Friday, April 10, 2026
Friday, April 10, 2026

ಎಣ್ಣೆ ಬೇಕಾ ಅಣ್ಣ…

ಈಗಂತೂ ಸಿನಿಮಾಗಳಲ್ಲಿ ಎಣ್ಣೆ ಸಾಂಗ್ಸ್‌ನದ್ದೇ ಹವಾ. ಮತ್ತೇರಿಸುವ ಎಣ್ಣೆ ಹಾಡೊಂದು ಇದ್ದರೇನೇ ಸಿನಿಮಾ ಕ್ಲಿಕ್‌ ಆಗಿಬಿಡುತ್ತದೆ ಎಂಬ ಯೋಚನೆ ಅನೇಕರದ್ದು. ಈ ಎಣ್ಣೆ ಅದೆಷ್ಟು ಸದ್ದು ಮಾಡುತ್ತಿದೆಯೆಂದರೆ ಮಲ್ಲೇಶ್ವರಂನಲ್ಲಿ ʻಎಣ್ಣೆʼ ಎಂಬ ಹೆಸರಿನ ವಿಭಿನ್ನವಾಗಿರುವ ಒಂದು ರೆಸ್ಟೋ ಬಾರ್‌ ಎಣ್ಣೆ ಪ್ರಿಯರಿಗಷ್ಟೇ ಅಲ್ಲದೆ ಆಹಾರ ಪ್ರಿಯರಿಗೂ ದಿ ಬೆಸ್ಟ್‌ ಹ್ಯಾಂಗ್‌ ಔಟ್‌ ಏರಿಯಾ ಎನಿಸಿಕೊಂಡಿದೆ.

ಶಿವಾಜಿನಗರ್‌ ಶೀಕ್‌, ಹಸಿರು ಪಿಜ್ಜಾ, ಎಲೆಕ್ಟ್ರಿಕ್‌ ಎಳ್ನೀರ್‌, ಮಾವಿನ್‌ ಕಾಯಿ ಉಪ್ಪಿನಕಾಯಿ, ಕೈಮಾ ಉಂಡೆ ಸಾರು, ಸಿಂ ಸಿಂಪ್ಲಿ ಗೂಬೆ …ಆಹಾರದ ಮೆನುವಿನಲ್ಲಿ ಇಂಥ ವಿಚಿತ್ರ ಹೆಸರುಗಳನ್ನು ನೀವು ಎಂದಾದರೂ ನೋಡಿದ್ದೀರಾ? ಹೆಸರಿನಂತೆಯೇ ವಿಭಿನ್ನ ರುಚಿಯನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವುದೇ ಮಲ್ಲೇಶ್ವರಂನಲ್ಲಿರುವ ʻಎಣ್ಣೆʼ ಎಂಬ ರೆಸ್ಟೋ ಬಾರ್.‌

ಸಾಮಾನ್ಯವಾಗಿ ಪಬ್‌ ಅಥವಾ ಬಾರ್‌ ಗಳಲ್ಲಿ ಅನ್ಯಭಾಷೆಯ ಹಾಡುಗಳಿಗೇ ಪ್ರಾಶಸ್ತ್ಯ ನೀಡಿದರೆ ಇಲ್ಲಿ ಎಣ್ಣೆ ಹೊಡೆಯುವವರಿಗಾಗಿ ಅಪ್ಪಟ ಕನ್ನಡ ಹಾಡುಗಳನ್ನೇ ಪ್ಲೇ ಮಾಡಲಾಗುತ್ತದೆ. ಅದರಲ್ಲೂ ವಾರಾಂತ್ಯಗಳಲ್ಲಂತೂ ಮ್ಯೂಸಿಕ್‌ ಬ್ಯಾಂಡ್‌ನ ಲೈವ್‌ ಸಾಂಗ್ಸ್‌ ಅಂತೂ ಎಣ್ಣೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾಸ್ಟಾಲ್ಜಿಕ್‌ ಸಾಂಗ್ಸ್‌ ಜತೆ ಅಥೆಂಟಿಕ್‌ ಫುಡ್ ತಿನ್ನುವ ಮಜವೇ ಬೇರೆ.

