Tuesday, September 15, 2026
Tuesday, September 15, 2026

ಪುಟ್ಟ ಮಕ್ಕಳಿಗೆ ಈಜು ಕಲಿಸುವ ಶಾಲೆ ಹಾಗೂ ಬಾಲ್ಯದ ನೆನಪು....

ವಿಶೇಷವೆಂದರೆ, ಇಲ್ಲಿ ಸ್ವಚ್ಛತೆಗೆ ನೀಡಿರುವ ಪ್ರಾಮುಖ್ಯತೆ. ಸ್ವಿಮ್ಮಿಂಗ್ ಪೂಲ್ ಬಳಿ ಹೋಗುವ ಮುನ್ನ ಎಲ್ಲರೂ ಪ್ರವೇಶದ್ವಾರದಲ್ಲಿ ಲಭ್ಯವಿರುವ, ಬಳಸಿ ಬಿಸಾಡಬಹುದಾದ ಶೂಗವಸುಗಳನ್ನು ಕಡ್ಡಾಯವಾಗಿ ಧರಿಸಿಯೇ ಹೋಗಬೇಕು. ಯಾರೂ, ಎಲ್ಲೂ, ಒಂದುಚೂರು ಕೊಳೆಮಾಡುವಂತಿಲ್ಲ, ಮಾಡುವುದು ಇಲ್ಲ!

  • ರವೀಂದ್ರ ಕೆ. ಆರ್.

ಮೊನ್ನೆ ಇಲ್ಲಿ ನಮ್ಮ ಮೊಮ್ಮಗಳು ವಾರಕ್ಕೊಮ್ಮೆ ಹೋಗುವ ಈಜು ಶಾಲೆಗೆ ಹೋಗಿದ್ದೆ. ಪುಟ್ಟ ಮಗುವಾದಾಗಿನಿಂದಾಗಲೇ ಬದುಕುಳಿಯುವ ಕೌಶಲ್ಯ (survival skills) ಕಲಿಸುವ ಸಲುವಾಗಿ, ಇಲ್ಲಿ ಪುಟ್ಟ ಮಕ್ಕಳಿಗೆಂದೇ ಪ್ರತ್ಯೇಕ ಈಜು ಕಲಿಸುವ ಅನೇಕ ಶಾಲೆಗಳಿವೆ.

ಪೋಷಕರೂ ಸಹಾ ಇದು ಕಡ್ಡಾಯವೆಂಬoತೆ ತಮ್ಮ ಮಕ್ಕಳಿಗೆ ಆರು ತಿಂಗಳು ತುಂಬಿದೊಡನೆ, ಈ ಈಜು ಶಾಲೆಗಳಿಗೆ ನೋಂದಣಿ ಮಾಡಿ, ಪ್ರತಿವಾರ ತಮ್ಮ ಮಕ್ಕಳಿಗೆ ಈಜು ಕಲಿಸಲು ಬರುತ್ತಾರೆ. ಈಗ ಸುಮಾರು ಎರಡು ವರ್ಷದ ನಮ್ಮ ಮೊಮ್ಮಗಳು ಐರಾ ಕೂಡಾ ಆರು ತಿಂಗಳ ಮಗುವಾದಾಗಿನಿಂದ ಪ್ರತಿ ಶನಿವಾರ ಬಲು ಸಡಗರದಿಂದ ಈಜು ಶಾಲೆಗೆ ಅಮ್ಮನೊಡನೆ ಹೋಗುತ್ತಿದ್ದಾಳೆ. ಅವಳು ಹೋಗುವ ಬ್ಯಾಚ್ ನಲ್ಲಿ ಸುಮಾರು ಎಲ್ಲ ಮಕ್ಕಳೂ ಎರಡು ವರ್ಷದ ಅಸುಪಾಸಿನವೇ ಆಗಿವೆ. ಅಲ್ಲಿ ನಮ್ಮ 'ಐರಾ' ರಾಜಕುಮಾರಿಗೆ, 'ಲೈರಾ' ಎಂಬ ಸ್ವಿಮ್ಮಿಂಗ್ ಪೂಲ್ ಫ್ರೆಂಡ್, ಮುದ್ದು ಬೊಂಬೆಯಂಥ ಇಂಗ್ಲಿಷ್ ರಾಜಕುಮಾರಿ ಸಹಾ ಇದ್ದಾಳೆ!

