• ಸಿರಿ ಮೈಸೂರು

ಮಳೆ ಬಂದರೆ ಕೆಲವರು ಕವಿಗಳಾಗುತ್ತಾರೆ, ಕಥೆಗಾರರಾಗುತ್ತಾರೆ. ಆದರೆ, ನನಗೆ ಮಳೆ ಶುರುವಾಯಿತೆಂದರೆ ಬೇಸರ. ಹೀಗೆ ಮಳೆಯೆಂದರೆ ನೂರಡಿ ದೂರ ಓಡುವ ನಾನು ಒಂದಿಡೀ ಪ್ರವಾಸವನ್ನು ಮಳೆಯಲ್ಲೇ ಮಾಡಬೇಕಾಗಿ ಬಂದದ್ದು ವಿಪರ್ಯಾಸ! ಬಾನೆತ್ತರದ ಅದ್ಭುತ ಕಟ್ಟಡಗಳು, ವರ್ಣರಂಜಿತ ರಸ್ತೆಗಳು, ಲವಲವಿಕೆಯಿಂದ ಕೂಡಿದ ರಾತ್ರಿಗಳನ್ನು ಅರಸಿ ಹಾಂಗ್‌ಕಾಂಗ್‌ವರೆಗೂ ಹೋದರೆ ಅಲ್ಲಿ ನನ್ನನ್ನು ಅರಸಿ ಬಂದಿದ್ದು ಮಾತ್ರ ಸಿಕ್ಕಾಪಟ್ಟೆ ಮಳೆ. ನಾನು ಅಲ್ಲಿಗೆ ಹೋಗಿದ್ದೇ ಮಳೆಗಾಲದಲ್ಲಿ. ಜೂನ್‌ ತಿಂಗಳು ಹಾಂಗ್‌ಕಾಂಗ್‌ನಲ್ಲಿ ಮಳೆಗಾಲ. ಆದರೆ ನನ್ನ ಪ್ರವಾಸ ಆಗಲೇ ಗೊತ್ತಾಗಿದ್ದ ಕಾರಣ ಅದನ್ನು ಮುಂದೂಡುವ ಮಾತೇ ಇರಲಿಲ್ಲ.

ಇದನ್ನೂ ಓದಿ : ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್‌ನ ಹರ್ಮಿಟೇಜ್ ಮ್ಯೂಸಿಯಂ : ಅಪೂರ್ವ ಕಲಾ ಖಜಾನೆ

ಸುರಿಯುವ ಮಳೆಯಲ್ಲೆ ಸುತ್ತಾಟ

ಮಕಾವ್‌ ದೇಶದಿಂದ ಹಾಂಗ್‌ಕಾಂಗ್‌ಗೆ ಒಂದು ಗಂಟೆಯ ಫೆರ್ರಿ ಪ್ರಯಾಣ. ಬೋಟ್‌ನಲ್ಲಿ ಪ್ರಯಾಣಿಸಿ ಹಾಂಗ್‌ಕಾಂಗ್‌ ತಲುಪಿದಾಗಲೇ ಮಳೆ ಧೋ ಎಂದು ಸುರಿಯುತ್ತಿತ್ತು. ಆದರೆ ಅಷ್ಟಕ್ಕೆ ಅಂಜುವ ಮಾತೆಲ್ಲಿ? ಕೊಡೆ ಹಿಡಿದುಕೊಂಡೇ ಹಾಂಗ್‌ಕಾಂಗ್‌ನ ಪ್ರವಾಸ ಆರಂಭಿಸಿದೆ. ಮೊದಲು ನೋಡಿದ್ದು ಪ್ರಸಿದ್ಧ ವಿಕ್ಟೋರಿಯಾ ಪೀಕ್.‌ ಟ್ರಾಮ್‌ನಲ್ಲಿ ಮೇಲಕ್ಕೆ ಹೋಗುವಾಗ ಸುತ್ತಮುತ್ತ ಹಸಿರು ಬಿಟ್ಟರೆ ಪೂರ್ತಿ ಮಂಜು ಕಾಣಿಸುತ್ತಿತ್ತು. ಟ್ರಾಮ್‌ನಲ್ಲಿ ಹೋಗಿ ಕೊನೆಗೆ ಸ್ಕೈ ಟೆರೇಸ್‌ 428ನಿಂದ ಹಾಂಗ್‌ಕಾಂಗ್‌ನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳೋಣ ಎಂದರೆ ಅಲ್ಲಿ ಕಾಣಿಸಿದ್ದು ಕೂಡ ಪೂರ್ತಿ ಮಂಜು. ಒಂದು ಕ್ಷಣ ಮಳೆ ನಿಂತಂತಾಗಿ ಮಂಜಿನ ಮಧ್ಯೆ ಕಟ್ಟಡಗಳು ಇಣುಕುವಂತೆ ಅನಿಸುತ್ತಿತ್ತಾದರೂ ಬಹುಪಾಲು ಮಂಜಿನ ದರ್ಶನವೇ ಆಯಿತು. ಅಲ್ಲೇ ಇದ್ದ ಫೊಟೋಗಳಲ್ಲಿ ಹಾಂಗ್‌ಕಾಂಗ್‌ ನಗರಿಯ ವಿಹಂಗಮ ನೋಟ ಕಣ್ತುಂಬಿಕೊಂಡಿದ್ದಾಯಿತು. ಆದರೆ ಆ ಜಾಗ, ಅಂದಿನ ಹವಾಮಾನ ಮಾತ್ರ ನಾವು ಮೋಡದ ಒಳಗೇ ಇದ್ದೀವೇನೋ ಅನಿಸುವಂತೆ ಮಾಡಿತ್ತು. ಆ ಅನುಭವ ಕೂಡ ವಿಶೇಷವಾದದ್ದೇ.

