ಈ ಏರ್‌ಲೈನ್ಸ್ ದಶಕಗಳ ವೈಬ್‌ಗೆ ಕರೆದುಕೊಂಡು ಹೋಗುತ್ತೆ!
ಎಲ್ಲ ಎಸಿ ಕಂಟ್ರೋಲ್‌ನಲ್ಲಿ ಕ್ಯೂರೆಟೆಡ್ ಮೆನುವಿದ್ದು, ಫ್ಯಾನ್ಸಿಯಾಗಿರುವ ಕೆಫೆಗಳು ಎಷ್ಟಿದ್ದಾವೆ? ಕಲಾತ್ಮಕ ಕಾಫಿಗಳು, ಸುಷಿಯುಕ್ತ ಮೆನುಗಳು ತುಂಬಿದ ರೆಸ್ಟೋರೆಂಟ್‌ಗಳು ಬೆಂಗಳೂರು ನಗರದ ಬೀದಿಬೀದಿಯಲ್ಲಿದೆ. ಆದರೆ, ವಿಂಟೇಜ್ ಲುಕ್‌ಹೊಂದಿರುವ ಕೆಲವೇ ಕೆಲವು ಹೊಟೇಲ್‌ಗಳಲ್ಲಿ ಖೋಷಿಸ್, ಪೆಕೋಸ್, ಶ್ರೀ ಗೋವಿಂದ ರಾವ್ ಮಿಲಿಟರಿ ಹೊಟೇಲ್‌ಗಳಿವೆ. ಅವುಗಳಿಗೆಲ್ಲ ಒಂದು ಕಲ್ಟ್ ಫಾಲೋವರ್ಸ್ ಇದ್ದಾರೆ.
ಕೆಲವೊಂದು ಹೊಟೇಲ್‌ಗಳು ಹೊಟ್ಟೆಯನ್ನಷ್ಟೇ ತುಂಬಿಸದೆ, ಹಲವಾರು ನೆನಪುಗಳನ್ನು ನಮ್ಮ ಮನಸಿನೊಳಗೆ ಉಳಿಸುತ್ತದೆ. ಗರ್ಲ್ ಫ್ರೆಂಡ್ ಜತೆಗೆ ಮೊದಲ ಬಾರಿ ಡೇಟ್‌ಗೆ ಹೋದ ಹೊಟೇಲ್, ಮದುವೆಯಾದ ಹೊಸತರಲ್ಲಿ ಹೋದ ಹೊಟೇಲ್, ಊರು ಬಿಟ್ಟು ಹೋಗುತ್ತಿರುವ ಸ್ನೇಹಿತನನ್ನು ಮಾತನಾಡಿಸಲು, ಸ್ನೇಹಿತರೆಲ್ಲ ಕುಳಿತು ಹರಟೆ ಹೊಡೆಯುವುದು ಹೀಗೆ ಕೆಲವೊಮ್ಮೆ ನೆನಪಿನಾಳದಲ್ಲಿ ಹೊಟೇಲ್ ಸಹ ತನ್ನದೊಂದು ಪುಟ್ಟ ಮನೆ ಮಾಡಿಕೊಂಡಿರುತ್ತದೆ. ಇತ್ತೀಚಿನ ಕೆಫೆ, ರೆಸ್ತುರಾಗಳ ಕಾಲದಲ್ಲೂ ಬೆಂಗಳೂರಿನ ಕೆಲವು ಹೊಟೇಲ್‌ಗಳು ದಶಕಗಳಿಂದ ನಡೆಸಿಕೊಂಡು ಬರುತ್ತಾ, ನಗರದ ಜನರ ಜೀವನದಲ್ಲಿ ಯಾವುದೋ ಕ್ಷಣವನ್ನು ಜಾಲಿಯಾಗಿ ಕಳೆಯಬೇಕು ಅನ್ನುವಹಾಗೆ ಮಾಡುತ್ತದೆ. ಅಂಥದ್ದೇ ಹೊಟೇಲ್ ಬಗ್ಗೆ ಇಲ್ಲಿ ಬರೆಯುತ್ತಿರುವುದು. ಅದೇ ಬೆಂಗಳೂರಿನ ಏರ್‌ಲೈನ್ಸ್ ಹೊಟೇಲ್!
