ಗುಬ್ಬಿ ಗೂಡು..ಈ ರೆಸಾರ್ಟನ್ನೊಮ್ಮೆ ಹೊಕ್ಕು ನೋಡು!
ಕೆಲಸದ ಒತ್ತಡಗಳ ನಡುವೆ ಕೊಂಚ ನೆಮ್ಮದಿಯನ್ನು ಹುಡುಕಿ ಹೊರಟರೆ ತುಮಕೂರಿನ ಹತ್ತಿರದ ನೆಲಮಂಗಲ ಬಳಿ ಹಳ್ಳಿಯಲ್ಲಿ ಸಿಕ್ಕಿದ್ದು "ಗುಬ್ಬಿ ಗೂಡು" ಎಂಬ ಪ್ಯೂರ್ ವೆಜ್ ರೆಸಾರ್ಟ್. ಅಪ್ಪಟ ಸಸ್ಯಾಹಾರಿಗಳಿಗೆ ಹೇಳಿಮಾಡಿಸಿದ ಈ ತಾಣಕ್ಕೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು.
- ಮಂಗಳರಾಗ್ ಹೆಗಡೆ
ತುಮಕೂರು, ನೆಲಮಂಗಲ ಭಾಗದಲ್ಲಿ ಲೆಕ್ಕವಿಲ್ಲದಷ್ಟು ರೆಸಾರ್ಟ್‌ಗಳಿವೆಯಾದರೂ, ಪಕ್ಕಾ ಸಸ್ಯಾಹಾರಿಗಳಿಗಾಗಿ ಸಿಗುವ ರೆಸಾರ್ಟ್‌ಗಳ ಸಂಖ್ಯೆ ಬಹಳ ಕಡಿಮೆ. ಅಂಥ ರೆಸಾರ್ಟ್‌ಗಳ ಪೈಕಿ ಪ್ರಮುಖವಾದುದು ʼಗುಬ್ಬಿ ಗೂಡುʼ. ಈ ರೆಸಾರ್ಟ್ ನ ಅನುಭವ ಪಡೆಯುವುದಕ್ಕಾಗಿ ಮುಂದಾದಾಗ ನಮ್ಮನ್ನು ಕೈಬೀಸಿ ಕರೆದಿದ್ದು ಅಲ್ಲಿನ ಹಚ್ಚ ಹಸಿರಿನ ವಾತಾವರಣ. ಗೇಟಿನ ಬಳಿ ಕಾರು ನಿಲ್ಲಿಸುತ್ತಿದ್ದಂತೆಯೇ ಚಿಂಚಿಂ ಎನ್ನುತ್ತ ಗುಬ್ಬಿಗಳು ನಮಗೆ ಸ್ವಾಗತ ಕೋರಿದವು. ಕಾರ್ ಪಾರ್ಕ್ ಮಾಡಿ ರೆಸಾರ್ಟ್ ಒಳಗೆ ಹೋಗುತ್ತಿದ್ದಂತೆಯೇ ರೆಸಾರ್ಟ್‌ನ ಸಿಬ್ಬಂದಿ ಆರತಿ ಮಾಡಿ ಆಪ್ತವಾಗಿ ಆಹ್ವಾನವಿತ್ತ ಕ್ಷಣವಂತೂ ತುಂಬಾ ಅಪರೂಪವೆನಿಸಿತು. ನಂತರ ಒಳಗೆ ಹೋಗುತ್ತಿದ್ದಂತೆಯೇ ಮೊದಲಿಗೆ ರುಚಿಯಾದ ವೆಲ್ಕಂ ಡ್ರಿಂಕ್ ಕೊಟ್ಟರು.