Untitled design - 2026-09-15T145129.262

ಹಾಂಗ್‌ಕಾಂಗ್‌ ಅನ್ನು ಮೇಲಿನಿಂದ ಕಣ್ತುಂಬಿಕೊಂಡ ನಂತರ ಕೆಳಗಿಳಿದು ಹೊಟೇಲ್‌ಗೆ ಹೋಗುವಷ್ಟರಲ್ಲಿ ಹೆಚ್ಚೂಕಮ್ಮಿ ಸ್ನಾನವಾಗಿತ್ತು. ಬಿಳಿ ಬಟ್ಟೆ, ಬಿಳಿ ಶೂ ಎರಡೂ ʼನನ್ನನ್ನು ಕೆಸರು ಮಾಡಬೇಡ ಪ್ಲೀಸ್‌ʼ ಎನ್ನುತ್ತಿತ್ತು. ಹಾಂಗ್‌ಕಾಂಗ್‌ನಲ್ಲಿ ಸಸ್ಯಾಹಾರ ಹುಡುಕುವುದು ಕಷ್ಟ. ಕೊನೆಗೆ ಅಲ್ಲೇಲ್ಲೋ ಇದ್ದ ಸರವಣ ಭವನಕ್ಕೆ ಹೋಗಿ ಊಟದ ಶಾಸ್ತ್ರ ಮುಗಿಸಿ ಉಳಿಯಬೇಕಿದ್ದ ಜಾಗಕ್ಕೆ ಹೋಗಿದ್ದಾಯಿತು. ಆ ರಾತ್ರಿ ನಾನು ನೋಡಿದ್ದು ಹಾಂಗ್‌ಕಾಂಗ್‌ ನಗರದ ಅದ್ಭುತ ವಾತಾವರಣ. ಒಂದು ಕ್ಷಣವೂ ಮಲಗದ ರಸ್ತೆಗಳು, ಗಗನಚುಂಬಿ ಲಾಂದ್ರದಂಥ ನೂರಾರು ಕಟ್ಟಡಗಳು. ಸಮಯ ರಾತ್ರಿ ಹತ್ತರ ಮೇಲಾಗಿತ್ತು. ಊಟ ಮಾಡಿದ ಸ್ಥಳದಿಂದ ಒಂದಷ್ಟು ದೂರ ಈ ಸುಂದರ ವಾತಾವರಣದಲ್ಲಿ ವಾಕಿಂಗ್‌ ಮಾಡುವ ಮನಸೂ ಆಗಿತ್ತು. ಆದರೆ ಮಳೆ ಬಿಡಬೇಕಲ್ಲ! ಕೊನೆಗೆ ಹಾಂಗ್‌ಕಾಂಗ್‌ನ ಪ್ರಸಿದ್ಧ ಕೆಂಪು ಟ್ಯಾಕ್ಸಿ ಹತ್ತಿ ಹೊಟೇಲ್‌ಗೆ ಮರಳಿದೆ.