ಇದನ್ನೂ ಓದಿ : ನಿಮ್ಮ ಮಕ್ಕಳು ಪ್ರಾಣಿಪ್ರಿಯರಾಗಿದ್ದರೆ ಈ ಸ್ಥಳಗಳಿಗೆ ತಪ್ಪದೇ ಹೋಗಿ ಬನ್ನಿ..

ಇಲ್ಲಿ ಅರ್ಧಗಂಟೆ ಅವಧಿಯ ಒಂದೊಂದು ಬ್ಯಾಚ್ ನಲ್ಲಿ ಸುಮಾರು ಹತ್ತು ಮಕ್ಕಳನ್ನು ಅವರ ತಾಯಂದಿರು, ಕೆಲವೊಮ್ಮೆ ಅಪ್ಪಂದಿರ ಸುಪರ್ದಿನಲ್ಲಿ ನೀರಿಗಿಳಿಸುತ್ತಾರೆ. ಕೇವಲ ಅರ್ಧ ಅಡಿಯಿಂದ ಹಿಡಿದು ಐದು ಅಡಿಯಷ್ಟು ಮಾತ್ರಾ ಆಳ ಇರುವ ಸರ್ವ ಸುಸಜ್ಜಿತವಾದ, ಸಕಲ ಸoರಕ್ಷಣಾ ವ್ಯವಸ್ಥೆ ಇರುವ, ಸ್ಪಟಿಕದಷ್ಟು ಸ್ವಚ್ಛವಾದ ಬೆಚ್ಚನೆಯ ನೀರಿನ ಪುಟ್ಟ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಕ್ಕಳಿಗೆ ಹಲವು ಬಗೆಯ ಈಜು ಕಲಿಸುವ ಪರಿಕರಗಳೊಂದಿಗೆ ಈಜು ಕಲಿಸುತ್ತಾರೆ.

Untitled design - 2026-09-15T151104.618

ಸತತವಾಗಿ ನೀರಲ್ಲೇ ಇದ್ದು, ಒಂದಾದ ಮೇಲೊಂದು ಬ್ಯಾಚ್ ಗಳಲ್ಲಿ ಮಕ್ಕಳಿಗೆ ಈಜು ಕಲಿಸುವ ಇಲ್ಲಿನ ತರಬೇತುಗಾರ್ತಿ (Instructor) ಅಂತೂ ಉತ್ಸಾಹದ ಚಿಲುಮೆಯoತಿದ್ದಾರೆ. ಬಹುಶಃ ಅವರು ಮಕ್ಕಳಿಗೆ ಈಜು ಕಲಿಸುವ ಕೌಶಲ್ಯದಲ್ಲೇ ವಿಶೇಷ ಪರಿಣತಿ ಹೊಂದಿದ್ದಾರೆ ಅನಿಸುತ್ತೆ. ಅವರು ಹೇಳಿದಂತೆ ಕೇಳುತ್ತಾ, ಹಾಡುತ್ತಾ, ಚೀರುತ್ತಾ, ಈಜುತ್ತಾ, ತೇಲುತ್ತಾ, ಮುಳುಗು ಹಾಕುತ್ತಾ, ನಲಿಯುವ ಪುಟ್ಟ-ಪುಟ್ಟ ಮಕ್ಕಳ ಸಡಗರವಂತೂ ನೋಡಲು ಬಲು ಸೊಗಸು! ಅದರಲ್ಲೂ ಕೊನೆಯಲ್ಲಿ, ಚೌಕಾಕಾರದ ತೇಲುವ ಒಂದು ರಬ್ಬರ್ ಬೋರ್ಡ್ ಮೇಲೆ ಮಕ್ಕಳಿಗೆ ಹತ್ತಿಸಿ, ನಡೆಸಿ ಅಂಚಿಗೆ ತಂದು ನಿಲ್ಲಿಸಿ ನೀರಿಗೆ ಹಾರಿಸುವ (dive) ದೃಶ್ಯವಂತೂ ಬಲು ಚೇತೋಹಾರಿ.
ನಾನು ಅರ್ಧಗಂಟೆ ಹಾಗೇ ಆರಾಮವಾಗಿ ಕುಳಿತು ಮಕ್ಕಳ ಜಲ ಕ್ರೀಡೆ ಗಮನಿಸಿದೆ. ಆ ಬ್ಯಾಚ್ ನ ಮಕ್ಕಳಲ್ಲಿ ತನ್ನ ಅಪ್ಪನೊಡನೆ ನೀರಿಗಿಳಿದಿದ್ದಿ ಗುಂಗುರು ತಲೆ ಕೂದಲಿನ, ಸುಮಾರು ಎರಡು ವರ್ಷದ ಮುದ್ದಾದ ಆಫ್ರಿಕದ ಪುಟ್ಟ ಮಗು ಹಾಗೂ ಅಮ್ಮನ ಜತೆ ಬoದಿದ್ದ ಸುಮಾರು ಮೂರು ವರ್ಷದ ವಿಶೇಷ ಚೇತನ (ಬಹುಶಃ spastic ಇರಬಹುದು) ಆದರೂ ಮುದ್ದಾದ ಇಂಗ್ಲಿಷ್ ಮಗುವಿನ ಚಿತ್ರಗಳು ಅದೇಕೋ ಮನದಲ್ಲಿ ಗಾಢವಾಗಿ ಉಳಿದವು.
ಇದನ್ನೂ ಓದಿ : ಸ್ತ್ರೀಯರಿಗೆ ತಟ್ಟೆ ಪುರುಷರಿಗೆ ಕಪ್‌! ವಿಂಬಲ್ಡನ್‌ನಲ್ಲಿ ಇದೆಂಥ ತಾರತಮ್ಯ?

ಜತೆಗೆ ವಿಶೇಷವೆನಿಸಿದ್ದು, ಇಲ್ಲಿ ಸ್ವಚ್ಛತೆಗೆ ನೀಡಿರುವ ಪ್ರಾಮುಖ್ಯತೆ. ಸ್ವಿಮ್ಮಿಂಗ್ ಪೂಲ್ ಬಳಿ ಹೋಗುವ ಮುನ್ನ ಎಲ್ಲರೂ ಪ್ರವೇಶ ದ್ವಾರದಲ್ಲಿ ಲಭ್ಯವಿರುವ, ಬಳಸಿ ಬಿಸಾಡಬಹುದಾದ ಶೂಗವಸುಗಳನ್ನು (disposable Overshoes/ Shoe covers) ಕಡ್ಡಾಯವಾಗಿ ಧರಿಸಿಯೇ ಹೋಗಬೇಕು. ಯಾರೂ, ಎಲ್ಲೂ, ಒಂದು ಚೂರು ಕೊಳೆಮಾಡುವಂತಿಲ್ಲ, ಮಾಡುವುದು ಇಲ್ಲ. ನನ್ನ ಎರಡು ವರ್ಷದ ಮೊಮ್ಮಗಳು ಸಡಗರದಿಂದ ಈಜಾಡುವುದನ್ನು ಕಂಡಾಗ ನಾನು ಈವರೆಗೂ ಈಜು ಕಲಿಯದ ಕೊರತೆ ಮನದಲ್ಲಿ ಮೂಡಿತು.

