ರೋಮ್ ನಗರದ ರೋಚಕ ಇತಿಹಾಸದ ನಡುವೆ
ಪ್ರದರ್ಶನಗಳ ನಡುವೆ ಪ್ರಾಣಿಗಳು ಮತ್ತು ಗ್ಲಾಡಿಯೇಟರ್‌ಗಳನ್ನು ನೆಲದಡಿ ಕಾಣದಂತೆ ಸ್ಥಳಾಂತರಿಸಲಾಗುತ್ತಿತ್ತು. ಅಖಾಡದ ಮರದ ನೆಲದ ಮೇಲೆ ಮರಳನ್ನು ಹಾಸಿ, ಅದರ ಮೇಲೆಯೇ ಎಲ್ಲಾ ಪ್ರದರ್ಶನಗಳು ನಡೆಯುತ್ತಿದ್ದವು. ರೋಮನ್ನರ ಹಿಂಸಾತ್ಮಕ ರುಚಿ ಇಂದಿನ ಅಮೆರಿಕಕ್ಕಿಂತಲೂ ಹೆಚ್ಚಿತ್ತು ಎನ್ನಲಾಗಿದೆ. ಗ್ಲಾಡಿಯೇಟರ್‌ಗಳು, ಅಪರಾಧಿಗಳು, ಕಾಡುಪ್ರಾಣಿಗಳು ಎಲ್ಲರೂ ಮರಣಪರ್ಯಂತ ಹೋರಾಡುತ್ತಿದ್ದು ಜನರಿಗೆ ರಕ್ತಪಾತದ ಹಬ್ಬವನ್ನು ಉಂಟುಮಾಡುತ್ತಿತ್ತು.
- ಜಯ ನಾಗೇಂದ್ರ
2019ರ ಸೆಪ್ಟೆಂಬರ್‌ನಲ್ಲಿ ನಾವು ರೋಮ್, ಫ್ಲಾರೆನ್ಸ್, ವೆನಿಸ್ ಮತ್ತು ಇಟಲಿಯ ಇನ್ನಿತರ ಸ್ಥಳಗಳಿಗೆ ಪ್ರವಾಸ ಹೋಗಿದ್ದೆವು. ಆಗಲೇ ಹೋಗಿದ್ದು ನಮಗೆ ತುಂಬಾ ಒಳ್ಳೆಯದಾಯಿತು. ಏಕೆಂದರೆ, ಕೆಲವೇ ತಿಂಗಳುಗಳಲ್ಲಿ ಭಾರೀ ಪ್ರವಾಹ ವೆನಿಸ್ ನಗರವನ್ನು ಮುಳುಗಿಸಿತ್ತು. ನಂತರ ಕೋವಿಡ್ ಕೆಲವು ಸಮಯದ ತನಕ ಜಗತ್ತಿನ ಬಾಗಿಲನ್ನೇ ಮುಚ್ಚಿಬಿಟ್ಟಿತ್ತು.
ದಂತಕಥೆಯ ಪ್ರಕಾರ
ರೋಮ್ ಏಳು ಬೆಟ್ಟಗಳ ಕಣಿವೆಯಲ್ಲಿ ನೆಲೆಗೊಂಡಿರುವ ನಗರ. ದಂತಕಥೆಯ ಪ್ರಕಾರ, ರೋಮ್ ಅನ್ನು ರೋಮ್ಯುಲಸ್ ಮತ್ತು ರೀಮಸ್ ಎಂಬ ಸಹೋದರರಿಬ್ಬರು ಸ್ಥಾಪಿಸಿದರು. ಶಿಶುವಾಗಿದ್ದಾಗ ಅವರಿಬ್ಬರನ್ನು ಯಾರೋ ಕಾಡಿನಲ್ಲಿ ತೊರೆದುಹೋಗಿದ್ದರು. ನಂತರ ಅವರನ್ನು ಒಂದು ಹೆಣ್ಣು ತೋಳ ಹಾಲುಣಿಸಿ ಪೋಷಿಸಿತು ಎನ್ನಲಾಗಿದೆ. ಅವರು ಬೆಳೆದು ನಗರವನ್ನು ನಿರ್ಮಿಸಿದರು. ಪುರಾತತ್ವಜ್ಞರು ಜೂಲಿಯಸ್ ಸೀಸರ್ ದೇವಾಲಯ, ಜ್ಯೂಪಿಟರ್ (ಗುರು) ದೇವಾಲಯ, ಸ್ಯಾಟರ್ನ್ (ಶನಿ) ದೇವಾಲಯ, ಅಪೋಲೋ (ಸೂರ್ಯ ) ದೇವಾಲಯ, ಮಿನರ್ವಾ ದೇವಾಲಯ (ವಿದ್ಯಾ ದೇವತೆ) ಹೀಗೆ ಅನೇಕ ದೇವಾಲಯಗಳ ಅವಶೇಷಗಳನ್ನು ಇಲ್ಲಿ ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ಲಾಗೋ ಡಿ ಸೋರಾಪಿಸ್ ಎಂಬ ಭುವನಸುಂದರಿ
ಅಗೆದಷ್ಟೂ ಇತಿಹಾಸ
ರೋಮ್ ವಿಶಾಲ, ಜಟಿಲ, ಮತ್ತು ಅಂತ್ಯವಿಲ್ಲದ ಮನರಂಜನೆಯ ನಗರ. ಅದ್ಭುತ ಕಲೆಯಿಂದ, ಚೈತನ್ಯಮಯ ಸಂಸ್ಕೃತಿಯಿಂದ, ಮತ್ತು ಸಾವಿರಾರು ವರ್ಷಗಳ ಇತಿಹಾಸದ ಪ್ರಾಚೀನ ಮಹಾನಗರ. ಇತಿಹಾಸ ಆಸಕ್ತರು ಇಲ್ಲಿ ಶಾಸ್ತ್ರೀಯ ರೋಮ್‌ನ ಉದಯ ಮತ್ತು ಪತನವನ್ನು ಈ ಪ್ರದೇಶಗಳಲ್ಲಿ ತಿರುಗಾಡುತ್ತ ಕಲ್ಪಿಸಿಕೊಳ್ಳಬಹುದು. ಇಲ್ಲಿ ನಡೆದಾಡುವಾಗ ಪ್ರಾಚೀನ ರೋಮ್‌ನ ಪಳೆಯುಳಕೆಗಳು ಕಾಣಸಿಗುತ್ತವೆ. ಇಲ್ಲಿನ ಪ್ರಮುಖ ಚೌಕಗಳು ಇನ್ನೂ ಗಗನಚುಂಬಿ ಸ್ತಂಭಗಳಿಂದ ನಿಂತಿವೆ. ಮಧ್ಯಯುಗದ ರೋಮನ್ನರು ಒಮ್ಮೆ ಭವ್ಯವಾಗಿದ್ದ ಕಟ್ಟಡಗಳ ಅವಶೇಷಗಳನ್ನು ಕಲ್ಲುಗಣಿಗಳಂತೆ ಬಳಸಿಕೊಂಡು ಹೊಸ ಕಟ್ಟಡಗಳನ್ನು ನಿರ್ಮಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಈಜಿಪ್ಟ್‌ನಿಂದ ತರಲಾದ ಕಂಬಗಳು ಇಂದಿಗೂ ಸಾಕ್ಷಿಯಾಗಿ ನಿಂತಿವೆ. ಯಾವುದೇ ಬೀದಿ ಅಥವಾ ಚೌಕವನ್ನು ಅಗೆದರೂ ಅದರ ಕೆಳಗೆ ರೋಮ್‌ನ ವೈಭವದ ಅವಶೇಷಗಳನ್ನು ಕಾಣಬಹುದು. ರೋಮ್‌ನ ಪ್ರಾಚೀನ ಗೋಡೆ ಸುಮಾರು 11 ಮೈಲುಗಳಷ್ಟು ವಿಸ್ತರಿಸಿದೆ. ಅನೇಕ ಮಹಾದ್ವಾರಗಳಿಂದ ತಮ್ಮ ಸಾಮ್ರಾಜ್ಯಕ್ಕೆ ಬೃಹತ್ ಮಾರ್ಗಗಳನ್ನು ನಿರ್ಮಿಸಿದ್ದರು.

