ಟೋಕಿಯೋದ ಅಕಿಹಬಾರಾ (Akihabara) ಅಂದ ತಕ್ಷಣ ಕಣ್ಣ ಮುಂದೆ ಬರೋದು ಮಿನುಗುವ ನಿಯಾನ್ ಲೈಟ್ಸ್, ಅನಿಮೆ ಕ್ರೇಜ್ ಮತ್ತು ಗಿಜಿಗುಡುವ ಎಲೆಕ್ಟ್ರಾನಿಕ್ ಗಲ್ಲಿಗಳು. ಆದರೆ ಈ ಗದ್ದಲದ ನಡುವೆ, ಕಾಲವೇ ನಿಂತು ಹೋದಂತಿರುವ ಒಂದು ಮಾಂತ್ರಿಕ ಜಗತ್ತಿದೆ. ಅದೇ 'ಔಲ್ ಕೆಫೆ ಅಕಿಬಾ ಫುಕುರೊ' (Owl Cafe Akiba Fukurou). ಇಲ್ಲಿಗೆ ಪ್ರವಾಸ ಹೋದರೆ ವಾಪಸ್‌ ಬರುವಾಗ ಒಂದು ಸುಂದರ ಕಥೆಯೊಳಗಿನ ಜಗತ್ತನ್ನು ನೋಡಿ ಹೊರ ಬಂದಂತೆ ಅನಿಸುತ್ತದೆ. ಇದನ್ನೂ ಓದಿ: ಹಕ್ಕಿ ಹಾರುತಿದೆ ನೋಡಿದಿರಾ…

ಇಲ್ಲಿನ ವಿಶೇಷತೆ ಅಂದರೆ, ನೀವು ಯಾವಾಗ ಬೇಕೋ ಆವಾಗ ನುಗ್ಗುವಂತಿಲ್ಲ. ಹಕ್ಕಿಗಳ ನೆಮ್ಮದಿಗಾಗಿ ಇಲ್ಲಿ ಮುಂಚಿತವಾಗಿಯೇ ಬುಕಿಂಗ್ ಮಾಡಬೇಕು. ಹೊರಗಡೆ ನಿಂತು 'ಔಲ್ ಫ್ಯಾಮಿಲಿ' ಬಗ್ಗೆ ಓದುತ್ತಾ ಕಾಯುವಾಗಲೇ ಒಂದು ರೀತಿಯ ಕುತೂಹಲ ಶುರುವಾಗುತ್ತದೆ. ಇಲ್ಲಿರುವ ಪ್ರತಿಯೊಂದು ಗೂಬೆಗೂ ಪ್ರತ್ಯೇಕ ಹೆಸರಿದೆ, ವಿಭಿನ್ನ ವ್ಯಕ್ತಿತ್ವವಿದೆ!

New Project (47)

ಹೆಸರಲ್ಲಿ ಏನೇನಿದೆ?

ಇಲ್ಲಿನ ಮಜ ಅಂದರೆ , ಈ ಗೂಬೆಗಳಿಗೆ ಇಟ್ಟಿರುವ ಹೆಸರುಗಳು! ಕೆಲವು ಗೂಬೆಗಳಿಗೆ ಜಪಾನಿ ಶೈಲಿಯ ಹೆಸರಿದ್ದರೆ, ಇನ್ನು ಕೆಲವು ಹಕ್ಕಿಗಳಿಗೆ ಅಲ್ಲಿನ ಸಿಬ್ಬಂದಿ ಪ್ರೀತಿಯಿಂದ ವಿಚಿತ್ರ ಹೆಸರುಗಳನ್ನು ಇಟ್ಟಿದ್ದಾರೆ. ನೀವು ಅವುಗಳ ಮುಂದೆ ನಿಂತು ಹೆಸರಿಡಿದು ಕರೆದರೆ, ಅವು ತಲೆ ಓರೆ ಮಾಡಿಕೊಂಡು ನೋಡುವ ಶೈಲಿಯನ್ನು ಹುಡುಗಿಯರ ಭಾಷೆಯಲ್ಲಿ ಹೇಳುವುದಾದರೆ ಸಕತ್‌ ಕ್ಯೂಟ್‌! 'ಮಿಸ್ಟರ್ ಪ್ರೆಸಿಡೆಂಟ್' ಅನ್ನೋ ಗಂಭೀರ ಗೂಬೆ ಇದ್ದರೆ, ಅದರ ಪಕ್ಕದಲ್ಲೇ ಸ್ವೀಟ್‌ ಪೊಟ್ಯಾಟೊ ಮತ್ತು ಪೀನಟ್ಸ್‌ ಥರದ ಪುಟ್ಟ ಹಕ್ಕಿಗಳಿವೆ. ಅಷ್ಟೇ ಯಾಕೆ, ವಿಚಿತ್ರವಾಗಿ ಕಾಣುವ ಗೂಬೆಗೆ 'ಗೊರಿಲ್ಲಾ' ಅಂತಲೂ, ಬಿಳಿ ಬಣ್ಣದ ಹಕ್ಕಿಗೆ 'ಸ್ನೋಮ್ಯಾನ್' ಅಂತಲೂ ಹೆಸರಿಡಲಾಗಿದೆ. ಅಂದಹಾಗೆ, ಈ ಗೂಬೆಗಳ ಕಣ್ಣುಗಳು ನಿಮ್ಮ ಕ್ಯಾಮೆರಾ ಲೆನ್ಸ್‌ಗಿಂತ ಶಾರ್ಪ್ ಆಗಿರುತ್ತವೆ, ಹಾಗಾಗಿ ಫೊಟೋ ತೆಗೆಯುವಾಗ ಫ್ಲ್ಯಾಶ್ ಆಫ್ ಮಾಡೋದನ್ನ ಮರೆಯಬೇಡಿ. ಇಲ್ಲದಿದ್ದರೆ ಆ 'ಮಹಾರಾಜರುಗಳ' ಕೋಪಕ್ಕೆ ತುತ್ತಾಗಬೇಕಾದೀತು!

