ಗೋಲ್ಡನ್ ಡ್ರ್ಯಾಗನ್ ಬಾಯಲ್ಲಿ ಬೆಂಕಿ ಚೆಂಡು
ಆಧುನಿಕ ಎಂಜಿನಿಯರಿಂಗ್ ಮತ್ತು ಪುರಾತನ ಸಾಂಸ್ಕೃತಿಕ ಪರಂಪರೆಯ ಸಮ್ಮಿಶ್ರಣದ ಸುಂದರ ಸಂಯೋಜನೆ ಪ್ರಸಿದ್ಧ ಗೋಲ್ಡನ್ ಡ್ರ್ಯಾಗನ್ ಸೇತುವೆ. ಇದನ್ನು ದಾ ನಾಂಗ್ ನಗರದ ʼಐಕಾನ್ʼ ಎಂದು ಹೇಳಲಾಗುತ್ತದೆ.
- ಗೀತಾ ಹೆಗಡೆ
ಸೇತುವೆಗಳ ನಗರ ಎಂದು ಹೆಸರುವಾಸಿಯಾದ ದಾ ನಾಂಗ್, ವಿಯೆಟ್ನಾಂ ದೇಶದ ಮಧ್ಯದಲ್ಲಿರುವ ಕರಾವಳಿ ಪ್ರದೇಶ. ಪ್ರಸಿದ್ಧ ಬಂದರು ಪ್ರದೇಶವಾಗಿ ದಾ ನಾಂಗ್ ಹಲವಾರು ಅತ್ಯದ್ಭುತ ಸೇತುವೆಗಳಿಗೆ ಸಾಕ್ಷಿಯಾಗಿದೆ. ವಿಶಿಷ್ಟ ವಿನ್ಯಾಸದ ಈ ಡ್ರ್ಯಾಗನ್ ಸೇತುವೆ ದಾ ನಾಂಗ್ ನಗರದ ಹೃದಯ ಭಾಗದಲ್ಲಿದೆ. ಇದನ್ನು ಹಾನ್ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. 1975ರ ವಿಯೆಟ್ನಾಂ ಯುದ್ಧದ ಅಂತ್ಯದಲ್ಲಿ ಉತ್ತರ ವಿಯೆಟ್ನಾಂ ಪಡೆ ಬಂದರು ನಗರ ದಾ ನಾಂಗ್ ಅನ್ನು ವಶಪಡಿಸಿಕೊಂಡ ಸ್ಮರಣಾರ್ಥವಾಗಿ 38ನೆಯ ವಾರ್ಷಿಕೋತ್ಸವ ಮಾರ್ಚ್ 29, 2013ರಂದು ಈ ಸೇತುವೆಯನ್ನು ಉದ್ಘಾಟಿಸಲಾಯಿತು. ಈ ಸೇತುವೆಯ ವಿನ್ಯಾಸಗಾರರು ಅಮೇರಿಕದ ಅಮ್ಮನ್ ಅಂಡ್ ವಿಟ್ನಿ ಮತ್ತು ಲೂಯಿಸ್ ಬರ್ಗರ್ ಗ್ರೂಪ್ ಎನ್ನುವ ಎಂಜಿನಿಯರಿಂಗ್ ಸಂಸ್ಥೆಗಳು.