ರೋಮನ್ ಫೋರಮ್
ರೋಮನ್ ಫೋರಮ್ ಎಂದರೆ ರೋಮ್ ನಗರದ ಮಧ್ಯಭಾಗದಲ್ಲಿನ ಹಲವಾರು ಪ್ರಮುಖ ಪ್ರಾಚೀನ ಸರಕಾರಿ ಕಟ್ಟಡಗಳ ಅವಶೇಷಗಳಿಂದ ಕೂಡಿದ ಸ್ಥಳ. ಇದು ರೋಮ್‌ನ ಜನ್ಮಸ್ಥಳ. ನಾಗರಿಕ ಜೀವನದ ಕೇಂದ್ರವೂ ಆಗಿತ್ತು. ಪ್ರಸಿದ್ಧ ಏಳು ಬೆಟ್ಟಗಳ ಮಧ್ಯದ ಸಾಮಾನ್ಯ ನೆಲ. ಪ್ರಾಚೀನ ರೋಮ್‌ನಲ್ಲಿ ನಡೆದ ಬಹುತೇಕ ಮಹತ್ವದ ಘಟನೆಗಳು ಇಲ್ಲಿ ನಡೆದಿವೆ. ಹಾಗಾಗಿ ಪಾಶ್ಚಾತ್ಯ ನಾಗರಿಕತೆಯ ಅತ್ಯಂತ ಅಮೂಲ್ಯ ಭೂಭಾಗವೆಂದು ಇದನ್ನು ಪರಿಗಣಿಸಲಾಗಿದೆ. ಇಂದಿಗೆ ಆ ವೈಭವದ ಕೆಲವು ತುಂಡುಗಳು ಮಾತ್ರ ಉಳಿದಿದ್ದರೂ, ಅರ್ಧ ಮುರಿದ ಸ್ತಂಭಗಳು ಮತ್ತು ಕಮಾನುಗಳು ಇತಿಹಾಸಾಸಕ್ತರ ಕಲ್ಪನೆಗೆ ಸ್ಫೂರ್ತಿ ಹಚ್ಚುತ್ತದೆ.
ಕೊಲೋಸಿಯಮ್
ಇದೊಂದು ಭವ್ಯ ಕ್ರೀಡಾಂಗಣ. ಯೂರೋಪಿನ ಅತ್ಯಂತ ಪ್ರಸಿದ್ಧಿಯ ಸ್ಮಾರಕಗಳಲ್ಲಿ ಒಂದು. ಇಲ್ಲಿ ಗ್ಲಾಡಿಯೇಟರ್ ಕ್ರೀಡೆಗಳು ನಡೆಯುತ್ತಿದ್ದವು. ಆ ಕ್ರಿಡೆ ಮತ್ತು ಆ ಸಮಯದಲ್ಲಿ ಅಲ್ಲಿ ನೆರೆಯುತ್ತಿದ್ದ ಜನಸ್ಥೋಮವನ್ನು ನೆನೆದರೂ ಅಂದಿನ ಕೊಲೊಸಿಯಮ್‌ನ ವೈಭವ ಅಚ್ಚರಿ ಮೂಡಿಸುತ್ತದೆ. ನಿರ್ವಿವಾದವಾಗಿ ಪ್ರಶಂಸೆಗೆ ಒಳಗಾಗುತ್ತದೆ. ಇದನ್ನು ನೋಡಲು ಪ್ರವೇಶ ಸಾಲುಗಳು ಬಹಳ ದೀರ್ಘವಾಗಿರುತ್ತವೆ. ಮಧ್ಯಾಹ್ನದ ವೇಳೆಗೆ ಜನಸಂದಣಿ ಸ್ವಲ್ಪ ಕಡಿಮೆ. ಆನ್‌ಲೈನ್ ಟಿಕೆಟ್ ಮುದ್ರಿಸಿಕೊಂಡು ಹೋಗುವುದು ಒಳ್ಳೆಯದು. ಮಾರ್ಗದರ್ಶಿತ ಪ್ರವಾಸ ಬುಕ್ ಮಾಡಿಕೊಂಡರೆ ಇನ್ನೂ ಉತ್ತಮ. ಇದು ಪ್ರಾಚೀನ ರೋಮನ್ ಇಂಜಿನಿಯರಿಂಗ್‌ನ ಅದ್ಭುತ ಉದಾಹರಣೆ ಮತ್ತು ಅವರ ಕ್ರೂರತೆಗೂ ಪ್ರಸಿದ್ದಿ ಪಡೆದಿದೆ. ಕ್ರಿಶ 