ಫ್ರೈಯಿಂಗ್ ಪ್ಯಾನ್ ಟವರ್
ಈ ಟವರ್‌ಗಳನ್ನು 'ಟೆಕ್ಸಾಸ್ ಟವರ್ಸ್' ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇವು ನೋಡಲು ಆಯಿಲ್ ರಿಗ್‌ಗಳಂತೆಯೇ ಇರುತ್ತವೆ. ಕಾಲಕ್ರಮೇಣ ಜಿಪಿಎಸ್ ತಂತ್ರಜ್ಞಾನ ಬಂದ ಮೇಲೆ ಈ ಟವರ್‌ನ ಅವಶ್ಯಕತೆ ಇಲ್ಲವಾಯಿತು. ಹಾಗಾಗಿ 1990ರ ದಶಕದಲ್ಲಿ ಇದನ್ನು ಕೈಬಿಡಲಾಯಿತು.
ಅಟ್ಲಾಂಟಿಕ್ ಸಾಗರದ ಮಧ್ಯೆ ತಲೆಯೆತ್ತಿ ನಿಂತಿರುವ ಫ್ರೈಯಿಂಗ್ ಪ್ಯಾನ್ ಟವರ್ (Frying Pan Tower), ಅಮೆರಿಕದ ಅತ್ಯಂತ ವಿಚಿತ್ರ ಹಾಗೂ ಸಾಹಸಮಯ ತಾಣಗಳಲ್ಲಿ ಒಂದು. ನಾರ್ತ್ ಕ್ಯಾರೋಲಿನಾ ತೀರದಿಂದ ಸುಮಾರು 32 ಮೈಲಿ ದೂರದಲ್ಲಿರುವ, ಅಪಾಯಕಾರಿ ಎನಿಸಿಕೊಂಡಿರುವ 'ಫ್ರೈಯಿಂಗ್ ಪ್ಯಾನ್ ಶೋಲ್ಸ್' ಎಂಬ ಮರಳುದಿಬ್ಬಗಳ ಪ್ರದೇಶದಲ್ಲಿ ಈ ಟವರ್ ಇದೆ. ಮೊದಲು ಇದು ಅಮೆರಿಕದ ಕೋಸ್ಟ್ ಗಾರ್ಡ್‌ಗಳ ಲೈಟ್ ಸ್ಟೇಷನ್ ಆಗಿತ್ತು. ಆದರೆ ಈಗ ಇದೊಂದು ಸಕತ್ ಇಕೋ-ಅಡ್ವೆಂಚರ್ ರೆಸಾರ್ಟ್, ಸಮುದ್ರ ಸಂಶೋಧನಾ ಕೇಂದ್ರ ಮತ್ತು ಐತಿಹಾಸಿಕ ಸ್ಮಾರಕ ಆಗಿದೆ.
ಇದನ್ನೂ ಓದಿ:ಯಪ್ಪಾ! ಈ ಹೊಟೇಲ್‌ನಲ್ಲಿ ಒಂದು ರಾತ್ರಿ ತಂಗಲು ಬರೋಬ್ಬರಿ ಅರ್ಧ ಕೋಟಿ!
ಸಮುದ್ರ ಮಟ್ಟದಿಂದ 135 ಅಡಿ ಎತ್ತರದಲ್ಲಿರುವ ಈ ಟವರ್, ಸಾಗರದ ತಳದಲ್ಲಿ ಆಳವಾಗಿ ಹೂತಿರುವ ನಾಲ್ಕು ಬೃಹತ್ ಸ್ಟೀಲ್ ಕಂಬಗಳ ಮೇಲೆ ನಿಂತಿದೆ. ಹಳೇ ಲೈಟ್‌ಹೌಸ್ ಆಗಿದ್ದ ಇದು, ಈಗ ಸಮುದ್ರದ ಮೇಲೆ ಸುಸ್ಥಿರ ಜೀವನ ನಡೆಸುವ ಒಂದು ಅದ್ಭುತ ಪ್ರಯೋಗದ ಸಂಕೇತವಾಗಿ ಬದಲಾಗಿದೆ.

ಆ ದಿನಗಳ ಕಥೆ...