ಇದನ್ನೂ ಓದಿ: ವೈಲ್ಡ್‌ ವ್ಯಾಲಿ ಮೌಂಟೆನ್‌ ಬೇರ್‌

ʻಎಣ್ಣೆʼ ಪಬ್‌ನ ಮಾಲೀಕರು ಶ್ರುತಿ ಎಂಬ ದಿಟ್ಟ ಮಹಿಳೆ. ಎಷ್ಟೇ ಮುಂದುವರಿದ ನಗರವೆಂದರೂ ಹೆಣ್ಣೊಬ್ಬಳು ಪಬ್‌ ನಡೆಸುವುದೆಂದಾಗ ಅನೇಕ ಟೀಕೆಗಳು ಕೇಳಿಬರುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಂತ ಶ್ರುತಿ, ಸದ್ಯ ಬೆಂಗಳೂರಿನ ಬಹು ಬೇಡಿಕೆಯ ಪಬ್‌ ಎಣ್ಣೆಯನ್ನು ಮುನ್ನಡೆಸುತ್ತಿದ್ದಾರೆ. ವಿಭಿನ್ನವಾದ ಮೆನುವನ್ನು ಪರಿಚಯಿಸಿ, ಬೀಗರ ಊಟ, ರೆಟ್ರೋ ರಾತ್ರಿಯಂಥ ವಿಶೇಷವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಣ್ಣೆಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

Untitled design - 2026-04-10T133251.945

ಇದು ಕಾಕ್‌ಟೇಲ್‌ ಲೋಕ

ವಾರಾಂತ್ಯ ಬಂದರಂತೂ ಎಣ್ಣೆಗೆ ಪ್ರೀ ಬುಕಿಂಗ್‌ ಮಾಡದೆ ಹೋಗುವುದೇ ಕಷ್ಟ. ಆದರೂ ವಾರಾಂತ್ಯದಲ್ಲೇ ಎಣ್ಣೆ ಕಿಕ್‌ ಹೆಚ್ಚಿರುವುದರಿಂದ ಮಿಸ್‌ ಮಾಡಿಕೊಳ್ಳುವಂತೆಯೂ ಇಲ್ಲ. ಮದ್ಯ ಪ್ರಿಯರಿಗಂತೂ ಎಂದಿಗೂ ಬೇಸರವಾಗಬಾರದೆಂಬ ಉದ್ದೇಶದೊಂದಿಗೆ ಸ್ವಲ್ಪ ಸಿಹಿ, ಸ್ವಲ್ಪ ಖಾರ ತುಂಬಾ ರಿಸ್ಕಿ ಅನಿಸುವ ಕಾಕ್‌ಟೇಲ್‌ಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಸಿಹಿ ಶುಂಠಿ, ಅಮ್ಮು ಖಾರ, ರಿಸ್ಕೀ ರಸಂ, ಸಿಂಪ್ಲಿ ಸೌತೆಕಾಯಿ, ಬೆಂಕಿ ಶಾಟ್‌, ಮಾವಿನಕಾಯಿ ಉಪ್ಪಿನಕಾಯ್‌, ಡ್ರಂಕನ್‌ ಫೈನ್‌ ಆಪಲ್‌, ಜಿಂಕೆ ಮರಿ ಹೀಗೆ ಎಂದಿಗೂ ಕೇಳಿಯೇ ಇರದ ಈ ಕಾಕ್‌ಟೇಲ್‌ಗಳ ಹೆಸರುಗಳೇ ಕಿಕ್‌ ನೀಡುವಂತಿವೆ.

