ದಕ್ಷಿಣ ಬೆಂಗಳೂರಿನಲ್ಲಿ ತಿಂಡಿ ತಾಣಗಳಿಗೆ ವಿಶೇಷ ಫ್ಯಾನ್‌ ಬೇಸ್‌ ಇದೆ. ಹಾಗಂತ ಎಲ್ಲ ಅಂಗಡಿಗಳನ್ನೂ ಜನ ಒಪ್ಪಿಕೊಳ್ಳುವುದಿಲ್ಲ. ಮನಸಿಗೆ ಹಿತವಾದ ವಾತಾವರಣ ಇರಬೇಕು. ಮೆನು ಕಾರ್ಡ್‌ನಲ್ಲಿ ಹೆಚ್ಚಿನ ತಿನಿಸುಗಳು ಇಲ್ಲದಿದ್ದರೂ ಪರವಾಗಿಲ್ಲ, ಇದ್ದಷ್ಟು ತಿಂಡಿ ರುಚಿಕರವಾಗಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಆಪ್ತ ಭಾವ ಆ ಜಾಗ ನೀಡಬೇಕು. ಆಗ ಮಾತ್ರ ಜನ ಅದನ್ನು ಒಪ್ಪಿಕೊಳ್ಳುತ್ತಾರೆ. ಮತ್ತೆ ಮತ್ತೆ ಹೋಗಿ ಅಪ್ಪಿಕೊಳ್ಳುತ್ತಾರೆ. ಅಂಥದ್ದೊಂದು ಜಾಗ ಬೆಂಗಳೂರಿನ ಕತ್ತರಿಗುಪ್ಪೆ ಸಿಗ್ನಲ್‌ ಬಳಿ ಇರುವ ಬನಶಂಕರಿಯ 'ತಾಜಾ ತಿಂಡಿ'. ಇದನ್ನು ಈಗ ಐಕಾನಿಕ್‌ ತಾಣ ಎಂದೇ ಹೇಳಬಹುದು. ಏಕೆಂದರೆ, ಜನರ ಮನಸಿನಲ್ಲಿ ಸ್ಥಾನ ಪಡೆದ ಜಾಗಕ್ಕೆ ಈಗ ದಶಮಾನೋತ್ಸವ ಸಂಭ್ರಮ.

ವಾಕಿಂಗ್‌ ಮುಗಿಸಿ ಬಂದ ಹಿರಿಯ ನಾಗರಿಕರಿಗೆ, ಅರ್ಜೆಂಟಿನಲ್ಲಿ ಕೆಲಸಕ್ಕೆ ಹೊರಟ ಯುವಕರಿಗೆ, ಹೆಂಡತಿ ಊರಿಗೆ ಹೋದಾಗ ತಿಂಡಿಗೆ ಏನು ಮಾಡುವುದು ಎಂದು ಯೋಚಿಸುವ ಅಪ್ಪಂದಿರಿಗೆ ಹೇಳಿಮಾಡಿಸದಂಥ ಜಾಗ ಈ ತಾಜಾ ತಿಂಡಿ. ಬೆಳಗ್ಗೆ 7ರಿಂದ 12:30ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ತೆರೆದಿರುವ ಈ ಜಾಗದಲ್ಲಿ ಎಷ್ಟೊತ್ತಿಗೆ ಹೋದರೂ ಜನಜಂಗುಳಿ ಇದ್ದೇ ಇರುತ್ತದೆ. ಆದರೆ ಎಷ್ಟೇ ಜನಜಂಗುಳಿ ಇದ್ದರೂ ಗ್ರಾಹಕರನ್ನು ಕಾಯಿಸುವುದಿಲ್ಲ, ತಾಳ್ಮೆ ಪರೀಕ್ಷಿಸುವುದಿಲ್ಲ ಎಂಬುದು ತಾಜಾ ತಿಂಡಿಯ ಹೆಗ್ಗಳಿಕೆ.