Untitled design - 2026-09-15T151823.884

ನಮ್ಮ ಹಳ್ಳಿಯ ಬಾಲ್ಯದ ದಿನಗಳಲ್ಲಿ, ನಮ್ಮ ಚಿಲುಮೆ ಗದ್ದೆ ಬಯಲಿನಲ್ಲಿ ಊರಿನವರ ಅನುಕೂಲಕ್ಕಾಗಿ ನಮ್ಮ ಅಜ್ಜ ಸಿಮೆಂಟ್ ಕಟ್ಟೆ ಹಾಕಿ ಕಟ್ಟಿಸಿದ್ದ ಎರಡು ಚೌಕಾಕಾರದ ಸ್ವಿಮ್ಮಿಂಗ್ ಪೂಲ್ ಗಳತಂಥ, ಅಪಾರ ನೀರಿನ ಒರತೆ ( ಬುಗ್ಗೆ) ಇದ್ದ ಕಟ್ಟೆಗಳಿದ್ದವು. ನನ್ನ ಓರಗೆಯ ಹಾಗೂ ನನಗಿಂತಲೂ ಹಿರಿಯ ಅನೇಕ ಹುಡುಗರು, ಸೋರೆ ಬುರುಡೆಗಳನ್ನು ಹಿಡಿದೋ, ಬಾಳೆ ದಿಂಡುಗಳನ್ನು ಹಿಡಿದೋ, ಗಾಳಿ ತುಂಬಿದ ಲಾರಿ ಟೈರಿನ ಟ್ಯೂಬ್ ಗಳನ್ನು ಹಿಡಿದೋ ಅಥವಾ ಈಜು ಕಲಿತ ದೊಡ್ಡವರ ಸಹಾಯದಿಂದಲೋ, ಈಜು ಕಲಿತುಬಿಟ್ಟರು. ನಾನು ಅದೇಕೋ ಕಲಿಯಲೇ ಇಲ್ಲ.

ಅದರಲ್ಲೂ ನಮ್ಮೂರಿನ ಕೆಲವು ದೊಡ್ಡ ಹುಡುಗರು, ನನ್ನ ವಯಸ್ಸಿನ ಸಣ್ಣ ಹುಡುಗರಿಗೆ ಈಜು ಕಲಿಸುತ್ತೇವೆ ಎಂದು ಎರಡೂ ಬದಿ ಹಿಡಿದುಕೊಂಡು ನೀರಿಗಿಳಿಸಿ, ತೇಲಿಸಿ, ಕೈ ಕಾಲು ಬಡಿಯಲು ಹೇಳಿ ಈಜು ಕಲಿಸುತ್ತಿದ್ದರು. ಆದರೆ, ಕೊನೆಯಲ್ಲಿ ಮೆಲ್ಲನೆ ಅವರ ಚಡ್ಡಿ ಬಿಚ್ಚಿ ಕಟ್ಟೆಯ ಮೇಲೆ ಎಸೆದುಬಿಡುತ್ತಿದ್ದರು. ಅವರು ಬೆತ್ತಲೆಯಾಗಿ ಮೇಲೆ ಹತ್ತಿ ಬಂದು ಚಡ್ಡಿಯನ್ನು ಹುಡುಕಿ ಹಾಕಿ ಕೊಳ್ಳಬೇಕಾಗುತ್ತಿತ್ತು! ಹೀಗೆ ಬೆತ್ತಲಾಗುವ ಭಯಕ್ಕೋ, ಅಥವಾ ನೀರಿನಲ್ಲಿ ಮುಳುಗವ ಭಯಕ್ಕೋ ಏನೋ ನಾನು ಈಜು ಕಲಿಯಲೇ ಇಲ್ಲ. ಆದರೆ, ನನ್ನ ಓರಗೆಯವರಲ್ಲಿ ಕೆಲವರು ಭಂಡ ಧೈರ್ಯಶಾಲಿಗಳಿದ್ದರು. ಅವರು ಮಾತ್ರಾ ಹೀಗೆ ಚಡ್ಡಿ ಕಳೆದರೂ ಸ್ವಲ್ಪವೂ ವಿಚಲಿತರಾಗದೇ, ಏನೂ ಆಗದವರಂತೆ ನಿರಾಳ ನಿರ್ವಾಣದಲ್ಲಿ ನೀರಿನಿಂದ ಮೇಲೆ ಬಂದು ಚಡ್ಡಿ ಹುಡುಕಿ ಹಾಕಿಕೊಳ್ಳುತ್ತಿದ್ದರು. ಅಂಥವರು ಈಜು ಕಲಿತುಬಿಟ್ಟರು...!

ಇದನ್ನೂ ಓದಿ : ಪುಟಾಣಿಗಳೇ.. ಹಿಮಾಲಯ ಏರಿ ಬನ್ನಿ!

