ʻಜಿರಾಫ್ ಮ್ಯಾನರ್ʼ ಇದು ವಿಶ್ವದ ಅತ್ಯಂತ ವಿಶಿಷ್ಟವಾದ ಹೊಟೇಲ್‌ಗಳಲ್ಲಿ ಒಂದು. ಇಲ್ಲಿ ವಾಸಿಸುವ ಅತಿಥಿಗಳಿಗೆ ಸಾಮಾನ್ಯ ಹೊಟೇಲ್ ಅಥವ ರೆಸಾರ್ಟ್‌ ಅನುಭವವಷ್ಟೇ ಅಲ್ಲದೆ ಅಳಿವಿನಂಚಿನಲ್ಲಿರುವ ರಾಥ್ಸ್ಚೈಲ್ಡ್ ಜಿರಾಫೆಗಳನ್ನು ಸಮೀಪದಿಂದ ಕಾಣಲು, ಅವುಗಳ ದಿನಚರಿಯನ್ನು ಗಮನಿಸುವುದಷ್ಟೇ ಅಲ್ಲದೆ ಮುಕ್ತವಾಗಿ ಬೆರೆಯುವ ಅವಕಾಶ ಲಭ್ಯವಾಗುತ್ತದೆ. ಪ್ರಕೃತಿ, ವನ್ಯಜೀವಿ ಸಂರಕ್ಷಣೆಯ ಜತೆಗೆ ಐಶಾರಾಮಿ ಪ್ರವಾಸೋದ್ಯಮದ ಅನುಭವ ಪಡೆಯಲು ಇದು ಸೂಕ್ತ ತಾಣ.

ಇದನ್ನೂ ಓದಿ: ಕೇವ್ ಎನ್ ಡೈನ್ ಎಂಬ ಗವಿಯಲ್ಲಿ ಸವಿಯೂಟ

ಅಷ್ಟಕ್ಕೂʻಜಿರಾಫ್ ಮ್ಯಾನರ್ʼ ಎಂಬ ಪರಿಕಲ್ಪನೆ ಹುಟ್ಟಿಕೊಂಡಿರುವುದು ಹೇಗೆ ಗೊತ್ತಾ? 1932ನೆಯ ಇಸವಿಯಲ್ಲಿ ನೈರೋಬಿಯ ಲಂಗಾಟಾ ಪ್ರದೇಶದಲ್ಲಿರುವ ಹಸಿರು ಕಾಡುಗಳಿಂದ ಆವರಿಸಲ್ಪಟ್ಟ ಸುಮಾರು 140 ಎಕರೆ ಪ್ರದೇಶದಲ್ಲಿ ಈ ಐತಿಹಾಸಿಕ ಮನೆಯ ನಿರ್ಮಾಣವಾಯಿತು. ಆರಂಭದಲ್ಲಿ ಸ್ಕಾಟ್ಲೆಂಡ್ ಶೈಲಿಯ ಮನೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿತ್ತು. ಬೆಟ್ಟಿ ಲೆಸ್ಲಿ-ಮೆಲ್ವಿಲ್ ಮತ್ತು ಅವರ ಪತಿ ಜಾಕ್ ಎಂಬವರು 1974ರಲ್ಲಿ ಈ ಮನೆಯನ್ನು ಖರೀದಿಸಿದರು. ಅಲ್ಲದೆ ಅಪಾಯದಲ್ಲಿದ್ದ ರಾಥ್ಸ್ಚೈಲ್ಡ್ ಜಿರಾಫೆಗಳನ್ನು ಸಂರಕ್ಷಣೆ ಮಾಡಿ, ಅವುಗಳ ಆಶ್ರಯತಾಣವನ್ನಾಗಿಸಿ ಬಳಕೆ ಮಾಡಲು ಪ್ರಾರಂಭಿಸಿದರು. ಅವರ ಈ ಪ್ರಯತ್ನದ ಫಲವಾಗಿ ಜಿರಾಫೆಗಳ ಸಂರಕ್ಷಣಾ ಕಾರ್ಯವು ಭರದಿಂದ ಸಾಗಿ, ಅವುಗಳ ಸಂಖ್ಯೆಯಲ್ಲಿ ಏರಿಕೆ ಕಂಡಿತು. ಪ್ರಾರಂಭದಲ್ಲಿ ಇಲ್ಲಿದ್ದ ಸ್ಕಾಟ್ಲೆಂಡ್ ಶೈಲಿಯ ಮನೆಯನ್ನು ಇವರೇ ಬಳಸುತ್ತಿದ್ದರಾದರೂ ವರ್ಷಗಳ ನಂತರ ಇದನ್ನು ಲಕ್ಸುರಿ ಬೊಟಿಕ್ ಹೊಟೇಲ್ ಆಗಿ ಪರಿವರ್ತಿಸಲಾಯಿತು. ಇಲ್ಲಿ ಅತಿಥಿಗಳಿಗೆ ಪ್ರಶಾಂತವಾದ ವಾತಾವರಣದ ಜತೆಗೆ ಆರಾಮದಾಯಕ ವಾಸ್ತವ್ಯದ ಅನುಭವ ಕಲ್ಪಿಸಲಾಯಿತು.

