Wednesday, April 15, 2026
Wednesday, April 15, 2026

ಎಲ್ಲಾದರೂ ಹೋಗಿ ಆದ್ರೆ ಬ್ಯಾಂಕ್‌ಗೆ ಹೇಳಿ ಹೋಗಿ

ಎಲ್ಲಾದರೂ ಪ್ರವಾಸಕ್ಕೆ ಹೋಗುವಾಗ ಸಾಮಾನ್ಯವಾಗಿ ಮನೆಯಲ್ಲಿ ಅಪ್ಪ, ಅಮ್ಮ, ಗಂಡ ಅಥವಾ ಹೆಂಡತಿ, ಫ್ರೆಂಡ್ಸ್‌ ಹೀಗೆ ಪರಿಚಯದವರಿಗೆ ಹೇಳುವ ರೂಢಿ ಇರುತ್ತದೆ. ಆದರೆ, ವಿದೇಶಕ್ಕೆ ಪ್ರವಾಸ ಹೋಗುವಾಗ ಬ್ಯಾಂಕ್‌ಗೆ ಕೂಡ ಹೇಳಿ ಹೋಗುವುದು ಉತ್ತಮ ಗೊತ್ತಾ?

ಗೆಳೆಯ ರಾಹುಲ್‌ ಮೊದಲ ಬಾರಿಗೆ ಫ್ರಾನ್ಸ್ ಹೋಗಿದ್ದ. ಅಲ್ಲಿ ಹೋದಾಗ ಅವನು ರಾತ್ರಿ ಒಂದು ಹೊಟೇಲ್‌ ಅಲ್ಲಿ ಊಟ ಮಾಡಿದ ಬಳಿಕ ಪೇಮೆಂಟ್‌ ಮಾಡುವಾಗ ಕ್ರೆಡಿಟ್‌ ಕಾರ್ಡ್‌ ಕೊಟ್ಟ. ಆದರೆ, ಎಷ್ಟೇ ಪ್ರಯತ್ನಿಸಿದರೂ ಆಗುತ್ತಿರಲಿಲ್ಲ. ಅವನ ಕಾರ್ಡ್‌ ಅದಕ್ಕಿಂತ ಮೊದಲು ಯಾವತ್ತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆ ಆಗದಿರುವ ಕಾರಣ ಬ್ಯಾಂಕ್‌ ಪೇಮೆಂಟ್‌ ಮಾಡಲು ಅನುಮತಿ ನೀಡುತ್ತಿರಲಿಲ್ಲ. ಬ್ಯಾಂಕ್‌ಗೆ ಅದು ಅನುಮಾನಸ್ಪದವಾಗಿ ಕಂಡಿದೆ. ಕೊನೆಗೆ ರಾಹುಲ್‌, ಕಸ್ಟಮರ್‌ ಕೇರ್‌ ಸಂಪರ್ಕಿಸಿ ಬ್ಯಾಂಕ್‌ ಅವರ ಜತೆಗೆ ಮಾತನಾಡಿ ಕಾರ್ಡ್‌ ಅನ್‌ಬ್ಲಾಕ್‌ ಮಾಡಿಸುವಷ್ಟರಲ್ಲಿ ಸುಸ್ತಾಗಿದ್ದ.

ಅದಕ್ಕಾಗಿಯೇ ವಿದೇಶ ಪ್ರಯಾಣ ಮಾಡುವವರಾಗಿದ್ದರೆ, ಅದರಲ್ಲೂ ಮೊದಲ ಬಾರಿ ಹೋಗುವವರಾದರೆ ಬ್ಯಾಂಕ್‌ಗೆ ಒಂದು ಮಾತು ತಿಳಿಸಿ ಕಾರ್ಡ್‌ ಸರಿಯಾಗಿ ಕೆಲಸ ಮಾಡುವಂತೆ ಮಾಡಿಸಿಕೊಳ್ಳುವುದು ಉತ್ತಮ. ಬ್ಯಾಂಕ್‌ಗೆ ತಿಳಿಸುವುದು ಸಣ್ಣ ವಿಷಯದಂತೆ ಕಾಣಬಹುದು. ಒಂದು ವೇಳೆ ಅದನ್ನು ಮರೆತರೆ ದೊಡ್ಡ ಅನಾನುಕೂಲಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ನೀವು ಕೋಟ್ಯಧಿಪತಿಗಳಾಗಬೇಕಾ? ಈ ದೇಶಕ್ಕೆ ಹೋಗಿಬನ್ನಿ!