ಇದನ್ನು 1964 ರಲ್ಲಿ ಅಮೆರಿಕನ್ ಕೋಸ್ಟ್ ಗಾರ್ಡ್ ನಿರ್ಮಿಸಿತು. ಉದ್ದೇಶ ಇಷ್ಟೇ, ಹಡಗುಗಳು ಇಲ್ಲಿನ ಅಪಾಯಕಾರಿ 'ಗ್ರೇವ್‌ಯಾರ್ಡ್ ಆಫ್ ದಿ ಅಟ್ಲಾಂಟಿಕ್' ಎಂಬ ಹೆಸರಿನ ಜಾಗದಲ್ಲಿ ಸಿಲುಕದಂತೆ ದಾರಿ ತೋರಿಸುವುದು. ಈ ಭಾಗದಲ್ಲಿ ನೂರಾರು ಹಡಗುಗಳು ಮರಳುದಿಬ್ಬಗಳಿಗೆ ಢಿಕ್ಕಿ ಹೊಡೆದು ಮುಳುಗಿ ಹೋಗಿದ್ದವು. ಈ ಟವರ್‌ಗಳನ್ನು 'ಟೆಕ್ಸಾಸ್ ಟವರ್ಸ್' ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಇವು ನೋಡಲು ಆಯಿಲ್ ರಿಗ್‌ಗಳಂತೆಯೇ ಇರುತ್ತವೆ. ಕಾಲಕ್ರಮೇಣ ಜಿಪಿಎಸ್ ತಂತ್ರಜ್ಞಾನ ಬಂದ ಮೇಲೆ ಈ ಟವರ್‌ನ ಅವಶ್ಯಕತೆ ಇಲ್ಲವಾಯಿತು. ಹಾಗಾಗಿ 1990ರ ದಶಕದಲ್ಲಿ ಇದನ್ನು ಕೈಬಿಡಲಾಯಿತು.
ಹೊಸ ಅವತಾರ
2010ರಲ್ಲಿ ರಿಚರ್ಡ್ ನೀಲ್ ಎಂಬ ಸಾಹಸಿ ಉದ್ಯಮಿ ಈ ಹಾಳುಬಿದ್ದ ಟವರ್ ಅನ್ನು ಸರಕಾರಿ ಹರಾಜಿನಲ್ಲಿ ಕೇವಲ 85,000 ಡಾಲರ್‌ಗೆ ಖರೀದಿಸಿದರು! ನಂತರ ಇದರ ಜವಾಬ್ದಾರಿಯನ್ನು FPTower Inc. ಎಂಬ ಲಾಭರಹಿತ ಸಂಸ್ಥೆಗೆ ವಹಿಸಲಾಯಿತು. ಅಂದಿನಿಂದ ಸ್ವಯಂಸೇವಕರು, ಎಂಜಿನಿಯರ್‌ಗಳು ಮತ್ತು ಡೈವರ್‌ಗಳ ತಂಡ ಸೇರಿ ಈ ತುಕ್ಕು ಹಿಡಿಯುತ್ತಿದ್ದ ಸ್ಟೀಲ್ ದೈತ್ಯನನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಇದೊಂದು ಸಮುದ್ರ ಸಂರಕ್ಷಣೆಯ ಸಂಶೋಧನಾ ಕೇಂದ್ರವಾಗಿಯೂ ಕೆಲಸ ಮಾಡುತ್ತಿದೆ.

ಒಳಗಿನ ಮಜ ಹೇಗಿರುತ್ತೆ?