ಅದನ್ನು ಮುಗಿಸಿ, ರೆಸಾರ್ಟ್‌ಗೆ ಒಂದು ಸುತ್ತು ಹೊಡೆದು ಬರುವಷ್ಟರಲ್ಲಿ ಬಿಸಿ ಬಿಸಿಯಾದ ಊಟ ಸಿದ್ಧವಾಗಿತ್ತು. ಟೇಸ್ಟೀ ಸೂಪ್ ನ ಜತೆಗೆ ಅನ್‌ಲಿಮಿಟೆಡ್ ಊಟ. ಅದರಲ್ಲಿ ಕುಲ್ಚಾ, ಸಬ್ಜಿ, ರೈಸ್ ಬಾತ್, ಅನ್ನ ರಸಂ, ಬಗೆ ಬಗೆಯ ಸ್ವೀಟ್ ಗಳು ಎಲ್ಲ ಇದ್ದು, ಯಾವುದನ್ನು ತಿನ್ನುವುದು, ಯಾವುದನ್ನು ಬಿಡುವುದೆಂಬ ಗೊಂದಲವೇ ಸೃಷ್ಟಿಯಾಗಿತ್ತು. ಕೊನೆಯಲ್ಲಿ ಐಸ್‌ಕ್ರೀಂ, ಬಾಳೆಹಣ್ಣು, ಪಾನ್ ಬೀಡಾ ಕೂಡಾ ಇತ್ತು.
ಸೈಕಲ್ ಸವಾರಿಗೂ ಇಲ್ಲಿ ಅವಕಾಶವಿದ್ದುದರಿಂದ ಊಟ ಮುಗಿಸಿಕೊಂಡು ಮೈಹಗುರವಾಗಲು ಒಂದು ರೌಂಡ್ ಸೈಕಲ್ ಹೊಡೆದೆವು. ಅಲ್ಲದೆ ಜಿಪ್‌ಲೈನ್ ಟ್ರೈ ಮಾಡಿ, ರೋಪ್ ಆಕ್ಟಿವಿಟೀಸ್ ಮುಗಿಸಿದೆವು. ನಂತರ ಔಟ್ ಡೋರ್ ಗೇಮ್ಸ್ ಗಳಾದ ವಾಲಿಬಾಲ್, ಕ್ರಿಕೆಟ್, ಫೂಟ್ ಬಾಲ್ ಎಲ್ಲವನ್ನೂ ಆಡಿದಾಗಲಂತೂ ಹಳೆಯ ದಿನಗಳೇ ನೆನಪಿಗೆ ಬಂದವು. ರೋಪ್ ಆಕ್ಟಿವಿಟೀಸ್ ಬಹಳ ಚೆನ್ನಾಗಿತ್ತು. ಬಹಳಷ್ಟು ವಿಶಾಲವಾದ ಜಾಗದಲ್ಲಿ ಈ ರೆಸಾರ್ಟ್ ಹರಡಿಕೊಂಡಿರುವುದರಿಂದ ಕ್ರಿಕೆಟ್ ನಂಥ ಆಟವನ್ನು ಆಡಲೂ ಬಹಳ ಸಹಕಾರಿಯಾಗಿತ್ತು. ವಿಶೇಷವೆಂದರೆ ಕುದುರೆ ಸವಾರಿ ಮಾಡುವುದಕ್ಕೂ ಇಲ್ಲಿ ಆಯ್ಕೆಯಿದ್ದುದರಿಂದ ಆರ್ಸ್ ರೈಡ್ ಮುಗಿಸಿಕೊಂಡು, ಸ್ವಿಮ್ಮಿಂಗ್ ಪೂಲ್ ಗೆ ಇಳಿದೇ ಬಿಟ್ಟೆವು. ಸ್ವಿಮ್ಮಿಂಗ್ ಪೂಲ್ ಅದೆಷ್ಟು ಶುಚಿಯಾಗಿತ್ತೆಂದರೆ, ನೋಡಿದೊಡನೆಯೇ ಇಳಿದುಬಿಡುವ ಮನಸ್ಸಾಗಿತ್ತು. ನಂತರ ಇದ್ದಿದ್ದು ರೇನ್ ಡಾನ್ಸ್. ಅದಂತೂ ಬಹಳ ಇಷ್ಟವಾಯ್ತು. ಮನಸ್ಸೆಲ್ಲ ಒಮ್ಮೆ ಹಗುರಾದಂತ ಭಾವ. ಇಲ್ಲಿಗೆ ಮಕ್ಕಳನ್ನು ಕರೆದುಕೊಂಡು ಬಂದರಂತೂ ನಲಿದಾಡಿಬಿಡುತ್ತಾರೆ.