ಎಣ್ಣೆಗೆ ಬಂದರೆ ರೂಲ್ಸ್‌ ಫಾಲೋ ಮಾಡಿ

ʻಎಣ್ಣೆʼಗೆ ಬರಬೇಕೆಂದರೆ ಮೊದಲು ಇಲ್ಲಿನ ನಿಯಮಗಳನ್ನು ಫಾಲೋ ಮಾಡಲೇಬೇಕು. ಒಳಗೆ ಬರುತ್ತಲೇ ಬೋರ್ಡ್‌ನಲ್ಲಿ ಹಾಕಿರುವ ರೂಲ್ಸ್‌ಗಳನ್ನು ಓದಿಕೊಂಡು ತಪ್ಪದೇ ಅದನ್ನು ಅನುಸರಿಸಿ. ಲೇಡೀಸ್‌ ಫಸ್ಟ್‌, ನೋ ಸಾಲ- ನೋ ಜಗಳ, 21 ವರ್ಷ ಕೆಳಗಿನವರಿಗೆ ಎಣ್ಣೆ ಸಿಗೋದಿಲ್ಲ, ಎಲ್ಲರನ್ನೂ ಗೌರವಿಸಲೇಬೇಕಿರುವುದರಿಂದ ಸಿಬ್ಬಂದಿಯನ್ನು ಬಾರೋ ಎಂದು ಕರೆಯುವಂತಿಲ್ಲ. ನೋ ಘೀ ರೋಸ್ಟ್ ವಿತೌಟ್‌ ಘೀ, ರಾಗಿ ಮುದ್ದೆಯನ್ನು ಸ್ಪೂನ್ ಬಳಸಿ ತಿನ್ನುವಂತಿಲ್ಲ. ಕುರ್ಚಿ ಮೇಲೇರಿ ಅಥವಾ ನಿಂತು ಕೂಗಾಡಿ, ಚೀರಾಡಿ ಮಾಡುವಂತಿಲ್ಲ. ಚೌಕಾಸಿ ಮಾಡಲೇಬಾರದು. ಕಲಾವಿದರು ಅಥವಾ ಸಿಬ್ಬಂದಿ ಜತೆಗೆ ಫ್ಲರ್ಟ್‌ ಮಾಡುವಂತಿಲ್ಲ, ಬೇರೆಯವರ ಮೇಲೆ ಉಗುಳುವುದು ಖಂಡಿತಾ ಸಲ್ಲದು. ಹೀಗೆ ರೂಲ್ಸ್‌ ತರ್ಲೆಯೆನಿಸಿದರೂ, ಶಿಸ್ತಿನ ಪಾಠವನ್ನು ತಪ್ಪದೇ ಫಾಲೋ ಮಾಡಿ.

ಲಿಕ್ವಿಡ್‌ ಡೆಸರ್ಟ್‌ ರುಚಿ ನೋಡಲೇಬೇಕು..

ಇಲ್ಲಿ ಸಿಗುವ ಡೆಸರ್ಟ್‌ಗಳೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಡೆಸರ್ಟ್‌ಗಳೆಂದರೆ ಹೀಗೂ ಇರಲು ಸಾಧ್ಯವಾ ಎಂಬ ಪ್ರಶ್ನೆ ಮೂಡಿಸುತ್ತದೆ. ತಿರಮಿಸು, ಬ್ರೌನೀ, ಸ್ಟ್ರಾಬೆರಿ ಚೀಸ್‌ ಕೇಕ್‌, ಆಪಲ್‌ ಪೈ ಹೀಗೆ ಲಿಕ್ವಿಡ್‌ ಡೆಸರ್ಟ್‌ಗಳೇ ಇಲ್ಲಿ ಹೆಸರು ಮಾಡಿದ್ದು, ರುಚಿ ನೋಡಿ ಗುರುತಿಸುವುದಂತೂ ಬಹಳ ಕಷ್ಟ.