ಇದನ್ನೂ ಓದಿ: ಗೋ ನೇಟಿವ್ ಗೋ!
ಒಂದು ದೊಡ್ಡ ಆಲದಮರ, ದೊಡ್ಡ ಕಾಂಪೌಂಡ್. ಗದ್ದಲ ಗಲಾಟೆಗಳಿದ್ದರೂ ಏನೋ ಒಂಥರ ಮೌನ. ಆರಾಮವಾಗಿ ಬರುವ ವೇಟರ್‌ಗಳು, ಯಾರಲ್ಲೂ ಬೇಜಾರು ಸಿಟ್ಟುಗಳಿಲ್ಲ. ಎಲ್ಲರೂ ಜೀರಿಗೆಯ ನೀರನ್ನು ಕುಡಿಯುತ್ತಾ, ಗರಿಗರಿ ಮಸಾಲೆದೋಸೆಗಳನ್ನು ಮೆಲ್ಲುತ್ತಾ, ಅವರೊಟ್ಟಿಗೆ ಬಂದವರ ಜತೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇನ್ನೊಬ್ಬರು ತಮ್ಮ ಬ್ಯುಸಿನೆಸ್ ಡೀಲ್ ಮುಗಿಸಲು, ಅವರ ಪಾರ್ಟ್ನರ್ ಜತೆ ಚರ್ಚೆ ಮಾಡುತ್ತಿರುತ್ತಾರೆ. ಕೆಲವು ರಾಜಕಾರಣಿಗಳು ಪಕ್ಷದ ಆಗುಹೋಗುಗಳ ಬಗ್ಗೆ, ಮುಂದೆ ಏನೇನು ಮಾಡಬೇಕು ಎನ್ನುವ ಆಲೋಚನೆಯಲ್ಲೇ ತಾವಿದ್ದರೆ, ಇಡೀ ಜಗತ್ತಿನ ಪರಿವೇ ನನಗಿಲ್ಲ ಎಂಬಂತೆ ಆರ್ಟಿಸ್ಟ್‌ಗಳು ಆಕಾಶವನ್ನೋ ಆಲದಮರವನ್ನೋ ನೋಡುತ್ತಾ, ಉದ್ದ ಗ್ಲಾಸಿನಲ್ಲಿ ಹಬೆಯಾಡುವ ಕಾಫಿ ಹೀರುತ್ತಾ ಏನನ್ನೋ ಕಳೆದುಕೊಂಡವರ ರೀತಿ ಕುಳಿತಿರುತ್ತಾರೆ. ಇನ್ನೂ ಬೆಳಗಿನ ಜಾಗಿಂಗ್ ಮುಗಿಸಿ, ತಮ್ಮ ದಣಿವನ್ನು ನಿವಾರಿಸಿಕೊಳ್ಳುವವರು, ಆಫೀಸ್‌ಗೆ ಹೋಗೋಕೆ ಇನ್ನೂ ಸಮಯವಿದೆ ಅಂತ ಆರಾಮವಾಗಿ ತಿನ್ನುವವರು ಇದು ಏರ್‌ಲೈನ್ಸ್ ಹೊಟೇಲ್‌ನ ಚಿತ್ರಣ.

