Friday, April 10, 2026
Friday, April 10, 2026

ಇಲ್ಲಿಗೆ ಭೇಟಿ ಕೊಟ್ಟವರು ಸತ್ತರೆ ಇಲ್ಲೇ ಸಾಯಬೇಕು ಎನ್ನುವುದೇಕೆ?

ಜೋಸ್ ಮಾರಿಯಾ ಫ್ರಾಂಕೋ ಗ್ವರ‍್ರೆರೊ 1985ರಲ್ಲಿ ತೀರಿಕೊಂಡರು. ನಂತರ ಅವರೇ ಸೃಷ್ಠಿಸಿದ ಸೊಬಗಿನ ಸಮಾಧಿ ಭೂಮಿಯಲ್ಲಿ ಅವರ ಮೃತ ದೇಹವನ್ನು ಮಣ್ಣು ಮಾಡಲಾಯಿತು. ಅವರ ಗೋರಿಯ ಮೇಲೆ ʻತುಲ್ಕಾನ್ ಸ್ಮಶಾನವು ಅದೆಷ್ಟು ಸುಂದರವಾಗಿದೆಯೆಂದರೆ ಪ್ರತಿಯೊಬ್ಬರಿಗೂ ಇಲ್ಲಿಯೇ ಸಾಯಬೇಕು ಎಂದು ಆಹ್ವಾನಿಸುತ್ತದೆʼ ಎಂಬ ಬರಹವನ್ನು ಕೆತ್ತಲಾಗಿದೆ.

  • ವಿದ್ಯಾ.ವಿ. ಹಾಲಭಾವಿ

ಮನುಷ್ಯ ಹುಟ್ಟಿದ ಮೇಲೆ ಸಾಯುವುದು ಖಂಡಿತ. ಅದನ್ನು ತಪ್ಪಿಸಲು ಯಾರಿಂದಲೂ ಆಗದು. ಆದರೆ ಸತ್ತರೆ ಇಲ್ಲಿಯೇ ಸಾಯೋಣ ಎಂದು ಅನಿಸುವ ಸ್ಮಶಾನದ ಬಗ್ಗೆ ನಿಮಗೆ ಗೊತ್ತೇ? ಅಂಥ ಮನೋಭಾವ ಮೂಡಿಸುವ ಮಸಣ, ಉತ್ತರ ಈಕ್ವೆಡಾರ್‌ನ ಕಾರ್ಚಿ ಪ್ರಾವಿನ್ಸ್‌ನ ರಾಜಧಾನಿಯಾದ ತುಲ್ಕಾನ್ ನಗರದಲ್ಲಿದೆ. ತುಲ್ಕಾನ್ ಪುರಸಭೆಯ ಈ ಸ್ಮಶಾನ ವೈವಿಧ್ಯಮಯ ಸಸ್ಯಾಲಂಕಾರದ ಉದ್ಯಾನಕ್ಕಾಗಿ ವಿಶ್ವಪ್ರಸಿದ್ಧವಾಗಿದೆ.

ತುಲ್ಕಾನ್ ನಗರವು ಸಮುದ್ರ ಮಟ್ಟದಿಂದ ಸುಮಾರು 2950 ಮೀಟರ್ ಎತ್ತರದಲ್ಲಿದೆ. ಸುಮಾರು 60,000 ಜನಸಂಖ್ಯೆ ಹೊಂದಿದ್ದು, ಕೊಲಂಬಿಯಾ ಮತ್ತು ಈಕ್ವೆಡಾರ್ನ ಮಧ್ಯದಲ್ಲಿದೆ. ಬಹುದೊಡ್ಡ ವ್ಯಾಪಾರ ವಹಿವಾಟಿನಿಂದ ಸದಾ ಗಿಜಿಗಿಜಿಗುಟ್ಟುವ ನಗರವಾದ ಕೊಲಂಬಿಯಾಕ್ಕೆ ಹತ್ತಿರವಿದೆ ಎನ್ನುವುದರ ಹೊರತು ತುಲ್ಕಾನ್‌ನಲ್ಲಿ ಹೇಳಿಕೊಳ್ಳುವಂಥ ವಿಶೇಷತೆ ಏನೇನೂ ಇಲ್ಲ. ಆದರೆ, ಬೇರೆ ಬೇರೆ ಭಾಗಗಳಿಂದ ಜನರು ಹೆಣ ಹೂಳುವ ಸ್ಥಳವನ್ನು ವೀಕ್ಷಿಸಲೆಂದೇ ಇಲ್ಲಿಗೆ ಬರುತ್ತಾರೆ!

ಇದನ್ನೂ ಓದಿ: ಕನಸಿನ ಚಿತ್ರಕ್ಕೆ ಬಣ್ಣ ಬಳಿದ ಯುರೋಪ್‌

ತುಲ್ಕಾನ್ ಸ್ಮಶಾನವು ಬೃಹತ್ ಗಾತ್ರದ ಹಸಿರು ಸೈಪ್ರೆಸ್ ಶಿಲ್ಪಗಳಿಂದ ತುಂಬಿದೆ. ಸುಂದರವಾದ ಬೃಂದಾವನ, ವೈವಿಧ್ಯಮಯ ಚಿತ್ರ ಕೆತ್ತನೆಗಳನ್ನು ಹೊಂದಿರುವ ಈ ಸ್ಮಶಾನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ವಿಸ್ತಾರವಾದ ಜಾಗದಲ್ಲಿ ಬೆಳೆಸಿರುವ ಸೈಪ್ರೆಸ್ ಪೊದೆಗಳ ಸಸ್ಯಾಲಂಕಾರ ಮನಸೂರೆಗೊಳಿಸುತ್ತದೆ.

ತುಲ್ಕಾನ್ ಪುರಸಭೆಯ ಸಮಾಧಿ ಭೂಮಿ ಸ್ಥಾಪನೆಯಾಗಿದ್ದು 1932ರಲ್ಲಿ. ಇದಕ್ಕೂ ಮುನ್ನ ಸ್ಯಾನ್ಟಿಯಾಗೊ ಬೆಟ್ಟದ ಮೇಲಿದ್ದ ಸ್ಮಶಾನವು 1923ರಲ್ಲಿ ಸಂಭವಿಸಿದ ಭೂಕಂಪದಿಂದ ಹಾನಿಗೊಳಗಾಗಿತ್ತು. ಸಾಂಕ್ರಾಮಿಕ ರೋಗಗಳು ಹರಡುವ ಕಾರಣದಿಂದಾಗಿ ಸ್ಮಶಾನ ಸ್ಥಳ ಜನವಸತಿ ಪ್ರದೇಶದಿಂದ ದೂರವಿರಲಿ ಕಾರಣಕ್ಕೆ ನಗರದ ಈಶಾನ್ಯ ದಿಕ್ಕಿನಲ್ಲಿ ಸುಮಾರು 3 ಎಕರೆ ವಿಸ್ತೀರ್ಣ ಜಾಗದಲ್ಲಿ ಇದನ್ನು ನಿರ್ಮಿಸಲಾಯಿತು. ಈ ಸ್ಮಶಾನ ಭೂಮಿಯ ಮತ್ತೊಂದು ಮುಖ್ಯ ವಿಶೇಷತೆಯೆಂದರೆ ಈ ಜಾಗದಲ್ಲಿ ಸುಣ್ಣದಕಲ್ಲು ಸೇರಿರುವಂಥ ಮಣ್ಣು ಸೈಪ್ರಸ್ ಬೆಳವಣಿಗೆಗೆ ಬಹಳ ಸೂಕ್ತವಾಗಿತ್ತು.

