಿಕೊಂಡ ಬೆಲ್ಜಿಯಂ ದೇಶ ಪ್ರವಾಸಿಗರಿಗೆ ಹಲವಾರು ಆಯಾಮಗಳ ಸುಂದರ ಅನುಭವವನ್ನು ನಿಸ್ಸಂದೇಹವಾಗಿ ನೀಡುತ್ತದೆ.