ಬೆಂಗಳೂರಿನ ಬೇರೆಲ್ಲ ಹೊಟೇಲ್‌ಗಿಂತ ಏರ್‌ಲೈನ್ ಹೊಟೇಲ್ ಭಿನ್ನ. ಏಕೆಂದರೆ, ಎಲ್ಲ ಹೊಟೇಲ್‌ಗಳು ಗೋಡೆಗಳ ನಡುವೆಯಿದ್ದರೆ, ಇದು ಹೆಚ್ಚೂಕಡಿಮೆ 1.5 ಎಕರೆ ಜಾಗದಲ್ಲಿ ಇದೆ. ಮೇಲೆ ಸೂರು ಕೂಡ ಇಲ್ಲ, ಬದಲಿಗೆ ಆ ದೊಡ್ಡ ಆಲದ ಮರದ ನೆರಳು ಎಲ್ಲರಿಗೂ ತಂಪನ್ನು ಕೊಡುವುದು. ಇದು ತುಂಬಾ ಹೈಫೈ ಥರ ಕಾಣುವುದೂ ಇಲ್ಲ. ಆದರೆ, ಬೆಂಗಳೂರು ನಗರದ ಮಧ್ಯದಲ್ಲಿ ಅಷ್ಟೊಂದು ದೊಡ್ಡ ಜಾಗದಲ್ಲಿ ಸುತ್ತಮುತ್ತ ಹಲವಾರು ಗಿಡಮರಗಳಿಂದ ತುಂಬಿರುವ ಹೊಟೇಲ್ ಅಂದರೆ ಇದೊಂದೇ ಎಂದೂ ಹೇಳಬಹುದು. ಮತ್ತೆ ಈಗಿನ ಕಾಲದಲ್ಲಿ ಇದೊಂದೇ ಡ್ರೈವ್ ಇನ್ ಹೊಟೇಲ್. ಅಲ್ಲಿಗೆ ಕಾರು ತಗೊಂಡು ಹೋದರೆ, ಪಾರ್ಕಿಂಗ್‌ನ ಬಗ್ಗೆ ಜಾಸ್ತಿ ಯೋಚನೆಯೇ ಮಾಡದೆ ಕಾರ್ ಪಾರ್ಕ್ ಮಾಡಿ, ಸೀದಾ ಟೇಬಲ್‌ಗಳ ಕಡೆಗೆ ಹೋಗಬಹುದು.
ಭಾರತದ ಮೊದಲ ಸ್ಟಾರ್‌ಬಕ್ಸ್!
ಹೌದು, ಇನ್ನೂ ಸ್ಟಾರ್ ಬಕ್ಸ್, ಕೆಫೆಗಳಂಥ ಟ್ರೆಂಡ್‌ಗಳು ಶುರುವಾಗುವ ಮೊದಲೇ ಇದು ಸ್ಟಾರ್‌ಬಕ್ಸ್ ಆಗಿತ್ತು. ಆಗಿನ್ನೂ ಮದುವೆ ಫಿಕ್ಸ್ ಆದವರ ಮಾತುಕತೆಗೂ ಇದು ವೇದಿಕೆಯಾಗಿತ್ತು. ಹೀಗೆ ಇದೇ ಹೊಟೇಲ್‌ನಲ್ಲಿ ಮೊದಲ ಭೇಟಿ ಮಾಡಿ, ಡೇಟ್ ಮಾಡಿ, ಮದುವೆ ಮಾಡಿಕೊಂಡು, ತಮ್ಮ ಮಕ್ಕಳನ್ನೂ, ಮೊಮ್ಮಕ್ಕಳನ್ನೂ ಇಲ್ಲಿಗೆ ಕರೆದುಕೊಂಡು ಬಂದ ಎಷ್ಟೋ ಉದಾಹರಣೆಗಳಿದ್ದಾವೆ. ಏರ್‌ಲೈನ್ಸ್ ಹೊಟೇಲ್ ಎಷ್ಟೊಂದು ಹವಾ ಮಾಡಿತ್ತು ಎಂದರೆ, ಚಿತ್ರಕಲಾ ಮಾಂತ್ರಿಕ ಎಂ. ಎಫ್. ಹುಸ್ಸೇನ್ ಇಲ್ಲಿಗೆ ಬಂದು, ಮರವನ್ನೇ ನೋಡುತ್ತಾ ಕುಳಿತುಕೊಳ್ಳುತ್ತಿದ್ದರು. ಅದೂ ಬೆಳಗ್ಗೆ ಬಂದರೆ, ಸಂಜೆಯವರೆಗೂ ಅವರದ್ದು ಅದೇ ಕೆಲಸ, ಅವರನ್ನು ಯಾರೂ ಡಿಸ್ಟರ್ಬ್ ಸಹ ಮಾಡುತ್ತಿರಲಿಲ್ಲ. ಹಾಗೆ ಬೆಂಗಳೂರಿನಲ್ಲಿ ಒಬೆರಾಯ್ ಹೊಟೇಲ್‌ನ ನಿರ್ಮಾಣವಾಗುತ್ತಿದ್ದ ಸಮಯದಲ್ಲಿ ಒಬೆರಾಯ್ ಸಂಸ್ಥೆಯ ಚೇರ್‌ಮನ್ ಆಗಿದ್ದ ಪೃಥ್ವಿರಾಜ ಸಿಂಗ್ ಒಬೆರಾಯ್ ಸಹ ಇಲ್ಲಿಗೆ ಪ್ರತಿದಿನ ಬಂದು ತಮ್ಮ ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಹೋಗುತ್ತಿದ್ದರು. ರಾಜೇಂದ್ರ ಸಿಂಗ್ ಬಾಬು, ಹಿರಿಯ ನಟಿ ಕಲ್ಪನಾ, ಡಾ. ರಾಜ್‌ಕುಮಾರ್, ಚಂದ್ರಸ್ವಾಮಿ ಅವರಿಗೆಲ್ಲ ಇದು ʼತಿಂಡಿಮನೆʼಯಾಗಿತ್ತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಗೂ ಇದು ಚರ್ಚಾಸ್ಥಳವಾಗಿತ್ತು. ಹಾಗೇ, ಬರೀ ಖ್ಯಾತಿಯನ್ನು ಹೊಂದಿದವರಿಗಷ್ಟೇ ಅಲ್ಲ, ಹಾಜಿ ಮಸ್ತಾನಿ ಅಂಥ ಕುಖ್ಯಾತರಿಗೂ ಇದು ಫೆವರೀಟ್ ಸ್ಥಳ ಆಗಿತ್ತು. ಮಸ್ತಾನಿ ಇಲ್ಲಿ ತಿಂಗಳುಗಟ್ಟಲೆ ಉಳಿದು ಹೋಗುತ್ತಿದ್ದ.

ಇದು ಏರ್‌ಲೈನ್ ಹೇಗೆ?
1965ರಲ್ಲಿ ಎಸ್.ಎನ್. ರಾವ್ ಅವರು ಮೈಸೂರಿನಲ್ಲಿ ಸುಜಾತ ಹೆಸರಿನ ಇಂಥದ್ದೇ ಹೊಟೇಲ್‌ನ್ನು ಶುರುಮಾಡಿದ್ದರು. ಅದಾದ ಮೇಲೆ ಬೆಳೆಯುತ್ತಿದ್ದ ಬೆಂಗಳೂರು ನಗರವನ್ನು ಗಮನಿಸಿ, 1968ರಲ್ಲಿ ಸುಜಾತ ಹೊಟೇಲ್‌ನಂಥದ್ದೇ ಹೊಟೇಲ್ ಇಲ್ಲಿಯೂ ಶುರುಮಾಡಿದರು. ಇದರ ನಾಮಕರಣ ಬಗ್ಗೆ ಈಗಿನ ಮಾಲೀಕರಾದ ದಿವಾಕರ್ ರಾವ್ ಅವರನ್ನು ಕೇಳಿದರೆ, ‘ಆಗ ಎಚ್‌ಎಎಲ್ ಬೆಂಗಳೂರಿಗೆ ಬಂದಿತ್ತು, ಮತ್ತು ವಿಮಾನ ಹಾರಾಟ ಆಗಿನ್ನೂ ಗರಿಗೆದರಿತ್ತು. ಈ ಹೊಟೇಲ್‌ನ ರೋಡಿನಲ್ಲಿ ಹೊಸದಾಗಿ ಟಿಕೆಟ್ ಬುಕ್ ಮಾಡುವ ಕಚೇರಿ ಇತ್ತು. ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಇದಕ್ಕೆ ಏರ್‌ಲೈನ್ಸ್ ಹೊಟೇಲ್ ಎಂದು ನಾಮಕರಣ ಮಾಡಿದರುʼ ಎಂದು ಹೇಳುತ್ತಾರೆ.
