ರಾಜ್ಯ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿದೆ ಎಂಬುದು ಸಂತಸದ ಸಂಗತಿ. ದುಡಿಮೆಗೆ ತಕ್ಕಂತೆ ಗಳಿಕೆ, ಕೈ ಕೆಸರಾಗದೇ ಬಾಯಿ ಮೊಸರಾಗದು ಎಂಬ ಹಳೆಯ ಮಾತಿನಂತೆ ಸರಕಾರ ಇದೀಗ ಮೂಲಸೌಕರ್ಯಗಳನ್ನು, ಪ್ರವಾಸಿಗರ ದೃಷ್ಟಿಯಿಂದ ಬೇಕಿರುವ ಅಗತ್ಯಗಳನ್ನು ಪೂರೈಸಲು ಅವಿರತ ಕೆಲಸವನ್ನು ಮಾಡುತ್ತಿದೆ. ಇಂದಿನ ಕೆಲಸಕ್ಕೆ ಇಂದೇ ಫಲ ಸಿಕ್ಕದಿರಬಹುದು ಆದರೆ ಪ್ರವಾಸೋದ್ಯಮದ ಮೇಲೆ ಹೂಡುವ ಬಂಡವಾಳಕ್ಕೆ ಖಂಡಿತ ಮೋಸವಿಲ್ಲ ಎಂಬುದು ಸರಕಾರಕ್ಕೆ ಅರ್ಥವಾದಂತಿದೆ. ಕರಾವಳಿ ಪ್ರವಾಸೋದ್ಯಮ ನೀತಿ ತರುವ ನಿರ್ಧಾರವಿರಬಹುದು, ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಇರಬಹುದು, ವಿವಿಧ ರೀತಿಯ ಪ್ರವಾಸಗಳಿಗೆ ಉತ್ತೇಜನ ನೀಡುತ್ತಿರುವುದು ಇರಬಹುದು, ಒಟ್ಟಾರೆಯಾಗಿ ಕರ್ನಾಟಕ ಪ್ರವಾಸೋದ್ಯಮ ಏರುಗತಿಯ ಯೋಚನೆಯಲ್ಲಿದೆ ಎನ್ನಲಡ್ಡಿ ಇಲ್ಲ.

ಇದನ್ನೂ ಓದಿ: ಹೂಮಯ ಬೆಂಗಳೂರನ್ನು ನೋಡೋಕೆ ನೂರಡಿ ಡ್ರೋನ್‌ ಮೇಲೆ ಹಾರಿಸಿದರೆ ಸಾಕು

ಇದೀಗ ಇದೇ ಹಾದಿಯಲ್ಲಿ ಬಂದಿರುವ ಹೊಸ ಯೋಜನೆ ಪ್ರವಾಸಿ ತಾಣಗಳಲ್ಲಿ ಕ್ಯೂ ಆರ್ ಕೋಡ್! ತಂತ್ರಜ್ಞಾನದೊಂದಿಗೆ, ಪ್ರಸ್ತುತ ಕಾಲಘಟ್ಟದೊಂದಿಗೆ ಇಂದಿನ ಅಗತ್ಯಗಳಿಗೆ ಸ್ಪಂದಿಸದೇ ಹೋದರೆ ಉಳಿಗಾಲವಿಲ್ಲ ಎಂಬುದು ವಾಸ್ತವ. ವಿದೇಶಗಳಲ್ಲಿ ಬಹುತೇಕ ಪ್ರವಾಸಿ ತಾಣಗಳ ಎದುರು ಕ್ಯೂ ಆರ್ ಕೋಡ್, ಮ್ಯಾಪ್, ಇತಿಹಾಸ, ಅಗತ್ಯವಿರುವ ಫೊಟೋಗಳು, ಮಾಹಿತಿಗಳು ಲಭ್ಯವಿರುವಂತೆ ಮಾಡಿವೆ ಅಲ್ಲಿನ ಸರಕಾರಗಳು. ಇವು ತಾಣಗಳ ಮಹಿಮೆಯನ್ನು ಹೆಚ್ಚಿಸುವಲ್ಲಿ, ಸತ್ಯ ಮಾಹಿತಿ ನೀಡುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಪ್ರವಾಸೋದ್ಯಮ ಇಲಾಖೆಯ ತಲೆಗಳು ಆಗಾಗ ವಿದೇಶ ಮತ್ತು ದೇಶದ ಇತರ ರಾಜ್ಯಗಳಿಗೆ ಪ್ರವಾಸ ಮಾಡುತ್ತಿರಬೇಕು ಅನ್ನುವುದು ಇಂಥ ವಿಷಯಗಳನ್ನು ಕಲೆಹಾಕುವ ಸಲುವಾಗಿ ಮತ್ತು ಇವುಗಳನ್ನು ಇಲ್ಲಿಯೂ ಅನುಷ್ಠಾನಕ್ಕೆ ತರಬೇಕು ಎಂಬ ಉದ್ದೇಶದಿಂದಾಗಿ.