72ರಲ್ಲಿ ಇದರ ನಿರ್ಮಾಣ ಆರಂಭವಾಗಿ ರೋಮನ್ನರು ಅಭಿವೃದ್ಧಿಪಡಿಸಿದ ಕಾಂಕ್ರೀಟ್, ಇಟ್ಟಿಗೆ ಮತ್ತು ಅವರ ವಿಶಿಷ್ಟ ವೃತ್ತಾಕಾರದ ಕಮಾನುಗಳನ್ನು ಬಳಸಿ, ಗ್ರೀಕರಿಗಿಂತ ಬಹಳ ದೊಡ್ಡ ಕಟ್ಟಡವನ್ನು ಅವರು ನಿರ್ಮಿಸಿದರು. ಆದರೂ ಗ್ರೀಕ್ ಸಂಸ್ಕೃತಿಯ ಸೂಕ್ಷ್ಮತೆಯನ್ನು ಗೌರವಿಸಿ, ಈ ಭಾರೀ ಕಟ್ಟಡವನ್ನು ಡೋರಿಕ್, ಐಯೋನಿಕ್, ಕೊರಿಂಥಿಯನ್ ಶೈಲಿಯ ಸ್ತಂಭಗಳಿಂದ ಅಲಂಕರಿಸಿದರು.

ಗ್ಲಾಡಿಯೇಟರ್
ಕೊಲೊಸಿಯಮ್‌ನಲ್ಲಿ 50,000 ಆಸನಗಳ ವ್ಯವಸ್ಥೆ ಇತ್ತು. ಇದನ್ನು ಇಂದಿನ ಸೂಪರ್ ಸ್ಟೇಡಿಯಂಗಳಂತೆ ವೇಗವಾಗಿ ತುಂಬಿ, ಖಾಲಿ ಮಾಡುವಂತೆ ರೂಪಿಸಿದ್ದರು. ಸ್ಥಳೀಯ ವರದಿಗಳ ಪ್ರಕಾರ, ಈ ಕ್ರೀಡಾರಂಗ ಪರಸ್ಪರ ಎದುರು ಬದುರಾಗಿರುವ ಎರಡು ರಂಗಮಂದಿರಗಳನ್ನು ಜೋಡಿಸಿ, ಎರಡು ಪಟ್ಟು ಜನರಿಗೆ ಮನರಂಜನೆಯನ್ನು ಒದಗಿಸುತ್ತಿತ್ತು. ಬಿಸಿಲಿನ ರಕ್ಷಣೆಗೆ ಕ್ಯಾನ್ವಾಸ್ ಛಾವಣಿಗಳಿದ್ದವು. ಅಖಾಡದ ಕೆಳಗಿನ ದಾರಿಗಳು ಮರದ ನೆಲದಿಂದ ಮುಚ್ಚಲ್ಪಟ್ಟು, ಪ್ರದರ್ಶನಗಳ ನಡುವೆ ಪ್ರಾಣಿಗಳು ಮತ್ತು ಗ್ಲಾಡಿಯೇಟರ್‌ಗಳನ್ನು ನೆಲದಡಿ ಕಾಣದಂತೆ ಸ್ಥಳಾಂತರಿಸಲಾಗುತ್ತಿತ್ತು. ಅಖಾಡದ ಮರದ ನೆಲದ ಮೇಲೆ ಮರಳನ್ನು ಹಾಸಿ, ಅದರ ಮೇಲೆಯೇ ಎಲ್ಲಾ ಪ್ರದರ್ಶನಗಳು ನಡೆಯುತ್ತಿದ್ದವು. ರೋಮನ್ನರ ಹಿಂಸಾತ್ಮಕ ರುಚಿ ಇಂದಿನ ಅಮೆರಿಕಕ್ಕಿಂತಲೂ ಹೆಚ್ಚಿತ್ತು ಎನ್ನಲಾಗಿದೆ. ಗ್ಲಾಡಿಯೇಟರ್‌ಗಳು, ಅಪರಾಧಿಗಳು, ಕಾಡುಪ್ರಾಣಿಗಳು ಎಲ್ಲರೂ ಮರಣಪರ್ಯಂತ ಹೋರಾಡುತ್ತಿದ್ದು ಜನರಿಗೆ ರಕ್ತಪಾತದ ಹಬ್ಬವನ್ನು ಉಂಟುಮಾಡುತ್ತಿತ್ತು.
