ಥೈಲ್ಯಾಂಡ್ನಲ್ಲಿ ವಿಶೇಷ ಆತಿಥ್ಯಕೂಟ
ಬಜೆಟ್ ಫ್ರೆಂಡ್ಲಿ ದೇಶವೆಂದೇ ಗುರುತಿಸಿಕೊಂಡಿರುವ ಥೈಲ್ಯಾಂಡ್ ಐಷಾರಾಮಿ ರೆಸಾರ್ಟ್ಗಳು, ಸಾಹಸ ಚಟುವಟಿಕೆಗಳು, ರಾತ್ರಿಯ ಜೀವನಕ್ಕಷ್ಟೇ ಹೆಸರು ಮಾಡಿಲ್ಲ. ಅದಕ್ಕೆ ಹೊರತಾಗಿಯೂ ಥಾಯ್ ಫುಡ್, ವಿಶೇಷ ಪ್ರವಾಸಿ ತಾಣಗಳು ಮತ್ತು ಆಚರಣೆಗಾಗಿಯೂ ಸುದ್ದಿಯಲ್ಲಿದೆ. ಅವುಗಳ ಪೈಕಿ ಥೈಲ್ಯಾಂಡ್‌ನ ವಾರ್ಷಿಕ ಮಂಕಿ ಬಫೆಟ್ ಫೆಸ್ಟಿವಲ್ ಬಗ್ಗೆ ತಿಳಿಯಲೇ ಬೇಕು.
ವಿಶ್ವದ ಪ್ರವಾಸಿಗರನ್ನು ಸೆಳೆಯುವ ಸುಂದರವಾದ ದೇಶ ಥೈಲ್ಯಾಂಡ್. ಅಸಂಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿರುವ ಈ ದೇಶ, ಭೇಟಿ ನೀಡುವ ಪ್ರತಿ ಪ್ರವಾಸಿಗನಿಗೂ ಥ್ರಿಲ್ಲಿಂಗ್ ಅನುಭವವನ್ನೇ ಕಟ್ಟಿಕೊಡುತ್ತದೆ. ಭಾರತದಿಂದ ಸುಮಾರು 2920 ಕಿಮೀ ದೂರದಲ್ಲಿರುವ ಈ ಥೈಲ್ಯಾಂಡ್‌ನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಮೂರರಿಂದ ನಾಲ್ಕು ದಿನಗಳಿದ್ದರೂ ಸಾಕು. ಅಲ್ಲಿನ ಸುಂದರವಾದ ಕಡಲತೀರಗಳು, ಆಹಾರ, ಸಾಹಸಗಳಿಗೆ ಹೆಸರುವಾಸಿಯಾದ ಪರಿಸರಗಳಿಗೆ ಭೇಟಿ ನೀಡದಿರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ: ಸಾವಿರಾರು ಕುಟುಂಬಗಳಿಗೆ ಸರಿ ದಾರಿ ತೋರಿದ ಧರ್ಮಸ್ಥಳ ʼಸಿರಿʼ ಗ್ರಾಮೋದ್ಯೋಗ ಸಂಸ್ಥೆ
ಥೈಲ್ಯಾಂಡ್‌ಗೆ ಬರುವ ಮುನ್ನ ಮಂಕಿ ಬಫೆ ಉತ್ಸವದ ಕುರಿತು ನೀವು ತಿಳಿಯಲೇ ಬೇಕು. ಇಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವ ಉದ್ದ ಬಾಲದ ಮಕಾಕ್ ಕೋತಿಗಳನ್ನು ಗೌರವಿಸುವ ಸಲುವಾಗಿ ಅಲ್ಲಿನ ಸ್ಥಳೀಯರು ಮಂಕಿ ಬಫೆ ಉತ್ಸವವನ್ನು ಆಯೋಜಿಸುತ್ತಾರೆ. ಥಾಯ್ ನಗರವಾದ ಲೋಪ್‌ಬುರಿಯಲ್ಲಿ ವರ್ಷಕ್ಕೊಮ್ಮೆ, ಮಂಗಗಳಿಗೆ ವಿಶೇಷವಾದ ಆತಿಥ್ಯ ನೀಡಿ, ಔತಣಕೂಟವನ್ನು ಏರ್ಪಡಿಸಲಾಗುತ್ತದೆ. ಈ ಉತ್ಸವವು ಲೋಪ್‌ಬುರಿಯಲ್ಲಿರುವ 13ನೆಯ ಶತಮಾನದ ಹಿಂದೂ- ಬೌದ್ಧ ದೇವಾಲಯವಾದ ಫ್ರಾ ಪ್ರಾಂಗ್ ಸ್ಯಾಮ್ ಯೋಟ್‌ನಲ್ಲಿ ನವೆಂಬರ್ ಕೊನೆಯ ಭಾನುವಾರದಂದು ಆಯೋಜಿಸಲಾಗುತ್ತದೆ.