ಈ ಕಾಲದಲ್ಲಂತೂ ಆನ್‌ಲೈನ್‌ ಫ್ರಾಡ್‌ಗಳು ಹೆಚ್ಚಾಗಿರುವುದರಿಂದ ಎಲ್ಲ ಬ್ಯಾಂಕ್‌ಗಳು ಸುರಕ್ಷತೆಯ ದೃಷ್ಟಿಯಿಂದ ಅಟೊಮೇಟೆಡ್‌ ಫ್ರಾಡ್‌ ಡಿಟೆಕ್ಟಿವ್‌ ಸಿಸ್ಟಮ್‌ ಮೇಲೆ ಅವಲಂಬಿತವಾಗಿರುತ್ತವೆ. ಈ ವ್ಯವಸ್ಥೆಗಳು ಕಾರ್ಡ್‌ ಬಳಕೆಯಾಗುವ ಸ್ಥಳ, ಸಮಯ ಎಲ್ಲವನ್ನೂ ಟ್ರ್ಯಾಕ್‌ ಮಾಡುತ್ತಿರತ್ತವೆ. ಇದ್ದಕ್ಕಿದ್ದಂತೆ ಅದು ಬೇರೆ ದೇಶದಲ್ಲಿ ಬಳಕೆಯಾದಾಗ ಎಚ್ಚರಿಸುತ್ತದೆ. ಕಾರ್ಡ್‌ಅನ್ನು ತಾತ್ಕಾಲಿಕವಾಗಿ ಬ್ಲಾಕ್‌ ಕೂಡ ಮಾಡಲಾಗುತ್ತದೆ. ವಿಸಾ ಹಾಗೂ ಮಾಸ್ಟರ್‌ಕಾರ್ಡ್‌ನಂಥ ಪ್ರಮುಖ ಕಾರ್ಡ್‌ಗಳು ಈ ವ್ಯವಸ್ಥೆಯನ್ನು ಅನುಸರಿಸುತ್ತವೆ.

New Project (8)

ಏನಾಗಬಹುದು ಹೀಗಾದರೆ?

ಒಂದು ವೇಳೆ ಬ್ಯಾಂಕ್‌ಗೆ ತಿಳಿಸುವುದನ್ನು ಮರೆತು ಹೋದರೆ ದೀರ್ಘ ಪ್ರಯಾಣದ ನಂತರ ವಿದೇಶಕ್ಕೆ ಹೋಗಿ, ಅಲ್ಲಿ ಟ್ಯಾಕ್ಸಿ, ಹೊಟೇಲ್‌ಗೆ ಪೇಮೆಂಟ್‌ ಮಾಡಲು ಪ್ರಯತ್ನಿಸಿದಾಗ ನಿಮ್ಮ ಟ್ರಾನ್ಸಾಕ್ಷನ್‌ ತಿರಸ್ಕೃತಗೊಳ್ಳಬಹುದು. ಈ ಪರಿಸ್ಥಿತಿ ಶೀಘ್ರದಲ್ಲೇ ಒತ್ತಡ ತರಬಹುದು ಹಾಗೂ ಮುಜುಗರಕ್ಕೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಪದೇ ಪದೆ ವಿಫಲವಾದ ಪ್ರಯತ್ನಗಳು ಇನ್ನಷ್ಟು ಸಂಶಯಕ್ಕೆ ಕಾರಣವಾಗಬಹುದು. ಇದರಿಂದಾಗಿ ಕಾರ್ಡ್ ಮೇಲಿನ ನಿರ್ಬಂಧವು ಮತ್ತಷ್ಟು ದೀರ್ಘವಾಗಬಹುದು.

