• ಸಚಿನ್ ಹೊನ್ನೇಸರ

ಕರಾವಳಿ ಎಂದ ಕೂಡಲೆ ಮನಸಿಗೆ ಮೊದಲು ಬರುವುದು ಪಶ್ಚಿಮ ಘಟ್ಟದ ತಪ್ಪಲಿನ ಸಮುದ್ರ. ನೋಡಿದಷ್ಟೂ ಸಾಕಾಗದ, ಮನಸಿನ ಅಲೆಗಳನ್ನು ಶಾಂತಗೊಳಿಸುವ ಸಮುದ್ರ. ಸಮುದ್ರದ ಎದುರು ಕುಳಿತರೆ ಸಮಯ ಕಳೆಯುವುದೂ ಗೊತ್ತಾಗುವುದಿಲ್ಲ. ಅದರಲ್ಲೂ ಪ್ರೀತಿ ಪಾತ್ರರ ಜತೆ, ಸ್ನೇಹಿತರ ಜತೆ ಕೂತು ಸಮುದ್ರ ನೋಡುವುದು ಬೇರೆಯದೇ ಅನುಭವ. ಅದನ್ನು ಅನುಭವಿಸಿದಾಗಲೇ ತಿಳಿಯುವುದು.

ಇದನ್ನೂ ಓದಿ:ಜೆಎಲ್‌ಆರ್‌ನವರ ಕಬಿನಿ ರಿವರ್‌ ಲಾಡ್ಜ್‌ ಬಗ್ಗೆ ಎಷ್ಟು ಗೊತ್ತು?

ಇಂಥ ಅನುಭವದ ಹಂಬಲದಲ್ಲಿ ಇರುವವರಿಗೆ ಸರಿಯಾದ ಆಯ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ದೇವ್‌ಬಾಗ್ ಬೀಚ್ ರೆಸಾರ್ಟ್. ಕರ್ನಾಟಕ, ಗೋವಾ ಗಡಿಪ್ರದೇಶದಲ್ಲಿರುವ ತಾಣವಿದು. ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿರುವ 'ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್' ಇದನ್ನು ನಿರ್ವಹಿಸುತ್ತಿದೆ. ಈ ಸ್ಥಳ ಬೆಂಗಳೂರಿನಿಂದ ಸುಮಾರು 500 ಕಿಮೀ ದೂರದಲ್ಲಿದೆ. ಚಿತ್ರದುರ್ಗ, ಯಲ್ಲಾಪುರ ದಾರಿಯಾಗಿ ಕಾರವಾರಕ್ಕೆ ಹೋಗುವಾಗ ಯಲ್ಲಾಪುರದಲ್ಲಿ ಒಂದೆರಡು ಸ್ಥಳಗಳನ್ನು ವೀಕ್ಷಿಸಿ ಮುಂದುವರಿಯಿರಿ. ಯಲ್ಲಾಪುರದಿಂದ ಕಾರವಾರಕ್ಕೆ ಹೋಗಲು ಕೈಗಾ ಮೂಲಕ ಸಾಗುವ ಅರಣ್ಯ ಪ್ರದೇಶದ ರಸ್ತೆಯೊಂದಿದೆ. ಆ ದಾರಿಯ ಅನುಭವ ಮತ್ತು ಪ್ರಕೃತಿ ಸೌಂದರ್ಯ ವಿಶೇಷವೆನಿಸುತ್ತದೆ. ಇದನ್ನೆಲ್ಲ ದಾಟಿ ಸೀದಾ ಬಂದು ದೇವ್‌ಬಾಗ್‌ಗೆ ತಲುಪಬೇಕು. ದೇವ್‌ಬಾಗ್ ರೆಸಾರ್ಟ್‌ಗೆ ತಲುಪಬಹುದಾ ಎಂದರೆ ಇಲ್ಲ ಎನ್ನುಬೇಕಾಗುತ್ತದೆ. ದೇವ್‌ಬಾಗ್‌ನ ಪಾರ್ಕಿಂಗ್ ಪ್ರದೇಶಕ್ಕೆ ಮಾತ್ರ ತಲುಪಬಹುದು.

Untitled design (95)