New Project (10)

ಬೀಗರ ಊಟ ಮಿಸ್‌ ಮಾಡಬೇಡಿ

ಬೀಗರ ಊಟದ ರುಚಿ ತಿಂದವನಿಷ್ಟೇ ಗೊತ್ತು. ಬೀಗರ ಊಟವನ್ನು ಮಿಸ್‌ ಮಾಡಿಕೊಳ್ಳುವವರಿಗಾಗಿ ಇಲ್ಲಿ ಆಯ್ದ ಭಾನುವಾರಗಳಂದು ಬೀಗರ ಊಟವನ್ನು ಆಯೋಜನೆ ಮಾಡಲಾಗುತ್ತದೆ. ಬಾಳೆ ಎಲೆಯಲ್ಲಿ ಅನ್‌ ಲಿಮಿಡೆಟ್‌ ʻಬೀಗರ ಊಟ ಬ್ರೇಕ್‌ ಫಾಸ್ಟ್‌ʼ ಸರ್ವ್‌ ಮಾಡಲಾಗುತ್ತದೆ. ವೆಜ್‌ ಹಾಗೂ ನಾನ್‌ ವೆಜ್‌ ಖಾದ್ಯಗಳ ರುಚಿ ನೋಡಿದವರು ಮತ್ತೆ ಬೀಗರ ಊಟ ಯಾವಾಗ ಎಂದು ಕೇಳದಿರಲು ಸಾಧ್ಯವೇ ಇಲ್ಲ.

ನನಗೆ ಎಣ್ಣೆ ರೆಸ್ಟೋ ಬಾರ್‌ ಬಹಳ ಇಷ್ಟ. ಇಲ್ಲಿಗೆ ಆಗಾಗ ಬರುತ್ತಿರುತ್ತೇನೆ. ಕಾಕ್‌ ಟೇಲ್‌, ದೇಸೀ ಫುಡ್‌ ಹಾಗೂ ಆಹಾರ ತಯಾರಿಕೆಯಲ್ಲಿ ಹಾಗೂ ಅವುಗಳನ್ನು ಅಂದವಾಗಿ ಅಲಂಕರಿಸಿ ಗ್ರಾಹಕರ ಮುಂದೆ ಇರಿಸುವಲ್ಲಿ ಅವರ ಶ್ರದ್ಧೆ, ಕಾಳಜಿಯನ್ನು ಮೆಚ್ಚಲೇಬೇಕು. ಎಣ್ಣೆ ಕುಡಿದಿಲ್ಲವೆಂದರೂ ಎಣ್ಣೆಗೆ ಬರಬಹುದು, ರುಚಿಕರವಾದ ದಕ್ಷಿಣ ಭಾರತದ ಖಾದ್ಯಗಳ ರುಚಿ ನೋಡಬಹುದು.
- ರಘು ಗೌಡ,ನಟ ಹಾಗೂ ಬಿಗ್‌ ಬಾಸ್‌ ಸ್ಪರ್ಧಿ
ಹೆಣ್ಮಕ್ಕಳು ಪಬ್‌ ಮಾಲೀಕರಾಗುವುದೆಂದರೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಪ್ರಶ್ನೆಗಳಿಗೆ ದಿಟ್ಟವಾಗಿ ಉತ್ತರಿಸಬೇಕಾಗುತ್ತದೆ. ದ್ಯಾವುದಕ್ಕೂ ನಾನು ತಲೆ ಕೆಡಿಸಿಕೊಂಡಿಲ್ಲ. ಗ್ರಾಹಕರಿಗೆ ಉತ್ತಮ ಆಹಾರ ಹಾಗೂ ಮೆಚ್ಚಿಕೊಳ್ಳುವ ಸೇವೆಯನ್ನು ಕಲ್ಪಿಸಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಮುಂದೆಯೂ ಗ್ರಾಹಕರಿಗೆ ಒಪ್ಪುವಂಥ ವಿಭಿನ್ನ ಆಯ್ಕೆಗಳನ್ನು ನೀಡುತ್ತಲೇ ಇರುತ್ತೇನೆ.
- ಶ್ರುತಿ, ಮಾಲೀಕರು
Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