• ನಾಗೇಂದ್ರ ಕಡೂರು

ಒಂದು ಕಾಮನಬಿಲ್ಲು ನೋಡಿದ ತಕ್ಷಣ ಮನ ಕುಣಿಯುತ್ತದೆ. ಅದೇ ಆಕಾಶಪೂರ್ತಿ ಬಣ್ಣಬಣ್ಣದ ಓಕುಳಿಯಾಗಿ ಕಂಡರೆ? ಅದು ನೀಡುವ ಮಜವೇ ಬೇರೆ. Northern lights - ಇದು ಅರೋರ ಬೋರಿಯಾಲಿಸ್ ಎಂದೇ ಪ್ರಸಿದ್ಧ.

ಇದು ಭೂಮಿಯ ಆರ್ಕ್ಟಿಕ್ ವಲಯದಲ್ಲಿ ಕಂಡುಬರುವ ನೈಸರ್ಗಿಕ ಪ್ರಕ್ರಿಯೆ. ಆರ್ಕ್ಟಿಕ್ ಸರ್ಕಲ್ ದೇಶಗಳಲ್ಲಿ ಇದನ್ನು ನೋಡಿ ಮನತುಂಬಿಕೊಳ್ಳಲು ಹಲವಾರು ದೇಶಗಳಿಂದ ಜನ ಬರುತ್ತಾರೆ.

ಅರೋರ ಬೊರಿಯಲಿಸ್, ಸೂರ್ಯನ ಚಟುವಟಿಕೆಯಿಂದ ಹುಟ್ಟುವ ಭೂಕಾಂತೀಯ ಬಿರುಗಾಳಿಗಳಿಂದ ಮುಖ್ಯವಾಗಿ ಪ್ರಭಾವಿತವಾಗಿರುತ್ತದೆ. ಇದು ಆಕಾಶದಲ್ಲಿ ನಮ್ಮ ಕಣ್ಮನಗಳನ್ನು ಬೆರಗುಗೊಳಿಸುವ ನೈಸರ್ಗಿಕ ವಿದ್ಯಮಾನ.
ಇದನ್ನೂ ಓದಿ: ನೇಪಾಳದಲ್ಲಿ ಹರ ಹರ ಮಹಾದೇವ..

ವಿಶೇಷವಾಗಿ ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್, ಐಸ್‌ಲ್ಯಾಂಡ್, ಗ್ರೀನ್‌ಲ್ಯಾಂಡ್, ಕೆನಡಾ ಮತ್ತು ಅಲಾಸ್ಕಾ (USA)ಗಳಲ್ಲಿ ಹಾಗೂ ರಷ್ಯಾದ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತವೆ.

ಹೀಗೆ ಹಲವಾರು ದೇಶಗಳಲ್ಲಿ ಕಂಡುಬಂದರೂ ನಾವು ಗೆಳೆಯರು ಆಯ್ಕೆ ಮಾಡಿಕೊಂಡಿದ್ದು ರಷ್ಯಾದ Murmansk ಎಂಬ ಊರನ್ನು.

ಡಿಸೆಂಬರ್‌ನಲ್ಲಿ ಈ ಊರಿನಲ್ಲಿ ಸುಮಾರು ನಲವತ್ತು ದಿನಗಳು ಸೂರ್ಯ ಉದಯಿಸುವುದೇ ಇಲ್ಲ. ಜನವರಿ ಹತ್ತನೆಯ ತಾರೀಖಿನವರೆಗೂ ಇಲ್ಲಿ ದೀರ್ಘ ಕತ್ತಲು. ಬೇಸಗೆಯಲ್ಲಿ ಮಧ್ಯರಾತ್ರಿ ಸೂರ್ಯ ಕಾಣುವುದು ಇಲ್ಲಿನ ವಿಶೇಷ. ಸ್ಕ್ಯಾಂಡಿನೇವಿಯನ್ ದೇಶಗಳಿಗೆ ಹೋಲಿಸಿದರೆ ರಷ್ಯಾಗೆ ಭಾರತದಿಂದ ತಲುಪುವುದು ಸುಲಭ ಹಾಗೂ ವೆಚ್ಚವೂ ಕಡಿಮೆ. ಆದರೆ, ಅನುಭವ ಮಾತ್ರ ಒಂದೇ.