ಇನ್ನು ಇಲ್ಲಿನ ಸಿಬ್ಬಂದಿ ಅಥವಾ 'ಔಲ್ ಹ್ಯಾಂಡ್ಲರ್ಸ್' ಪ್ರತಿಯೊಂದು ಗೂಬೆಯ ಇತಿಹಾಸವನ್ನೇ ಬಿಚ್ಚಿಡುತ್ತಾರೆ. ಯಾವ ಗೂಬೆಗೆ ಯಾವ ಜಾಗದಲ್ಲಿ ಸವರಿದರೆ ಇಷ್ಟ, ಯಾವುದಕ್ಕೆ ಸ್ವಲ್ಪ ಗತ್ತು ಜಾಸ್ತಿ ಅಂತೆಲ್ಲಾ ಅವರು ವಿವರಿಸುವ ರೀತಿ ನೋಡಿದಾಗ ಖುಷಿಯಾಗುತ್ತದೆ. ಈ ಹಕ್ಕಿಗಳನ್ನು ಅವರು ಮನೆಯ ಸದಸ್ಯರಂತೆ ಕಾಣುತ್ತಾರೆ. ಇಲ್ಲಿನ ಶಾಂತತೆ ಎಷ್ಟಿದೆ ಎಂದರೆ, ಹೊರಗಿನ ಪ್ರಪಂಚದಲ್ಲಿ ನೀವು ಎಷ್ಟೇ ಸ್ಟ್ರೆಸ್‌ನಲ್ಲಿದ್ದರೂ, ಇಲ್ಲಿನ ಒಂದು ಗಂಟೆಯ ಮೌನ ಮತ್ತು ಆ ಹಕ್ಕಿಗಳ ಒಡನಾಟ ನಿಮ್ಮನ್ನು ಪೂರ್ತಿ ರಿಫ್ರೆಶ್ ಮಾಡಿಬಿಡುತ್ತದೆ. ಕೊನೆಯಲ್ಲಿ ಅವರು ನೀಡುವ ನಿಮ್ಮ ಮತ್ತು ಗೂಬೆಯ ಫೊಟೋ ಇರುವ ಸಣ್ಣ ಸ್ಮರಣಿಕೆ, ನಿಮ್ಮ ಈ ಪ್ರವಾಸದ ಅತ್ಯಂತ ಅಮೂಲ್ಯ ಉಡುಗೊರೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ!

ಶಾಂತಿಯ ಲೋಕಕ್ಕೆ ಸ್ವಾಗತ

ಕೆಫೆಯ ಬಾಗಿಲು ತೆರೆದ ಕೂಡಲೇ ಅಕಿಹಬಾರಾದ ಕರ್ಕಶ ಶಬ್ದ ಮಾಯವಾಗಿ, ಕಿವಿಗೆ ಮೊಜಾರ್ಟ್‌ನಂಥ ಸಂಗೀತ ಬೀಳುತ್ತದೆ. ಒಳಗಡೆ ಹೋದರೆ ಸುಂದರವಾದ ಲೈಟುಗಳು, ಅರಮನೆಯಂಥ ವಾತಾವರಣ. ಅಲ್ಲಲ್ಲಿ ನಿಂತಿರುವ ಗೂಬೆಗಳನ್ನು ನೋಡಿದಾಗ ನಾವು ಯಾವುದೋ ಸಿನಿಮಾದ ಸೆಟ್‌ನಲ್ಲಿ ಇರುವಂತೆ ಅನಿಸುತ್ತದೆ. ಕೈಯಗಲದ ಪುಟ್ಟ ಹಕ್ಕಿಗಳಿಂದ ಹಿಡಿದು, ಗಾಂಭೀರ್ಯದಿಂದ ಕೂತಿರುವ ದೊಡ್ಡ ಗೂಬೆಗಳವರೆಗೆ ಇಲ್ಲಿ ಎಲ್ಲವೂ ಇದೆ.