ಕೋತಿಗಳಿಗಷ್ಟೇ ವಿಶೇಷ ಆತಿಥ್ಯ

ಪ್ರತಿ ವರ್ಷವೂ ಹಬ್ಬದ ಸಮಯದಲ್ಲಿ ಸುಮಾರು ಎರಡು ಮೆಟ್ರಿಕ್ ಟನ್ ಆಹಾರವನ್ನು ತಯಾರಿಸುತ್ತಾರೆ. ನೂರಕ್ಕೂ ಹೆಚ್ಚು ಮೇಜುಗಳನ್ನು ಸಿದ್ಧಪಡಿಸಿ, ಅವುಗಳ ಮೇಲೆ ತಟ್ಟೆಗಳನ್ನು ಹರಡಿ ಕೋತಿಗಳಿಗೆ ಇಷ್ಟವಾಗುವ ವಿಶೇಷ ಆಹಾರ, ತರಕಾರಿ, ಹಣ್ಣು ಹಂಪಲು, ಸಿಹಿ ತಿನಿಸುಗಳನ್ನೂ ಇರಿಸಲಾಗುತ್ತದೆ. ಒಮ್ಮೆ ಎಲ್ಲ ತಟ್ಟೆಗಳಲ್ಲೂ ಆಹಾರವನ್ನು ಜೋಡಿಸುತ್ತಲೇ ಕೋತಿಗಳಿಗೆ ಆಹ್ವಾನ ನೀಡಲಾಗುತ್ತದೆ. ದೇವಾಲಯದ ಸುತ್ತಮುತ್ತಲೂ ಇರುವ ಲೆಕ್ಕವಿಲ್ಲದಷ್ಟು ಕೋತಿಗಳು ಈ ಆತಿಥ್ಯವನ್ನು ಸ್ವೀಕರಿಸುತ್ತವೆ. ಕೋತಿಗಳೆಂದರೆ ಕೇಳಬೇಕಾ… ತಟ್ಟೆಯಲ್ಲಿರುವ ಆಹಾರವೆಲ್ಲವನ್ನೂ ಚೆಲ್ಲಾಪಿಲ್ಲಿಗೊಳಿಸುತ್ತಲೇ ತಮ್ಮಿಷ್ಟದ ಆಹಾರವನ್ನು ಪರಸ್ಪರ ಕಿತ್ತಾಡಿಕೊಳ್ಳುತ್ತಲೇ ಸೇವಿಸುತ್ತವೆ.
ಮಂಕಿ ಬಫೆಟ್ ಫೆಸ್ಟಿವಲ್ ಹುಟ್ಟು ಹೇಗಾಯ್ತು ಗೊತ್ತಾ ?