Nagendra Kadur 2

ಮುರ್ಮಾನ್ಸ್ಕ್ ಆರ್ಕ್ಟಿಕ್ ವೃತ್ತದಲ್ಲಿನ ದೇಶಗಳಲ್ಲೇ ದೊಡ್ಡ ನಗರ. ವಿಶೇಷ ಎಂದರೆ ನಮ್ಮ ಭೂಮಿ 2 ಡಿಗ್ರಿ ಕೋನದಲ್ಲಿ ಬಾಗಿರುವುದೂ ಇದೇ ನಗರದಿಂದ. ನೆನಪಿಡಿ, ಅರೋರ ಸಂಭವಿಸುವುದನ್ನು ಊಹಿಸುವುದು ಕಷ್ಟ. ಅವು ನೈಸರ್ಗಿಕವಾಗಿ ಸಂಭವಿಸುವ ವಿದ್ಯಮಾನ ಮತ್ತು ಸ್ಪಷ್ಟವಾದ ರಾತ್ರಿ ಆಕಾಶವು ಅತ್ಯಗತ್ಯ. ಉತ್ತರ ಗೋಳಾರ್ಧದ ಯಾವ ಸ್ಥಳದಲ್ಲೇ ನೀವಿದ್ದರೂ ಕತ್ತಲೆಯಾಗುವ ಮುನ್ನವೇ ವಿದ್ಯುತ್‌ ದೀಪಗಳನ್ನು ಆರಿಸಲೇಬೇಕು..

ನಾವು ಬೆಂಗಳೂರಿನಿಂದ ಮಾಸ್ಕೊಗೆ ದೆಹಲಿ ಮೂಲಕ ತಲುಪಿದೆವು. ಅಲ್ಲಿಂದ ಇನ್ನೊಂದು ವಿಮಾನದಲ್ಲಿ ಮುರ್ಮಾನ್ಸ್ಕ್‌ನ ಪುಟ್ಟ ವಿಮಾನ ನಿಲ್ದಾಣ ತಲುಪಿದೆವು. ವಿಮಾನ ಇಳಿಯುವಾಗಲೇ ಪೂರ್ತಿ ನಗರದಲ್ಲಿ ಮಂಜು ಆವರಿಸಿತ್ತು. -12 ಡಿಗ್ರಿ ತಾಪಮಾನ! ಪುಣ್ಯಕ್ಕೆ ನಾವು -20 ಡಿಗ್ರಿ ಎದುರಿಸಲು ಬೇಕಾದ ಜಾಕೆಟ್, ಕೋಟ್, ಗ್ಲೋವ್ಸ್ ಮುಂತಾದವನ್ನೂ ಬೆಂಗಳೂರಲ್ಲೇ ಸಜ್ಜು ಮಾಡಿಕೊಂಡಿದ್ದೆವು. ಮಾಸ್ಕೊದಲ್ಲೇ ನಮ್ಮ Immigration ಪ್ರಕ್ರಿಯೆ ಮುಗಿಸಿದ್ದರಿಂದ ಇಲ್ಲಿ ಹೆಚ್ಚೇನೂ ಸಮಯ ಹಿಡಿಯಲಿಲ್ಲ. ತಕ್ಷಣ ಚಳಿ ತಪ್ಪಿಸಿಕೊಳ್ಳಲು ಕಾರಿನೊಳಗೆ ಕುಳಿತೆವು. ಅಲ್ಲಿಂದ ನಮ್ಮ ಕಾರು ಮಂಜುಗಡ್ಡೆ ಸೀಳಿಕೊಂಡು ಕೇವಲ ಟೈರ್ ಮಾರ್ಕ್ ಇದ್ದ ಜಾಗದಲ್ಲೇ ನುಸುಳಿಕೊಂಡು ಹೊರಟಿತು. ಸ್ನೋ ಚೈನ್ ಇದ್ದ ವಾಹನವಾದರೂ ಒಂದು ಕ್ಷಣ ಜಾರಿದರೆ ನಮ್ಮ ಕಥೆ ಅಷ್ಟೇ.

ಮೊದಲೇ ಕಾಯ್ದಿರಿಸಿದ್ದ ವಿಶಾಲ ನಾಲ್ಕು ರೂಮಿನ ಬಂಗಲೆ ತಲುಪಿದಾಗ ಚಿಕ್ಕಮಗಳೂರು ಕಾಫಿ ನೆನಪಾಗಿದ್ದು ಸುಳ್ಳಲ್ಲ. ಮನೆಯ ಒಳಗೆ ಹೀಟರ್ ಆನ್ ಮಾಡಿ ಕಿಟಕಿಯಿಂದ ದಟ್ಟ ಮಂಜು ನೋಡುತ್ತಾ ಅದರ ಮಜ ಅನುಭವಿಸಿದ್ದು ಪ್ರವಾಸದ ಉತ್ಸಾಹವನ್ನು ಹೆಚ್ಚಿಸಿತು.

