ಬಲಿ ಜಾತ್ರಾ - ದೂರ ತೀರದ ಯಾನ
ಪ್ರತಿ ವರ್ಷದ ಕಾರ್ತೀಕ ಪೌರ್ಣಿಮಿಯಂದು ಕಳಿಂಗದ ವ್ಯಾಪಾರಿಗಳು ‘ಬಲಿ’ (ಈಗಿನ ಇಂಡೋನೇಷಿಯಾದ ಬಾಲಿ ದ್ವೀಪ) ದಿಕ್ಕಿನ ಕಡೆಗೆ ಹಡಗು ಪ್ರಯಾಣ ಪ್ರಾರಂಭಿಸುತ್ತಿದ್ದರು. ಮುಂಗಾರು ಮತ್ತು ಹಿಂಗಾರು ಮುಗಿದು ಪ್ರಶಾಂತವಾದ ಹೊತ್ತು ಅದಾಗಿರುತ್ತಿತ್ತು. ಸಮುದ್ರ ಹೆಚ್ಚಿನ ಅಬ್ಬರ ಹೊಂದಿರದೆ ಪ್ರಶಾಂತವಾಗಿರುವ ಸಮಯ. ಆದ್ದರಿಂದ ಅವರ ಪ್ರಯಾಣ ಸುರಕ್ಷಿತವಾಗಿರುತ್ತದೆ ಎಂಬುದು ನಂಬಿಕೆಯಾಗಿತ್ತು. ಆದರೂ ಭಗವಂತನ ಶ್ರೀರಕ್ಷೆ ಬೇಕಲ್ಲವೆ?
- ವಸುಧೇಂದ್ರ
ವ್ಯಾಪಾರಿಗಳು ಯಾವತ್ತೂ ಒಂದೆಡೆ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಹೊಸ ಹೊಸ ಜಾಗಗಳಿಗೆ ಹೋದಂತೆಲ್ಲಾ ಹೊಸ ವ್ಯಾಪಾರದ ನಂಟುಗಳು ಏರ್ಪಡುತ್ತವೆ, ಹೊಸ ಸರಕುಗಳು ಸಿಗುತ್ತವೆ, ಹೊಸ ಗ್ರಾಹಕರು ದಕ್ಕುತ್ತಾರೆ. ಪಂಡಿತನೊಬ್ಬ ಒಂದೆಡೆ ಕುಳಿತು ತನ್ನ ಗುರಿ ಸಾಧಿಸಬಹುದೇ ಹೊರತು ವ್ಯಾಪಾರಿಯಲ್ಲ. ಅವನ ಬದುಕು ಯಾವತ್ತೂ ಬಹೂದಕ. ಎಲ್ಲಾ ಕಾಲದಲ್ಲೂ ವ್ಯಾಪಾರಿಗಳೇ ದೇಶ ಪರ್ಯಟಣೆ ಮಾಡಿದ, ಹೊಸ ದಾರಿಗಳನ್ನು ಹುಡುಕಿದ ಸಾಹಸಿಗಳು. ಹೊಸ ಜಗತ್ತಿನ ಅನ್ವೇಷಣೆಯಲ್ಲಿ ತಮ್ಮ ಜೀವವನ್ನು ಬಲಿ ಕೊಟ್ಟ ಎಷ್ಟೋ ವ್ಯಾಪಾರಿಗಳ ಕತೆಗಳನ್ನು ಇತಿಹಾಸದಲ್ಲಿ ನಾವು ಕಾಣಬಹುದು. ಜಗತ್ತಿನ ಎಲ್ಲಾ ಗ್ರಾಹಕರನ್ನೂ ಪ್ರೀತಿಯಿಂದಲೇ ಕಾಣಬೇಕಾದ ಅವಶ್ಯಕತೆ ವ್ಯಾಪಾರಿಯೊಬ್ಬನಿಗೆ ಇರುತ್ತದೆಯಾದ್ದರಿಂದ, ಅವನು ತನ್ನ ನಾಲಿಗೆಗೆ ಯಾವತ್ತೂ ಜೇನು ಸವರಿಕೊಂಡಿರಬೇಕಾಗುತ್ತದೆ. ಹಲವು ಭಾಷೆ, ಹಲವು ಸಂಸ್ಕೃತಿಗಳನ್ನು ಕಲಿಯುವುದು ವ್ಯಾಪಾರದ ಅಭಿವೃದ್ಧಿಗೆ ಕಡ್ಡಾಯವಾದ್ದರಿಂದ ಅವನಲ್ಲಿ ಸಹಿಷ್ಣುತೆ ಹೆಚ್ಚೇ ಇರಬೇಕಾಗುತ್ತದೆ. ಯಾರನ್ನೂ ದ್ವೇಷಿಸದೆ, ಯಾರ ಕೋಪಕ್ಕೂ ಗುರಿಯಾಗದೆ ತನ್ನ ವ್ಯಾಪಾರವನ್ನು ಬೆಣ್ಣೆಯಿಂದ ಕೂದಲು ತೆಗೆದಂತೆ ನಿರ್ವಹಿಸಬೇಕಾದ್ದು ಅವನ ಜವಾಬ್ದಾರಿ. ಅಪರಿಚಿತ ಜನರ ಮಧ್ಯೆ ಬದುಕಬೇಕಾದ್ದರಿಂದ ಯಾವತ್ತೂ ತನ್ನ ಸುರಕ್ಷತೆಯ ಬಗ್ಗೆ ಅವನಿಗೆ ಹೆದರಿಕೆ ಇದ್ದೇ ಇರುತ್ತದೆ.
ಇದನ್ನೂ ಓದಿ: ಎಂದಿಗೂ ತೊಡಕಾಗದ ಭಾಷೆ, ಯಾವತ್ತಿಗೂ ತೊಡಕಾಗುವ ಜೀವನಶೈಲಿ !
ದೂರದೂರಕ್ಕೂ ವ್ಯಾಪಾರ
ಕಳಿಂಗ ದೇಶದ (ಒರಿಸ್ಸಾ, ಉತ್ಕಲ ದೇಶ) ವ್ಯಾಪಾರಿಗಳು ದೂರ ದೇಶದ ಜನರೊಡನೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಸಮುದ್ರವ್ಯಾಪಾರ ಹೊಂದಿರುವುದಕ್ಕೆ ಸಾಕಷ್ಟು ಪುರಾವೆಗಳು ದಕ್ಕುತ್ತವೆ. ದೂರದ ಬಾಲಿ, ಇಂಡೋನೇಷಿಯಾ, ಮಲೇಷಿಯಾ, ಶ್ರೀಲಂಕಾ - ಎಲ್ಲೆಡೆಗೂ ಅವರು ವ್ಯಾಪಾರಕ್ಕಾಗಿ ಹೋಗಿದ್ದಾರೆ. ಈಗಲೂ ಶತಮಾನಗಳಷ್ಟು ಹಳೆಯ ಚೀನಾ ನಾಣ್ಯಗಳು, ವೆನಿಸ್ ನಾಣ್ಯಗಳು ಕಳಿಂಗದ ಎಲ್ಲೆಡೆ ಉತ್ಖನನದಲ್ಲಿ ದಕ್ಕಿವೆ. ಸಾಹಿತ್ಯದಲ್ಲಿಯೂ ಇದನ್ನು ಸ್ಪಷ್ಟವಾಗಿ ಕಾಣಬಹುದು. ಏಳನೆಯ ಶತಮಾನದಲ್ಲಿ ಭಾರತಕ್ಕೆ ಬಂದ ಹ್ಯುಯೆನ್‌ತ್ಸಾಂಗ್ ಈ ಭಾಗದೆಲ್ಲೆಡೆ ಅಡ್ಡಾಡಿ ಅಲ್ಲಿಯ ಸಮುದ್ರ ವ್ಯಾಪಾರದ ಕುರಿತು