ರೇನ್ ಡಾನ್ಸ್ ಮುಗಿಸಿ ಫ್ರೆಶ್ ಆಗುವಷ್ಟರಲ್ಲಿ ಸಂಜೆಯ ತಿಂಡಿ ಸಿದ್ಧವಾಗಿತ್ತು. ಬಜ್ಜಿ/ಪಕೋಡ ತಿಂದು, ಕಾಫಿ ಕುಡಿದು, ಒಂದಷ್ಟು ಇಂಡೋರ್ ಗೇಮ್ಸ್ ಆಡೋಣ ಎಂದು ಹೊರಟೆವು. ಇಂಡೋರ್ ಗೇಮ್ಸ್ ಮುಗಿಸಿ ಬರುವಷ್ಟರಲ್ಲಿ ರಾತ್ರಿಯ ಊಟ ರೆಡಿಯಿತ್ತು. ಮತ್ತದೇ ರುಚಿಯಾದ ಅನ್‌ಲಿಮಿಟೆಡ್ ಊಟ, ಜತೆಗೆ ಬಾಳೆಹಣ್ಣಿನ ಸೂಪರ್ ಐಸ್‌ಕ್ರೀಂ ಅಲ್ಲದೆ ಬಗೆಬಗೆಯ ಸ್ವೀಟ್ಸ್.
ಊಟ ಮುಗಿಸಿ ರೂಮ್ ಕಡೆ ಹೋದಾಗಲಂತೂ ಕಣ್ಣು ನಿದ್ರೆಯ ಅಮಲಿನಲ್ಲೇ ತೇಲಾಡುತಿತ್ತು. ನಿಮಿಷಗಳೊಳಗಾಗಿ ನಿದ್ದೆಗೆ ಜಾರಿದವಳಿಗೆ ಎಚ್ಚರವಾಗಿದ್ದು, ಊರನ್ನು ನೆನಪಿಸುವಂತೆ ಕೋಳಿಯ ಕೂಗು. ಕುದುರೆ, ಬಾತುಕೋಳಿಗಳು, ಕೋಳಿಗಳು, ಪಾರಿವಾಳ, ಗುಬ್ಬಿಗಳ ಕಲರವವೇ ರೆಸಾರ್ಟ್ ತುಂಬಾ ಕೇಳಿ ಮನಸ್ಸಿನಗೂ ಖುಷಿಯೆನಿಸಿತು. ಯಾವುದೋ ಲೋಕದಲ್ಲಿ ಕಳೆದುಹೋದಂತ ಅನುಭವ ನೀಡಿತ್ತು.

ಬೆಳಿಗ್ಗೆ ಬಗೆ ಬಗೆಯ ತಿಂಡಿ ತಿಂದು, ಹಸಿರಿನ ಮಧ್ಯ ಸುತ್ತಾಡಿ, ಸಣ್ಣದಾದ ಒಂದು ಚೆಂದದ ಫಾಲ್ಸ್ ನಲ್ಲಿ ನೀರಿನಲ್ಲಿ ಆಟವಾಡಿ, ಎತ್ತಿನ ಬಂಡಿಯನ್ನೆಲ್ಲ ಕಣ್ತುಂಬಿಕೊಂಡು, ಸ್ವಲ್ಪ ಹೊತ್ತು ಅದರಲ್ಲಿ ಕುಳಿತು, ಪ್ರಾಣಿ, ಪಕ್ಷಿಗಳಿಗೆಲ್ಲ ಟಾಟಾ ಹೇಳಿ ಹೊರಟರೆ ಮನಸ್ಸಿನ ತುಂಬೆಲ್ಲ ಏನೋ ಒಂದು ಬಗೆಯ ನಿರಾಳತೆ. ಎಲ್ಲಾ ಜಂಜಡಗಳೂ ಒಮ್ಮೆಲೇ ಕಳೆದುಹೋದಂತೆ ಭಾಸವಾಯಿತು.
ಸದಾ ಟ್ರಾಫಿಕ್, ಆಫೀಸ್ ಕೆಲಸದ ಒತ್ತಡದಲ್ಲೇ ಇರುವ ಬೆಂಗಳೂರಿಗರಿಗೆ ಗುಬ್ಬಿ ಗೂಡಿನಂಥ ಜಾಗ ಒಂದು ವರದಾನವೇ ಸರಿ.