ಇದನ್ನೂ ಓದಿ: ಸಿಯಾಟಲ್‌ನ ಹೆಗ್ಗುರುತುಗಳು
ಪವರ್‌ಫುಲ್ ಡ್ರ್ಯಾಗನ್
ಡ್ರ್ಯಾಗನ್ ಸೇತುವೆ ಇಲ್ಲಿಯ ಜನರ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಹೆಮ್ಮೆಯ ಪ್ರತೀಕವಾಗಿದೆ. ಡ್ರ್ಯಾಗನ್, ವಿಯೆಟ್ನಾಂ ಜನರು ಆರಾಧಿಸುವ ಒಂದು ಪವಿತ್ರ ಮತ್ತು ಶಕ್ತಿಶಾಲಿ ಪೌರಾಣಿಕ ಜೀವಿ. ವಿಯೆಟ್ನಾಮೀಸ್ ಅನುಸರಿಸುವ ʼಫಾಂಗ್ ಥುಯ್ʼ (ಫೆಂಗ್ ಶೂಯಿ) ಶಾಸ್ತ್ರದ ಪ್ರಕಾರ ʼಸಮುದ್ರದ ನಿಧಿʼ ಎಂದು ಕರೆಯಲಾಗುವ ನೈಸರ್ಗಿಕ ಮುತ್ತುಗಳು ಇವರಿಗೆ ಅತ್ಯಂತ ಮಂಗಳಕರ. ಈ ಸೇತುವೆಯ ರಚನೆಯಲ್ಲಿ ಚಿನ್ನದ ಬಣ್ಣದಲ್ಲಿ ಮಿನುಗುವ ಉಕ್ಕಿನ ದೈತ್ಯ ಡ್ರ್ಯಾಗನ್ ಚಕ್ರವರ್ತಿಯ ಸಂಕೇತವಾಗಿದೆ. ಇದು 10-13ನೆಯ ಶತಮಾನದ ಲಿ ರಾಜ ಮನೆತನದ ವಿನ್ಯಾಸದಿಂದ ಪ್ರೇರಿತವಾದ ಕಲಾಕೃತಿ. ಲಿ ರಾಜವಂಶದ ಕಲೆಯ ಪ್ರಕಾರ ಡ್ರ್ಯಾಗನ್ ಮುತ್ತನ್ನು ಬಾಯಿಯಲ್ಲಿ ಹಿಡಿದಿರುತ್ತದೆ. ಬಾಯಿಯಲ್ಲಿ ಹಿಡಿದಿರುವ ಮುತ್ತು ಉದಾತ್ತ ಮೌಲ್ಯ, ಜ್ಞಾನ ಮತ್ತು ಬ್ರಹ್ಮಾಂಡದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಸೇತುವೆಯ ಕಲಾತ್ಮಕತೆಯ ಅಂದಕ್ಕಿಂತ ಹೆಚ್ಚಾಗಿ ಡ್ರ್ಯಾಗನ್ ಕಲಾಕೃತಿಯ ಕ್ರಿಯಾತ್ಮಕ ರಚನೆಯು ಇದನ್ನೊಂದು ಸ್ಮರಣೀಯ ತಾಣವನ್ನಾಗಿಸಿದೆ. ವಿಶೇಷ ಏನೆಂದರೆ ಇದು ಬೆಂಕಿ ಮತ್ತು ನೀರನ್ನು ಉಸಿರಾಡುವ ಅಪರೂಪದ ಡ್ರ್ಯಾಗನ್. ಹಗಲಿನಲ್ಲಿ ಸುತ್ತಲಿನ ಹಾನ್ ನದಿ ನೀರಿನ ಸೌಂದರ್ಯದೊಂದಿಗೆ ನಿಶ್ಚಲವಾಗಿ ಅಲೆಯ ಆಕೃತಿಯಲ್ಲಿ ಮನ ಸೆಳೆಯುವ ಡ್ರ್ಯಾಗನ್, ವಿಭಿನ್ನವಾಗಿ ಆಕರ್ಷಿಸುವುದು ರಾತ್ರಿಯ ರಂಗುರಂಗಿನ ಬೆಳಕಲ್ಲಿ ಒಂದು ಸೊಗಸಾದ ಪ್ರದರ್ಶನದ ಮೂಲಕ.