ಮುಂದೆ ಅನೇಕ ವರ್ಷಗಳ ನಂತರ ಕೃಷಿ ಕಾಲೇಜಿನಲ್ಲಿದ್ದಾಗ, ಗ್ರಾಮೀಣ ಹಿನ್ನೆಲೆಯ ಹಾಗೂ ಈಜು ಬಲ್ಲ ಅನೇಕ ಗೆಳೆಯರಿದ್ದು, ನೀನೇಕೆ ಈಜು ಕಲಿತಿಲ್ಲ ಎಂದು ಕೇಳುತ್ತಿದ್ದರು. ಆಗೆಲ್ಲಾ , ‘ಒಬ್ಬನೇ ಮಗ ಈಜಲು ಹೋಗಿ, ಮೇಲಕ್ಕೆ ಹೋಗಿ ಬಿಟ್ಟರೆ ಕಷ್ಟ ಅಂತ, ಈಜು ಬರುವವವರೆಗೂ ನೀರಿಗಿಳಿಯಬೇಡ ಎಂದು ನಮ್ಮಪ್ಪ ಅಮ್ಮ ಹೇಳಿದ್ದರು ಮಾರಾಯಾ, ಹಾಗಾಗಿ ಕಲಿಯಲಿಲ್ಲ" ಎಂದು ಚಟಾಕಿ ಹಾರಿಸುತ್ತಿದ್ದೆ!

ನೀರಿನಲ್ಲಿ ಈಜಲು ಬಾರದೇ ಹೋದರೂ, ಭವ ಸಾಗರದಲ್ಲಿ ಈಜಿ ಸ್ವಲ್ಪ ಬೆಂಡಾಗಿರುವ ನನ್ನ ಕಾಯದ 68+ ವಯಸ್ಸಿನಲ್ಲಿ, ಇಂಗ್ಲೆಂಡ್ ನ ಈ ಮಕ್ಕಳ ಈಜು ಶಾಲೆಯಲ್ಲಿ ಕುಳಿತು, ಒಂದಕ್ಕಿಂತ ಒಂದು ಮುದ್ದಾದ ಪುಟ್ಟ ಮಕ್ಕಳು ಈಜುವ ಸಡಗರ ಕಂಡಾಗ ಮನಸು ನನ್ನ ಮಲೆನಾಡ ಹಳ್ಳಿಯ ಬಾಲ್ಯದ ದಿನಗಳ ನೆನಪಿಗೆ ಹಾರುವ ಜತೆಗೆ, ಹೊಸ ಹರುಷಕ್ಕೊಂದು ನೆಪವು ಸಿಕ್ಕಂತೆ ಪ್ರಫುಲ್ಲವಾಯಿತು.

ಇಂಥಾ ಮಕ್ಕಳ ಸಡಗರದ ಸೊಬಗಿನ ದೃಶ್ಯಗಳನ್ನು ನನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ತುಂಬಾ ಮನಸ್ಸಾಯಿತು. ಆದರೆ, ಇಲ್ಲಿ ಮಕ್ಕಳೊಡನೆ ಬರುವ ತಾಯಂದಿರೆಲ್ಲರೂ ಈಜು ತೊಡುಗೆ (Swim suit) ತೊಟ್ಟು ನೀರಿಗಿಳಿಯುವ ಕಾರಣ, ಅವರ ಖಾಸಗಿತನಕ್ಕೆ ಗೌರವ ಕೊಡುವ ಸಲುವಾಗಿ, ಫೊಟೋಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಆದ್ದರಿಂದ, ನಾನು ಚಿತ್ರಗಳನ್ನು ಸೆರೆ ಹಿಡಿಯಲಿಲ್ಲ. ನಾನು ಕೆಳಗೆ ಕಾಣಿಸಿರುವ ಚಿತ್ರಗಳು, ಗೂಗಲ್ ಕೃಪೆ. ನಾನು ಕಂಡ ದೃಶ್ಯದ ತದ್ರೂಪದಂತಿವೆ.
ಎಲ್ಲರೂ ಮಕ್ಕಳಿಗೆ ಈಜು ಕಲಿಸಬೇಕು. ಈಜು ಬಲ್ಲವಗೆ ಮುಳುಗುವ ಭಯವಿಲ್ಲ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...