Untitled design - 2026-04-10T170628.585

ತುಲ್ಕಾನ್ ಮುನಿಸಿಪಾಲಿಟಿಗೆ ಒಳಪಟ್ಟಿರುವ ಪಾರ್ಕ್ಗಳ ಉಸ್ತುವಾರಿಯ ಮುಖ್ಯಸ್ಥರಾಗಿದ್ದ ʻಜೋಸ್ ಮಾರಿಯಾ ಫ್ರಾಂಕೋ ಗ್ವರ‍್ರೆರೊʼ, ಅಲ್ಲಿನ ನೆಲದ ಮಣ್ಣನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿಶ್ಚಯಿಸಿದರು. ಅದಕ್ಕಾಗಿ ಅಲ್ಲಿ ಸಾಲಾಗಿ ಸೈಪ್ರಸ್ ಮರಗಳನ್ನು ಬೆಳಸಿದರು. ಇದು ಈಗ ಸ್ಮಶಾನದ ಅರ್ಧದಷ್ಟು ಜಾಗವನ್ನು ಆವರಿಸಿಕೊಂಡಿದೆ. ಪ್ರಿಕೊಲಂಬಿಯನ್, ಆಗಸ್ಟಿನಿಯನ್ ಮತ್ತು ಅರೇಬಿಕ್ ಜನಸಮುದಾಯದೊಂದಿಗೆ ಒಂದು ಪ್ರಾಣಿಗೆ ಇರುವ ಸಂಬಂಧವನ್ನು ಸೂಚಿಸುವ ಚಿಹ್ನೆಗಳಿಂದ ಗ್ವರ‍್ರೆರೊ ಪ್ರೇರಣೆಗೊಂಡರು. ಯತಪ್ರತಿಯೊಂದು ಸೈಪ್ರಸ್ ಮರವನ್ನೂ ಕಲಾ ಪೂರ್ಣವಾಗಿ ಕತ್ತರಿಸಿ ವಿಸ್ತಾರವಾದ ಶಿಲ್ಪಗಳನ್ನಾಗಿ ರೂಪಿಸಲು ಪ್ರಾರಂಭಿಸಿದರು. ಅವರು ವಿಶ್ರಾಂತಿ ಸ್ಥಳವನ್ನು ಜೀವಂತ ಕಲಾಕೃತಿಯನ್ನಾಗಿ ಪರಿವರ್ತಿಸಿದರು. ಶಿಲ್ಪಕಲೆಯನ್ನು ತೋಟಗಾರಿಕೆಯ ಜತೆಗೆ ಸಂಯೋಜಿಸುವ ಈ ಟೋಪಿಯರಿ ಶಿಲ್ಪಗಳು ಇಂಕಾನ್ ಚಿಹ್ನೆಗಳು, ಪೌರಾಣಿಕ ಜೀವಿಗಳು, ದೇವತೆಗಳು ಮತ್ತು ಕಮಾನುಗಳು ಸೇರಿದಂತೆ ವಿವಿಧ ಜ್ಯಾಮಿತೀಯ ಆಕಾರಗಳಲ್ಲಿ ರೂಪುಗೊಂಡಿವೆ.

ಈಕ್ವೆಡಾರ್‌ನ ಸಾಂಸ್ಕೃತಿಕ ಪರಂಪರೆ ಸಂಸ್ಥೆಯು 1984ರಲ್ಲಿ ತುಲ್ಕಾನ್‌ನ ಸ್ಮಶಾನವನ್ನು ʻಕಲ್ಚರಲ್ ಹೆರಿಟೇಜ್ ಆಫ್ ದಿ ಸ್ಟೇಟ್ʼ ಎಂದು ತೀರ್ಮಾನಿಸಿದೆ. ಅಂದಿನಿಂದ ಗ್ವರ‍್ರೆರೊ ಪಾರ್ಕ್‌ನಲ್ಲಿ ರೂಪಿಸಿದ್ದ ಕಲಾತ್ಮಕ ಸಸ್ಯಾಲಂಕಾರ ಕೆಲಸಕ್ಕೆ ಹೆಚ್ಚಿನ ಮನ್ನಣೆ ದೊರೆಯಿತು. ಈಗ ಅಲ್ಲಿನ ಪ್ರವಾಸೋದ್ಯಮ ಇಲಾಖೆ ಈ ಜಾಗವನ್ನು ʻರಾಷ್ಟ್ರೀಯ ಆಸಕ್ತಿಯ ವನʼ ಎಂದು ಘೋಷಿಸಿದೆ.