ಸ್ಪೆಷಲ್ ಶೋ
ʼಡ್ರ್ಯಾಗನ್ ಫೈರ್ ಎಂಡ್ ವಾಟರ್ ಶೋʼ ಈ ಪ್ರದರ್ಶನದ ಪ್ರಮುಖ ಉದ್ದೇಶ ಸಾಂಸ್ಕೃತಿಕ ಮಹತ್ವ ಮತ್ತು ಪ್ರವಾಸೋದ್ಯಮದ ಆಕರ್ಷಣೆ. ಪ್ರತಿ ವಾರಾಂತ್ಯ ಶುಕ್ರವಾರ, ಶನಿವಾರ, ಭಾನುವಾರ ಮತ್ತು ವಿಶೇಷ ರಜಾ ದಿನಗಳಲ್ಲಿ ನಿಖರವಾಗಿ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ನಡೆಯುತ್ತದೆ. ಪ್ರವೇಶ ಉಚಿತ. ನಮ್ಮ ದಾ ನಾಂಗ್ ವಾಸ್ತವ್ಯದ ಎರಡನೆಯ ದಿನ ಶುಕ್ರವಾರವಾಗಿತ್ತು. ಅಂದಿನ ನಿಗದಿತ ಪ್ರೇಕ್ಷಣೀಯ ಸ್ಥಳಗಳ ಭೇಟಿ ಮುಗಿಸಿ ನಾವು ಸೇತುವೆಯ ಬಳಿ ಬಂದಾಗ ರಾತ್ರಿ 8 ಗಂಟೆ. ಅಷ್ಟೊತ್ತಿಗಾಗಲೇ ವಾರದ ಕೊನೆಯ ಕಾರಣ ಪ್ರವಾಸಿಗರು, ಸ್ಥಳೀಯರಿಂದ ಸೇರಿ ಸೇತುವೆಯ ಬಳಿ ಜನಸಾಗರವೇ ನೆರೆದಿತ್ತು. ನಿಬ್ಬೆರಗಾಗುವಂತೆ ಪ್ರಕಾಶಮಾನವಾದ ವಿದ್ಯುದ್ದೀಪಗಳಿಂದ ಪ್ರಜ್ವಲಿಸುತ್ತಾ ದೈತ್ಯ ಡ್ರ್ಯಾಗನ್ ಜೀವ ತಳೆದು ನಿಂತಿತ್ತು. ಹಳದಿ, ಹಸಿರು, ನೀಲಿ, ಕೆಂಪು, ಕಿತ್ತಳೆ ವಿವಿಧ ವರ್ಣಗಳಲ್ಲಿ ರೂಪಾಂತರಗೊಳ್ಳುತ್ತಾ ರಾರಾಜಿಸುತ್ತಿದ್ದ ದೈತ್ಯ ಡ್ರ್ಯಾಗನ್‌ನಿಂದ ಸೇತುವೆಯ ಸೌಂದರ್ಯ ಇಮ್ಮಡಿಗೊಂಡಿತ್ತು. ನಗರ ನಡು ಭಾಗದ ಈ ಸೇತುವೆಯಿಂದ ಸುತ್ತಣ ಝಗಮಗಿಸುವ ನಗರದ ನೋಟ, ಅದೊಂದು ಮೈಮರೆಸುವ ಮಾಯಾಲೋಕವಾಗಿತ್ತು. ನದಿ ನೀರಿನ ಮೇಲ್ಮೈಯಲ್ಲಿ ಮಿಂಚುತ್ತಿದ್ದ ವರ್ಣಮಯ ನಗರದ ಪ್ರತಿಫಲನ, ಬೆರಗುಗೊಳಿಸುವ ಅಮೂರ್ತ ಮೇರು ಕಲಾಕೃತಿಯಂತಿತ್ತು.
ಸುತ್ತಮುತ್ತವಿರುವ ಜಾಗಗಳು
ಪ್ರದರ್ಶನಕ್ಕೆ 15 ನಿಮಿಷ ಮೊದಲು ವಾಹನ ಸಂಚಾರಕ್ಕೆ ನಿರ್ಬಂಧವಿರುತ್ತದೆ. ಆದ್ದರಿಂದ ಯಾವ ಅಡೆತಡೆಯಿಲ್ಲದೆ ಸೇತುವೆಯ ಮೇಲೆ ನಿಂತು ಶೋ ವೀಕ್ಷಿಸಬಹುದು. ಇಲ್ಲದಿದ್ದರೆ ಶೋ ವೀಕ್ಷಣೆಗೆ ಅನುಕೂಲವಾಗುವಂತೆ ಇಲ್ಲಿ ಹಲವಾರು ಜಾಗಗಳು ಸೇತುವೆಗೆ ಹೊಂದಿಕೊಂಡಿವೆ. ಸೇತುವೆಯ ಬುಡದಲ್ಲೇ ಪ್ರಸಿದ್ಧ ಸನ್ ಟ್ರಾ ನೈಟ್ ಮಾರ್ಕೆಟ್, ಸೇತುವೆಯ ಸುತ್ತಲೂ ನೂರಾರು ಆಹಾರ ಮಳಿಗೆಗಳು, ಕೆಫೆ, ರೆಸ್ಟೋರೆಂಟ್‌ಗಳು, ವಿಹರಿಸಲು