New Project (42)

ಜಿರಾಫೆಗಳು ಸಾರ್..

ಈ ಹೊಟೇಲ್‌ನ ಪ್ರಮುಖ ಆಕರ್ಷಣೆ ಎಂದರೆ ಜಿರಾಫೆಗಳು. ಅವುಗಳು ಹೊಟೇಲ್ ಆವರಣದಲ್ಲಿ ಮುಕ್ತವಾಗಿ ಸಂಚರಿಸುತ್ತವೆ. ಬೆಳಗಿನ ಉಪಾಹಾರದ ಸಮಯದಲ್ಲಿ ಕಿಟಕಿಗಳ ಮೂಲಕ ತಲೆ ಹಾಕಿ ಆಹಾರವನ್ನು ಸೇವಿಸುತ್ತವೆ. ಅತಿಥಿಗಳನ್ನು ಕಂಡರಂತೂ ಮುಕ್ತವಾಗಿ ಬೆರೆಯುವ ಈ ಉದ್ದ ಕೊರಳಿನ ಪ್ರಾಣಿಗಳ ತುಂಟಾಟವನ್ನು ನೋಡುವುದೇ ಖುಷಿಯ ವಿಚಾರ. ಬಂದ ಅತಿಥಿಗಳು ತಾವೇ ಜಿರಾಫ್‌ಗಳಿಗೆ ಆಹಾರ ನೀಡಬಹುದು. ಫೊಟೋ ತೆಗೆದುಕೊಳ್ಳುವುದಷ್ಟೇ ಅಲ್ಲದೆ ʻಜಿರಾಫೆ ಕಿಸ್ʼಗಾಗಿ ಕಾಯುವವರು ಇನ್ನೂ ಅನೇಕರಿದ್ದಾರೆ. ಮೃಗಾಲಯದಲ್ಲೂ ಜಿರಾಫೆಗಳನ್ನು ನೋಡುವ ಅವಕಾಶ ಸಿಗುತ್ತದೆಯಾದರೂ ರೆಸಾರ್ಟ್‌ ನಲ್ಲಿ ಇಂಥ ಸೌಕರ್ಯಗಳು ವಿಶ್ವದಲ್ಲಿ ಬಹಳ ಅಪರೂಪವಾಗಿದೆ.

ವಾಸ್ತವ್ಯ- ಸೌಲಭ್ಯ

ಜಿರಾಫ್ ಮ್ಯಾನರ್‌ ವಿಶ್ವಪ್ರಸಿದ್ಧ ಐಷಾರಾಮಿ ಬೊಟಿಕ್ ಹೊಟೇಲ್ ಆಗಿದ್ದು, ಬರುವ ದೇಶ ವಿದೇಶಗಳ ಅತಿಥಿಗಳಿಗೆ ಸೀಮಿತವಾದ 12 ಕೊಠಡಿಗಳು ಇಲ್ಲಿವೆ. ಹಳೆಯ ಮ್ಯಾನರ್ ಹಾಗೂ ಗಾರ್ಡನ್ ಮ್ಯಾನರ್ ಎಂಬ ಎರಡು ವಿಭಾಗಗಳಿದ್ದು, ಪ್ರಕೃತಿಯ ನಡುವೆ ಸುಂದರ ಕ್ಷಣಗಳನ್ನು ಕಳೆಯುವುದೇ ಸಂಭ್ರಮದ ವಿಷಯ. ಈ ಹೊಟೇಲ್ ಅದೆಷ್ಟು ಜನಪ್ರಿಯವಾಗಿದೆಯೆಂದರೆ ತಿಂಗಳುಗಳು ಮುಂಗಡವಾಗಿಯೇ ಬುಕಿಂಗ್‌ ಮಾಡುವುದಾದರೂ ಅದೃಷ್ಟವಿದ್ದರಷ್ಟೇ ಇಲ್ಲಿ ಕೊಠಡಿಗಳು ಲಭ್ಯವಾಗುತ್ತವೆ.