ಆಗ 2 ಎಕರೆ ಜಾಗದಲ್ಲಿ ಶುರುವಾಗಿ, ನಂತರ ಸ್ವಲ್ಪ ಜಾಗವನ್ನು ಅದರ ಮಾಲೀಕರು ಅಲ್ಲಿ ಕಮರ್ಷಿಯಲ್ ಬಿಲ್ಡಿಂಗ್ ಅನ್ನು ಕಟ್ಟಿಸಿದ ಮೇಲೆ ಈಗ 1.5 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಈ ಹೊಟೇಲ್ ಇದೆ. ಮೊದಲೆಲ್ಲ ಈ ಹೊಟೇಲ್‌ನ ಜಾಗಕ್ಕೆ ಎಷ್ಟು ಬಾಡಿಗೆ ಕೊಡುತ್ತಿದ್ದರು ಎನ್ನುವುದರ ಬಗ್ಗೆ ದಿವಾಕರ್ ಅವರಿಗೆ ಗೊತ್ತಿಲ್ಲ. ಆದರೆ, 1970ರಲ್ಲಿ 20ಸಾವಿರ ರುಪಾಯಿಗಳನ್ನು ಬಾಡಿಗೆ ಕೊಡುತ್ತಿದ್ದರಂತೆ. ಆಗ ಒಂದು ರುಪಾಯಿಗೆ ಇದ್ದ ಮಸಾಲ ದೋಸೆಗೆ ಈಗ 110ರು. ಮೊದಲೆಲ್ಲ ಇಡ್ಲಿ, ದೋಸೆ, ಪುರಿ, ಕಾಫಿ, ಟೀಗಷ್ಟೇ ಸಾಮಾನ್ಯ ಸೌತ್ ಇಂಡಿಯನ್ ಹೊಟೇಲ್‌ನ ಮೆನುವಿಗಷ್ಟೇ ಸೀಮಿತವಾಗಿದ್ದ ಐಟೆಮ್‌ಗಳು ಸಿಗುತ್ತವೆ. ಈಗ ಜಿಲೇಬಿ, ಕೇಸರಿಬಾತ್, ಬಾಸುಂಧಿ, ಪಡ್ಡು, ವಡೆ, ಪಲಾವ್, ಪೊಂಗಲ್, ಬಿಸಿಬೇಳೆ ಭಾತ್, ಬೋಂಡಾ, ಬೆಣ್ಣೆ ಪ್ಲೇನ್ ದೋಸೆ, ಉತ್ತಪ್ಪ, ಅಕ್ಕಿರೊಟ್ಟಿ, ದಕ್ಷಿಣ ಭಾರತ ಊಟ, ಉತ್ತರ ಭಾರತ ಥಾಲಿಗಳ ಜತೆಗೆ ಪಾನಿಪುರಿ, ಮಸಾಲಾಪುರಿಗಳಂಥ ಪುರಿಗಳ ಜತೆಗೂ ಸಲಾಡ್‌ಗಳು, ಸೂಪ್‌ಗಳು, ಗ್ರೇವಿಗಳು, ಚೈನೀಸ್, ತಂದೂರ್ ಹೀಗೆ ಹಲವಾರು ಬಗೆಯ ಭೋಜನ ಇಲ್ಲಿ ಸಿಗುತ್ತದೆ.

ಇಲ್ಲಿ ಮಂಗಳೂರು ಶೈಲಿಯಲ್ಲೇ ಅಡುಗೆ ಮಾಡುವುದು. ಮತ್ತೆ ಪ್ರತಿದಿನ ಎಲ್ಲ ಪದಾರ್ಥಗಳ ರುಚಿಯನ್ನು ನಾನೇ ಚೆಕ್ ಮಾಡುತ್ತೇನೆ. ಇಲ್ಲಿ 35 ವರ್ಷಗಳಿಂದ ಅಡುಗೆ ಮಾಡುತ್ತಿರುವವರೂ ಇದ್ದಾರೆ. ಅದರ ಜತೆಗೆ ಹೊಸತಾಗಿ ಬಂದ ಬಾಣಸಿಗರೂ ಇದ್ದಾರೆ.
-ದಿವಾಕರ್ ರಾವ್, ಮಾಲೀಕ, ಏರ್‌ಲೈನ್ಸ್ ಹೊಟೇಲ್