ತನ್ನ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾನೆ. (ಈ ಕೃತಿಯನ್ನು ಅವನ ಶಿಷ್ಯ ಬರೆದಿದ್ದಾನೆ) ಎಲ್ಲಕ್ಕೂ ಸುಂದರವಾದ ಪುರಾವೆಯೊಂದು ಕೋನಾರ್ಕದ ಸೂರ್ಯದೇವಸ್ಥಾನದ ಭಿತ್ತಿಯ ಮೇಲಿದೆ. ಇಲ್ಲಿ ರಾಜನಿಗೆ ಒಂದು ಜಿರಾಫೆಯನ್ನು ಉಡುಗೊರೆಯಾಗಿ ಕೊಡುತ್ತಿರುವ ಸೊಗಸಾದ ಕೆತ್ತನೆಯಿದೆ. ಆನೆಯಂಥ ದೊಡ್ಡ ಪ್ರಾಣಿಯ ಮೇಲೆ ಕುಳಿತ ಈ ರಾಜ ಅಪರಿಚಿತ ಜಿರಾಫೆಯನ್ನು ಕಂಡು ಬೆರಗಾಗಿದ್ದಾನೆ. ಪೂರ್ವ ಆಫ್ರಿಕಾದ ರಾಜರು (ಮುಖ್ಯವಾಗಿ ಕೆನ್ಯಾ) ವ್ಯಾಪಾರ ಬೆಳೆಸಲು ಭಾರತ ಮತ್ತು ಚೀನಾ ದೇಶದ ರಾಜರುಗಳಿಗೆ ಜಿರಾಫೆಯನ್ನು ಉಡುಗೊರೆಯಾಗಿ ಕಳುಹಿಸುತ್ತಿದ್ದರು. ಇವುಗಳ ವ್ಯಾಖ್ಯಾನ ಸಾಹಿತ್ಯ ಮತ್ತು ಶಿಲ್ಪಕಲೆಯಲ್ಲೆಲ್ಲಾ ಕಂಡು ಬರುತ್ತದೆ.

ಕ್ಷೇಮಕ್ಕಾಗಿ ಪ್ರಾರ್ಥನೆ
ಪ್ರತಿ ವರ್ಷದ ಕಾರ್ತೀಕ ಪೌರ್ಣಿಮಿಯಂದು ಕಳಿಂಗದ ವ್ಯಾಪಾರಿಗಳು ‘ಬಲಿ’ (ಈಗಿನ ಇಂಡೋನೇಷಿಯಾದ ಬಾಲಿ ದ್ವೀಪ) ದಿಕ್ಕಿನ ಕಡೆಗೆ ಹಡಗು ಪ್ರಯಾಣ ಪ್ರಾರಂಭಿಸುತ್ತಿದ್ದರು. ಮುಂಗಾರು ಮತ್ತು ಹಿಂಗಾರು ಮುಗಿದು ಪ್ರಶಾಂತವಾದ ಹೊತ್ತು ಅದಾಗಿರುತ್ತಿತ್ತು. ಸಮುದ್ರ ಹೆಚ್ಚಿನ ಅಬ್ಬರ ಹೊಂದಿರದೆ ಪ್ರಶಾಂತವಾಗಿರುವ ಸಮಯ. ಆದ್ದರಿಂದ ಅವರ ಪ್ರಯಾಣ ಸುರಕ್ಷಿತವಾಗಿರುತ್ತದೆ ಎಂಬುದು ನಂಬಿಕೆಯಾಗಿತ್ತು. ಆದರೂ ಭಗವಂತನ ಶ್ರೀರಕ್ಷೆ ಬೇಕಲ್ಲವೆ? ಆದ್ದರಿಂದ ಅಂದು ಪುರಿಯ ಜಗನ್ನಾಥನಿಗೆ ಬೇಡಿಕೊಂಡು ಅವನ ಕೃಪೆಯನ್ನು ಪಡೆಯುವ ಸಂಪ್ರದಾಯವಿತ್ತು. ವ್ಯಾಪಾರಿಗಳ ಕುಟುಂಬದವರೆಲ್ಲರೂ ಹಡಗಿನ ಸನಿಹ ಬಂದು ಕಳಕಳಿಯಿಂದ ತಮ್ಮವರನ್ನು ಬೀಳ್ಕೊಟ್ಟು ‘ಕ್ಷೇಮವಾಗಿ ಹೋಗಿ ಲಾಭವಾಗಿ ಬನ್ನಿ’ ಎನ್ನುವ ಹೊತ್ತು ಅದಾಗಿತ್ತು. ಭಾರತದ ಸೊಗಸಾದ ಬಟ್ಟೆಗಳು, ಮಸಾಲೆ, ಅಲಂಕಾರದ ವಸ್ತುಗಳು, ಅಷ್ಟೇ ಏಕೆ ಆನೆಯಂತಹ ಪ್ರಾಣಿಗಳನ್ನೂ ಹಡಗನ್ನೇರಿಸಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆನೆ ಲಭ್ಯವಿಲ್ಲದ ದೇಶಗಳಲ್ಲಿ ಅವನ್ನು ಮಾರಿ ಬರುತ್ತಿದ್ದರು.
ವಿಮಾನಗಳು ಹಾರಾಡುವ ಈ ಕಾಲಘಟ್ಟದಲ್ಲಿ ಸಮುದ್ರವ್ಯಾಪಾರ ತುಸು ಹೊಳಪು ಕಳೆದುಕೊಂಡಿದೆ. ಆದರೂ ಸಂಪ್ರದಾಯವಾಗಿ ಈಗಲೂ ಅದನ್ನು ‘ಬಲಿ ಜಾತ್ರಾ’ ಆಗಿ ಕಟಕ್‌ನಲ್ಲಿ ಪ್ರತಿವರ್ಷದ ಕಾರ್ತೀಕ ಹುಣ್ಣಿಮೆಯಂದು ಆಚರಿಸುತ್ತಾರೆ. ಈ ಊರಲ್ಲಿ ಸಮುದ್ರವಿಲ್ಲದಿದ್ದರೂ ಮಹಾನದಿ ಮತ್ತು ಕಥಾಜೋಡಿ ನದಿಗಳಿವೆ. ಈ ನದಿಗಳು ತುಸುವೇ ದೂರದಲ್ಲಿ ಸಮುದ್ರವನ್ನು ಸೇರುತ್ತವೆ. ಇಂತಹಲ್ಲಿಯೇ ಹಡಗುಗಳು ಪಯಣ ಪ್ರಾರಂಭಿಸಿ ಸಮುದ್ರ ಸೇರುತ್ತಿದ್ದವು. (ತೇಜೋ ನದಿಯ ಮೂಲಕ ಸಮುದ್ರ ಸೇರುವ ನೌಕೆಗಳ ಚಿತ್ರಣ ನನ್ನ ‘ತೇಜೋ ತುಂಗಭದ್ರಾ’ ಕೃತಿಯಲ್ಲಿದೆ) ಈ ಮಹಾನದಿಯ ತೀರದ ಗುಂಟ ಜನರು ಪುಟ್ಟ ಪುಟ್ಟ ದೋಣಿಗಳನ್ನು ಆ ದಿನ ತೇಲಿ ಬಿಟ್ಟು, ತಮ್ಮ ಜನರ ಸುರಕ್ಷತೆಗಾಗಿ ಬೇಡಿಕೊಳ್ಳುತ್ತಾರೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾತ್ರೆಯನ್ನು ಏರ್ಪಡಿಸುತ್ತಾರೆ.
ಲೇಖಕರು: ಸಾಹಿತಿ