ದಿಲ್‌ ಗೆಲ್ಲುವ ಡಿಸ್ನಿಲ್ಯಾಂಡ್‌

ಹಾಂಗ್‌ಕಾಂಗ್‌ನಲ್ಲಿನ ಡಿಸ್ನಿಲ್ಯಾಂಡ್‌ ಮಕ್ಕಳಿಗೆ ಮಾತ್ರವಲ್ಲದೆ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತದೆ. ಇದು ಒಂದು ಊರಿಗಿಂತಲೂ ಹೆಚ್ಚು ವಿಶಾಲವಾಗಿದೆ. ನೂರಾರು ಸೋವೆನಿಯರ್‌ ಅಂಗಡಿಗಳು, ಸೂಪರ್‌ಮ್ಯಾನ್‌, ಆಂಟ್‌ಮ್ಯಾನ್‌, ಡಿಸ್ನಿ ಪ್ರಿನ್ಸೆಸ್‌ ಸೇರಿದಂತೆ ನಮ್ಮ ಕಲ್ಪನಾಲೋಕವನ್ನು ಸಾಕಷ್ಟು ವರ್ಷಗಳಿಂದ ಆಳುತ್ತಿರುವ ಅದೆಷ್ಟೋ ಚೆಂದದ ಪಾತ್ರಗಳನ್ನು ಕಣ್ಣಾರೆ ನೋಡಬಹುದು. ಮಳೆ ಇಲ್ಲದಿದ್ದರೆ ಅವರುಗಳ ಪೆರೇಡ್‌, ಸಂಜೆಯ ಪಟಾಕಿ ಶೋ ಸಹ ನೋಡಬಹುದಿತ್ತು. ಇಲ್ಲಿ ಅಡ್ವೆಂಚರ್‌ ಪಾರ್ಕ್‌, ಫ್ಯಾಂಟಸಿಲ್ಯಾಂಡ್‌, ಟುಮಾರೋಲ್ಯಾಂಡ್‌, ವರ್ಲ್ಡ್‌ ಆಫ್‌ ಫ್ರೋಜ಼ನ್‌ ಸೇರಿದಂತೆ ಅನೇಕ ಹೆಸರಿನ ವಿಭಾಗಗಳಿವೆ.

ಇದನ್ನೂ ಓದಿ : ನಾಲಗೆ ತಿರುಗಿಸುವ ದೇಶಗಳತ್ತ ಒಂದು ಪ್ರವಾಸ!

ಒಂದೊಂದು ವಿಭಾಗದಲ್ಲೂ ಕನಿಷ್ಟ ನಾಲ್ಕೈದು ರೀತಿಯ ಆಟಗಳು/ಅನುಭವಗಳು ಇವೆ. ಎಲ್ಲವನ್ನೂ ನೋಡುತ್ತಾ, ಆಟವಾಡುತ್ತಾ ಹೋದರೆ ಒಂದು ದಿನವಂತೂ ಯಾವ ಮೂಲೆಗೂ ಸಾಕಾಗುವುದಿಲ್ಲ. ಆ ಮಳೆಯಲ್ಲಿ ತೊಯ್ದರೂ ಸರಿಯೇ ಎಂದು ಒಂದು ಮಿಕ್ಕಿಮೌಸ್‌ ಛತ್ರಿ ಕೊಂಡುಕೊಂಡು ಅದನ್ನೇ ಹಿಡಿದುಕೊಂಡು ಇಡೀ ಡಿಸ್ನಿಲ್ಯಾಂಡ್‌ ಸುತ್ತಿದ್ದಾಯಿತು. ಮಧ್ಯಾಹ್ನ ಅಲ್ಲಿ ನೋಡಿದ ʼದಿ ಲಯನ್‌ ಕಿಂಗ್‌ʼ ನಾಟಕ ಪ್ರದರ್ಶನ ಮಾತ್ರ ಅವರ್ಣನೀಯ ಅನುಭವ. ಸುರಿಯುವ ಮಳೆಯಲ್ಲೇ ಹೊರಗೆ ಬಂದು ಒಂದು ಬೆಚ್ಚಗಿನ ಕಾಫಿ ಜತೆಗೆ ಆ ದಿನ ಮುಗಿಸಿ ಹೊಟೇಲ್‌ನಿಂದ ಅನತಿ ದೂರದಲ್ಲಿದ್ದ ʼವುಡ್‌ಲ್ಯಾಂಡ್ಸ್‌ʼ ಎಂಬ ಹೊಟೇಲ್‌ನಲ್ಲಿ ನಮ್ಮೂರಿನ ಊಟ ಸವಿದೆ.