ಇದನ್ನೂ ಓದಿ: ತಂಬುಳಿ ಮನೆ... ಅಜ್ಜಿಯ ಕೈರುಚಿ ನೆನಪಿಸುವ ಮನೆ

ದಶಕಗಳ ಪಯಣ

ಗೋಪಾಡಿ ಶ್ರೀನಿವಾಸ್‌ ರಾವ್‌ ಅವರು ಹತ್ತು ವರ್ಷಗಳ ಹಿಂದೆ ಬನಶಂಕರಿಯಲ್ಲಿ ಒಂದು ದೊಡ್ಡ ಕನಸಿನೊಂದಿಗೆ ಈ ತಾಜಾ ತಿಂಡಿ ಎಂಬ ತಾಣವನ್ನು ತೆರೆದರು. ಕಳೆದ ಹತ್ತು ವರ್ಷಗಳಲ್ಲಿ ಹಲವು ಬಗೆಯ ಜನರನ್ನು ಈ ತಾಣ ಪರಿಚಯ ಮಾಡಿಕೊಂಡಿದ್ದಷ್ಟೇ ಅಲ್ಲ, ಸಂಬಂಧ ಬೆಳೆಸಿದೆ. ಹಲವು ಸಂತಸದ ಕ್ಷಣಗಳು, ಹಲವು ಕಷ್ಟದ ದಿನಗಳು ಹಾಗೂ ಹಲವು ಸಂಭ್ರಮಗಳಿಗೆ ಈ ಜಾಗ ಸಾಕ್ಷಿಯಾಗಿದೆ. ಬೆಚ್ಚಿ ಬೀಳಿಸುವಂಥ ಕೊರೋನಾ ದಿನಗಳ ಬಿಸಿಯನ್ನು ಮೌನವಾಗಿ ಸಹಿಸಿಕೊಂಡಿದೆ. ಅಷ್ಟೇ ಯಾಕೆ ಇತ್ತೀಚೆಗೆ ನಡೆದ ಯುದ್ಧದ ಪರಿಣಾಮದಲ್ಲೂ ಒದ್ದಾಡುವಂಥ ಪರಿಸ್ಥಿತಿ ಬಂದರೂ ತನ್ನ ಗ್ರಾಹಕರಿಗೆ ನೀಡಬೇಕಾದ ರುಚಿ ತಿನಿಸುಗಳಿಗೆ ಯಾವುದೇ ಮೋಸ ಆಗದಂತೆ ಗಟ್ಟಿಯಾಗಿ ನಿಂತಿದೆ. ಇಂಥ ಹಲವು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಿ ಈಗ ಹತ್ತು ವರ್ಷದ ಸಂಭ್ರಮದಲ್ಲಿದೆ ತಾಜಾ ತಿಂಡಿ.

Untitled design (72)