ಮಂಕಿ ಬಫೆ ಉತ್ಸವವು 1989ಕ್ಕೂ ಹಿಂದಿನಿಂದಲೇ ಆಚರಣೆಯಲ್ಲಿತ್ತು. ಸ್ಥಳೀಯ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಯಶಸ್ಸಿನ ಸಂಭ್ರಮವನ್ನು ಆಚರಿಸಿಕೊಳ್ಳುವುದಕ್ಕಾಗಿ ಚಿಕ್ಕದಾಗಿ ಈ ಬಫೆಟ್ ಆಯೋಜನೆ ಮಾಡಿದ್ದರು. ಮೊದಲು ಚಿಕ್ಕದಾಗಿ ಪ್ರಾರಂಭವಾಗಿದ್ದ ಈ ಉತ್ಸವ ಅಥವಾ ಜಾತ್ರೆ ವರ್ಷ ಕಳೆಯುತ್ತಲೇ ಬೃಹತ್ ಪ್ರಮಾಣದಲ್ಲಿ ಹರಡಿಕೊಳ್ಳುತ್ತಾ ಬಂತು. ಸ್ಥಳೀಯರಿಗಷ್ಟೇ ಸೀಮಿತವಾಗಿದ್ದ ಈ ಸಂಭ್ರಮದ ನೋಟ ಇಂದು ಸಾವಿರಾರು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಲ್ಲದೆ ಕಾಲಕ್ರಮೇಣ, ಉತ್ಸವವು ಲೋಪ್‌ಬುರಿಯ ಕ್ಯಾಲೆಂಡರ್ ದಿನವೆಮಬಂತೆ ಆಚರಣೆಗೆ ಬಂದಿದೆ.
ಫ್ರೆಂಡ್ಸ್ ಜತೆ ಚಾಟ್ ಬೈಟ್‌ಗೆ ಬಿಗ್ ಅಡ್ಡಾ
ಉತ್ಸವದ ಆಚರಣೆಯ ಹಿಂದಿದೆ ಐತಿಹ್ಯ
ಲೋಪ್‌ಬುರಿಯಲ್ಲಿ ಕೋತಿಗಳನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿ ಕಾಣುತ್ತಾರೆ, ಗೌರವಿಸುತ್ತಾರೆ. ಸ್ಥಳೀಯ ಸಂಪ್ರದಾಯದಂತೆ, ರಾಮಾಯಣದ ಥಾಯ್ ಆವೃತ್ತಿಯಾದ ರಾಮಕಿಯನ್‌ನಲ್ಲಿ ರಾಮನಿಗೆ ನೆರವಾಗುವ ಹನುಮಂತನ ವಂಶಸ್ಥರಿಗೆ ಗೌರವ ಸೂಚಿಸುವ ಸಲುವಾಗಿ ಈ ಔತಣ ಕೂಟವನ್ನು ಆಯೋಜಿಸಲಾಗುತ್ತದೆ. ಸ್ಥಳೀಯರಷ್ಟೇ ಅಲ್ಲದೆ ದೇಶ ವಿದೇಶೀ ಪ್ರವಾಸಿಗರೂ ಈ ಉತ್ಸವದಲ್ಲಿ ಭಾಗವಹಿಸುವುದಕ್ಕಾಗಿ ನವೆಂಬರ್ ತಿಂಗಳಿನಲ್ಲಿ ಥ್ಯಲ್ಯಾಂಡ್‌ಗೆ ಭೇಟಿ ನೀಡುತ್ತಾರೆ.
ಒಟ್ಟಿನಲ್ಲಿ ನವೆಂಬರ್ ಕೊನೆಯ ಭಾನುವಾರದಂದು ಥೈಲ್ಯಾಂಡ್‌ಗೆ ಹೋಗುವ ಯೋಜನೆ ಹಾಕಿಕೊಂಡರೆ ಮಂಕಿ ಬಫೆಟ್ ಫೆಸ್ಟಿವಲ್ ಮಿಸ್ ಮಾಡಿಕೊಳ್ಳದಿರಿ.