Thursday, March 26, 2026
Thursday, March 26, 2026

ಫ್ರೆಂಡ್ಸ್‌ ಜತೆ ಚಾಟ್‌ ಬೈಟ್‌ಗೆ ಬಿಗ್‌ ಅಡ್ಡಾ

ತಿಂಡಿಗಳ ಜಾಗ ಯಾವತ್ತೂ ಕೇವಲ ತಿನಿಸುಗಳಿಗೆ ಸೀಮಿತವಲ್ಲ. ಗೆಳೆಯರ ಜತೆ ಹರಟೆ ಹಾಗೂ ಒಂದಿಷ್ಟು ನೆನಪುಗಳ ತಂಗುದಾಣ. ರುಚಿ ರುಚಿ ಚಾಟ್ಸ್‌ ಜತೆಗೆ ಸವಿ ನೆನಪುಗಳ ಕ್ಷಣಗಳಿಗೂ ಸಾಕ್ಷಿಯಾಗುವ ಜಾಗ ಬಿಗ್‌ ಬೈಟ್.‌ ರಾಜರಾಜೇಶ್ವರಿ ನಗರ ಹಾಗೂ ವಿಜಯನಗರದಲ್ಲಿರುವ ಬಿಗ್‌ ಬೈಟ್‌ನಲ್ಲಿ ಚಾಟ್ಸ್‌, ಜ್ಯೂಸ್‌ ಜತೆಗೆ ಚೈನೀಸ್‌ ತಿನಿಸುಗಳು ಸಿಗುತ್ತವೆ.

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಹೊಸದೊಂದು ಚಾಟ್‌ ಅಂಗಡಿ, ಫುಡ್‌ ಅಡ್ಡಾ, ಹೊಟೇಲ್‌, ರೆಸ್ಟೋರೆಂಟ್‌ ಸಿಗುತ್ತವೆ. ವಿಜಯನಗರದಲ್ಲಿ ಈ ಹಿಂದೆ ಗಣೇಶ್‌ ಜ್ಯೂಸ್‌ ಆಂಡ್‌ ಚಾಟ್ಸ್‌ ಎಂಬ ಹೆಸರಿನಲ್ಲಿ ಸಣ್ಣ ಚಾಟ್ಸ್‌ ಅಂಗಡಿಯಿಂದ ಶುರುವಾಗಿ ಈಗ ʼಬಿಗ್‌ʼ ಬೈಟ್‌ ಎಂಬ ದೊಡ್ಡ ಆಹಾರ ಕೇಂದ್ರವಾಗಿ ಬೆಳೆದಿದೆ. ವಿಜಯನಗರದ ಮಾರುತಿ ಮಂದಿರದ ಹಿಂಭಾಗದಲ್ಲಿರುವ ಬಿಗ್‌ ಬೈಟ್‌ ಸುಮಾರು 11 ವರ್ಷಗಳಿಂದ ಹೊಸ ಬಗೆಯ ಹಾಗೂ ರುಚಿಕರವಾದ ತಿನಿಸುಗಳಿಂದ ಜನಮನ ಗೆದ್ದಿದೆ. ರಾಜರಾಜೇಶ್ವರಿ ನಗರದಲ್ಲಿ ನಿಮಿಷಾಂಬ ದೇವಸ್ಥಾನದ ಪಕ್ಕದ ರಸ್ತೆಯಲ್ಲಿ ಸ್ವಲ್ಪ ದೂರ ಬಂದರೆ ಬಿಗ್‌ ಬೈಟ್‌ ಸಿಗುತ್ತದೆ. ಎಲ್ಲ ರೀತಿಯ ಚಾಟ್ಸ್‌, ಸ್ಯಾಂಡ್‌ವಿಚ್‌ ಜತೆಗೆ ವಿಶೇಷವಾಗಿ ಚೈನೀಸ್‌ ಫುಡ್‌ ಐಟಂ, ತವಾ ಪಲಾವ್‌, ಸಿಝಲರ್‌, ಐಸ್‌ಕ್ರೀಮ್‌, ಜ್ಯೂಸ್‌ ಹಾಗೂ ಮಿಲ್ಕ್‌ಶೇಕ್‌ ಇಲ್ಲಿ ಫೇಮಸ್‌!