ಪಾಂಡಾ-ಪೆಂಗ್ವಿನ್‌ ನೋಡಿದ್ದಾಯಿತು

ಡಿಸ್ನಿಲ್ಯಾಂಡ್‌ ನೋಡಿಬಂದ ಮಾರನೆಯ ದಿನ ಓಶನ್‌ ಪಾರ್ಕ್‌ಗೆ ತೆರಳಿ ಅಲ್ಲಿ ದಟ್ಟ ಅರಣ್ಯದ ನಡುವೆ ಕೇಬಲ್‌ ಕಾರ್‌ ಸವಾರಿ ಮಾಡಿ, ಮುದ್ದಾದ ಪಾಂಡಾಗಳು ಹಾಗೂ ಕೊರೆಯುವ ಛಳಿಯಲ್ಲಿ ನಲಿಯುತ್ತಿದ್ದ ಪೆಂಗ್ವಿನ್‌ಗಳನ್ನು ನೋಡಿ, ಹವಾಮಾನದ ಕಾರಣ ರದ್ದಾದ ಡಾಲ್ಫಿನ್‌ ಶೋ ನಡೆಯುವ ಜಾಗವನ್ನೂ ನೋಡಿ, ನೂರಾರು ರೀತಿಯ ಮೀನುಗಳನ್ನು ಕಣ್ತುಂಬಿಕೊಂಡ ನಾನು ಕೊನೆಯಲ್ಲಿ ಅನುಭವಿಸಿದ್ದು ಅಲ್ಲಿನ ಭಯಂಕರ ರೋಲರ್‌ ಕೋಸ್ಟರ್‌ ಸವಾರಿ. ಮಳೆಯ ಹನಿಗಳು ವೇಗವಾಗಿ ಮುಖಕ್ಕೆ ಬೀಳುತ್ತಿದ್ದವು.

Untitled design - 2026-09-15T145040.196

ನಮ್ಮ ರೋಲರ್‌ ಕೋಸ್ಟರ್‌ ಸಹ ವೇಗದಲ್ಲಿತ್ತು. ಒಂದು ಕ್ಷಣ ನಾನು ಬದುಕಿರುತ್ತೇನೋ ಇಲ್ಲವೋ ಎನಿಸುವಂತೆ ಮಾಡಿಬಿಟ್ಟಿತು. ಅದಾದ ನಂತರ ಅದೇ ರಾತ್ರಿ ಟೆಂಪಲ್‌ ಸ್ಟ್ರೀಟ್‌ ನೈಟ್‌ ಮಾರ್ಕೆಟ್‌ ಎಂಬ ಸುಂದರ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಲ್ಲಿದ್ದ ಹಾಂಗ್‌ಕಾಂಗ್‌ನ ಸೊವೆನಿಯರ್‌ಗಳು, ಬ್ಯಾಗ್‌ಗಳು, ಪೋರ್ಸೆಲಿನ್‌ ಅಡುಗೆ ಪಾತ್ರೆಗಳು, ಅಲಂಕಾರಿಕ ವಸ್ತುಗಳು ಎಲ್ಲಕ್ಕೂ ಮಿಗಿಲಾಗಿ ಇಡೀ ಮಾರ್ಕೆಟ್‌ನುದ್ದಕ್ಕೂ ಮೇಲೆ ಹಾಕಿದ್ದ ಬಣ್ಣಬಣ್ಣದ ಆಕಾಶಬುಟ್ಟಿಯ ದೀಪಗಳನ್ನು ನೋಡುತ್ತಾ ಕಣ್ಣಮುಂದೆ ಹಾಂಗ್‌ಕಾಂಗ್‌ನ ಸಂಸ್ಕೃತಿಯೇ ತೆರೆದುಕೊಂಡಂತಿತ್ತು. ಒಂದು ಮುಖ್ಯರಸ್ತೆಯುದ್ದಕ್ಕೂ ಇರುವ ಈ ಮಾರ್ಕೆಟ್‌ ಆಹಾರಪ್ರಿಯರಿಗೂ ಸ್ವರ್ಗ.