ನೋಡಲು ರಗಡ್ ಆಗಿದ್ದರೂ, ಒಳಗಡೆ ಸುಮಾರು 5,000 ಚದರ ಅಡಿ ಜಾಗವಿದೆ! ಇದರಲ್ಲಿ 8 ಬೆಡ್‌ರೂಮ್‌ಗಳು, ಕಾಮನ್ ಲಿವಿಂಗ್ ರೂಮ್‌ಗಳು, ದೊಡ್ಡ ಕಿಚನ್ ಮತ್ತು ಮನೋರಂಜನಾ ಕೊಠಡಿಗಳು, ಸಮುದ್ರದ ಅಲೆಗಳನ್ನು ನೋಡಲು ಅಬ್ಸರ್ವೇಶನ್ ಡೆಕ್‌ಗಳಿವೆ. ಇದು ಉಳಿದ ಐಷಾರಾಮಿ ರೆಸಾರ್ಟ್‌ಗಳ ಹಾಗಲ್ಲ. ಇಲ್ಲಿ ಎಲ್ಲರೂ ಒಂದೇ ಕುಟುಂಬದಂತೆ ಇರಬೇಕು. ಸಣ್ಣಪುಟ್ಟ ಕೆಲಸಗಳಲ್ಲಿ ಸಹಾಯ ಮಾಡಬೇಕು ಮತ್ತು ಪ್ರಪಂಚದ ಸಂಪರ್ಕ ಕಳೆದುಕೊಂಡು ಹಾಯಾಗಿ ಇರಬೇಕು. ಟವರ್‌ನ ಮೇಲೆ ಹೆಲಿಪ್ಯಾಡ್ ಮತ್ತು ಹಳೆಯ ಲೈಟ್ ಬೀಕನ್ ಇಂದಿಗೂ ಇವೆ.
ಅಲ್ಲಿಗೆ ಹೋಗೋದು ಹೇಗೆ?
ಅಲ್ಲಿಗೆ ಹೋಗುವುದೇ ಒಂದು ದೊಡ್ಡ ಸಾಹಸ! ನಾರ್ತ್ ಕ್ಯಾರೋಲಿನಾ ತೀರದಿಂದ ದೋಣಿಯ ಮೂಲಕ ಎರಡು ಗಂಟೆಗಳ ಕಾಲ ಅಟ್ಲಾಂಟಿಕ್ ಸಾಗರದ ಅಲೆಗಳ ಮೇಲೆ ಸವಾರಿ ಮಾಡಬೇಕು. ಟವರ್ ತಲುಪಿದ ಮೇಲೆ ಕ್ರೇನ್ ಮೂಲಕ ನಿಮ್ಮನ್ನು ಮೇಲೆ ಎತ್ತಿಕೊಳ್ಳಲಾಗುತ್ತದೆ. ಇನ್ನು ಸ್ವಲ್ಪ ಶ್ರೀಮಂತರಾದರೆ ಹೆಲಿಕಾಪ್ಟರ್ ಮೂಲಕವೂ ಹೋಗಬಹುದು. ಅಲ್ಲಿ ಹೋದ ಮೇಲೆ ಸುತ್ತಮುತ್ತ ಮೈಲುಗಟ್ಟಲೆ ಕಾಣೋದು ಬರೀ ನೀರೋ ನೀರು. ರಾತ್ರಿ ಹೊತ್ತು ನಗರದ ಲೈಟ್ ಹಾವಳಿ ಇಲ್ಲದ ಕಾರಣ ನಕ್ಷತ್ರಗಳು ನಿಮ್ಮ ಕೈಗೆ ಸಿಗುವಷ್ಟು ಹತ್ತಿರ ಕಾಣುತ್ತವೆ, ಜತೆಗೆ ಅಲೆಗಳ ರಭಸದ ಸದ್ದು... ಅಬ್ಬಾ! ಅದೊಂದು ಅದ್ಭುತ ಅನುಭವ.

ಅಡ್ವೆಂಚರ್ ಪ್ರಿಯರಿಗೆ ಹಬ್ಬ!
ಇಲ್ಲಿ ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್ ಮತ್ತು ಫಿಶಿಂಗ್ ಮಾಡಲು ಮಸ್ತ್ ಅವಕಾಶವಿದೆ. ಈ ಟವರ್‌ನ ಕಾಲುಗಳ ಸುತ್ತ ಕೃತಕ ಹವಳದ ದಿಬ್ಬಗಳಾಗಿದ್ದು, ಶಾರ್ಕ್, ಆಮೆಗಳು ಮತ್ತು ದೊಡ್ಡ ದೊಡ್ಡ ಮೀನುಗಳ ಗುಂಪು ಯಾವಾಗಲೂ ಇರುತ್ತವೆ. ಇಲ್ಲಿನ ಸಮುದ್ರದ ಕೆಳಗೆ ಮುಳುಗಿರುವ ಹಡಗುಗಳ ಅವಶೇಷಗಳನ್ನು ನೋಡುವುದು ಡೈವರ್‌ಗಳಿಗೆ ಫೇವರಿಟ್ ಕೆಲಸ. ಇನ್ನು ಗಲ್ಫ್ ಸ್ಟ್ರೀಮ್ ಹತ್ತಿರ ಇರುವುದರಿಂದ ಮೀನು ಹಿಡಿಯುವವರಿಗೆ ಇದೊಂದು ಸ್ವರ್ಗವೇ ಸರಿ.