ಫ್ರೆಂಡ್ಸ್‌ ಅಡ್ಡಾ

ಗಡಿಬಿಡಿಯಲ್ಲಿ ಬಂದು ಚಾಟ್ಸ್‌ ತಿಂದು ಹೋಗಬೇಕು ಎಂಬ ಕಾರಣಕ್ಕೆ ಇದನ್ನು ಶುರು ಮಾಡಿಲ್ಲ. ಹಾಗಾಗಿಯೇ ಇಲ್ಲಿ ಕುಳಿತುಕೊಂಡು ತಿನ್ನಲು ಅನುಕೂಲಕರವಾದ ಸ್ಥಳ ಹಾಗೂ ಕುರ್ಚಿ-ಟೇಬಲ್‌ ಇಡಲಾಗಿದೆ. ಫ್ರೆಂಡ್ಸ್‌ ಜತೆ ಹೋದರೆ ಒಂದಿಷ್ಟು ಹೊತ್ತು ಕಾಲ ಕಳೆದು ಹರಟೆ ಹೊಡೆಯುವ ಅವಕಾಶವೂ ಇದೆ. ಗಡಿಬಿಡಿಯಲ್ಲಿ ತಿಂದು ಹೋಗುವವರಿಗೆ ಫಾಸ್ಟ್‌ ಫುಡ್‌ ರೀತಿಯ ಟೇಬಲ್‌ ವ್ಯವಸ್ಥೆ ಕೂಡ ಇದೆ. ಇದರ ಬಗ್ಗೆ ಮಾತನಾಡುವ ಬಿಗ್‌ ಬೈಟ್‌ ಮಾಲೀಕ ಶ್ರೀಪತಿ, ʼನಮ್ಮಲ್ಲಿಗೆ ಬರುವವರು ಸುಮ್ಮನೇ ತಿಂದು ಹೋಗುವ ಬದಲು ಒಂದಿಷ್ಟು ಹೊತ್ತು ಖುಷಿಯಿಂದ ಕಾಲ ಕಳೆಯಬೇಕು ಎಂಬುದು ಆಶಯ. ಅದಕ್ಕಾಗಿ ಈ ವ್ಯವಸ್ಥೆ ಮಾಡಿದ್ದೇವೆʼ ಎಂದು ಹೇಳಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಬಿಗ್‌ ಬೈಟ್‌ ಒಪನ್‌ ಇರುತ್ತದೆ.

New Project (48)

ಲೋಕಲ್‌ ಫ್ಲೇವರ್

ಇಂಥದೊಂದ ಫುಡ್‌ ಸೆಂಟರ್‌ ಒಪನ್‌ ಮಾಡುವ ಹಿಂದಿನ ಉದ್ದೇಶವೇ ಎಲ್ಲ ಭಾರತದ ವಿವಿಧ ಲೋಕಲ್‌ ತಿನಿಸುಗಳು ಒಂದೇ ಕಡೆ ಸಿಗುವ ಹಾಗಾಗಬೇಕು ಎನ್ನುವಂಥದ್ದು. 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅದರಲ್ಲೂ ವಿಜಯನಗರದಂಥ ಜಾಗದಲ್ಲಿ ಪಕ್ಕಾ ಮುಂಬೈ, ಕೋಲ್ಕತ್ತಾ ಹಾಗೂ ಇತರ ಪ್ರದೇಶಗಳ ಲೋಕಲ್‌ ತಿನಿಸುಗಳು ಸಿಗುವುದು ಅಪರೂಪವಾಗಿತ್ತು. ಅದಕ್ಕಾಗಿ ಶ್ರೀಪತಿ ಅವರು ಮುಂಬೈ ಇಂದ ಕೆಲವರನ್ನು ಇಲ್ಲಿಗೆ ಕರೆತಂದು ಅಂಗಡಿ ಶುರು ಮಾಡಿದರು. ಶುರುವಿಗೆ ಸ್ವಲ್ಪ ಕಷ್ಟ ಆಯಿತು ಎನ್ನುವ ಶ್ರೀಪತಿ, ʼಬೆಂಗಳೂರಿನ ಚಾಟ್ಸ್‌ ಅಲ್ಲಿ ಬಳಸುತ್ತಿದ್ದ ಮಸಾಲೆಗಳು ಭಿನ್ನವಾಗಿತ್ತು. ನಾವು ಶುರು ಮಾಡುವಾಗ ಮಸಾಲೆಗಳನ್ನು ಕಡಿಮೆ ಮಾಡಿದೆವು. ಹೀಗಾಗಿ ಜನರಿಗೆ ಅದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವಾಯಿತು. ಆದರೆ ಈಗ ಜನರಿಗೆ ಎಲ್ಲ ಅಥೆಂಟಿಕ್ ರುಚಿಗಳ ಪರಿಚಯ ಆಗಿರುವುದರಿಂದ ಹಾಗೂ ಬೆಂಗಳೂರಿನಲ್ಲೇ ಹಲವು ‌ಅಂತಹ ಜಾಗಗಳು ಹೊಸದಾಗಿ ತೆರೆದಿರುವುದರಿಂದ ನಮ್ಮ ತಿನಿಸುಗಳ ರುಚಿ ಏಕೆ ವಿಶೇಷ ಎಂದು ಗೊತ್ತಾಗಿದೆʼ ಎನ್ನುತ್ತಾರೆ.