ಸಕ್ಸಸ್‌ ಸೀಕ್ರೆಟ್‌

ಇಷ್ಟೆಲ್ಲಾ ಅನಿರೀಕ್ಷಿತ ಸಂದರ್ಭಗಳನ್ನು ಕಂಡು ಗೆದ್ದು ಬಂದ ತಾಜಾ ತಿಂಡಿಯ ಹಿಂದೆ ಶ್ರೀನಿವಾಸ್‌ ಅವರ ಕಲ್ಪನೆ, ಯೋಚನೆ, ಯೋಜನೆ ಇದ್ದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ರಾಘವೇಂದ್ರ ಮತ್ತು ಗಿರೀಶ್‌ ಅವರ ನಿಷ್ಠೆ ಹಾಗೂ ಶ್ರಮ ಕೂಡ ದೊಡ್ಡದಿದೆ. ಅಷ್ಟೇ ಅಲ್ಲ ಇಲ್ಲಿ ಸುಮಾರು 45 ಮಂದಿ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರೂ ಬಹಳ ನಿಷ್ಠೆಯಿಂದ, ಪ್ರೀತಿಯಿಂದ ಕೆಲಸ ಮಾಡುತ್ತಾರೆ. ತಾಜಾ ತಿಂಡಿಯಲ್ಲಿ ಮುಖ್ಯವಾಗಿ ಮೂರು ನಿಯಮಗಳನ್ನು ಅನುಸರಿಸಲಾಗುತ್ತದೆ. ಮೊದಲನೆಯದು 'ಸ್ಟಾಫ್‌ ಮ್ಯಾನೇಜ್‌ಮೆಂಟ್‌'. ಅಂದರೆ ಇಲ್ಲಿರುವ ಪ್ರತಿಯೊಬ್ಬರಿಗೂ ಕೆಲಸ ಇರಬೇಕು ಹಾಗೂ ಯಾವ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಜನರನ್ನು ಮಾತ್ರ ನೇಮಕ ಮಾಡಲಾಗುತ್ತದೆ. ಹಾಗೆಯೇ 'ಸರ್ವಿಸ್‌ ಮ್ಯಾನೇಜ್‌ಮೆಂಟ್‌'. ಗ್ರಾಹಕರಿಗೆ ಉತ್ತಮ ಸರ್ವಿಸ್‌ ನೀಡಲು ಏನು ಮಾಡಬೇಕೋ ಅದನ್ನು ಮೊದಲ ಆದ್ಯತೆಯಲ್ಲಿ ಮಾಡಲಾಗುತ್ತದೆ. ಮೂರನೆಯದು ಹಾಗೂ ಮುಖ್ಯವಾದದ್ದು 'ವೇಸ್ಟ್‌ ಮ್ಯಾನೇಜ್‌ಮೆಂಟ್‌'. ಈ ಹೊಟೇಲ್‌ನಲ್ಲಿ ಲಾಭ ಎಲ್ಲಿಂದ ಬರುತ್ತದೆ ಎಂದರೆ ಉಳಿತಾಯದಿಂದ. ಅಂದರೆ, ಇಲ್ಲಿ ಯಾವುದನ್ನೂ ಅಗತ್ಯಕ್ಕಿಂತ ಹೆಚ್ಚಾಗಿ ಮಾಡಿ ಚೆಲ್ಲುವುದಿಲ್ಲ, ಪ್ಲಾಸ್ಟಿಕ್‌ ಬಳಸುವುದಿಲ್ಲ, ಅಷ್ಟೇ ಯಾಕೆ, ಪಾರ್ಸೆಲ್‌ ಕೂಡ ನೀಡಲಾಗುವುದಿಲ್ಲ. ಪಾರ್ಸೆಲ್‌ ಬೇಕು ಎಂದರೆ ನಿಮ್ಮ ಮನೆಯಿಂದ ಡಬ್ಬಿ ತೆಗೆದುಕೊಂಡು ಹೋದರೆ ಪಾರ್ಸೆಲ್‌ ಸಿಗುತ್ತದೆ.

ಲಿಮಿಟೆಡ್‌ ಮೆನು

ಇಲ್ಲಿ ಉಳಿದ ಕಡೆಗೆ ಸಿಗುವ ಹಾಗೇ ಉದ್ದುದ್ದ ಮೆನು ಲಿಸ್ಟ್‌ ಇಲ್ಲ. ಇಡ್ಲಿ-ವಡೆ, ದೋಸೆ, ಖಾರಾಬಾತ್‌, ಕೇಸರಿಬಾತ್, ಕಾಫಿ, ಟೀ ಅಷ್ಟೇ. ಇವಿಷ್ಟರಲ್ಲಿ ಯಾವುದು ಬೇಕೋ ತೆಗೆದುಕೊಳ್ಳಬಹುದು. ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಶುದ್ಧವಾಗಿ, ಮನೆಯಲ್ಲಿ ಅಜ್ಜಿ ಹೇಳಿಕೊಟ್ಟ ವಿಧಾನದಲ್ಲಿ ಮಾಡುವ ತಿನಿಸುಗಳಾಗಿದ್ದರಿಂದ ತಿಂದ ಮೇಲೆ ಹೊಟ್ಟೆ ಭಾರ ಅಂತ ಅನಿಸುವುದಿಲ್ಲ. ಹಿತವಾಗಿರುತ್ತದೆ. ಇಡೀ ಅಡುಗೆಮನೆಯನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ ಎಂದರೆ ಯಾವುದೇ ಸಮಯದಲ್ಲಿ ಹೋದರೂ ಕಸ ಸಿಗುವುದು ಕಷ್ಟವೇ. ಹಾಗೇ ಎಲ್ಲದಕ್ಕೂ ಒಂದು ವ್ಯವಸ್ಥೆ ಇದೆ. ದಿನಸಿ ಅಥವಾ ತರಕಾರಿ ತಂದು ಅದನ್ನು ಚಂದವಾಗಿ ಜೋಡಿಸುವುದರಿಂದ ಹಿಡಿದು, ವೇಸ್ಟ್‌ ಹೊರಗೆ ಕಳಿಸುವುದರವರೆಗೂ ಶಿಸ್ತಿನ ವ್ಯವಸ್ಥೆಯಿದೆ. ಅದನ್ನು ಎಲ್ಲ ಸಿಬ್ಬಂದಿ ಅನುಸರಿಸುತ್ತಾರೆ.