ಬರ್ತ್‌ಡೇ ಸಮಯಕ್ಕೆ ಯಾರ ಕೈಗೂ ಸಿಗಲಿಲ್ಲ

ಹಾಂಗ್‌ಕಾಂಗ್‌ ಪ್ರಪಂಚದ ಅತಿ ದುಬಾರಿ ನಗರಗಳ ಪೈಕಿ ಒಂದು. ಅದನ್ನು ನೋಡಬೇಕೆಂದರೆ ಹಾರ್ಬರ್‌ ಸಿಟಿ, ಕೆ11ನಂಥ ಮಾಲ್‌ಗಳನ್ನು ನೋಡಬೇಕು. ದುಬಾರಿ ಬ್ರ್ಯಾಂಡ್‌ಗಳು, ನೂರಾರು ರೀತಿಯ ಉತ್ಪನ್ನಗಳು, ವಿಶೇಷ ಅನುಭವಗಳನ್ನು ಮೊಗೆಮೊಗೆದು ನಮಗೆ ಕೊಡುವ ಈ ಜಾಗಗಳಲ್ಲಿ ಸುತ್ತಾಡಿದ ನಂತರ ಕೆ11 ಮಾಲ್‌ನ ಹೊರಗೆ ಬಂದು ನದಿತೀರದಲ್ಲಿ ಕಳೆದ ಸಂಜೆ ತುಂಬಾ ಮಧುರವಾಗಿತ್ತು! ಚೀನಾದ ಇತರ ಭಾಗಗಳಂತೆ ಹಾಂಗ್‌ಕಾಂಗ್‌ನಲ್ಲೂ ಸಸ್ಯಾಹಾರಿ ಊಟ ಸಿಗುವುದು ಕಷ್ಟವಾದ್ದರಿಂದ ಇದ್ದಷ್ಟು ಸಮಯವೂ ಸ್ಟಾರ್‌ಬಕ್ಸ್‌ನ ವೆಜ್‌ ತಿನಿಸುಗಳು, ಕಟ್‌ ಫ್ರೂಟ್ಸ್‌, ಆಗೀಗ ಸಿಕ್ಕ ಇಂಡಿಯನ್‌ ರೆಸ್ಟೋರೆಂಟ್‌ಗಳೇ ಸಂಗಾತಿಯಾಗಿದ್ದವು. ಇಲ್ಲಿದ್ದ ದಿನಗಳಲ್ಲಿನ ಒಂದು ದಿನವೇ ನನ್ನ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬದ ಆಚರಣೆಗಳಿಂದ ಮೊದಲಿನಿಂದಲೂ ದೂರವೇ ಇರುವ ನಾನು ಈ ವರ್ಷ ನನ್ನ ಬರ್ತ್‌ಡೇ ಎಂದು ಯಾರಿಗೂ ಗೊತ್ತೇ ಇಲ್ಲದ ದೇಶದಲ್ಲಿ ಇದ್ದುದು ಅತ್ಯಂತ ಸ್ಮರಣೀಯ ಸಂಗತಿ.

ಬಿಟ್ಟೂಬಿಡದೆ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆಯ ನಡುವೆ ಹುಟ್ಟುಹಬ್ಬದ ದಿನವೇ ಮನೆಗೆ ಹೊರಟಾಗ ನಾನು ಹೊತ್ತು ತಂದಿದ್ದು ಅಲ್ಲಿ ಬೀಳುತ್ತಿದ್ದ ಮಳೆಯ ಹನಿಗಳಷ್ಟೂ ನೆನಪುಗಳು, ಹಾಂಗ್‌ಕಾಂಗ್‌ನ ಪ್ರತಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ರಸ್ತೆ ದಾಟುವಾಗಲೂ ಕೇಳಿಸುತ್ತಿದ್ದ ಟಕ್‌ ಟಕ್‌ ಸದ್ದು, ಛತ್ರಿ ಹಿಡಿದು ನಗರವೆಲ್ಲಾ ನಡೆಯುತ್ತಿದ್ದ ಕ್ಷಣಗಳನ್ನು. ಹಾಂಗ್‌ಕಾಂಗ್‌ನಲ್ಲಿ ಆಧುನಿಕತೆಯ ಮಡಿಲಲ್ಲೇ ಸಂಸ್ಕೃತಿಯೂ ವಿಶ್ರಮಿಸುತ್ತಿದೆ. ತಂತ್ರಜ್ಞಾನದ ತೋಳಿನಲ್ಲಿ ಮೌಲ್ಯಗಳೂ ಸೇರಿಕೊಂಡಿವೆ. ಹಾಂಗ್‌ಕಾಂಗ್‌ ಸಿಕ್ಕಾಪಟ್ಟೆ ಆಧುನಿಕ ಎನಿಸಿದರೂ ಒಂದೊಂದು ಅಂಗುಲದಲ್ಲೂ ಸಂಸ್ಕೃತಿಯ ಪಾರುಪತ್ಯವೇ ಕಾಣುತ್ತದೆ.