ಅರೋರ ಹಂಟಿಂಗ್

ಇದು ಸೂರ್ಯಾಸ್ತದ ನಂತರ ಯಾವುದೇ ಸಮಯದಲ್ಲಿ ಸಂಭವಿಸಬಹುದಾದ್ದರಿಂದ ತಡಮಾಡದೆ ಅದೇ ದಿನ ರಾತ್ರಿ ಆಕಾಶದ ವಿಸ್ಮಯಕ್ಕೆ ಸಾಕ್ಷಿಯಾಗಲು ಹೊರಟೆವು. ಆಕಾಶ ನೋಡುವುದೇನೋ ಸರಿ, ಆದರೆ ಯಾವ ಜಾಗದಿಂದ? ಅದಕ್ಕೆ ಅರೋರ ಮುನ್ಸೂಚನೆ ನೀಡುವ ಆಪ್ ನಮ್ಮ ಮೊಬೈಲ್‌ನಲ್ಲಿ ಇತ್ತು. ನಮ್ಮ ಡ್ರೈವರ್ ಸ್ಥಳೀಯ. ಆದ್ದರಿಂದ ಆತನಿಗೆ ಇದರ ಬಗ್ಗೆ ತಿಳಿದಿತ್ತು. ಒಂದು ಸರಿಯಾದ ಜಾಗದಲ್ಲೇ ನಮ್ಮ ವ್ಯಾನ್ ನಿಂತಿತ್ತು. ಆದರೆ, ಸುಮಾರು ಮೂರು ಗಂಟೆಯಾದರೂ ಅರೋರದ ಸುಳಿವಿಲ್ಲ. ನಿರಾಶೆಯಿಂದ ಮರಳಿ ಮನೆ ಸೇರಿದೆವು. ಮಾರನೆಯ ದಿನ ಬೆಳಗ್ಗೆ ಪೂರ್ತಿ ನಗರ ಸುತ್ತಾಡಿ, ರಾತ್ರಿ ಆಗುವುದನ್ನೇ ಕಾದು ಕುಳಿತೆವು. ಇದಕ್ಕಾಗಿ ಸುಮಾರು ಎಂಟು ದಿನ ಅಲ್ಲೇ ಬಿಡಾರ ಹೂಡುವುದಕ್ಕೆ ನಾವು ಸಜ್ಜಾಗಿದ್ದೆವು. ಅರೋರ ವೀಕ್ಷಿಸಲೆಂದೇ ಇಲ್ಲಿ ಗಾಜಿನಿಂದ ಮಾಡಿದ ಸುಸಜ್ಜಿತ ಗುಡಿಸಲು ನಿರ್ಮಿಸಿದ್ದಾರೆ (glass igloo). ಅದಂತೂ ಅದ್ಭುತ. ಹೊರಗೆ ಮೈನಸ್ 16-18 ಡಿಗ್ರಿ ಕೊರೆವ ಚಳಿಯಿದ್ದರೆ, ನಾವು ಮಾತ್ರ ಒಳಗೆ ಆಸ್ಟ್ರಿಚ್ ಪಕ್ಷಿಯ ಉಣ್ಣೆಯ ಕಂಬಳಿ ಹೊದ್ದು ಬೆಚ್ಚಗೆ ಮಲಗಿದ್ದೆವು. ಮಲಗಿಕೊಂಡೇ ಆಕಾಶ ನೋಡಬಹುದು.

Untitled design (1)

ಎರಡನೆಯ ದಿನ ಅದೃಷ್ಟವೋ ಅದೃಷ್ಟ. ನಮ್ಮ ಮೊಬೈಲ್ ಆಪ್ ರಾತ್ರಿ ಒಂದು ಗಂಟೆಗೆ ಬೀಪ್ ಸದ್ದು ಮಾಡಿತು. ಆತುರದಲ್ಲಿ ಹೊರಗೆ ಬಂದರೆ, ಆಕಾಶವೆಂಬ ಅದ್ಭುತ ನಮ್ಮ ಕಣ್ಣ ಮುಂದೆ.

ನಮ್ಮನ್ನು ಬೆಳಕಿನ ಪರದೆಗಳು ಸುತ್ತುತ್ತಿವೆ. ಥೇಟ್‌ ಆಕಾಶದಾದ್ಯಂತ ಚಾಚಿಕೊಂಡಿರುವ ಒಂದು ಕಲರ್ ಕಲರ್ ಚಾಪೆಯಂತೆ. ಗುಲಾಬಿ, ಹಸಿರು, ನೇರಳೆ ಬಣ್ಣದ ಚಿತ್ತಾರ ನಮ್ಮ ಕಣ್ಣ ಮುಂದೆಯೇ ಇದೆ. ತಕ್ಷಣ ಕ್ಯಾಮೆರಾ ಓಪನ್ ಮಾಡಿ ಫೊಟೋ ಸೆರೆ ಹಿಡಿದಾಗ ಏನೋ ವರ್ಣಿಸಲಾಗದ ಖುಷಿ. ಮೂರನೆಯ ದಿನ ಇನ್ನೂ ಪ್ರಕಾಶಮಾನವಾಗಿ ಮತ್ತು ಹೆಚ್ಚು ಸ್ಪಷ್ಟವಾಗಿ ಗೋಚರಿಸಿತು.