ವಿಜ್ಞಾನಿಗಳ ನೆಚ್ಚಿನ ತಾಣ
ಕೇವಲ ಟೂರಿಸ್ಟ್‌ಗಳಷ್ಟೇ ಅಲ್ಲ, ನಾಸಾ, NOAA ಮತ್ತು ಎಂಐಟಿಯಂಥ ದೊಡ್ಡ ಸಂಸ್ಥೆಗಳ ವಿಜ್ಞಾನಿಗಳು ಇಲ್ಲಿ ಬಂದು ಸಂಶೋಧನೆ ಮಾಡುತ್ತಾರೆ. ಶಾರ್ಕ್‌ಗಳ ಮೇಲೆ ನಿಗಾ ಇಡುವುದು, ಹವಾಮಾನ ಬದಲಾವಣೆ ಮತ್ತು ನವೀಕರಿಸಬಹುದಾದ ಇಂಧನದ ಬಗ್ಗೆ ಇಲ್ಲಿ ಅಧ್ಯಯನ ನಡೆಯುತ್ತದೆ. ಇದೊಂದು ರೀತಿ ಸಮುದ್ರದ ಮೇಲಿರುವ ಜೀವಂತ ಪ್ರಯೋಗಾಲಯ ಎನ್ನಬಹುದು.
ಪ್ರಕೃತಿ ಸ್ನೇಹಿ ಟವರ್
ಇಲ್ಲಿ ಎಲ್ಲವೂ ಸಸ್ಟೈನಬಲ್! ಈ ಸ್ಟೇಷನ್ ಸಂಪೂರ್ಣವಾಗಿ ಸೌರಶಕ್ತಿಯಿಂದ ನಡೆಯುತ್ತದೆ. ಮಳೆ ನೀರನ್ನು ಶೇಖರಿಸಿ, ಫಿಲ್ಟರ್ ಮಾಡಿ ಬಳಸಲಾಗುತ್ತದೆ. ಹಳೇ ಮೂಲಸೌಕರ್ಯವನ್ನು ಪರಿಸರಕ್ಕೆ ತೊಂದರೆಯಾಗದಂತೆ ಆಧುನೀಕರಿಸಲಾಗುತ್ತಿದೆ. ಇಂದು ಫ್ರೈಯಿಂಗ್ ಪ್ಯಾನ್ ಟವರ್ ಬರೀ ಹಳೆ ಲೈಟ್‌ಹೌಸ್ ಅಲ್ಲ. ಇದು ಇತಿಹಾಸ, ಪರಿಸರ ಪ್ರೇಮ ಮತ್ತು ಮನುಷ್ಯನ ಛಲದ ಸಂಕೇತ. ಬಿರುಗಾಳಿ, ಉಪ್ಪುನೀರು ಮತ್ತು ದಶಕಗಳ ನಿರ್ಲಕ್ಷ್ಯದ ನಂತರವೂ ಇದು ಗಟ್ಟಿಯಾಗಿ ನಿಂತಿದೆ. ಮಾಮೂಲಿ ಪ್ರವಾಸ ಬಿಟ್ಟು, ಆಕಾಶ ಮತ್ತು ಸಮುದ್ರದ ಮಧ್ಯೆ ಸ್ವಲ್ಪ ದಿನ ಬದುಕಬೇಕು ಅಂದುಕೊಳ್ಳುವವರಿಗೆ ಇದಕ್ಕಿಂತ ಬೆಸ್ಟ್ ಜಾಗ ಮತ್ತೊಂದಿಲ್ಲ!