ರೇಟ್‌ ಕೇಳಿದರೆ ತಲೆ ಗಿರ್ರ್ ಅಂದೀತು

ಈ ಐಷಾರಾಮಿ ಹೊಟೇಲ್‌ ನಲ್ಲಿ ಒಂದು ರಾತ್ರಿ ಕಳೆಯಬೇಕೆಂದರೂ ಸುಲಭದ ಮಾತಲ್ಲ. ಐಷಾರಾಮಿಗೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದ್ದು, US$1,413 ಅಂದರೆ ಭಾರತದ ರುಪಾಯಿ ಲೆಕ್ಕದಲ್ಲಿ ಅಂದಾಜು 1,34,020 ರು.ಯಿಂದ ಪ್ರಾರಂಭವಾಗುತ್ತದೆ. 2-11 ವರ್ಷದ ಮಕ್ಕಳು ಜತೆಗಿದ್ದರೆ 92,407 ರು. ತೆರಲೇಬೇಕು. ದರಗಳು ಕಾಲಕ್ಕೆ ತಕ್ಕಂತೆ ಏರಿಳಿತಗಳನ್ನು ಕಾಣಲಿದ್ದು, ಆಹಾರ, ಪಾನೀಯ, ಲಾಂಡ್ರಿ, ಈಜುಕೊಳ, ಜಿಮ್‌ ಸೇರಿದಂತೆ ಎಲ್ಲವನ್ನೂ ಒಳಗೊಂಡಿವೆ.

New Project (43)

ಬರಿಯ ರೆಸಾರ್ಟ್‌ ಅಲ್ಲ..

ʻಜಿರಾಫ್ ಮ್ಯಾನರ್ʼ ಕೇವಲ ಹೋಟೆಲ್ ಅಥವ ರೆಸಾರ್ಟ್‌ ಅಲ್ಲ; ಇದು ವನ್ಯಜೀವಿ ಸಂರಕ್ಷಣಾ ಕೇಂದ್ರವೂ ಹೌದು. ಇಲ್ಲಿರುವ ಜಿರಾಫೆಗಳು ಅಪಾಯದಲ್ಲಿರುವ ನ್ಯೂಬಿಯನ್ (ರಾಥ್ಸ್ಚೈಲ್ಡ್) ಜಾತಿಗೆ ಸೇರಿದವು. ಆಫ್ರಿಕನ್‌ ಫಂಡ್‌ ಫಾರ್‌ ಎಂಡೇಜರ್ಡ್‌ ವೈಲ್ಡ್‌ಲೈಫ್‌ (African Fund for Endangered Wildlife) ಜತೆಗೂಡಿ ಅಪಾಯದಲ್ಲಿರುವ ಈ ಜಿರಾಫೆಗಳ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಇಲ್ಲಿ ಆರೈಕೆಗೊಂಡು ಆರೋಗ್ಯಯುತವಾದ ಅನೇಕ ಜಿರಾಫ್‌ಗಳನ್ನು ಮತ್ತೆ ಕಾಡಿಗೆ ಬಿಡಲಾಗಿದೆ. ಇದರಿಂದ ಅವುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯೂ ಕಂಡುಬಂದಿದೆ.

ವಿಶೇಷತೆಗಳೇನು?

* ಜಿರಾಫೆಗಳೊಂದಿಗೆ ಉಪಾಹಾರ

* ಪ್ರಕೃತಿಯ ನಡುವೆಯೇ ಐಶಾರಾಮಿ ಜೀವನ

* ವನ್ಯಜೀವಿ ಸಂರಕ್ಷಣೆಗೆ ಕೊಡುಗೆ

* ಫೊಟೋಗ್ರಫಿಗೆ ಅತ್ಯುತ್ತಮ ಸ್ಥಳ

* ನೈರೋಬಿಯ ಪ್ರಮುಖ ಪ್ರವಾಸಿ ಸ್ಥಳಗಳ ಸಮೀಪ