ತಂತ್ರಜ್ಞಾನ ಮತ್ತು ಶಿಸ್ತಿನ ಅಪೂರ್ವ ಸಮ್ಮಿಲನ

ಸಾಮಾನ್ಯವಾಗಿ ಬೆಳಗಿನ ಉಪಾಹಾರದ ಜಾಗಗಳಲ್ಲಿ ಗದ್ದಲ, ಸರದಿ ಸಾಲಿನ ಗೊಂದಲ ಸಾಮಾನ್ಯ. ಆದರೆ ತಾಜಾ ತಿಂಡಿಯಲ್ಲಿ ಒಳಗೆ ಹೋಗುತ್ತಿದ್ದಂತೆಯೇ ಒಂದು ರೀತಿಯ ಸೈಲೆಂಟ್ ಶಿಸ್ತು ಕಣ್ಣಿಗೆ ಬೀಳುತ್ತದೆ. ಹಳೇ ಕಾಲದ ರುಚಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ್ದು ಇಲ್ಲಿನ ಹೆಗ್ಗಳಿಕೆ. ಕೂಪನ್ ತೆಗೆದುಕೊಳ್ಳುವುದರಿಂದ ಹಿಡಿದು, ಕೌಂಟರ್‌ನಲ್ಲಿ ಕಾಯುತ್ತಿರುವ ತಿಂಡಿ ನಿಮ್ಮ ಕೈಗೆ ತಲುಪುವವರೆಗೆ ಪ್ರತಿಯೊಂದೂ ಕೂಡ ಅತ್ಯಂತ ಶಿಸ್ತು ಹಾಗೂ ಆಕರ್ಷಕ ಶೈಲಿಯಲ್ಲಿ ನಡೆಯುತ್ತದೆ. ಪ್ರತಿ ಕೌಂಟರ್‌ಗೂ ಸೂಕ್ತವಾದ ನಾಮಫಲಕಗಳಿವೆ. ಅಡುಗೆಮನೆಯ ಪ್ರತಿಯೊಂದು ಹಂತದಲ್ಲೂ ಬಳಸಿರುವ ಆಧುನಿಕ ಯಂತ್ರೋಪಕರಣಗಳು, ರುಚಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೆರವಾಗುವುದರ ಜತೆಗೆ ಕಾರ್ಯಕ್ಷಮತೆಯನ್ನೂ ಹೆಚ್ಚಿಸಿವೆ.

Untitled design (71)

ಇಲ್ಲಿನ ಯಂತ್ರಗಳಷ್ಟೇ ವೇಗವಾಗಿ ಕೆಲಸ ಮಾಡುವ ಸಿಬ್ಬಂದಿಯ ಮುಖದಲ್ಲಿನ ಮುಗುಳುನಗೆ ಮತ್ತು ಚುರುಕುತನ ಗ್ರಾಹಕರ ಮನ ಗೆಲ್ಲುತ್ತದೆ. 'ಸಮಯ ಎಂದರೆ ಹಣ' ಎಂಬ ಮಾತನ್ನು ಇಲ್ಲಿ ಪ್ರತಿಯೊಬ್ಬರೂ ಪಾಲಿಸುತ್ತಾರೆ. ಎಷ್ಟೇ ದೊಡ್ಡ ಕ್ಯೂ ಇದ್ದರೂ ಕೆಲವೇ ನಿಮಿಷಗಳಲ್ಲಿ ನಿಮ್ಮ ಕೈಯಲ್ಲಿ ಬಿಸಿಯಾದ ದೋಸೆ ಅಥವಾ ಇಡ್ಲಿ ಇರುತ್ತದೆ ಎನ್ನುವ ಭರವಸೆಯೇ ಜನರನ್ನು ಇಲ್ಲಿಗೆ ಮತ್ತೆ ಮತ್ತೆ ಬರುವಂತೆ ಮಾಡುತ್ತದೆ.