ದೇವರ ಉದ್ಯಾನವನ

ದೇವ್‌ಬಾಗ್ ಎಂಬುದರ ಅರ್ಥ ದೇವರ ಉದ್ಯಾನವನ ಎಂದು. ಈ ಜಾಗ ತನ್ನ ಹೆಸರಿಗೆ ತಕ್ಕಂತೆ ಇದೆ. ದೇವ್‌ಬಾಗ್ ಬೀಚ್ ರೆಸಾರ್ಟ್ ಅರಬ್ಬೀ ಸಮುದ್ರ ಮತ್ತು ಕಾಳಿ ನದಿಯ ಸಂಗಮ ಸ್ಥಾನದಲ್ಲಿದೆ. ದೇವ್‌ಬಾಗ್‌ನ ಎದುರಿಗೆ ಸಮುದ್ರದ ಅಲೆಗಳು ಕಾಣುತ್ತವೆ, ಹಿಂದೆ ಕಾಳಿ ನದಿಯ ಹರಿವಿದೆ. ಅಸಲಿಗೆ ಕಾರವಾರದಿಂದ ದೇವ್‌ಬಾಗ್‌ ರೆಸಾರ್ಟ್‌ವರೆಗೆ ವಾಹನದಲ್ಲಿ ಹೋಗಲಾರೆವು. ಪಾರ್ಕಿಂಗ್‌ವರೆಗೆ ತಲುಪಿದ ನಂತರ ಅಲ್ಲಿಂದ ದೋಣಿಯಲ್ಲಿ ಹೋಗಬೇಕಾಗುತ್ತದೆ. ಅಂದರೆ ದೇವ್‌ಬಾಗ್‌ಗೆ ಹೋಗುವುದು ಒಂದು ಖಾಸಗಿ ದ್ವೀಪದ ಅನುಭವವನ್ನು ಕೊಡುತ್ತದೆ. ಇಲ್ಲಿ ಕಾಣುವ ಸಮುದ್ರ ಖಾಸಗಿ ಬೀಚ್ ಇದ್ದಂತೆ. ಹಾಗಾಗಿ ಜನ ಜಂಜಾಟವಿಲ್ಲ. ದಿನದ ಯಾವುದೇ ಹೊತ್ತಿಗೆ ಹೋಗಿ ಸಮುದ್ರದ ದಂಡೆಯ ಮೇಲೆ ಕುಳಿತುಕೊಳ್ಳಬಹುದು.

ಆತಿಥ್ಯ-ಆಹಾರ-ಆಟೋಟ

ಪಾರ್ಕಿಂಗ್ ಬಳಿ ಇರುವ ಅವರ ಕಚೇರಿಗೆ ತಲುಪಿದಲ್ಲಿಂದ ರಾಜಾತಿಥ್ಯ ಪ್ರಾರಂಭ. ಬ್ಯಾಗನ್ನು ತರುವುದರಿಂದ ಹಿಡಿದು ಬೇಕಾದ ವ್ಯವಸ್ಥೆ ಮಾಡಿ ಮುಗಿಸುವವರೆಗೂ ಒಬ್ಬ ಸಿಬ್ಬಂದಿ ಜತೆಯಲ್ಲೇ ಇರುತ್ತಾರೆ. ಊಟೋಪಚಾರದ ವಿಚಾರಕ್ಕೆ ಬಂದರೆ ಹೊತ್ತು ಹೊತ್ತಿಗೆ ತಿಂಡಿ, ಕಾಫಿ, ಊಟ, ಲಘೂಪಾಹಾರದ ವ್ಯವಸ್ಥೆ ಇದೆ. ಕರಾವಳಿ ಶೈಲಿಯ ಬಗೆಬಗೆಯ ತಿಂಡಿ ತಿನಿಸುಗಳು ಇಲ್ಲಿನ ವೈಶಿಷ್ಟ. ಸಂಜೆಯ ನಂತರ ಸಮುದ್ರ ತಟದಲ್ಲಿ ಕ್ಯಾಂಪ್ ಫೈರ್ ಇರುತ್ತದೆ. ಮೊದಲೇ ತಿಳಿಸಿದರೆ ಬೀಚ್‌ನಲ್ಲಿ ‌ಕ್ಯಾಂಡಲ್ ಲೈಟ್ ಡಿನ್ನರ್ ವ್ಯವಸ್ಥೆ ಕೂಡ ಮಾಡಿಕೊಡುತ್ತಾರೆ. ಸಾಹಸ ಪ್ರಿಯರಿಗೆ ಇಷ್ಟವಾಗುವ ಸ್ಪೀಡ್ ಬೋಟ್, ಕಯಾಕಿಂಗ್, ಬನಾನ ಬೋಟ್ ರೈಡ್ ಸೇರಿದಂತೆ ಹಲವು ಜಲ ಕ್ರೀಡೆಗಳು ಇಲ್ಲಿ ಲಭ್ಯವಿದೆ.

Untitled design (93)