ಅನೇಕ ಪ್ರಯಾಣಿಕರು ಜಾಸ್ತಿ ನಗದನ್ನು ತೆಗೆದುಕೊಂಡು ಹೋಗುವದನ್ನು ತಪ್ಪಿಸುತ್ತಾರೆ. ಅನುಕೂಲತೆ ಮತ್ತು ಸುರಕ್ಷತೆಗಾಗಿ ತಮ್ಮ ಕಾರ್ಡ್‌ಗಳನ್ನೇ ಅವಲಂಬಿಸಿರುತ್ತಾರೆ. ಕಾರ್ಡ್ ಬ್ಲಾಕ್‌ ಆದರೆ ಹಾಗೂ ಪರ್ಯಾಯ ಪಾವತಿ ವಿಧಾನವಿಲ್ಲದಿದ್ದರೆ, ಆಹಾರ, ವಸತಿ ಅಥವಾ ಸಾರಿಗೆಯಂಥ ಅಗತ್ಯ ವಸ್ತುಗಳಿಗೆ ಹಣ ನೀಡಲು ಪರದಾಡಬೇಕಾಗಬಹುದು. ಅಷ್ಟೇ ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸುವುದು ಯಾವಾಗಲೂ ಸುಲಭವಲ್ಲ. ವಿದೇಶದಿಂದ ಬ್ಯಾಂಕ್‌ ಅನ್ನು ಸಂಪರ್ಕಿಸುವುದು ಅಂತಾರಾಷ್ಟ್ರೀಯ ಕರೆ ದರಗಳು ಅಥವಾ ಸಮಯದ ವ್ಯತ್ಯಾಸದಿಂದಾಗಿ ಕಸ್ಟಮರ್‌ ಕೇರ್‌ ಸಂಪರ್ಕಿಸುವಲ್ಲಿ ತೊಂದರೆಗಳನ್ನು ಎದುರಿಸಬಹುದು.

New Project (7)

ಇಂಥ ಪರಿಸ್ಥಿತಿ ಎದುರಾದಾಗ ಇದು ಕೇವಲ ಆರ್ಥಿಕ ಸಮಸ್ಯೆಗೆ ಕಾರಣವಾಗುವುದಿಲ್ಲ, ಇಡೀ ಪ್ರಯಾಣದ ಯೋಜನೆಗಳನ್ನು ಅಸ್ತವ್ಯಸ್ತಗೊಳಿಸಬಹುದು. ಬುಕಿಂಗ್‌ಗಳನ್ನು ಕಳೆದುಕೊಳ್ಳಬಹುದು, ಪ್ರಯಾಣದ ವೇಳಾಪಟ್ಟಿ ವಿಳಂಬವಾಗಬಹುದು ಅಥವಾ ಹಣವನ್ನು ಪಡೆಯುವ ಬಗ್ಗೆ ನಿರಂತರ ಆತಂಕ ಕಾಡಬಹುದು. ಪ್ರವಾಸವನ್ನು ಆನಂದಿಸುವ ಬದಲು, ತಾಂತ್ರಿಕ ಮತ್ತು ಹಣಕಾಸಿನ ಸಮಸ್ಯೆಗಳನ್ನು ನಿಭಾಯಿಸುವುದರಲ್ಲೇ ನೀವು ಕಾಲ ಕಳೆಯಬೇಕಾಗಬಹುದು, ಇದು ಸಮಯ ವ್ಯರ್ಥ ಮತ್ತು ಹತಾಶೆಗೆ ಕಾರಣವಾಗುತ್ತದೆ.

ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪರಿಹಾರಗಳು

  • ಮಾಹಿತಿ ನೀಡಿ: ಪ್ರಯಾಣಿಸುವ ಮೊದಲು, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಪೂರೈಕೆದಾರರಿಗೆ ಪ್ರವಾಸದ ಬಗ್ಗೆ ಮಾಹಿತಿ ನೀಡುವುದು ಉತ್ತಮ. ಹೋಗುವ ಜಾಗ, ಪ್ರಯಾಣದ ದಿನಾಂಕಗಳು ಮತ್ತು ಭೇಟಿ ನೀಡಲು ಯೋಜಿಸಿರುವ ದೇಶಗಳ ವಿವರಗಳನ್ನು ಒದಗಿಸಿದರೆ ಒಳ್ಳೆಯದು.
  • ಸುಲಭ ವಿಧಾನಗಳು: ಗ್ರಾಹಕ ಸೇವೆಗೆ ಕರೆ ಮಾಡಬಹುದು. ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಸಂದೇಶ ಕಳುಹಿಸಬಹುದು ಅಥವಾ ಆನ್‌ಲೈನ್‌ನಲ್ಲಿ 'ಟ್ರಾವೆಲ್ ನೋಟಿಸ್' ಸೆಟ್ ಮಾಡಬಹುದು.
  • ಪರ್ಯಾಯ ಆಯ್ಕೆಗಳು: ಪ್ರಾಥಮಿಕ ಕಾರ್ಡ್‌ನಲ್ಲಿ ಸಮಸ್ಯೆ ಉಂಟಾದಲ್ಲಿ ಬ್ಯಾಕಪ್ ಕಾರ್ಡ್ ಅಥವಾ ಸ್ವಲ್ಪ ಸ್ಥಳೀಯ ನಗದು ಹಣವನ್ನು ಕೊಂಡೊಯ್ಯುವುದು ಜಾಣತನ.
  • ಅಂತಾರಾಷ್ಟ್ರೀಯ ಬಳಕೆಯನ್ನು ಸಕ್ರಿಯಗೊಳಿಸಿ: ಹೊರಡುವ ಮುನ್ನ ಕಾರ್ಡ್‌ನಲ್ಲಿ ಅಂತಾರಾಷ್ಟ್ರೀಯ ವಹಿವಾಟುಗಳು ಸಕ್ರಿಯವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಹಾಗೆಯೇ, ಯಾವುದಾದರೂ ಖರ್ಚಿನ ಮಿತಿಗಳಿವೆಯೇ ಎಂದು ಪರಿಶೀಲಿಸಬೆಕು.

ಬ್ಯಾಂಕ್‌ಗಳ ಈ ಸುರಕ್ಷತಾ ವ್ಯವಸ್ಥೆಗಳು ಹಣಕಾಸನ್ನು ರಕ್ಷಿಸಲು ಅತ್ಯಗತ್ಯವಾಗಿದ್ದರೂ, ಪ್ರಯಾಣದ ಯೋಜನೆಗಳ ಬಗ್ಗೆ ಅವರಿಗೆ ತಿಳಿಸಲು ವಿಫಲವಾದರೆ ಅವು ಸವಾಲುಗಳನ್ನು ಸೃಷ್ಟಿಸಬಹುದು. ಪ್ರಯಾಣಕ್ಕೆ ಹೋಗುವ ಮುನ್ನ ಎಲ್ಲ ನೆಂಟರು ಗೆಳೆಯರಿಗೆ ಹೇಳುವ ಜತೆಗೆ ಬ್ಯಾಂಕ್‌ಗೆ ತಿಳಿಸಲು ಕೆಲವು ನಿಮಿಷಗಳನ್ನು ಮೀಸಲಿಟ್ಟರೆ ಕೆಲವು ಸಮಸ್ಯೆಗಳಿಂದ ಬಚಾವಾಗಬಹುದು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...