ಡ್ರ್ಯಾಗನ್ ಸೇತುವೆಗೆ ಎದುರಾಗಿ ಪ್ರೇಮಿಗಳಿಗೆಂದೇ ಸೃಷ್ಟಿಯಾದ ಲವ್-ಲಾಕ್ ಬ್ರಿಡ್ಜ್ ಮತ್ತು ಹಾಯಿ ದೋಣಿಯನ್ನು ಹೋಲುವ ಆಧುನಿಕ ಕೇಬಲ್ ಟ್ರಾನ್ ಥಿ ಲಿ ಸೇತುವೆ, ಎಲ್ಲಕ್ಕೂ ಮಿಗಿಲಾಗಿ ಮುದ ನೀಡುವ ಹಾನ್ ನದಿಯ ಕ್ರೂಸ್ ವಿಹಾರ ಅತ್ಯಂತ ಚೇತೋಹಾರಕ. ಎಲ್ಲದಕ್ಕೂ ಕೇಂದ್ರ ಬಿಂದುವಾಗಿ ಡ್ರ್ಯಾಗನ್ ಸೇತುವೆ ಕಾರ್ಯ ನಿರ್ವಹಿಸುವುದರಿಂದ ಮೇಲಿನ ನಮ್ಮ ಇಷ್ಟದ ಮನೋರಂಜನೆಗಳಲ್ಲಿ ಭಾಗಿಯಾಗಿಯೂ ನಾವು ಶೋ ಆನಂದಿಸಬಹುದು.
ಬೆಂಕಿ ಶೋ
ನಿಶ್ಚಿತ ಸಮಯಕ್ಕೆ ಸರಿಯಾಗಿ ಡ್ರ್ಯಾಗನ್ ತನ್ನ ಅಗೋಚರವಾದ ಅಗಾಧ ಸಾಮರ್ಥ್ಯದ ಅರಿವನ್ನು ಸಾಂಕೇತಿಕವಾಗಿ ಬೆಂಕಿ ಮತ್ತು ನೀರಿನ ಮೂಲಕ ಪ್ರದರ್ಶಿಸಿತು. ಮೊದಲನೆಯ ಹಂತದಲ್ಲಿ2 ಸುತ್ತಿನಲ್ಲಿ ಒಟ್ಟು 9 ಸಲ ಡ್ರ್ಯಾಗನ್ ಬಾಯಿಯಿಂದ ಬೆಂಕಿಯನ್ನು ಉಸಿರಾಡಿತು. ʼಡ್ರ್ಯಾಗನ್ ಹೋಲ್ಡಿಂಗ್ ಎ ಪರ್ಲ್ʼ ಮಾದರಿಯಲ್ಲಿ ಪ್ರತಿ ಉಸಿರಿನಿಂದ ಪ್ರಬಲವಾಗಿ ಹೊರಹೊಮ್ಮುತ್ತಿದ್ದ ಬೃಹತ್ ಬೆಂಕಿಯ ಉಂಡೆ ಜ್ವಲಿಸುವ ಮುತ್ತಿನಂತೆ ಆಕಾಶದೆಡೆಗೆ ಚಿಮ್ಮುತ್ತಿತ್ತು. ಆ ರೋಚಕ ನೋಟಕ್ಕೆ ಸುತ್ತಲಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಕಣ್ಣುಗಳು, ಕ್ಯಾಮೆರಗಳಿಗೆ ಈ ದೃಶ್ಯವೈಭವ ಹಬ್ಬದಂತಿತ್ತು. ಎರಡನೇ ಹಂತದಲ್ಲಿ ಡ್ರ್ಯಾಗನ್ 3 ಬಾರಿ ಬಿರುಸಿನಿಂದ ಉಸಿರಿನ ಮೂಲಕ ನೀರನ್ನು ಹೊರಹಾಕಿತು. ಅಲ್ಲೊಂದು ದೊಡ್ಡ ಮಂಜಿನ ಮೋಡವೇ ಸೃಷ್ಟಿಯಾಯಿತು. ಮಂಜು ಮುಸುಕಿದ ಜಲಪಾತದ ರೀತಿ ನೀರು ಧರೆಗಿಳಿವ ದೃಶ್ಯವಂತು ನಯನ ಮನೋಹರ. ತುಂತುರು ಹನಿಯ ಸಿಂಚನ ನಮ್ಮನ್ನು ಸೋಕಿ ಪುಳಕಗೊಳಿಸಿ ಮೈ ಮನಸ್ಸನ್ನು ತಂಪಾಗಿಸಿತ್ತು. ಸೇತುವೆಯ ಮೇಲೇ ನಿಂತಿದ್ದರಿಂದ ನಮಗೆ ಡ್ರ್ಯಾಗನ್ ಉಸಿರಿನ ಬೆಂಕಿಯ ತಾಪ ಮತ್ತು ನೀರಿನ ತಂಪಿನ ಅದ್ಭುತ ಅನುಭವವಾಗಿತ್ತು. ರಂಜನೀಯ ಕ್ಷಣ ಅದು. 10-15 ನಿಮಿಷಗಳ ಶೋ ಚಿಕ್ಕದಾದರೂ ಶೋಭಾಯಮಾನವಾಗಿತ್ತು.