ದಕ್ಷಿಣ ಬೆಂಗಳೂರಿನ ಭಾವನಾತ್ಮಕ ಬೆಸುಗೆ

ಹತ್ತು ವರ್ಷಗಳ ಹಿಂದೆ ಒಂದು ಸಣ್ಣ ಆಲೋಚನೆಯಾಗಿ ಶುರುವಾದ ಈ 'ತಾಜಾ ತಿಂಡಿ', ಇಂದು ಕೇವಲ ಒಂದು ಉಪಾಹಾರ ಗೃಹವಾಗಿ ಉಳಿದಿಲ್ಲ. ಅದು ದಕ್ಷಿಣ ಬೆಂಗಳೂರಿನ ಸಂಸ್ಕೃತಿಯ, ದೈನಂದಿನ ಜೀವನದ ಒಂದು ಭಾಗವಾಗಿದೆ. ಇಲ್ಲಿ ಕಾಫಿ ಹೀರುತ್ತಾ ಮುಂಜಾನೆಯ ಪತ್ರಿಕೆ ಓದುವ ತೃಪ್ತಿ, ಸ್ನೇಹಿತರ ಜತೆ ಹರಟೆ ಹೊಡೆಯುವ ಸಡಗರ, ಮತ್ತು ಕಡಿಮೆ ವೆಚ್ಚದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ನೆಮ್ಮದಿ ಎಲ್ಲವೂ ಸಿಗುತ್ತದೆ. ದಶಮಾನೋತ್ಸವದ ಈ ಸುಸಂದರ್ಭದಲ್ಲಿ, ತನ್ನ ರುಚಿ, ಶುಚಿ ಮತ್ತು ಶಿಸ್ತಿನ ಮೌಲ್ಯಗಳನ್ನು ಹಾಗೆಯೇ ಕಾಯ್ದುಕೊಂಡು ಮುನ್ನಡೆಯುತ್ತಿರುವ ತಾಜಾ ತಿಂಡಿ ಇನ್ನು ಹಲವು ದಶಕಗಳ ಕಾಲ ಕನ್ನಡಿಗರ ಹಾಗೂ ಬೆಂಗಳೂರಿಗರ ನಾಲಿಗೆಗೆ ರುಚಿ ನೀಡಲಿ ಎನ್ನುವುದೇ ಶುಭ ಹಾರೈಕೆ.

ಸೋಷಿಯಲ್ ಮೀಡಿಯಾ ಕ್ರೇಜ್

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಆಹಾರದ ಜತೆಗೆ ಅದರ 'ಫೊಟೋಜೆನಿಕ್' ಲುಕ್ ಕೂಡ ಅಷ್ಟೇ ಮುಖ್ಯ. ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಹಾಗೂ ಬ್ಲಾಗ್‌ಗಳಲ್ಲಿ ತಾಜಾ ತಿಂಡಿಯ ದೋಸೆಗೆ ಕರಗುವ ಬೆಣ್ಣೆಯ ವಿಡಿಯೋಗಳು ಮತ್ತು ಗರಿಗರಿಯಾದ ವಡೆಯ ಶಾರ್ಟ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ. ದೇಶ-ವಿದೇಶಗಳಿಂದ ಬೆಂಗಳೂರಿಗೆ ಬರುವ ಫುಡ್ ಬ್ಲಾಗರ್‌ಗಳ ಲಿಸ್ಟ್‌ನಲ್ಲಿ ಬನಶಂಕರಿಯ ಈ ಜಾಗ ಮೊದಲ ಸಾಲಿನಲ್ಲಿರುತ್ತದೆ. ಸೆಲೆಬ್ರಿಟಿಗಳಿಂದ ಹಿಡಿದು ಇನ್‌ಫ್ಲುಯೆನ್ಸರ್‌ಗಳವರೆಗೆ ಪ್ರತಿಯೊಬ್ಬರೂ ತಾಜಾ ತಿಂಡಿಯ ಸಿಗ್ನೇಚರ್ ಡಿಶ್‌ಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ಶೇರ್ ಮಾಡಿಕೊಳ್ಳುವುದನ್ನು ಒಂದು ಫ್ಯಾಷನ್ ಎಂದೇ ಭಾವಿಸುತ್ತಾರೆ. ಈ ಸೋಷಿಯಲ್ ಮೀಡಿಯಾ ಪ್ರಭಾವದಿಂದಾಗಿ ಹೊಸ ಪೀಳಿಗೆಯ ಯುವಕರಲ್ಲೂ ಈ ತಾಣ ಅಪಾರ ಜನಪ್ರಿಯತೆ ಗಳಿಸಿದೆ.

