ಹ್ಯಾಲೋವೀನ್ ಜನರೇ ದೆವ್ವಗಳು
ಅಕ್ಟೋಬರ್ ಪ್ರಾರಂಭದಿಂದಲೇ ಜನರು ಬಗೆಬಗೆಯ ಬೇತಾಳ, ಸ್ಮಶಾನದ ಮಾದರಿ ಮೊದಲಾದವುಗಳನ್ನು ತಮ್ಮ ಮನೆಗಳ ಮುಂದೆ ಜೋಡಿಸುತ್ತಾರೆ. ನಮ್ಮಲ್ಲಿ ದಸರಾ ಬೊಂಬೆ ಜೋಡಣೆಗಳ ಸ್ಪರ್ಧೆ ನಡೆಯುವಂತೆ ಇಲ್ಲಿ ಕೆಲವೆಡೆಗಳಲ್ಲಿ ಮನೆಯ ಮುಂದಿನ ಹ್ಯಾಲೋವೀನ್ ಅಲಂಕಾರದ ಸ್ಪರ್ಧೆಗಳೂ ನಡೆಯುತ್ತವೆ.
- ಜ್ಯೋತಿ ಪ್ರಸಾದ್
ಭಾರತದಲ್ಲಿ ನವರಾತ್ರಿಯ ಸಂಭ್ರಮ ಕಳೆದು ದೀಪಾವಳಿ ಆರಂಭವಾಗಿ, ಕಾರ್ತೀಕ ಮಾಸದ ದೀಪಗಳು ಮನೆ ಮನೆಯಲ್ಲೂ ಬೆಳಗುವ ಶುಭಮಾಸ. ಇದೇ ವೇಳೆಯಲ್ಲಿ ಪಾಶ್ಚಿಮಾತ್ಯರು ಭೂತ ಪ್ರೇತಗಳ ಹಬ್ಬಕ್ಕೆ ಅಣಿಯಾಗುತ್ತಾರೆ. ಇದು ಪಾಶ್ಚಿಮಾತ್ಯ ದೇಶಗಳ ಸಾಂಪ್ರದಾಯಿಕ ಹಬ್ಬ. ಕಾಲಕ್ರಮೇಣ ವಿಶ್ವದ ಹಲವಾರು ದೇಶಗಳಲ್ಲಿ ಜನಪ್ರಿಯವಾಗುತ್ತಿದೆ.
ಮೂಲತಃ ಈ ಹಬ್ಬವು ಪ್ರಾಚೀನ ‘ಸೆಲ್ಟಿಕ್’ ಸಂಪ್ರದಾಯದ ‘ಸ್ಯಾಮ್‌ಹೇನ್’ ಎಂಬ ಹಬ್ಬದಿಂದ ಹುಟ್ಟಿದೆ. 2,000 ವರ್ಷಗಳ ಹಿಂದೆ ಈಗಿನ ಐರ್ಲೆಂಡ್, ಯುಕೆ ಮತ್ತು ಉತ್ತರ ಫ್ರಾನ್ಸ್ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ʻಸೆಲ್ಟ್ʼ ಜನಾಂಗ, ನವೆಂಬರ್ 1ರಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಿದ್ದರು. ಈ ದಿನವು ಬೇಸಗೆಯ ಕೊನೆ, ಕತ್ತಲೆಯ ಚಳಿಗಾಲದ ಆರಂಭವನ್ನು ಸೂಚಿಸುತ್ತದೆ. ಅಕ್ಟೋಬರ್ 31ರ ರಾತ್ರಿ, ಸತ್ತವರ ಆತ್ಮಗಳು ಭೂಮಿಗೆ ಮರಳುತ್ತವೆ ಮತ್ತು ಅವರ ಭೂತಗಳು ಬೆಳೆಗಳಿಗೆ ಹಾನಿ ಮಾಡಬಹುದು ಅಥವಾ ಜನರಿಗೆ ತೊಂದರೆ ಕೊಡಬಹುದು ಎಂದು ಸೆಲ್ಟರು ನಂಬಿದ್ದರು. ಅದಕ್ಕಾಗಿ ದುಷ್ಟ ಶಕ್ತಿಗಳನ್ನು ಬೆದರಿಸಿ ಓಡಿಸಲು ಅಥವಾ ಸತ್ತವರ ಆತ್ಮಕ್ಕೆ ತಮ್ಮ ಗುರುತು ಸಿಗದಿರಲೆಂಬ ಕಾರಣಕ್ಕೆ ಜನರು ಭಯಾನಕ ವೇಷಭೂಷಣಗಳನ್ನು ಧರಿಸಿ, ಬೆಂಕಿ ಹಚ್ಚುತ್ತಿದ್ದರು. ಈ ರೀತಿ ವೇಷ ಧರಿಸುವುದರಿಂದ, ದುಷ್ಟಶಕ್ತಿಗಳು ತಮ್ಮನ್ನೂ ಮೃತ ಆತ್ಮಗಳೆಂದು ಭಾವಿಸಿ ತೊಂದರೆ ಕೊಡುವುದಿಲ್ಲ ಎಂಬ ನಂಬಿದ್ದರು. ಭೂತ, ಮಾಟಗಾತಿ, ದೆವ್ವ ಪಿಶಾಚಿ, ವ್ಯಾಂಪೈರ್, ಜೊಂಬಿ ಮತ್ತು ಮಮ್ಮಿಗಳಂಥ ಭಯಾನಕ ವೇಷಗಳು ಹ್ಯಾಲೋವೀನ್‌ನ ಜನಪ್ರಿಯ ವೇಷಗಳು.