Untitled design (75)

ಈಗ ಕರ್ನಾಟಕದ ಒಟ್ಟು ಇನ್ನೂರು ಪುರಾತನ ಪ್ರವಾಸಿ ತಾಣಗಳಲ್ಲಿ ಕ್ಯೂ ಆರ್ ಕೋಡ್ ಗಳನ್ನು ಅನಾವರಣಗೊಳಿಸಲಾಗುತ್ತಿದೆ. ಇದು ಪ್ರಾರಂಭಿಕ ಹಂತವಷ್ಟೆ. ಮುಂದಿನ ದಿನಗಳಲ್ಲಿ ಇನ್ನೂ ನೂರಾರು ತಾಣಗಳಲ್ಲಿ ಪ್ರವಾಸಿಯು ಈ ಸೌಲಭ್ಯ ಪಡೆದುಕೊಳ್ಳಬಹುದು. ಇದು ಪ್ರವಾಸೋದ್ಯಮ ಇಲಾಖೆಯ ಜತೆ ಕೈಕೈ ಹಿಡಿದು ನಡೆಯುವ ಪುರಾತತ್ವ ಇಲಾಖೆಯ ಕೆಲಸವೇ ಆದರೂ ಲಾಭ ಪ್ರವಾಸೋದ್ಯಮಕ್ಕೆ ಆಗಲಿದೆ. ಕರ್ನಾಟಕದ ಪುರಾತನ ಇತಿಹಾಸಿಕ ತಾಣಗಳು ಈಗ ಹೆಚ್ಚು ಸುಲಭವಾಗಿ ಜನರಿಗೆ ಲಭ್ಯವಾಗಲಿವೆ. ಇತಿಹಾಸಕ್ತರಿಗೆ, ಅನ್ವೇಷಕರಿಗೆ ರೆಡಿ ಗೈಡ್ ಸಿಕ್ಕಂತೆ ಕ್ಯೂ ಆರ್ ಕೋಡ್ ಮೂಲಕ ಮಾಹಿತಿಗಳು ಲಭ್ಯವಾಗಲಿವೆ. ಶಿಲಾಯುಗದ ಕಾಲದ ಜಾಗಗಳು, ಮನುಷ್ಯನ ಮೂಲಕಾಲದ ವಾಸಸ್ಥಾನಗಳು ಸೇರಿದಂತೆ, ಗುಹೆ, ಕಣಿವೆ, ಅಪರೂಪದ ಕಲ್ಲು, ಮರ ಇವೆಲ್ಲವೂ ಕ್ಯೂ ಆರ್ ಕೋಡ್ ಹೊಂದಲಿವೆ.

ತಾಣಗಳ ಕುರಿತ ವಿವರವಾದ ಮಾಹಿತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗುತ್ತದೆ. ಪ್ರತಿಯೊಂದು ತಾಣದ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಕ್ಷಣವೇ ಆ ತಾಣದ ಬಗ್ಗೆ ಮಾಹಿತಿ ಸಿಗುತ್ತದೆ. ಇದು ನಿಜಕ್ಕೂ ಉಪಯುಕ್ತ. ಪ್ರವಾಸಿ ಬಯಸುವುದು ಇಂಥ ಬೆಳವಣಿಗೆಗಳನ್ನು. ಈ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಹಾಗೂ ಕಾಫಿ-ಟೇಬಲ್ ಪುಸ್ತಕ ರೂಪದಲ್ಲಿ ಪ್ರಕಟಿಸಲಿರುವುದೂ ಸ್ವಾಗತಾರ್ಹವೇ.