ಪರಿಸರ ಪ್ರೇಮಿ ಮತ್ತು ಶೂನ್ಯ ತ್ಯಾಜ್ಯ

ಇಂದಿನ ಕಾಲದಲ್ಲಿ ಹೊಟೇಲ್ ಉದ್ಯಮದಲ್ಲಿ ಪರಿಸರ ಸ್ನೇಹಿ ನಿಯಮಗಳನ್ನು ಪಾಲಿಸುವುದು ಸವಾಲಿನ ಕೆಲಸ. ಆದರೆ ತಾಜಾ ತಿಂಡಿ ಈ ವಿಷಯದಲ್ಲಿ ಮಾದರಿಯಾಗಿದೆ. ಪ್ಲಾಸ್ಟಿಕ್ ಪ್ಲೇಟ್‌ಗಳು ಅಥವಾ ಒಮ್ಮೆ ಬಳಸಿ ಬಿಸಾಡುವ ಕವರ್‌ಗಳಿಗೆ ಇಲ್ಲಿ ಜಾಗವೇ ಇಲ್ಲ. ಮರುಬಳಕೆ ಮಾಡಬಹುದಾದ ಮತ್ತು ಅತ್ಯಂತ ಅಚ್ಚುಕಟ್ಟಾಗಿ ಕ್ರಿಮಿಮುಕ್ತಗೊಳಿಸಿದ ಸ್ಟೀಲ್ ತಟ್ಟೆಗಳು ಮತ್ತು ಲೋಟಗಳನ್ನೇ ಇಲ್ಲಿ ಬಳಸಲಾಗುತ್ತದೆ.

ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ತಾಜಾ ತಿಂಡಿಯ ಶಿಸ್ತು ಮೆಚ್ಚುವಂಥದ್ದು. ಗ್ರಾಹಕರು ಆಹಾರವನ್ನು ಪೋಲು ಮಾಡದಂತೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಕಸವನ್ನು ಸೂಕ್ತವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗುತ್ತದೆ. ಪಾರ್ಸೆಲ್‌ಗೆ ಸ್ವಂತ ಡಬ್ಬಿ ತರಬೇಕೆಂಬ ನಿಯಮವು ಗ್ರಾಹಕರಲ್ಲೂ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ.

Untitled design (73)

ವಿಶೇಷ ಆಕರ್ಷಣೆ

  • ಇಡೀ ವಾತಾವರಣ ಆಪ್ತ ಭಾವ ನೀಡುತ್ತದೆ. ಗೆಳೆಯರ ಜತೆಗೆ ಕೂತು ಹರಟೆ ಹೊಡೆಯಲು ಬೆಸ್ಟ್‌ ಜಾಗ.
  • ಗಡಿಬಿಡಿಯಲ್ಲಿ ಎಲ್ಲಾದರು ಹೋಗುತ್ತಿರುವಾಗ ಹಸಿವಾಗಿದೆ, ಬೇಗ ಏನಾದರೂ ತಿಂದು ಹೋಗಬೇಕು ಎಂದರೆ ಇಲ್ಲಿ ಸ್ಟಾಪ್‌ ನೀಡಬಹುದು.
  • ಇಡ್ಲಿ ಜತೆಗೆ ಚಟ್ನಿ ಮಾತ್ರ ಸಿಗುತ್ತದೆ. ಸಾಂಬಾರ್‌ ಬೇಕು ಎಂದರೂ ಇಲ್ಲಿ ಮಾಡುವುದೇ ಇಲ್ಲ.
  • ಏನೇ ತಿಂದರೂ ಜತೆಗೊಂದು ವಡೆ ತೆಗೆದುಕೊಂಡರೆ ಸೂಪರ್‌.
  • ಕೈಗೆಟುಕುವ ಬೆಲೆಯಲ್ಲೇ ಇಲ್ಲಿನ ಎಲ್ಲ ತಿಂಡಿಗಳಿವೆ.