ಡ್ರ್ಯಾಗನ್ ಉಸಿರಾಡುವ ಬೆಂಕಿ ಮತ್ತು ನೀರು, ಶಕ್ತಿ ಮತ್ತು ಸಮೃದ್ಧಿಯ ಸೂಚಕವಾಗಿದೆ. ಈ ಪ್ರದರ್ಶನದ ಮೂಲಕ ಡ್ರ್ಯಾಗನ್ ನಗರಕ್ಕೆ ಅದೃಷ್ಟ ಮತ್ತು ಆಶೀರ್ವಾದವನ್ನು ತರುತ್ತದೆ ಮತ್ತು ದಾ ನಾಂಗ್ ನಗರವನ್ನು ರಕ್ಷಿಸುತ್ತದೆ ಎನ್ನುವುದು ಇಲ್ಲಿಯ ಜನರ ಬಲವಾದ ನಂಬಿಕೆ. ವಿಶ್ವದೆಲ್ಲೆಡೆ ವಿಭಿನ್ನ ವಿನ್ಯಾಸದ ಡ್ರ್ಯಾಗನ್ ಆಕೃತಿಗಳು ಸಾಮಾನ್ಯವಾದರೂ, ಬೆಂಕಿ ಮತ್ತು ನೀರನ್ನು ಉಸಿರಾಡುವ ಸಾಮರ್ಥ್ಯದ ಏಕೈಕ ಡ್ರ್ಯಾಗನ್‌ನನ್ನು ದಾ ನಾಂಗ್‌ನಲ್ಲಿ ಮಾತ್ರ ನೋಡಲು ಸಾಧ್ಯ. ಇಂತಹ ಅಭೂತಪೂರ್ವ ಪ್ರದರ್ಶನದ ಜೊತೆಗೆ ಡ್ರ್ಯಾಗನ್ ಸೇತುವೆಯ ಚೆಲುವನ್ನು ಆಸ್ವಾದಿಸಲು ದಾ ನಾಂಗ್ ಪ್ರವಾಸವನ್ನು ಆದಷ್ಟು ವಾರದ ಕೊನೆಗೆ ಆಯೋಜಿಸಿಕೊಳ್ಳುವುದು ಅವಶ್ಯ.
ಮಾಹಿತಿ ಪೆಟ್ಟಿಗೆ
ಡ್ರ್ಯಾಗನ್ ನಗರಕ್ಕೆ ಅದೃಷ್ಟ ಮತ್ತು ಆಶೀರ್ವಾದವನ್ನು ತರುತ್ತದೆ ಎಂಬ ನಂಬಿಕೆಯಿದೆ.
ಡ್ರ್ಯಾಗನ್ ಕಲಾಕೃತಿಯ ಕ್ರಿಯಾತ್ಮಕ ರಚನೆಯು ಇದನ್ನೊಂದು ಸ್ಮರಣೀಯ ತಾಣವನ್ನಾಗಿಸಿದೆ.
ಲೇಖಕರು: ಹವ್ಯಾಸಿ ಬರಹಗಾರರು