ಡಾಲ್ಫಿನ್ ಸೈಟಿಂಗ್ - ನೇಚರ್ ವಾಕಿಂಗ್

ಅಲೆಗಳನ್ನು ಸೀಳುತ್ತ ಸಾಗುವ ದೋಣಿಯ ಸವಾರಿಯಲ್ಲಿ ಡಾಲ್ಫಿನ್‌ಗಳು ಕಾಣಸಿಗುತ್ತವೆ. ಡಾಲ್ಫಿನ್‌ಗಳು ಜಿಗಿಯುವುದನ್ನು ಹತ್ತಿರದಿಂದ ನೋಡುವಾಗ ಪ್ರಕೃತಿಯ ವಿಸ್ಮಯದ ಬಗ್ಗೆ ಮನಸು ಹಾಯುತ್ತದೆ. ಇದರ ಜತೆಗೆ ಇಲ್ಲಿನ ಸೂರ್ಯಾಸ್ತ ಮತ್ತು ಅರಣ್ಯದೊಳಗಿನ ಪ್ರಕೃತಿ ನಡಿಗೆ ಮತ್ತೊಂದು ಆಕರ್ಷಣೆ. ರೆಸಾರ್ಟ್‌ನ ಗೈಡ್ ಅರಣ್ಯದೊಳಗೆ ಕರೆದುಕೊಂದು ಹೋಗಿ ಅಲ್ಲಿನ ಸಸ್ಯ ಸಂಪತ್ತು ಮತ್ತು ಕಡಲ ಹಕ್ಕಿಗಳನ್ನು ತೋರಿಸಿ, ವಿವರಿಸುತ್ತಾರೆ. ಪ್ರಕೃತಿಯ ವೈವಿಧ್ಯ ನಮ್ಮನ್ನು ಬೆರಗಾಗಿಸುತ್ತದೆ.

ಇಲ್ಲಿರುವ ಪ್ರತಿ ಮರದ ಕಾಟೇಜ್‌ ಪ್ರತ್ಯೇಕವಾಗಿದೆ, ಅಂತರದಲ್ಲಿದೆ. ಇವು ಬೀಚ್ ವ್ಯೂ ಇರುವಂಥ ಕಾಟೇಜ್‌ಗಳು. ಇಂಥ ಪ್ರಕೃತಿಯ ನಡುವೆ, ಸಮುದ್ರ ತಟದಲ್ಲಿನ ಇಲ್ಲಿಯ ವಸತಿಯ ಅನುಭವವೇ ವಿಶೇಷ.

ರಾತ್ರಿಯ ಹೊತ್ತಿಗೆ ಶಾಲೆ, ಆಫೀಸು, ನಗರಗಳ ಟ್ರಾಫಿಕ್, ಸದಾ ಕೈಯಲ್ಲಿರುವ ಫೋನ್ ಇವುಗಳನ್ನು ಮರೆತು ದೇವ್‌ಬಾಗ್‌ನಲ್ಲಿ ಕುಳಿತರೆ ಕಾಡಿನ ಕೀಟಗಳ ಸದ್ದು, ಸಮುದ್ರದ ಅಲೆಯ ಝೇಂಕಾರ ಕೇಳಿಸುತ್ತದೆ. ಚಂದ್ರನ ಬೆಳಕಿನಲ್ಲಿ ಸಮುದ್ರ ಹೊಳೆಯುತ್ತದೆ. ನಕ್ಷತ್ರ ಮಂಡಲ ಮಿನುಗುತ್ತಿರುವುದು ಕಾಣಿಸುತ್ತದೆ. ಮನಸು ಶಾಂತವಾಗುತ್ತದೆ, ಸಂತುಷ್ಟಿ ಹೊಂದುತ್ತದೆ. ಪ್ರವಾಸವನ್ನು ಮುಗಿಸಿ ನಮ್ಮ ನಮ್ಮ ಜೀವನಕ್ಕೆ ಮರಳಿದ ನಂತವೂ ದೇವ್‌ಬಾಗ್‌ನ ಅನುಭವ ಹಸಿರಾಗಿರುತ್ತದೆ, ನೆನಪಿನಲ್ಲಿ ಉಳಿದಿರುತ್ತದೆ.

ದಾರಿ ಹೇಗೆ?

ಈ ಸ್ಥಳ ಬೆಂಗಳೂರಿನಿಂದ ಸುಮಾರು 500 ಕಿಮೀ ದೂರದಲ್ಲಿದೆ. ಚಿತ್ರದುರ್ಗ, ಯಲ್ಲಾಪುರ ದಾರಿಯಾಗಿ ಕಾರವಾರಕ್ಕೆ ಹೋಗುವಾಗ ಯಲ್ಲಾಪುರದಲ್ಲಿ ಒಂದೆರಡು ಸ್ಥಳಗಳನ್ನು ವೀಕ್ಷಿಸಿ ಮುಂದುವರಿಯಿರಿ. ಯಲ್ಲಾಪುರದಿಂದ ಕಾರವಾರಕ್ಕೆ ಹೋಗಲು ಕೈಗಾ ಮೂಲಕ ಸಾಗುವ ಅರಣ್ಯ ಪ್ರದೇಶದ ರಸ್ತೆಯೊಂದಿದೆ. ಆ ದಾರಿಯ ಅನುಭವ ಮತ್ತು ಪ್ರಕೃತಿ ಸೌಂದರ್ಯ ವಿಶೇಷವೆನಿಸುತ್ತದೆ. ಇದನ್ನೆಲ್ಲ ದಾಟಿ ಸೀದಾ ಬಂದು ದೇವ್‌ಬಾಗ್‌ಗೆ ತಲುಪಬೇಕು.

ಲೇಖಕರು: ಹವ್ಯಾಸಿ ಬರಹಗಾರರು