ಮೊದಲು ನಿಮಗೆ ಕೆಲವೊಂದು ಸಿಂಪಲ್ ರೂಲ್ಸ್ ಹೇಳುತ್ತಾರೆ. ಜೋರಾಗಿ ಮಾತಾಡಬೇಡಿ, ಜೋರಾಗಿ ಚಲನೆ ಬೇಡ, ಮತ್ತು ಹಕ್ಕಿಗಳಿಗೆ ಗೌರವ ಕೊಡಿ. ಅಷ್ಟೇ! ಆಮೇಲೆ ಶುರುವಾಗುತ್ತದೆ ಅಸಲಿ ಮಜ. ನಿಮ್ಮ ಕೈಮೇಲೆ ಒಂದು ಪುಟ್ಟ ಗೂಬೆಯನ್ನು ಕೂರಿಸಿದಾಗ ಆಗುವ ಆ ಅನುಭವ ಇದೆಯಲ್ಲ.. ಅದು ನಿಜಕ್ಕೂ ಅದ್ಭುತ. ಅವುಗಳ ಹಗುರವಾದ ಸ್ಪರ್ಶ ಮತ್ತು ಆ ಗಂಭೀರವಾದ ಕಣ್ಣುಗಳನ್ನು ನೋಡಿದಾಗ ಒಂದು ರೀತಿಯ ವಿಶೇಷ ಸಮಾಧಾನ ಸಿಗುತ್ತದೆ.

New Project (48)

ಗೂಬೆಗಳ 'ಕಾನ್ಸಿಯರ್ಜ್'

ಇಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ತಳಿಯ ಗೂಬೆಗಳಿವೆ. ಕೆಲವು ಗೂಬೆಗಳು ನಿಮ್ಮನ್ನು ಕುತೂಹಲದಿಂದ ನೋಡಿದರೆ, ಇನ್ನು ಕೆಲವು ʼನಾನು ಯಾರ ಮಾತು ಕೇಳಲ್ಲಪ್ಪʼ ಎಂಬಂತೆ ಗತ್ತು ತೋರುತ್ತವೆ. ಅವುಗಳ ಮೃದುವಾದ ಗರಿಗಳನ್ನು ಸವರುತ್ತಾ, ಅವುಗಳ ಜತೆ ಫೊಟೋ ತೆಗೆಸಿಕೊಳ್ಳುತ್ತಿದ್ದರೆ ಸಮಯ ಹೋಗೋದೇ ತಿಳಿಯುವುದಿಲ್ಲ.

ಹೆಸರಿಗೇನೋ ಇದು 'ಕೆಫೆ', ಆದರೆ ಇಲ್ಲಿ ನಿಮಗೆ ಕಾಫಿ ಅಥವಾ ತಿಂಡಿ ಸಿಗಲ್ಲ! ಇಲ್ಲಿನ ಆಹಾರ ಅಂದ್ರೆ ಅದು ಗೂಬೆಗಳ ಜತೆಗಿನ ಆ ಸುಂದರ ಕ್ಷಣಗಳು ಮಾತ್ರ. ಇದು ಹೊಟ್ಟೆ ತುಂಬಿಸಿಕೊಳ್ಳುವ ಜಾಗವಲ್ಲ, ಮನಸನ್ನು ತುಂಬಿಸಿಕೊಳ್ಳುವ ತಾಣ.

ಒಂದು ಗಂಟೆಯ ಮ್ಯಾಜಿಕ್

ಇಲ್ಲಿ ಕಳೆಯುವ ಒಂದು ಗಂಟೆ ಸಮಯ ತುಂಬಾ ಕಡಿಮೆ ಅಸಿಸುತ್ತದೆ. ಆ ಕ್ಯೂಟ್ ಗೂಬೆಗಳ ಜತೆ ಸ್ನೇಹ ಬೆಳೆಸಿದ ಮೇಲೆ ಅಲ್ಲಿಂದ ಹೊರಬರಲು ಮನಸು ಬರುವುದಿಲ್ಲ. ಹೊರಬಂದಾಗ ಅಕಿಹಬಾರಾದ ಗದ್ದಲ ಮತ್ತೆ ಸ್ವಾಗತಿಸುತ್ತದೆ ನಿಜ, ಆದರೆ ಮನಸಿನ ಒಂದು ಮೂಲೆಯಲ್ಲಿ ಆ ಗೂಬೆಗಳ ಶಾಂತ ನೋಟ ಹಾಗೇ ಉಳಿದಿರುತ್ತದೆ.

ಸದಾ ಓಡುತ್ತಲೇ ಇರುವ ಜಗತ್ತಿನಲ್ಲಿ, ಒಂದು ಕ್ಷಣ ನಿಂತು ಈ ವಿಲಕ್ಷಣ ಪ್ರಾಣಿಗಳ ಜತೆ ಮಾತನಾಡಲು, ಮೌನವನ್ನು ಅನುಭವಿಸಲು ಈ 'ಔಲ್ ಕೆಫೆ' ಬೆಸ್ಟ್ ಜಾಗ. ನೀವು ಎಂದಾದರೂ ಟೋಕಿಯೋಗೆ ಹೋದರೆ, ಈ ಪುಟ್ಟ ಹಾರುವ ಗೆಳೆಯರನ್ನು ಭೇಟಿ ಮಾಡೋದನ್ನು ಮರೆಯಬೇಡಿ!