ಕೊಲೊಸಿಯಮ್‌ನಲ್ಲಿದ್ದ ರೋಮನ್ ಶೌಚಾಲಯಗಳ ಮೂಲ ಸ್ಥಿತಿಯನ್ನು ಎಡಭಾಗದಲ್ಲಿ ಹಾಗೆಯೇ ಉಳಿಸಿದ್ದಾರೆ. ಬಲಭಾಗದಲ್ಲಿ ಆಧುನಿಕ ಶೌಚಾಲಯಗಳನ್ನು ಕಟ್ಟಿದ್ದಾರೆ. ಹಿಂದಿನ ಶೌಚಾಲಯಗಳನ್ನು ಮರದಿಂದ ನಿರ್ಮಿಸಲಾಗಿತ್ತು. ಇಂದಿಗೆ ಆ ಮರದ ಸ್ತಂಭಗಳು ಮತ್ತು ಇತರ ಅಮೂಲ್ಯ ವಸ್ತುಗಳಲ್ಲಿ ಕೆಲವು ದೋಚಲ್ಪಟ್ಟಿವೆ ಮತ್ತೆ ಕೆಲವು ಮಧ್ಯಯುಗದ ಕಟ್ಟಡಗಳಿಗೆ, ಕೆಲವು ಸಂಗ್ರಹಾಲಯಗಳಿಗೆ ಕೊಂಡೊಯ್ಯಲಾಗಿವೆ. ವಿಚಿತ್ರವೆಂದರೆ ಇಷ್ಟು ಹಿಂಸೆ, ಯುದ್ಧ ಮತ್ತು ಭಯಾನಕ ಆಟಗಳ ಮಧ್ಯೆ ಅವರು ʻಶಾಂತಿ ದೇವಾಲಯʼವನ್ನೂ ಕಟ್ಟಿದ್ದರು.
ಟ್ರಾಜನ್‌ನ ಕಂಬ
ಪ್ರಾಚೀನ ಯುಗದ ಅತ್ಯಂತ ಭವ್ಯವಾದ ಸ್ತಂಭವೆಂದು ಪರಿಗಣಿಸಲ್ಪಡುವ ಟ್ರಾಜನ್‌ನ ಕಂಬವು ಟ್ರಾಜನ್ ಫೋರಮ್‌ನ ಕೇಂದ್ರಬಿಂದು. 140 ಅಡಿ ಎತ್ತರದ ಈ ಕಂಬದ ಮೇಲೆ, ಚಕ್ರವರ್ತಿ ಟ್ರಾಜನ್‌ನ ಸಾಹಸಗಳನ್ನು ಘೋಷಿಸುವ 2,500 ಆಕೃತಿಗಳ ಸರ್ಪಾಕಾರದ ಶಿಲ್ಪವಿದೆ. ಮೇಲ್ಭಾಗದಲ್ಲಿ ಹೊಳೆಯುವ ಕಂಚಿನ ಟ್ರಾಜನ್ ಪ್ರತಿಮೆಯ ಮೇಲೆ ಬೀಳುವ ಸೂರ್ಯಕಿರಣಗಳು ಅದ್ಭುತ ದೃಶ್ಯವನ್ನು ಸೃಷ್ಟಿಸುತ್ತವೆ. ಈ ಕಂಬ ನಿರ್ಮಾಣ ಕ್ರಿಶ 113ರಲ್ಲಿ ಮುಗಿಯಿತು ಎನ್ನಲಾಗಿದೆ. ಪ್ರಾಚೀನ ಗ್ರೀಕ್ ಶಿಲ್ಪಕಲೆಯ ಅನೇಕ ರೂಪಗಳನ್ನು ಇಂದಿಗೂ ಉಳಿಸಿಕೊಂಡಿದೆ.