ಆದರೆ, ಕ್ರಮೇಣ ಹ್ಯಾಲೋವೀನ್‌ನ ಮೂಲ ಆಚರಣೆಗಳು ಅರ್ಥ ಕಳೆದುಕೊಂಡಿವೆ. ಇತ್ತೀಚೆಗೆ ಜನರು ʻಹ್ಯಾಲೋವೀನ್ ಪಾರ್ಟಿʼಗಳನ್ನು ಆಯೋಜಿಸಿ ಭೂತ, ಮಾಟಗಾತಿ, ವ್ಯಾಂಪೈರ್ ಅಥವಾ ಪ್ರಸಿದ್ಧ ಚಲನಚಿತ್ರ ಪಾತ್ರಗಳು ಮತ್ತು ಕಾಲ್ಪನಿಕ ವ್ಯಕ್ತಿಗಳ ವೇಷಗಳನ್ನು ಧರಿಸಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಕ್ಟೋಬರ್ ಪ್ರಾರಂಭದಿಂದಲೇ ಜನರು ಬಗೆಬಗೆಯ ಬೇತಾಳ, ಸ್ಮಶಾನದ ಮಾದರಿ ಮೊದಲಾದವುಗಳನ್ನು ತಮ್ಮ ಮನೆಗಳ ಮುಂದೆ ಜೋಡಿಸುತ್ತಾರೆ. ನಮ್ಮಲ್ಲಿ ದಸರಾ ಬೊಂಬೆ ಜೋಡಣೆಗಳ ಸ್ಪರ್ಧೆ ನಡೆಯುವಂತೆ ಇಲ್ಲಿ ಕೆಲವೆಡೆಗಳಲ್ಲಿ ಮನೆಯ ಮುಂದಿನ ಹ್ಯಾಲೋವೀನ್ ಅಲಂಕಾರದ ಸ್ಪರ್ಧೆಗಳೂ ನಡೆಯುತ್ತವೆ.

ಹ್ಯಾಲೋವೀನ್ ಹಬ್ಬಗಳ ಅಲಂಕಾರದಲ್ಲಿ ಕಪ್ಪು ಬೆಕ್ಕುಗಳು, ಬಾವಲಿಗಳು ಜೇಡಗಳು ಮತ್ತು ಕಾಗೆಗಳಿಗೆ ಒಂದು ವಿಶೇಷ ಸ್ಥಾನ ಮತ್ತು ಮಹತ್ವ ಇದೆ. ಇವುಗಳ ಪ್ರತಿಕೃತಿಗಳನ್ನು ಸಾಮಾನ್ಯವಾಗಿ ಮನೆಯ ಸುತ್ತಮುತ್ತಲಿನ ಅಲಂಕಾರಗಳಲ್ಲಿ ಮತ್ತು ಕಥೆಗಳಲ್ಲಿ ಬಳಸಲಾಗುತ್ತದೆ. ಈ ಪ್ರಾಣಿಗಳು ಹ್ಯಾಲೋವೀನ್‌ನ ನಿಗೂಢ, ಭಯಾನಕ ಮತ್ತು ಮಾಂತ್ರಿಕ ಮೂಲವನ್ನು ಪ್ರತಿನಿಧಿಸುತ್ತವೆ.
ಕಪ್ಪು ಬೆಕ್ಕುಗಳು ದುಷ್ಟ ಶಕ್ತಿಯನ್ನು ಪ್ರತಿನಿಧಿಸುತ್ತವೆಂದೂ ರೂಪಾಂತರಗೊಂಡ ಮಾಟಗಾತಿಯರೆಂದೂ ಹಾಗೂ ಬಾವಲಿಗಳು ರಾತ್ರಿ, ಸಾವು ಮತ್ತು ರಕ್ತ ಪಿಶಾಚಿಗಳೊಂದಿಗೆ ಸಂಬಂಧ ಹೊಂದಿವೆಯೆಂದೂ, ಜೇಡಗಳು ಬಲೆಗಳನ್ನು ನೇಯುವ ಮಾಟಗಾತಿಯರು, ಮೋಸದ ಸಂಕೇತಗಳು ಮತ್ತು ಮಾಟಗಾತಿಯರ ಸಾಕುಪ್ರಾಣಿ ಎಂದೂ ಪರಿಗಣಿಸಲಾಗುತ್ತದೆ. ಹಾಗೆಯೇ ಕಾಗೆಗಳು ಸಾವು, ದುಃಖಗಳ ಸಂಕೇತಗಳೆಂದೂ ಮಾಟಗಾತಿಯರ ಸಂದೇಶ ವಾಹಕರೆಂದೂ ಪರಿಗಣಿಸುತ್ತಾರೆ. ಆದ್ದರಿಂದ ಹ್ಯಾಲೋವೀನ್ ಸಮಯದಲ್ಲಿ ಭಯಂಕರ ವಾತಾವರಣವನ್ನು ಮೂಡಿಸಲು ಮತ್ತು ಹಬ್ಬದ ರಾತ್ರಿ ಭಯಾನಕ ಅಂಶವನ್ನು ಪ್ರತಿನಿಧಿಸಲು ಈ ಪ್ರಾಣಿಗಳನ್ನು ಪ್ರಮುಖ ಅಲಂಕಾರವಾಗಿ ಬಳಸುತ್ತಾರೆ.

ಪ್ರಪಂಚದ ವಿವಿದೆಡೆ ನೋಡಬಹುದಾದ ಹ್ಯಾಲೋವೀನ್ ಆಚರಣೆಗಳಲ್ಲಿ ಮುಖ್ಯವಾದದ್ದು, ಭೂತಗಳನ್ನು ಓಡಿಸಲು ಕುಂಬಳಕಾಯಿಯಲ್ಲಿ ಭಯಾನಕ ಅಥವಾ ವಿನೋದಕರ ಮುಖಗಳ ಆಕಾರಗಳನ್ನು ಕೊರೆದು ಅದರೊಳಗೆ ದೀಪ ಇಡುವ ʻಜಾಕ್-ಒ-ಲ್ಯಾಂಟರ್ನ್ʼ ಸಂಪ್ರದಾಯ.
ಮತ್ತೊಂದು ಕುತೂಹಲಕಾರಿ ಪದ್ಧತಿಯೆಂದರೆ ʻಟ್ರಿಕ್-ಆರ್-ಟ್ರೀಟ್ʼ ಎನ್ನುವುದು. ಇದು ಹ್ಯಾಲೋವೀನ್ ಹಬ್ಬದಲ್ಲಿ ಮಕ್ಕಳ ಆಕರ್ಷಣೆಯಾಗಿದೆ.

ಮೂಲತಃ ಈ ಸಂಪ್ರದಾಯದಲ್ಲಿ, ಬಡ ಜನರು ವಿವಿಧ ಬಗೆಯ ವೇಷಭೂಷಣಗಳನ್ನು ಧರಿಸಿ ಮನೆ ಮನೆಗೆ ಹೋಗಿ ಆಹಾರ ಅಥವಾ ಹಣವನ್ನು ಕೇಳುತ್ತಾ, ಪ್ರತಿಯಾಗಿ ಈಗಾಗಲೇ ಸತ್ತಿರುವ ಅವರ ಸಂಬಂಧಿಕರಿಗಾಗಿ ಪ್ರಾರ್ಥಿಸುವುದಾಗಿ ಹೇಳುತ್ತಿದ್ದರು. ಇಂದು ಅದು ಬದಲಾಗಿದೆ. ಅ.31ರ ಸಂಜೆ ಸೂರ್ಯಾಸ್ತದ ನಂತರ ಮಕ್ಕಳು ತಮಾಷೆ ಅಥವಾ ಭಯಾನಕ ವೇಷಗಳನ್ನು ಧರಿಸಿ ಅಲಂಕೃತ ಮನೆಗಳ ಬಾಗಿಲಿಗೆ ಹೋಗಿ, ಮನೆ ಮಾಲೀಕರು ಬಾಗಿಲು ತೆರೆದಾಗ, ಜೋರಾಗಿ ʻಟ್ರಿಕ್-ಆರ್-ಟ್ರೀಟ್ʼ ಎಂದು ಕೂಗುತ್ತಾರೆ. ಪ್ರತಿಯಾಗಿ ಸಿಹಿತಿಂಡಿಗಳನ್ನು ಪಡೆದು ತಮ್ಮ ಚೀಲಗಳಲ್ಲಿ ಸಂಗ್ರಹಿಸುತ್ತಾರೆ. ಮಕ್ಕಳಿಗೆ ಇದನ್ನು ನೀಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ನೀಡದಿದ್ದರೆ, ಮಕ್ಕಳು ಮನೆಯವರಿಗೆ ಅಥವಾ ಮನೆಗೆ ಸಣ್ಣ ತುಂಟಾಟ ಮಾಡುತ್ತಾರೆ. ಉದಾಹರಣೆಗೆ, ಮನೆಯ ಸುತ್ತ ಟಾಯ್ಲೆಟ್ ಪೇಪರ್ ಸುತ್ತುವುದನ್ನು ಮಾಡಬಹುದು.