ಹೆಚ್ಚುವರಿ ಮಾಹಿತಿ

  • ಗಮನಿಸಬೇಕಾದ ಅಂಶ: ಇಲ್ಲಿ ಸ್ವಯಂ ಸೇವೆ (Self-service) ಮಾತ್ರ ಲಭ್ಯವಿದ್ದು, ಪಾರ್ಸೆಲ್ ಬೇಕಿದ್ದಲ್ಲಿ ಮನೆಯಿಂದ ಡಬ್ಬಿ ತರುವುದು ಕಡ್ಡಾಯ.
  • ಸಮಯ: ಬೆಳಗ್ಗೆ 7:00 ರಿಂದ 12:30 | ಸಂಜೆ 4:00 ರಿಂದ ರಾತ್ರಿ 9:00
ಆಹಾರ ಉದ್ಯಮದಲ್ಲಿ 50 ವರ್ಷಗಳನ್ನು ಪೂರೈಸಿದ್ದೇನೆ. ಆವತ್ತಿಂದಲೂ ಗ್ರಾಹಕರಿಗೆ ಅತ್ಯುತ್ತಮ, ಸ್ವಚ್ಛವಾದ, ರುಚಿಕರವಾದ, ಅರೋಗ್ಯಕರವಾದ ಆಹಾರ ನೀಡಬೇಕು ಎಂಬ ಆಸೆಯಿತ್ತು. ಇವೆಲ್ಲವೂ ಆಗಬೇಕೆಂದರೆ ದೊಡ್ಡ ಸವಾಲಿನ ಕೆಲಸ. ಅದಕ್ಕಾಗಿಯೇ ಶುರು ಮಾಡಿದ ಬ್ರ್ಯಾಂಡ್‌ ತಾಜಾ ತಿಂಡಿ. ಇಲ್ಲಿ ಓಪನ್‌ ಕಿಚನ್‌ ಇರುವುದರಿಂದ ನಮ್ಮ ಆಹಾರ ತಯಾರಾಗುವುದನ್ನು ಗ್ರಾಹಕರೇ ನೋಡಬಹುದು. ಗ್ಲಾಸ್‌ ಮತ್ತು ಪ್ಲೇಟ್‌ ಹೇಗೆ ತೊಳೆಯುತ್ತೇವೆ ಎನ್ನುವುದನ್ನು ಅವರೇ ನೋಡಬಹುದು. ಇದು ನಮಗಿರುವ ಸಾಮಾಜಿಕ ಬದ್ಧತೆ. ಕಸ ಕಡಿಮೆ ಆಗಬೇಕು ಹಾಗೂ ಪರಿಸರದ ಬಗ್ಗೆ ಇರುವ ಕಾಳಜಿಯಿಂದ ನಾವು ಪಾರ್ಸೆಲ್‌ ಕೊಡುವುದಿಲ್ಲ. ಅದರಿಂದ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣ ಮಾಡಿದ್ಧೇವೆ. ಹೊಸ ಉದ್ಯಮಿಗಳಿಗೂ ಈ ತಾಣ ಒಂದು ಮಾದರಿ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇವೆ. ರುಚಿಕರ ಹಾಗೂ ಗುಣಮಟ್ಟದ ಆಹಾರ ನೀಡುವುದೇ ನಮ್ಮ ಉದ್ದೇಶ. ಗ್ರಾಹಕರ ಪ್ರೀತಿ ಹಾಗೂ ಸಿಬ್ಬಂದಿ ವರ್ಗದ ಬದ್ಧತೆಯಿಂದ ಈ ಪಯಣ ಇಲ್ಲಿಯವರೆಗೆ ಬೆಳೆದು ಬಂದಿದೆ.
  • ಗೋಪಡಿ ಶ್ರೀನಿವಾಸ ರಾವ್‌, ತಾಜಾ ತಿಂಡಿ ಸ್ಥಾಪಕ