ಪ್ಯಾಂಥಿಯಾನ್ (Pantheon)
ಪ್ಯಾಂಥಿಯಾನ್, ಪ್ರಾಚೀನ ರೋಮ್‌ನ ದೇವಾಲಯಗಳಲ್ಲಿ ಒಂದು. ಈ ಅದ್ಭುತ ಕಟ್ಟಡ ಯಾರಿಂದಲೂ ನಾಶವಾಗಿಲ್ಲ. ಅದರ ಪೋರ್ಟಿಕೋ ಮತ್ತು ಅದನ್ನು ಅಲಂಕರಿಸುವ ತ್ರಿಕೋನ ಗೋಪುರವು ಪ್ರಾಚೀನ ಕಾಲದ ರೋಮ್‌ನ ಮಹತ್ವವನ್ನು ಪ್ರತಿನಿಧಿಸುತ್ತಿವೆ. ಇದರ ಭಾರೀ ಏಕಶಿಲಾ ಗ್ರಾನೈಟ್ ಸ್ತಂಭಗಳನ್ನು ಈಜಿಪ್ಟ್‌ನಿಂದ ಸಾಗಿಸಲಾಗಿತ್ತು. ಒಂದು ಸ್ತಂಭವನ್ನು ಅಪ್ಪಿಕೊಳ್ಳಲು ನಾಲ್ವರು ಪ್ರವಾಸಿಗರು ಬೇಕಾಗುವಷ್ಟು ದೊಡ್ಡವು. ʻಪಾನ್-ಥಿಯಾನ್ʼ ಎಂದರೆ ಎಲ್ಲಾ ದೇವರುಗಳು ಎಂದರ್ಥ. ಇದು ಸಾಮ್ರಾಜ್ಯದ ಅನೇಕ ದೇವತೆಗಳನ್ನು ಪೂಜಿಸುವ ಆಧ್ಯಾತ್ಮಿಕ ಸಂಗ್ರಹಾಲಯದಂತಿತ್ತು.
ಒಳಗೆ ಪ್ರಾಚೀನ ರೋಮ್‌ನ ವೈಭವವನ್ನು ಕಾಣಬಹುದು. ವೃತ್ತಾಕಾರದ ಒಂದು ಕಿಂಡಿ ಮಾತ್ರ ಇಲ್ಲಿನ ಬೆಳಕಿನ ಮೂಲ. ಪ್ಯಾಂಥಿಯಾನ್ 2,000 ವರ್ಷಗಳಿಂದ ನಿರಂತರ ಬಳಕೆಯಲ್ಲಿ ಇರುವುದರಿಂದ ಇಷ್ಟು ಚೆನ್ನಾಗಿ ಉಳಿದದುಕೊಂಡಿದೆ. ಈ ಅದ್ಭುತ ಕಟ್ಟಡದ ವಾಸ್ತುಶಿಲ್ಪ ಮತ್ತು ಇಂಜಿನಿಯರಿಂಗ್ ಎಂಥವರನ್ನು ಕುತೂಹಲಕ್ಕೆ ದೂಡುತ್ತದೆ. ಆ ಕಾಲದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಒಂದು ರೂಪವಿತ್ತು. ಅದೇನೆಂದರೆ, ರೋಮ್ ಯಾವುದೇ ದೇಶ ಜಯಿಸಲ್ಪಟ್ಟರೂ, ಪ್ರಜೆಗಳು ಅವರದೇ ದೇವರನ್ನು ಪೂಜಿಸಬಹುದು. ಆದರೆ ಜತೆಗೆ ಸೀಸರ್‌ನನ್ನೂ ಪೂಜಿಸಬೇಕು ಎಂದಾಗಿತ್ತು. ಸಾಮಾನ್ಯವಾಗಿ ಇದು ಸಮಸ್ಯೆಯಾಗಿರಲಿಲ್ಲ. ಆದರೆ ಒಬ್ಬನೇ ದೇವರನ್ನು ನಂಬಿದ ಕ್ರೈಸ್ತರು ಮಾತ್ರ ಇದಕ್ಕೆ ಹೊರತಾಗಿದ್ದರು. ಸಾಮ್ರಾಟನನ್ನು ಪೂಜಿಸಲು ಅವರು ನಿರಾಕರಿಸಿದರು. ಪ್ರಾರಂಭಿಕ ಕ್ರೈಸ್ತರು ಹಿಂಸೆಗೆ ಗುರಿಯಾಗುತ್ತಿದ್ದರು.