ಇದನ್ನೂ ಓದಿ: ಗಲ್ಲು ಗಲ್ಲೆನುತಾ!

ಪಾವಗಡ, ಹಕ್ಕಿನಲ್ಲು, ಬಾಗೇಪಲ್ಲಿ, ಮಲಪ್ರಭಾ-ಘಟಪ್ರಭಾ ನದಿ ಕಣಿವೆ, ಇಲ್ಲೆಲ್ಲಾ ಇರುವ ಗುಹೆ, ಸಮಾಧಿ ಇತ್ಯಾದಿ ಮಹತ್ವದ ಜಾಗಗಳ ಮೇಲೆ ಕ್ಯೂ ಆರ್ ಕೋಡ್ ಹಾಕಿದರೆ ಅಪರೂಪದ ಮಾಹಿತಿ ಪಡೆದ ಪ್ರವಾಸಿ ಧನ್ಯನಾಗುತ್ತಾನೆ. ಅದರಲ್ಲಿ ಸಿಗುವ ಮ್ಯಾಪ್ ನಿಂದಲೇ ಆತ ದಾರಿಯನ್ನೂ ಅರಿಯುತ್ತಾನೆ. ಈ ಯೋಜನೆ ಮೂಲಕ ಪ್ರವಾಸಿಗರು ಮತ್ತು ಸಂಶೋಧಕರು ಕರ್ನಾಟಕದ ವಿವಿಧ ಪುರಾತನ ತಾಣಗಳನ್ನು ಸುಲಭವಾಗಿ ಗುರುತಿಸಿ ಅವುಗಳ ಐತಿಹಾಸಿಕ ಮಹತ್ವವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಂಶೋಧನೆ ಮತ್ತು ಸಾರ್ವಜನಿಕ ತಿಳಿವಳಿಕೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವಲ್ಲಿ ಇದು ಪಾತ್ರವಹಿಸುತ್ತದೆ. ಇಷ್ಟಕ್ಕೂ ಇದಕ್ಕೆ ತಗುಲಲಿರುವ ಖರ್ಚೇನೂ ದೊಡ್ಡದಿಲ್ಲ. ₹40 ಲಕ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುತ್ತಿದೆ. ಪೇಲಿಯೋಲಿಥಿಕ್, ಮೀಸೋಲಿಥಿಕ್ ಮತ್ತು ಮೆಗಾಲಿಥಿಕ್ ಕಾಲಘಟ್ಟಗಳ ತಾಣಗಳನ್ನು ದಾಖಲಿಸಲಿರುವ ಈ ಯೋಜನೆಗೆ ಅಷ್ಟು ಹಣ ಹೂಡಿರುವುದು ತಪ್ಪಂತೂ ಖಂಡಿತ ಅಲ್ಲ. ಕರ್ನಾಟಕದಾದ್ಯಂತ ಇರುವ 200 ಕ್ಕೂ ಹೆಚ್ಚು ಪುರಾತನ ಸಮುದಾಯಗಳು ಮತ್ತು ತಾಣಗಳು ಸಚಿತ್ರ ವಿವರಣೆಗಳೊಂದಿಗೆ ಸಿಗುತ್ತದೆ ಅಂದರೆ ಸಂತೋಷವಲ್ಲವೇ? ಪ್ರವಾಸಿಗರಿಗೆ ಉಪಯೋಗವಾಗುವ ಇಂಥ ಇನ್ನಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿರಲಿ. ಅದರ ಫಲ ಉಣ್ಣುವ ಸಾರ್ಥಕ ಕ್ಷಣಗಳನ್ನು ಪ್ರವಾಸೋದ್ಯಮ ಇಲಾಖೆ ಕಾಣಲಿ.