ನಮ್ಮ ಮುಂದಿನ ಪ್ರಯಾಣ ಪಕ್ಕದಲ್ಲೇ ಇದ್ದ ಟೆರಿಬರ್ಕಾ ಎಂಬ ಸಣ್ಣ ಹಳ್ಳಿಗೆ. ಇದನ್ನು ಭೂಮಿಯ ಅಂಚು (EDGE OF THE EARTH) ಎಂದು ಕರೆಯುತ್ತಾರೆ. ಇಲ್ಲಿಂದ ಭೂಮಿ ಕೊನೆಗೊಳ್ಳುತ್ತದೆ. ಇದರಲ್ಲಿ ಒಂದು ಜೋಕಾಲಿಯಲ್ಲಿ ಜೀಕಿದರೆ, ಒಂದೆಡೆ ಆರ್ಕ್ಟಿಕ್ ಮಹಾಸಾಗರ, ಮತ್ತೊಂದೆಡೆ ಭೂಮಿ. ಅದು ರಮಣೀಯ ದೃಶ್ಯಾನುಭವ.

ಸ್ನೋ ವಿಲೇಜ್

ಇದು ಮುರ್ಮಾನ್ಸ್ಕ್ ಮತ್ತು ಟೆರಿಬರ್ಕಾ ಊರಿನ ನಡುವೆ ಇರುವ ಒಂದು ಹಳ್ಳಿ. ಇಲ್ಲಿ ನಮ್ಮಲ್ಲಿರುವ ರೆಸಾರ್ಟ್‌ಗಳಂತೆ ಗಾಜಿನ ಗುಮ್ಮಟ (glass dome)ಗಳನ್ನು ನಿರ್ಮಿಸಿದ್ದಾರೆ. ಇದು ನಿಜವಾದ ಆರ್ಕ್ಟಿಕ್ ಅನುಭವ ನೀಡುತ್ತದೆ. ಸುತ್ತಮುತ್ತ ಹಲವಾರು ಅಡ್ವೆಂಚರ್ ಆಕ್ಟಿವಿಟೀಸ್ ಮಾಡಲು ಉತ್ತಮ ಸೌಲಭ್ಯಗಳಿವೆ. ಸ್ನೋ ಬೈಕ್, ಸ್ನೋ ಮೊಬೈಲ್ ಸವಾರಿ, ಸೈಬೀರಿಯನ್ ಹಸ್ಕಿ ನಾಯಿಗಳ ಬಂಡಿ ನಿಮ್ಮನ್ನು ದಟ್ಟ ಮಂಜಿನ ದಾರಿಯಲ್ಲಿ ಎಳೆದೊಯ್ಯುತ್ತದೆ. ಇದನ್ನು ಹಸ್ಕಿ ಸ್ಲೆಡಿಂಗ್ ಎನ್ನುತ್ತಾರೆ.

ಪ್ರವಾಸಿಗರಿಗೆ ಸಲಹೆಗಳು

ಮುರ್ಮಾನ್ಸ್ಕ್ ಅತಿ ಚಳಿ ಪ್ರದೇಶವಾದ್ದರಿಂದ ಸೂಕ್ತ ವಿಶೇಷ ಚಳಿಗಾಲದ ಉಡುಪುಗಳನ್ನು ಒಯ್ಯಬೇಕು. ವಿಪರೀತ ಮಂಜಿನ ಮೇಲೆ ನಡೆಯುವುದರಿಂದ ಸ್ನೋ ಬೂಟುಗಳು ಇರಲಿ. ಸ್ಥಳೀಯ ಮಾಲ್‌ಗಳಲ್ಲಿ ಲೋಕಲ್ ಸಿಮ್ ಕಾರ್ಡ್ ಬಹಳ ಅಗ್ಗದ ದರದಲ್ಲಿ ಸಿಗುತ್ತವೆ. ಅರೋರ ವೀಕ್ಷಿಸಲು ಬಹಳ ತಾಳ್ಮೆ ಬೇಕು. ಈ ಊರಿನಲ್ಲಿ ಇಂಡಿಯನ್ ಹೊಟೇಲ್‌ಗಳು ಇಲ್ಲ. ಸಾಕಷ್ಟು ತಿಂಡಿ ತಿನಿಸುಗಳನ್ನು ಒಯ್ಯಬೇಕು. ಸಸ್ಯಾಹಾರಿಗಳಿಗೆ ತುಸು ಕಷ್ಟ. ಆದರೆ ಸ್ಥಳೀಯ ತಿನಿಸುಗಳು ಬಹಳ ರುಚಿಯಾಗಿರುತ್ತವೆ.