ರೋಮ್‌ನ ವೈಭವವನ್ನು ಅಂದಾಜಿಸಲು ಪ್ಯಾಂಥಿಯಾನ್‌ನ ಒಳಭಾಗ ಸಹಕಾರಿಯಾಗಬಲ್ಲದು. ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಈ ದೇವಾಲಯವು ಮೈಕೆಲ್ಯಾಂಜಲೋ ನಿರ್ಮಿಸಿದ ಸೇಂಟ್ ಪೀಟರ್ ಬಾಸಿಲಿಕಾಗೆ ಮತ್ತು ಅನೇಕ ನಿರ್ಮಾಣಗಳಿಗೂ ಮಾದರಿಯಾಯಿತು. ಕಂಪ್ಯೂಟರ್, ಯಂತ್ರಗಳು, ವಿದ್ಯುತ್ ಇಲ್ಲದೆ ಇಷ್ಟು ಗಣಿತಶಾಸ್ತ್ರೀಯವಾಗಿ ನಿಖರವಾದ ರಚನೆಯನ್ನು ರೋಮನ್ನರು ಹೇಗೆ ನಿರ್ಮಿಸಿದರು ಎಂಬುದು ಇಂದಿಗೂ ಅಚ್ಚರಿಯ ಸಂಗತಿ.
ರೋಮನ್ನರು ದೇಹವನ್ನು ದಹಿಸುತ್ತಿದ್ದರು, ಕಾರಣ ಅಗ್ನಿ ಆತ್ಮವನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ನಂಬುತ್ತಿದ್ದರು. ಅಂದಿನ ಕಾಲದಲ್ಲಿ ಸಾಮ್ರಾಟರ ಪ್ರತಿಮೆಗಳನ್ನು ಭೂಮಿಯ ಮೇಲಿನ ದೇವರಂತೆ ಪೂಜಿಸಲಾಗುತ್ತಿತ್ತು. ಮೃತರನ್ನು ದೇವರಂತೆ ಗೌರವಿಸಿ, ಪ್ರಮುಖ ವ್ಯಕ್ತಿಗಳಿಗಾಗಿ ದೇವಾಲಯಗಳನ್ನು ಕಟ್ಟುತ್ತಿದ್ದರು.
ಕ್ಯಾಪಿಟೋಲೈನ್ ಹಿಲ್
ಕ್ಯಾಪಿಟೋಲೈನ್ ಹಿಲ್, ಶತಮಾನಗಳಿಂದ ರೋಮ್ ನಗರದ ಆಡಳಿತ ಕೇಂದ್ರವಾಗಿದೆ. ಕಟ್ಟಡಗಳಿಗೆ ಸಮತೋಲನದ ಪ್ರಮಾಣಗಳನ್ನು ನೀಡಿರುವುದರಿಂದ ಬಹಳ ಗಂಭೀರವಾಗಿ ಕಾಣುತ್ತದೆ. ಪುನರುಜ್ಜೀವನ ಯುಗದಲ್ಲಿ ಮೈಕೆಲ್ಯಾಂಜಲೋ ಇಲ್ಲಿ ಭವ್ಯವಾದ ಮೆಟ್ಟಿಲುಗಳನ್ನು ವಿನ್ಯಾಸಗೊಳಿಸಿದನು.
ಸಾಂತಾ ಮಾರಿಯಾ ಡೆಲ್ಲಾ ವಿಟ್ಟೋರಿಯಾ
ಈ ಚರ್ಚ್‌ನಲ್ಲಿ ಬರ್ನಿನಿಯ ಅತ್ಯಂತ ಪ್ರಸಿದ್ಧ ಶಿಲ್ಪ ಎಕ್ಸ್ಟಸಿಯಲ್ಲಿ ಕುಸಿಯುತ್ತಿರುವ ಸಂತ ತೆರೆಸಾ ಇದೆ. ವೇದಿಕೆಯಲ್ಲಿನ ನಕ್ಷತ್ರಾಕಾರದ ಕಿರಣಗಳ ಮಧ್ಯದಲ್ಲಿ, ವರ್ಜಿನ್ ಮೇರಿಯ ಐಕಾನ್ ಇದೆ.