New Project (49)

ಹೊಸ ಪ್ರಯೋಗಗಳು

ಶುರುವಿನಿಂದಲೂ ಹೊಸ ಪ್ರಯೋಗಗಳನ್ನು ಬಿಗ್‌ ಬೈಟ್‌ ಮಾಡುತ್ತಾ ಬಂದಿವೆ. ಸಾಮಾನ್ಯವಾಗಿ ಸ್ವೀಟ್‌ ಚಟ್ನಿಗೆ ಹುಣಸೆ ರಸ ಹಾಕಲಾಗುತ್ತದೆ. ಆದರೆ, ಮುಂಬೈ ಅಂಥ ಜಾಗದಲ್ಲಿ ಸ್ವೀಟ್‌ ಚಟ್ನಿಯನ್ನು ಖರ್ಜೂರದಿಂದ ಮಾಡುತ್ತಾರೆ. ಅದನ್ನು ಬಿಗ್‌ ಬೈಟ್‌ ಮೊದಲಿನಿಂದಲೇ ಅನುಸರಿಸಿಕೊಂಡು ಬಂದಿದೆ. ಹಾಗೇ ಚೈನೀಸ್‌ ಮಸಾಲೆ- ಅಂದರೆ ಮಸಾಲೆ ಪೂರಿಗೆ ಪೂರಿ ಬದಲು ನೂಡಲ್ಸ್‌ ಹಾಕಿ ಮಾಡಲಾಗುತ್ತದೆ. ಇದರ ಜತೆಗೆ ಐಸ್‌ ಸೇವ್‌ ಪೂರಿ, ಚೈನಿಸ್‌ ಸೇವ್‌ ಇಂಥ ಹಲವು ಹೊಸ ತಿನಿಸುಗಳನ್ನು ಬಿಗ್‌ ಬೈಟ್‌ ಪರಿಚಯಿಸಿದೆ. ಚಾಟ್ಸ್‌ ಮೇಲೆ ದಾಳಿಂಬೆ, ಡ್ರೈ ಫ್ರೂಟ್ಸ್‌ ಹಾಗೂ ವಿಶೇಷವಾಗಿ ಮಾವಿನಕಾಯಿ ಪೀಸ್‌ ಹಾಕುವ ಅಭ್ಯಾಸವನ್ನು ಸುಮಾರು 20 ವರ್ಷಗಳಿಂದಲೂ ರೂಢಿಸಿಕೊಂಡು ಬಂದಿದೆ. ಈಗ ಹೊಸದಾಗಿ ʼಬಿಗ್‌ ಬೇಕರ್ಸ್‌ʼ ಎಂಬ ಬೇಕರಿ ಅನ್ನು ಕೂಡ ವಿಜಯನಗರದಲ್ಲಿ ಶುರು ಮಾಡಲು ಮುಂದಾಗಿದ್ದಾರೆ ಶ್ರೀಪತಿ.

ಮುಂಬೈ ಚಾಟ್ಸ್‌ ಬೆಂಗಳೂರಿನಲ್ಲಿ ಸಿಗಬೇಕು ಎಂಬ ಕಾರಣಕ್ಕೆ ಅಲ್ಲಿಂದಲೇ ಕೆಲಸಗಾರರನ್ನು ಕರೆದುಕೊಂಡು ಬಂದು ವಿಜಯನಗರದಲ್ಲಿ ಇದನ್ನು ಶುರು ಮಾಡಿದೆ. ಈಗ ಎರಡು ದೊಡ್ಡ ಅಂಗಡಿ ನಡೆಯುತ್ತಿದೆ. ಬೇರೆ ಜಾಗಗಳಲ್ಲಿಯೂ ತೆರೆಯಲು ಜನ ಕೇಳುತ್ತಿದ್ದಾರೆ.
-ಶ್ರೀಪತಿ, ಬಿಗ್‌ ಬೈಟ್‌ ಮಾಲೀಕರು

ಬೆಸ್ಟ್‌ ಸೆಲ್ಲರ್‌:

ದಹಿ ಪುರಿ

ಸ್ಯಾಂಡ್‌ವಿಚ್‌

ತವಾ ಪಲಾವ್‌

ಚಾಟ್‌ ಪ್ಲಾಟರ್‌

ಚೈನೀಸ್‌ ಮಸಾಲ

ಆರ್ ಆರ್ ನಗರ ವಿಳಾಸ:

224, ಬಿಇಎಂಎಲ್ 3ನೇ ಸ್ಟೇಜ್, ಪಂಜಾಬ್ ನ್ಯಾಶನಲ್ ಬ್ಯಾಂಕ್ ಎದುರು, ರೆಮ್ಕೋ ಭೇಲ್ ಲೇಔಟ್, ಗಟ್ಟಿಗೆರೆ, ರಾಜರಾಜೇಶ್ವರಿ ನಗರ್, ಬೆಂಗಳೂರು, ಕರ್ನಾಟಕ 560098

ಮೊ: 09975783278

ವಿಜಯನಗರ ವಿಳಾಸ:

17ನೇ ಕ್ರಾಸ್ ರಸ್ತೆ, 21ನೇ ಮೈನ್ ರಸ್ತೆ, ಮಾರುತಿ ಮಂದಿರ್ ಹಿಂದೆ, ವಿಜಯನಗರ, ಬೆಂಗಳೂರು, ಕರ್ನಾಟಕ 560040

ಮೊ: 09742578321

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