ಜೋಸ್ ಮಾರಿಯಾ ಫ್ರಾಂಕೋ ಗ್ವರ‍್ರೆರೊ 1985ರಲ್ಲಿ ತೀರಿಕೊಂಡರು. ನಂತರ ಅವರೇ ಸೃಷ್ಠಿಸಿದ ಸೊಬಗಿನ ಸಮಾಧಿ ಭೂಮಿಯಲ್ಲಿ ಅವರ ಮೃತ ದೇಹವನ್ನು ಮಣ್ಣು ಮಾಡಲಾಯಿತು. ಅವರ ಗೋರಿಯ ಮೇಲೆ ʻತುಲ್ಕಾನ್ ಸ್ಮಶಾನವು ಅದೆಷ್ಟು ಸುಂದರವಾಗಿದೆಯೆಂದರೆ ಪ್ರತಿಯೊಬ್ಬರಿಗೂ ಇಲ್ಲಿಯೇ ಸಾಯಬೇಕು ಎಂದು ಆಹ್ವಾನಿಸುತ್ತದೆʼ ಎಂಬ ಬರಹವನ್ನು ಕೆತ್ತಲಾಗಿದೆ. ಈಗ ಗ್ವರ‍್ರೆರೊರ ಮಕ್ಕಳು ಮತ್ತು ಸ್ಥಳೀಯ ಸಿಬ್ಬಂದಿ ಸೇರಿ ಈ ಮನಮೋಹಕ ಕುರುಚಲು ಕಾಡು ಪೊದೆಯ ನಿರ್ವಹಣೆ ಮಾಡುತ್ತಿದ್ದಾರೆ.

2005 ರಲ್ಲಿ ಈ ಮಸಣ ಭೂಮಿಯನ್ನು ʻಜೋಸ್ ಮಾರಿಯಾ ಅಜೇಲ್ ಫ್ರಾಂಕೊ ಸ್ಮಶಾನʼ ಎಂದು ಮರು ನಾಮಕರಣ ಮಾಡಲಾಯಿತು.

ಒಟ್ಟಾರೆ ಈ ಸ್ಮಶಾನವು ತನ್ನಲ್ಲಿಗೆ ಭೇಟಿ ನೀಡುವವರಿಗೆ ಒಂದು ವಿಶಿಷ್ಟ ಅನುಭವ ನೀಡುತ್ತಿದೆ. ಜೋಸ್ ಫ್ರಾಂಕೊ ಅವರ ಸಸ್ಯಾಲಂಕರಣದ ಪರಂಪರೆ, ʻಒಬ್ಬರನ್ನು ಸಾಯಲು ಆಹ್ವಾನಿಸುವಷ್ಟು ಸುಂದರʼ ಸ್ಥಳವನ್ನು ರೂಪಿಸಬೇಕೆನ್ನುವ ಅವರ ಬಯಕೆಯನ್ನು ಸಂಪೂರ್ಣವಾಗಿ ಪೂರೈಸುತ್ತಿದೆ.

ದಾರಿ ಹೇಗೆ?

ಹತ್ತಿರದ ವಿಮಾನ ನಿಲ್ದಾಣ ತುಲ್ಕಾನ್‌ ನಗರವಾಗಿದ್ದು, ಕೊಲಂಬಿಯದ ವಿಮಾನ ನಿಲ್ದಾಣವೂ ಏಳೆಂಟು ಕಿಮೀ ದೂರದಲ್ಲಿದೆ. ಐಬಾರಾ ಹತ್ತಿರದ ರೈಲು ನಿಲ್ದಾಣ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...