ಆಚರಣೆಯ ಎರಡು ಮೂಲಗಳು
ಕೆಲವು ಐರೋಪ್ಯ ರಾಷ್ಟ್ರಗಳಲ್ಲಿ ನವೆಂಬರ್ 2ರಂದು ʻಆಲ್ ಸೋಲ್ಸ್ ಡೇʼ ಎಂದು ಆಚರಿಸುತ್ತಿದ್ದರು. ಅಂದು ಬಡವರು ಮನೆ ಮನೆಗೆ ಹೋಗಿ ʻಸೋಲ್ ಕೇಕ್ʼ ಎಂದು ಕರೆಯಲಾಗುತ್ತಿದ್ದ ಬ್ರೆಡ್ ತುಂಡುಗಳನ್ನು ಕೇಳಿ, ಇದಕ್ಕೆ ಪ್ರತಿಯಾಗಿ, ಕೇಕ್ ನೀಡಿದ ಕುಟುಂಬದ ಸತ್ತ ಸಂಬಂಧಿಕರಿಗಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಭರವಸೆ ನೀಡುತ್ತಿದ್ದರು.
ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‌ಗಳಲ್ಲಿ, ಯುವಕರು ಮತ್ತು ಮಕ್ಕಳು ವೇಷಭೂಷಣ ಧರಿಸಿ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅವರು ಸಿಹಿತಿಂಡಿ ಪಡೆಯಲು ಕವನ ವಾಚನ ಮಾಡುವುದು, ಹಾಡು ಹಾಡುವುದು ಅಥವಾ ಜೋಕ್ ಹೇಳುವಂಥ ಸಣ್ಣ ಪ್ರದರ್ಶನ ನೀಡಬೇಕಿತ್ತು. ಕಾಲಾನಂತರದಲ್ಲಿ, ಐರಿಶ್ ಮತ್ತು ಸ್ಕಾಟಿಷ್ ವಲಸಿಗರು ಈ ಸಂಪ್ರದಾಯಗಳನ್ನು ಅಮೆರಿಕಕ್ಕೆ ತಂದರು, ಅಲ್ಲಿ ಇವುಗಳು ಬೆರೆತು ಇಂದು ಟ್ರಿಕ್-ಆರ್-ಟ್ರೀಟಿಂಗ್ ಸಂಪ್ರದಾಯವಾಗಿ ಮಾರ್ಪಟ್ಟಿದೆ.
ಹ್ಯಾಲೋವೀನ್ ಸಮಯದಲ್ಲಿ ವಿದೇಶದಲ್ಲಿ ಪ್ರಯಾಣಿಸುತ್ತಿದ್ದರೆ, ಸ್ಥಳೀಯ ಹ್ಯಾಲೋವೀನ್ ಪಾರ್ಟಿಗಳನ್ನು ಅಥವಾ ಕಾಸ್ಟ್ಯೂಮ್ ಮೆರವಣಿಗೆಗಳನ್ನು ನೋಡಬಹುದು. ಹ್ಯಾಲೋವೀನ್ ಅಲಂಕಾರಗಳಿಗಾಗಿ ಪ್ರಸಿದ್ಧವಾದ ನೆರೆಹೊರೆಗಳಲ್ಲಿ ಸಂಜೆ ವಾಕಿಂಗ್ ಹೋಗುತ್ತಾ ವೈವಿಧ್ಯ ಅಲಂಕಾರಗಳನ್ನು ನೋಡಬಹುದು. ಆ ಸಮಯದಲ್ಲಿ ಹೇರಳವಾಗಿ ಮಾರಾಟವಾಗುವ ದೈತ್ಯಾಕಾರದ ಕುಂಬಳಕಾಯಿಗಳನ್ನು ಖರೀದಿಸಿ ʻಜಾಕ್-ಒ-ಲ್ಯಾಂಟರ್ನ್ʼನಲ್ಲಿ ಪಾಲ್ಗೊಳ್ಳಬಹುದು.
ಹ್ಯಾಲೋವೀನ್ ಎಂದರೆ ಕತ್ತಲು ಮತ್ತು ಭಯಾನಕ ವಾತಾವರಣದ ಹಬ್ಬವಾದರೂ ಇತ್ತೀಚಿನ ದಿನಗಳಲ್ಲಿ ಮೋಜು ಮತ್ತು ಮನರಂಜನೆಗೆ ಪ್ರಾಮುಖ್ಯತೆ ನೀಡುತ್ತಿದೆ.